Saturday, 2 March 2013

ಹಾಗೇ ಸುಮ್ನೆ.....



ಕ್ಷೇಮ                              ಶ್ರೀ                               12 -02-2012                                              

ಮೊದ್ಲೆಲ್ಲಾ ಯಾರಿಗಾದರೂ ಕಾಗದ ಬರೀಬೇಕು ಅಂದ್ರೆ ಹಿಂಗೆ ಶುರು ಮಾಡ್ತಾ ಇದ್ದೆ. ಅದೇ ಅಭ್ಯಾಸ ಬಲ. ಈಗ್ಲೂ ಕ್ಷೇಮ, ಶ್ರೀ, ತಾರೀಕು ಅಂತ ಬರ್ದಿದ್ದೀನಿ. ನನಗೆ ನಗು ಬರ್ತಾ ಇದೆ. ಅಂದ ಹಾಗೆ ನನ್ನ ಹೆಸರು ಮಧುರ. ಗಂಡನ ಹೆಸರು ಹೇಮಂತ್ .  ಮಗಳ ಹೆಸರು ಅನುಪಮ. ನನ್ನ ಮಗಳು ತುಂಬಾ ದೊಡ್ಡವಳು ಅಂದುಕೊಂಡು ಬಿಟ್ರಾ? ನಿಮ್ಮ ಕಲ್ಪನೆ ನಿಜಕ್ಕೂ ಸುಳ್ಳು, ಯಾಕಂದ್ರೆ ಅವಳಿಗೆ ಈಗ ಇನ್ನೂ ಕೇವಲ ಒಂದು  ತಿಂಗಳಷ್ಟೇ. ಪುಟ್ಟ ಕೂಸು. ಮುದ್ದು ಮುದ್ದಾಗಿದ್ದಾಳೆ ನನ್ನ ತರಹ. ಅವಳು ನನ್ನ ಮುದ್ದು ಕಂದ . , ನನ್ನ ಪ್ರಪಂಚ . ಇದನ್ನೆಲ್ಲಾ ಯಾಕೆ ಹೇಳ್ತೀನಿ ಅಂದುಕೊಂಡ್ರಾ.... !!! ವಿಷಯಕ್ಕೆ ಬರ್ತೀನಿ ಇರಿ. ನನ್ನ ಮಗಳಿಗೆ ಈಗ ಕೇವಲ ಒಂದು ತಿಂಗಳು ಅಂದ್ರೆ, ನಾನು ಒಂದು  ತಿಂಗಳ  ಬಾಣಂತಿ ಅಂತ ಅರ್ಥ ತಾನೆ....!!!!  ಒಂದು ತಿಂಗಳಿಂದ ಮಲಗಿ ಮಲಗಿ ಬೇಸರ ಆಗಿತ್ತು ಅಂತ ಅಮ್ಮನ ಹತ್ತಿರ ಹಠ ಮಾಡಿ ಪೇಪರ್, ಪೆನ್ನು ತರ್ಸಿ ಇದನ್ನೆಲ್ಲಾ ಬರೀತಾ ಇದ್ದಿನಿ. ಸುಮ್ನೆ ಟೈಂಪಾಸ್. ಅಮ್ಮನಿಗೆ ಮಾತು ಕೊಟ್ಟಿದ್ದೀನಿ. ಕೇವಲ ನಾಲ್ಕೇ ದಿನದಲ್ಲಿ ಬರದು ಮುಗಿಸ್ತೀನಿ. ದಿನಕ್ಕೆ ಅರ್ಧ ಘಂಟೆ ಮಾತ್ರ. ಅದು ಮಲ್ಕೊಂಡೆ. ಆಯಾಸ ಮಾಡ್ಕೊಳ್ಳಲ್ಲ, ತೊಂದರೆ ಕೊಡಲ್ಲ   ಅಂತ ಪೂಸಿ ಹೊಡ್ದು ಒಪ್ಸಿದ್ದೀನಿ. ಅಂದ ಹಾಗೆ ಏನು ಬರೀಲಿ ಅಂತ ಈಗ ಟೆನ್ಶನ್ .... :-) .  ಇದೆಲ್ಲ creative ಐಡಿಯಾಗಳು ಯಾವಾಗ್ಲೂ ನಂಗೆ ಹೇಗೆ ಬರುತ್ತೆ ಅಂತ ಕೆಲವೊಮ್ಮೆ ಆಶ್ಚರ್ಯ ಆಗುತ್ತೆ.!!!!! ನೋಡೋಣ, ನನ್ನ ಜೀವನದ  ಕಥೆನೇ ನೆನಪು ಮಾಡ್ಕೊಂಡು, ಮಾಡ್ಕೊಂಡು  ಸಂಕ್ಷಿಪ್ತವಾಗಿ ಬರೀತೀನಿ. ಜೀವನದಲ್ಲಿ ಏನೂ ಸಾಧಿಸಿಲ್ಲ. ಎಲ್ಲರಿಗೂ ಬೇಜಾರು ಬರೋಷ್ಟು  ತೊಂದರೆ, ಕಿರಿಕಿರಿ ಮಾಡಿದ್ದೆ ನನ್ನ ಸಾಧನೆ ಅನ್ನಬಹುದು..... ಅದೆಲ್ಲ ಒಂದು ಕಡೆ ಇರಲಿ..  ಓದಕ್ಕೆ ರೆಡಿನಾ? ಶುರು ಮಾಡ್ತೀನಿ ಓದಿ ......




ನಂದು ಒಂದು ಪುಟ್ಟ ಕುಟುಂಬ. ಅಪ್ಪ, ಅಮ್ಮ, ನಾನು ನನ್ನ ತಮ್ಮ. ಇಷ್ಟೇ ನಮ್ಮ ಪ್ರಪಂಚ. ನಾನು ಸ್ವಲ್ಪ ಚೆಲ್ಲು ಚೆಲ್ಲು, ಬಜಾರಿ, ಹಠಮಾರಿ, ಗಂಡುಬೀರಿಯಂತೆ . ಇದೆಲ್ಲಾ ನನಗೆ ಸಿಕ್ಕಿರೋ ಬಿರುದುಗಳು. ಹಿಂಗೆಲ್ಲ ಕರೆಯೋದು ನನ್ನ ಮನೆಯವ್ರು, ಫ್ರೆಂಡ್ಸ್ etc etc..... ನಾನು ಅಪ್ಪನ ಮುದ್ದು ಆದ್ರೆ, ನನ್ನ ತಮ್ಮ ಅಮ್ಮನ ಕೂಸು. ನಮ್ಮನೇಲಿ ನನಗೂ ನನ್ನ ತಮ್ಮನಿಗೂ ಒಂದೇ  ವಿಷಯಕ್ಕೆ ಯಾವಾಗ್ಲೂ ಜಗಳ ಆಗೋದು. ಅದಂದ್ರೆ, ಅವನು ಯಾವಾಗ ನೋಡಿದ್ರೂ ಅಮ್ಮನ ಬಾಲದ ಹಾಗೆ ಅಡಿಗೆ ಮನೇಲಿ ಅಮ್ಮನಿಗೆ ಸಹಾಯ ಮಾಡೋದು, ಮನೆ ಕ್ಲೀನ್ ಮಾಡಕ್ಕೆ ದೊಡ್ಡ ಸಾಹಸಿ ತರಹ ನನ್ನ ಎದ್ರಿಗೆ ಫೋಸ್ ಕೊಡೋದು, ಇದನ್ನೆಲ್ಲಾ ನೋಡಿ ನನ್ನಮ್ಮ ನನಗೆ, "ಅವನು ನೋಡು ಗಂಡು ಹುಡುಗ, ಆದ್ರೂ ಮನೆಕೆಲಸದಲ್ಲಿ ನಂಗೆ ಎಷ್ಟು ಸಹಾಯ ಮಾಡ್ತಾನೆ. ನೀನು ಇದ್ದಿಯಾ ತಿನ್ನೋದು, ಕುಡಿಯೋದು, ಫ್ರೆಂಡ್ಸ್ ಅಂತ ಅಲಿಯೋದು ಇದೆ ಆಯ್ತು" ಅಂತ ಬೈಯೊದು. ಆಗ ನನ್ನ ಸಿಟ್ಟು ತಿರುಗೋದು ತಮ್ಮನ ಮೇಲೆ. "ನಿನಗೆ ಸುಮ್ನೆ ಬೇರೆ ಹುಡುಗ್ರ ತರಹ ಇರಕ್ಕೆ ಆಗಲ್ವೇನೋ, ಅದೇನು ಒಳ್ಳೆ ಹುಡುಗಿ ತರಹ ಮೂರುಹೊತ್ತು ಅಮ್ಮನ ಸೆರಗು ಹಿಡ್ಕೊಂಡು ಹಿಂದೆ ಹಿಂದೆ ಸುತ್ತಾಡ್ತೀಯ" ಅಂತ ಅವನ ಮೇಲೆ ರೇಗ್ತಿದ್ದೆ. ನಾನು ಹಾಗೆನೇ ಯಾವಾಗ್ಲೂ ಹಾಕೋದು ಜೀನ್ಸ್, ಟಿ-ಶರ್ಟ್, ಹೇರ್ ಸ್ಟೈಲ್ ಸಹಾ ಹುಡುಗರ ಹಂಗೇನೆ  .... ಅದೇಕೋ ಫ್ರಾಕ್, ಮಿಡಿ, ಸ್ಕರ್ಟ್ ಅಂದ್ರೆ ಒಂಥರಾ ಹಿಂಸೆ ಆಗ್ತಿತ್ತು. ಆ ಸ್ಕೂಲ್ ಯುನಿಫಾರ್ಮ್ ಕಷ್ಟ ಪಟ್ಟು ಮನಸ್ಸಿಲ್ಲದೇ, ವಿಧಿಯಿಲ್ಲದೇ ಹಾಕ್ತಾ ಇದ್ದೆ. ಯಾವಾಗ ಕಾಲೇಜಿಗೆ ಬಂದನೋ ಅಲ್ಲಿ ನನ್ನ ಪುಣ್ಯಕ್ಕೆ ಪ್ಯಾಂಟ್, ಶರ್ಟ್ ಹಾಕಕ್ಕೆ ಅನುಮತಿ ಸಿಕ್ತು.. ಉಫ್ ... ಅಂತ ಉಸಿರು ಬಿಟ್ಟಿದ್ದು ಇನ್ನೂ ನೆನಪಿದೆ. ಇಷ್ಟೆಲ್ಲಾ ಇದ್ದ ನಾನು ಓದಿನಲ್ಲಿ ಮಾತ್ರ ಯಾವಾಗಲೂ ಫಸ್ಟ್. ನನ್ನ ಓದು ಮುಗಿದ ನಂತರ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಅನಾಯಾಸವಾಗಿ ಸಿಕ್ತು . ಸಾವಿರ ಸಾವಿರ ಸಂಬಳ  ಪ್ರತಿ ತಿಂಗಳು ಅಮ್ಮನಿಗೆ, ಅಪ್ಪನಿಗೆ ಗಿಫ್ಟ್, ತಮ್ಮನಿಗೆ ಪಾಕೆಟ್ ಮನಿ.  ಚಂದದ ಜೀವನ. ಈ ಮಧ್ಯದಲ್ಲೇ ನನ್ನ ಭೇಟಿ ಆಗಿದ್ದು ಹೊಸದಾಗಿ ಆಫೀಸಿಗೆ ಸೇರಿದ ಸೀನಿಯರ್ ಸಹೋದ್ಯೋಗಿ  'ಹೇಮಂತ್' ಜೊತೆ. ಅದೇನೋ ಆ  ಆಕರ್ಷಣೆ ನನ್ನನ್ನು ಗೊತ್ತಿಲ್ಲದೇ ಅವನ ಹತ್ತಿರ ಹತ್ತಿರ ತಂದು ಬಿಡ್ತು. ನನ್ಗೆ ಹೋಲಿಸಿದ್ರೆ ವಿರುದ್ದ ಸ್ವಭಾವ ಅವನದ್ದು. ನಾನು ಎಷ್ಟು ಮಾತಾಡ್ತಿನೋ, ಅವನು ಅಷ್ಟೇ ಸೈಲೆಂಟ್ .  ಆದ್ರೂ ಅದೇನು ನೋಡಿ ಅವನನ್ನು ಪ್ರಿತಿಸಿದ್ನೋ ಇನ್ನೂ ಗೊತ್ತಿಲ್ಲ. ನಮ್ಮ  ಪ್ರೀತಿ , ಮದುವೆಗೆ ಯಾವ ಅಡ್ಡಿನೂ ಬರಲಿಲ್ಲ. ಧಾಂ ಧೂಮ್ ಅಂತ ಅಪ್ಪ, ಅಮ್ಮ ಅವನ ಜೊತೆ ಮದುವೆ ಮಾಡಿ ಕೊಟ್ಟು ಬಿಟ್ರು . ಬಹುಷಃ ಅವರಿಗೆ ನನ್ನ ಕಾಟ ಸಹಿಸಕ್ಕೆ ಆಗ್ದೆ  ಮನೆಯಿಂದ ಸಾಗ ಹಾಕಿದ್ರೆ ಸಾಕು ಅನ್ನಿಸ್ತು ಅನಿಸುತ್ತೆ, ಹೀಗಂತ ನಾನು ಯಾವಾಗ್ಲು ಅವರ ಕಾಲು ಎಳೀತಾ ಇರ್ತೀನಿ.
ಇವತ್ತಿಗೆ ಇಷ್ಟು ಸಾಕು ಅನ್ಸುತ್ತೆ. ಮುಂದಿನ ಭಾಗ ನಾಳೆ ಬರಿತೀನಿ. 

                                                                                                                                                                         13-02-2012

ಗಂಡು ಹುಡುಗರಂತೆ ಅದೇನೋ ಹೇಳ್ತಾರಲ್ಲ ಟಾಮ್ ಬಾಯ್  ಹಂಗೆ ಬೆಳೆದ   ನಾನು ಸಹಾ ಒಂದು ವರ್ಷದ ಹಿಂದೆ ಮೆಂಟಲ್ ತರಾ ಆಗಿದ್ದೆ ಅಂದ್ರೆ ನಂಬ್ತೀರಾ? ಅದು ಸಹಾ  ಪರಿಪೂರ್ಣ ಹೆಣ್ಣಾಗುವ ತವಕದಲ್ಲಿ. ಇದು  ಸತ್ಯವಾದ ಮಾತು, ಯಾಕಂದ್ರೆ ಕೆಲವೊಮ್ಮೆ ಪರಿಸ್ಥಿತಿ ಎಂಥವರನ್ನು ಏನೇನೊ ಮಾಡಿಬಿಡುತ್ತೆ. ಈ ಮನಸ್ಸು ಬಹಳ ಸೂಕ್ಷ್ಮ. ಯಾವಾಗ ಕೆಟ್ಟು ತಿಕ್ಕಲು ತರಹ ಆಡ್ತೀವೋ ಗೊತ್ತೇ ಆಗೋದಿಲ್ಲ. ಮನಸ್ಸಿಗೆ ಬೇಕು ಅನಿಸಿದ್ದು ಕೂಡಲೇ ಸಿಗಬೇಕು . ಸಿಗಲಿಲ್ಲ ಅಂದ್ರೆ ಕೆಟ್ಟ ಕಲ್ಪನೆಗಳು, ಕೆಟ್ಟ ಯೋಚನೆಗಳು ಇಡಿ ದೇಹವನ್ನೇ ಛಿದ್ರ ಮಾಡಿ ಹಾಕುತ್ತೆ.  ಆಗ್ತಾನೆ ಹೊಸದಾಗಿ ಮದುವೆ ಆಗಿತ್ತು. ಇಷ್ಟಪಟ್ಟ ಹುಡುಗ. ಜೊತೆಗೆ ಮಧುಚಂದ್ರಕ್ಕೆ ಹೋಗಿದ್ದು ಕುಲು-ಮನಾಲಿಗೆ. ಅಲ್ಲಿಯ ತಂಪು ತಂಪು ವಾತಾವರಣ, ಆ ಬೆಚ್ಚಗಿನ ಇನಿಯನ ಅಪ್ಪುಗೆ ಹಂಗೆ ನನ್ನನ್ನೇ ನಾ ಮರ್ತು ಬಿಟ್ಟಿದ್ದೆ. ಅಲ್ಲಿ ಕಳೆದ ಹತ್ತು ದಿನಗಳು ಪುನಃ ನನ್ನ ಜೀವನದಲ್ಲಿ ಸಿಗುತ್ತೋ ಇಲ್ವೋ ಗೊತ್ತಿಲ್ಲ.






 ಇಬ್ರೂ ಕೆಲಸಕ್ಕೆ ಹೋಗೋದ್ರಿಂದ ಆರು ತಿಂಗಳು ಮಕ್ಕಳು ಬೇಡ ಅನ್ನೋ ನಿರ್ಧಾರ ಮಾಡಿದ್ದೆವು. ಸರಿ, ದಿನಗಳು, ತಿಂಗಳುಗಳು ಹೇಳ್ದೆ ಕೇಳ್ದೆ ಓಡ್ತಾ ಇತ್ತು. ಆರು ತಿಂಗಳಿನ  ಮೇಲೆ ಇನ್ನು ಮೂರು  ತಿಂಗಳು ಕಳೆದಿತ್ತು. ಗರ್ಭಿಣಿಯಾಗುವ ಯಾವುದೇ ಸೂಚನೆ ಇರಲಿಲ್ಲ. ದಿನೇ ದಿನೇ ಇದೇ  ತಲೆನೋವು. ನಾನು ತಾಯಿಯಾಗ್ತೀನೋ ಇಲ್ವೋ ಅನ್ನೋ ಒಂದು ಸಂಶಯ. ಇದನ್ನು ಯೋಚಿಸಿಯೇ ನನ್ನ ಮನಸ್ಸಿನ ಆರೋಗ್ಯ ಹಾಳಾಗ್ತಾ ಇತ್ತು.
ಇದನ್ನೆಲ್ಲಾ ಗಮನಿಸ್ತಾ ಇದ್ದ ಹೇಮಂತ್ ನನಗೆ ಧೈರ್ಯ ಹೇಳ್ತಿದ್ದ . "ಮಧು ನಾವೇನು ಮುದುಕರಾಗಿದ್ದೀವಾ....? ಇನ್ನು ಮದುವೆಯಾಗಿ ಒಂಬತ್ತು  ತಿಂಗಳು ಆಗುತ್ತೆ ಅಷ್ಟೇ, ಯಾಕೆ ಅಷ್ಟೊಂದು ತಲೆ ಕೆಡಿಸಿ ಕೊಳ್ತಿ?" ಅವನು ಏನೇ ಹೇಳಿದ್ರು ನನ್ನ ಮನಸ್ಸು ಬೇಡದಿದ್ದೆ ಆಲೋಚನೆ ಮಾಡ್ತಾ ಇತ್ತು.
ಇಷ್ಟು ಸಾಲದು ಅಂತ ಒಂಥರಾ ಕಾಯಿಲೆ ಶುರು ಆಗಿತ್ತು. ನನ್ನ ಹೊಟ್ಟೆ ದೊಡ್ಡದಾಗ್ತಾ  ಇರೋ ಹಾಗೆ ಭ್ರಮೆ .  ನಾನು ಗರ್ಭಿಣಿ ಅನ್ನೋ ತರಹ ಫೀಲ್ ಆಗ್ತಾ ಇತ್ತು. ಇದನ್ನೇ ಹೇಮಂತ್ ಹತ್ರ ಹೇಳಿದ್ರೆ, "ನಿನ್ನ monthly periods stop ಆಗಿದಿಯಾ?" ಅಂತ ಕೇಳ್ದ.  ಅದಕ್ಕೆ "ಇಲ್ಲ ಅಂದೆ".....  "ಹಾಗಾದ್ರೆ ಹೇಗೆ ಅದು ಪ್ರೆಗ್ನೆಂಟ್ ಆಗೋಕ್ಕೆ ಸಾಧ್ಯ? ಹುಚ್ಚುಚ್ಚಾಗಿ ಕಲ್ಪನೆ ಮಾಡ್ಕೋಬೇಡ"...  ಅಂತ ನನಗೆ ಬೈದ. "ಇಲ್ಲ ನಿಜ ಕಣೋ, ನನಗೆ ಹಾಗೆ ಅನಿಸ್ತಾ ಇದೆ. ನಾನು ಎಲ್ಲ್ಲೋ ಓದಿದ್ದೀನಿ, ಕೆಲವ್ರಿಗೆ ಗರ್ಭಿಣಿ ಆದ್ರೂ ಪ್ರತಿ ತಿಂಗಳು ಮುಟ್ಟಾಗ್ತಾರೆ" ಅಂತ ಸಮಜಾಯಿಷಿ ನೀಡ್ದೆ . "ಎಲ್ಲೋ ಏನೋ ಆಗುತ್ತೆ ಅಂತ ನೀನು ಕಲ್ಪನೆ ಮಾಡೋದು  ಬೇಡ ..." ಅಂದ . "ಅದೆಲ್ಲಾ ಸುಳ್ಳು, ನಿನ್ನ ಭ್ರಮೆ ಅಷ್ಟೇ ಅಂತ...." ನನ್ನನ್ನು ಸುಮ್ಮನಾಗಿಸಕ್ಕೆ ಪ್ರಯತ್ನ ಪಟ್ಟ. ಅವನು ಜಪ್ಪಯ್ಯ ಅಂದ್ರು ನನ್ನ ಮಾತು ಒಪ್ಪಕ್ಕೆ ತಯಾರಿಲ್ಲ. ಆ ಸಮಯದಲ್ಲಿ ಅವನ ಈ ನಡವಳಿಕೆ  ನನಗೆ ಇನ್ನು ಕೆರಳಿಸ್ತು. "ಬೇಕಾದ್ರೆ ಡಾಕ್ಟರ್ ಹತ್ರ ಹೋಗೋಣ ಅವರೇ ಹೇಳಲಿ ಆಗ ನಾನು ಹೇಳಿದ್ದು ಸರಿನೋ ಅಲ್ವೋ ಅಂತ ಗೊತ್ತಾಗುತ್ತೆ...." ಅಂತ ಪಟ್ಟು ಹಿಡ್ದು ಅವನನ್ನ ಒಪ್ಪಿಸ್ದೆ. "ನಿನಗಂತೂ ಬುದ್ಧಿ ಇಲ್ಲ, ನನಗೂ  ಇಲ್ಲ ಅನ್ಕೊತಾರೆ ನೋಡದವರು ಅಂತ .... " ಗೊಣಗಿದ್ರು ಅವನನ್ನ ಆಸ್ಪತ್ರೆಗೆ ನನ್ನ ಜೊತೆ ಬರಕ್ಕೆ ಒಪ್ಪಿಸ್ಬೇಕಾದ್ರೆ ಉಸ್ಸಪ್ಪ ಅಂತ ಉಸಿರು ಬಿಟ್ಟಿದ್ದೆ. 

ಈ ಮನಸ್ಸು ಕುಸಿದಾಗ್ಲೇ ಈ ದೇವರು ಅನ್ನೋ ನಂಬಿಕೆ ಇನ್ನೂ ಜಾಸ್ತಿ ಆಗೋದು. ಮೊದಲೆಲ್ಲ ದೇವರು, ದೇವಸ್ಥಾನ ಅಂದರೆ ಮೈಲಿ ದೂರ ಇರ್ತಿದ್ದದ್ದು  ನಾನೇನಾ ಅನ್ನೋ ಅನುಮಾನ ಬೇರೆ ಪ್ರಾರಂಭ ಆಗಿತ್ತು. ಇದ್ದಬದ್ದ ದೇವರಿಗೆಲ್ಲ ಹರಕೆ ಹೊತ್ತು 'ದೇವರೇ ನಮಗೆ ಮಗು ಆಗೋ ಹಾಗೆ ಆಶೀರ್ವಾದ ಮಾಡಪ್ಪ' ಅಂತ ಬೇಡ್ಕೊತಾ ಇದ್ದೆ. ಈಗ ನಗು ಬರುತ್ತೆ. ಆದ್ರೆ ಆ ಸಮಯದಲ್ಲಿ ದಿಕ್ಕೇ ತೋಚ್ತಿರಲಿಲ್ಲ.

ಅವತ್ತು ಹೇಮಂತ್ ಮತ್ತು ನಾನು ಇಬ್ರೂ ಆಫೀಸಿಗೆ ರಜೆ ಹಾಕಿ ಆಸ್ಪತ್ರೆ ಹತ್ರ ಹೊರಟಿದ್ವಿ. ನಾನು ಅವನಿಗೆ ಹೇಳ್ತಾ ಇದ್ದೆ. "ಹೇಮಂತ್ ಬೈಕ್ ನಿಧಾನ ಓಡ್ಸೋ ..." ಅಂತ ಅವ್ನು ಪ್ರಶ್ನಾರ್ಥಕವಾಗಿ "ಯಾಕೆ ಅಂದ?" "ಅದು ರೋಡ್ ತುಂಬಾ ಹೊಂಡಗಳು, ಗರ್ಭಿಣಿಯರು ನಿಧಾನಕ್ಕೆ ಹೋಗ್ಬೇಕು ಇಂತಹ ಜಾಗದಲ್ಲಿ ಗೊತ್ತಿಲ್ವಾ ನಿನಗೆ ಅಂದೆ?"....  "ಕರ್ಮ" ಅಂತ ನನ್ನನ್ನು ಬೈತಾ ಇನ್ನು ಜೋರಾಗಿ ಗಾಡೀ ಓಡ್ಸಿ ಆಸ್ಪತ್ರೆ ಬಾಗಿಲಲ್ಲಿ ಗಾಡಿ ನಿಲ್ಲಿಸ್ದ.

ಅದೊಂದು ನಮ್ಮೂರಿನ ದೊಡ್ಡ ಖಾಸಗಿ ನರ್ಸಿಂಗ್ ಹೋಂ. ಮೊದಲನೇ ಮಹಡಿಯ ಕೊನೆಯಲ್ಲಿರುವುದೇ "ಸ್ತ್ರೀ ರೋಗ  ಮತ್ತು ಗರ್ಭಿಣಿಯರ ತಪಾಸಣಾ ರೂಮ್". ಅದಾಗಲೇ  ಸಮಯ ಬೆಳಗ್ಗಿನ 9 ಘಂಟೆ ಆಗಿತ್ತು . ಮಹಿಳೆಯರ ಸರದಿ ಸಾಲೇ ಆಗಲೇ ಕಾಯ್ತಾ ಕುಳಿತಿತ್ತು. ನಾನು ಕೆಳಗಿನ ರಿಸೆಪ್ಶನ್ನಲ್ಲಿ ನನ್ನ ಕಾರ್ಡ್ ನೋಂದಾಯಿಸಿ, ಅಲ್ಲಿಗೆ ತಲುಪಿದಾಗ ಆಗಲೇ ಖುರ್ಚಿಗಳು ಭರ್ತಿಯಾಗಿತ್ತು. ಮೂಲೆಯಲ್ಲಿ ಇದ್ದ ಸ್ವಲ್ಪ ಜಾಗದಲ್ಲಿ ಕಷ್ಟಪಟ್ಟು ಕುತ್ಕೊಂಡು ಸುತ್ತಲೂ ಒಮ್ಮೆ ನೋಡಿದ್ರೆ,. ಗರ್ಭಿಣಿಯರು, ಸಣ್ಣ ಮಕ್ಕಳು ವಾತಾವರಣವೆಲ್ಲಾ ಗುಜು ಗುಜು ಮಾತುಗಳ ಸದ್ದು.

ನನ್ನ ಪಕ್ಕದಲ್ಲಿ ಕೂತ  ಹೆಂಗಸು ಕುತೂಹಲದಿಂದ ನೋಡ್ದಾಗ ಒಂಥರಾ ಮುಜುಗರ. ಜೊತೆಗೆ ಆಕೆಯಿಂದ ಪ್ರಶ್ನೆಗಳು ಪ್ರಾರಂಭ ಆಗಿತ್ತು. ಎಷ್ಟು ತಿಂಗಳಮ್ಮ ? ಒಬ್ಬಳೇ ಬಂದಿದ್ದೀಯಾ? ಮೊದಲನೇ ಮಗುನಾ ನಿನಗೆ? ಇನ್ನು ಹಲವಾರು ಏನೇನೋ ಪ್ರಶ್ನೆಗಳು. ಅಷ್ಟರಲ್ಲಿ ಸಧ್ಯ ಎಂಟ್ರಿ ಮಾಡಿದ ನನ್ನ ಫೈಲ್ ಬಂದಿತ್ತು. ಸಿಸ್ಟರ್ ಗಟ್ಟಿಯಾಗಿ "ಮಧುರಾ ಬನ್ರಿ" ಅಂದಾಗ ಒಂದೇ ಉಸಿರಿಗೆ ಅಲ್ಲಿ ಓಡಿದೆ  . ಅಲ್ಲಿ ತೂಕ ನೋಡಿ ಪುನಃ ನನ್ನ ಸರದಿಗಾಗಿ ಕಾಯ್ತಾ ಕೂತೆ. ಅಷ್ಟರಲ್ಲಿ ಸುಮಾರು ಪ್ರಶ್ನೆಗಳು, ಗೊಂದಲಗಳು ನನ್ನ ಮನಸ್ಸಲ್ಲಿ ನಡೀತಾ ಇತ್ತು.

ಕೊನೆಗೂ ನನ್ನ ಹೆಸರು ಕರ್ದಾಗ ಡಾಕ್ಟರ್ ರೂಮ್ ಒಳಗೆ ಹೆದರ್ತಾ ಕಾಲಿಟ್ಟರೆ,  ಅಲ್ಲಿ ಇದ್ದ ಇನ್ನು ಮದುವೆಯಾಗದ ಅಸಿಸ್ಟೆಂಟ್ ಡಾಕ್ಟರ್ಗಳ ಗುಂಪು ನೋಡಿ ನನ್ನ ಬಾಯೆಲ್ಲಾ ಒಣಗಿತ್ತು. ಅದರಲ್ಲಿ ಒಬ್ಬಳು ನಗ್ತಾ, "ಕೂತ್ಕೊಳ್ಳಿ ಮೇಡಂ" ಅಂತ ಖುರ್ಚಿ ತೋರ್ಸಿದಾಗ ಪೇಚು ಮುಖ ಮಾಡ್ತಾ ಕೂತ್ಕೊಂಡೆ . "ಏನು ಸಮಸ್ಯೆ ಹೇಳಿ " ಅಂದಾಗ . ನಾನು ಮುಜುಗುರ ಪಡ್ತಾ , "ಅದು ನನಗೆ ಗರ್ಭಿಣಿ ಅನ್ನೋ ಅನುಮಾನ" ಅಂತ ಮೆಲ್ಲಕ್ಕೆ ಉಸುರಿದ್ದೆ.  ಅವಳು ಕೇಳಿದ್ದು ಪುನಃ ಅದೇ ಪ್ರಶ್ನೆ. "ಮಧುರ ಅವರೇ ನಿಮ್ಮ ಮುಟ್ಟಾದ ಕೊನೆಯ ತಾರೀಕೇನು?"
ನಾನು ಉತ್ತರ ಕೊಡಕ್ಕೆ ಮೇಲೆ ಕೆಳಗೆ ನೋಡ್ತಾ .." ಅದು ಅದು....  ಇದೇ ತಿಂಗಳು ಹತ್ತನೇ ತಾರೀಕು" ಅಂದೆ
ಆಕೆ ಅದನ್ನ ಫೈಲ್ನಲ್ಲಿ ಬರಕೊಂಡು, "ಹಾಗಾದ್ರೆ ಇನ್ನು ೧೫ ದಿನ ಆಗಿಲ್ಲ ಅದ್ಹೇಗೆ ಪ್ರೆಗ್ನೆಂಟ್ ಅಂತ ನಿರ್ಧಾರ ಮಾಡಿದ್ರಿ?" ಅಂದಾಗ ಆಕೆಯ ಪ್ರಶ್ನೆಗೆ ಏನು ಉತ್ತರ ಕೊಡ್ಬೇಕು ಅಂತಾನೆ ತೋಚಲಿಲ್ಲ. "ಅದು ನನಗೆ ಅನುಮಾನ ಅಷ್ಟೇ..." ಅಂದಾಗ, ನನ್ನನ್ನು ವಿಚಿತ್ರವಾಗಿ ನೋಡ್ತಾ , "ಸರಿ ಇರ್ಲಿ" ಅಂತ ಆಕೆ ನನ್ನನ್ನ treatment room ಗೆ  ಕರ್ಕೊಂಡು ಹೋಗಿ ತಪಾಸಣೆ ಮಾಡಿದ್ಲು. ನಾನು ಆಕೆಯ ಮುಖವನ್ನೇ ಆಸೆಯಿಂದ ನೋಡ್ತಾ ಇದ್ದೆ. ಏನಾದರೂ ಸಂತೋಷದ ವಿಷಯ ಹೇಳ್ತಾಳೋ ಅಂತ ... ಆಕೆಯ ಮುಖ ಭಾವದಲ್ಲಿ "ಎಲ್ಲಿಂದ ತೊಂದರೆ ಕೊಡೋಕ್ಕೆ ಬರ್ತಾರೋ ಅನ್ನೋಷ್ಟು ನಿರ್ಲಕ್ಷ್ಯ ಇತ್ತು. ನಾನು ಮನಸ್ಸಿನಲ್ಲೇ ಆಕೆನ್ನ ಬೈಕೋತಾ ಇದ್ದೆ. "ನಿನಗೇನಮ್ಮ ಗೊತ್ತಾಗುತ್ತೆ ನನ್ನಂಥವರ ಸಂಕಟ" ಅಂತ ..... 

ಆಕೆ ಫೈಲ್ನಲ್ಲಿ ಅದೇನೋ ಬರದು ಆಕೆಯ ಸೀನಿಯರ್ ಡಾಕ್ಟರ್ ಹತ್ರ ನನ್ನನ್ನ ಕರ್ಕೊಂಡು ಹೋದ್ಲು. ಅವರೊಬ್ಬ ಮಧ್ಯ  ವಯಸ್ಸಿನ ಮಹಿಳೆ ಮುಖದಲ್ಲಿ ಕಳೆ ತುಂಬಿ ತುಳಕ್ತಾ ಇತ್ತು. ಆಕೆಯನ್ನ ನೋಡಿದ್ರೆ ಅರ್ಧ ಕಾಯಿಲೆ ವಾಸಿ ಆಗ್ಬೇಕು, ಹಂಗೆ ಲಕ್ಷಣವಾಗಿದ್ರು.ಅವ್ರು ಒಂದು ಚಂದದ ನಗು ನಗ್ತಾ ತಮ್ಮ ಎದುರಿಗೆ ಇದ್ದ ಖುರ್ಚಿ ತೋರ್ಸಿ "ಕೂತ್ಕೋ" ಅಂದ್ರು . ಅಸಿಸ್ಟಂಟ್ ಡಾಕ್ಟರ್ ಕೊಟ್ಟ ಫೈಲನ ಒಮ್ಮೆ ಓದಿ ನನ್ನ ಮುಖ ನೋಡಿ, "ಯಾಕಮ್ಮ ಈ ರೀತಿ ಅನುಮಾನ ಬಂತು ನಿಮಗೆ ಅಂತ ಕೇಳಿದ್ರು"? ನಾನು ಇರೋ ವಿಷಯ ಎಲ್ಲಾ ಅವರ ಹತ್ತಿರ ಮನಸ್ಸು ಬಿಚ್ಚಿ ಹೇಳ್ದೆ . "ನಿನ್ನ ಜೊತೆ ಯಾರು ಬಂದಿದ್ದಾರೆ..." ಅಂತ ಅವ್ರು ಕೇಳ್ದಾಗ, ನನ್ನ ಗಂಡ 'ಹೇಮಂತ್' ಅಂತ ಉತ್ತರ ಕೊಟ್ಟೆ . ಡಾಕ್ಟ್ರು ಹೊರಗಡೆಯಿದ್ದ ಸಿಸ್ಟರ್ ಕರ್ದು "ಅಲ್ಲಿ ಮಿಸ್ಟರ್ ಹೇಮಂತ್ ಅಂತ ಇದ್ದಾರೆ ಅವರನ್ನ ಸ್ವಲ್ಪ ಕರೀರಿ ಅಂದ್ರು" . ನನಗಂತೂ ಆಗ ನಿಜಕ್ಕೂ ಸಂಕಟ, ಛೆ ... ನನ್ನಿಂದ ಇವನೂ  ಈಗ ಮುಜುಗರ ಪಡ್ಬೇಕು. ಸುಮ್ನೆ ಮನೇಲೆ ಇರಬೇಕಿತ್ತು. ನನ್ನ ಬುದ್ದಿಗಿಷ್ಟು ಅಂತ ಮನಸ್ಸಲ್ಲೇ ಬೈದುಕೊಂಡೆ ....

"ಯಾರ್ರೀ ಅದು ಹೇಮಂತ್, ಡಾಕ್ಟ್ರು ಕರೀತಾ ಇದಾರೆ, ಬೇಗ ಬನ್ರಿ ..... " ಸಿಸ್ಟರ್ ಗಟ್ಟಿಯಾಗಿ ಕೂಗಿದ್ದು ಕೇಳಿಸ್ತು 
 ತಡಬಡಿಸ್ತಾ ರೂಮಿನ ಒಳಗೆ ಕಾಲಿಟ್ಟ ಹೇಮಂತ್ .... 
ಅವನನ್ನು ನೋಡಿ ಡಾಕ್ಟ್ರು "ಕೂತ್ಕೊಳ್ರಿ.... " ಅಂತ ಎದುರಿನ ಖಾಲಿ ಇರುವ ನನ್ನ  ಪಕ್ಕದ ಖುರ್ಚಿ ತೋರ್ಸಿದ್ರು
"ಹೇಮಂತ್, ಮನೇಲಿ ಯಾರೆಲ್ಲಾ ಇದ್ದೀರ್ರೀ...???" ಡಾಕ್ಟ್ರು ಅವನಿಗೆ ಪ್ರಶ್ನೆ ಮಾಡಿದ್ರು.
"ನಾನು, ಹೆಂಡ್ತಿ ಮಾತ್ರ ಡಾಕ್ಟ್ರೆ, ನನ್ನ ಅಪ್ಪ, ಅಮ್ಮ ಊರಲ್ಲಿ ಇದ್ದಾರೆ."
"ಮನೇಲಿ ಮಗು ಬೇಕು ಅಂತ ಯಾರಾದ್ರೂ ಒತ್ತಡ ಹಾಕ್ತಾ ಇದ್ದಾರ ಹೇಮಂತ್?"
"ಹಂಗೇನಿಲ್ಲ ಡಾಕ್ಟ್ರೆ, ಯಾರು ಆ ವಿಷಯಾನೇ ಮಾತಾಡೋದಿಲ್ಲ, ಇವಳೇ ಸುಮ್ನೆ ಇಲ್ಲದ್ದನ್ನ ಕಲ್ಪಿಸಿಕೊಂಡು  ಮನಸ್ಸು ಹಾಳು ಮಾಡ್ಕೋತಾ ಇದ್ದಾಳೆ"
"ಸರಿ ಇರ್ಲಿ ಬಿಡಿ, ಇನ್ನು ಈಕೆ ಗರ್ಭ ಧರಿಸಿಲ್ಲ. ನಾನು ಕೆಲವು ಟೆಸ್ಟ್ ಬರದು ಕೊಡ್ತೇನೆ. ಕೂಡಲೆ ಈಗಲೇ ಮಾಡ್ಸಿ . ಮಧ್ಯಾಹ್ನ ರಿಪೋರ್ಟ್ ಬರತ್ತೆ. ಅದನ್ನು ನೋಡಿ ಮುಂದೇನು ಅಂತ ಹೇಳ್ತೀನಿ ಸರಿನಾ...."
"ಓಕೆ ಥ್ಯಾಂಕ್ಯೂ ಡಾಕ್ಟರ್ " ಅಂತ ಅವನು ತಲೆ ಅಲ್ಲಾಡಿಸಿ ನನ್ನನ್ನು ಕರ್ಕೊಂಡು ಹೊರಬಂದ
ಅವರು ಬರೆದುಕೊಟ್ಟ ಎಲ್ಲಾ ಟೆಸ್ಟ್ ಮಾಡ್ಸಿ ಮುಗಿಬೇಕಾದ್ರೆ ಮಧ್ಯಾಹ್ನ 12 ಘಂಟೆ ಹತ್ತಿರ ಬಂದಿತ್ತು
ಅಲ್ಲಿಯೇ ಕ್ಯಾಂಟೀನ್ ನಲ್ಲಿ ಊಟ ಮಾಡಿ ಹೊರಗೆ ಗಾರ್ಡನ್ ಕೆಳಗಿನ ಮರದ ಕೆಳಗೆ ನಾನು ಹೇಮಂತ್ ಕೂತ್ಕೊಂಡ್ವಿ ...
"ಇನ್ನು ಆ ರಿಪೋರ್ಟ್ ಏನು ಬರುತ್ತೊ. ಅದರಲ್ಲಿ ಏನಾದ್ರೂ ತೊಂದರೆ ಇದೆ ಅಂತ ಆದ್ರೆ ಏನು ಮಾಡೋದು ಹೇಮಂತ್"
"ಹಾಗೆಲ್ಲ ಏನು ಆಗೋಲ್ಲ ಮಧು, ಧೈರ್ಯವಾಗಿರು. ಏನೇ ಆದ್ರೂ ಈಗ ಒಳ್ಳೆಯ ವೈದ್ಯಕೀಯ ಸೌಲಭ್ಯ ಇದೆ. ಯೋಚನೆ ಮಾಡ್ಬೇಡ "
"ಅಲ್ಲ ಕಣೋ ಹೇಮಂತ್, ನಾನು ತೆಗೊಳ್ತಾ ಇದ್ದ contraceptive pillsನಿಂದ ಏನಾದ್ರೂ ಸೈಡ್ ಎಫೆಕ್ಟ್ ಆಗಿದ್ರೆ .... "
"ಹಾಗೆಲ್ಲ ಎನೂ ಆಗಿರಲ್ಲ ಮಧು, ಸುಮ್ನೆ ತಲೆ ಕೆಡ್ಸ್ಕೊಬೇಡ . ಗೊತ್ತಾಯ್ತಾ"
"ನಮಗೆ ಮಕ್ಕಳು ಆಗತ್ತೆ ಅಲ್ವೇನೊ ಹೇಮಂತ್, ಇಲ್ಲ ಅಂದ್ರೆ ನೀನು ಇನ್ನೊಂದು ಮದುವೆ ಮಾಡ್ಕೊಳೋ ಪ್ಲೀಸ್, ನನ್ನಿಂದ ನಿಂಗೆ ಅನ್ಯಾಯ ಆಗ್ಬಾರ್ದು. "
"ಈಗ ಸುಮ್ನೆ ಬಾಯಿ ಮುಚ್ತೀಯಾ ಅಥವಾ ಹಿಂಗೆ ಕಿರಿ ಕಿರಿ ಮಾಡ್ತಾ ಇರ್ತೀಯಾ...??? ಒಂದು ಮದುವೆನೇ ಸಾಕಾಗಿದೆ, ಅದರ ಮೇಲೆ ಇನ್ನೊಂದು ಮದುವೆಯಂತೆ ... ಏನಂಥ ತಿಳ್ದಿದ್ದೀಯಾ ನನ್ನನ್ನ... ನೀನು ಸ್ವಲ್ಪ ಈ ಬಂಡಲ್ ಸಿನೆಮಾ, ಸೀರಿಯಲ್ ನೋಡೋದು ಕಡಿಮೆ ಮಾಡು. ಅರ್ಥ ಆಯ್ತಾ. " ಅಂತ ಸಿಟ್ಟಿನಿಂದ ದಬಾಯಿಸಿದ್ದ.
"ಯಾಕೋ ಇಷ್ಟು ರೇಗ್ತೀಯಾ . ಇರೋ ವಿಷಯ ಹೇಳಿದ್ರೆ ..... !!!!
"ಚುಪ್ .... ಬಿಲ್ಕುಲ್ ಚುಪ್ ...ಇನ್ನೊಂದು ಮಾತಾಡಿದ್ರೆ ಇಲ್ಲೇ ಬಿಟ್ಟು ಹೋಗ್ತೀನಿ ಅಷ್ಟೇ ...."
"ಏ ಸಾರಿ ಕಣೋ, ನಿನ್ನನ್ನ ಬಿಟ್ಟು ಇರಕ್ಕೆ ನಂಗೂ ಆಗಲ್ಲ ಕಣೋ . ಏನೋ ಟೆನ್ಶನ್ ನಲ್ಲಿ ಮಾತಾಡ್ದೆ . "  ಅವನ ಸಿಟ್ಟು ಮುಖ ನೋಡಿ ಶಾಂತವಾಗಿ ಕೂತ್ಕೊಂಡೆ. 

ಸಂಜೆ ನಾಲ್ಕು ಘಂಟೆ ನಂತರ ರಿಪೋರ್ಟ್ ಬಂದಿತ್ತು.  ಹೆದರುತ್ತಲೇ ಡಾಕ್ಟರ್ ರೂಮಿನ ಒಳಗೆ ಕಾಲಿಡುತ್ತಾ ಇದ್ದಂತೆ ಆಕೆ ಮಂದಸ್ಮಿತೆಯಾಗಿ ನಮ್ಮನ್ನ ಒಳಗೆ ಕರ್ದು, "ಮಧುರ, ಹೇಮಂತ್ ಹೆದರೋ ಅಂಥದ್ದು ಏನೂ ಇಲ್ಲ. ರಿಪೋರ್ಟ್ ನಾರ್ಮಲ್ ಇದೆ. ಕೆಲವೊಮ್ಮೆ ಸ್ವಲ್ಪ ಜನರಿಗೆ  ಗರ್ಭ ಧರಿಸಲಿಕ್ಕೆ ತಡ ಆಗುತ್ತೆ.  ಗಾಭರಿ ಬೇಡ, ಮನಸ್ಸು ಪ್ರಶಾಂತವಾಗಿ ಇಟ್ಕೊ ಮಧುರ ಎಲ್ಲಾ ಸರಿಹೊಗುತ್ತೆ". ಅಂತ ಧೈರ್ಯ ತುಂಬಿದ್ರು ನಂಗೆ.  ನಾನು ಅವರ ಚೇಂಬರ್ನಲ್ಲಿ ಕುಣಿಯೋದು ಒಂದೇ ಬಾಕಿ. ಅಷ್ಟು ಮನಸ್ಸು ನಿರಾಳವಾಗಿತ್ತು. 
"ನೋಡಮ್ಮ ಮುಂದಿನ ಸಲ ಇಂಥಹ ಮುಜುಗರ ಬೇಡ. ನಾನೊಂದು strip ಹೆಸರು ಬರೆದು ಕೊಡ್ತೀನಿ. ಮೆಡಿಕಲ್ ಶಾಪ್ನಲ್ಲಿ ಸಿಗುತ್ತೆ. ನಿಮ್ಗೆ  ೨-೩ ತಿಂಗಳು ಮುಟ್ಟು  ನಿಂತು ಪ್ರೆಗ್ನೆಂಟ್ ಅನ್ನೋ ಅನುಮಾನ ಬಂದಾಗ ಈ pregnency test kitನಲ್ಲಿ ಮನೇಲೆ ಮೊದಲು ಒಮ್ಮೆ urine test  ಮಾಡಿ ಇಲ್ಲಿಗೆ ಬನ್ನಿ..." ಅಂತ prescription ಬರದು ಕೊಟ್ರು.
ಅವರಿಗೆ ಧನ್ಯವಾದ ಹೇಳ್ತಾ  ಕಾರಿಡಾರಲ್ಲಿ ಹೆಜ್ಜೆ ಹಾಕಿದ್ವಿ. 

"ಅಲ್ಲ ಕಣೋ ಹೇಮಂತ್, ಮದುವೆ ಆದಮೇಲೆ ಏನೇನೋ ಎಲ್ಲಾ ಮೆಡಿಕಲ್ ಶಾಪ್ನಿಂದ ತರ್ತಿದ್ದೆ, ಇದು ಗೊತ್ತಿರ್ಲಿಲ್ವೇನೋ ನಿಂಗೆ?"
"ಅಯ್ಯೋ ಮೆತ್ತಗೆ ಮಾತಾಡೇ, ಅಕ್ಕಪಕ್ಕದವ್ರು ಕೇಳಿಸಿಕೊಂಡರೆ ನಕ್ಕಾರು, ಏನು ಪೋಲಿಗಳು ಇವ್ರು ಅಂತ..."
"ನಗಲಿ ಬಿಡೋ, ನಾವೇನು ಕದ್ದು ಮುಚ್ಚಿ ಓಡಾಡ್ತಾ ಇದ್ದೀವಾ... ಗಂಡ ಹೆಂಡ್ತಿ ತಾನೇ ...ಯಾರೂ ನಗಲ್ಲ ಬಿಡು..."
"ನಿಜಕ್ಕೂ ನನಗೆ ಇದು ಗೊತ್ತಿರಲಿಲ್ಲ ಕಣೆ, ನಾನೇನು ೪-೫ ಮದುವೆ ಆಗಿದೀನಾ, ಅದು ಹೆಂಗಸರ ವಿಚಾರ, ಇದೆಲ್ಲ ಗೊತ್ತಿರಕ್ಕೆ? ನಿಂಗೆ ಗೊತ್ತಿರಲಿಲ್ವೆನೆ ಇದು?"
"ನಂಗೂ ಇದು ಮೊದಲ್ನೇ ಮದುವೆ ಕಣೋ, ನಂಗೆ ಹೇಗೆ ಗೊತ್ತಿರುತ್ತೆ ಹೇಳು? ಇಬ್ಬರು ವಾದ ಮಾಡ್ತಾ ಬೈಕ್ ಹತ್ತಿರ ಬಂದ್ವಿ .
"ಈಗ್ಲಾದ್ರೂ ಬೈಕ್ ಫಾಸ್ಟ್ ಆಗಿ ಓಡಿಸ್ಲಾ ಮಧು..." ಅಂತ ಹೇಮಂತ್ ನನ್ನನ್ನು ಕೀಟಲೆ ಮಾಡ್ದಾಗ, "ಹು" ಅಂತ ಉತ್ತರವನ್ನಷ್ಟೇ ಕೊಟ್ಟು ನಗೆ ಚೆಲ್ಲಿದೆ. 


                                                                14-02-2012

ಹಾಗೆ ಇನ್ನೆರಡು ತಿಂಗಳು ಕಳೆದಿತ್ತು. ಒಂದು ಮಧ್ಯಾಹ್ನ ಹೇಮಂತ್ ಗೆ ಫೋನ್ ಮಾಡ್ದೆ.
"ಏಯ್ ಹೇಮಂತ್,  ಡಾಕ್ಟ್ರು ಬರ್ದುಕೊಟ್ಟ prescription ಎಲ್ಲಿ ಇಟ್ಟಿದ್ದೀಯೋ ?"
"ನನ್ನ ಪರ್ಸನಲ್ಲೇ ಇದೆ ಯಾಕೆ ಮಧು?"
"ಅದು, ಮತ್ತೆ ಸಂಜೆ ಬರುವಾಗ ನೆನಪಿಂದ ಮೆಡಿಕಲ್ ಶಾಪ್ನಿಂದ ತೆಗೊಂಡು ಬಾರೊ.... ಪ್ಲೀಸ್ ..."
"ಏನೇ, ಏನಾದ್ರೂ ಗುಡ್ ನ್ಯೂಸಾ ... ?"
"ಗೊತ್ತಿಲ್ಲ, ನಾಳೆ ಹೇಳ್ತೀನಿ, ಮರೀದೇ ತೆಗೊಂಡುಬಾ."
"ಈ ಬಾರಿನೂ ಅನುಮಾನಾನಾ ಅಥ್ವಾ ನಿಜಾನಾ" ಅಂತ ಅವನು ಕೇಳ್ದಾಗ,
"ನಾನು ಪ್ರತಿ ತಿಂಗಳು ನನ್ನ ಪಿರಿಯಡ್ ದಿನಾನ್ನ ಕ್ಯಾಲೆಂಡರ್ನಲ್ಲಿ ಬರದು ಇಡ್ತೀನಿ ಗೊತ್ತಾಯ್ತಾ...." ಅಂದೆ
ಅದಕ್ಕೆ ಅವನು, "ಈ ವರ್ಷದ್ದೇ ಕ್ಯಾಲೆಂಡರ್ ಅಲ್ವಾ," ಅಂತ ನನ್ನ ರೇಗಿಸ್ದಾಗ  "ಮನೆಗೆ ಬಾ ಆಮೇಲೆ ನಿನ್ನ ವಿಚಾರಿಸಿಕೊಳ್ತಿನಿ ಅಂತ" ಫೋನ್ ನಲ್ಲಿ  ದಬಾಯಿಸಿದ್ದೆ.
ಮರುದಿನ ಆ ಯೂರಿನ್ ಪ್ರೆಗ್ನೆನ್ಸಿ ಟೆಸ್ಟ್ ನಲ್ಲಿ "ಪಾಸಿಟಿವ್ ' ಅಂತ ತೋರಿಸ್ದಾಗ, ಹಂಗೆ ಹೇಮಂತ್ ಜೊತೆ ಆ ದಿನವಿಡೀ ಸಂತಸ ಪಟ್ಟಿದ್ದೆ .

ಮತ್ತೆ ದಿನಗಳು, ತಿಂಗಳುಗಳು ಓಡಲಿಕ್ಕೆ ಪ್ರಾರಂಭ ಆಗಿತ್ತು. ನಮ್ಮಿಬ್ಬರ ತಂದೆ -ತಾಯಿಯರು ಅಜ್ಜ-ಅಜ್ಜಿ ಆಗುವ ಕನಸು ಕಾಣ್ತಾ ಇದ್ರು. ಮನೆಯಲ್ಲಿ ಸಂಭ್ರಮ.  ಅದರ ಮಧ್ಯೆ morning sickness ಬೇರೆ. ಅದು ತಿಂದರೆ ವಾಂತಿ, ಇದು ತಿಂದರೆ ವಾಂತಿ. ಮೊದಲ ಕೆಲವು ತಿಂಗಳು ಈ ಸಮಸ್ಯೆಯಲ್ಲೇ ಕಳೆದು ಹೊಯ್ತು. ನಂತರ ಬಯಕೆ ಶುರು ಆಯ್ತು. ಏನೇನೋ ಅಪರೂಪದ ತಿಂಡಿ ತಿನಿಸುಗಳನ್ನ ತಿನ್ನುವ ಆಸೆ. ಜೊತೆಗೆ ಪ್ರತಿದಿನ ಕಬ್ಬಿಣದ ಮಾತ್ರೆ ಮತ್ತು folic acid ಮಾತ್ರೆಗಳ ಸೇವನೆ . ಸುಮಾರು ಆರು ತಿಂಳಾದಾಗ ಹೊಟ್ಟೆಯಲ್ಲಿ ನಿಧಾನವಾಗಿ ಮಿಸುಕಾಡುವ ಮಗು. ಅದರ ಅನುಭವ ಮಾತ್ರ ವರ್ಣಿಸಲಿಕ್ಕೆ ಸಾಧ್ಯ ಇಲ್ಲ. 
ದಿನಾ ರಾತ್ರಿ,

"ಹೇಮಂತ್ ನೋಡೋ, ಮಗು ಹೆಂಗೆ ಕಾಲಿಂದ ಒದಿಯುತ್ತೆ. ಅಬ್ಬಾ ತುಂಬಾ ನೋವು ಕಣೋ..."
"ಬಹುಶಃ ನಿನ್ನ ತರಹಾನೇ ತರಲೆ ಇರ್ಬೇಕು ಮಧು. ಇನ್ನು ಇಬ್ಬಿಬ್ರನ್ನು ನಾನು ಹೇಗೆ ಸಂಭಾಳಿಸೋದೋ..... "
"ಹೇಮಂತ್, ರಾತ್ರಿಯೆಲ್ಲಾ ನಿದ್ದೆ ಮಾಡಕ್ಕೆ ಬಿಡಲ್ಲ ಗೊತ್ತಾ.....".
"ಅನುಭವಿಸು ಮಧು, ಇಷ್ಟು ದಿನ ನೀನು ನನಗೆ ಮಾಡ್ತಾ ಇದ್ದ ಹಿಂಸೆ ಎಲ್ಲಾ ಈಗ ನನ್ನ ಮಗು ನಿಂಗೆ ಮಾಡುತ್ತೆ."ಅಂತ ಅವನ ಒಗ್ಗರಣೆ ಬೇರೆ.


ರಾತ್ರಿಯೆಲ್ಲ ಜಾಗರಣೆ. ಬೆಳಗಿನ ಜಾವ ಹತ್ತುವ ನಿದ್ದೆ. ಜೊತೆಗೆ ಕೆಲಸಕ್ಕೆ ಹೋಗುವ ಗಡಿಬಿಡಿ. ಪಾಪ ಹೇಮಂತ್ ಸಹಾ ನನ್ನ ಜೊತೆ ಅಡಿಗೆ ಕೆಲಸಕ್ಕೆ ಸಹಾಯ ಮಾಡಿ ನನ್ನನ್ನ ಆಫೀಸಿಗೆ ಡ್ರಾಪ್ ಕೊಡ್ತಾ ಇದ್ದ. ಏಳನೇ ತಿಂಗಳು ತುಂಬ್ತಾ ಇದ್ದ ಹಾಗೆ 'ಸೀಮಂತದ ಶಾಸ್ತ್ರ' ಅದೂ ಸಾಂಗವಾಗಿ ನೆರವೇರಿದ ಮೇಲೆ ಆಫೀಸಿಗೆ ಲೀವ್ ಹಾಕಿ  ಅಮ್ಮನ ಮನೆಗೆ ಪ್ರಯಾಣ.  ಅಲ್ಲಿ  ಅಮ್ಮನ ಕೈಯಲ್ಲಿ ಮಾಡಿದ ನನ್ನ  ಇಷ್ಟದ ಅಡಿಗೆ, ತಿಂಡಿಯ ಭೂರಿ ಭೋಜನ .... ದಿನಗಳು ತುಂಬ್ತಾ ಇತ್ತು. ಡೆಲಿವರಿ ಡೇಟ್ ಹತ್ತಿರ ಬರ್ತಾ ಇದ್ದ ಹಾಗೆ ಅದೇನೋ ಆತಂಕ ಶುರು ಆಗಿತ್ತು. ಆಸ್ಪತ್ರೆ ಮನೆಯಿಂದ ತುಂಬಾ ದೂರ ಇರೋದರಿಂದ ಹೆರಿಗೆಗೆ ಕೊಟ್ಟ ಹಿಂದಿನ ದಿನವೇ ಅಡ್ಮಿಟ್ ಆಗಿದ್ದೆ. ಮರುದಿನ ತಪಾಸಣೆ ಮಾಡಿದ ಡಾಕ್ಟರ್ ನೋವು ಬರಲು ಇಂಜಕ್ಷನ್ ಕೊಟ್ಟಿದ್ರು. ಆದ್ರೆ ಕೇವಲ ಬೆನ್ನು ಮತ್ತು ಸೊಂಟ ನೋವು ಬರುತ್ತಾ ಇತ್ತೇ ವಿನಃ ಹೊಟ್ಟೆನೋವು ಬರುವ ಲಕ್ಷಣ ಕಾಣ್ತಾ ಇರಲಿಲ್ಲ. ಹಲ್ಲು ಕಚ್ಚಿ ಆ ನೋವನ್ನು ಅನುಭವಿಸ್ತಾ ಇದ್ದೆ. 

"ನನಗೆ ಇಷ್ಟೆಲ್ಲಾ ನೋವು ಇರುತ್ತೆ ಅಂತಾ ಗೊತ್ತೇ ಇರ್ಲಿಲ್ಲ ಕಣೋ ಹೇಮಂತ್ ...."
"ಇನ್ನೊಂದು ಸ್ವಲ್ಪ ಹೊತ್ತು ಮಧು ತಡ್ಕೋ  , ಮಗು ಕೈಗೆ ಬಂದ ಮೇಲೆ ನೋವೆಲ್ಲಾ ಮಂಗಮಾಯ ಕಣೆ" 
"ಹೌದು ಕಣೋ, ಹೇಳೋಕ್ಕೆ ಅದೆಷ್ಟು ಸುಲಭ ..... ಛೆ ..ಈ ಹೆರಿಗೆ ನೋವೆಲ್ಲಾ ನಾವು ಹೆಣ್ಣು ಮಕ್ಕಳೇ ಯಾಕೆ ಅನುಭವಿಸ್ಬೇಕೋ..." ಅಂತ ಆ ನೋವಿನಲ್ಲೂ ಗೊಣಗ್ತಾ ಇದ್ದೆ...  

ಕೊನೆಗೂ ಮಗು ತಿರುಗದೇ ನಾರ್ಮಲ್ ಹೆರಿಗೆ ಆಗುವ ಲಕ್ಷಣ ಕಾಣ್ದೆ ಇದ್ದಾಗ, ಡಾಕ್ಟರ್  ಇನ್ನು ಶಸ್ತ್ರಕ್ರಿಯೆ ಮಾಡ್ಬೇಕು ಅನ್ನೋ ನಿರ್ಧಾರ ತೆಗೊಂಡ್ರು . ಆಗಲೇ ಸಮಯ ಮಧ್ಯಾಹ್ನ ನಾಲ್ಕು ಘಂಟೆ ಆಗ್ತಾ ಇತ್ತು. ನನ್ನನ್ನ "ಓಟಿಗೆ" ಕರ್ಕೊಂಡು ಹೋಗ್ತಾ ಇದ್ರೆ ಅಮ್ಮ, ಅಪ್ಪ, ಹೇಮಂತ್,ತಮ್ಮ  ಎಲ್ಲರ ಮುಖದಲ್ಲೂ ಆತಂಕದ ಛಾಯೆ. "ಧೈರ್ಯವಾಗಿರು ಎಂಬ ಸಣ್ಣ ಭರವಸೆ". ಮುಂದಿನ ಕೆಲಸಗಳು ಸುಸೂತ್ರವಾಗಿ ನಡೆದಿತ್ತು. ನನ್ನ ಕಣ್ಣಿಗೆ ಬಟ್ಟೆ ಕಟ್ಟಿ, ಬೆನ್ನಿಗೆ ಅನಸ್ತೇಶಿಯಾ ಇಂಜಕ್ಷನ್ ಕೊಟ್ಟು ದೇಹ ಮರಗಟ್ಟಿದ ಮೇಲೆ ತಮ್ಮ ಕೈಚಳಕ ತೋರಿಸಿ, ಡಾಕ್ಟರ್ ನಿಮಿಷಗಳಲ್ಲಿ ಮುದ್ದು ಕಂದನನ್ನು ಎತ್ತಿ ಹೊರತೆಗೆದಿದ್ದರು. ಇದೆಲ್ಲಾ ಕಣ್ಣಿಗೆ ಬಟ್ಟೆ ಕಟ್ಟಿದ ಒಂದು ಮೂಲೆಯಿಂದ  ಕಾಣ್ತಾ ಇತ್ತು ನಂಗೆ. ಮಗುವಿನ ಅಳು, ಜೊತೆಗೆ ರಕ್ತಸಿಕ್ತವಾಗಿದ್ದ ಕೂಸನ್ನು ಅಲ್ಲೇ ಇದ್ದ ನೀರಿನ ಟಬ್ನಲ್ಲಿ ಕ್ಲೀನ್ ಮಾಡಿ ಬಟ್ಟೆಯಿಂದ ಸುತ್ತಿ ಹೊರಗೆ ಕರೆದುಕೊಂಡು ಹೋದಾಗ ನನ್ನ ಜನ್ಮ ಸಾರ್ಥಕ ಅನ್ನೋ ನಿಟ್ಟುಸಿರು. ಮುಂದೆ ಕತ್ತರಿಸಿದ ನನ್ನ ಹೊಟ್ಟೆಗೆ ಹೊಲಿಗೆ ಹಾಕಿ ನನ್ನನ್ನ ವಾರ್ಡ್ಗೆ ಶಿಫ್ಟ್ ಮಾಡೋವಾಗ ನನ್ನ ಸುತ್ತ ನೆರೆದ ಮನೆಯವರೆಲ್ಲರ ಕಣ್ಣಲ್ಲಿ ಹೊಳಪು. 


ಹೀಗೆ ಮಾತಾಡ್ತಾ ನನ್ನ ಮುಖದಲ್ಲಿ ಇದ್ದ ಸಂತೋಷ ಕಂಡು ಅಮ್ಮ, "ಮಧು ನಿನಗೇನಾದ್ರೂ ನಾರ್ಮಲ್ ಹೆರಿಗೆ ಆಗಿದ್ರೆ ಇಷ್ಟೊಂದು ಖುಷಿ ಇರ್ತಾ ಇರ್ಲಿಲ್ಲ. ಇನ್ನು ಅದೆಷ್ಟು ನೋವು ಸಹಿಸ್ಬೇಕಿತ್ತು ಗೊತ್ತ..." ಅಂದಾಗ, "ಇರ್ಲಿ ಬಿಡಮ್ಮ ಮುಂದಿನ ಸಾರಿ ನಾರ್ಮಲ್ ಡೆಲಿವರೀನೇ ಗ್ಯಾರಂಟಿ ಆಗೋದು ನೋಡು ಬೇಕಾದ್ರೆ..." ಅಂತ ಅಮ್ಮನಿಗೆ ಕಣ್ಣು ಹೊಡ್ಡಿದ್ದೆ. ಅದಕ್ಕೆ ಅವರು, " ಮೊದಲು ಈ ಕೂಸನ್ನ ದೊಡ್ಡ ಮಾಡು ಆಮೇಲೆ ಅದರ ಬಗ್ಗೆ ಯೋಚನೆ ಮಾಡು, ಒಂದಲ್ಲ ಇನ್ನೆರಡು ಮಕ್ಕಳಾಗ್ಲಿ ನನಗೆ ಸಂತೋಷ"  ಅಂತ ನಕ್ಕಿದ್ದರು. 



ಅವತ್ತು ನನ್ನ ಹೆರಿಗೆಯಾಗಿ 12 ನೇ ದಿನ. ಮಗುವಿಗೆ ನಾಮಕರಣ, ತೊಟ್ಟಿಲಿಗೆ ಹಾಕುವ ಸಂಭ್ರಮ.  ಅಲಂಕರಿಸಿದ ತೊಟ್ಟಿಲು. ಮನೆ ತುಂಬಾ ನೆಂಟರು . ಮಗುವಿಗೆ ಏನು ಹೆಸರಿಡೋದು ಎಂದು ನಾನು ಮೊದಲೇ ನಿರ್ಧಾರ ಮಾಡಿದ್ದೆ. ಗಂಡು ಮಗು  ಆದ್ರೆ 'ಅನುಪಮ್' ಹೆಣ್ಣಾದರೆ  'ಅನುಪಮ'.  ಇದಕ್ಕೆ ಕಾರಣವೂ ಇತ್ತು. ನನ್ನ ಪ್ರೀತಿಯ ಸ್ನೇಹಿತೆಯ ಹೆಸರದು. ಸುಮಾರು ೩-೪ ವರ್ಷ ಒಟ್ಟಿಗೆ ಓದಿದ ಬಾಲ್ಯ ಗೆಳತಿ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ ಆದರು ಅವಳ ನೆನಪಿಗೆ ಆ ಹೆಸರು ಇಡಬೇಕು  ಅಂತ ನನ್ನ ಇಚ್ಚೆ. ಇದಕ್ಕೆ ಸಂಪೂರ್ಣ ಒಪ್ಪಿಗೆ ಹೇಮಂತ್ನದು. ಬೆಳಿಗ್ಗೆಯೇ ಮಾವನ ತೊಡೆ ಮೇಲೆ ಮಲಗಿಸಿ ಪುಟ್ಟಿಗೆ ಕಿವಿ ಚುಚ್ಚುವ ಸಡಗರ. ಪಾಪದ್ದು ಎಳೆ ಕಂದ ಆ ಚುಚ್ಚುವ  ನೋವಿಗೆ  ಮುಖವೆಲ್ಲ ಕೆಂಪು ಕೆಂಪು . ಜೊತೆಗೆ ಅಳು. ಇದನ್ನೆಲಾ ಕೇಳಿಸಿಕೊಂಡ ನನಗೆ ಸಂಕಟ. ಇದಕ್ಕೆ ಅನ್ನೋದೋ ಅನ್ಸುತ್ತೆ ತಾಯಿಕರಳು. ಮಗುವಿಗೆ ಸ್ವಲ್ಪ ನೋವಾದರೂ ತಡೆಯಲಾಗದ ದುಃಖ, ಕಣ್ಣು ತುಂಬಿ ಬರ್ತಾ ಇತ್ತು. ಬಹುಶಃ 'ಅಮ್ಮ' ಅನ್ನೋ ಶಬ್ದದ ಅರ್ಥ ಅವತ್ತೇ ನನಗೆ ಗೊತ್ತಾಗಿದ್ದು.  ಮಧ್ಯಾಹ್ನ ಮಗುವಿಗೆ ತೊಟ್ಟಿಲಿಗೆ ಹಾಕಿ, ಅದರ ಕಿವಿಯಲ್ಲಿ ಅಜ್ಜಿ "ಅನುಪಮ"  ಅನ್ನೋ  ಹೆಸರಿಟ್ಟಿದ್ರು. ಅವತ್ತಿನ ಕಾರ್ಯಕ್ರಮ ಚೆನ್ನಾಗಿ ಮುಗಿದಿತ್ತು. 


ಆಶ್ಚರ್ಯ ಅಂದ್ರೆ ನನ್ನ  ತಮ್ಮ ಅಮ್ಮನಿಗೆ ಅಡಿಗೆ , ಕ್ಲೀನಿಂಗ್ ನಲ್ಲಿ ಮಾತ್ರ ಅಲ್ಲ , ಕಾಲೇಜ್ ಮುಗಿಸಿ ಮನೆಗೆ ಬಂದ ಮೇಲೆ, ಮಗು ನೋಡ್ಕೊಳ್ಳೋದ್ರಲ್ಲೂ ಎತ್ತಿದ ಕೈ ಅಂತ ಗೊತ್ತಾಯ್ತು. ನಾನು ಅವನಿಗೆ ಕೀಟಲೆ ಮಾಡ್ತಾ ಇದ್ದೆ. "ಲೋ ಹುಡ್ಗಾ, ಇನ್ನೇನು ನಿನ್ನ ಹೆಂಡ್ತಿಗೆ ಆರಾಮೋ ಆರಾಮೋ . ಅವಳು ಮದುವೆ ಆದ ಮೇಲೆ  ಕಾಲು ಮೇಲೆ ಕಾಲು ಹಾಕಿಕೊಂಡು ಕೂತ್ರೆ ಆಯ್ತು. ಅದೇನು ಅದೃಷ್ಟ ಮಾಡಿದ್ದಾಳೆ ಕಣೋ , ಅವಳು ನಿನ್ನ ಮದುವೆಯಾದ್ರೆ ಎಷ್ಟು ಸುಖಿ" ಅಂತ ರೇಗಿಸ್ತಾ ಇರ್ತೆನೆ. ನನಗಿಂತ ಚೆನ್ನಾಗಿ ಮಗುನ ಅವನು ನೋಡ್ಕೋತಾನೆ, ಈಗ ಮಾವ ಅನ್ನೋ ಪಟ್ಟ ಬೇರೆ . ಖುಷಿಯಾಗುತ್ತೆ ಅವನನ್ನು ನೋಡಿದ್ರೆ. ದೂರದಲ್ಲಿದ್ದಾಗ ತುಂಬಾ ಮಿಸ್ ಮಾಡ್ತಾ ಇದ್ದೆ. ಈಗ ಬಾಣಂತನಕ್ಕೆ ತವರಿಗೆ ಬಂದು ಅವನ ಜೊತೆ ಸಮಯ ಕಳೆಯೋದು its wonderful. ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಇಬ್ರೂ ನಗಾಡೋದು, ಕಾಲು ಎಳೆಯೋದು like it like it ... :-)
ಇವತ್ತು ಅನು ಪುಟ್ಟಂಗೆ ಒಂದನೇ ತಿಂಗಳ ಇಂಜಕ್ಷನ್ ಪಾಪ ಬೆಳಿಗ್ಗೆಯಿಂದ ಅದರ ನೋವಿಗೆ ಅಳ್ತಾ ಇದ್ದಾಳೆ. ಅದೆಷ್ಟು ನಾನು ಮತ್ತು ಅಮ್ಮ ಮೆತ್ತನೆಯ ದಿಂಬು ಅವಳ ಸುತ್ತ ಇಟ್ಟು ಮುದ್ದಾಡಿದ್ರು  ನೋವಿನಿಂದ ಮುಖ ಅತ್ತು  ಅತ್ತು ಸುಸ್ತಾಗಿದೆ.



                                                                                                           15-02-2012 

 ಇವತ್ತು ನನ್ನ ರೂಮೆಲ್ಲ ಒಳ್ಳೆ ಘಮ.  ಅನು ಪುಟ್ಟಿಗೆ ಈಗಷ್ಟೇ ಸ್ನಾನ ಆಯ್ತು.  ಸಾಂಬ್ರಾಣಿಯ (ಲೋಭಾನದ) ಪರಿಮಳ ಇಡೀ ಕೋಣೆಯೆಲ್ಲ ತುಂಬಿಕೊಂಡಿದೆ  ಅನು  ಪುಟ್ಟಿನ ಬಿಳಿ ವಸ್ತ್ರದಲ್ಲಿ ಚೆನ್ನಾಗಿ ಸುತ್ತಿ ಅಮ್ಮ ತೊಟ್ಟಿಲಲ್ಲಿ ಮಲಗ್ಸಿದ್ದಾರೆ. ಅದೆಷ್ಟೇ ಸುತ್ತಿದ್ದರೂ ಇನ್ನೊಂದು ಘಂಟೆಯಲ್ಲಿ ಕೈ ಕಾಲು ಎಲ್ಲ ಆರಾಮಾಗಿ ಬಿಡಿಸಿಕೊಳ್ತಾಳೆ. ಅಮ್ಮ ಮೊನ್ನೆಯಿಂದ ಕೇಳ್ತಾ ಇದ್ದಾರೆ, ಅದೇನು ಬರಿತಾ ಇದೀ, ತೋರ್ಸು ನಾನು ಸ್ವಲ್ಪ ಓದ್ತೀನಿ  ಅಂತ ," ..... "ಎಲ್ಲ  ಬರೆದು ಮುಗ್ಸಿದ್ ಮೇಲೆ ಓದು ಅಂತ ಹೇಳಬಿಟ್ಟಿದ್ದೀನಿ." ಇದನ್ನೇನಾದ್ರೂ ಅವ್ರು ಓದಿದ್ರೆ ಅಷ್ಟೆ  ಸಹಸ್ರ ನಾಮಾರ್ಚನೆ ನಂಗೆ . "ಸ್ವಲ್ಪಾನು ನಾಚಿಕೆ ಇಲ್ಲ ಏನೆಲ್ಲಾ ಬರ್ದಿದ್ದೀಯಾ ಅಂತ ಬಯ್ಯಬಹುದು"....  ಅಥವಾ "ತನ್ನ ಗಂಡುಬೀರಿ ಮಗಳ ಮನಸ್ಸಲ್ಲಿ ಇಷ್ಟೆಲ್ಲಾ ಇತ್ತಾ ಅಂತ ಆಶ್ಚರ್ಯ ಪಡ್ಬಹುದು", ಕಾದು  ನೋಡ್ಬೇಕು. ಯಾವುದಕ್ಕೂ ಅಮ್ಮನ ಕೈಗೆ ಸಿಗಬಾರದು ಅಂತ ದಿನಾಲು ಪೇಪರನ್ನ ದಿಂಬಿನ ಕೆಳಗೆ ಮುಚ್ಚಿ ಇಡ್ತಾ ಇದ್ದೀನಿ. ಇನ್ನು ಹೇಮಂತ್ ಇದನ್ನ ಓದಿದ್ರೆ , asusual  'ನೀನು ಪೋಲಿ ಕಣೆ ಮಧು, ನೋ ಚೇಂಜ್  ' ಅಂತ ನಗ್ಬಹುದು. ಇನ್ನಾದರೂ ಜೀವನದಲ್ಲಿ ಸೀರಿಯಸ್ ಆಗಿರೋದು ಕಲಿಬೇಕು. ಏನೇ ಆದ್ರೂ ನನ್ನ ತರಲೆ ಬುದ್ದಿ ಬಿಡಕ್ಕೆ ಆಗಲ್ಲ. ಅದು ಹುಟ್ಟುಗುಣ ಅನ್ಸುತ್ತೆ. ಹಾಗಿರೋಕ್ಕೆ ನಾನು  ತುಂಬಾ ಇಷ್ಟ ಪಡ್ತೀನಿ ಕೂಡ .

ನನಗೆ ಕೊನೆಯಲ್ಲಿ ಅನಿಸಿದ್ದು ಇಷ್ಟೇ .ಅದೆಷ್ಟೋ ಜನ ಹೆಣ್ಣುಮಗು ಅಂತ ಗರ್ಭಪಾತ ಮಾಡಿಸ್ತಾರೆ. ಆ ಪುಟ್ಟ ಜೀವದ ಯೋಚನೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಮೊಗ್ಗನ್ನ ಹೊಸಕಿ ಹಾಕ್ತಾರೆ.  ಅದೆಷ್ಟೋ  ಜನ, ತುಂಬಾ ಮಕ್ಕಳಿರುವವರನ್ನು ನೋಡಿ ಹಾಸ್ಯ ಮಾಡ್ತಾರೆ, ಅದೆಷ್ಟು ಜೋಕಗಳು ಎಲ್ಲಾ ಕಡೆ ಹರಿದಾಡುತ್ತೆ. ಆದರೆ ನಿಜಜೀವನದಲ್ಲಿ ಮಕ್ಕಳಿಲ್ಲ ಅನ್ನೋವ್ರ ಸಂಕಟ, ದುಃಖ, ಗಂಡನಲ್ಲಿ ದೋಷ ಇದ್ದರೂ ಬಂಜೆ ಅನಿಸಿಕೊಂಡು ನೋವು ಪಡುವ ಮಹಿಳೆಯರು, ವರ್ಷಗಟ್ಟಲೆ ಔಷಧಿ , ಮಾತ್ರೆ ಸೇವಿಸ್ತಾ ಒಂದು ಕೂಸು ತನ್ನ ಮಡಿಲು ತುಂಬಲಿ ಅನ್ನೋ ಹೆಂಗಸರು ,  ಇದನ್ನೆಲ್ಲಾ ಅನುಭವಿಸಿದವರಿಗೆ ಗೊತ್ತಾಗೋದು. ನನ್ನ ಕಥೆ ಏನೋ ಸುಖಾಂತ್ಯ ಕಾಣ್ತು  ಅಂತ  ಎಲ್ಲ ಮಹಿಳೆಯರಿಗೂ ಈ ಭಾಗ್ಯ ಇರೊದಿಲ್ಲ. ಒಂದು ಮಗು ಬೇಕು ಅಂತ ಹಂಬಲಿಸ್ತಾ ಇರ್ತಾರೆ. ದತ್ತು ತೆಗೋಬಹುದು ಅಥವಾ ಹೊಸ ಹೊಸ ವಿಧಾನಗಳಿಂದ ಮಕ್ಕಳನ್ನು ಪಡೆಯುವ ಸೌಲಭ್ಯ ಇದ್ರು ಹಣಕಾಸಿನ ಸಮಸ್ಯೆ , ವಿಪರೀತ ಸಂಪ್ರದಾಯವಾದಿಗಳು ಹೀಗೆ ಅನೇಕ ಸಮಸ್ಯೆಗಳಿಂದ ಕೆಲವು ಮನೆಗಳಲ್ಲಿ ಇದಕ್ಕೆ ಅವಕಾಶ ಇಲ್ದೆ ದಿನನಿತ್ಯ ಎಷ್ಟೋ ಮಂದಿ ನರಕಯಾತನೆ ಅನುಭವಿಸ್ತಾ ಇರ್ತಾರೆ. ನಿಜಕ್ಕೂ ದುಃಖದ ವಿಚಾರ.  ಜೀವನ ಯಾವತ್ತು ಅಂದುಕೊಂಡಷ್ಟು ಸುಖವಾಗಿರಲ್ಲ. 

ಇವತ್ತು ಕೊನೆದಿನ. ಬರ್ದು ಮುಗಿಸ್ಲೇ ಬೇಕು. ಅಂದ ಹಾಗೆ ಅಮ್ಮನಿಗೆ ಮಾತು ಕೊಟ್ಟಿದ್ದು ಮುರಿಯಕ್ಕೆ ಆಗಲ್ಲ.  ಇದರ  ಮುಂದಿನ ಭಾಗವನ್ನ ಇನ್ನೊಂದು ಮೂರ್ನಾಲ್ಕು ವರ್ಷ ಬಿಟ್ಟು ಮುಂದುವರಿಸಬೇಕು. ಯಾಕಂದ್ರೆ ಆಗ ಅನು ಪುಟ್ಟಿ ಸ್ವಲ್ಪ ದೊಡ್ದವಳಾಗಿರ್ತಾಳೆ. ಬರೆಯೋಕೆ ಬೇಜಾನ್ ವಿಷಯ ಇರ್ತದೆ. ಆಗ ನಾನು, ನನ್ನ ಜೀವನಾನೂ ತುಂಬಾ ಬದಲಾಗಿರಬಹುದು ಅನ್ಸುತ್ತೆ  . ಇಲ್ಲಿಗೆ ಮುಗಿಸ್ತೀನಿ .... ಅಲ್ಲಿವರೆಗೂ ಒಂದು ಪುಟ್ಟ ವಿರಾಮ... :-)


Friday, 1 February 2013

ಹುಡುಗ...... ನಿನ್ನದೇ ನೆನಪು ಕಣೋ......!!!!!!


ನಾನು ಚಿಕ್ಕವಳಿದ್ದಾಗ ಅಜ್ಜನ ಮನೆಗೆ ಹೋಗೋದೇ ಕಡಿಮೆ ಇತ್ತು. ಅಜ್ಜ-ಅಜ್ಜಿ ತೀರಿ ಹೋಗಿದ್ದರಿಂದ ಅದು, ಅಜ್ಜನ ಮನೆಗಿಂತ ಹೆಚ್ಚಾಗಿ,  ಪ್ರೀತಿಯ ಸೋದರಮಾವನ ಮನೆ. ಅಲ್ಲಿ ಅಪರೂಪಕ್ಕೆ ಹೋಗೋಕ್ಕೆ ಕಾರಣಾನೂ ಇದೆ, ಯಾಕಂದ್ರೆ, ನನ್ನ ಬಾಲ್ಯ, ಓದು ಎಲ್ಲಾ ನಡೆದದ್ದು ಉತ್ತರ ಭಾರತದ ದೆಹಲಿಯಲ್ಲೇ. ಅಪ್ಪನಿಗೆ ಅಲ್ಲೇ ಬ್ಯಾಂಕ್ನಲ್ಲಿ ಮ್ಯಾನೇಜರ್ ಕೆಲಸ. ಊರಲ್ಲಿ ಅಪ್ಪನ ಕಡೆಯವರು ಅಂತ ಆಪ್ತರು, ಸಂಬಂಧಿಕರು  ಯಾರೂ ಇರಲಿಲ್ಲ. ಆದ್ರೆ ಅಮ್ಮನ ತವರುಮನೇಲಿ ಏನಾದ್ರೂ ವಿಶೇಷ ಸಮಾರಂಭಗಳಾದಾಗ ಎಲ್ಲೋ ವರ್ಷಕ್ಕೆ ಒಮ್ಮೆಯೂ, ಎರಡು ವರ್ಷಕ್ಕೊಮ್ಮೆಯೋ ಅಮ್ಮನ ಜೊತೆ ನಾನು ನನ್ನ ತಂಗಿನೂ ರೈಲಲ್ಲಿ ಬರ್ತಾ ಇದ್ದದ್ದು ಇನ್ನೂ  ನೆನಪಿದೆ. ಬಂದ್ರೂ ಕಾರ್ಯಕ್ರಮ ಮುಗ್ಸೋದು, ಅಪ್ಪನಿಗೆ ಅಲ್ಲಿ ಊಟಕ್ಕೆ ತೊಂದರೆ ಅಂತ ಬೇಗ ಬೇಗ ಹೊರಡೋದು. ಆಗ ಬೇರೆ ಚಿಕ್ಕ ವಯಸ್ಸು.ಯಾವ ಸಂಬಂಧಿಕರ ಪರಿಚಯನೂ ನೆಟ್ಟಗೆ ಇರಲಿಲ್ಲ. ಯಾರಾದ್ರೂ "ನೀನು ಲಕ್ಷ್ಮಿ ಮಗಳಲ್ವೇನೆ, ಅದೆಷ್ಟು ದೊಡ್ಡವಳಾಗಿದ್ದೀಯಾ...' ಹಿಂಗೆ ಮಾತು ಶುರು ಮಾಡಿದ್ರೆ, ಅವರ ಮುಖ ನೋಡಿ, ಒಂದು ಸಣ್ಣ ನಗು  ಅಥವಾ ಅಮ್ಮ ಹತ್ತಿರ ಇದ್ರೆ, ಅವರ ಸೆರಗಿನ ಹಿಂದೆ ಬಚ್ಚಿಟ್ಕೋಳ್ಳೋದು..... ಅದಕ್ಕೆ ಅವ್ರು, "ಎಷ್ಟು ನಾಚಿಕೆನಪ್ಪಹುಡುಗಿಗೆ" ಅಂತ ಹೇಳೋದು.....".  ಹೀಗೆ ಇರುತ್ತಿದ್ದ ನಾಲ್ಕೈದು ದಿನಗಳು, ಅದೆಷ್ಟು ಬೇಗ ಉರುಳಿ ಹೋಗ್ತಾ ಇತ್ತೋ ಗೊತ್ತಾಗ್ತಿರಲಿಲ್ಲ. ಕಾರ್ಯಕ್ರಮಕ್ಕೆ ಬರ್ತಿದ್ದ ರಾಶಿ ಜನರಲ್ಲಿ,  ಒಬ್ಬರ ಪರಿಚಯ ಸಹಾ ನೆನಪಿಟ್ಟುಕೊಳ್ಳಲು  ಆಗ್ತಾ ಇರಲಿಲ್ಲ. ಪುನಃ ಇನ್ನೆರಡು ವರ್ಷ ಬಿಟ್ಟು ಬಂದಾಗ ಇದೇ ಕಥೆ ಪುನರಾವರ್ತನೆ ಆಗ್ತಾ ಇತ್ತು.

ಮಾವನ ಮನೇಲ್ಲಿ ನನ್ನೊಂದಿಗೆ ಸಲಿಗೆಯಿಂದ,ಪ್ರೀತಿಯಿಂದ  ಇದ್ದದ್ದು ಪ್ರೀತಿಯ ಮಾವನ ಮಗಳು 'ಶಿಲ್ಪ'. ನನಗಿಂತ ಸ್ವಲ್ಪ ಪ್ರಾಯದಲ್ಲಿ 2-3 ವರ್ಷ ದೊಡ್ಡವಳಾದರೂ ಅದೇನೋ ವಿಪರೀತ ಅನಿಸುವಷ್ಟು ಸ್ನೇಹ ನಮ್ಮಿಬ್ಬರಲ್ಲಿ. ಇಬ್ಬರ ಪಿಸುಪಿಸು ಮಾತು, ಹತ್ತಿರದ ತೋಟ, ಕೆರೆ, ಗದ್ದೆಗಳಲ್ಲಿ ತಿರುಗಾಟ, ಹತ್ತಿರದ ದೇವಸ್ಥಾನಗಳ ಭೇಟಿ ಇದಕ್ಕೆಲ್ಲ ಕೊನೆ ಇರಲಿಲ್ಲ.  ಆ ಮನೆಯಲ್ಲಿ ಅವಳಿಗಿಂತ ನನ್ನ ಇನ್ನೊಂದು ಆಕರ್ಷಣೆ ಅಂದ್ರೆ, ಮಾವನ ಮಗ 'ಅಭಿಜಾತ'. ಎಲ್ರ ಪ್ರೀತಿಯ 'ಅಭಿ'. ಅವನೋ ಯಾವಾಗಲೂ ಅವನ ವಯಸ್ಸಿನ ಸ್ನೇಹಿತರ ಜೊತೆ ಜಾಸ್ತಿ ಇರ್ತಿದ್ದ. ಮಾತು ಕಡಿಮೆ. ಆದ್ರೂ ನಾನು ಯಾಕೋ, ಆ ಚಿಕ್ಕ ವಯಸ್ಸಿನಲ್ಲೇ ಅವನನ್ನ  ನಾನು ತುಂಬಾ ಇಷ್ಟ ಪಡ್ತಿದ್ದೆ. ಅವನು ನನಗಿಂತ ಸುಮಾರು ಐದಾರು ವರ್ಷ ದೊಡ್ಡೋನು. ಅವನು ಅವನ ಸ್ನೇಹಿತರ ಜೊತೆ ಆಟ ಆಡೋವಾಗ ನನ್ನನ್ನು, ಶಿಲ್ಪನ್ನು ಅವನ ಗುಂಪಿಗೆ ಸೇರಿಸ್ತಾ ಇರ್ಲಿಲ್ಲ. ಅವನ ಸ್ನೇಹಿತರದ್ದೆ ಒಂದು ಗುಂಪು. ಅವನಿಗೆ ನಾವು  ಹುಡುಗೀರು ಅವನ ಜೊತೆ ಆಟಕ್ಕೆ ಬಂದರೆ ಒಂಥರಾ ನಾಚಿಕೆ. ಆದ್ರೂ ನಾವೇನು ಕಡಿಮೆ ಇಲ್ಲ ಅಂತ ಅವನ ಜೊತೆ ಜಗಳ ಆಡಿ ಆಟಕ್ಕೆ ಸೇರ್ತಿದ್ವಿ. ಮನೆಗೆ ಬಂದು ಇಬ್ಬರಿಗೂ ಸರಿಯಾಗಿ ಬೈತಿದ್ದ. "ನಿಮಗೆ ಸ್ವಲ್ಪಾನೂ ನಾಚಿಕೆ ಇಲ್ಲ, ನನ್ನ ಮಾನ ಕಳೀತೀರಾ ಅಂತ ಕೂಗಾಡ್ತಿದ್ದ". . ಅವನ ಮಾತಿಗೆ ನಾವಿಬ್ಬರೂ ಕ್ಯಾರೇ ಮಾಡದೇ ಮರುದಿನ ಪುನಃ ಅವನ ಜೊತೆ  ಜಗಳ ಆಡಿ ಆಟ ಆಡ್ತಿದ್ವಿ.

ಅಪ್ಪನಿಗೆ ಯಾವಾಗ ತಮ್ಮ ಕೆಲಸದಲ್ಲಿ ಭಡ್ತಿ ಸಿಕ್ಕಿ ಬೆಂಗಳೂರಿಗೆ ವರ್ಗಾವಣೆ ಆಯ್ತೋ, ಅಲ್ಲಿಂದ ನನ್ನ ಮಾವನ ಮನೆಯ ಭೇಟಿ ಇನ್ನೂ  ಜಾಸ್ತಿ ಆಯ್ತು. ಪ್ರತಿ ಅಕ್ಟೋಬರ್ ರಜೆಯಲ್ಲಿ, ಏಪ್ರಿಲ್-ಮೇ ರಜೆಯಲ್ಲಿ ಪರೀಕ್ಷೆ ಮುಗಿಸಿ ಓಡಿ ಬರ್ತಾ ಇದ್ದೆ.ಅವತ್ತಿನ್ನೂ ಚೆನ್ನಾಗ್ ನೆನಪಿದೆ. ದೆಹಲಿಯಿಂದ ಬೆಂಗಳೂರಿಗೆ ಬಂದ ಮೇಲೆ ಮೊದಲನೆಬಾರಿ ಮಾವನ ಮನೆಗೆ ಬಂದಿದ್ದೆ. ಅದೂ ಸುಮಾರು ನಾಲ್ಕು ವರ್ಷಗಳ ನಂತರ. ಆಗಷ್ಟೇ ನನ್ನ ಹತ್ತನೇ ತರಗತಿ ಪರೀಕ್ಷೆ ಮುಗಿದಿತ್ತು.  ಮೇ ತಿಂಗಳ ರಜಾ ದಿನಗಳನ್ನು ಕಳೀಲಿಕ್ಕೆ ಅಂತ ಅಮ್ಮನ ಜೊತೆ ಹಠ ಮಾಡಿ  ಅವರನ್ನು, ತಂಗೀನ್ನೂ ಜೊತೇಲಿ ಕರ್ಕೊಂಡು ಬಂದಿದ್ದೆ. ಅವತ್ತು ಸಂಜೆ ಸಮಯ. ಎಲ್ಲರೂ ಟಿ ವಿ ನೋಡ್ತಾ ಇದ್ವಿ.ಆಗ ಮಾವನ ಮನೇಲಿ ಮಾತ್ರ ಟಿ  ವಿ ಇರೋದ್ರಿಂದ, ಅಕ್ಕ ಪಕ್ಕದ ಮನೆಯವರು ಅಲ್ಲಿ ಬಂದು ಸಂಜೆ ಸಮಯ ಒಟ್ಟಾಗಿ ಸಿನಿಮಾನೋ, ಧಾರವಾಹಿನೋ ನೋಡ್ತಿದ್ರು. ದೊಡ್ಡ ಸಂತೆಯ ವಾತಾವರಣ, ಅಲ್ಲಿ ನೆರೆದ ಸೇರಿದ ಹೆಂಗಸರು ಮಕ್ಕಳಿಂದ ಗೌಜಿ, ಗದ್ದಲ . ಅದು ದೊಡ್ಡ ಮನೆ. ಉದ್ದದ ಪಡಸಾಲೆ.  ಸಂಜೆ ಆಗ್ತಾನೆ ಕಾಲೇಜು ಮುಗ್ಸಿ ಅಭಿ ಮನೆಗೆ ಬಂದ. ನನಗಂತೂ ಅವನನ್ನು ನೋಡಿ ಶಾಕ್, ಸುಮಾರು ನಾಲ್ಕು ವರ್ಷಗಳ ನಂತ್ರ ನೋಡಿರೋದ್ರಿಂದ ಅವನಲ್ಲಿನ ಬದಲಾವಣೆಗಳು ಸರಿಯಾಗಿ ಕಾಣಿಸ್ತಾ ಇತ್ತು. ಅವತ್ತು ಅವನ ಅಂತಿಮ ವರ್ಷದ ಬಿ.ಎಸ್ಸಿ ಪರೀಕ್ಷೆಯ ಕೊನೆಯ ದಿನ. ಅವ್ನು ನನ್ನನ್ನ ನೋಡಿ ಮುಗುಳ್ನಕ್ಕು ಒಳಗೆ ಹೋದ. ಅಲ್ಲಿ ಎಲ್ರೂ ಇದ್ದಿದ್ದರಿಂದ ಇಬ್ಬರೂ ಏನೂ ಮಾತಾಡ್ಲಿಲ್ಲ. ಆ ಘಳಿಗೆಯಲ್ಲಿ ಅವನನ್ನು ನೋಡಿದ ನನ್ನ ಮನಸ್ಸು ಹಾಗೇ ಏನೇನೋ ಆಲೋಚನೆ ಮಾಡ್ತಾ ಇತ್ತು. ಎಷ್ಟು ಚಂದ ಆಗಿದ್ದಾನಲ್ವಾ.!!!! ಚಂದದ ಮೀಸೆ, ನೀಟಾಗಿ ಶೇವ್ ಮಾಡಿದ ಮುಖ, ಅವನಿಗೆ ಒಪ್ಪೋ ಹೇರ್ ಸ್ಟೈಲ್ ....ಎಲ್ಲಾನೂ ಚಂದಾನೆ.... ನೀಲಿ ಜೀನ್ಸ್, ಬಿಳಿ ಟಿ-ಶರ್ಟ್ , ಮುದ್ದು ಮುದ್ದಾಗಿ ಕಂಡಿದ್ದ ಅವತ್ತು ನನ್ನ ಕಣ್ಣಿಗೆ. ರಾತ್ರಿ ಊಟ ಮಾಡೋವಾಗ, "ನಿನ್ನ ಪರೀಕ್ಷೆ ಹೇಗಿತ್ತೆ, ತೇಜೂ.." ಅಂತ ಅವ್ನು ಕೇಳ್ದಾಗ,  ಅವ್ನ ಬಾಯಲ್ಲಿ ನನ್ನ ಹೆಸ್ರು ಕೇಳಿನೇ ರೋಮಾಂಚನಗೊಂಡಿದ್ದೆ. ಅಪ್ಪ-ಅಮ್ಮ "ತೇಜಸ್ವಿನಿ' ಅಂತ ಹೆಸರಿಟ್ರು ಎಲ್ರಿಗೂ ನಾನು 'ತೇಜೂನೇ"...."ಹಾ...ಹಾ... ಸುಲಭ ಇತ್ತು ಕಣೋ ಅಭಿ... ",ಅಂತ ಎರಡು ನಿಮಿಷ ಬಿಟ್ಟು ಉತ್ತರ ಕೊಟ್ಟಿದ್ದೆ. ಅವನನ್ನು ನೋಡೀನೇ ಮಾತು ಮರ್ತು ಹೋಗಿದ್ದೆ.....ಎಂಥ ಹುಚ್ಚು ವಯಸ್ಸು ಅದು.....

ಆ ರಜಾ ದಿನಗಳು ಹೇಗೆ ಓಡ್ತಾ ಇತ್ತು ಅಂತಾನೇ ತಿಳೀತಿರಲಿಲ್ಲ. ಮುಂಚಿನ ಹಾಗೆ ಅವನ ಜೊತೆ ಜಗಳ ಆಡೋದು, ತಲೆಹರಟೆ ಮಾಡೋದು  ಎಲ್ಲಾ ಕಡಿಮೆ ಆಗಿತ್ತು. ಅವನ ಎದುರಿಗೆ ಮಾತಾಡೋಕ್ಕೆ ಒಂದು ರೀತಿ ಮುಜುಗರ, ನಾಚಿಕೆ ಆಗ್ತಾ ಇತ್ತು. ಈಗಂತೂ ಅವನು ಇನ್ನು ತುಂಬಾ ತುಂಬಾ ಇಷ್ಟ ಆಗ್ತಿದ್ದ. ಅವನ ಗಂಭೀರ ಸ್ವಭಾವ, ಎಲ್ಲರನ್ನು ಪ್ರೀತಿಸುವ ಗುಣ, ಸ್ವಲ್ಪವೂ ಅಹಂಕಾರ ಇಲ್ಲದ ಮನಸ್ಸು ಅವನ ಹತ್ತಿರ ನನ್ನನ್ನ ಸೆಳಿತಾ ಇತ್ತು.  ಅದರಲ್ಲೂ  ಅಭಿದು ಇನ್ನೊಂದು ವಿಷಯ ತುಂಬಾ ತುಂಬಾ ನೆನಪಾಗೋದಂದ್ರೆ,   ಯಾವಾಗ್ಲೂ ಶುಭ್ರವಾಗಿ ಇರಬೇಕು ಅನ್ನೋ ಅವ್ನ ಸ್ವಭಾವ. ಅವನ ಬಟ್ಟೆ, ಅವನ ರೂಮು, ಅವ್ನ ಗಾಡಿ  ಎಲ್ಲವೂ ಮಿಂಚ್ತಾ ಇರ್ಬೇಕು, ಅದೇ ಅವನಿಗಿಷ್ಟ . ಪ್ರತಿಬಾರಿ ರೂಪಕ್ಕಾನೋ, ಅಥವಾ ಶಿಲ್ಪಾನೋ ಅವನ ಶರ್ಟ್-ಪ್ಯಾಂಟ್ ಒಗೀಬೇಕಾದ್ರೆ, ಟ್ಯಾಂಕ್ನಲ್ಲಿ ,ಡ್ರಂ ಗಳಲ್ಲಿ ತುಂಬಿಸಿಟ್ಟ ನೀರಿಂದ ಬಟ್ಟೆ ಒಗೆಯೋದು ಬೇಡ, ಗಲೀಜು ಅಂತ ಅದೆಷ್ಟು ಕೊಡ ನೀರನ್ನಬೇಕಾದ್ರೂ ಬಾವಿಯಿಂದ ಸೇದ್ತಾ ಇದ್ದ ಅವನು...!!! ಆಗೆಲ್ಲ ಅವ್ರು ಅವ್ನಿಗೆ ತಮಾಷೆ ಮಾಡೋವ್ರು, "ಅಭಿ, ಇದೇ ರೀತಿ ಅದೆಷ್ಟು ಕ್ಲೀನ್, ಕ್ಲೀನ್ ಅಂತ ನಮ್ಮ ಪ್ರಾಣ ತೆಗಿತೀಯಾ...ನೋಡೋಣ, ನಿನ್ನ ಹೆಂಡ್ತಿ ಆಗೋಳು ಅದೆಷ್ಟು ಕ್ಲೀನ್ ಇರ್ತಾಳೆ ..??" ಅಂತ ಅವ್ರೆಲ್ಲಾ ಚುಡಾಯ್ಸಿದ್ರೆ , ಅವನು ಒಂದು ಸಣ್ಣ ನಗು ನಗ್ತಾ ಇದ್ದ. ಆಗ  ಅದೆಕೋ ನನ್ನ ಗಲ್ಲಗಳು ನಾಚಿಕೆಯಿಂದ ಕೆಂಪಾಗ್ತಾ ಇತ್ತು. ಅವನ ಹೆಂಡತಿಯ ಸ್ಥಾನದಲ್ಲಿ, ನನ್ನನ್ನ ನಾನೇ ಕಲ್ಪಿಸಿಕೊಂಡು ಮೈ ಮರೀತಾ ಇದ್ದೆ.


ಅವ್ನ ಜೊತೆ, ಮನೆಯವರೆಲ್ಲ ಸೇರಿ ಇಸ್ಪೀಟ್ ಆಟ ಆಡುವಾಗ ಪಕ್ಕದಲ್ಲಿ ಕೂತ ಅವನು,ನನಗೋಸ್ಕರ ಬೇಕಾಗಿಯೇ ಅದೆಷ್ಟೋ ಸಲ ಸೋತಿದ್ದ. "ನಿನಗೆ ಆಡಕ್ಕೆ ಬರಲ್ಲ ಕಣೆ ತೇಜೂ, ಒಳ್ಳೆ ಪೆದ್ದು ತರಹ ಆಡ್ತೀಯಾ...." ಅಂದ್ರು ನಾನು ಮಾತಾಡ್ದೆ ಮುಗುಳ್ನಗ್ತಾ ಇದ್ದೆ. ಆಗೆಲ್ಲಾ ನನ್ನ ಮನಸ್ಸು ಅವ್ನನ್ನು ಇನ್ನು ಭದ್ರವಾಗಿ ನನ್ನೆದೆಯಲ್ಲಿ ಬಚ್ಚಿಟ್ಟುಕೊಂಡಿತ್ತು. ನನ್ನನ್ನು ಅವ್ನು ಇಷ್ಟ ಪಡ್ತಾ ಇದ್ದಾನೆ , ಅಂತ ನನಗೆ ನಾನೇ ತೀರ್ಮಾನ ಮಾಡ್ಕೊಂಡು ಬಿಟ್ಟಿದ್ದೆ. ಇದೇ ಭಾವನೇಲಿ ಅವ್ನನ್ನ ಪೂಜಿಸ್ತಿದ್ದೆ, ಆರಾಧಿಸ್ತಿದ್ದೆ. ಆದರೆ ಒಂದು ಬಾರಿಯೂ ಬಾಯಿ ಬಿಟ್ಟು ಈ ವಿಷಯಾನ ಅವ್ನ  ಹತ್ತಿರ ಹಂಚಿಕೊಂಡಿಲ್ಲ. ಅದೇ ನಾನು ಮಾಡಿದ ತಪ್ಪು ಅನ್ಸುತ್ತೆ ... ನಾನು ಮನ ಬಿಚ್ಚಿ ಈ ವಿಷಯ ಹೇಳಿದ್ರೂ, ಅವ್ನ ಉತ್ತರ ಏನಿರ್ತಾ ಇತ್ತೋ ಗೊತ್ತಿಲ್ಲ....!!!!

ಹೀಗೆ ನಾನು ಪ್ರಥಮ ವರ್ಷದ ಡಿಗ್ರಿ ಓದೋವಾಗ ಶಿಲ್ಪನ ಮದುವೆ ಆಗಿತ್ತು. ಆಗ ನಾನು ಅದೆಷ್ಟು ಬೇಸರ ಮಾಡ್ಕೊಂಡಿದ್ದೆ . ಇನ್ನು ಮಾವನ ಮನೆಗೆ ಬಂದ್ರೆ ನನ್ನ ಜೊತೆ ಯಾರಿರ್ತಾರೆ ಮಾತಾಡಕ್ಕೆ, ಸುತ್ತಾಡಕ್ಕೆ.... ಶಿಲ್ಪನ್ನ ಇಷ್ಟ ಪಟ್ಟ ಹುಡುಗ ತುಂಬಾ ಚೆನ್ನಾಗಿದ್ದ. ಅವಳನ್ನ ಪಾಪ ಆದೆಷ್ಟು ಗೋಳುಹೊಯ್ಕೊಂಡಿದ್ದೆ ಆಗ.... ಮದುವೆಗೆ ಒಂದು ವಾರ ಮುಂಚೇನೆ ಅಲ್ಲಿ ಹಾಜರಾಗಿದ್ದೆ. ಅವಳ ಸೀರೆ, ಅವಳ ಒಡವೆ ಬಗ್ಗೆ ಅದೆಷ್ಟು ಮಾತಾಡಿದ್ವಿ. ಇಬ್ಬರಿಗೂ ಇನ್ನು ಇಷ್ಟು ಮಾತಾಡಕ್ಕೆ ಸ್ವಾತಂತ್ರ್ಯ ಇರಲ್ಲ ಅಂತ ಆಗಲೇ ಎಲ್ಲಾ ಮಾತು ಮುಗಿಸಿದ್ವಿ. ಮದುವೆ ಹಿಂದಿನ ದಿನ ಸಂಭ್ರಮವೇ ಸಂಭ್ರಮ....  ಅದೆಷ್ಟು ಅವಳನ್ನ ಚುಡಾಯಿಸಿ ಹಿಂಸೆ ಮಾಡಿದ್ದೆ. ಪಾಪ, ಅವಳಂತೂ ನನ್ನ ಎಲ್ಲಾ ಕೀಟಲೆಗಳನ್ನು ಸಹಿಸಿಕೊಂಡು ನಗ್ತಾ ನಗ್ತಾ ಇದ್ಲು. ಮರುದಿನದ ಮದುವೆಗೆ ನಾನಂತೂ ತುಂಬಾ ಮುತುವರ್ಜಿಯಿಂದ ಅಲಂಕಾರ ಮಾಡ್ಕೊಂಡಿದ್ದೆ. ಅದಕ್ಕೆಲ್ಲಾ ಅಭಿನೇ ಕಾರಣ ಅನ್ಬೇಕು. ಅವನು ನನ್ನನ್ನು ನೋಡ್ಬೇಕು. ಪ್ರೀತಿಯಿಂದ ಒಂದೆರಡು ಮಾತಾಡ್ಬೇಕು ಅಂತ ಎಷ್ಟೆಲ್ಲಾ ಕನಸು ಕಾಣ್ತಾ ಇದ್ದೆ. ಆದರೆ ಅವನು ಮಾತ್ರ ಏನೂ ಗೊತ್ತಿಲ್ಲದೇ ಇರೋವನ ತರಹ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಮದುವೆ ಮನೇಲಿ ಓಡಾಡ್ತಾ ಇದ್ದ. ನನ್ನನ್ನ ನಿರಾಶೆ ಮಾಡ್ಬಿಟ್ಟ ಅವತ್ತು. ಮದುವೆ ಎಲ್ಲಾ ಮುಗಿದ ಮೇಲೆ ಶಿಲ್ಪನ್ನ  ಗಂಡನ ಮನೇಗೆ ಕಳ್ಸೋ ಬೇಸರ. ಜೊತೆಗೆ ಪ್ರೀತಿಯ ಸ್ನೇಹಿತೆಯ ಅಗಲಿಕೆ. ಆದರೆ ಅಮೇಲಿದ್ದ ಎರಡು ದಿನಗಳು ಖುಷಿ ಕೊಟ್ಟಿತ್ತು.  ಎರಡು ದಿನದ ನಂತರ ಹೊಸ ಮದುಮಕ್ಕಳನ್ನ ಕರೆದುಕೊಂಡು ಮನೆದೇವರ ದರ್ಶನಕ್ಕೆ ಮನೆಮಂದಿಯೆಲ್ಲಾ ಹೋಗೋದಿತ್ತು. ಆಗ ಪುನಃ ಶಿಲ್ಪನ ಸಂಗಡ ಸ್ವಲ್ಪ ಸಮಯ ಕಳಿಯಕ್ಕೆ ಸಿಕ್ಕಿತ್ತು, ಜೊತೆಗೆ ಅಭಿ ಜೊತೆ ಸಹಾ... ಅವನು ಈಗೀಗ ನನ್ನ ಜೊತೆ ಮಾತಾಡ್ತಾ ಇದ್ದ. ನನಗಂತೂ ಏನೋ ಉಡುಗೊರೆ ಸಿಕ್ಕಂತೆ  ಖುಷಿ ಪಡ್ತಾ ಇದ್ದೆ . ಕೊನೆಗೂ ನನ್ನನ್ನ ಅರ್ಥ ಮಾಡ್ಕೋತಾ ಇದ್ದಾನೆ ಅನ್ನಿಸ್ತಾ ಇತ್ತು.

ಆಗಲೇ ನನ್ನ ಪ್ರಥಮ  ವರ್ಷದ ಪರೀಕ್ಷೆ ಮುಗ್ದು ರಜಾ ಶುರು ಆಗಿತ್ತು. ಶಿಲ್ಪನ ಕಾಗದ ಆಗಲೇ ಪೋಸ್ಟ್ ಮೂಲಕ ಬಂದಿತ್ತು. "ತೇಜೂ, ರಜಾ ಶುರು ಆದ ಕೂಡಲೇ ನನ್ನ ಮನೆಗೆ ಬಾ.. ನೀನು ನನ್ನ ಮನೆಗೆ ಇನ್ನು ಬಂದಿಲ್ಲ. ಅಭಿ ನಿನ್ನನ್ನು ಕರ್ಕೊಂಡು ಬರ್ತಾನೆ. ತಪ್ಪಿಸ್ಕೊಂಡ್ರೆ  ನಿನ್ನ ಮೇಲೆ ಕೋಪ...ಜಾಗ್ರತೆ " ಅಂತ ಬೇರೆ ಎಚ್ಚರಿಕೆ ಕೊಟ್ಟಿದ್ಲು.. ಅವಳ ಕಾಗದ ತಲುಪಿದ್ದೆ ತಡ, ರಜಾ ಶುರು ಆದ ಕೂಡ್ಲೆ ಲಗೇಜ್ ಪ್ಯಾಕ್ ಮಾಡಿ ಹೊರಟದ್ದೇ. ಮಾವನ ಮನೆಗೆ ಹೋಗಿ, ಅಲ್ಲಿ ಅಭಿ ಬರೋ ತನಕ ಕಾದು, ಅವನ ಜೊತೆ ಪ್ರಯಾಣ ಬೆಳೆಸಿದ್ದೆ. ಮೊದಲ್ನೇ ಬಾರಿ ಅವನೊಂದಿಗೆ ಒಬ್ಬಳೇ ಪ್ರಯಾಣ ಹೋಗ್ತಾ ಇರೋದು. ..ನಮ್ಮ ಜೊತೆ ರಜೆಗೆಂದು ಅಜ್ಜನ ಮನೆಗೆ ಬಂದ ಅವನ ರೂಪಕ್ಕನ ಮಗಳನ್ನ ಬೇರೆ ಅವರ ಮನಗೆ ಕರ್ಕೊಂಡು ಹೋಗ್ಬೇಕಿತ್ತು. ಅವಳೋ ಪಾಪ 6 ವರ್ಷದ ಮುದ್ದು ದಿವ್ಯ. ಎಲ್ಲರ ಮುದ್ದಿನ ದಿವಿ. ಬಸ್ಸಿನ ಗಾಳಿಗೆ ಮುದ್ದು ಪುಟಾಣಿಗೆ ನಿದ್ದೆ ಬಂದ್ರೆ, ಅವಳನ್ನು ನಾವಿಬ್ಬರು ನಮ್ಮ ತೊಡೆ ಮೇಲೆ ಮಲಗಿಸಿಕೊಂಡು ಆ ಒಂದೂವರೆ ಘಂಟೆ ಪ್ರಯಾಣ ಮಾಡಿದ್ದೆವು. ಆಗ ನಾನು ಏನೆಲ್ಲಾ ಕನಸು ಕಾಣ್ತಾ ಇದ್ದೆ. ಅವನ ಸನಿಹ ಕೂತುಕೊಂಡು ಆ ಧೀರ್ಘ ಪ್ರಯಾಣ... ಉಫ್...ಆ ಸಮಯದಲ್ಲಿ ನಾನು ನಿಜವಾಗ್ಲೂ ಕಳೆದುಹೋಗಿದ್ದೆ. ಮುಂದೊಂದು ದಿನ ಇದೇ ಜಾಗದಲ್ಲಿ ನಮ್ಮ ಮುದ್ದು ಮಕ್ಕಳು, ಹೀಗೆ ಅವನ ಜೊತೆ ಪ್ರಯಾಣ, ಇನ್ನು ಏನೇನೋ....ಹಗಲುಗನಸು ಕಾಣ್ತಾ ಇದ್ದೆ. ಆ ಊರಿಗೆ ಹೋಗಿ ತಲುಪಿದ ಕೂಡಲೇ ದಿವಿನ ಮೊದ್ಲು ಅವಳ ಅಮ್ಮನ ಹತ್ರ ಬಿಟ್ಟು ನಾವು ಹೊರಟಿದ್ವಿ. ಅದೇ ಊರಲ್ಲಿ ಅಭಿಗೆ ಕೆಲಸ. ಅಲ್ಲೇ ಅವನೊಂದು ರೂಮ್ ಮಾಡಿ ಉಳ್ಕೊಂಡಿದ್ದ. ಮೊದ್ಲು ನನ್ನನ್ನು ತನ್ನ ರೂಮಿಗೆ ಕರೆದೊಯ್ದ. ಆ ಚಿಕ್ಕ ಮನೆ ಅವ್ನು ಅದೆಷ್ಟು ನೀಟಾಗಿ ಇಟ್ಟುಕೊಂಡಿದ್ದ ಅಂದ್ರೆ ನಂಗೆ ನಾಚಿಕೆ ಆಯ್ತು. ನಾನು ಇಷ್ಟು ಕ್ಲೀನ್ ಆಗಿ ನಮ್ಮನೇನ ಇಟ್ಟುಕೊಳ್ಳಲ್ಲ ಅನ್ನಿಸ್ತು.   ಅಲ್ಲಿ ಸ್ವಲ್ಪ ಮುಖ ತೊಳೆದು ಫ್ರೆಶ್ ಆಗಿ ಪುನಃ ಇಬ್ಬರೂ ಹೊರಟ್ವಿ. ಅವನ    ಬೂದು ಬಣ್ಣದ ಹೊಸ 'ಬಜಾಜ್ ಸ್ಕೂಟರ್ನ ' ಒರೆಸಿ ಸ್ಟಾರ್ಟ್ ಮಾಡ್ದ.   ಹಿಂದಿನ ಸೀಟಿನಲ್ಲಿ ಅವನ ಮೈಗೆ ಸ್ವಲ್ಪವೂ ತಾಗದೇ ಕೂತ್ಕೊಂಡಿದ್ದೆ. ಅವನು ಮೊದಲು ನನ್ನನ್ನ ಒಂದು ಐಸ್ಕ್ರೀಮ್ ಪಾರ್ಲರ್ಗೆ ಕರ್ಕೊಂಡು ಹೋಗಿ ನನ್ನ ಇಷ್ಟದ 'ಫ್ರೂಟ್ ಸಲಾಡ್' ಆರ್ಡರ್ ಮಾಡ್ದ. ಇಬ್ಬರೂ ನಿಧಾನವಾಗಿ ಮಾತಾಡ್ತಾ ತಿಂದು ಶಿಲ್ಪನ ಮನೆಗೆ ಹೊರಟ್ವಿ.

ಅವನ  ಗಾಡಿಯಲ್ಲಿ ಕೂತು, ಅವನು ಅಷ್ಟು ನನ್ನ ಸಮೀಪದಲ್ಲಿ ಇದ್ರೂ ಜಾಗರೂಕತೆಯಿಂದ ಕೂತಿದ್ದೆ. ಸುಮಾರು 20-30 ನಿಮಿಷಗಳ ಪ್ರಯಾಣ ಶಿಲ್ಪನ ಮನೆಗೆ. ಅಷ್ಟು ಹೊತ್ತು ಅವ್ನ ಜೊತೆ ಏಕಾಂತದಲ್ಲಿ ಇದ್ದ ನಾನು ಈ ಲೋಕದಲ್ಲೇ ಇರಲಿಲ್ಲ.ಅವನ ಬಗ್ಗೆ ಕನಸು ಕಾಣ್ತಾ ಇದ್ದೆ. ಹಾಗೇ ಅವನನ್ನು ಗಟ್ಟಿಯಾಗಿ ತಬ್ಬಿ ಹಿಡಿದು ಜೀವನವಿಡೀ ಅವನ ಜೊತೆನೇ ಇರ್ಬೇಕು .....ಹೀಗೇ ನಮ್ಮಿಬ್ಬರ ಪ್ರಯಾಣ ಸಾಗ್ತಾನೇ ಇರ್ಬೇಕು....ಇನ್ನು ಏನೇನೋ ....!!!! ಅವ್ನು ಹೊರಡೋಕ್ಕಿಂತ ಮೊದ್ಲೇ ನನಗೆ ಹೇಳಿದ್ದ. "ತೇಜೂ, ಶಿಲ್ಪನ ಮನೆಗೆ ಹೋಗೋ ಮುಂಚೆ ಸ್ವೀಟ್ಸ್ ತೆಗೋಬೇಕು, ನೆನಪು ಮಾಡು ಅಂತ.." ನಾನೊಂದು ಮಂಕುದಿಣ್ಣೆ ತರ ಅವನ ಧ್ಯಾನದಲ್ಲಿ ಮರೆತೇ ಬಿಟ್ಟಿದ್ದೆ. ಅವನು ಯಾವುದೋ ಅಂಗಡಿ ಮುಂದೆ ಗಾಡಿ ನಿಲ್ಸಿ ಸಿಹಿತಿಂಡಿಗಳು, ಹೂವು ಎಲ್ಲಾ ಖರೀದಿ ಮಾಡಿದ್ರೆ ನನಗೇ  ನಾಚಿಕೆ ಆಯ್ತು. ಎಂಥ ಮರೆವು ನನಗೆ...ಛೆ...!!!!

ಅಂತೂ ಇಂತೂ ಅವಳ ಮನೆ ತಲುಪಿ, ಅಭಿ ಅವಳು ಕೊಟ್ಟ ತಿಂಡಿ ತಿಂತಾ ಕಾಫಿ ಕುಡಿತಾ ಇದ್ರೆ ನಾನು ತಿಂಡಿ ತಟ್ಟೆ ಹಿಡ್ಕೊಂಡು, ಕನಸಿನಲ್ಲಿ ಮುಳುಗಿದ್ದೆ. ಕೊನೆಗೆ ಶಿಲ್ಪನೇ, ನನ್ನನ್ನು ಎಚ್ಚರಿಸಿ, "ಯಾಕೆ ತೇಜೂ...ತಿಂಡಿ ಚೆನ್ನಾಗಿಲ್ವನೇ...??? " ಅಂದ್ರೆ, ನಾನು "ಚೆನ್ನಾಗಿದೆ ಕಣೆ, ಈಗಷ್ಟೇ ;ಐಸ್ಕ್ರೀಮ್ ತಿಂದು ಬಂದ್ನಲ್ಲ , ಹೊಟ್ಟೆ ತುಂಬಿದೆ" ಅಂತ ಸುಳ್ಳು ಹೇಳಿದ್ದೆ. ಅವ್ನು ನನ್ನನ್ನು ಅಲ್ಲಿ ಬಿಟ್ಟು, " ಮುಂದಿನ ವಾರ ಬಂದು ಕರ್ಕೊಂಡು ಹೋಗ್ತೀನಿ ಕಣೆ ತೇಜೂ, ರೆಡಿಯಾಗಿರು, ಅಲ್ಲಿತನಕ ನಿನ್ನ ಫ್ರೆಂಡ್ ಜೊತೆ ಆರಾಮಾಗಿರು " ಅಂತ ನನ್ನನ್ನು ಬಿಟ್ಟು ಹೋಗಿದ್ದ. ಅವತ್ತಿಡೀ ಅವನದ್ದೇ ಧ್ಯಾನ. ಅವನು ಹಾಕಿದ್ದ ಪರ್ಫ್ಯೂಮ್ನ ನವಿರಾದ ಪರಿಮಳ ಇನ್ನು ನನ್ನ ಜೊತೆ ಹಾಗೆ ಬಿಟ್ಟು ಹೋಗಿದ್ದ. ಶಿಲ್ಪ ಪ್ರತಿದಿನ ಅವಳ ಮನೆ ಹತ್ತಿರ ಇರುವ ಎಲ್ಲಾ ವಿಶೇಷ ಸ್ಥಳಗಳಿಗೆ ಕರ್ಕೊಂಡು ಹೋಗಿ ತೋರಿಸ್ತಾ ಇದ್ಲು. ಒಂದು ವಾರ ಹೇಗೋ ಶಿಲ್ಪನ ಮನೇಲಿ ಕಳೆದು ಪುನಃ ಅಭಿ ದಾರಿ ಕಾಯ್ತಾ ಕೂತಿದ್ದೆ. ಅಂತೂ ಒಂದು ವಾರದ ನಂತರ ನನ್ನನ್ನ ಕರ್ಕೊಂಡು ಹೋಗಲಿಕ್ಕೆ ಬಂದ. ಪುನಃ ಅವನ ಸ್ಕೂಟರ್ನಲ್ಲಿ ಪ್ರಯಾಣ. ಅವನ ರೂಮ್ನಲ್ಲಿ ಗಾಡಿ ಇಟ್ಟು, ಅಲ್ಲಿಂದ ಮಾವನ ಮನೆಗೆ ಬಸ್ಸಿನಲ್ಲಿ ಜೊತೆಯಾಗಿ ಹೊರಟಿದ್ವಿ. ಈ ಬಾರಿ ದಿವಿ ಪುಟ್ಟಿ ನಮ್ಮ ಜೊತೆ ಇರ್ಲಿಲ್ಲ. ನಾನು ಮತ್ತು ಅಭಿ ಮಾತ್ರ. ಅದೇನೋ ಆನಂದ, ಅದೇನೋ ವಿಚಿತ್ರ ಸಂತೋಷ ನನ್ನ ಮನಸ್ಸು ಅನುಭವಿಸ್ತಾ ಇತ್ತು. ಆದರೆ ಇದ್ಯಾವುದರ ಬಗ್ಗೆಯೂ ಅಭಿಗೆ ಸಣ್ಣ ಸುಳಿವು ಸಿಗದಂತೆ ಜಾಗ್ರತೆ ವಹಿಸ್ತಾ ಇದ್ದೆ.  ಎಷ್ಟೋ ಬಾರಿ ಅಂದುಕೊಂಡಿದ್ದೆ, "ನಾನು ನಿನ್ನನ್ನು  ತುಂಬಾ ಇಷ್ಟ ಪಡ್ತಾ ಇದ್ದೀನಿ ಕಣೋ, ಅಭಿ " ಅಂತ ಹೇಳ್ತೀನಿ ಅಂತ, ಆದರೆ ಯಾಕೋ ಧೈರ್ಯಾನೇ ಸಾಕಾಗ್ತಾ ಇರ್ಲಿಲ್ಲ. ನನ್ನ ಮಾತುಗಳು ನನ್ನ ಮನಸ್ಸಲ್ಲೇ ಉಳಿದು ಬಿಟ್ಟಿತ್ತು. ಮಾವನ ಮನೆಗೆ ಹೋದ ಮೇಲೆ, ಅತ್ತೆ ಅಂತೂ ನನ್ನನ್ನು ತಮ್ಮ ಸೊಸೆ ತರಹ ನೋಡ್ತಾ ಇದ್ರು. . ಅವ್ರ ಪ್ರತಿ ಮಾತ್ನಲ್ಲೂ, ನಾನು ಅವ್ರ ಮನೆ ಸೊಸೆ ಆಗಿ ಬರಬೇಕು ಅಂತ ಅದೆಷ್ಟು ಆಸೆ ಇತ್ತು ಅಂತ ನನಗೆ ಅರ್ಥ ಆಗ್ತಾ ಇತ್ತು.

ಆದ್ರೆ ನಮ್ಮ ಎಲ್ಲ ಆಸೆಗಳಿಗು ಅವ್ನ ಒಂದೇ ಒಂದು ಮಾತು ಅಂತ್ಯ ಹಾಡಿಬಿಡ್ತು . ಶಿಲ್ಪನ ಮದುವೆ ಆಗಿ ಎರಡು ವರ್ಷ ಆದಮೇಲೆ ಅವನಿಗೆ ಇನ್ನೂ  ಒಳ್ಳೆ ಕೆಲಸ ಸಿಕ್ಕಿತ್ತು. ಆಗ ಅವನಿಗೆ 26 ವರ್ಷ. ಅವ್ನ ಮದುವೆ ಮಾತುಕತೆ ಮನೇನಲ್ಲಿ ಪ್ರಾರಂಭ ಆಗಿತ್ತು. ಅತ್ತೆಗೆ ಹೊರಗಡೆಯಿಂದ ಬೇರೆ ಹೆಣ್ಣು ತರೋ ಬದಲು, ಮನೆಯಲ್ಲೇ, ಸಂಬಂಧದಲ್ಲೇ ಇರೋ ನನ್ನ ಬಗ್ಗೆ ಹೆಚ್ಚಿನ ಅಕ್ಕರೆ ಇತ್ತು. ಅತ್ತೆ ಅವ್ನ ಹತ್ತಿರ ಈ ವಿಷಯ ಪ್ರಸ್ತಾಪ ಮಾಡ್ದಾಗ , "ಶಿಲ್ಪ ನಂಗೆ ಹೇಗೆ ತಂಗಿನೋ, ತೇಜೂನೂ ಹಾಗೇ ....ನಾನು ಯಾವತ್ತು ಅವಳನ್ನು ಆ ದೃಷ್ಟಿಯಿಂದ ನೋಡಿಲ್ಲ..." ಅಂತ ಒಂದೇ  ಮಾತಲ್ಲಿ ತೀರ್ಮಾನ ಕೊಟ್ಟು ಬಿಟ್ಟಿದ್ದ. ಇದನ್ನ ಅತ್ತೆ ಅಮ್ಮನಿಗೆ ಹೇಳೋವಾಗ ಕೇಳಿಸಿಕೊಂಡ ನನ್ನ ಹೃದಯ ಹಾಗೇ ನೀರಿನ ಮೇಲಿನ ಗುಳ್ಳೆಯಂತೆ ಒಡ್ದು ಹೋಗಿತ್ತು. ಆ ಮಾತನ್ನು ಕೇಳಿ ಸುಧಾರಿಸಿಕೊಳ್ಳಬೇಕಾದರೆ ತುಂಬಾ ಸಮಯ, ತಿಂಗಳುಗಳೇ ಹಿಡಿದಿತ್ತು. ಆದರೆ ಅವನಿಗದರ ಸುಳಿವೇ ಇಲ್ಲದೇ ಅವನು ನಿಶ್ಚಿಂತೆಯಿಂದ ಇದ್ದ.






ನಂತರ ಅಭಿ, ಮಾವನ ಸ್ನೇಹಿತರ ಮಗಳನ್ನ ಒಪ್ಪಿದ್ದು, ಅದರಂತೆ ನಿಶ್ಚಿತಾರ್ಥಕ್ಕೆ ದಿನ ಗೊತ್ತು ಮಾಡಿದ್ದು ಎಲ್ಲಾ ವಿಷಯಗಳು ನನ್ನ ಕಿವಿಗೆ ಬೀಳ್ತಾ ಇದ್ರೂ ನಾನು ನಿರ್ಲಿಪ್ತಳಾಗಿದ್ದೆ. ಅವ್ನ ನಿಶ್ಚಿತಾರ್ಥದ ದಿನ ಕಾಲೇಜಲ್ಲಿ ಪರೀಕ್ಷೆಯ ನೆಪ ಹೇಳಿ ಮನೆಯಲ್ಲೇ ಉಳಿದಿದ್ದೆ. ಅವ್ನನ್ನು ಆ ಹುಡುಗಿಯ ಪಕ್ಕ ನೋಡಕ್ಕೂ ನಂಗೆ ಇಷ್ಟ ಇರ್ಲಿಲ್ಲ. ಅಷ್ಟೊಂದು ಕದಡಿತ್ತು ನನ್ನ ಮನಸ್ಸು.

ಅವ್ನ ನಿಶ್ಚಿತಾರ್ಥವಾಗಿ ಎರಡು ತಿಂಗಳಲ್ಲೇ ಮದುವೆ ನಿಗದಿಯಾಗಿತ್ತು. ಅದಕ್ಕೂ ನಾನು ತಪ್ಪಿಸಿಕೊಳ್ಬೇಕು ಅಂತ ಶತಪ್ರಯತ್ನ ಮಾಡಿದ್ರೂ , ಅಪ್ಪ-ಅಮ್ಮನ ಬಲವಂತಕ್ಕೆ ಕೋಲೆಬಸವನಂತೆ ಅವರ ಹಿಂದೆ ಬಂದಿದ್ದೆ. ಎಲ್ಲರೂ ಮದುವೆಯ ಸಡಗರದಲ್ಲಿ ಇದ್ರೆ, ನಾನೊಳ್ಳೆ ಆಕಾಶ ತಲೆ  ಮೇಲೆ ಬಿದ್ದ ಹಾಗೆ ಮೂಲೆ ಹಿಡಿದು ಕೂತಿದ್ದೆ. ಎಲ್ಲರೂ ಕೇಳೊವ್ರೆ, "ತೇಜೂ, ಯಾಕೆ ಹುಶಾರಿಲ್ವನೆ..???" ಎಲ್ಲಾರಿಗೂ ನನ್ನ ಉತ್ತರ, 'ಸ್ವಲ್ಪ ತಲೆನೋವು....' ಅಂತು ಇಂತು ರಾತ್ರಿ ಕಳೆದು ಬೆಳಗಾದ್ರೆ ಮನೆಯಿಡೀ ಮದುವೆ ಸಡಗರ. ನಾನು ಯಾವುದೇ ಆಸಕ್ತಿ ಇಲ್ದೆ ನನ್ನ ಪಾಡಿಗೆ ನಾನು ಇದ್ದು ಬಿಟ್ಟಿದ್ದೆ. ಎಲ್ರೂ ಮದುವೆ  ಹಾಲ್ಗೆ ಹೋಗಿ ಅವರವರ ಗಡಿಬಿಡಿಯಲ್ಲಿ ಇದ್ರೆ, ನಾನು ಮುಂದೆ ನಡೆಯೋ ಶಾಸ್ತ್ರಗಳನ್ನು ಎದುರಿಸಲಾಗ್ದೆ ಒದ್ದಾಡ್ತಾ ಇದ್ದೆ. ಅವ್ನು ಅವ್ನ  ಪಾಡಿಗೆ ಅವನ ಜೀವನದ ರಸ ನಿಮಿಷಗಳನ್ನ ಎದುರು ನೋಡ್ತಾ ಇದ್ದ. ಧಾರೆಯ ಸಮಯ ಹತ್ತಿರ ಬರ್ತಾ ಇದ್ದಂತೆ, ನನ್ನೆದೆಯಲ್ಲಿ ನಗಾರಿಯಂತೆ ಹೃದಯ ಬಡ್ಕೊಳ್ತಾ  ಇತ್ತು. ನನ್ನ ಜಾಗದಲ್ಲಿ ಆ ಹುಡುಗೀನ್ನ ನೋಡಿ ಮನಸ್ಸು  ವಿಲವಿಲ ಒದ್ದಾಡ್ತಾ ಇತ್ತು. ನನ್ನ ತಂದೆ-ತಾಯಿ ಧಾರೆ ಎರೆದು ನನ್ನನ್ನ ಅವನಿಗೆ ಒಪ್ಪಿಸೋ ಬದಲು ಯಾರೋ  ಆ ಕೆಲ್ಸ ಮಾಡ್ತಾ ಇದ್ರು. ಯಾರಿಗೂ ಇದರ ಪರಿವೆಯೇ ಇಲ್ದಂತೆ ಆನಂದವಾಗಿದ್ರು.  ಯಾವಾಗ ಅವ್ನು  ಅವಳ ಕುತ್ತಿಗೆಗೆ ತಾಳಿ ಕಟ್ಟಿದ್ನೋ  , ಆ ನಿಮಿಷದಲ್ಲಿ ನನ್ನೆಲ್ಲಾ ಆಸೆಗಳು ಬೂದಿಯಂತೆ  ಸುಟ್ಟು ಹೋಯ್ತು.

ಮದುವೆ ಕಾರ್ಯಕ್ರಮ ಎಲ್ಲಾ ಮುಗ್ಸಿ, ಸಂಜೆ ಹೊಸ ಹೆಂಡತಿ ಜೊತೆ ಅವ್ನು  ಮನೆ ಕಡೆ ಹೆಜ್ಜೆ ಹಾಕ್ತಾ ಇದ್ರೆ, ನಾನು ಅಸಹಾಯಕಳಾಗಿ ನೋಡ್ತಾ ಇದ್ದೆ. ರಾತ್ರಿಗೆ ಎಲ್ರೂ ಅವನ ಮೊದಲ ರಾತ್ರಿಗೆ ರೂಮನ್ನ ನಗ್ತಾ ನಗ್ತಾ , ತಮಾಷೆ ಮಾಡ್ತಾ ಶೃಂಗಾರ ಮಾಡ್ತಾ ಇದ್ರೆ, ನಾನು ನಿರ್ಜೀವ ಶವದಂತೆ ಎಲ್ಲಾ ನೋಡ್ತಾ ಕೂತಿದ್ದೆ, ಒಳಗೊಳಗೆ ಮತ್ಸರದಿಂದ ಕುದೀತಾ ಇದ್ದೆ. ಆ ಸಮಯದಲ್ಲಿ ನನ್ನ ಕೋಪ, ಆ ಹೊಸ ಹುಡುಗಿಯ ಕಡೆ ತಿರುಗಿತ್ತು. ಏನೂ ಅರಿಯದ ಆಕೆ ನನ್ನ ವೈರಿಯಂತೆ ಕಾಣಿಸ್ತಾ ಇದ್ಲು. ನನ್ನವನಾಗಬೇಕಿದ್ದ ಹುಡುಗನ್ನ ಇವಳು ವರಿಸಿದ್ಲು ಅನ್ನೋ ದ್ವೇಷ ಮನಸ್ಸಲ್ಲಿ ಮೂಡ್ತಾ ಇತ್ತು. ರಾತ್ರಿ ಊಟದ ಸಮಯದಲ್ಲಿ ಅವ್ನು ಆ  ಹುಡುಗೀನ್ನ ಪ್ರೀತಿಯಿಂದ ಕಣ್ಣು ತುಂಬಿಸಿ ಕೊಳ್ತಾ ಇದ್ರೆ, ನನ್ನಿಂದ ಸಹಿಸಿಕೊಳ್ಳಕ್ಕೆ ಆಗ್ದೆ ಅರ್ಧ ಊಟ ಬಿಟ್ಟು ಎದ್ದಿದ್ದೆ.

ಅವತ್ತು ರಾತ್ರಿ ಎಲ್ರೂ ಅವ್ನನ್ನ ಗೋಳಾಡಿಸ್ತಾ, ಅವಳೊಂದಿಗೆ ರೂಮೊಳಗೆ ದಬ್ಬಿ ಮಜಾ ಮಾಡ್ತಾ, ಚುಡಾಯಿಸ್ತಾ ಇದ್ರೆ, ನಾನು ಹಲ್ಲು ಕಚ್ಚಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ತಾ ಇದ್ದೆ. ಆ ರಾತ್ರಿನ್ನ ಅದು ಹೇಗೆ ಕಳೆದೆನೋ, ಸಂಕಟದ ರಾತ್ರಿಯಾಗಿತ್ತು. ನಿದ್ದೆ ಇಲ್ಲದ ರಾತ್ರಿಯಾಗಿತ್ತು. ಕೆಟ್ಟ ಕಲ್ಪನೆಗಳ ರಾತ್ರಿಯಾಗಿತ್ತು. ಮನಸ್ಸು ಕಲಕಿ ಹುಚ್ಚು ಹಿಡಿದವಳಂತೆ ಆಗಿದ್ದೆ. ಆಗಲೇ ತೀರ್ಮಾನಿಸಿಬಿಟ್ಟಿದ್ದೆ. ಬೆಳಿಗ್ಗೆ ಅವ್ನು ಏಳೊದ್ರೊಳಗೆ ಅಲ್ಲಿಂದ ಊರಿಗೆ ಹೋಗಿ ಬಿಡಬೇಕು ಅಂತ. ಅಮ್ಮನನ್ನ ಅಪ್ಪನನ್ನ ಕಿರಿಕಿರಿ ಮಾಡಿ, ಹಠ ಮಾಡಿ  ಬೆಳಗ್ಗಿನ ಬಸ್ಸಿಗೆ ಹೊರಡಿಸಿದ್ದೆ. ಯಾರೆಷ್ಟೇ ಹೇಳಿದ್ರೂ ಕೇಳದೆ, ಅಪ್ಪ- ಅಮ್ಮ, ತಂಗಿಯ ಜೊತೆ ಪ್ರಯಾಣ ಬೆಳೆಸಿದ್ದೆ.

 ನಂತರ ಒಂದು ವರ್ಷ ಅದು ಇದು ಕ್ಲಾಸಿಗೆ ಸೇರಿ ಅಭಿನ್ನ  ಮರಿಯಕ್ಕೆ ಪ್ರಯತ್ನಿಸಿದ್ದೆ. ನಾನೆಷ್ಟೇ ಬೇಡ ಅಂತ ಕಿತ್ತೊಗೆದ್ರೂ ಅವ್ನ ನೆನಪುಗಳು ಪುನಃ ಪುನಃ ನನ್ನನ್ನ ಇನ್ನಿಲ್ಲದಂತೆ ಕಾಡ್ತಾ ಇತ್ತು. ಅದೇ ಸಮಯಕ್ಕೆ ನನ್ನ ಕಾಲೇಜು ಮುಗಿದಿತ್ತು. ಮನೆಯಲ್ಲಿ ನಂಗೂ ಮದುವೆಯ ಮಾತುಕತೆ ಪ್ರಾರಂಭ ಆಗಿತ್ತು. ನಾನು ಯಾವುದಕ್ಕೂ ವಿರೋಧ ವ್ಯಕ್ತ ಮಾಡ್ದೆ, ದೊಡ್ಡವರ ಮಾತಿಗೆ ಒಪ್ಪಿಗೆ  ಸೂಚಿಸಿದ್ದೆ. ಅದೇ ಸಮಯಕ್ಕೆ 'ಪ್ರದೀಪ್' ಜಾತಕ, ನನ್ನ ಜಾತಕದ ಜೊತೆ  ಕೂಡಿ ಬಂದಿತ್ತು. ಒಳ್ಳೆಯ ಕೆಲಸದಲ್ಲಿ ಇರುವ ಹುಡುಗ. ಅಪ್ಪ ಅಮ್ಮನಿಗೆ ಇಷ್ಟ ಆಗಿದ್ದ. ಅವನ ಮನೆಯವರೆಲ್ಲರಿಗೂ ನಾನು ಒಪ್ಪಿಗೆ ಆಗಿದ್ದೆ. ಮುಂದಿನ ಮಾತುಕತೆ ಶೀಘ್ರವಾಗಿ ಮುಗಿದಿತ್ತು. ನಾಲ್ಕು  ತಿಂಗಳ ಅಂತರದಲ್ಲಿ 'ಲಗ್ನ' ಗೊತ್ತು ಮಾಡಿದ್ರು.

ಮದುವೆಯ ಎಲ್ಲಾ ಕೆಲಸಗಳು ಭರಾಟೆಯಿಂದ ಸಾಗಿತ್ತು. ಮದುವೆಯ ಹಿಂದಿನ ದಿನವೇ ಮಾವ, ಅತ್ತೆ, ಅಭಿ, ಅವನ ಹೆಂಡತಿ, ಪುಟ್ಟಮಗಳು  ಎಲ್ಲಾ ಬಂದಿದ್ರು. ಅವನು ಬಂದದ್ದು  ಅಪ್ಪನಿಗೆ ನೂರಾನೆ ಬಲ ಬಂದಂತೆ ಆಗಿತ್ತು. ಎಲ್ಲಾ ಕೆಲಸಗಳ ಜವಾಬ್ದಾರಿ ನೋಡಿಕೊಂಡಿದ್ದ . ನಾನು ಅವನ ಬಗ್ಗೆ ಯಾವುದೇ ಭಾವನೆ ಇಲ್ಲದೆ ಶಾಂತವಾಗಿದ್ದೆ. ಅವನಿಗೂ ಅವನದೇ ಸಂಸಾರ ಇರೋವಾಗ, ನಾನ್ಯಾಕೆ ಇನ್ನೂ ಅವನನ್ನು ಇಷ್ಟ ಪಡ್ಲಿ...???? ನನಗೆ ನನ್ನದೇ ಹೊಸ ಜೀವನ ಕಾಯ್ತಾ ಇರ್ಬೇಕಾದ್ರೆ ಹಳೆಯದನ್ನು ನೆನಪಿಸಿ, ಮನಸ್ಸನ್ನು ಯಾಕೆ ರಾಡಿ ಮಾಡಿ ಕೊಳ್ಬೇಕು... ????  ಅಂತ ನನ್ನನ್ನು, ನನ್ನ ಮನಸ್ಸನ್ನು ನಾನೇ ಬಲವಂತವಾಗಿ  ಬದಲಾಯಿಸಿಕೊಂಡಿದ್ದೆ. !!!!!!!!

ನನ್ನ ಮದುವೆಯ ಕಾರ್ಯ ಸುಸೂತ್ರವಾಗಿ ನಡೆದಿತ್ತು. ಪ್ರದೀಪ್ ಜೊತೆ ಸಪ್ತಪದಿ ತುಳಿದಿದ್ದೆ. ಮನಸ್ಸಲ್ಲಿ ಇದ್ದ ಎಲ್ಲಾ ಗೊಂದಲಗಳನ್ನ ಅಗ್ನಿಯಲ್ಲಿ ಸುಟ್ಟಿದ್ದೆ. ಅವನ ಮನಸ್ಸಿನ, ಅವನ ಮನೆಯ ಹೆಣ್ಣಾಗಿ, ಅವನ ಜೊತೆ ಸಾಗಿದ್ದೆ. ಯಾವುದೇ ಕೆಟ್ಟ ಯೋಚನೆಯಿಲ್ಲದೆ ಸಂಸಾರ ಮಾಡಿದ್ದೆ. ಅವನ ಕಷ್ಟ ಸುಖಗಳಲ್ಲಿ ಅರ್ಧಾಂಗಿ ಆಗಿದ್ದೆ. ಅವ್ನು ನನ್ನ ಉಸಿರಾಗಿದ್ದ. ಇಬ್ಬರು ಮುದ್ದು ಮಕ್ಕಳ ಪ್ರೀತಿಯ ತಾಯಿಯಾಗಿದ್ದೆ. ಅವರ ಆಟ-ಪಾಠಗಳಲ್ಲಿ ಸಂತೋಷ ಕಂಡಿದ್ದೆ .

ಎಲ್ಲಾ ಸರಿ..... ಆದ್ರೆ...ಆದ್ರೆ.....!!!!!

ಅಭಿ,ಇವತ್ತ್ಯಾಕೋ, ಬೆಳಿಗ್ಗೆಯಿಂದ ನೀನೇ ಕಾಡ್ತಾ ಇದ್ದಿ ಕಣೋ...!!!! ಇಷ್ಟು ದಿನ ಇಲ್ಲದ್ದು ಇವತ್ತ್ಯಾಕೆ ಹೀಗೆ..??!!! ನನ್ನ ಒಂದು ಪ್ರಶ್ನೆಗೂ ಉತ್ತರಾನೇ ಸಿಕ್ತಾ ಇಲ್ಲ .....ಇವತ್ತು,.ನಿನ್ನ ಜೊತೆ ಕಳೆದು ಹೋದ ಒಂದೊಂದು ದಿನಗಳು ನೆನಪಾಗ್ತಾ ಇದೆ . ಎಲ್ಲಾ ನೆನಪಿನಲ್ಲೂ ನೀನೇ ತುಂಬಿದೀಯಾ....ಆಶ್ಚರ್ಯ ಆಗ್ತಾ ಇದಿಯಾ...?? ಸತ್ಯ ಕಣೊ ... ಮನಸ್ಸಲ್ಲಿ ಇದ್ದ ನೆನಪುಗಳು, ಇವತ್ಯಾಕೋ ಹೊರಹೊಮ್ತಾ ಇದೆ...ಆದರೆ ನಿನಗದರ ಗೋಚರವೇ ಇಲ್ಲ...ಎಂಥ ವಿಪರ್ಯಾಸ ನೋಡು.... ನಾನೊಬ್ಬಳೇ ಇಲ್ಲಿ ಒಂಟಿ ಗೂಬೆ ತರಹ ನಿನ್ನ ಜಪ ಮಾಡ್ತಾ ಇದ್ದೀನಿ...!!!

ಅಭಿ ಆಶ್ಚರ್ಯ ಅಂದ್ರೆ ನನಗಿಗಾಗ್ಲೇ, 45ರ ಪ್ರಾಯ, ನೀನು 50 ವರ್ಷದ  ಗಡಿ ಈಗ್ತಾನೆ ದಾಟಿದ್ದಿ. ಈ ಘಟನೆಗಳೆಲ್ಲಾ ನಡೆದು ಸುಮಾರು 25 ವರ್ಷಗಳೇ ಕಳೆದು ಹೋಗಿದೆ. ನನ್ನ ಇಬ್ಬರೂ ಮಕ್ಕಳು ನನ್ನ ಭುಜದೆತ್ತರಕ್ಕೆ ಬೆಳೆದಿದ್ದಾರೆ . ಕಾಲೇಜಿಗೆ ಹೋಗ್ತಾ ಇದ್ದಾರೆ. ಇನ್ನು ನಿನ್ನ ಮಗಳು ಮದುವೆ ವಯಸ್ಸಿಗೆ ಬಂದು, ಅಳಿಯ ಹುಡುಕುವ ತಯಾರಿಯಲ್ಲಿ ಇದ್ದಿಯಾ.. !!!! ಇಷ್ಟೆಲ್ಲಾ ಆದ್ರೂ ಅಷ್ಟು ಹಳೆಯ ಒಂದೊಂದು ನೆನಪು ನನ್ನ ಮನಸ್ಸಲ್ಲಿ ಈಗತಾನೆ ನಡೆದಿತ್ತು, ಅನ್ನೋ ಅಷ್ಟು ಹಚ್ಚ ಹಸುರಾಗಿದೆ ಕಣೋ, ಇದರರ್ಥ, ಇನ್ನು ನೀನು ನನ್ನ ಮನಸ್ಸಲ್ಲಿ ಹಾಗೆ ಇದ್ದೀಯ ಅಂತಾನಾ....!!!!. ನಾನು ಮೊದಲು ಅಂದುಕೊಂಡಿದ್ದೆ. ಇನ್ನು ನಿನಗೆ ನನ್ನ ಜೀವನದಲ್ಲಿ, ಮನಸ್ಸಲ್ಲಿ  ಯಾವುದೇ ಜಾಗ ಇಲ್ಲ ಅಂತ  ....!!! ಆದ್ರೆ ಆ ನನ್ನ ಲೆಕ್ಕಾಚಾರ ತಪ್ಪಾಯ್ತು ....ಎಷ್ಟಾದ್ರೂ ನೀನು ನನ್ನ ಮೊದಲ ಪ್ರೀತಿ ಅಲ್ವಾ..... ಯಾವುದೇ ಹುಡುಗಿ, ಅಷ್ಟು ಸುಲಭದಲ್ಲಿ ತನ್ನ ಮೊದಲ ಪ್ರೀತಿ ಮರೆಯಲ್ಲ. ಅವಳ ಉಸಿರು ಇರೋವರೆಗೂ ಅದು ಹಾಗೆ ಅವಳ ಜೊತೆ ನೆನಪಾಗಿ ಉಳಿದು ಬಿಡುತ್ತೆ ...ಅವನ ಜೊತೆ ಮದುವೆ ಆಗದಿದ್ರೂ, ಅವನ ಜೊತೆ ಕಳೆದ ಒಂದೊಂದು ಕ್ಷಣಗಳು  ಯಾವಾಗ್ಲೂ ಕಾಡ್ತಾನೆ ಇರುತ್ತೆ .....ಇವತ್ತು ಬಹುಶಃ ಆ ಸುಳಿಯಲ್ಲಿ ನಾನು ಸಿಕ್ಕಿ ಹಾಕ್ಕೊಂಡಿದೀನಿ ಅನ್ಸುತ್ತೆ....ಆ ನೆನಪುಗಳನ್ನು, ಈ ಕ್ಷಣಾನೂ ಆನಂದಿಸ್ತಾ ಇದ್ದೀನಿ ಕಣೋ...!!! ಇದು ತಪ್ಪು ಅಂತ ನನಗೊತ್ತು .... ಆದರೆ ನನ್ನ ಮನಸ್ಸಿಗೆ, ನೆನಪುಗಳಿಗೆ ಕಡಿವಾಣ ಹಾಕಕ್ಕೆ ಇವತ್ತು ನನ್ನಿಂದ ಸಾಧ್ಯ ಆಗ್ತಾನೇ  ಇಲ್ಲ ಕಣೋ .....!!!!

ಏನೇ ಆಗ್ಲಿ ಕಣೋ ಅಭಿ, ನೀನು  ನನ್ನ ಮಾವನ ಮಗಾನೇ, ನನ್ನ ಹಕ್ಕಿನ ಹುಡುಗಾನೇ, ಹಾಗೆ ನನ್ನ ಮನಸ್ಸಿನ ಮೂಲೆನಲ್ಲಿ, ಒಂದು ಕಡೆ ಇದ್ದುಬಿಡು. ಯಾವಾಗ್ಲಾದ್ರು ತುಂಬಾ..... ತುಂಬಾ....... ನೆನಪಾದಾಗ ಆ ಸವಿನೆನಪುಗಳನ್ನು ಮೆಲಕು ಹಾಕ್ತಾ ಇರ್ತೀನಿ....!!!!!!

Monday, 21 January 2013

ಪುಟ್ಟ ಹುಡುಗನ ಕನಸು ನನಸಾಯ್ತು.....


ಜೀವನದಲ್ಲಿ ಕೆಲವೊಮ್ಮೆ ಎಲ್ಲೋ ಹುಟ್ಟಿ , ಎಲ್ಲೋ ಬೆಳೆದ ಕೆಲವು ವ್ಯಕ್ತಿಗಳನ್ನು ಭೇಟಿ ಆಗ್ತೇವೆ. ಆ ಸಂಬಂಧಗಳು ಎಷ್ಟು ಗಟ್ಟಿಯಾಗಿ ನಮ್ಮನ್ನು ಕೆಲವೊಮ್ಮೆ ಆವರಿಸುತ್ತೆ ಅಂದರೆ ಅದನ್ನು ಊಹಿಸಲಿಕ್ಕೆ ಸಾಧ್ಯ ಆಗದಷ್ಟು. ಬಹುಷಃ ನಾವು ಅದನ್ನು ಕನಸಿನಲ್ಲೂ ಕಲ್ಪಿಸಿಕೊಂಡಿರೋದಿಲ್ಲ ಅಷ್ಟು ಗಾಢವಾಗಿ ಆ ಸಂಬಂಧಗಳು ನಮ್ಮ ಜತೆಯಾಗುತ್ತೆ.

ನನ್ನ ಜೀವನದಲ್ಲಿ ಹೇಳ್ಬೇಕಂದ್ರೆ ಅಂಥಹ ಒಬ್ಬ ವ್ಯಕ್ತಿಗೆ ನಾನು ಪರಿಚಿತಳಾಗ್ತೇನೆ ಅಂಥ ಕನಸಲ್ಲೂ ಅಂದುಕೊಂಡಿರಲಿಲ್ಲ. ಪ್ರೀತಿಯ ಸಹೋದರನ ಸ್ಥಾನದಲ್ಲಿ ಒಬ್ಬ ಹುಡುಗ ನನ್ನ ಬಾಳಿಗೆ ಪ್ರವೇಶ ಪಡೆದದ್ದು ನನಗೆ ತುಂಬಾ ಸಂತೋಷದ ವಿಚಾರ. ಯಾಕಂದ್ರೆ ಇದುವರೆಗೂ ಅಂತಹ ಸಂಬಂಧ ಅನುಭವಿಸಿರದ ನನಗೆ  ಏನೋ ಬೆಲೆಕಟ್ಟಲಾರದ ವಸ್ತುವೊಂದು ಸಿಕ್ಕ ಅನುಭವ. ಆ ಸಹೋದರನ ಹೆಸರು  "ನಟರಾಜು"... ಬಹಳಷ್ಟು ಜನರಿಗೆ ಪರಿಚಿತ ಮುಖ. 

ಮೊದಲೆಲ್ಲಾ ಅವನು ಫೋನ್ನಲ್ಲಿ ಮಾತಾಡೋವಾಗ "ನಾನು ಹೀಗೊಂದು ಅಂತರ್ಜಾಲ ಪತ್ರಿಕೆ ಮಾಡ್ಬೇಕು ಅಂದುಕೊಂಡಿದ್ದೀನಿ ..." ಅಂದಾಗ, ನಾನು "ಮಾಡೋಕ್ಕೆ ಬೇರೆ ಕೆಲಸ ಇಲ್ಲ ..." ಅಂತ  ಅದೆಷ್ಟೋ ಸಾರಿ ಅಂದಿದ್ದೆ. ಅದಕ್ಕೆ ಅವನು ಸೀರಿಯಸ್ಸಾಗಿ ..." ಅದು ನನ್ನ ಎಷ್ಟೋ ವರ್ಷಗಳ ಆಸೆ, ಕನಸು...." ಅಂದರೂ ನನಗೆ ನಂಬಿಕೆ ಬರ್ತಾ ಇರಲಿಲ್ಲ. ಎಲ್ಲೋ ಸುಮ್ಮನೆ ತಮಾಷೆ ಮಾಡ್ತಾ ಇದ್ದಾನೆ ಅಂದುಕೋತಾ ಇದ್ದೆ.  ಆದರೆ ಇತ್ತೀಚೆಗೆ ಪ್ರತಿಬಾರಿ ಫೋನ್ ಮಾಡಿ ದಾಗ್ಲೂ 'ಪಂಜು' ಬಗ್ಗೆ ಏನೆಲ್ಲಾ ಕೆಲಸಗಳು ನಡೀತಾ ಇದೆ ಅಂತಾ ವಿವರಿಸುವಾಗ  ಇವನು ನಿಜಕ್ಕೂ ಇಂಥಹ ಒಂದು ಸಾಹಸ ಶುರು ಮಾಡ್ತಾ ಇದ್ದಾನೆ ಅನ್ನೋ ನಂಬಿಕೆ ಬಂತು. 

ಇ-ಪತ್ರಿಕೆ ಅಂದರೆ ಅದು ಹೇಗಿರುತ್ತೆ . ಅದಕ್ಕೆ ಯಾರಾದ್ರು  ಡಿಸೈನರನ್ನು ಹುಡುಕ್ಬೇಕು , ಅದಕ್ಕೆ ಎಷ್ಟೆಲ್ಲಾ ಹಣ ಖರ್ಚಾಗುತ್ತೆ....ಇನ್ನು ಏನೆಲ್ಲಾ ಇದ್ರೆ ಚೆನ್ನಾಗಿರುತ್ತೆ , ಅದೂ-ಇದೂ ಅಂತ ಅವನು ಆಸಕ್ತಿಯಿಂದ ಹೇಳೋವಾಗ, ಕೇಳೋದಷ್ಟೇ ನನ್ನ ಕೆಲಸ. ಯಾಕಂದ್ರೆ ಆ ವೆಬ್ ಪೇಜ್, ಅದರ ಡಿಸೈನ್ ಇದೆಲ್ಲದರ ಗಂಧ-ಗಾಳಿಯು ನನಗೆ ಗೊತ್ತಿರಲಿಲ್ಲ. ಅವನು ಹೇಳೋದು ಕೇಳಿ ಕೇಳಿ, ನನಗೂ ಸ್ವಲ್ಪ ಅದರ ಬಗ್ಗೆ ಜ್ನ್ಯಾನ ಸಿಕ್ತು. ಓ... ಇದು ನಾನು ಅಂದುಕೊಂಡಷ್ಟು ಸುಲಭ ಇಲ್ಲ ಅಂತ ಆಗಲೇ ನನಗೆ ಗೊತ್ತಾಗಿದ್ದು. ಜೊತೆಗೆ ಟೆನ್ಶನ್ ಸಹಾ. ಶುರು ಮಾಡೋ ಪತ್ರಿಕೆ ಚೆನ್ನಾಗಿ ಮೂಡಿ ಬರಲಿ ಅಂತ.

ಇವತ್ತು ಬೆಳಿಗ್ಗೆ ಬೆಳಿಗ್ಗೆ ಫೇಸ್ಬುಕ್ ಆನ್ ಮಾಡಿದ್ರೆ, ಪಂಜು ಪತ್ರಿಕೆ ಅದಾಗಲೇ ಬಿಡುಗಡೆ ಆಗಿ ಬಿಟ್ಟಿತ್ತು. ಬೆಳಿಗ್ಗೆಯೇ ನಾನೆಣಿಸದ "ಸ್ವೀಟ್ ಸರ್ಪ್ರೈಸ್ ". 

  • http://www.panjumagazine.com/

ಸ್ನೇಹಿತರೇ ಈ ವಾರ ಪತ್ರಿಕೆಯ ವಿಳಾಸ ಹೀಗಿದೆ. http://www.panjumagazine.com/ ಸಮಯವಿದ್ದಾಗ ಭೇಟಿ ಕೊಡಿ. ಹೊಸ ಹೊಸ ಬರಹಗಳನ್ನು ಆಸ್ವಾದಿಸಿ. .... :))



"ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ." 


ಈ ಮೇಲಿನ ಸಾಲುಗಳು ಅವನು ತನ್ನ 'ಪಂಜು' ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರೋದು. ಈ ಸಾಲುಗಳ ಅರ್ಥ, ಅವನನ್ನು ಹತ್ತಿರದಿಂದ ಬಲ್ಲವರು, ಅವನನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತಾಗೋದು..... :))




ನಟರಾಜು  

ನನಗಂತು ಇವತ್ತು ನಮ್ಮ ಮನೆಯ ಮಗ ಒಳ್ಳೆಯ ಸಾಧನೆ ಮಾಡಿದ ಸಂತೋಷ, ತೃಪ್ತಿ  . ಇವತ್ತು ಅವನ ಆಸೆ, ಕನಸುಗಳು ಕೈಗೂಡಿದ ದಿನ. ಮುಂದಿನ ಜೀವನವು ಹೀಗೆ ಅಂದುಕೊಂಡಿದ್ದೆಲ್ಲಾ  ಸಾಂಗವಾಗಿ ನಡೆದು, ನಗುನಗ್ತಾ ನೆಮ್ಮದಿಯಿಂದ ಸಾಗಲಿ ಎನ್ನುವ ಪ್ರೀತಿಯ ಹಾರೈಕೆ .

ಪ್ರೀತಿಯಿಂದ 

ಸುದೀಪ.....


Monday, 14 January 2013

ಒಬಾಮ.....!!!!!



ನನ್ನ ಅಮ್ಮನ ಮನೆ ಇರೋದು ಉಡುಪಿ ಹತ್ತಿರ ಇರೋ ಕಡಿಯಾಳಿ ಏರಿಯಾದಲ್ಲಿ. ಅವರ ಕ್ರಾಸ್ನಲ್ಲಿ ಸುಮಾರು 10-12 ಮನೆ ಇದೆ. ಆ ಬೀದಿಗೆಲ್ಲ ಒಬ್ಬ ಮುದ್ದು ರಾಜಕುಮಾರ ಇದ್ದಾನೆ. ಅವನೇ 'ಒಬಾಮ'. ಎಲ್ಲರ ಪ್ರೀತಿಯ ಡುಮ್ಮ ನಾಯಿ. ಎಲ್ಲರ ಮನೆಯಲ್ಲೂ ಸ್ವಲ್ಪ ಸ್ವಲ್ಪ ತಿಂಡಿ, ಊಟ ಮಾಡಿ ಜೀವನ ಸಾಗಿಸ್ತಾ ಇರೋ ನಿರುಪದ್ರವ ಪ್ರಾಣಿ   . ಇವನೆಂದರೆ ಎಲ್ರಿಗೂ ವಿಪರೀತ ಪ್ರೀತಿ. ಆ ಬೀದಿಯ ಮಕ್ಕಳೆಲ್ಲ ಸೇರಿ ಅವನಿಗೆ 'ಒಬಾಮ' ಅಂತ ಹೆಸರಿಟ್ಟಿದ್ದಾರೆ. ಆದರೆ ನನ್ನ ತಂದೆ ಮಾತ್ರ ಅವನನ್ನು 'ಟೈಗರ್' ಅಂತ ಕರೀತಿದ್ದರು. ನೋಡೋಕ್ಕೆ ದೈತ್ಯ ಆಕಾರ. ಯಾರಾದ್ರೂ ಹೊಸಬರು ನೋಡಿದ್ರೆ ಹೆದರಿಕೊಳ್ಬೇಕು ಹಂಗಿದೆ ಅವನ ಜೀವ. ಸುಮಾರು ಎರಡು ವರ್ಷ ಆಗಿದೆ ಅವನು ಆ ಏರಿಯಾಗೆ ಬಂದು. ಬಂದ ದಿನದಿಂದ ಎಲ್ಲರ ಪ್ರೀತಿ ಸಂಪಾದಿಸಿದ್ದಾನೆ.

ದಿನಾ ನನ್ನ ಅಮ್ಮ ಬೆಳಿಗ್ಗೆ ಗೇಟಿಗೆ ಹಾಕಿದ್ದ  ಹಾಲಿನ ಚೀಲದಿಂದ ಹಾಲಿನ  ಪ್ಯಾಕೆಟ್  ತೆಗೆಯುವಾಗ, ಬಾಗಿಲಿನ  ಶಬ್ದಕ್ಕೆ ಒಬಾಮ ಹಾಜರ್. ಮುಂದಿನ ಎರಡು  ಕಾಲುಗಳನ್ನು ಉದ್ದಕ್ಕೆ ಚಾಚಿ ನಮಸ್ಕಾರ ಅನ್ನೋ ಹಾಗೆ ಫೋಸ್ ಕೊಡ್ತಾನೆ.  ನಂತರ ಅಮ್ಮ ಅವನಿಗೆ ಒಳಗೆ ಹೋಗಿ ಏನಾದರೂ ತಿಂಡಿ ಕೊಟ್ಟ ಮೇಲೆ ಅಸಾಮಿ ನಾಪತ್ತೆ.... :))


ಅವನಿಗೆ ಎರಡು ವಿಷಯಗಳೆಂದರೆ ಇಷ್ಟ ಆಗಲ್ಲ. ಒಂದು ಮಳೆ, ಇನ್ನೊಂದು  ಪಟಾಕಿ. ಮಳೆಗಾಲದಲ್ಲಿ ಎಷ್ಟೇ ಹಸಿವಾದರೂ ಯಾರು ಕರೆದ್ರೂ ಹೋಗಲ್ಲ.  ಮೈ ಒದ್ದೆ ಮಾಡಿಕೊಳ್ಳಲ್ಲ. ತುಂಬಾ ಜಾಣ. ಮಳೆ ನಿಂತ ಮೇಲೆ ಹೋಗಿ ತಿಂದು ಮಲಗ್ತಾನೆ. ಇನ್ನು ದೀಪಾವಳಿ  ಸಮಯದಲ್ಲಿ ಸಂಜೆ ಮಕ್ಕಳು ಪಟಾಕಿ ಹಚ್ಚಲಿಕ್ಕೆ ಶುರು ಮಾಡಿದ್ರೆ  'ಒಬಾಮನ' ಪತ್ತೆಯೇ ಇರೋದಿಲ್ಲ. ಹೆದರಿಕೆಗೆ ಎಲ್ಲಿ ಅಡಗಿ ಕೂತ್ಕೊತಾನೋ ಗೊತ್ತಿಲ್ಲ.. ದೀಪಾವಳಿ ಹಬ್ಬ ಮುಗಿಯುವವರೆಗೂ ಅವನಿಗೆ ಇದೊಂದು ದೊಡ್ಡ ಶಿಕ್ಷೆ.

ಆ ಬೀದಿಯಲ್ಲಿ ಒಟ್ಟು 3 ಮನೆಗಳಲ್ಲಿ ನಾಯಿಗಳಿವೆ. ಅವುಗಳ ಹೆಸರು ಮಜವಾಗಿದೆ. ಒಂದು 'ಶಾಂಡು',   ಒಳ್ಳೆ ಜಾತಿಯ ದೊಡ್ಡ ನಾಯಿ. ಎರಡನೆಯದು 'ಡ್ಯಾನಿ' ಸಣ್ಣ ಕಾಲಿನ ಪುಟ್ಟ ನಾಯಿ. ಆದರೆ ಅದರ ಕಂಠ ಮಾತ್ರ ಅಸಾಧ್ಯ. ಕಿವಿ ನೋಯೋ ಹಾಗೆ ಬೊಗಳುತ್ತೆ. ಮೂರನೆಯದು 'ಬ್ಲಾಕಿ' ಪಾಪದ ಹೆಣ್ಣು ನಾಯಿ. ಇದರಲ್ಲಿ 'ಶಾಂಡು' ಮತ್ತು 'ಡ್ಯಾನಿ' ಬದ್ಧ ವೈರಿಗಳು. ಇಬ್ಬರೂ ಅಕ್ಕಪಕ್ಕದ ಮನೆಯಲ್ಲಿ ಇರೋದು. ಎಲ್ಲಾದರೂ ಅವರ ಮಾಲೀಕರು ಒಂದೇ  ಸಮಯಕ್ಕೆ ಅವುಗಳನ್ನು 'ವಾಕಿಂಗ್' ಕರೆದುಕೊಂಡು ಹೋಗುವಾಗ, ಅಕಸ್ಮಾತ್ ಎದುರು ಬದುರು ಸಿಕ್ಕಿದ್ರೆ, ಅಷ್ಟೇ ಕಥೆ...ಇಡೀ  ಬೀದಿ ತುಂಬಾ ಇವುಗಳ ಜಗಳ. ಮಾಲಿಕರು ಬೆಲ್ಟ್ ಹಿಡಿದುಕೊಂಡಿದ್ದರು, ಒಬ್ಬರ ಮೇಲೊಬ್ಬರು ಹಾರಾಡಿ, ಮಾಲಿಕರನ್ನು ಜೊತೆಗೆ  ಎಳೆದಾಡಿ  ಜಗಳಕ್ಕೆ ನಿಲ್ಲುತ್ವೆ. ಅವರ ಮಾಲಿಕರಿಗಂತು ಸುಸ್ತು ಹೊಡೆಸಿ ಬಿಡುತ್ವೆ. ಅವರಿಗೆ ಅವುಗಳನ್ನು ಎಳೆದುಕೊಂಡು ಹೋಗಿ ಮನೆಯ ಗೇಟ್ ಒಳಗೆ ಸೇರಿಸೋದ್ರಲ್ಲಿ ಸಾಕಾಗಿಬಿಡುತ್ತೆ. :-)

ಆದರೆ ನಮ್ಮ 'ಒಬಾಮ' ಎಲ್ಲರ ಫ್ರೆಂಡ್. 'ಶಾಂಡು' ವಾಕಿಂಗ್ ಹೋಗೋವಾಗ, ಅವ್ನ ಜೊತೆ ಇವನು ಹೋಗ್ತಾನೆ. ಸ್ವಲ್ಪ ಹೊತ್ತು ತಿರುಗಾಡಿ ಬಂದ ನಂತರ 'ಶಾಂಡು' ಮಾಲೀಕರು ರಸ್ತೆಯ ಧೂಳು ಮನೆ ಒಳಗೆ ಬರದಂತೆ ಅವನ ಕಾಲುಗಳನ್ನು ನಲ್ಲಿ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ, ಅವನ ಮೊದಲ ಮಹಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋದ್ರೆ, 'ಒಬಾಮ' ಗೇಟ್ನ ಹೊರಭಾಗದಲ್ಲಿ ರೆಸ್ಟ್ ತೆಗೊಳ್ತಾನೆ.

ಇತ್ತೀಚೆಗಂತೂ 'ಒಬಾಮನಿಗೆ' ವಿಪರೀತ ಆಲಸ್ಯ. ಎಲ್ಲರ ಮನೆಯ ಬಿಸ್ಕಿಟ್, ರಸ್ಕ್, ದೋಸೆ, ಬೋಂಡಾ, ಹೋಳಿಗೆ, ಅನ್ನ-ಸಾರು, ಸಾಂಬಾರ್ ಏನೆಲ್ಲಾ ಸಿಗುತ್ತೋ ಎಲ್ಲಾ ತಿಂದು, ಎದುರು ಮನೆ ಅಂಕಲ್ ಇಡುವ ನೀರು ಕುಡಿದು  ವಿಪರೀತ ಮೈ ಬೆಳೆಸಿಕೊಂಡಿದ್ದಾನೆ.  ಅವನಿಗೆ ಈಗ ಒಂದು ನಿಮಿಷ ನಿಲ್ಲಲಿಕ್ಕೆ ಕೂಡೋದಿಲ್ಲ. ಎಲ್ಲಿ ಸಿಗುತ್ತೋ ಅಲ್ಲಿ ಮಲಗೋದೆ ಜಾಸ್ತಿ ಆಗಿದೆ. ವ್ಯಾಯಾಮಾನೇ ಇಲ್ಲ ಅವನ ದೇಹಕ್ಕೆ. ಇನ್ನು ಗಮ್ಮತ್ತೆಂದರೆ ಇವನನ್ನು ಯಾರೂ ಕರೀಬೇಕಂತ  ಇಲ್ಲ. ಸುಮ್ನೆ ಅವರ ಗೇಟಿಗೆ ಸ್ವಲ್ಪ ಶಬ್ದ ಮಾಡಿದ್ರೆ ಸಾಕು. ಕಿವಿ ಚುರುಕಾಗಿ, ಅದು ಅವನಿಗೆ ತಿನ್ನಲಿಕ್ಕೆ ಕರಿಯೋ ಸಿಗ್ನಲ್ ಅಂತ ಅವನಿಗೆ ಗೊತ್ತು. ಸೀದಾ ಓಡಿ  ಹೋಗಿ ಕೊಟ್ಟಿದ್ದನ್ನು ತಿಂದು ಆರಾಮಾಗಿರ್ತಾನೆ. :-)



ಇವನಿಗೆ ಒಬ್ಬ ಎದುರು ಮನೆ ಆಂಟಿ 'ಶೇಕ್ ಹ್ಯಾಂಡ್' ಮಾಡೋಕ್ಕೆ ಕಲ್ಸಿದ್ದಾರೆ. ಅವರ ಮನೆಗೆ ಹೋಗಿ ಕೆಲವೊಮ್ಮೆ ಅವರ ಮಗನ ಜೊತೆ ಆಟ ಆಡ್ತಾನೆ. ಇನ್ನೊಬ್ಬ ಆಂಟಿ ಮತ್ತು ಇವನ ಪ್ರೀತಿ ಇನ್ನು ಗಮ್ಮತ್ತಾಗಿರುತ್ತೆ. ಅವರು ಇವನ ಜೊತೆ ಮಾತಾಡ್ತಾರೆ. ಹೇಗಂದ್ರೆ,..."ಒಬಾಮ, ನಗೋ ..ಪ್ಲೀಸ್ ...ಕಣೋ..." ಅಂತ. ಇವನು ಅದೇನು ನಗ್ತಾನೋ , ಅವರಿಗೆ ಅದೇನು ಅರ್ಥ ಆಗುತ್ತೋ ಗೊತ್ತಿಲ್ಲ.  :-)

ಆ ಬೀದಿಗೆ ಒಬ್ಬ ಭಿಕ್ಷುಕರು, ಒಬ್ಬ ಸೇಲ್ಸ್ ಮ್ಯಾನ್ ಬರಲಿಕ್ಕೆ ಬಿಡೋದಿಲ್ಲ. ಅವನಿಗೆ ಮುನ್ಸಿಪಾಲ್ಟೀಯ ಕಸ ತೆಗೆದುಕೊಂಡು ಹೋಗುವ ವಾಹನ ಬಂದರೆ ಭಯಂಕರ ಸಿಟ್ಟು. ಅವರು ಹೋಗುವ ತನಕ ಬೊಗಳ್ತಾನೆ.

ನನ್ನ ಅಮ್ಮನ ಮನೆಗೆ ಯಾರೇ ಬಂದ್ರೂ ಅವರನ್ನು ಮೂಸಿ ನೋಡಿ 'ಫ್ರೆಂಡ್' ಮಾಡ್ಕೋತಾನೆ. ಅವರೇ ಇವನನ್ನು ನೋಡಿ ಹೆದರಬೇಕು.ಯಾವಾಗಲೂ ಅಮ್ಮನ ಮನೆಯ ಗೇಟ್ನ ಹೊರ ಭಾಗದ ಕಲ್ಲಿನ ಚಪ್ಪಡಿ ಯಲ್ಲಿ ಮಲಗಿ,ನಮ್ಮನ್ನು ಆಚೆ ಈಚೆ ಹೋಗದಂತೆ ಅಡ್ಡ ಮಾಡ್ತಾನೆ. ಅವನನ್ನು ಎಬ್ಬಿಸಲು ಸೋತು, ನಾವೇ ಅವನ ಮೇಲಿಂದ ಜಂಪ್ ಮಾಡ್ಬೇಕು ಅಥವಾ ಇನ್ನೊಂದು  ದೊಡ್ಡ  ಗೇಟ್ ನಿಂದ ಹೊರ ಹೋಗಬೇಕು. ಹಾಗೆಲ್ಲ ಕೆಲವೊಮ್ಮೆ ತೊಂದರೆ ಕೊಡ್ತಾನೆ ... :-)




ಆದರೂ ಎಲ್ಲರೂ ಅವನನ್ನು ತುಂಬಾ ಪ್ರೀತಿಸ್ತೀವಿ. ಅಮ್ಮನ ಮನೆಗೆ ಹೋದಾಗ ಅವನು ನೋಡಕ್ಕೆ ಸಿಗದಿದ್ರೆ ಬೇಜಾರಾಗುತ್ತೆ. ಎಲ್ಲಿ ಹೋಗಿದ್ದಾನೆ ಇವತ್ತು ಅನ್ನೋ ಚರ್ಚೆ ನಮ್ಮ ನಮ್ಮಲ್ಲೇ.....

ಹಿಂಗೆಲ್ಲಾ ಇದೆ ನಮ್ಮ 'ಒಬಾಮನ ಕಥೆ...' ಏನೇ ಆದ್ರೂ ಮನುಷ್ಯರಿಗಿಂತ ಪ್ರಾಣಿಗಳಿಗೆ ಪ್ರೀತಿ ಜಾಸ್ತಿ. ನಾವು ಒಂದು ಪಟ್ಟು ಪ್ರೀತಿ ತೋರ್ಸಿದ್ರೆ, ಅವು ನಮಗೆ ಹತ್ತು ಪಟ್ಟು ತಿರುಗಿ ಮುದ್ದು ಮಾಡ್ತಾವೆ... ಕೊನೆಯಲ್ಲಿ ಹೇಳೋದಿಷ್ಟೇ "ಲವ್ ...ಯು...ಒಬಾಮ...." :-)

ಇವತ್ತು ಬೇರೆ "ಸಂಕ್ರಾಂತಿ ಹಬ್ಬ". ನನ್ನ ಬ್ಲಾಗಿಗೆ ಭೇಟಿ ಕೊಟ್ಟ ಎಲ್ಲಾ ಸ್ನೇಹಿತರಿಗೂ ಹಬ್ಬದ ಹಬ್ಬದ ಶುಭಾಶಯಗಳು. "ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ". ಎಲ್ಲರೂ ಚೆನ್ನಾಗಿರಿ...

ಪ್ರೀತಿಯಿಂದ 

ಸುದೀಪ ...

Wednesday, 2 January 2013

ಎಸ್ ಎಂ ಎಸ್ ......


ಮೊನ್ನೆ 'ಡಿಸೆಂಬರ್ 25' ಕ್ರಿಸ್ಮಸ್ ದಿನ  ಎಲ್ಲಾ ಮೊಬೈಲ್ ಕಂಪನಿಗಳು 'ಫ್ರೀ ಮೆಸೇಜ್' ಬಂದ್ ಮಾಡಿತ್ತು. ಅಕಸ್ಮಾತ್ ಮೆಸೇಜ್ ಮಾಡಿದ್ರೆ  ಒಂದಕ್ಕೆ ಹತ್ತರಷ್ಟು ಚಾರ್ಜ್ ಮಾಡಿತ್ತು. ನಂತರ 'ಡಿಸೆಂಬರ್ ೩೧ ಮತ್ತು ಜನವರಿ ಒಂದು,' ಹೊಸ ವರ್ಷ ಅಂತ ಪುನಃ ಎಲ್ಲಾ ಫ್ರೀ ಮೆಸೇಜ್ ಬಂದ್...ಎಲ್ಲರೂ ಅದೆಷ್ಟು ಈ ಕಂಪನಿಗಳಿಗೆ ಬೈದುಕೊಂಡ್ರೋ ಗೊತ್ತಿಲ್ಲ. 

ಮೊನ್ನೆ ನಾವೆಲ್ಲಾ ಆತ್ಮೀಯ ಸ್ನೇಹಿತರು ಡಿಸೆಂಬರ್ 30 ಕ್ಕೆ ಮಾತಾಡಿಕೊಂಡಿದ್ವಿ . "ಹೇ ನಾಳೆಯಿಂದ ಇನ್ನು ಎರಡು ದಿನ 'ಎಸ್ ಎಂ ಎಸ್ ' ಇಲ್ಲ . ತುಂಬಾನೇ ಬೋರ್. ಏನಿದ್ರೂ ಇವತ್ತು ರಾತ್ರಿ 12 ಘಂಟೆ ಒಳಗೆ ಎಲ್ಲಾ ನಮ್ಮ ಪಟ್ಟಾಂಗ ಕ್ಲೋಸ್ ಅಂತ.". ರಾತ್ರಿ11 ರಿಂದ 12 ತನಕ ನಮ್ಮ ಮೆಸೇಜ್ ಚಾಲೂ. ಕೊನೆಯ ಮೆಸೇಜ್ ಹೀಗಿತ್ತು."ಬೈ. ಇನ್ನು ಮುಂದಿನ ವರ್ಷ ಸಿಗೋಣ, ಟೇಕ್ ಕೇರ್...ಗುಡ್ ನೈಟ್, ಹ್ಯಾಪಿ ನ್ಯೂ ಇಯರ್ ಇನ್ ಅಡ್ವಾನ್ಸ್  ".....

ಈ "ಎಸ್ ಎಂ ಎಸ್" ಅನ್ನೋದು ನಮ್ಮ ಜೀವನದಲ್ಲಿ ಅದೆಷ್ಟು ಪ್ರಾಮುಖ್ಯತೆ ಪಡ್ಕೊಂಡಿದೆ  ಅಂದ್ರೆ, ಮೊಬೈಲ್ನಲ್ಲಿ ಮೆಸ್ಸೇಜಿನ  'ಟುಯ್ ...ಟುಯ್ ...' ಶಬ್ದ ಇಲ್ಲದಿದ್ದರೆ ಮನೆ ಎಲ್ಲಾ ಖಾಲಿ ...ಖಾಲಿ.... ಆ ಶಬ್ದ ಒಂಥರಾ ಆನಂದ, ಖುಷಿ ಕೊಡುತ್ತೆ. ನಮ್ಮ ಜೊತೆ ಯಾರೋ ಒಬ್ಬ ಸ್ನೇಹಿತರು ಯಾವಾಗಲೂ ಇರ್ತಾರೆ ಅನ್ನೋ ಭಾವನೆ. ಈ ಹೊಸ ವರ್ಷದ ಗಲಾಟೇಲಿ ಈ ಎರಡು ದಿನಾ ಇದಕ್ಕೆಲ್ಲಾ ಪೂರ್ಣ ವಿರಾಮ.ದಿನಾ ಎಷ್ಟು ಮೆಸೇಜ್ ಮಾಡಿದ್ರು ಸುಸ್ತಾಗದ ಕೈಗಳಿಗೆ ಎರಡು ದಿನ ಫುಲ್ ರೆಸ್ಟ್ ...  :-)


ಫೇಸ್ಬುಕ್ ಅಥವಾ e-mail ಮುಖಾಂತರ ಸಹಾ ನಾವು ಸ್ನೇಹಿತರು ಸಂಪರ್ಕದಲ್ಲಿ ಇರಬಹುದು.ಆದರೆ ನೂರೆಂಟು ಸಮಸ್ಯೆ. ಕರೆಂಟ್ ಇಲ್ಲ, ನೆಟ್ವರ್ಕ್ ಪ್ರಾಬ್ಲಂ, ಸ್ನೇಹಿತರು online ಇದ್ದಾಗ ನನಗೆ ಅಡಿಗೆ ಕೆಲಸ. ಒಂದಕ್ಕೊಂದು ಸರಿ ಹೊಂದುವುದಿಲ್ಲ. ಅದೇ ಮೊಬೈಲ್ ಆದರೆ ಎಲ್ಲಿ ಬೇಕು ಅಲ್ಲಿ, ಯಾವಾಗ ಬೇಕು ಆವಾಗ ಉಪಯೋಗಿಸಬಹುದು. ಕೆಲವೊಮ್ಮೆ ಸ್ನೇಹಿತರು ಸುಮ್ಮನೆ 'ಖಾಲಿ ಮೆಸೇಜ್' ಕಳಿಸಿದರು 'ಟುಯ್ ಟುಯ್ ' ಶಬ್ದ ಕೇಳಿ ಇದ್ದ ಬದ್ದ ಕೆಲಸ ಎಲ್ಲ ಬಿಟ್ಟು, ಓಡಿ ಬಂದು ನೋಡಿದ್ದುಂಟು . ಕೊನೆಗೆ ಅವರಿಗೆ 'ತಲೆಹರಟೆ' ಸಾಕು ಅಂತ ಒಂದು ಮೆಸೇಜ್ ಕಳಿಸಿ ಬೈದಿದ್ದುಂಟು.

 ಮೊದಲು ತಿಂಗಳಿಗೆ 200 ರಾಷ್ಟ್ರೀಯ ಮೆಸೇಜ್ ಉಚಿತವಾಗಿ ಇದ್ದದ್ದು, ಕಡಿತಗೊಂಡು ಈಗಂತೂ ಕೇವಲ 100 ರಾಜ್ಯ ಮೆಸೇಜ್ಗಳು...ಇದೆಲ್ಲಾ ಯಾರಿಗೆ ಸಾಲುತ್ತೆ, ಅಂತಾ ಆ ಅಸ್ಸಾಂ ಗಲಾಟೆ ಮಾಡಿದವರಿಗೊಂದಿಷ್ಟು  ಶಾಪ... grrrrrrrrr..... ಅದು ಅಲ್ಲದೇ ಬೇರೆ ರಾಜ್ಯದ ಸ್ನೇಹಿತರಿಗೋಸ್ಕರ ಪ್ರತಿ ತಿಂಗಳು "ನ್ಯಾಷನಲ್ ಎಸ್ ಎಂ ಎಸ್ ರಿಚಾರ್ಜ್ ಪ್ಯಾಕೇಜ್  ಬೇರೆ"...ಇಷ್ಟೆಲ್ಲಾ ಆದ್ರೂ ನಾವು ಸ್ನೇಹಿತರು ತುಂಬಾ ಇಷ್ಟ ಪಡುವ ಒಂದು ಸಂಪರ್ಕ ಸಾಧನ... :-)

ದಿನ ಬೆಳಗಾದ್ರೆ 'ಗುಡ್ಮಾರ್ನಿಂಗ್'ನಿಂದ ಪ್ರಾರಂಭ ಆಗೋ ನಾನು ಮತ್ತು ನನ್ನ ಸ್ನೇಹಿತರ ಸಂದೇಶಗಳು ಅವತ್ತಿನ ತಿಂಡಿ,ಊಟ, ಮಕ್ಕಳ ಸ್ಕೂಲ್, ಪಾಠ , ಹೋಂವರ್ಕ್ , ಸಿನೆಮಾ, ಧಾರಾವಾಹಿಗಳು, ಜೋಕ್ಸ್, ಟೂರ್,ವಾಕಿಂಗ್  ...ಬಹುಷಃ  ಯಾವುದೇ ವಿಷಯ ಬಿಡದ ಹಾಗೆ ಚರ್ಚೆ ಮಾಡ್ತಿವಿ. ಸ್ನೇಹಿತರ ಪ್ರೀತಿಯ ಮಾತು, ಜಗಳ, ಸಾಂತ್ವಾನ, ಚರ್ಚೆ,ಕೋಪ ಎಲ್ಲಾ ಈ ಮೆಸೇಜ್ಗಳಲ್ಲಿ ಅಡಗಿರುತ್ತೆ. ರಾತ್ರಿಯ 'ಗುಡ್ ನೈಟ್' ತನಕ ಈ ಸಂದೇಶಗಳು ವಿನಿಮಯ ಆಗ್ತಾ ಇರುತ್ತೆ.




ಈ ಮೆಸೇಜ್ಗಳು ಕೆಲವೊಮ್ಮೆ inboxನಲ್ಲಿ ಅದೆಷ್ಟು ತುಂಬಿರುತ್ತೆ ಅಂದ್ರೆ, ಹೊಸ ಸಂದೇಶಗಳಿಗೆ ಜಾಗವೇ ಇರುವುದಿಲ್ಲ.  ಆದರೂ ಆ ಹಳೆಯ ಮೆಸೇಜ್ಗಳನ್ನು delete ಮಾಡಲು ಮನಸ್ಸು ಬರುವುದಿಲ್ಲ. ನನಗೆ ಕೆಲವೊಮ್ಮೆ ಮನಸ್ಸು ಬೇಸರ ಆದಾಗ, ಒಂಟಿಯಾಗಿ ಇದ್ದಾಗ ಈ inbox open ಮಾಡಿ ಓದಿ, ಹಳೆಯ ನೆನಪುಗಳನ್ನು 'ಮೆಲುಕು' ಹಾಕುವ ಅಭ್ಯಾಸ ಬೇರೆ ಇದೆ.  

ಇನ್ನು ಗಮ್ಮತ್ತೆಂದರೆ ಯಾರಾದ್ರೂ ಸ್ನೇಹಿತರು ಬೇರೆ ಊರಿಗೆ ಪ್ರಯಾಣ ಮಾಡ್ತೇನೆ ಅಂದ್ರೆ, ಆರಾಮಾಗಿ 'ಸುಖಪ್ರಯಾಣ' ಅನ್ನೋ ಒಂದು ಸಂದೇಶ.ಆದರೆ ಅವರು ಆ ಜಾಗ ತಲುಪುವುದರೊಳಗಾಗಿ ಹತ್ತಾರು ಮೆಸೇಜ್ ವಿನಿಮಯ ಆಗಿರುತ್ತೆ. ಎಲ್ಲಿದ್ದೀಯಾ..?? ಇನ್ನು ಎಷ್ಟು ದೂರ...?? ಊಟ ಆಯ್ತಾ..?? ಅಕಸ್ಮಾತ್ ಅಪ್ಪಿತಪ್ಪಿ ಆ ಜಾಗದಲ್ಲಿ ನೆಟ್ವರ್ಕ್ ಇಲ್ಲದೇ, ಅವರ ಪ್ರತಿ ಉತ್ತರ ಬರದಿದ್ದರೆ, ಅಥವಾ ತಡವಾಗಿ ಅವರು ಉತ್ತರಿಸಿದರೆ, ಇನ್ನೂ ಚಿಂತೆ. ದೇವರೆ ...ಆರಾಮಾಗಿ ಅವರು ತಮ್ಮ ತಾಣ ತಲುಪಲಿ ಎನ್ನುವ ಹಾರೈಕೆ, ಪ್ರಾರ್ಥನೆ...

ಇನ್ನು ಈ ಮೆಸೇಜ್ಗಳ ಭಾಷೆಯೇ ಬೇರೆ. ಕನ್ನಡ,ಹಿಂದಿ, ಇಂಗ್ಲೀಶ್ ಜೊತೆಗೆ ನಮ್ಮ ಮಾತೃ ಭಾಷೆ ಎಲ್ಲಾ ಒಟ್ಟಾಗಿ ಟೈಪ್ ಮಾಡಿ send ಮಾಡ್ತಾ ಇರ್ತೇವೆ. 'ok' ಅಂತ ಇರೋದೇ ಎರಡಕ್ಷರ , ಅದನ್ನು short ಮಾಡಿ 'k ' ಅಂತ ಟೈಪ್ ಮಾಡ್ತೇವೆ. 

ಪ್ರತಿ ದಿನಾ ಒಂದಷ್ಟು ಆತ್ಮೀಯ ಸ್ನೇಹಿತರು ಮೆಸೇಜ್ ಮಾಡ್ಕೋತಾ  ಇರ್ತೇವೆ. ಎಲ್ಲಾದರೂ ಅಪ್ಪಿತಪ್ಪಿ ಒಬ್ಬ ಸ್ನೇಹಿತರು  ಒಂದು ದಿನ ನಮ್ಮ ಜೊತೆ ಸಂಪರ್ಕದಲ್ಲಿ ಇಲ್ಲ ಅಂದರೆ ಕಾದುಕಾದು ಕೊನೆಗೆ, 'r u ok..???', "where r u.." ಎಂಬ ಕಾಳಜಿಯ ಸಾಲುಗಳು ನಮ್ಮಿಂದ ಹೊರಡುತ್ತೆ. ಒಬ್ಬ ಸ್ನೇಹಿತರ ಸಂಪರ್ಕ ಒಂದು ದಿನ ತಪ್ಪಿದರೆ ಎನೋ ಕಳೆದುಕೊಂಡ ಭಾವನೆ ...ಮನಸ್ಸೆಲ್ಲಾ 'ಇವತ್ತು ಎನೋ missing...missing ...ಅಂತಾ ಇರತ್ತೆ'. ಕೊನೆಗೆ ಅವರು, "ಹೇ ನಾನು ಇವತ್ತು ತುಂಬಾ ಬ್ಯುಸಿ, catch u later"...ಅಂದ್ರೆ ಸಮಾಧಾನದ ನಿಟ್ಟುಸಿರು. ಅಷ್ಟೊಂದು ಭಾಂಧವ್ಯದ ಭಾವ  ಈ ಸಂದೇಶಗಳ ಮೂಲಕ ನಮ್ಮಲ್ಲಿ ಮೂಡಿಸುತ್ತೆ .

ಇವತ್ತು ಜನವರಿ 2. 2013. ಇವತ್ತಿನಿಂದ ಪುನಃ ನಮ್ಮ ಸ್ನೇಹಿತರ ಗುಂಪಿನಲ್ಲಿ ಚಟುವಟಿಕೆ ಪ್ರಾರಂಭ ಆಗಿದೆ. ಮೆಸೇಜ್ toneಗಳ ಶಬ್ದ ಮನೆಯಲ್ಲಿ ಕೇಳಲಿಕ್ಕೆ ಪ್ರಾರಂಭ ಆಗಿದೆ. ಕಳೆದ  ಎರಡು ದಿನಗಳು, ಎಷ್ಟೋ ವರ್ಷಗಳು ಕಳೆದೆವೆನೋ ಎಂಬ  ಭಾವನೆ ನಮ್ಮ ಮನದಲ್ಲಿ. ಇವತ್ತಿನಿಂದ ಪುನಃ ನಮ್ಮ ತರಲೆ, ತಮಾಷೆ, ಪ್ರೀತಿ ಮುಂದುವರಿಯುತ್ತದೆ. :-)

ಆತ್ಮೀಯ ಸ್ನೇಹಿತರೆ,ನನ್ನ ಬ್ಲಾಗಿಗೆ ಭೇಟಿ ಕೊಟ್ಟ ನಿಮಗೆಲ್ಲರಿಗೂ 'ಹೊಸ ವರ್ಷದ ಶುಭಾಶಯಗಳು'. ಎಲ್ಲರಿಗೂ ಈ ವರ್ಷ ಚೆನ್ನಾಗಿರಲಿ.....

ಪ್ರೀತಿಯಿಂದ 

ಸುದೀಪ.....




Thursday, 13 December 2012

ಸಂಖ್ಯಾ ಮಹಾತ್ಮೆ....


ಸ್ನೇಹಿತರೆ ಇದನ್ನು ಲಘು ಹಾಸ್ಯಬರಹ  ಎಂದು ಓದಿ.. ಇದೇನಪ್ಪ ದೇವಿ ಮಹಾತ್ಮೆ ಇದ್ದಂಗೆ ಸಂಖ್ಯಾ ಮಹಾತ್ಮೆ ಅಂದುಕೊಂಡ್ರಾ... ಅದರ ಕಥೆ ಹೇಳ್ತೀನಿ ಕೇಳಿ...ಮನುಷ್ಯನಿಗೆ ಜೀವನದಲ್ಲಿ ಏನೇನೋ ಹುಚ್ಚು ಇರುತ್ತೆ.. ಕೆಲವು ಅಪಾಯಕಾರಿ ಆದರೆ ಇನ್ನು ಕೆಲವು, ಯಾರಿಗೂ ತೊಂದರೆ ಆಗದೆ ಇರುವಂಥದ್ದು..ಕೆಲವರ  ಹುಚ್ಚು ಕೆಲಸಗಳು, ಬೇರೆಯವರ  ಕಣ್ಣಿಗೆ ಕಾಣ್ಸತ್ತೆ...ಇನ್ನು ಕೆಲವರ ಹುಚ್ಚು ಅವರ  ಮನಸ್ಸಲ್ಲೇ ಇದ್ದು, ಅವರು ಮಾತ್ರ ಅದನ್ನ ಅನುಭವಿಸ್ತಾ ಇರ್ತಾರೆ..

ನನ್ನ ಬಗ್ಗೆ ಹೇಳ್ಬೇಕಂದ್ರೆ, ನನಗೂ ಒಂದು ರೀತಿ ಈ ಹುಚ್ಚು(ಕ್ರೇಜ್) ಇದೆ ಅನ್ನಬಹುದು. ಇದು ಸಹಾ ಒಂದು ರೀತಿ ಮನಸ್ಸಿನ್ನಲ್ಲೇ ಯಾವಾಗಲೂ ಮೂಡೋ ಒಂದು ತರಹದ ನಂಬಿಕೆ,ವಿಶ್ವಾಸ,ಕಲ್ಪನೆ. ಈ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನ್ನಷ್ಟಕ್ಕೆ ನಾನೇ ನಗ್ತೀನಿ... ಇದರಿಂದ ಲಾಭ ಅಥವಾ ನಷ್ಟ ಇಲ್ಲ ಅಂತ ಗೊತ್ತಿದ್ದರೂ ನಿತ್ಯದ ಜೀವನದಲ್ಲಿ ಮುಂದುವರಿತಾ ಹೋಗ್ತಾನೆ  ಇದೆ.... :-)


ನನಗೆ "ಸಂಖ್ಯೆ ಒಂದು" ಅಂದ್ರೆ ಅದೊಂಥರಾ ಪ್ರೀತಿ...ಪ್ರತಿ ಬಾರಿಯೂ, ಎಲ್ಲೆಡೆಯೂ ಅದನ್ನು ಹುಡುಕ್ತಾ ಇರ್ತೇನೆ. ಅದೊಂಥರಾ "ಅದೃಷ್ಟ " ಅಥವಾ "ಲಕ್ಕಿ ನಂಬರ್" ಅಂತಾರಲ್ಲ ಆ ಭಾವನೆ....

 ನಾನು ಹುಟ್ಟಿದ್ದು "ಒಂದನೇ ತಾರೀಕು", ಜೊತೆಗೆ ತಿಂಗಳು ಅಕ್ಟೋಬರ್ ಅಂದ್ರೆ ಹತ್ತನೇ ತಿಂಗಳು ..ಅದರಲ್ಲೂ "ಒಂದು" ಇದೆ..ಹೀಗಾಗಿ ಸಂಖ್ಯೆ ಒಂದು  ನನ್ನನ್ನು ಜನ್ಮದಿಂದ ಹಿಂಬಾಲಿಸಿ ಬರ್ತಾ ಇದೆ ಅನ್ಸುತ್ತೆ...ಬಹುಷಃ  ಇದು ನನ್ನ ಕೊನೆ ಉಸಿರು ಇರೋವರೆಗೋ ಹೀಗೆ ಮುಂದುವರಿತದೋ ಏನೋ ಎಂದು ಕೆಲವೊಮ್ಮೆ ಅನಿಸುವುದುಂಟು.....


ನನಗೆ ನೆನಪಿದ್ದ ಹಾಗೆ ಇದು ತುಂಬಾ ವರ್ಷ ಹಿಂದಿನ ನೆನಪು. ಹತ್ತನೇ ತರಗತಿ ಓದುತ್ತಿದ್ದಾಗ ಮಾರ್ಚ್-ಏಪ್ರಿಲ್ ಪರೀಕ್ಷೆಯಲ್ಲಿ,  ಹಾಲ್ ಟಿಕೆಟ್ ನಂಬರ್ ಸುಮಾರು ಆರು ಅಥವಾ ಏಳು ಸಂಖ್ಯೆಯದಿತ್ತು . ಆ ಪರೀಕ್ಷೆ ಕೊಠಡಿಯಲ್ಲಿ ಕುಳಿತು ಎಲ್ಲಾ ಸಂಖ್ಯೆಯನ್ನು ಕೂಡಿಸಿ ಎಲ್ಲಾದರೂ ಒಂದು ಬರುತ್ತಾ ಎಂದು ಲೆಕ್ಕ ಮಾಡಿದ್ದು ಈಗಲೂ ನೆನಪಿದೆ. ಆ ಸಂಖ್ಯೆ ಒಂದು   ಬಂದರೆ ಪಾಸಾಗ್ತಿನಿ ಅನ್ನೋ ಹುಚ್ಚು ಕಲ್ಪನೆ... :-)

ಈ ಚಾಳಿ ಈಗಲೂ ಮುಂದುವರಿತಾ ಇದೆ. ಇತ್ತೀಚಿನ ನೆನಪೆಂದರೆ, ನನಗೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ . ಪ್ರತಿ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನೇರಪ್ರಸಾರವನ್ನು 'ಈ ಟಿ ವಿಯಲ್ಲಿ " ಪ್ರಸಾರ ಮಾಡುತ್ತಾರೆ. ಕಳೆದ ವರ್ಷವೂ ಮಧ್ಯಾಹ್ನ ಹೀಗೆ ಟಿ ವಿ ನೋಡ್ತಾ ಇದ್ದೆ. ಮಂಗಳಾರತಿಯ ಸಮಯ. ಹಿನ್ನಲೆಯಲ್ಲಿ ಡಾ. ರಾಜಕುಮಾರ್ ಅವರ ಈ ಹಾಡು ಬರ್ತಾ ಇತ್ತು. 

"ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ,ಸ್ಮರಣೆ ಮಾತ್ರದಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ...
ಯೋಗಿ ಬರುವನಮ್ಮ, ಶುಭ ಯೋಗ ಬರುವುದಮ್ಮ , ರಾಘವೇಂದ್ರ ಗುರುರಾಯ ಬಂದು ಭವ  ರೋಗ ಕಳೆವನಮ್ಮ ...
ಮನವ ತೊಳೆಯಿರಮ್ಮ , ಭಕ್ತಿಯ ಮಣೆಯ  ಹಾಕಿರಮ್ಮ , ಧನ್ಯದಿಂದ ಕರೆದಾಗ ಬಂದು ಒಳಗಣ್ಣ ಬೆರೆವನಮ್ಮ ...
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ , ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ ....
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ, ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ.........." 

ಈ ಹಾಡು ಕೇಳ್ತಾ ಆರತಿ ನೋಡ್ತಾ, ಗೋಡೆ ಮೇಲಿದ್ದ ಗಡಿಯಾರ ನೋಡಿದ್ರೆ "ಸರಿಯಾಗಿ  ಒಂದು ಘಂಟೆ ಸಮಯ"...ಅದೇಕೋ ಗುರುರಾಯರ ಆಶೀರ್ವಾದ ಆಯ್ತು ಅನ್ನೋ  ಸಂತೋಷದ ಕಲ್ಪನೆ  .... :-)

ಇನ್ನು ಗಮ್ಮತ್ತಿನ ವಿಷಯ ಅಂದ್ರೆ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕುತೂ ಹಲದಿಂದ  ಗೂಗಲ್ ನಲ್ಲಿ "ನ್ಯುಮರೋಲಾಜಿ" ಬಗ್ಗೆ ಓದಿದ್ದು ..ಸಂಖ್ಯೆ  ೧ ಅಂದರೆ ಸೂರ್ಯ ಅದಕ್ಕೆ ಅಧಿಪತಿ,  ಒಂದನೇ ತಾರೀಕಿನಲ್ಲಿ ಹುಟ್ಟಿದವರಿಗೆ ಯಾವುದು ಶುಭ,ಅಶುಭ ಇತ್ಯಾದಿ  ಅನ್ನುವ ಎಲ್ಲಾ  ವಿಷಯ ಓದಿದ್ದು ... ಈ ವಿಷಯ ನಗು ಬರುವಂಥಹದ್ದೆ  ಆದ್ರೂ ಸತ್ಯ ಘಟನೆ... :-) 

ಪ್ರಪಂಚದಲ್ಲಿ ಎಲ್ಲ ಮನಸ್ಥಿತಿಯ ಜನರು ಇರ್ತಾರೆ ..ಅದರಲ್ಲಿ ನಾನು ಒಬ್ಬಳು. ಸ್ನೇಹಿತರೆ ನನ್ನ ಹಾಗೆ ನಿಮಗೂ ಏನಾದರೂ ಈ ರೀತಿಯ ಅಭ್ಯಾಸಗಳು ಇದ್ದರೆ ಮುಕ್ತವಾಗಿ ಹಂಚಿಕೊಳ್ಳಿ ....

ಪ್ರೀತಿಯಿಂದ

ಸುದೀಪ....






Thursday, 6 December 2012

ನೀಲಿ ಪರ್ಸನಲ್ ಡೈರಿ.....


 ಮೊನ್ನೆ ಮನೇಲಿ ವಾರ್ಡ್ ರೋಬ್ ಕ್ಲೀನ್ ಮಾಡೋವಾಗ ಈ ನೀಲಿ ಪರ್ಸನಲ್ ಡೈರಿ ಸಿಕ್ತು... ಹಾಗೆ ಒಂದೊಂದೆ ಪುಟ ತೆಗಿಬೇಕಾದ್ರೆ ಸಾವಿರಾರು ಹಳೆ ನೆನಪುಗಳು.... ಇದು ಸುಮಾರು ಹದಿನಾಲ್ಕು ವರ್ಷದ ಹಿಂದಿನ ಡೈರಿ... 1998 ಇಸವಿದು....ಅಂಥದ್ದೇನಿದೆ ಇದರಲ್ಲಿ...???!!!!!
  



ಆಗ ನಾನು ಅಂತಿಮ ಬಿಕಾಂ ಓದ್ತಿದ್ದ ವರ್ಷ... ಯಾವಾಗಲು ಕಾಲೇಜ್ನಲ್ಲಿ ಜನವರಿ-ಫೆಬ್ರವರಿ ತಿಂಗಳು ಬಂತು ಅಂದ್ರೆ ಅಂತಿಮ ವರ್ಷದ ವಿಧ್ಯಾರ್ಥಿಗಳೆಲ್ಲ ಒಂದು ರೀತಿ busy ಅಂತಾನೆ ಹೇಳಬಹುದು.. ಅಂತಿಮ ವರ್ಷದ ಪರೀಕ್ಷೆಯ ತಯಾರಿಗಲ್ಲ.... ಸ್ನೇಹಿತರಿಂದ "ಆಟೋಗ್ರಾಫ " ಸಂಗ್ರಹಿಸುವ ಕೆಲಸದಲ್ಲಿ.... :) ಕಾಲೇಜಿನ ಆತ್ಮೀಯ ಜೂನಿಯರ್ಸ್ ಸ್ನೇಹಿತರು  , ಲೆಕ್ಚರರ್ಸ್ ಹತ್ರಾ ಎಲ್ಲಾ ಪುಸ್ತಕ ಕೊಟ್ಟು ಪ್ಲೀಸ್ ಏನಾದ್ರೂ ಬರೆದು ಕೊಡಿ ಎಂಬ ದೃಶ್ಯ ಸಾಮಾನ್ಯ, ಎಲ್ಲರ ಪುಸ್ತಕಗಳಲ್ಲೂ ಅದೇ ಅದೇ ಕಾಪಿ-ಪೇಸ್ಟ್ ವಾಕ್ಯಗಳು ...ಹೊಸದಾಗಿ ಏನು ಬರಿಬೇಕಂತ ತಲೆಗೆ ಹೊಳಿತಾನೆ ಇರಲಿಲ್ಲ     :-)

ನಿಜಕ್ಕೂ ಆ ಸಮಯ  ಸ್ವಚ್ಚಂದ ಜೀವನಕ್ಕೆ ವಿದಾಯ ಹೇಳುವ ಕಾಲಘಟ್ಟ  ಅಂತಾನೆ  ಹೇಳಬಹುದು..ಕಾಲೇಜಿನ ಹುಡುಗಾಟಿಕೆ ಬಿಟ್ಟು ಸಮಾಜದಲ್ಲಿ ಒಂದು ಜವಾಬ್ದಾರಿ ವಹಿಸುವ ವ್ಯಕ್ತಿಗಳಾಗಿ ಮೂಡುವ  ದಿನಗಳವು... 


ಮೊನ್ನೆ ಕೂತುಕೊಂಡು ಡೈರಿ  ತೆರೆದಾಗ ಮೊದಲ ಪುಟದಲ್ಲಿ ನನ್ನ ಅಕ್ಷರಗಳ ಸಾಲುಗಳು ಹೀಗಿತ್ತು....೧೪ ವರ್ಷದ ಹಿಂದೆ ಈ ರೀತಿ ಬರೆಯುವ ಅಭ್ಯಾಸ...ಯಾವಾಗಲು ಕಪ್ಪು ಇಂಕ್ ಪೆನ್ ಉಪಯೋಗಿಸ್ತಿದ್ದೆ... ಅದು ಹೀರೋ ಕಂಪನಿದು... :) 



ಆಗ ಆಟೋಗ್ರಾಫ್ ಪುಸ್ತಕ ಅಂತಂದ್ರೆ ಆ ವರ್ಷದ ಹೊಸ ಡೈರಿಯನ್ನ ನಾವು ಉಪಯೋಗಿಸ್ತಾ ಇದ್ವಿ...ಕೆಲವು ಸ್ನೇಹಿತರು ತಮ್ಮ ಜನ್ಮದಿನಾಂಕದ ಪುಟದಲ್ಲಿ ಬರೆದು ಕೊಡೋವ್ರು....


ಕಾಲೇಜಲ್ಲಿ ನನ್ನ ಐವರು ಸ್ನೇಹಿತೆಯರದ್ದು ಒಂದು ಗುಂಪು... ಯಾವಾಗಲು ತಲೆಹರಟೆ, ಕಿತಾಪತಿ, ನಗು,ನಮ್ಮದೇ ಪ್ರಪಂಚದಲ್ಲಿ ನಾವು....ಸುಂದರ ದಿನಗಳವು.... ನಮ್ಮ ಗ್ರೂಪಿಗೆ ಕೆಲವರು "five stars" ಅಂತ ಕರೆಯೋವ್ರು....ನಮ್ಮ ಎಲ್ಲರ ಪುಸ್ತಕಗಳಲ್ಲೂ vps3 ಅಂತ ಬರ್ದಿರ್ತಿತ್ತು ....ಹಂಗಂದ್ರೆ ವಾಣಿ, ಪ್ರತಿಮ,ಸುಷ್ಮಾ , ಸುಮ ಮತ್ತು ಸುಮತಿ .. :) ಒಬ್ಬರಿಗಿಂತ    ಒಬ್ಬರು ತಲೆಹರಟೆಗಳು ಅನ್ನಬಹುದು...ಆ ವಯಸ್ಸೇ ಹಾಗೆನೋ ....ಈಗೆಲ್ಲ ಬರಿಯ ನೆನಪುಗಳು...  ಈಗ ಐದು ಜನ ಐದು ಊರುಗಳಲ್ಲಿ ....ಅದೆಷ್ಟು ವರ್ಷ ಆಯ್ತೋ ಎಲ್ಲರು ಒಟ್ಟು ಸೇರಿ.... :(

ಆ ನಾಲ್ವರಲ್ಲೂ ನನ್ನ ಆತ್ಮೀಯ ಸ್ನೇಹಿತೆ ಅಂದ್ರೆ "ಸುಮ "...ನನ್ನ ಹೆಸರನ್ನೇ ಅರ್ಧ 
ಹಂಚಿಕೊಂಡಿದ್ದಳು ಸಹಾ.... ಇಬ್ಬರಲ್ಲೂ "ಗುಟ್ಟು " ಎಂಬ ಶಬ್ದವೇ ಇರಲಿಲ್ಲ...ಎಲ್ಲವನ್ನು ಹಂಚಿಕೊಂಡ ಸ್ನೇಹಿತೆ ಎನ್ನಬಹುದು...

ಆಕೆ ಬರೆದುಕೊಟ್ಟ ಕೆಲವು ಸಾಲುಗಳು ಹೀಗಿತ್ತು ನನ್ನ ಪುಸ್ತಕದಲ್ಲಿ... 










ನಂತರದ ಇನ್ನೊಬ್ಬ ಸ್ನೇಹಿತೆ "ಪ್ರತಿಮ "....ನಮ್ಮ ಐವರ ಗುಂಪಿನ ಇನ್ನೊಬ್ಬ ಗೆಳತಿ... ಅವಳ ಕೆಲವು ನೆನಪಿನ ಬುತ್ತಿ  ನನ್ನ ಪುಸ್ತಕದಲ್ಲಿ....







ಇನ್ನೊಬ್ಬ  ಆತ್ಮೀಯ ಸ್ನೇಹಿತೆ ಸುಷ್ಮಾ.... ಕಾಲೇಜ್ ಜೀವನದಲ್ಲಿ ಮರೆಯಲಾಗದ ಗೆಳತಿ...ಅವಳು ಪ್ರೀತಿಯಿಂದ ಬರೆದು ಕೊಟ್ಟ ಅಕ್ಷರಗಳು....





ವಾಣಿ ಎಂಬ ಗೆಳತಿಯ ಹಸ್ತಾಕ್ಷರ ಮಾತ್ರ ಮಿಸ್ಸಿಂಗ್ ಈ ಪುಸ್ತಕದಲ್ಲಿ... :( .ಅಂತಿಮ ಬಿಕಾಂ ಕಲಿಯುವಾಗಲೇ ಮದುವೆಯಾದ ಸ್ನೇಹಿತೆ... :)
 

 ಒಬ್ಬ ಸ್ನೇಹಿತೆ ಮಾತ್ರ ೧ ವರ್ಷದಿಂದ ಜೊತೆಗಿದ್ದರೂ ಆತ್ಮಿಯಳಾಗಿದ್ದು ಮಾತ್ರ ಅಂತಿಮ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ....ನೋಡಲು ಸುಂದರವಾಗಿದ್ದ ಆ ಗೆಳತಿಯ ಮನಸ್ಸು ತುಂಬಾ ಮೃದು, ಕೋಮಲ.... ಆ ಗುಣಕ್ಕೆ ಬಹುಷಃ ಮನಸೋತಿದ್ದೆ ನಾನು... ಅವಳ ಹೆಸರು ಸಾವಿತ್ರಿಯಾಗಿದ್ದರು, ಅದೇಕೋ  ನಾನು ಅವಳನ್ನು ಪ್ರೀತಿಯಿಂದ "ತನುಜ" ಅಂತ ಕರಿತಿದ್ದೆ... ಈಗಲೂ ತುಂಬಾ ನೆನಪಾಗುವ ಮುದ್ದು ಹುಡುಗಿ...ಈಗ ಸಂಪರ್ಕದಲ್ಲೇ ಇಲ್ಲ ಎನ್ನುವ ಬೇಸರ ಕಾಡ್ತಾ ಇರತ್ತೆ....

ಆಕೆ ಬರೆದು ಕೊಟ್ಟ ಕೆಲವು ಸಾಲುಗಳು ಹೀಗಿತ್ತು .....



ಪ್ರೀತಿಯ ಅಣ್ಣ "ಗುರು " ದಾವಣಗೆರೆಯಲ್ಲಿ ಇದ್ದರೂ ಅವನು ಊರಿಗೆ ಬಂದಾಗ ಪುಸ್ತಕ ಕೊಂಡು ಹೋಗಿ ಬರೆದು ಕೊಟ್ಟ ಕೆಲವು ಸಾಲುಗಳು....ಸಂಬಂಧಿಯಾಗಿದ್ದರೂ ಕೇವಲ ಪತ್ರಗಳ ಮೂಲಕವೇ ನಮ್ಮಿಬ್ಬರ  ಆತ್ಮೀಯತೆ.... ನನ್ನನ್ನು "ದೀಪು"  ಎಂದು ಕರೀತಿದ್ದ ....... ಹೀಗಿತ್ತು ಅವನ ಪದಗಳು ನನ್ನ ಡೈರಿಯಲ್ಲಿ ....











ನಮ್ಮ ಪ್ರಾಧ್ಯಾಪಕರಾದ "ನಟರಾಜ್ ಅರಳಸುರುಳಿ" ಅವರು ಬರೆದುಕೂಟ್ಟ ಪುಟವಿದು...ಅವರೊಬ್ಬ cartoonist ಸಹಾ..... :)


ಇನ್ನು ಅದೆಷ್ಟೋ ಸ್ನೇಹಿತರ ಸಾಲುಗಳಿವೆ ಈ ಡೈರಿಯಲ್ಲಿ....ತುಂಬಾ ಪ್ರೀತಿಪಾತ್ರರ ನೆನಪನ್ನ ಮಾತ್ರ ಇಲ್ಲಿ ನೆನೆಸಿಕೊಂಡಿದ್ದೇನೆ....

ಹೀಗೆ ಒಂದು ಪುಸ್ತಕ ಕಾಲೇಜು ದಿನಗಳ ನೂರಾರು ನೆನಪುಗಳನ್ನು ಹೊತ್ತು  ತಂದು ಬಿಡ್ತು .... ಆಗೆಲ್ಲ ನಮ್ಮ ಸೀನಿಯರ್ ವಿಧ್ಯಾರ್ಥಿಗಳು, ಪ್ರತಿವರ್ಷ  ಆಟೋಗ್ರಾಪ್ ಹಾಕಿಸಕೊಳ್ತಾರೆ ...ಹಾಗೆ ನಾವು ಅವರನ್ನ ಫಾಲೋ ಮಾಡೋದು...ಅಂತ ತಿಳಿದಿದ್ದ ಹುಡುಗಾಟದ ದಿನಗಳವು... ಆದರೆ ಅದರ ಬೆಲೆ ಏನು ಅಂತ ನಿಜ ಅರ್ಥದಲ್ಲಿ ತಿಳಿದಿದ್ದು ಈಗಲೇ...ಎಷ್ಟೊಂದು ಹಳೆಯ ಮಧುರ ನೆನಪನ್ನು ಈ ಪುಸ್ತಕದ ಮುಖಾಂತರ ಸವಿಬಹುದು ಎಂಬ ಚಂದದ ಪಾಠ ಕಲಿಸಿಕೊಟ್ಟು ಬಿಡ್ತು... :-) 

ಪ್ರೀತಿಯಿಂದ

ಸುದೀಪ....