Monday, 8 December 2014

ಅವನ .....


ಥೋ .... ಆಗ್ಲೇ  ಇಪ್ಪತ್ತೆಂಟು   ವರ್ಷ ಆಯ್ತು    ... ಕೆಲಸ ಸರಿ ಇಲ್ಲ ಅಂತ ಒದ್ದಾಡಿ ಒದ್ದಾಡಿ  ಅಂತೂ ಇಂತೂ ಒಂದು ಪರ್ಮನೆಂಟ್ ಕೆಲಸ ಅಂತ ಸಿಕ್ತು ... ಇನ್ನು ಸ್ವಂತ ಮನೆ ಮಾಡ್ಕೊಳ್ಳೋದು ಯಾವಾಗ್ಲೋ  ಏನ್ಕಥೆನೋ ...   ಆರು ತಿಂಗಳಿಗೆ ಒಮ್ಮೆ ವರ್ಷಕ್ಕೊಮ್ಮೆಅಪ್ಪ ಅಮ್ಮನ್ ಜೊತೆ  ಗಂಟು ಮೂಟೆ ಕಟ್ಟಿ ಬಾಡಿಗೆ ಮನೆ ಬದಲ್ಸಿ ಬದಲ್ಸಿ ಸಾಕಾಗ್ ಹೋಗಿದೆ ... ಈಗ ತಿನ್ನಕ್ಕೆ ಉಣ್ಣಕ್ಕೆ ಯೋಚನೆ ಇಲ್ದೆ ಇದ್ರೂ ಯಾಕೋ ಏನೋ ಖಾಲಿತನ... ಜೀವದ ಗೆಳೆಯರೆಲ್ಲಾ ಆಗ್ಲೇ ಮದುವೆಯಾಗಿ ಹೆಂಡತಿ, ಮಕ್ಳು ಜೊತೆ  ಓಡಾಡ್ತಾ ಇದಾರೆ...ಬಹುಷಃ ಇದೆ ನನ್ನ ದೊಡ್ಡ ಸಮಸ್ಯೇನೋ ಏನೋ ... ನಂಗೆ ಮದುವೆ ಆಗಿಲ್ಲ ಅನ್ನೋ ಬೇಸರಕ್ಕಿಂತ ಸ್ನೇಹಿತರೆಲ್ಲ ಮದುವೆಯಾಗಿದ್ದಾರೆ ಅನ್ನೋ ಅಸೂಯೆನೆ ಹೆಚ್ಚು ಅನ್ನೋದು ಒಂದರ್ಥದಲ್ಲಿ ನಿಜ ಅನ್ಸತ್ತೆ .. ಏನ್ ಹಾಳಾದ್ ಮನಸೋ ...

ಎದ್ರಿಗೆ ಸಿಕ್ಕಾಗಲೆಲ್ಲಾ 'ಏನ್ಲಾ ಮಗಾ ಯಾವಾಗ್ ಪಾಯ್ಸದ್ ಊಟ' ಅಂತ ಜೀವ ತಿಂತಾರೆ...  ಯಾರಿಗ್  ಹೇಳಣಾ ನಮ್ ಪ್ರಾಬ್ಲಂ ... ಬ್ರಹ್ಮಚಾರಿ ಜೀವನ ಯಾರಿಗೂ ಬೇಡ ... ಮದುವೆ  ಆದ ಫ್ರೆಂಡ್ಸ್ ಎಲ್ಲ 'ಮಗಾ ಸಂಸಾರ ಸಾಕಾಗಿದೆ... ಯಾವಾಗ್ ನೋಡಿದರೂ ಟೆನ್ಶನ್ ....  ಮೊದ್ಲೇ ಚೆನ್ನಾಗಿತ್ತು'  ಅಂದ್ರೆ ಮನಸಲ್ಲೇ ಬೈಕೊತೀನಿ... 'ಮಕ್ಳಾ ನೀವು ನೋಡೋದು, ಅನುಭವ್ಸಿದ್ದು ಎಲ್ಲ ಆಯ್ತು .ಈಗ ಸುಮ್ ಸುಮ್ನೆ  ನಂಗು ಯಾಕ್ ಹೆದ್ರಿಸ್ತಿರೋ...' ಅಂತ ಉಗೀ ಬೇಕು ಅನ್ಸತ್ತೆ... ಯಾರನ್  ಉಗ್ದು  ಬೈದು ಏನ್ ಪ್ರಯೋಜನ ... ನಂ ಹಣೆಬರಹ ಸರಿ ಇಲ್ದೆ ಇದ್ರೆ ಯಾರೆನ್ ಮಾಡಕ್ಕಾಗತ್ತೆ ....ನೆಟ್ಟಗೆ ನನ್ ಖರ್ಚನ್ನ ತೂಗ್ಸೊಕ್ಕೆ ಕಷ್ಟ ಪಡ್ತಾ ಇನ್ನು ಅಪ್ಪ ಅಮ್ಮಂಗೆ ಭಾರ ಆಗಿರೋ ನಾನು ಇನ್ನು ಈಗ್ಲೇ ಮದುವೆ ಮಾಡ್ಕೊಂಡು ಆ ಜವಬ್ದಾರೀನೂ ಯಾಕೆ ಅವ್ರ ಮೇಲೆ ಹೊರಿಸ್ಲಿ? ಇನ್ನು 5 ವರ್ಷ ಅಂತೂ ಮದುವೆ  ಪೋಸ್ಟ್ ಫೋನ್ ಅಂತ ಧೃಡ ನಿರ್ಧಾರ ಮಾಡಿ ಆಗಿದೆ.... ಆದ್ರೆ....

ಹೇಳ್ದಷ್ಟು ಸುಲಭಾನ .... !!!! ವಯೋ ಸಹಜವಾಗಿ ಕಾಡೋ ಆಸೆಗಳನ್ನ  ಕಾಮನೆಗಳನ್ನ ಇನ್ನೈದು ವರ್ಷ ಬಿಟ್ಟು ಬಾ.... ಪೋಸ್ಟ್ ಪೋನ್ ಮಾಡ್ತೀನಿ  ಅಂದ್ರೆ ಅದು ನನ್ ಮಾತು ಕೇಳತ್ತಾ ....?

ಮನಸಲ್ಲಿ ಏನೇನೋ ಅನ್ಸತ್ತೆ... ಯಾರ್ ಹತ್ರ ಹೇಳ್ಕೊಳ್ಳೋದು ..ಎಷ್ಟೇ ಜೀವದ ಗೆಳೆಯರು  ಇದ್ರೂ, ಪೋಲಿ ಮಾತಾಡ್ಕೊಂಡ್ರೂ, ಅದೆಷ್ಟೇ ವಲ್ಗರ್ ಜೋಕ್ಸ್ ಶೇರ್ ಮಾಡ್ಕೊಂಡ್ರೂ ಅತಿ ಖಾಸಗಿ ಅನ್ಸೋ ಈ ಲೈಂಗಿಕ ಭಾವನೆಗಳು ಯಾವಾಗಲೂ ನನ್ನದೇ ಚೌಕಟ್ಟಿನಲ್ಲಿ ಇರತ್ತೆ ಮತ್ತೆ ಇರ್ಬೇಕು . ಅಷ್ಟಕ್ಕೂ ಅಪ್ಪಿ ತಪ್ಪಿ ಇದನ್ನ ಅವರತ್ರ  ಡಿಸ್ಕಸ್ ಮಾಡಿದ್ರೆ ತಮಾಷೆ ಮಾಡ್ಕೊಂಡು ನಗ್ತಾರೆ ಅಷ್ಟೇ ...ಯಾರಿಗ ಬೇಕು ಕೋಲು ಕೊಟ್ಟು ಫ್ರೆಂಡ್ಸ್  ಹತ್ರ ಸುಮ್ನೆ ಹೊಡಿಸ್ಕೊಳೋದು  ... ಅದ್ರ ಬದಲಿಗೆ ನನ್ನ ಬೆಚ್ಚನೆ ಭಾವ ನನ್ನಲ್ಲೇ ಇರ್ಲಿ ...ಅಷ್ಟೇ ಆದ್ರೆ ಬೇಸರ ಇರ್ಲಿಲ್ಲ .... ಇತ್ತೀಚಿಗೆ ಯಾಕೋ ಎಲ್ಲೋ ಅತಿ ಅನ್ಸೋ ಅಷ್ಟು ತಾಳ ತಪ್ತಾ ಇದೆ ಈ ಭಾವನೆಗಳು .. .ಏನು ಕಾರಣಾನೋ ನಂಗೆ ತೋಚಲ್ಲ .... ಅದ್ಯಾಕೆ ತಿಕ್ಲು ತರಹ ಆಡ್ತೀನೋ ... ಒಂದಿನ ಮೆಂಟಲ್ ಆಗ್ದೆ ಇದ್ರೆ ಸಾಕು ....

ಕಾರಣ ಕನಸಲ್ಲೂ ಕಾಡೋ ಹೆಣ್ಣುಗಳು ... ನನಸಲ್ಲಂತೂ ಕೇಳೋದೇ ಬೇಡ .... ಈ ಧ್ಯಾನಾನೆ ಜಾಸ್ತಿ ಆಗಿದೆ...
ಇಷ್ಟು ಸಾಕಾಗಲ್ಲ ಅಂತ ಸುತ್ತ ಮುತ್ತ ಇರೋ ಕಲೀಗ್ ಹುಡುಗೀರೆಲ್ಲ ಸೂಪರ್ ಪೀಸ್ಗಳು ... ಬೆಳಿಗ್ಗೆಯಿಂದ ಸಂಜೆ ತನಕ ಅಕ್ಕ ಪಕ್ಕ ಸುಳಿಯೋ ಬ್ಯೂಟಿಗಳು .... ಹೇಗ್ ನನ್ನನ್ನ ನಾ ಕಂಟ್ರೋಲ್ ಮಾಡ್ಕೊಳ್ಳಿ... ಹೋಗ್ಲಿ ಸಂಜೆ ರೋಡ್ನಲ್ಲಿ ಒಂದು ರೌಂಡ್ ಸುತ್ತಾಡ್ಕೊಂಡು ಬರೋಣ ಅಂದ್ರೆ ತೊಡೆ ಕಾಣ್ಸೋ ಹಾಗೆ ಬಟ್ಟೆ ಹಾಕ್ಕೊಂಡ್ ಎದುರಾಗೋ  ಕಾಲೇಜ್ ಹುಡುಗೀರು .... ಎಲ್ಲಿಂದ ಮನಸನ್ನ ಶಾಂತವಾಗಿ ಇಟ್ಕೊಳ್ಳೋದು ... ಮಾಲ್ಗಳಲ್ಲಿ,  ರೆಸ್ಟೋರಂಟ್ ಎಲ್ಲೇ ಹೋದ್ರೂ ಕಣ್ನಿಗೆ  ಕಾಣೋದು ಇವರೇ .... ನನ್ನ ಕಣ್ಣು ಕಾಮಾಲೆ ಆದ್ರೆ ಅವ್ರದ್ದೇನು ತಪ್ಪು ... ನನ್  ಹಾಳು  ಮನಸಿಗೆ ಅವರೇನು ಮುಖ, ಮೈ  ಮುಚ್ಕೊಂಡು ಓಡಾಡಕ್ಕಾಗತ್ತಾ ....

ಇದನ್ನೆಲ್ಲಾ ತಡ್ಕೊಳ್ಳಕ್ಕೆ ಆಗ್ದೆ ದಿನೇ ದಿನೇ  ಸಿಗರೇಟ್ ಸುಡೋದು ಜಾಸ್ತಿ ಆಗಿದೆ... ಲೈಟ್ ಆಗಿ ಈಗ್ಲೇ  ಕೆಮ್ಮು ದಮ್ಮು ಶುರುವಾಗಿದೆ.... ಬೇಕಾ ಇದೆಲ್ಲಾ .

ಇತ್ತೀಚಿಗೆ ಮೆಜಿಸ್ಟಿಕ್ ಬಸ್ ಸ್ಟ್ಯಾಂಡ್ನಲ್ಲಿ ಸಂಜೆ ಹೊತ್ತು ರಂಗು ರಂಗಾಗಿ ಮೇಕಪ್ ಮಾಡ್ಕೊಂಡು ಗಿರಾಕಿಗಳಿಗೆ ಕಾಯ್ತಾ ಇರೋ ಸುಂದರಿಯರನ್ನ ನೋಡಿ ಆಸೆ ಶುರುವಾಗಿದೆ ಜೊತೆಗೆ ಅದಕ್ಕಿಂತ ಹೆಚ್ಚು ಭಯ.. ಒಂದಿನ ಎಲ್ಲಾದ್ರೂ ಅವ್ರ ಹಿಂದೆ ಹೋಗಿ ಬೇಡ್ದೆ ಇರೋ ಕಾಯಿಲೆ ಎಲ್ಲ ಬರಿಸ್ಕೊಂಡು ದಾರಿ ತಪ್ದೆ ಇದ್ರೆ ಸಾಕು ಭಗವಂತ . ನೀನೆ ಕಾಪಾಡಬೇಕು ... ಇರೋ ಚಟಗಳಿಂದಾನೆ ಹೊರಗೆ ಬರಕ್ಕೆ ಆಗ್ತಿಲ್ಲ ... ಹೊಸ ಹೊಸ ಆಸೆ ಕೂಪಕ್ಕೆ ಹೋಗ್ದೆ ಇರೋ ಹಾಗೆ ಮನಸ್ಸು ಗಟ್ಟಿ ಮಾಡು ತಂದೆ...

ಮೊನ್ನೆ ಅಷ್ಟೇ ಊರಿನ್ ಹೊರ ಬಾಗದಲ್ಲಿ ಇರೋ ಫಿಲಂ ಟಾಕಿಸ್ಗೆ ಹೋಗಿ ಸೆಕೆಂಡ್ ಷೋ ಮಲಯಾಳಿ  A   ಸಿನೆಮಾ ನೋಡ್ಕೊಂಡು ಬರ್ಬೇಕಾದ್ರೆ ಸಾಕ್ ಸಾಕ್ ಆಗಿ ಹೋಗಿತ್ತು ..ಯಾರಾದ್ರೂ ಪರಿಚಯದವರು ಸಿಕ್ತಾರೋ ಅನ್ನೋ ಭಯ ...  ಆದರು ಯಾರೋ ಒಬ್ಬ ಫ್ರೆಂಡ್ ಬಡ್ಡಿಮಗ ನೋಡ್ ಬಿಟ್ಟಿದ್ದ .. ಮರುದಿನ ಕಿಂಡಲ್ ಮಾಡಕ್ಕೆ ಹೊಸ ವಿಷ್ಯ ಬೆರೆ... ಥೋ ಸಾಕಾಗ್ ಹೋಗಿದೆ ....

ಸಂಜೆ ಆಗೋದೇ ಕಾಯ್ತಾ ಇರ್ತೀನಿ ಈಗೀಗ ... ಯಾವಾಗ್ ಮನೆ ಸೇರಿ ಊಟದ್ ಶಾಸ್ತ್ರ ಮಾಡಿ ರೂಮ್ಸೇರಿ  ಬಾಗ್ಲು ಭದ್ರ ಮಾಡಿ ನನ್ ಪ್ರಪಂಚ ಸೇರ್ಕೊಳ್ಳೋದು ಅಂತ ... ಪೆನ್ ಡ್ರೈವ್ನಲ್ಲಿ ಡೌನ್ಲೋಡ್ ಮಾಡಿ ತುಂಬ್ಕೊಂಡಿರೋ ಪೋರ್ನ್ ವಿಡಿಯೋಗಳನ್ನ ನೋಡ್ತಾ ಮೈ ಮರೆತರೆ ಬೆಳಗ್ಗಿನ ಜಾವ ಎರಡು ಮೂರು ಘಂಟೆ ಆದ್ರೂ ಗೊತ್ತಾಗಲ್ಲ ... ಅದೇನ್ ಹುಚ್ಚನ್ ತರಹ ಅಡಿಕ್ಟ್ ಆಗಿದಿನೋ ಗೊತ್ತಿಲ್ಲ...  ನನ್ನ ವಯಸ್ಸಿನ ಎಲ್ಲ ಹುಡುಗರೂ ಹಿಂಗೆ ಆಡ್ತಾರೋ ನಾನೊಬ್ನೇ ಹಿಂಗೋ ಆ ಭಗವಂತಂಗೆ ಗೊತ್ತು .... ರಾತ್ರಿ ನಿದ್ರೆ ಇಲ್ದೆ ಕೆಂಪಾಗಿರೋ ಕಣ್ಣು ನೋಡಿ  ಬೆಳಿಗ್ಗೆ ಅಮ್ಮ 'ನಿದ್ದೆ ಬರ್ಲಿಲ್ವೇನೋ ಮಗಾ....' ಅಂದ್ರೆ ಏನ್ ಉತ್ತರ ಹೇಳ್ಬೇಕು ಅನ್ನಕ್ಕೆ ಆಗದೆ ಒದ್ದಾಟ....

ವಾಟ್ಸ್ ಆಪ್ನಲ್ಲಿ ಆಫೀಸ್ ಕೆಲಸದಲ್ಲಿ ಇರೋವಾಗ ಒಂದಷ್ಟು ಖಾಸಾ ಸ್ನೇಹಿತರು ಕಳ್ಸೊ ಪೋಲಿ ಫೋಟೋಗಳು,  ವಿಡಿಯೋಗಳು .ಅವು ಲೋಡ್ ಆಗೋ ತಂಕ ತಡ್ಕೊಳಕ್ಕೆ ಆಗ್ದೆ ಇರೋ ಅಷ್ಟು ಕುತೂಹಲ .. . ನೋಡೋ ತಂಕ ನೆಮ್ಮದಿ ಇಲ್ಲ...  ಕೊನೆ ಪಕ್ಷ ಎಷ್ಟೇ ಬ್ಯುಸಿ ಇದ್ರೂ ವಾಶ್ ರೂಮ್ಗೆ ಹೋಗಿ ನೋಡಿದ್ರೆ ಸಮಾಧಾನ...  ಒಂದಿನ ಯಾವ್ದಾದ್ರೂ ಕಲೀಗ್ ಹತ್ರ ಸಿಕ್ಕಿ ಹಾಕಿಕೊಳ್ಳದೆ ಇದ್ರೆ ಸಾಕು..   ನನ್ನ ಬಗ್ಗೆ ಬ್ಯಾಡ್ ಇಂಪ್ಪ್ರೆಶನ್ ಬೀಳಕ್ಕೆ ಜೊತೆಗೆ ನಗೆಪಾಟಲಾಗಕ್ಕೆ ....ಏನ್ ಕರ್ಮಾನೋ .... ಹಾಕೋ ನೆಟ್ ಪ್ಯಾಕ್ ನೆಟ್ಟಗೆ ಮೂರ್ ದಿನ ಬರಲ್ಲ ... ದುಡಿಯೋ ಅರ್ಧ ದುಡ್ಡೆಲ್ಲಾ ಇದಕ್ಕೆ ಆಯ್ತು ...

ಶುಕ್ರವಾರ ಆದ್ರೆ ಸಾಕು ಪೇಪರ್ನಲ್ಲಿ ಬರೋ ಲೈಂಗಿಕ  ಆರೋಗ್ಯಕ್ಕೆ  ಸಂಬಂಧಪಟ್ಟ ಪ್ರಶ್ನೆಗಳ  ಕಾಲಂ ಓದೋ ಹುಚ್ಚು ಬೇರೆ  .ಅದ್ರಲ್ಲಿ ಬರೋ ಒಂದೊಂದು ಪ್ರಶ್ನೆಗಳು ನಂದೆ ಅನ್ಸೋವಷ್ಟು ಹಾಗೆ ಇರತ್ತೆ ...ಅದನ್ನು ಓದಿ ಲೈಟ್ ಆಗಿ ಭಯ ಬೇರೆ ... ದಾರಿ ತಪ್ತಾ ಇರೋದು ಗೊತ್ತಾಗಿನೂ ಇನ್ನು ಆ ಕೆಟ್ಟ ಚಟದ ದಾರಿಯಲ್ಲೇ ನಡೆದ್ರೆ ಸುಖ ... ಬಿಟ್ಟು ಬಿಡದ ಮಾಯೆ ....   ಹಿಂಗೆ ತಿಕ್ಕಲು ತರಹ ಯೋಚನೆ ಮಾಡ್ತಾ ಹೋದ್ರೆ ಒಂದಿನ ಮಾನಸಿಕ ಡಾಕ್ಟರ್ ಹತ್ರ ಕೌನ್ಸಿಲಿಂಗ್ಗೆ ಹೋಗೋ ಕಾಲ ದೂರ ಇಲ್ಲ ಅನ್ಸತ್ತೆ ... ಇನ್ನು ಅರ್ಧ  ರಾತ್ರಿ ಪ್ರಸಾರ ಆಗೋ   ಲೈಂಗಿಕ ಆರೋಗ್ಯದ ಬಗ್ಗೆ ಡಾಕ್ಟರ್ ಇಂಟರ್ವ್ಯೂನಲ್ಲಿ  ಕೊಡೊ ಸಲಹೆಗಳು ತಪ್ಪದೆ ನೋಡ್ತಾ ಇದ್ರೂ ಈ ಚಟದಿಂದ ಹೊರ ಬರಬೇಕು ಅಂದ್ಕೊಂಡ್ರೂ  ಇನ್ನು ಅದೇ ಸುಳಿಯಲ್ಲೇ ಸುತ್ತುತ್ತಾ ಇದೀನಿ ...  ಇದಕ್ಕೆಲ್ಲಾ ಅಂತ್ಯ ಯಾವಾಗಲೋ ...


ಚೆನ್ನಾಗ್ ಗೊತ್ತು ...
ಕಾಮ, ಲೈಂಗಿಕ ಭಾವನೆ  ಏನ್ ತಪ್ಪಲ್ಲ ...
ವಯಸ್ಸಿಗೆ ತಕ್ಕಂತೆ ಪ್ರತಿಯೊಬ್ಬ ಮನುಷ್ಯನಲ್ಲೂ ಮೂಡೋ ಮಧುರ ಸಂವೇದನೆ ...
ಯಾರಿಂದನೂ ಅದನ್ನ ತಡೆಯಕ್ಕೆ ಆಗಲ್ಲ ...

ಆದ್ರೆ .....
ಅತಿ ಆದ್ರೆ ಅಮೃತವೂ ವಿಷವೇ....

ಹೌದು ...ಇದನ್ನ ನಾನೀಗ ನಿಯಂತ್ರಣ ಮಾಡಲೇ ಬೇಕು ..
ಇಲ್ಲಾ ಅಂದ್ರೆ ಚಂದದ ಜೀವನಾನ ನನ್ನ ಕೈಯಾರೆ ನಾನೇ ಹಾಳ್ ಮಾಡ್ಕೊತೀನಿ ....

 'ಸಾಧ್ಯಾನ ನಿನ್ನಿಂದ ಅಂತ....'  ಒಂದು ಮನಸು ಕೇಳಿದ್ರೆ.... 
'ಅರೇ ... ಯಾಕ್ ಸಾಧ್ಯ ಇಲ್ಲ..'. ಅಂತ ಭಂಡ ಧೈರ್ಯ ಇನ್ನೊಂದು ಉತ್ತರ ಕೊಡತ್ತೆ ....
ಇಲ್ಲಾ ... ನಾನೇ ನನ್ ಮನಸನ್ನ ಇನ್ನು ಮುಂದೆ ಹಿಡಿತಕ್ಕೆ ತಂದುಕೋಬೇಕು...

ಎಲ್ಲವೂ ನನ್ನ ನಿರ್ಧಾರದಲ್ಲೇ ಇದೆ...
ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಇದ್ರೆ ಯಾವ ಔಷಧಿ, ಡಾಕ್ಟರ್ ಅವಶ್ಯಕತೆ ಇಲ್ಲ....
ಹೇಳೋ ಅಷ್ಟು ಸುಲಭ ಇಲ್ಲ ... ಆದ್ರೆ ಪ್ರಯತ್ನ ಪಟ್ರೆ ಯಾವುದೂ ಅಸಾಧ್ಯನೂ  ಅಲ್ಲ...
'ಮನಸ್ಸಿದ್ದರೆ ಮಾರ್ಗ....'

ಇನ್ ಮುಂದೆ ನನ್ನ ಮನಸು ಉತ್ತಮ ಓದಿನ ಬಗ್ಗೆ ಕೇಂದ್ರಿಕೃತವಾಗ್ಬೇಕು ...
ವಿಪರ್ಯಾಸ ಅಂದ್ರೆ ಈ ಮನಸ್ಥಿತಿಯಿಂದ ನನ್ನ ಅತಿ ಪ್ರೀತಿ ಪಾತ್ರವಾದ ಓದು ಬರಹ ಎಲ್ಲ ಮರ್ತು ಹೋಗಿದೆ ...

ದಿನೇ ದಿನೇ ನಿಧಾನವಾಗಿ  ಈ ಚಟದಿಂದ ಉತ್ತಮ ಹವ್ಯಾಸಗಳತ್ತ ನನ್ನ ಮನಸ್ಸನ್ನ ತಿರುಗಿಸ್ಬೇಕು ...

ಹೌದು ... ನಾ ಅದನ್ನ ಸಾಧಿಸ್ಬೇಕು...
ಖಂಡಿತಾ ನಾ ಗೆಲ್ತೀನಿ ... 

ಒಂದಿನಾ ...
ನಿಧಾನ ಆದ್ರೂ ಸರಿ...

I WILL....
Thursday, 18 September 2014

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 4


ತುಂಬಾ ದಿನ ಆಯ್ತು... ಬ್ಲಾಗ್ನಲ್ಲಿ ಏನು ಬರೆಯಕ್ಕೆ ವಿಷಯ ತೋಚ್ತಾ ಇಲ್ಲ ಅಂದಾಗ ನನಗೆ  ಸಹಾಯಕ್ಕೆ ಬರೋದೆ ಈ food pictures....  ಹಾಗಾಗಿ ನೀವು ಈ ಹೊಸ ಚಿತ್ರಗಳನ್ನ ನೋಡಿ ಹೇಗಿದೆ ಅಂತ feedback ಕೊಡಿ :-P 

so ಈಗ ramp walk ಶುರು ಆಗತ್ತೆ .... enjoy .... :D ಪಪ್ಪಾಯ ಪುಡ್ಡಿಂಗ್ .... :-)
ಪೈನಾಪಲ್ ಮೆಣಸುಕಾಯಿ ... :-)ಇದು ಸಿಂಪಲ್ ಆಗಿರೋ ಕಾಂಚಿಪುರಂ ಇಡ್ಲಿ ... ವಿಶೇಷ ಅಂದ್ರೆ ಅದ್ರ ಕೆಳಗಡೆ ಇರೋ mat ... ನಾನೇ ಬಾಳೆ ಎಲೆಯಿಂದ ಮಾಡಿದ್ದು ಅಷ್ಟೇ ... :-P 
ಕರುಂ ಕುರುಂ  ಬೆಣ್ಣೆ ಮುರುಕು ... ಸ್ವಲ್ಪ mirror effect  ಕೊಟ್ಟಿರೋ photo ....ಸೋರೆಕಾಯಿ ದಾಲ್ .... ನನ್ನದೇ ಶೈಲಿಯ ಅಲಂಕಾರ ... :-P ಪಪ್ಪಾಯ ಕಾಯಿ ಪಲ್ಯ .... twist  ಏನಪ್ಪಾ ಅಂದ್ರೆ ಪಪ್ಪಯಾ ಮರದ deco ಜೊತೆಗೆ... :-)ಇದೊಂದು ನಮ್ಮ ಮಧ್ಯಾಹ್ನದ ಊಟ ... ನಮ್ಮ ಫುಡ್ ಗ್ರೂಪ್ನಲ್ಲಿ ಕೆಲವರಿಗೆ ಇದು flight ನಲ್ಲಿ ಕೊಡೊ ಊಟದ ರೀತಿ ಕಂಡರೆ ... ಇನ್ನು ಕೆಲವರಿಗೆ Japanese Bento  Lunch Box ತರಹ ಕಾಣಿಸ್ತಂತೆ.... ನಾನಂತೂ ಮೊದಲ ಬಾರಿ ಕೇಳಿದ್ದು ಈ ಹೆಸರನ್ನ... ಆಮೇಲೆ Google search ಮಾಡಿ ಅದೇನಪ್ಪ... ಹೇಗಿರತ್ತೆ  ಅಂತ ನೋಡಿದ್ದು... :-)ಒಂದು ಭಾನುವಾರದ ಮಧ್ಯಾಹ್ನದ  ಸಿಂಪಲ್ north indian menu... ರೋಟಿ , ಪನೀರ್ ಮಸಾಲ, ಕ್ಯಾರೆಟ್ ಟೊಮೇಟೊ ಸೂಪ.. ;-)ಮಿರ್ಚಿ ಕಾ ಸಾಲನ್ ... ಸಂಜೀವ್ ಕಪೂರ್  ಬ್ಲಾಗ್ನ follow ಮಾಡಿದ್ದು... n ಈ ಚಿತ್ರ ಅವರ ಫೇಸ್ಬುಕ್ pageನಲ್ಲೂ ಬಂದಿದೆ... :-)ಪುಲ್ಕಾ ಜೊತೆಗೆ ಪಾಲಕ್ ಪನೀರ್....


 

corn ಕೂರ್ಮ .... ಅದೇನು ವಿಶೇಷ ಅಲ್ಲ.... ಆದ್ರೆ ಹಿಂದಿರೋ ಟೇಬಲ್ ಕ್ಯಾಲೆಂಡರ್ special.... ಪ್ಹೆಸ್ಬುಕ್ನ ಒಬ್ಬ ಗೆಳತಿಯ ಮನೆಯಲ್ಲಿ ಬೆಳೆಯೋ ಕಸಿ ಮಾಡಿದ ಅತಿ ಅಪರೂಪದ ದಾಸವಾಳಗಳು.... ಕೂರ್ಮಕ್ಕಿಮ್ತ ಎಲ್ಲರಿಗೂ ಇಷ್ಟ ಆದದ್ದು ಈ ಕ್ಯಾಲೆಂಡರ್ನಲ್ಲಿ ಇರೋ ಚಿತ್ರ :-)ಉಪ್ಪಿನಕಾಯಿ....
Mango Phirni.... ಮಾವಿನ ಹಣ್ಣಿನ ಸೀಸನ್ ಸ್ಪೆಷಲ್ ....
ಪಂಜಾಬಿ ಚೋಲೆ ಬಟೂರ ...
ಸಿಹಿ ಕುಂಬಳಕಾಯಿ ಹೂವಿನ ಸಾಸಿವೆ...
ಪೈನಾಪಲ್ ಪುಡ್ಡಿಂಗ್...
Capcicum ಬೇಸನ್.... ಇದರಲ್ಲಿ ನಾವು ಸ್ಕೂಲ್ ಕಾಲೇಜ್ನಲ್ಲಿ ನೋಟ್ ಬುಕ್ನ ಕೊನೆಯ ಪೇಜ್ನಲ್ಲಿ ಆಡ್ತಿದ್ದ ಆಟದ ಚಿತ್ರವನ್ನ ದೊಣ್ಣೆ ಮೆಣಸಿನ ಬೀಜದಲ್ಲಿ try ಮಾಡಿದ್ದು ... ಆ ಆಟದ  ಹೆಸರು Tic - Tac -Toe ಅಂತ ಮೊನ್ನೇನೆ ಗೊತ್ತಾದದ್ದು ನನಗೆ :-)
ಇದು amchi ಪತ್ರೊಡೆ ... ಕೊಂಕಣಿ ವಿಶೇಷ ... :-)ಬೆಣ್ಣೆ ಮಸಾಲ ದೋಸ.... :-)ಮೊನ್ನೆ ನಮ್ಮ ಮದುವೆ anniversary ಗೆ ಮಾಡಿದ pressure cooker cake.... full flop.... ಸ್ಟಿಲ್ ನೆನಪಿಗಾಗಿ ಅದರ ಒಂದು ಚಿತ್ರ :-Pಫೆಬ್ರವರಿಯಲ್ಲಿ  valentines day ಗಾಗಿ ಸುಮ್ನೆ ಚಟ್ನಿ ಪುಡಿಯಿಂದ ಮಾಡಿದ ಒಂದು ಪುಟ್ಟ ಪ್ರಯತ್ನ .. :-)


ಈ ಸಂಚಿಕೆಗೆ ಇಷ್ಟು ಸಾಕು...

ಮತ್ತೊಮ್ಮೆ ಮತ್ತಷ್ಟು ಚಿತ್ರದೊಂದಿಗೆ ....

ಅಲ್ಲಿವರೆಗೂ ...

ಪ್ರೀತಿಯಿಂದ 

ಸುದೀಪ... :-)

Sunday, 6 July 2014

ಅಜ + ಗಜ + ಅಂತರ


"ಮಮ್ಮೀ"... 

"ಏನ್ ಚಿನ್ನು"... 

"ಸ್ನೇಹ ತುಂಬಾ ಕೆಟ್ಟವಳು ಮಮ್ಮಿ"....  

"ಏನಾಯ್ತೆ ಚಿನ್ನು".....  

"ಏನ್ ಗೊತ್ತಾ ಮಮ್ಮಿ ..  ಇವತ್ತು ಬೆಳಿಗ್ಗೆ ಪಪ್ಪಾ ನಂಗೆ ಸ್ಚೂಲ್ಗೆ ಡ್ರೋಪ್ ಮಾಡಕ್ಕೆ ಬಂದಿದ್ರಲ್ಲಾ ... ಸ್ನೇಹ ಅವರನ್ನು ನೋಡಿ ಎಷ್ಟು ಕೆಟ್ಟದಾಗಿ ಮಾತಾಡಿದ್ಲು  ಗೊತ್ತ  ಮಮ್ಮಿ..." 

"ಸ್ನೇಹ ಏನಂದ್ಲೆ ಚಿನ್ನು"  ...?

ಮತ್ತೆ...ಮತ್ತೆ  "ನನ್ನ ಪಪ್ಪಾಗೆ ಡೊಳ್ಳ್  ಹೊಟ್ಟೆ  ಅಂತೆ ... ಕಪ್ಪಗಿದಾರೆ ಅಂತೆ... ಸ್ಮಾರ್ಟ್ ಇಲ್ಲ ಅಂತೆ ... ಇನ್ನು ಏನೇನೋ  ಕೆಟ್ಟದಾಗಿ ಮಾತಾಡಿದ್ಲು ಮಮ್ಮಿ.. ನಂಗದೆಷ್ಟು  ಸಿಟ್ಟು ಬಂತು ಗೊತ್ತ ಮಮ್ಮಿ .... ನನ್ ಪಪ್ಪನ್ ಬಗ್ಗೆ ಅವಳಿಗೆ ಏನು ಗೊತ್ತು ಅಲ್ವಾ ಮಮ್ಮಿ ... ಅವರೆಷ್ಟು ಒಳ್ಳೆಯವ್ರು .. ನಂಗದೆಷ್ಟು  ಮುದ್ದು ಮಾಡ್ತಾರೆ... ನಾನು ಅವ್ರ princess ... cute doll ಅಲ್ವಾ ಮಮ್ಮಿ ...  ದಿನಾ ರಾತ್ರಿ ನಂಗದೆಷ್ಟು ಚಂದದ ಕಥೆ ಹೇಳ್ತಾರೆ ... ನನ್ನನ್ನು,ನಿನ್ನನ್ನು ಅದೆಷ್ಟು ಪ್ರೀತಿಯಿಂದ ನೋಡ್ಕೋತಾರೆ ಅಲ್ವಾ ಮಮ್ಮಿ . "

"ಮಮ್ಮಿ ... ಇದೆಲ್ಲ ಆ ಸ್ನೇಹಂಗೆ  ಏನು ಗೊತ್ತು... ಪಪ್ಪನ್ ಒಂದು ಸಾರಿ ನೋಡಿದಷ್ಟೇ ... ಅದೆಷ್ಟು ತಪ್ಪು ತಪ್ಪು ಮಾತಾಡಿ ಬಿಟ್ಲು ಅವ್ಳು .... ನಾಳೆಯಿಂದ ಅವಳ್ ಹತ್ರ ಮಾತಾಡಲ್ಲ ನಾನು... she is very bad ಅಲ್ವಾ ಮಮ್ಮಿ"....  i hate her.... i love my pappa very much..." ರಂಜು ಉದ್ವೇಗದಿಂದ ಹೇಳ್ತಾ ಇದ್ರೆ ಪವಿತ್ರಳಿಗೆ   3 ನೇ ಕ್ಲಾಸ್ನಲ್ಲಿ ಓದೋ ಮಗಳ ಮಾತನ್ನ ಕೇಳಿ ಅದೇನೇನೋ ಹಳೆ ನೆನಪುಗಳು ಒತ್ತರಿಸಿ ಬರ್ತಾ ಇತ್ತು.

ರಂಜುನ ಅದು ಹೇಗೋ ಸಮಾಧಾನ ಮಾಡಿ ಸಂಜೆಯ ತಿಂಡಿ, ಹೋಂವರ್ಕ್ ಎಲ್ಲ ಮುಗ್ಸೋದ್ರೋಳ್ಗೆ  ಅದಾಗಲೇ ರಾತ್ರಿ 8 ಘಂಟೆ ದಾಟಿತ್ತು. ಅಷ್ಟರಲ್ಲಿ ಸಂಜಯ್ ಆಫೀಸಿಂದ ಬಂದಾಗಿತ್ತು. ರಾತ್ರಿ ಊಟದ ತಯಾರಿ ಮುಗ್ಸಿ ಇಬ್ರಿಗೂ ಬಡ್ಸಿ ತಾನು ಊಟ ಮಾಡಿ ಹಾಸಿಗೆ ಸೇರೋದ್ರೊಳ್ಗೆ ಘಂಟೆ 10.30 ದಾಟಿತ್ತು. ರಂಜು ಪಪ್ಪನ್ ಹತ್ರ ಬೆಳಿಗ್ಗೆ ನಡೆದ ವಿಷ್ಯ ಎಲ್ಲಾ ವರದಿ ಒಪ್ಸಿ ಸ್ನೇಹನ್ ಹತ್ರ ಮಾತಾಡಲ್ಲ ಇನ್ನು ಅಂತ ಸಿಟ್ಟು ಮಾಡ್ಕೊಂಡು, ಪಪ್ಪನ್ ಹೊಟ್ಟೆ ಮೇಲೆ ಕಾಲು ಹಾಕಿ ಮಲ್ಕೊಂಡು ಪಪ್ಪಾ ಕಥೆ ಹೇಳು ಅಂತ ಹೇಳ್ಸಿಕೊಂಡು, ಅದಾಗಲೇ ನಿದ್ದೆಗೆ ಜಾರ್ತಾ ಇದ್ಲು. ಸಂಜಯ್ಗೆ ಇದೆಲ್ಲ ಮಕ್ಕಳ common ಜಗಳಗಳು, ಇವತ್ತು ಜಗಳ ಆಡಿದರು ನಾಳೆ ಮತ್ತೆ ಒಂದಾಗ್ತಾರೆ ಅನ್ನೋ ನಂಬಿಕೆ. ಜೊತೆಗೆ ತನ್ನ ಅಂದ ಚಂದದ ಬಗ್ಗೆ ಯಾವತ್ತು ಕೀಳರಿಮೆ ಇಲ್ಲದಿರುವುದರಿಂದ ಮಕ್ಕಳ  ಮಾತೆಲ್ಲ ಸೀರಿಯಸ್ ಆಗಿ ತೆಗೊಳ್ಳದ ವ್ಯಕ್ತಿತ್ವ. 

ಇತ್ತ ಪವಿತ್ರನಿಗೆ ಮಲಗಿದ್ರೂ ಸಂಜೆ ಮಗಳು ರಂಜು ಆಡಿದ ಮಾತೇ  ಕಿವಿಯಲ್ಲಿ ಪ್ರತಿಧ್ವನಿಸ್ತಿತ್ತು. ಆಕೆ ಅದಾಗಲೇ ತನ್ನ ಕಳೆದು ಹೋದ ದಿನಗಳ ನೆನಪಿಗೆ ಜಾರಿದ್ಲು.  ಆಗಷ್ಟೇ ಅವಳ ಪಪ್ಪನಿಗೆ ಜಿಲ್ಲಾವಾರು ಊರಿಂದ  ದೊಡ್ಡ ಸಿಟಿಗೆ ವರ್ಗಾವಣೆಯಾಗಿತ್ತು. ಹದಿನಾಲ್ಕು ವರ್ಷದ teenage ಹುಡುಗಿ. ಎಂಟನೆ ತರಗತಿಗೆ ಆ ಊರಿನ ಪ್ರಸಿದ್ಧ ಕಾನ್ವೆಂಟ್ಗೆ admission ಆಗಿತ್ತು. ಹೊಸ ವಾತಾವರಣ... ಹೊಸ ಶಾಲೆ. ಹೊಸ ಸ್ನೇಹಿತರು ... ಆಗಷ್ಟೇ ಋತುಮತಿಯಾಗಿದ್ದ ಪವಿತ್ರ  ಸುಂದರವಾಗಿ ಹೂವಂತೆ  ಅರಳಿದ್ಲು . ಜೊತೆಗೆ  ಪಪ್ಪನ ಪಡಿಯಚ್ಚು. ಅವರೂ ಸ್ಫುರದ್ರೂಪಿ. ಆ ಸೌಂದರ್ಯ ಮಗಳಿಗೂ ಬಂದಿತ್ತು. ಉನ್ನತ ಹುದ್ದೆ ದೊಡ್ಡ ಜವಾಬ್ದಾರಿಯುತ ಅಧಿಕಾರಿ. ಅಷ್ಟೆಲ್ಲ ಇದ್ರೂ ಸ್ವಲ್ಪವೂ ಗತ್ತಿಲ್ಲದ ವ್ಯಕ್ತಿ.


ಇನ್ನು ಅವಳ ಅಮ್ಮನ ಬಗ್ಗೆ ಹೇಳ್ಬೇಕಂದ್ರೆ ಸಾಧಾರಣ ಗೃಹಿಣಿ. ತಾನಾಯ್ತು ತನ್ನ ಕೆಲಸ ಆಯ್ತು . ಗಂಡ ಮಗಳ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣು . ಮೊದಲೇ ಎಣ್ಣೆಗಪ್ಪು ಬಣ್ಣದ ಆಕೆಗೆ  ಎಡಗೆನ್ನೆ ಪೂರ್ತಿ  ಹುಟ್ಟಿನಿಂದ ಬಂದ ಕಪ್ಪು ಮಚ್ಚೆ ಇಡೀ ಕೆನ್ನೆಯನ್ನು ಆವರಿಸಿತ್ತು. ಲಕ್ಷಣವಾಗಿದ್ದರೂ ಮೊದಲ ಬಾರಿ  ನೋಡಿದವರಿಗೆ ಆ ಮಚ್ಚೆಯಿಂದ  ಏನೋ ಅನಿಸುವಂಥ ಮಹಿಳೆ. 

ಒಬ್ಬಳೇ ಮಗಳಾದ ಪವಿತ್ರನಿಗೆ ಅಮ್ಮನ  ಪ್ರೀತಿ ಅಪರಿಮಿತವಾಗಿ ಸಿಕ್ಕಿದ್ರೂ ಈಗ ಸಿಟಿಗೆ ಬಂದ ಮೇಲೆ ವಯೋಸಹಜವಾಗಿ ಅದೇನೋ ಸೌಂದರ್ಯದ ಬಗ್ಗೆ ವಿಶೇಷವಾದ ಆಸಕ್ತಿ. ಇದರ ಪರಿಣಾಮ ಚಂದವಿಲ್ಲದ ತಾಯಿಯೂ ಯಾಕೋ ಇಷ್ಟ ಆಗ್ತಿರಲಿಲ್ಲ. ಸ್ಕೂಲ್ ಕಾರ್ಯಕ್ರಮಗಳಲ್ಲಿ ಪಪ್ಪನನ್ನೇ ಬಲವಂತ ಮಾಡಿ ಕರೆದುಕೊಂಡು ಹೋಗ್ತಿದ್ಲು . ತನ್ನ ಸ್ನೇಹಿತರೊಂದಿಗೆ  ಆಕೆ ತಾಯಿಯನ್ನ ಯಾವತ್ತೂ ಭೇಟಿ ಮಾಡಿಸ್ತಾ ಇರ್ಲಿಲ್ಲ. ಏನೇನೋ ಸಬೂಬು ಹೇಳಿ ಅಮ್ಮನನ್ನ  ನಿಧಾನವಾಗಿ ತನ್ನ ಜೊತೆ ಬರದಂತೆ avoid ಮಾಡಕ್ಕೆ ಪ್ರಾರಂಭ ಮಾಡಿದ್ಲು. ಈ ಸೂಕ್ಷ್ಮ ಅವಳ ಅಮ್ಮನಿಗೆ ಗೊತ್ತಾದ್ರೂ,ಅವರೂ ಆದಷ್ಟು ದೂರಾನೆ ಇರ್ತಿದ್ರು. ಇದಕ್ಕೆಲ್ಲಾ ಕಾಲವೇ ಮದ್ದು ಎಂಬುದು ಅವರ ನಂಬಿಕೆ. ಹುಡುಗು ಬುದ್ದಿ ... ಹೋಗ್ತಾ ಹೋಗ್ತಾ ಸರಿಯಾಗುತ್ತೆ ಅನ್ನೋ ಆಶಾಭಾವನೆ. 

ಆಗಷ್ಟೇ highschool ಸೇರಿದ್ದ ಪವಿತ್ರಂಗೆ ಹುಡುಗರು, ಲವ್ ಇದೆಲ್ಲ ಸಹಜ ಕುತೂಹಲ.  ಅವಳಿಗೆ ಪಪ್ಪಾ ಅಮ್ಮಂದು ಲವ್ ಮ್ಯಾರೇಜ್ ಅನ್ನೋ ವಿಷ್ಯ ಮೊದಲೇ ಗೊತ್ತಿದ್ರೂ, ಇತ್ತೀಚೆಗೆ ಅದೆಷ್ಟೋ ಬಾರಿ ಆಲೋಚನೆ ಮಾಡಿದ್ಲು...  ಈ ಪಪ್ಪಾ ಈಗ್ಲೇ ಇಷ್ಟು handsome ಆಗಿದ್ದಾರೆ, ಇನ್ನು ಮದುವೆ ಸಮಯಲ್ಲಿ ಅದೆಷ್ಟು ಚಂದ ಇದ್ರೂ ಅನ್ನೋದು ಅವರ ಮದುವೆ album ನೋಡಿದ್ದ ಅವಳಿಗೆ ಗೊತ್ತಿತ್ತು.   ಈ ಅಮ್ಮ   ನೋಡಕ್ಕೆ ಸ್ವಲ್ಪಾನೂ ಚಂದ ಇಲ್ದೆ ಇದ್ರೂ ಅದೇನು ಅಂತ ಪಪ್ಪಾ  ಲವ್ ಮಾಡಿದರೋ  .. ಪಪ್ಪಾ ಮನಸ್ಸು ಮಾಡಿದ್ರೆ ಚಂದದ ಅಪ್ಸರೆ ತರಹದ ಹುಡುಗಿ ಸಿಗ್ತಿರ್ಲಿಲ್ವಾ ... ಅದು ಬಿಟ್ಟು ಈ ಪಪ್ಪಾ ಅದೇನಂಥ ಈ ಅಮ್ಮನ್ನ ಮೆಚ್ಚಿದ್ರೋ ..ಪವಿತ್ರ  ಸಾವಿರ ಬಾರಿ ತಲೆಕೆಡಿಸಿಕೊಂಡದ್ದಿದೆ ಈ ವಿಷಯಕ್ಕೆ . 


ಹೀಗೆ ವರ್ಷಗಳು ಕಳಿತಾ ಕಳಿತಾ    ಎಲ್ಲವೂ ಅರಿವಾಗ್ತಾ ಇತ್ತು ಪವಿತ್ರನಿಗೆ. ಯಾವುದು ಸರಿ ಯಾವುದು ತಪ್ಪು.  ಈ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಚೆಲುವೆ ಮೇಲು ಅನ್ನೋದು ಗೊತ್ತಾಗ್ತಾ ಇದ್ದ ಹಾಗೆ ಪವಿತ್ರ ತಾನಾಗೆ ಬದಲಾಗಿದ್ಲು. ಅಮ್ಮನ ಬಗ್ಗೆ ಗೌರವ, ಆದರ ತೋರಿಸ್ತಿದ್ಲು. ತನ್ನ ಹುಡುಗು ಬುದ್ದಿಯಿಂದ ಅವ್ರಿಗೆ ನೋಯಿಸಿದ್ದಕ್ಕೆ ಕ್ಷಮೆ ಸಹಾ ಕೇಳಿದ್ಲು. ಆ ಅಮ್ಮನೋ ಕರುಣಾಮಯಿ ... ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಹರಸೋ ಮಾತೃಹೃದಯ. 

ಕಾಲೇಜು    ವಿಧ್ಯಾಭ್ಯಾಸ ಮುಗಿದು  ಮದುವೆ ವಯಸ್ಸು ಬಂದಾಗ ಪಪ್ಪನ ಸ್ನೇಹಿತನ ಮಗ, ಬಾಲ್ಯದ ಗೆಳೆಯ,ಸಾಧಾರಣ ರೂಪಿನ ಸಂಜಯ್ ಜೊತೆ ಮದುವೆ  ಮಾತುಕತೆ ನಡೆದಾಗ್ಲೂ ಮನಃಪೂರ್ವಕವಾಗಿ ಒಪ್ಪಿಗೆ ಕೊಟ್ಟಿದ್ಲು. ಅವಳ  ಪಪ್ಪಾ ಅದೆಷ್ಟೋ ಬಾರಿ, "ಒತ್ತಾಯ ಇಲ್ಲ ಪವಿತ್ರ....  ನಿನಗೆ ಇಷ್ಟ ಇದ್ರೆ ಮಾತ್ರ  ಮಾತುಕತೆ ಮುಂದುವರಿಸ್ತೀನಿ..... ಯೋಚನೆ ಮಾಡಿ ಹೇಳು .... " ಅಂತ ಅವಳ ನಿರ್ಧಾರ ಕೇಳಿದಾಗಲೂ   ತನ್ನ ಸಂಪೂರ್ಣ ಒಪ್ಪಿಗೆ ಕೊಟ್ಟಿದ್ಲು. ಅದಕ್ಕೆ ಮುಖ್ಯ ಕಾರಣ ಅವನ caring nature... ಅದೆಷ್ಟೋ ವರ್ಷದಿಂದ ಅವನನ್ನ ಗಮನಿಸ್ತಾ ಬಂದಿದ್ದ ಪವಿತ್ರಾಗೆ ಈ ಕಾಲಘಟ್ಟದಲ್ಲಿ ರೂಪ, ಸೌಂದರ್ಯ ಇದಕ್ಕೆಲ್ಲಾ  ಯಾವುದೇ ಪ್ರಾಶಸ್ತ್ಯ ಇಲ್ಲವಾಗಿತ್ತು. 

ಮದುವೆಯಾಗಿ ಚಂದದ ಸಂಸಾರ ನಡೆಸಿಕೊಂಡು ಸಂಜಯ್ನ ಮನದನ್ನೆಯಾಗಿ,ರಂಜಿತಾಳ ತಾಯಿಯಾಗಿ  ದಿನ ದೂಡುತ್ತಿದ್ದ ಈ ಸಮಯದಲ್ಲಿ ಪುನಃ ಆ   ಹಿಂದಿನ ನೆನಪುಗಳೆಲ್ಲ ಮರುಕಳಿಸಿತ್ತು. ಅದೂ ಮಗಳ matured ಮಾತುಗಳಿಂದ. ತನ್ನ ಪಪ್ಪನನ್ನ ಎಂದೂ ಕೀಳಾಗಿ ನೋಡದ ತನ್ನದೇ ಹೊಟ್ಟೆಯಲ್ಲಿ ಹುಟ್ಟಿದ ಪುಟ್ಟ ಕೂಸು,ಪವಿತ್ರಳ ದೃಷ್ಟಿಯಲ್ಲಿ ಇವತ್ತು ಅತೀ ಎತ್ತರಕ್ಕೆ ಬೆಳೆದು ನಿಂತಿದ್ಲು. 

ಯಾಕೋ ಎಂಟು ವರ್ಷದ ಮಗಳ ಮುಂದೆ ತೀರಾ ಚಿಕ್ಕವಳಾದೆ ಅನ್ನೋ ಭಾವ. ತನ್ನ ಕರುಳಕುಡಿಗೆ ಇರೋ ಅಲ್ಪ ಮಾನವೀಯತೆಯೂ ತನ್ನಲ್ಲಿ ಇರಲಿಲ್ಲ ಅನ್ನೋ ವೇದನೆ. ರಕ್ತ ಮಾಂಸ ಕೊಟ್ಟು ಜನ್ಮ ನೀಡಿದ ಅಮ್ಮನಿಗೆ ನೋವಿಟ್ಟ ಪಾಪಿ ಅನ್ನೋ ಬೇಸರ.  ಆ ಇರುಳು  ಅದೇಕೋ ನಿದ್ದೆ ದೂರಾದ ರಾತ್ರಿ. ಅಮ್ಮನ ಬಗ್ಗೆ ಕೇವಲವಾಗಿ ಯೋಚನೆ ಮಾಡಿದ್ದಕ್ಕೆ, ಅಷ್ಟೆಲ್ಲಾ ವರ್ತಿಸಿಯೂ ಮರೆತು ಜೀವಿಸಿದ್ದಕ್ಕೆ... 

 ಅದೆಷ್ಟೋ ವರ್ಷದ ನಂತರ ಪಶ್ಚಾತಾಪದಿಂದ ಕಣ್ಣೆಲ್ಲ ಒದ್ದೆ ಒದ್ದೆ.... 

 ಎಂದೂ ತನ್ನ ಉಸಿರಿರುವ  ತನಕ ಕಾಡುವ ಪಾಪ ಪ್ರಜ್ಞೆ .....   

ಅದೆಷ್ಟು ಅಂತರ ತಾಯಿ ಮಗಳಿಗೆ ... 


Saturday, 8 March 2014

ಸ್ತ್ರೀ.... ಕೆಲವೊಮ್ಮೆ ಹೀಗೂ .....


'ನಿನಗಿಂತ ಮೊದಲೇ ಅವಳು  ನನಗೆ  ಸ್ನೇಹಿತೆಯಾಗಿ ಪರಿಚಯ ಆದವಳು ..... ಈವರೆಗೆ ನನ್ನೆಲ್ಲ ಸುಖ ಕಷ್ಟಗಳನ್ನು ಹಂಚಿಕೊಂಡದ್ದು    ಬಹುಶಃ ಅವಳ ಹತ್ತಿರ ಮಾತ್ರ .......  ನನ್ನ ಮೊದಲ ಆತ್ಮೀಯ ಸ್ನೇಹಿತೆ ಅವ್ಳು '  .... ಹೀಗೆ ಅವ್ನು ಫೋನಿನಲ್ಲಿ ಹೇಳ್ತಾ ಇದ್ರೆ 'feeling jealous' ಅಂದಿದ್ದೆ ... ಹೌದು .... ಆ ಘಳಿಗೇಲಿ ನಾ  ಆ ಮಾತು ಸ್ವಲ್ಪ ತಮಾಷೆಯಾಗಿ ಆಡಿದ್ರು ಎಲ್ಲೋ ಒಂದೆರಡು ಸೆಕೆಂಡ್ ನಿಜಕ್ಕೂ ಹೊಟ್ಟೆಕಿಚ್ಚಾಗಿದ್ದು  ಸುಳ್ಳಲ್ಲ ....  ಅಂದರೆ ನನ್ನ ಸ್ಥಾನ ಏನಿದ್ರೂ ಅವಳ ನಂತರದ್ದು .... ಯಾಕೋ ಮನಸ್ಸಲ್ಲಿ ಒಂದರೆಗಳಿಗೆ  ಏನೇನೋ ಹುಚ್ಚು ಹುಚ್ಚು ಯೋಚನೆ....  ವಾಸ್ತವಕ್ಕೆ ಬಂದಾಗ ...ಅರೆ ಶಿಟ್....   ನಾನದೆಷ್ಟು stupid ಆಗಿ  ಯೋಚನೆ ಮಾಡ್ತಿದೀನಿ .... ಏನಾಗಿದೆ ನನಗೆ ...!!!! ಯಾಕೆ ಹೀಗೆ...!!!! 

ಅರೆ.... ಅವನಿಗೂ ತನ್ನದೇ ಖಾಸಗಿ ಜೀವನ ಇದೆ... ಅಲ್ಲಿ ಅದೆಷ್ಟೋ ಜನ ಸ್ನೇಹಿತರಿರ್ತಾರೆ .... ಅವರಲ್ಲಿ ನಾನು ಒಬ್ಳು ... ನಿಜ....  ಸ್ವಲ್ಪ  ಆತ್ಮೀಯಳು ಅಂದ್ರೂ ತಪ್ಪಾಗಲ್ಲ ... ಆದ್ರೂ..... ಪ್ರತಿಬಾರಿ ಮಾತು ಈ 'ಆದ್ರೂ' ಅನ್ನೋ ಶಬ್ದದಲ್ಲೇ ಕೊನೆಗೊಳ್ಳುತ್ತೆ .... ... ಆದ್ರೂ....  ಅದ್ರಲ್ಲಿ ನಾನೇ ಪ್ರಮುಖವಾಗಿ ಇರಬೇಕು ಅನ್ನೋ  ಹುಚ್ಚು  ಅದೇಕೋ .... ಮುಖ್ಯವಾಗಿ ಅವನು ಏನು ಅಂತ ಗೊತ್ತು ... ಆ ಹುಡುಗಿಯೂ ಏನು ಅಂತ ಅಲ್ಪ ಸ್ವಲ್ಪ ಗೊತ್ತು.... ನಮ್ಮಿಬ್ಬರ ಸ್ನೇಹ ಎಷ್ಟು ಗಟ್ಟಿ ಅನ್ನೋದು ಗೊತ್ತು ... fir b .... ನಿಜ ಸಮಸ್ಯೆಯಂದರೆ, ಎಲ್ಲಿ ಇತರರು ನನಗಿಂತ ಹೆಚ್ಚು ಆತ್ಮೀಯರಾಗಿ ನನ್ನ ಮತ್ತು ಅವನ ಸ್ನೇಹ ಕಳೆದು ಹೋಗುತ್ತೆ ಅನ್ನೋ ಭಯಾನ.... ??? ಇದ್ರೂ ಇರಬಹುದು... ಅದ್ಯಾಕೆ  ಯಾವಾಗ್ಲೂ  ಅಷ್ಟು INSECURITY FEELING..!!!!    ಯಾಕಿಷ್ಟು POSSESSIVENESS ಯಾವಾಗ್ಲೂ  ಈ ಹೆಣ್ಣು ಜೀವಗಳಿಗೆ ....  !!!!!

ಎಲ್ಲೋ ಯಾರಿಗೋ ಯಾವುದೋ ವಿಷಯಕ್ಕೆ ಸಂಬಂಧ ಕಳಚಿ ಬಿದ್ದಿರುತ್ತೆ... ಬಹಳಷ್ಟು ಕಥೆ ಕೇಳಿರ್ತೀವಿ ... ತನಗೂ ಹಾಗೆ ಆಗುತ್ತೆ ಅನ್ನೋ ಆತಂಕಾನಾ!!!! ಇದ್ರೂ ಇರಬಹುದು... ಇಲ್ಲವೇ ನಮಗೆ  ಹಿಂದೊಮ್ಮೆ ಆದ ಕೆಟ್ಟ ಅನುಭವಗಳು  ಪುನಃ ಮರುಕಳಿಸದೇ ಇರಲಿ ಅನ್ನೋ ಆಸೆನಾ... 

ನಿಜ ... ಈ ಮತ್ಸರಕ್ಕೆ ಮುಖ್ಯ ಕಾರಣ ಸಂಬಂಧಗಳಲ್ಲಿ ಕಾಡೋ ಅಭದ್ರತೆ....  ಅತಿ ಅನಿಸುವಷ್ಟು ನನ್ನದು, ನನ್ನವನು ನನಗೆ ಮಾತ್ರ ಸೇರಿದ ಆತ್ಮೀಯ ವಸ್ತು ಅನ್ನೋ  ವಿಚಾರಕ್ಕೆ ಮೂರನೆ ವ್ಯಕ್ತಿಯಿಂದ ಧಕ್ಕೆ ಬಂದಾಗ, ಅದೂ ಮತ್ತೊಬ್ಬ ಹೆಣ್ಣಿನಿಂದ,   ಯಾಕೋ ಎಲ್ಲಾ ಅಲ್ಲೋಲ ಕಲ್ಲೋಲ....... ಎಲ್ಲಿ ನಾ ಪ್ರೀತಿಸುವ  ಈ ಆತ್ಮೀಯ ಸಂಬಂಧ  ನನ್ನ ಕೈ  ತಪ್ಪಿ ಹೋಗಿಬಿಡುತ್ತೋ ಅನ್ನೋ ಆತಂಕ .... ಅದು ಈ ಹೆಣ್ಣು ಮಕ್ಕಳಲ್ಲೇ ಜಾಸ್ತಿ ಅಂದರೆ ಸುಳ್ಳಲ್ಲ ...

ಅದರಲ್ಲೂ ಇತ್ತೀಚೆಗೆ ಫೇಸ್ ಬುಕ್ ನಿಂದ ಕಲಿತ ದೊಡ್ಡ ಪಾಠ ಇಡೀ ಜೀವನಕ್ಕೆ ಉಪಯೋಗಕ್ಕೆ ಬರುವಂಥದ್ದು .... ಯಾವುದೇ ಅತಿ ಅನ್ನಿಸೋ ಅಷ್ಟು  ಹತ್ತಿರಕ್ಕೆ ಬಂದ ಆತ್ಮೀಯ ಅನ್ನೋ ಸಂಬಂಧಗಳನ್ನ ಮಿತಿಯಲ್ಲಿ ಪ್ರೀತಿಸು.... ಯಾವುದೇ ಹುಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಇರುವಷ್ಟು ದಿನ ಅಸ್ವಾದಿಸು ಅಷ್ಟೇ ... ಇವತ್ತಿನ ದಿನ ನನ್ನದು ... ಯಾವುದೋ ಪರಿಸ್ಥಿತಿಗೆ  ಮುಂದೊಂದು ದಿನ ಸಂಬಂಧ  ಕಳಚಿದರೂ ನೋವು ಅತಿ ಅನಿಸುವಷ್ಟು ಕಾಡಲ್ಲ ಆಗ  ....

ಪ್ರತಿಬಾರಿ facebook scroll ಮಾಡೋವಾಗ್ಲು ಕಣ್ಣಿಗೆ ದಿನಕ್ಕೊಮ್ಮೆ ಆದ್ರೂ ಕಾಣೋ quote.... Dont like people more.....Dont expect more.... one  day defenately it hurts more .... ಎಷ್ಟು ನಿಜ ಅನ್ಸುತ್ತೆ ಪ್ರತಿ ಬಾರಿನೂ... 

ಮೊನ್ನೆ ಒಬ್ಬ ಸ್ನೇಹಿತ ಹೇಳ್ತಾ ಇದ್ದ.... ಮದುವೆ ಆಗಿದ್ದೆ ತಡ ಮಾರಾಯ್ತಿ... ಜೀವಕ್ಕೆ ಜೀವ ಕೊಡೋ  ಅತಿ ಒಡನಾಟದಲ್ಲಿದ್ದ  ಪ್ರೀತಿಯ ತಂಗಿ  ಕೋಪ ಮಾಡ್ಕೊಂಡಿದ್ದಾಳೆ .... ನೀನು ನನ್ನ ಜೊತೆ ಮೊದಲಿನ ರೀತಿ  ಸಮಯ ಕಳೀತಿಲ್ಲ ... ನಿನಗೆ  ನಿನ್ನ ಹೆಂಡತೀನೇ   ಜಾಸ್ತಿ ... ಹೀಗೆಲ್ಲ ಆರೋಪ .... ಈಗ ಅದೆಲ್ಲಿಗೆ ಮುಟ್ಟಿದೆ ಅಂದ್ರೆ ದಿನದಿಂದ ದಿನಕ್ಕೆ  ಮಾತುಕತೆ ಸಹಾ ಕಡಿಮೆ ಆಗ್ತಾ ಇದೆ  .... ಅತ್ತಿಗೆ ಅಂದ್ರೆ ಅವಳ ಬದ್ಧ ದ್ವೇಷಿ ....  ಉಫ್ ... 

ಇನ್ನೊಬ್ಬ ತಾಯಿಯಂತೂ ಮಗನಿಗೆ ಮದುವೆ ಮಾಡ್ಸಬೇಕು...ಒಳ್ಳೆ ಕೆಲಸ ಸಿಕ್ಕಿದೆ ....  ಅವ್ನು ಜೀವನದಲ್ಲಿ  SETTLE ಆಗಬೇಕು  ಅಂತ ತುದಿಗಾಲಲ್ಲಿ ನಿಂತು ಹೆಣ್ಣು ಹುಡುಕಿ ಮದುವೇನೂ ಆಯ್ತು... ಆದ್ರೆ ಈಗ ಸೊಸೆ ಅಂದ್ರೆ ಅಷ್ಟಕ್ಕಷ್ಟೇ ... ತನ್ನ ಮತ್ತು ತನ್ನ  ಮಗನ ಪ್ರೀತಿಯ ಸಂಬಂಧದಲ್ಲಿ  ಈ ಹುಡುಗಿ ಒಬ್ಬ ಅಡ್ಡಗೋಡೆ ಅಂಬ ಭಾವ ಆಕೆಗೆ ... ಸೊಸೆಯ ಜತೆ  ಮಗನ ಪ್ರೀತಿಯನ್ನ  ಹಂಚಿಕೊಳ್ಳೋದು ಯಾಕೋ ಸಹಿಸಲಾಗದ  ವಿಚಾರ ಆಕೆಗೆ .. 

ಈ ಹೆಣ್ಣು ಜೀವಗಳೇ ಹೀಗಾ... ತನ್ನ ಗಂಡ, ತನ್ನ ಮಗ, ತನ್ನ ಅಣ್ಣ-ತಮ್ಮ, ತನ್ನ ಗೆಳೆಯ ಅದ್ಯಾರೆ ಆಗಿರ್ಲಿ.... ಸ್ವಾರ್ಥಿ ಆಗ್ಬಿಡ್ತೀವಾ ..... ತನ್ನನ್ನಷ್ಟೇ ಪ್ರೀತಿಸ್ಬೇಕು ಅನ್ನೋ ಅತಿ ಸ್ವಾರ್ಥದ ಮನಸ್ಥಿತಿಯನ್ನ ಇಟ್ಟುಕೊಂಡೆ ಹುಟ್ಟಿರ್ತಾರಾ ... ಚಿಕ್ಕ ಅನುಮಾನ.... !!!! 

  JEALOUSY THY NAME WOMEN.... ಅನ್ನೋ ಮಾತು ಸಹಾ ನಿಜ ಅನ್ಸುತ್ತೆ ಕೆಲವೊಮ್ಮೆ .... 

ಆದರೂ ಈ 'ಹೆಣ್ಣು ಮತ್ಸರ' ಆರೋಗ್ಯಕರವಾಗಿ....   ಇನ್ನೊಬ್ಬ ಹೆಣ್ಣಿನ ಜೊತೆ ಜಿದ್ದಾಜಿದ್ದಿ ದ್ವೇಷ ಆಗದಷ್ಟು ಹಿಡಿತದಲ್ಲಿ ಇದ್ರೆ ಉತ್ತಮ ಅನ್ನೋ ಅಭಿಪ್ರಾಯದೊಂದಿಗೆ   ... 

ಎಲ್ಲರಿಗೂ 'ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು '

ಪ್ರೀತಿಯಿಂದ

ಸುದೀಪ...