Sunday 6 July 2014

ಅಜ + ಗಜ + ಅಂತರ


"ಮಮ್ಮೀ"... 

"ಏನ್ ಚಿನ್ನು"... 

"ಸ್ನೇಹ ತುಂಬಾ ಕೆಟ್ಟವಳು ಮಮ್ಮಿ"....  

"ಏನಾಯ್ತೆ ಚಿನ್ನು".....  

"ಏನ್ ಗೊತ್ತಾ ಮಮ್ಮಿ ..  ಇವತ್ತು ಬೆಳಿಗ್ಗೆ ಪಪ್ಪಾ ನಂಗೆ ಸ್ಚೂಲ್ಗೆ ಡ್ರೋಪ್ ಮಾಡಕ್ಕೆ ಬಂದಿದ್ರಲ್ಲಾ ... ಸ್ನೇಹ ಅವರನ್ನು ನೋಡಿ ಎಷ್ಟು ಕೆಟ್ಟದಾಗಿ ಮಾತಾಡಿದ್ಲು  ಗೊತ್ತ  ಮಮ್ಮಿ..." 

"ಸ್ನೇಹ ಏನಂದ್ಲೆ ಚಿನ್ನು"  ...?

ಮತ್ತೆ...ಮತ್ತೆ  "ನನ್ನ ಪಪ್ಪಾಗೆ ಡೊಳ್ಳ್  ಹೊಟ್ಟೆ  ಅಂತೆ ... ಕಪ್ಪಗಿದಾರೆ ಅಂತೆ... ಸ್ಮಾರ್ಟ್ ಇಲ್ಲ ಅಂತೆ ... ಇನ್ನು ಏನೇನೋ  ಕೆಟ್ಟದಾಗಿ ಮಾತಾಡಿದ್ಲು ಮಮ್ಮಿ.. ನಂಗದೆಷ್ಟು  ಸಿಟ್ಟು ಬಂತು ಗೊತ್ತ ಮಮ್ಮಿ .... ನನ್ ಪಪ್ಪನ್ ಬಗ್ಗೆ ಅವಳಿಗೆ ಏನು ಗೊತ್ತು ಅಲ್ವಾ ಮಮ್ಮಿ ... ಅವರೆಷ್ಟು ಒಳ್ಳೆಯವ್ರು .. ನಂಗದೆಷ್ಟು  ಮುದ್ದು ಮಾಡ್ತಾರೆ... ನಾನು ಅವ್ರ princess ... cute doll ಅಲ್ವಾ ಮಮ್ಮಿ ...  ದಿನಾ ರಾತ್ರಿ ನಂಗದೆಷ್ಟು ಚಂದದ ಕಥೆ ಹೇಳ್ತಾರೆ ... ನನ್ನನ್ನು,ನಿನ್ನನ್ನು ಅದೆಷ್ಟು ಪ್ರೀತಿಯಿಂದ ನೋಡ್ಕೋತಾರೆ ಅಲ್ವಾ ಮಮ್ಮಿ . "

"ಮಮ್ಮಿ ... ಇದೆಲ್ಲ ಆ ಸ್ನೇಹಂಗೆ  ಏನು ಗೊತ್ತು... ಪಪ್ಪನ್ ಒಂದು ಸಾರಿ ನೋಡಿದಷ್ಟೇ ... ಅದೆಷ್ಟು ತಪ್ಪು ತಪ್ಪು ಮಾತಾಡಿ ಬಿಟ್ಲು ಅವ್ಳು .... ನಾಳೆಯಿಂದ ಅವಳ್ ಹತ್ರ ಮಾತಾಡಲ್ಲ ನಾನು... she is very bad ಅಲ್ವಾ ಮಮ್ಮಿ"....  i hate her.... i love my pappa very much..." ರಂಜು ಉದ್ವೇಗದಿಂದ ಹೇಳ್ತಾ ಇದ್ರೆ ಪವಿತ್ರಳಿಗೆ   3 ನೇ ಕ್ಲಾಸ್ನಲ್ಲಿ ಓದೋ ಮಗಳ ಮಾತನ್ನ ಕೇಳಿ ಅದೇನೇನೋ ಹಳೆ ನೆನಪುಗಳು ಒತ್ತರಿಸಿ ಬರ್ತಾ ಇತ್ತು.

ರಂಜುನ ಅದು ಹೇಗೋ ಸಮಾಧಾನ ಮಾಡಿ ಸಂಜೆಯ ತಿಂಡಿ, ಹೋಂವರ್ಕ್ ಎಲ್ಲ ಮುಗ್ಸೋದ್ರೋಳ್ಗೆ  ಅದಾಗಲೇ ರಾತ್ರಿ 8 ಘಂಟೆ ದಾಟಿತ್ತು. ಅಷ್ಟರಲ್ಲಿ ಸಂಜಯ್ ಆಫೀಸಿಂದ ಬಂದಾಗಿತ್ತು. ರಾತ್ರಿ ಊಟದ ತಯಾರಿ ಮುಗ್ಸಿ ಇಬ್ರಿಗೂ ಬಡ್ಸಿ ತಾನು ಊಟ ಮಾಡಿ ಹಾಸಿಗೆ ಸೇರೋದ್ರೊಳ್ಗೆ ಘಂಟೆ 10.30 ದಾಟಿತ್ತು. ರಂಜು ಪಪ್ಪನ್ ಹತ್ರ ಬೆಳಿಗ್ಗೆ ನಡೆದ ವಿಷ್ಯ ಎಲ್ಲಾ ವರದಿ ಒಪ್ಸಿ ಸ್ನೇಹನ್ ಹತ್ರ ಮಾತಾಡಲ್ಲ ಇನ್ನು ಅಂತ ಸಿಟ್ಟು ಮಾಡ್ಕೊಂಡು, ಪಪ್ಪನ್ ಹೊಟ್ಟೆ ಮೇಲೆ ಕಾಲು ಹಾಕಿ ಮಲ್ಕೊಂಡು ಪಪ್ಪಾ ಕಥೆ ಹೇಳು ಅಂತ ಹೇಳ್ಸಿಕೊಂಡು, ಅದಾಗಲೇ ನಿದ್ದೆಗೆ ಜಾರ್ತಾ ಇದ್ಲು. ಸಂಜಯ್ಗೆ ಇದೆಲ್ಲ ಮಕ್ಕಳ common ಜಗಳಗಳು, ಇವತ್ತು ಜಗಳ ಆಡಿದರು ನಾಳೆ ಮತ್ತೆ ಒಂದಾಗ್ತಾರೆ ಅನ್ನೋ ನಂಬಿಕೆ. ಜೊತೆಗೆ ತನ್ನ ಅಂದ ಚಂದದ ಬಗ್ಗೆ ಯಾವತ್ತು ಕೀಳರಿಮೆ ಇಲ್ಲದಿರುವುದರಿಂದ ಮಕ್ಕಳ  ಮಾತೆಲ್ಲ ಸೀರಿಯಸ್ ಆಗಿ ತೆಗೊಳ್ಳದ ವ್ಯಕ್ತಿತ್ವ. 





ಇತ್ತ ಪವಿತ್ರನಿಗೆ ಮಲಗಿದ್ರೂ ಸಂಜೆ ಮಗಳು ರಂಜು ಆಡಿದ ಮಾತೇ  ಕಿವಿಯಲ್ಲಿ ಪ್ರತಿಧ್ವನಿಸ್ತಿತ್ತು. ಆಕೆ ಅದಾಗಲೇ ತನ್ನ ಕಳೆದು ಹೋದ ದಿನಗಳ ನೆನಪಿಗೆ ಜಾರಿದ್ಲು.  ಆಗಷ್ಟೇ ಅವಳ ಪಪ್ಪನಿಗೆ ಜಿಲ್ಲಾವಾರು ಊರಿಂದ  ದೊಡ್ಡ ಸಿಟಿಗೆ ವರ್ಗಾವಣೆಯಾಗಿತ್ತು. ಹದಿನಾಲ್ಕು ವರ್ಷದ teenage ಹುಡುಗಿ. ಎಂಟನೆ ತರಗತಿಗೆ ಆ ಊರಿನ ಪ್ರಸಿದ್ಧ ಕಾನ್ವೆಂಟ್ಗೆ admission ಆಗಿತ್ತು. ಹೊಸ ವಾತಾವರಣ... ಹೊಸ ಶಾಲೆ. ಹೊಸ ಸ್ನೇಹಿತರು ... ಆಗಷ್ಟೇ ಋತುಮತಿಯಾಗಿದ್ದ ಪವಿತ್ರ  ಸುಂದರವಾಗಿ ಹೂವಂತೆ  ಅರಳಿದ್ಲು . ಜೊತೆಗೆ  ಪಪ್ಪನ ಪಡಿಯಚ್ಚು. ಅವರೂ ಸ್ಫುರದ್ರೂಪಿ. ಆ ಸೌಂದರ್ಯ ಮಗಳಿಗೂ ಬಂದಿತ್ತು. ಉನ್ನತ ಹುದ್ದೆ ದೊಡ್ಡ ಜವಾಬ್ದಾರಿಯುತ ಅಧಿಕಾರಿ. ಅಷ್ಟೆಲ್ಲ ಇದ್ರೂ ಸ್ವಲ್ಪವೂ ಗತ್ತಿಲ್ಲದ ವ್ಯಕ್ತಿ.


ಇನ್ನು ಅವಳ ಅಮ್ಮನ ಬಗ್ಗೆ ಹೇಳ್ಬೇಕಂದ್ರೆ ಸಾಧಾರಣ ಗೃಹಿಣಿ. ತಾನಾಯ್ತು ತನ್ನ ಕೆಲಸ ಆಯ್ತು . ಗಂಡ ಮಗಳ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣು . ಮೊದಲೇ ಎಣ್ಣೆಗಪ್ಪು ಬಣ್ಣದ ಆಕೆಗೆ  ಎಡಗೆನ್ನೆ ಪೂರ್ತಿ  ಹುಟ್ಟಿನಿಂದ ಬಂದ ಕಪ್ಪು ಮಚ್ಚೆ ಇಡೀ ಕೆನ್ನೆಯನ್ನು ಆವರಿಸಿತ್ತು. ಲಕ್ಷಣವಾಗಿದ್ದರೂ ಮೊದಲ ಬಾರಿ  ನೋಡಿದವರಿಗೆ ಆ ಮಚ್ಚೆಯಿಂದ  ಏನೋ ಅನಿಸುವಂಥ ಮಹಿಳೆ. 

ಒಬ್ಬಳೇ ಮಗಳಾದ ಪವಿತ್ರನಿಗೆ ಅಮ್ಮನ  ಪ್ರೀತಿ ಅಪರಿಮಿತವಾಗಿ ಸಿಕ್ಕಿದ್ರೂ ಈಗ ಸಿಟಿಗೆ ಬಂದ ಮೇಲೆ ವಯೋಸಹಜವಾಗಿ ಅದೇನೋ ಸೌಂದರ್ಯದ ಬಗ್ಗೆ ವಿಶೇಷವಾದ ಆಸಕ್ತಿ. ಇದರ ಪರಿಣಾಮ ಚಂದವಿಲ್ಲದ ತಾಯಿಯೂ ಯಾಕೋ ಇಷ್ಟ ಆಗ್ತಿರಲಿಲ್ಲ. ಸ್ಕೂಲ್ ಕಾರ್ಯಕ್ರಮಗಳಲ್ಲಿ ಪಪ್ಪನನ್ನೇ ಬಲವಂತ ಮಾಡಿ ಕರೆದುಕೊಂಡು ಹೋಗ್ತಿದ್ಲು . ತನ್ನ ಸ್ನೇಹಿತರೊಂದಿಗೆ  ಆಕೆ ತಾಯಿಯನ್ನ ಯಾವತ್ತೂ ಭೇಟಿ ಮಾಡಿಸ್ತಾ ಇರ್ಲಿಲ್ಲ. ಏನೇನೋ ಸಬೂಬು ಹೇಳಿ ಅಮ್ಮನನ್ನ  ನಿಧಾನವಾಗಿ ತನ್ನ ಜೊತೆ ಬರದಂತೆ avoid ಮಾಡಕ್ಕೆ ಪ್ರಾರಂಭ ಮಾಡಿದ್ಲು. ಈ ಸೂಕ್ಷ್ಮ ಅವಳ ಅಮ್ಮನಿಗೆ ಗೊತ್ತಾದ್ರೂ,ಅವರೂ ಆದಷ್ಟು ದೂರಾನೆ ಇರ್ತಿದ್ರು. ಇದಕ್ಕೆಲ್ಲಾ ಕಾಲವೇ ಮದ್ದು ಎಂಬುದು ಅವರ ನಂಬಿಕೆ. ಹುಡುಗು ಬುದ್ದಿ ... ಹೋಗ್ತಾ ಹೋಗ್ತಾ ಸರಿಯಾಗುತ್ತೆ ಅನ್ನೋ ಆಶಾಭಾವನೆ. 

ಆಗಷ್ಟೇ highschool ಸೇರಿದ್ದ ಪವಿತ್ರಂಗೆ ಹುಡುಗರು, ಲವ್ ಇದೆಲ್ಲ ಸಹಜ ಕುತೂಹಲ.  ಅವಳಿಗೆ ಪಪ್ಪಾ ಅಮ್ಮಂದು ಲವ್ ಮ್ಯಾರೇಜ್ ಅನ್ನೋ ವಿಷ್ಯ ಮೊದಲೇ ಗೊತ್ತಿದ್ರೂ, ಇತ್ತೀಚೆಗೆ ಅದೆಷ್ಟೋ ಬಾರಿ ಆಲೋಚನೆ ಮಾಡಿದ್ಲು...  ಈ ಪಪ್ಪಾ ಈಗ್ಲೇ ಇಷ್ಟು handsome ಆಗಿದ್ದಾರೆ, ಇನ್ನು ಮದುವೆ ಸಮಯಲ್ಲಿ ಅದೆಷ್ಟು ಚಂದ ಇದ್ರೂ ಅನ್ನೋದು ಅವರ ಮದುವೆ album ನೋಡಿದ್ದ ಅವಳಿಗೆ ಗೊತ್ತಿತ್ತು.   ಈ ಅಮ್ಮ   ನೋಡಕ್ಕೆ ಸ್ವಲ್ಪಾನೂ ಚಂದ ಇಲ್ದೆ ಇದ್ರೂ ಅದೇನು ಅಂತ ಪಪ್ಪಾ  ಲವ್ ಮಾಡಿದರೋ  .. ಪಪ್ಪಾ ಮನಸ್ಸು ಮಾಡಿದ್ರೆ ಚಂದದ ಅಪ್ಸರೆ ತರಹದ ಹುಡುಗಿ ಸಿಗ್ತಿರ್ಲಿಲ್ವಾ ... ಅದು ಬಿಟ್ಟು ಈ ಪಪ್ಪಾ ಅದೇನಂಥ ಈ ಅಮ್ಮನ್ನ ಮೆಚ್ಚಿದ್ರೋ ..ಪವಿತ್ರ  ಸಾವಿರ ಬಾರಿ ತಲೆಕೆಡಿಸಿಕೊಂಡದ್ದಿದೆ ಈ ವಿಷಯಕ್ಕೆ . 


ಹೀಗೆ ವರ್ಷಗಳು ಕಳಿತಾ ಕಳಿತಾ    ಎಲ್ಲವೂ ಅರಿವಾಗ್ತಾ ಇತ್ತು ಪವಿತ್ರನಿಗೆ. ಯಾವುದು ಸರಿ ಯಾವುದು ತಪ್ಪು.  ಈ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಚೆಲುವೆ ಮೇಲು ಅನ್ನೋದು ಗೊತ್ತಾಗ್ತಾ ಇದ್ದ ಹಾಗೆ ಪವಿತ್ರ ತಾನಾಗೆ ಬದಲಾಗಿದ್ಲು. ಅಮ್ಮನ ಬಗ್ಗೆ ಗೌರವ, ಆದರ ತೋರಿಸ್ತಿದ್ಲು. ತನ್ನ ಹುಡುಗು ಬುದ್ದಿಯಿಂದ ಅವ್ರಿಗೆ ನೋಯಿಸಿದ್ದಕ್ಕೆ ಕ್ಷಮೆ ಸಹಾ ಕೇಳಿದ್ಲು. ಆ ಅಮ್ಮನೋ ಕರುಣಾಮಯಿ ... ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಹರಸೋ ಮಾತೃಹೃದಯ. 

ಕಾಲೇಜು    ವಿಧ್ಯಾಭ್ಯಾಸ ಮುಗಿದು  ಮದುವೆ ವಯಸ್ಸು ಬಂದಾಗ ಪಪ್ಪನ ಸ್ನೇಹಿತನ ಮಗ, ಬಾಲ್ಯದ ಗೆಳೆಯ,ಸಾಧಾರಣ ರೂಪಿನ ಸಂಜಯ್ ಜೊತೆ ಮದುವೆ  ಮಾತುಕತೆ ನಡೆದಾಗ್ಲೂ ಮನಃಪೂರ್ವಕವಾಗಿ ಒಪ್ಪಿಗೆ ಕೊಟ್ಟಿದ್ಲು. ಅವಳ  ಪಪ್ಪಾ ಅದೆಷ್ಟೋ ಬಾರಿ, "ಒತ್ತಾಯ ಇಲ್ಲ ಪವಿತ್ರ....  ನಿನಗೆ ಇಷ್ಟ ಇದ್ರೆ ಮಾತ್ರ  ಮಾತುಕತೆ ಮುಂದುವರಿಸ್ತೀನಿ..... ಯೋಚನೆ ಮಾಡಿ ಹೇಳು .... " ಅಂತ ಅವಳ ನಿರ್ಧಾರ ಕೇಳಿದಾಗಲೂ   ತನ್ನ ಸಂಪೂರ್ಣ ಒಪ್ಪಿಗೆ ಕೊಟ್ಟಿದ್ಲು. ಅದಕ್ಕೆ ಮುಖ್ಯ ಕಾರಣ ಅವನ caring nature... ಅದೆಷ್ಟೋ ವರ್ಷದಿಂದ ಅವನನ್ನ ಗಮನಿಸ್ತಾ ಬಂದಿದ್ದ ಪವಿತ್ರಾಗೆ ಈ ಕಾಲಘಟ್ಟದಲ್ಲಿ ರೂಪ, ಸೌಂದರ್ಯ ಇದಕ್ಕೆಲ್ಲಾ  ಯಾವುದೇ ಪ್ರಾಶಸ್ತ್ಯ ಇಲ್ಲವಾಗಿತ್ತು. 

ಮದುವೆಯಾಗಿ ಚಂದದ ಸಂಸಾರ ನಡೆಸಿಕೊಂಡು ಸಂಜಯ್ನ ಮನದನ್ನೆಯಾಗಿ,ರಂಜಿತಾಳ ತಾಯಿಯಾಗಿ  ದಿನ ದೂಡುತ್ತಿದ್ದ ಈ ಸಮಯದಲ್ಲಿ ಪುನಃ ಆ   ಹಿಂದಿನ ನೆನಪುಗಳೆಲ್ಲ ಮರುಕಳಿಸಿತ್ತು. ಅದೂ ಮಗಳ matured ಮಾತುಗಳಿಂದ. ತನ್ನ ಪಪ್ಪನನ್ನ ಎಂದೂ ಕೀಳಾಗಿ ನೋಡದ ತನ್ನದೇ ಹೊಟ್ಟೆಯಲ್ಲಿ ಹುಟ್ಟಿದ ಪುಟ್ಟ ಕೂಸು,ಪವಿತ್ರಳ ದೃಷ್ಟಿಯಲ್ಲಿ ಇವತ್ತು ಅತೀ ಎತ್ತರಕ್ಕೆ ಬೆಳೆದು ನಿಂತಿದ್ಲು. 

ಯಾಕೋ ಎಂಟು ವರ್ಷದ ಮಗಳ ಮುಂದೆ ತೀರಾ ಚಿಕ್ಕವಳಾದೆ ಅನ್ನೋ ಭಾವ. ತನ್ನ ಕರುಳಕುಡಿಗೆ ಇರೋ ಅಲ್ಪ ಮಾನವೀಯತೆಯೂ ತನ್ನಲ್ಲಿ ಇರಲಿಲ್ಲ ಅನ್ನೋ ವೇದನೆ. ರಕ್ತ ಮಾಂಸ ಕೊಟ್ಟು ಜನ್ಮ ನೀಡಿದ ಅಮ್ಮನಿಗೆ ನೋವಿಟ್ಟ ಪಾಪಿ ಅನ್ನೋ ಬೇಸರ.  ಆ ಇರುಳು  ಅದೇಕೋ ನಿದ್ದೆ ದೂರಾದ ರಾತ್ರಿ. ಅಮ್ಮನ ಬಗ್ಗೆ ಕೇವಲವಾಗಿ ಯೋಚನೆ ಮಾಡಿದ್ದಕ್ಕೆ, ಅಷ್ಟೆಲ್ಲಾ ವರ್ತಿಸಿಯೂ ಮರೆತು ಜೀವಿಸಿದ್ದಕ್ಕೆ... 

 ಅದೆಷ್ಟೋ ವರ್ಷದ ನಂತರ ಪಶ್ಚಾತಾಪದಿಂದ ಕಣ್ಣೆಲ್ಲ ಒದ್ದೆ ಒದ್ದೆ.... 

 ಎಂದೂ ತನ್ನ ಉಸಿರಿರುವ  ತನಕ ಕಾಡುವ ಪಾಪ ಪ್ರಜ್ಞೆ .....   

ಅದೆಷ್ಟು ಅಂತರ ತಾಯಿ ಮಗಳಿಗೆ ...