Thursday, 6 December 2012

ನೀಲಿ ಪರ್ಸನಲ್ ಡೈರಿ.....


 ಮೊನ್ನೆ ಮನೇಲಿ ವಾರ್ಡ್ ರೋಬ್ ಕ್ಲೀನ್ ಮಾಡೋವಾಗ ಈ ನೀಲಿ ಪರ್ಸನಲ್ ಡೈರಿ ಸಿಕ್ತು... ಹಾಗೆ ಒಂದೊಂದೆ ಪುಟ ತೆಗಿಬೇಕಾದ್ರೆ ಸಾವಿರಾರು ಹಳೆ ನೆನಪುಗಳು.... ಇದು ಸುಮಾರು ಹದಿನಾಲ್ಕು ವರ್ಷದ ಹಿಂದಿನ ಡೈರಿ... 1998 ಇಸವಿದು....ಅಂಥದ್ದೇನಿದೆ ಇದರಲ್ಲಿ...???!!!!!
  ಆಗ ನಾನು ಅಂತಿಮ ಬಿಕಾಂ ಓದ್ತಿದ್ದ ವರ್ಷ... ಯಾವಾಗಲು ಕಾಲೇಜ್ನಲ್ಲಿ ಜನವರಿ-ಫೆಬ್ರವರಿ ತಿಂಗಳು ಬಂತು ಅಂದ್ರೆ ಅಂತಿಮ ವರ್ಷದ ವಿಧ್ಯಾರ್ಥಿಗಳೆಲ್ಲ ಒಂದು ರೀತಿ busy ಅಂತಾನೆ ಹೇಳಬಹುದು.. ಅಂತಿಮ ವರ್ಷದ ಪರೀಕ್ಷೆಯ ತಯಾರಿಗಲ್ಲ.... ಸ್ನೇಹಿತರಿಂದ "ಆಟೋಗ್ರಾಫ " ಸಂಗ್ರಹಿಸುವ ಕೆಲಸದಲ್ಲಿ.... :) ಕಾಲೇಜಿನ ಆತ್ಮೀಯ ಜೂನಿಯರ್ಸ್ ಸ್ನೇಹಿತರು  , ಲೆಕ್ಚರರ್ಸ್ ಹತ್ರಾ ಎಲ್ಲಾ ಪುಸ್ತಕ ಕೊಟ್ಟು ಪ್ಲೀಸ್ ಏನಾದ್ರೂ ಬರೆದು ಕೊಡಿ ಎಂಬ ದೃಶ್ಯ ಸಾಮಾನ್ಯ, ಎಲ್ಲರ ಪುಸ್ತಕಗಳಲ್ಲೂ ಅದೇ ಅದೇ ಕಾಪಿ-ಪೇಸ್ಟ್ ವಾಕ್ಯಗಳು ...ಹೊಸದಾಗಿ ಏನು ಬರಿಬೇಕಂತ ತಲೆಗೆ ಹೊಳಿತಾನೆ ಇರಲಿಲ್ಲ     :-)

ನಿಜಕ್ಕೂ ಆ ಸಮಯ  ಸ್ವಚ್ಚಂದ ಜೀವನಕ್ಕೆ ವಿದಾಯ ಹೇಳುವ ಕಾಲಘಟ್ಟ  ಅಂತಾನೆ  ಹೇಳಬಹುದು..ಕಾಲೇಜಿನ ಹುಡುಗಾಟಿಕೆ ಬಿಟ್ಟು ಸಮಾಜದಲ್ಲಿ ಒಂದು ಜವಾಬ್ದಾರಿ ವಹಿಸುವ ವ್ಯಕ್ತಿಗಳಾಗಿ ಮೂಡುವ  ದಿನಗಳವು... 


ಮೊನ್ನೆ ಕೂತುಕೊಂಡು ಡೈರಿ  ತೆರೆದಾಗ ಮೊದಲ ಪುಟದಲ್ಲಿ ನನ್ನ ಅಕ್ಷರಗಳ ಸಾಲುಗಳು ಹೀಗಿತ್ತು....೧೪ ವರ್ಷದ ಹಿಂದೆ ಈ ರೀತಿ ಬರೆಯುವ ಅಭ್ಯಾಸ...ಯಾವಾಗಲು ಕಪ್ಪು ಇಂಕ್ ಪೆನ್ ಉಪಯೋಗಿಸ್ತಿದ್ದೆ... ಅದು ಹೀರೋ ಕಂಪನಿದು... :) ಆಗ ಆಟೋಗ್ರಾಫ್ ಪುಸ್ತಕ ಅಂತಂದ್ರೆ ಆ ವರ್ಷದ ಹೊಸ ಡೈರಿಯನ್ನ ನಾವು ಉಪಯೋಗಿಸ್ತಾ ಇದ್ವಿ...ಕೆಲವು ಸ್ನೇಹಿತರು ತಮ್ಮ ಜನ್ಮದಿನಾಂಕದ ಪುಟದಲ್ಲಿ ಬರೆದು ಕೊಡೋವ್ರು....


ಕಾಲೇಜಲ್ಲಿ ನನ್ನ ಐವರು ಸ್ನೇಹಿತೆಯರದ್ದು ಒಂದು ಗುಂಪು... ಯಾವಾಗಲು ತಲೆಹರಟೆ, ಕಿತಾಪತಿ, ನಗು,ನಮ್ಮದೇ ಪ್ರಪಂಚದಲ್ಲಿ ನಾವು....ಸುಂದರ ದಿನಗಳವು.... ನಮ್ಮ ಗ್ರೂಪಿಗೆ ಕೆಲವರು "five stars" ಅಂತ ಕರೆಯೋವ್ರು....ನಮ್ಮ ಎಲ್ಲರ ಪುಸ್ತಕಗಳಲ್ಲೂ vps3 ಅಂತ ಬರ್ದಿರ್ತಿತ್ತು ....ಹಂಗಂದ್ರೆ ವಾಣಿ, ಪ್ರತಿಮ,ಸುಷ್ಮಾ , ಸುಮ ಮತ್ತು ಸುಮತಿ .. :) ಒಬ್ಬರಿಗಿಂತ    ಒಬ್ಬರು ತಲೆಹರಟೆಗಳು ಅನ್ನಬಹುದು...ಆ ವಯಸ್ಸೇ ಹಾಗೆನೋ ....ಈಗೆಲ್ಲ ಬರಿಯ ನೆನಪುಗಳು...  ಈಗ ಐದು ಜನ ಐದು ಊರುಗಳಲ್ಲಿ ....ಅದೆಷ್ಟು ವರ್ಷ ಆಯ್ತೋ ಎಲ್ಲರು ಒಟ್ಟು ಸೇರಿ.... :(

ಆ ನಾಲ್ವರಲ್ಲೂ ನನ್ನ ಆತ್ಮೀಯ ಸ್ನೇಹಿತೆ ಅಂದ್ರೆ "ಸುಮ "...ನನ್ನ ಹೆಸರನ್ನೇ ಅರ್ಧ 
ಹಂಚಿಕೊಂಡಿದ್ದಳು ಸಹಾ.... ಇಬ್ಬರಲ್ಲೂ "ಗುಟ್ಟು " ಎಂಬ ಶಬ್ದವೇ ಇರಲಿಲ್ಲ...ಎಲ್ಲವನ್ನು ಹಂಚಿಕೊಂಡ ಸ್ನೇಹಿತೆ ಎನ್ನಬಹುದು...

ಆಕೆ ಬರೆದುಕೊಟ್ಟ ಕೆಲವು ಸಾಲುಗಳು ಹೀಗಿತ್ತು ನನ್ನ ಪುಸ್ತಕದಲ್ಲಿ... 


ನಂತರದ ಇನ್ನೊಬ್ಬ ಸ್ನೇಹಿತೆ "ಪ್ರತಿಮ "....ನಮ್ಮ ಐವರ ಗುಂಪಿನ ಇನ್ನೊಬ್ಬ ಗೆಳತಿ... ಅವಳ ಕೆಲವು ನೆನಪಿನ ಬುತ್ತಿ  ನನ್ನ ಪುಸ್ತಕದಲ್ಲಿ....ಇನ್ನೊಬ್ಬ  ಆತ್ಮೀಯ ಸ್ನೇಹಿತೆ ಸುಷ್ಮಾ.... ಕಾಲೇಜ್ ಜೀವನದಲ್ಲಿ ಮರೆಯಲಾಗದ ಗೆಳತಿ...ಅವಳು ಪ್ರೀತಿಯಿಂದ ಬರೆದು ಕೊಟ್ಟ ಅಕ್ಷರಗಳು....

ವಾಣಿ ಎಂಬ ಗೆಳತಿಯ ಹಸ್ತಾಕ್ಷರ ಮಾತ್ರ ಮಿಸ್ಸಿಂಗ್ ಈ ಪುಸ್ತಕದಲ್ಲಿ... :( .ಅಂತಿಮ ಬಿಕಾಂ ಕಲಿಯುವಾಗಲೇ ಮದುವೆಯಾದ ಸ್ನೇಹಿತೆ... :)
 

 ಒಬ್ಬ ಸ್ನೇಹಿತೆ ಮಾತ್ರ ೧ ವರ್ಷದಿಂದ ಜೊತೆಗಿದ್ದರೂ ಆತ್ಮಿಯಳಾಗಿದ್ದು ಮಾತ್ರ ಅಂತಿಮ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ....ನೋಡಲು ಸುಂದರವಾಗಿದ್ದ ಆ ಗೆಳತಿಯ ಮನಸ್ಸು ತುಂಬಾ ಮೃದು, ಕೋಮಲ.... ಆ ಗುಣಕ್ಕೆ ಬಹುಷಃ ಮನಸೋತಿದ್ದೆ ನಾನು... ಅವಳ ಹೆಸರು ಸಾವಿತ್ರಿಯಾಗಿದ್ದರು, ಅದೇಕೋ  ನಾನು ಅವಳನ್ನು ಪ್ರೀತಿಯಿಂದ "ತನುಜ" ಅಂತ ಕರಿತಿದ್ದೆ... ಈಗಲೂ ತುಂಬಾ ನೆನಪಾಗುವ ಮುದ್ದು ಹುಡುಗಿ...ಈಗ ಸಂಪರ್ಕದಲ್ಲೇ ಇಲ್ಲ ಎನ್ನುವ ಬೇಸರ ಕಾಡ್ತಾ ಇರತ್ತೆ....

ಆಕೆ ಬರೆದು ಕೊಟ್ಟ ಕೆಲವು ಸಾಲುಗಳು ಹೀಗಿತ್ತು .....ಪ್ರೀತಿಯ ಅಣ್ಣ "ಗುರು " ದಾವಣಗೆರೆಯಲ್ಲಿ ಇದ್ದರೂ ಅವನು ಊರಿಗೆ ಬಂದಾಗ ಪುಸ್ತಕ ಕೊಂಡು ಹೋಗಿ ಬರೆದು ಕೊಟ್ಟ ಕೆಲವು ಸಾಲುಗಳು....ಸಂಬಂಧಿಯಾಗಿದ್ದರೂ ಕೇವಲ ಪತ್ರಗಳ ಮೂಲಕವೇ ನಮ್ಮಿಬ್ಬರ  ಆತ್ಮೀಯತೆ.... ನನ್ನನ್ನು "ದೀಪು"  ಎಂದು ಕರೀತಿದ್ದ ....... ಹೀಗಿತ್ತು ಅವನ ಪದಗಳು ನನ್ನ ಡೈರಿಯಲ್ಲಿ ....ನಮ್ಮ ಪ್ರಾಧ್ಯಾಪಕರಾದ "ನಟರಾಜ್ ಅರಳಸುರುಳಿ" ಅವರು ಬರೆದುಕೂಟ್ಟ ಪುಟವಿದು...ಅವರೊಬ್ಬ cartoonist ಸಹಾ..... :)


ಇನ್ನು ಅದೆಷ್ಟೋ ಸ್ನೇಹಿತರ ಸಾಲುಗಳಿವೆ ಈ ಡೈರಿಯಲ್ಲಿ....ತುಂಬಾ ಪ್ರೀತಿಪಾತ್ರರ ನೆನಪನ್ನ ಮಾತ್ರ ಇಲ್ಲಿ ನೆನೆಸಿಕೊಂಡಿದ್ದೇನೆ....

ಹೀಗೆ ಒಂದು ಪುಸ್ತಕ ಕಾಲೇಜು ದಿನಗಳ ನೂರಾರು ನೆನಪುಗಳನ್ನು ಹೊತ್ತು  ತಂದು ಬಿಡ್ತು .... ಆಗೆಲ್ಲ ನಮ್ಮ ಸೀನಿಯರ್ ವಿಧ್ಯಾರ್ಥಿಗಳು, ಪ್ರತಿವರ್ಷ  ಆಟೋಗ್ರಾಪ್ ಹಾಕಿಸಕೊಳ್ತಾರೆ ...ಹಾಗೆ ನಾವು ಅವರನ್ನ ಫಾಲೋ ಮಾಡೋದು...ಅಂತ ತಿಳಿದಿದ್ದ ಹುಡುಗಾಟದ ದಿನಗಳವು... ಆದರೆ ಅದರ ಬೆಲೆ ಏನು ಅಂತ ನಿಜ ಅರ್ಥದಲ್ಲಿ ತಿಳಿದಿದ್ದು ಈಗಲೇ...ಎಷ್ಟೊಂದು ಹಳೆಯ ಮಧುರ ನೆನಪನ್ನು ಈ ಪುಸ್ತಕದ ಮುಖಾಂತರ ಸವಿಬಹುದು ಎಂಬ ಚಂದದ ಪಾಠ ಕಲಿಸಿಕೊಟ್ಟು ಬಿಡ್ತು... :-) 

ಪ್ರೀತಿಯಿಂದ

ಸುದೀಪ....


22 comments:

 1. ಮತ್ತೆ ಶಾಲಾ ಕಾಲೇಜು ದಿನಗಳಿಗೆ ಹೋಗಿಬಂದೆ.ಬಹಳ ಚೆನ್ನಾಗಿದೆ :)

  ReplyDelete
 2. ಸುಮತಿ ಮೇಡಮ್,
  ಆಹಾ ಸವಿ ಸವಿ ನೆನಪು...ಸುಂದರವಾದ ಲೇಖನ..ನಂಗಂತೂ ಸಖತ್ ಇಷ್ಟಾ ಆಯ್ತು..ಅಂದದ ಹಸ್ತಾಕ್ಷರಗಳು..ಹಾಂ ನನಗೂ ಎಸ್ಸೆಸ್ಸೆಲ್ಸಿಯ ನೆನಪು ಬಂತು..ಬಿಂಗಿನ ಪೆನ್ನಿನಲ್ಲಿ ರಾತ್ರಿ ೧೧ರ ತನಕ (ಇಲ್ಲದಿದ್ದರೆ ಆಗ ನಮಗೆ ೮ ಕ್ಕೆ ನಿದ್ರಾದೇವಿ ಆವರಿಸಿರುತ್ತಿದ್ದಳು)ಅಪ್ಪಾ-ಅಮ್ಮನಿಗೆ ಓದುವುನೆಂದು ಹೇಳಿ ಮೆತ್ತಿ ಹತ್ತಿ ಹಸ್ತಾಕ್ಷರ ಬರೆಯುವುದು...ಅವಳೇನು ಬರೆದಳು ಎಂದು ಗೆಳೆಯನ ಪುಸ್ತಕವನ್ನು ತಿರುಗಿಸಿ ನೋಡುವುದು...ಚೆನಾಗಿತ್ತು...ನನಗಂತೂ ಅದೊಂದು ಹುಚ್ಚು ಆಕಾಲದಲ್ಲಿ..ಈ ಸಲ ಇಂಜಿನಿಯರಿಂಗಿನ ಕೊನೆಯ ವರ್ಷ ,ಇನ್ನೆನು ಮುಗಿಯಿತು ಆರೇಳು ತಿಂಗಳಷ್ಟೇ..ಮರೆತು ಹೋದ ಪ್ರಕ್ರಿಯೆಯನ್ನು ಮರಳಿ ನೆನಪಿಸಿದ್ದೀರಿ..ಈಗ ಇಲ್ಲೆಲ್ಲಾ ಆ ಪದ್ಧತಿ ಎಷ್ಟು ಉಳಿದಿದೆಯೋ ಗೊತ್ತಿಲ್ಲಾ,ಪ್ರಯತ್ನಿಸಿ ನೋಡುತ್ತೇನೆ...
  ಧನ್ಯವಾದ ನೆನಪಿಸಿದ್ದಕ್ಕೆ..
  ವಂದನೆಗಳು ಅಂದದ ನೆನಪಿನ ಬಿತ್ತಿಯನ್ನು ಬಿಚ್ಚಿಟ್ಟ ಬರಹಕ್ಕೆ...
  ಬರೆಯುತ್ತಿರಿ..
  ನಮಸ್ತೆ...

  ReplyDelete
  Replies
  1. ಚಿನ್ಮಯ್....ನಿಜ..ಆ ನೆನಪುಗಳೇ ಸಖತ್ ಮಜಾ ತರಿಸುತ್ತದೆ... ನಾನಂತು ತುಂಬಾ enjoy ಮಾಡಿದ ದಿನಗಳವು... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... :)

   Delete
 3. ಯಾವುದೋ ಹಳೆಯ ನೆನಪು ಗರಿಬಿಚ್ಚಿ ನಲಿದು - ಮನದಿ ಮಧುರ ಭಾವ ಒಸರಿ - ತಣ್ಣಗೆ ಕಚಗುಳಿ ಇಟ್ಟ ಬಾವ...
  ಓದುತ್ತ ಓದುತ್ತ ಎಲ್ಲಿಯೋ ಕಳೆದು ಹೋದೆ...
  ಚಂದದ ಭಾವವನ್ನು ಕಟ್ಟಿಕೊಟ್ಟಿದ್ದೀರಾ...ಇಷ್ಟವಾಯಿತು...

  ReplyDelete
 4. ತುಂಬಾ ಚೆನ್ನಾಗಿದೆ... ನಿಮ್ಮ ಲೇಖನ ಓದಿ , ಮೊದಲು ಮಾಡಿದ ಕೆಲಸ ಎಂದರೆ ನನ್ನ ಆಟೋಗ್ರಾಫ್ ಪುಸ್ತಕ ನೋಡಿದ್ದು...ತುಂಬಾ ಸುಂದರ ನೆನಪುಗಳು...

  ReplyDelete
  Replies
  1. ದಿನಕರ ಸರ್...ತುಂಬು ಮನದ ಧನ್ಯವಾದಗಳು... :)

   Delete
 5. ಮತ್ತೊಬ್ಬರ ಡೈರಿ ಓದುವುದು ತಪ್ಪು..ಇದು ಮೊದಲಿಂದಲೂ ಪಾಲಿಸಿಕೊಂಡು ಬಂದ ನಿಯಮ..ನಿಮ್ಮ ಓದಿನ ದಿನಗಳ ಸವಿ ಸವಿ ನೆನಪು ಅಂಗಳದಲ್ಲಿ ಹರವಿಕೊಂಡ ಬಗೆ ಓದಲು ಪ್ರೇರೇಪಿಸಿತು. ಮೊದಲಿಗೆ ನಿಮ್ಮ ಫೈವ್ ಸ್ಟಾರ್ ಸ್ನೇಹಿತೆಯರಿಗೆ ಒಂದು ಶುಭ ಹಾರೈಕೆಗಳು..ಎರಡನೆಯದು ಎಷ್ಟು ಮುದ್ದಾದ ಅಕ್ಷರಗಳು...ನೋಡುತ್ತಲೇ ಓದಲೇ ಬೇಕು ಎನ್ನುವಷ್ಟು ಸುಂದರವಾಗಿವೆ.ಆ ಬರಹಗಳಲ್ಲಿ ವ್ಯಕ್ತವಾಗಿರುವ ಭಾವಗಳು, ತುಂಟತನಗಳು, ಆ ದಿನಗಳನ್ನೂ ಕಣ್ಣ ಮುಂದೆ ನಿಲ್ಲಿಸುತ್ತದೆ..ಸುಮಧುರ ಲೇಖನ, ಚಿರಗಳು, ಬರಹಗಳು ಎಲ್ಲವು ಚಿರಕಾಲ ನೆನಪಲ್ಲಿ ಉಳಿಸುತ್ತವೆ...ಅಭಿನಂದನೆಗಳು!

  ReplyDelete
  Replies
  1. ಶ್ರೀಕಾಂತ್....ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು..... :)

   Delete
 6. ಯಾಕೋ ನನ್ನ ಯವ್ವನವೇ ಮರುಕಳಿಸಿದಂತೆ ಅನುಭವ. ಶಾಲಾ ದಿನಗಳ ಗೆಳೆಯರು, ಕಾಲೇಜಿನ ಸಹಪಾಠಿಗಳು ವರ್ಷಾಂತ್ಯಕ್ಕೆ ನನ್ನ ಡೈರಿಯಲ್ಲಿ ಬರೆದಿಟ್ಟ ಆ ಸಾಲುಗಳು ಈಗಲೂ ನನಗೆ ಹಸಿರೇ.

  Time machine ನಲ್ಲಿ ನನ್ನನ್ನು ತೆಗೆದುಕೊಂಡುಹೋದ ನಿಮಗೆ ಅನಂತ ಧನ್ಯವಾದಗಳು.

  ReplyDelete
  Replies
  1. ಬದರಿ ಭಾಯ್....ತಮಗೂ ಧನ್ಯವಾದಗಳು....

   Delete
 7. ಆಹಾ, ನಾನು ಈ ಆಟೋಗ್ರಾಫ್ ತೆಗೆದುಕೊಂಡಿಲ್ಲ :( ಈಗ ಅವರೆಲ್ಲ ಇದನ್ನು ಓದಿದರೆ ಎಷ್ಟು ಖುಷಿಪಟ್ಟಾರು.. ಆಹಾ.. ಸುಂದರವಿದೆ.

  ReplyDelete
  Replies
  1. ಈಶ್ವರ್....ತುಂಬಾ ಧನ್ಯವಾದಗಳು..... u really missed it...

   Delete
 8. ತುಂಬಾನೇ ಇಷ್ಟ ಆಯಿತು.....ನೆನಪುಗಳೇ ಮಧುರ....ನೆನಪಾದಾಗಲೆಲ್ಲ ನನ್ನ ಶಾಲಾ ದಿನ ಗಳ ಡೈರಿಯನ್ನು ಓದುತ್ತೇನೆ....ನಿಮ್ಮ ಡೈರಿಯ ಬರಹಗಳು ಹಳೆಯ ನೆನಂಪುಗಳನ್ನೆಲ್ಲ ಮತ್ತೊಮ್ಮೆ ಕಲಕಿದವು......ಸುಂದರ ಬರಹ...

  ReplyDelete
  Replies
  1. ಅಶೋಕ್ ಸರ್...ಬ್ಲಾಗ್ಗೆ ಭೇಟಿ ಕೊಟ್ಟು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು....

   Delete
 9. ತೀರಾ ಮನಸ್ಸಿಗೆ ಬೇಸರವಾದಾಗ ಈ ಆಟೋಗ್ರಾಫ್ ಬುಕ್ ತೆರೆದು ನೋಡಿದರೆ ಎಷ್ಟೋ ರೀಲಾಕ್ಸ್ ಅನಿಸುವುದು ಅಲ್ಲವೇ..?
  ೧೦ನೆ ಯಲ್ಲಿ ಇದ್ದಾಗ ಈ ರೀತಿಯದ್ದೆಲ್ಲ ಮಾಡಬಾರದು, ಮಕ್ಕಳಿಗೆ ಪರೀಕ್ಷೆ ಮೇಲೆ ಲಕ್ಷ್ಯ ಬರುವುದಿಲ್ಲವೆಂದು ಹೆಡ್ ಮಾಸ್ಟರ್ ತಾಕೀತು ಮಾಡಿದ್ದರು. ಆದರೂ ಅವರ ಕಣ್ಣು ತಪ್ಪಿಸಿ ನಾವುಗಳು ಆಟೋಗ್ರಾಫ್ ಬರೆಸಿಕೊಳ್ಳುತ್ತಿದ್ದೆವು..
  ಚಂದದ ನೆನಪುಗಳನ್ನು ನಿಮ್ಮ ಲೇಖನದ ಮೂಲಕ ಮೆಲುಕು ಹಾಕಿಸಿದಿರಿ..
  ನೈಸ್ ಒನ್ ಸಿಸ್ಟರ್,,

  ReplyDelete
  Replies
  1. ನಿಜ...ಸುಷ್ಮಾ...ಎಷ್ಟೋ ವರ್ಷದ ನಂತರ ಇದನ್ನು ಪುನಃ ತೆರೆದಾಗ ಆ ಚಂದದ ದಿನಗಳು ಕಣ್ಣ ಮುಂದೆ ಹಾಗೆ ತೇಲಿ ಬರುತ್ತೆ...Thank u very mcuh....

   Delete
 10. ಸುಮತಿ ನಿಮ್ಮ ಕೈಬರಹ ಮುತ್ತು ಜೋಡಿಸಿದ ಹಾಗಿದೆ..ಹೆಂಗಳೆಯರ ಟ್ರೇಡ್ ಮಾರ್ಕ್ ಅಂತಾರೆ... ಜೊತೆಗೆ ಹಳೆ ಪುಟಗಳನ್ನು ತೆರೆದು ನನಗೂ ನನ್ನ ಡೈರಿ ಹುಡ್ಕೋ ಕೆಲ್ಸ ಕೊಟ್ರಿ...ಆದರೆ ಫಲ ಸಿಗಲಿಲ್ಲ... ನಾಳೆ ಮತ್ತೆ ಟ್ರೈ ಮಾಡ್ತೀನಿ...

  ReplyDelete
  Replies
  1. ಧನ್ಯವಾದಗಳು ಅಜ್ಹಾದ್ ಭಾಯ್... :) ಆದಷ್ಟು ಬೇಗ ಡೈರಿ ಹುಡುಕಿ ನಮ್ಮೊಂದಿಗೆ ಹಳೆಯ ನೆನಪನ್ನು ಹಂಚಿಕೊಳ್ಳಿ... :)

   Delete
 11. ತುಂಬಾ ಚೆನ್ನಾಗಿದೆ ಮೇಡಮ್..ಎಂದೋ ಒಂದು ದಿನ ನೆನಪಿನಂಗಳಕ್ಕೆ ಇಳಿದಾಗ ಅದರಲ್ಲಿ ಕಳೆದು ಹೋಗುತ್ತೇವೆ..ಈ ಆಟೋಗ್ರಾಫ್ ನ ಪುಟಗಳು ಅದೆಷ್ಟೋ ನೆನಪುಗಳನ್ನು ಮೆಲಕು ಹಾಕಿ ನಾವೋಬ್ಬರೇ ನಗುವಂತೆ ಮಾಡುತ್ತೆ..

  ReplyDelete
  Replies
  1. ಧನ್ಯವಾದಗಳು ಪದ್ಮಾ ಮೇಡಂ, ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ... :)

   Delete