Monday, 14 January 2013

ಒಬಾಮ.....!!!!!ನನ್ನ ಅಮ್ಮನ ಮನೆ ಇರೋದು ಉಡುಪಿ ಹತ್ತಿರ ಇರೋ ಕಡಿಯಾಳಿ ಏರಿಯಾದಲ್ಲಿ. ಅವರ ಕ್ರಾಸ್ನಲ್ಲಿ ಸುಮಾರು 10-12 ಮನೆ ಇದೆ. ಆ ಬೀದಿಗೆಲ್ಲ ಒಬ್ಬ ಮುದ್ದು ರಾಜಕುಮಾರ ಇದ್ದಾನೆ. ಅವನೇ 'ಒಬಾಮ'. ಎಲ್ಲರ ಪ್ರೀತಿಯ ಡುಮ್ಮ ನಾಯಿ. ಎಲ್ಲರ ಮನೆಯಲ್ಲೂ ಸ್ವಲ್ಪ ಸ್ವಲ್ಪ ತಿಂಡಿ, ಊಟ ಮಾಡಿ ಜೀವನ ಸಾಗಿಸ್ತಾ ಇರೋ ನಿರುಪದ್ರವ ಪ್ರಾಣಿ   . ಇವನೆಂದರೆ ಎಲ್ರಿಗೂ ವಿಪರೀತ ಪ್ರೀತಿ. ಆ ಬೀದಿಯ ಮಕ್ಕಳೆಲ್ಲ ಸೇರಿ ಅವನಿಗೆ 'ಒಬಾಮ' ಅಂತ ಹೆಸರಿಟ್ಟಿದ್ದಾರೆ. ಆದರೆ ನನ್ನ ತಂದೆ ಮಾತ್ರ ಅವನನ್ನು 'ಟೈಗರ್' ಅಂತ ಕರೀತಿದ್ದರು. ನೋಡೋಕ್ಕೆ ದೈತ್ಯ ಆಕಾರ. ಯಾರಾದ್ರೂ ಹೊಸಬರು ನೋಡಿದ್ರೆ ಹೆದರಿಕೊಳ್ಬೇಕು ಹಂಗಿದೆ ಅವನ ಜೀವ. ಸುಮಾರು ಎರಡು ವರ್ಷ ಆಗಿದೆ ಅವನು ಆ ಏರಿಯಾಗೆ ಬಂದು. ಬಂದ ದಿನದಿಂದ ಎಲ್ಲರ ಪ್ರೀತಿ ಸಂಪಾದಿಸಿದ್ದಾನೆ.

ದಿನಾ ನನ್ನ ಅಮ್ಮ ಬೆಳಿಗ್ಗೆ ಗೇಟಿಗೆ ಹಾಕಿದ್ದ  ಹಾಲಿನ ಚೀಲದಿಂದ ಹಾಲಿನ  ಪ್ಯಾಕೆಟ್  ತೆಗೆಯುವಾಗ, ಬಾಗಿಲಿನ  ಶಬ್ದಕ್ಕೆ ಒಬಾಮ ಹಾಜರ್. ಮುಂದಿನ ಎರಡು  ಕಾಲುಗಳನ್ನು ಉದ್ದಕ್ಕೆ ಚಾಚಿ ನಮಸ್ಕಾರ ಅನ್ನೋ ಹಾಗೆ ಫೋಸ್ ಕೊಡ್ತಾನೆ.  ನಂತರ ಅಮ್ಮ ಅವನಿಗೆ ಒಳಗೆ ಹೋಗಿ ಏನಾದರೂ ತಿಂಡಿ ಕೊಟ್ಟ ಮೇಲೆ ಅಸಾಮಿ ನಾಪತ್ತೆ.... :))


ಅವನಿಗೆ ಎರಡು ವಿಷಯಗಳೆಂದರೆ ಇಷ್ಟ ಆಗಲ್ಲ. ಒಂದು ಮಳೆ, ಇನ್ನೊಂದು  ಪಟಾಕಿ. ಮಳೆಗಾಲದಲ್ಲಿ ಎಷ್ಟೇ ಹಸಿವಾದರೂ ಯಾರು ಕರೆದ್ರೂ ಹೋಗಲ್ಲ.  ಮೈ ಒದ್ದೆ ಮಾಡಿಕೊಳ್ಳಲ್ಲ. ತುಂಬಾ ಜಾಣ. ಮಳೆ ನಿಂತ ಮೇಲೆ ಹೋಗಿ ತಿಂದು ಮಲಗ್ತಾನೆ. ಇನ್ನು ದೀಪಾವಳಿ  ಸಮಯದಲ್ಲಿ ಸಂಜೆ ಮಕ್ಕಳು ಪಟಾಕಿ ಹಚ್ಚಲಿಕ್ಕೆ ಶುರು ಮಾಡಿದ್ರೆ  'ಒಬಾಮನ' ಪತ್ತೆಯೇ ಇರೋದಿಲ್ಲ. ಹೆದರಿಕೆಗೆ ಎಲ್ಲಿ ಅಡಗಿ ಕೂತ್ಕೊತಾನೋ ಗೊತ್ತಿಲ್ಲ.. ದೀಪಾವಳಿ ಹಬ್ಬ ಮುಗಿಯುವವರೆಗೂ ಅವನಿಗೆ ಇದೊಂದು ದೊಡ್ಡ ಶಿಕ್ಷೆ.

ಆ ಬೀದಿಯಲ್ಲಿ ಒಟ್ಟು 3 ಮನೆಗಳಲ್ಲಿ ನಾಯಿಗಳಿವೆ. ಅವುಗಳ ಹೆಸರು ಮಜವಾಗಿದೆ. ಒಂದು 'ಶಾಂಡು',   ಒಳ್ಳೆ ಜಾತಿಯ ದೊಡ್ಡ ನಾಯಿ. ಎರಡನೆಯದು 'ಡ್ಯಾನಿ' ಸಣ್ಣ ಕಾಲಿನ ಪುಟ್ಟ ನಾಯಿ. ಆದರೆ ಅದರ ಕಂಠ ಮಾತ್ರ ಅಸಾಧ್ಯ. ಕಿವಿ ನೋಯೋ ಹಾಗೆ ಬೊಗಳುತ್ತೆ. ಮೂರನೆಯದು 'ಬ್ಲಾಕಿ' ಪಾಪದ ಹೆಣ್ಣು ನಾಯಿ. ಇದರಲ್ಲಿ 'ಶಾಂಡು' ಮತ್ತು 'ಡ್ಯಾನಿ' ಬದ್ಧ ವೈರಿಗಳು. ಇಬ್ಬರೂ ಅಕ್ಕಪಕ್ಕದ ಮನೆಯಲ್ಲಿ ಇರೋದು. ಎಲ್ಲಾದರೂ ಅವರ ಮಾಲೀಕರು ಒಂದೇ  ಸಮಯಕ್ಕೆ ಅವುಗಳನ್ನು 'ವಾಕಿಂಗ್' ಕರೆದುಕೊಂಡು ಹೋಗುವಾಗ, ಅಕಸ್ಮಾತ್ ಎದುರು ಬದುರು ಸಿಕ್ಕಿದ್ರೆ, ಅಷ್ಟೇ ಕಥೆ...ಇಡೀ  ಬೀದಿ ತುಂಬಾ ಇವುಗಳ ಜಗಳ. ಮಾಲಿಕರು ಬೆಲ್ಟ್ ಹಿಡಿದುಕೊಂಡಿದ್ದರು, ಒಬ್ಬರ ಮೇಲೊಬ್ಬರು ಹಾರಾಡಿ, ಮಾಲಿಕರನ್ನು ಜೊತೆಗೆ  ಎಳೆದಾಡಿ  ಜಗಳಕ್ಕೆ ನಿಲ್ಲುತ್ವೆ. ಅವರ ಮಾಲಿಕರಿಗಂತು ಸುಸ್ತು ಹೊಡೆಸಿ ಬಿಡುತ್ವೆ. ಅವರಿಗೆ ಅವುಗಳನ್ನು ಎಳೆದುಕೊಂಡು ಹೋಗಿ ಮನೆಯ ಗೇಟ್ ಒಳಗೆ ಸೇರಿಸೋದ್ರಲ್ಲಿ ಸಾಕಾಗಿಬಿಡುತ್ತೆ. :-)

ಆದರೆ ನಮ್ಮ 'ಒಬಾಮ' ಎಲ್ಲರ ಫ್ರೆಂಡ್. 'ಶಾಂಡು' ವಾಕಿಂಗ್ ಹೋಗೋವಾಗ, ಅವ್ನ ಜೊತೆ ಇವನು ಹೋಗ್ತಾನೆ. ಸ್ವಲ್ಪ ಹೊತ್ತು ತಿರುಗಾಡಿ ಬಂದ ನಂತರ 'ಶಾಂಡು' ಮಾಲೀಕರು ರಸ್ತೆಯ ಧೂಳು ಮನೆ ಒಳಗೆ ಬರದಂತೆ ಅವನ ಕಾಲುಗಳನ್ನು ನಲ್ಲಿ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ, ಅವನ ಮೊದಲ ಮಹಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋದ್ರೆ, 'ಒಬಾಮ' ಗೇಟ್ನ ಹೊರಭಾಗದಲ್ಲಿ ರೆಸ್ಟ್ ತೆಗೊಳ್ತಾನೆ.

ಇತ್ತೀಚೆಗಂತೂ 'ಒಬಾಮನಿಗೆ' ವಿಪರೀತ ಆಲಸ್ಯ. ಎಲ್ಲರ ಮನೆಯ ಬಿಸ್ಕಿಟ್, ರಸ್ಕ್, ದೋಸೆ, ಬೋಂಡಾ, ಹೋಳಿಗೆ, ಅನ್ನ-ಸಾರು, ಸಾಂಬಾರ್ ಏನೆಲ್ಲಾ ಸಿಗುತ್ತೋ ಎಲ್ಲಾ ತಿಂದು, ಎದುರು ಮನೆ ಅಂಕಲ್ ಇಡುವ ನೀರು ಕುಡಿದು  ವಿಪರೀತ ಮೈ ಬೆಳೆಸಿಕೊಂಡಿದ್ದಾನೆ.  ಅವನಿಗೆ ಈಗ ಒಂದು ನಿಮಿಷ ನಿಲ್ಲಲಿಕ್ಕೆ ಕೂಡೋದಿಲ್ಲ. ಎಲ್ಲಿ ಸಿಗುತ್ತೋ ಅಲ್ಲಿ ಮಲಗೋದೆ ಜಾಸ್ತಿ ಆಗಿದೆ. ವ್ಯಾಯಾಮಾನೇ ಇಲ್ಲ ಅವನ ದೇಹಕ್ಕೆ. ಇನ್ನು ಗಮ್ಮತ್ತೆಂದರೆ ಇವನನ್ನು ಯಾರೂ ಕರೀಬೇಕಂತ  ಇಲ್ಲ. ಸುಮ್ನೆ ಅವರ ಗೇಟಿಗೆ ಸ್ವಲ್ಪ ಶಬ್ದ ಮಾಡಿದ್ರೆ ಸಾಕು. ಕಿವಿ ಚುರುಕಾಗಿ, ಅದು ಅವನಿಗೆ ತಿನ್ನಲಿಕ್ಕೆ ಕರಿಯೋ ಸಿಗ್ನಲ್ ಅಂತ ಅವನಿಗೆ ಗೊತ್ತು. ಸೀದಾ ಓಡಿ  ಹೋಗಿ ಕೊಟ್ಟಿದ್ದನ್ನು ತಿಂದು ಆರಾಮಾಗಿರ್ತಾನೆ. :-)ಇವನಿಗೆ ಒಬ್ಬ ಎದುರು ಮನೆ ಆಂಟಿ 'ಶೇಕ್ ಹ್ಯಾಂಡ್' ಮಾಡೋಕ್ಕೆ ಕಲ್ಸಿದ್ದಾರೆ. ಅವರ ಮನೆಗೆ ಹೋಗಿ ಕೆಲವೊಮ್ಮೆ ಅವರ ಮಗನ ಜೊತೆ ಆಟ ಆಡ್ತಾನೆ. ಇನ್ನೊಬ್ಬ ಆಂಟಿ ಮತ್ತು ಇವನ ಪ್ರೀತಿ ಇನ್ನು ಗಮ್ಮತ್ತಾಗಿರುತ್ತೆ. ಅವರು ಇವನ ಜೊತೆ ಮಾತಾಡ್ತಾರೆ. ಹೇಗಂದ್ರೆ,..."ಒಬಾಮ, ನಗೋ ..ಪ್ಲೀಸ್ ...ಕಣೋ..." ಅಂತ. ಇವನು ಅದೇನು ನಗ್ತಾನೋ , ಅವರಿಗೆ ಅದೇನು ಅರ್ಥ ಆಗುತ್ತೋ ಗೊತ್ತಿಲ್ಲ.  :-)

ಆ ಬೀದಿಗೆ ಒಬ್ಬ ಭಿಕ್ಷುಕರು, ಒಬ್ಬ ಸೇಲ್ಸ್ ಮ್ಯಾನ್ ಬರಲಿಕ್ಕೆ ಬಿಡೋದಿಲ್ಲ. ಅವನಿಗೆ ಮುನ್ಸಿಪಾಲ್ಟೀಯ ಕಸ ತೆಗೆದುಕೊಂಡು ಹೋಗುವ ವಾಹನ ಬಂದರೆ ಭಯಂಕರ ಸಿಟ್ಟು. ಅವರು ಹೋಗುವ ತನಕ ಬೊಗಳ್ತಾನೆ.

ನನ್ನ ಅಮ್ಮನ ಮನೆಗೆ ಯಾರೇ ಬಂದ್ರೂ ಅವರನ್ನು ಮೂಸಿ ನೋಡಿ 'ಫ್ರೆಂಡ್' ಮಾಡ್ಕೋತಾನೆ. ಅವರೇ ಇವನನ್ನು ನೋಡಿ ಹೆದರಬೇಕು.ಯಾವಾಗಲೂ ಅಮ್ಮನ ಮನೆಯ ಗೇಟ್ನ ಹೊರ ಭಾಗದ ಕಲ್ಲಿನ ಚಪ್ಪಡಿ ಯಲ್ಲಿ ಮಲಗಿ,ನಮ್ಮನ್ನು ಆಚೆ ಈಚೆ ಹೋಗದಂತೆ ಅಡ್ಡ ಮಾಡ್ತಾನೆ. ಅವನನ್ನು ಎಬ್ಬಿಸಲು ಸೋತು, ನಾವೇ ಅವನ ಮೇಲಿಂದ ಜಂಪ್ ಮಾಡ್ಬೇಕು ಅಥವಾ ಇನ್ನೊಂದು  ದೊಡ್ಡ  ಗೇಟ್ ನಿಂದ ಹೊರ ಹೋಗಬೇಕು. ಹಾಗೆಲ್ಲ ಕೆಲವೊಮ್ಮೆ ತೊಂದರೆ ಕೊಡ್ತಾನೆ ... :-)
ಆದರೂ ಎಲ್ಲರೂ ಅವನನ್ನು ತುಂಬಾ ಪ್ರೀತಿಸ್ತೀವಿ. ಅಮ್ಮನ ಮನೆಗೆ ಹೋದಾಗ ಅವನು ನೋಡಕ್ಕೆ ಸಿಗದಿದ್ರೆ ಬೇಜಾರಾಗುತ್ತೆ. ಎಲ್ಲಿ ಹೋಗಿದ್ದಾನೆ ಇವತ್ತು ಅನ್ನೋ ಚರ್ಚೆ ನಮ್ಮ ನಮ್ಮಲ್ಲೇ.....

ಹಿಂಗೆಲ್ಲಾ ಇದೆ ನಮ್ಮ 'ಒಬಾಮನ ಕಥೆ...' ಏನೇ ಆದ್ರೂ ಮನುಷ್ಯರಿಗಿಂತ ಪ್ರಾಣಿಗಳಿಗೆ ಪ್ರೀತಿ ಜಾಸ್ತಿ. ನಾವು ಒಂದು ಪಟ್ಟು ಪ್ರೀತಿ ತೋರ್ಸಿದ್ರೆ, ಅವು ನಮಗೆ ಹತ್ತು ಪಟ್ಟು ತಿರುಗಿ ಮುದ್ದು ಮಾಡ್ತಾವೆ... ಕೊನೆಯಲ್ಲಿ ಹೇಳೋದಿಷ್ಟೇ "ಲವ್ ...ಯು...ಒಬಾಮ...." :-)

ಇವತ್ತು ಬೇರೆ "ಸಂಕ್ರಾಂತಿ ಹಬ್ಬ". ನನ್ನ ಬ್ಲಾಗಿಗೆ ಭೇಟಿ ಕೊಟ್ಟ ಎಲ್ಲಾ ಸ್ನೇಹಿತರಿಗೂ ಹಬ್ಬದ ಹಬ್ಬದ ಶುಭಾಶಯಗಳು. "ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ". ಎಲ್ಲರೂ ಚೆನ್ನಾಗಿರಿ...

ಪ್ರೀತಿಯಿಂದ 

ಸುದೀಪ ...

14 comments:

 1. channgide chanide ... nimagau saha

  WISH U A VERY HAPPY MAKARA
  SANKRANTI.

  ReplyDelete
  Replies
  1. ಧನ್ಯವಾದಗಳು...ಮಹೇಶ್....

   Delete
 2. ಮೊದಲನೆಯದಾಗಿ ಸಹೋದರಿ ನಿಮಗೆ ನಿಮ್ಮ ಕುಟುಂಬಕ್ಕೆ ಸಂಕ್ರಾಂತಿಯ ಹಬ್ಬದ ಶುಭಾಶಯಗಳು..ನಿಮ್ಮ ವಿಚಾರ ಲಹರಿ ಪ್ರತಿಯೊಂದು ಬಾರಿಯೂ ಹೊಸ ಹೊಸ ಊಹಿಸಲಾಗದ ವಿಷಯಗಳ ಮೇಲೆ ಬರೆಯುವ ಪರಿ ಇಷ್ಟವಾಗುತ್ತಾ ಇದು ಹೇಗೆ ನಿಮಗೆ ಸಾಧ್ಯ ಎನ್ನುವ ಆಲೋಚನೆ ಬಂದು ಬ್ಲಾಗಿನ ಹೆಸರನ್ನು ನೋಡುತ್ತೇನೆ.."ದೀಪ"ವೆ ಬೆಳಕು ಕೊಡುತ್ತದೆ ಇನ್ನೂ "ಸುದೀಪ"..ಒಳ್ಳೆಯ ಬೆಳಕನ್ನೇ ಕೊಡುತ್ತದೆ...ಇನ್ನು ನಿಮ್ಮ ಹೆಸರಲ್ಲಿ ಒಳ್ಳೆಯ "ಮತಿ" (ಸುಮತಿ) ಅದಕ್ಕೆ ಜ್ಞಾನ ಬೆಳಕು ತೋರುವ "ದೀಪ" ಇರುವಾಗ ಇವೆಲ್ಲ ನಿಮಗೆ ಮಾತ್ರ ಸಾಧ್ಯ ಎನ್ನಿಸಿತು...ಸುಂದರವಾಗಿದೆ ಮಾನವನ ಮೊದಲ ಗೆಳೆಯ ಶ್ವಾನದ ಬಗ್ಗೆ ಹರಿದ ಸುಮಧುರ ಲೇಖನ...ಒಳ್ಳೆಯ ಲೇಖನ ಕೊಟ್ಟ ನಿಮಗೆ ಅಭಿನಂದನೆಗಳು...

  ReplyDelete
  Replies
  1. ನಿಮ್ಮ ಚಂದದ ಪ್ರತಿಕ್ರಿಯೆಗೆ ತುಂಬು ಹೃದಯದ ವಂದನೆಗಳು, ಶ್ರೀಕಾಂತ್.. :))

   Delete
 3. ಹ ಹ ಹ ಚೆನ್ನಾಗಿದೆ ಒಬಾಮನ ಪುರಾಣ. ನಾಯಿಯ ನೀಯತ್ತೆ ಹಾಗೆ ಅನ್ನ ಕೊಟ್ಟವರನ್ನು ಮರೆಯೋದಿಲ್ಲ , ಪ್ರಾಣ ತೆತ್ತಾದರೂ ಅವರ ಸೇವೆ ಮಾಡುತ್ತವೆ. ನಿಮ್ಮ ಮನೆಯ ಒಬಾಮನ ಗುಣ ಇಷ್ಟಾ ಆಯ್ತು. ನಿಮ್ಮ ಕಥೆ ಹೇಳುವ ಶೈಲಿ ಇಷ್ಟಾ ಆಗುತ್ತೆ. ನಿಮಗೆ ಹಾಗು ನಿಮ್ಮ ಮನೆಯ ಎಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯಗಳು.

  ReplyDelete
  Replies
  1. ಧನ್ಯವಾದಗಳು ಬಾಲು ಸರ್... :-)

   Delete
 4. ಒಬಾಮ ಪುರಾಣ ಚೆನ್ನಾಗಿದೆ. ಬರವಣಿಗೆಯಲ್ಲಿ ಓದಿಸಿಕೊಂಡು ಹೋಗುವ ಆತ್ಮೀಯತೆ ಇದೆ. ಸೂಪರ್...

  ReplyDelete
  Replies
  1. ಧನ್ಯವಾದ...ಬದರಿ ಭಾಯ್... :-)

   Delete
 5. chennagiddu sumati akka... nammaneya changu nenapaada..:)

  ReplyDelete
 6. :)
  Obaama!! good.
  Good that you take every small thing in your life as interesting and narrate in your blog!! liked it.

  ReplyDelete
  Replies
  1. Thank u so much Santhosh for your words... :))

   Delete
 7. ಸಖತ್ತಾಗಿದೆ ದೀಪಕ್ಕ.. ಬ್ಲಾಗಿಲಲ್ಲಿ ಬಂದಿದ್ದಕ್ಕೆ ಅಭಿನಂದನೆಗಳು :-)
  https://www.facebook.com/photo.php?fbid=534149246608590&set=a.341574982532685.78542.100000405589483&type=1&theater
  ನಿಮ್ಮದೇ ಲೇಖನದ ಲಿಂಕು ಮೇಲಿದೆ :-)

  ReplyDelete
  Replies
  1. ಧನ್ಯವಾದಗಳು ಪ್ರಶಸ್ತಿ ಇಷ್ಟಪಟ್ಟಿದ್ದಕ್ಕೆ .... :-)

   Delete