Wednesday, 24 April 2013

ಪುಟ್ಟ ಕಂದನ ಸ್ವಗತ....


ಆಗಷ್ಟೇ ನನ್ನ ಮೊದಲ ವರ್ಷದ ಹುಟ್ಟಿದ ಹಬ್ಬ ಮುಗಿದಿತ್ತು. ಅವತ್ತು ಅಪ್ಪ-ಅಮ್ಮ ಅದ್ಧೂರಿಯಿಂದ  ತಮ್ಮ ಹತ್ತಿರದ ಸ್ನೇಹಿತರನ್ನೆಲ್ಲಾ   ನನ್ನ ಹುಟ್ಟುಹಬ್ಬಕ್ಕೆ ಆಹ್ವಾನಿಸಿ ಸಂಭ್ರಮಿಸಿದ್ದರು. ಅಜ್ಜ-ಅಜ್ಜಿ ದೂರದೂರಿನಲ್ಲಿ ಇರುವುದರಿಂದ ಯಾರೂ ಬಂದಿರಲಿಲ್ಲ. ಅಜ್ಜ-ಅಜ್ಜಿ ಮನೆಗೆ ಹೋಗಬೇಕಾದರೆ ಅದೇನೋ 'ಏರೋಪ್ಲೇನ್' ಅಂತೆ ಅದ್ರಲ್ಲಿ ಹೋಗಬೇಕಂತೆ.  ನಾನಿನ್ನು ಅದರಲ್ಲಿ ಪ್ರಯಾಣ ಮಾಡಿರಲಿಲ್ಲ. ನಾನು ಹುಟ್ಟಿದಾಗ ಅಜ್ಜಿಯೇ ಈ ದೇಶಕ್ಕೆ ಬಂದು ಅಮ್ಮನ ಹತ್ತಿರ ಐದಾರು ತಿಂಗಳಿದ್ದು ತಮ್ಮೂರಿಗೆ ಮರಳಿದ್ದರಂತೆ. ನಾನಿನ್ನೂ ಅಜ್ಜನ ಮನೆ ನೋಡಿನೇ ಇಲ್ಲ.  ಅವರನ್ನು ನೋಡಿದ ನೆನಪು ನನಗೆ ಸರಿಯಾಗಿ ಇಲ್ಲ. ಅಪ್ಪ-ಅಮ್ಮ ಯಾವಾಗಲು ಅವರ  ಫೋಟೋ ಎಲ್ಲಾ ತೋರಿಸ್ತಾ,  'ಇದು ಅಜ್ಜ ಚಿನ್ನು, ಇವ್ರು ಅಜ್ಜಿ, ಇವ್ರು ಮಾಮ....'  ಅಂತ ಹೇಳೋವಾಗ ನಾನು ಪಿಳಿಪಿಳಿ ಕಣ್ಣು ಬಿಡ್ತಾ ನೋಡ್ತೀನಷ್ಟೇ . ನಾನು ಅವತ್ತು ನನ್ನ ಹುಟ್ಟಿದ ಹಬ್ಬದ  ದಿನ ತುಂಬಾ  ಖುಷಿಯಲ್ಲೇ ಇದ್ದೆ. ಮನೆತುಂಬಾ ಜನ. ನನಗಂತು ಎಲ್ಲರೂ ಎತ್ತಿ ಮುದ್ದಾಡುವರೆ . ನಾನು ಆಂಟಿ-ಅಂಕಲ್, ಅಣ್ಣ-ಅಕ್ಕ ಎಲ್ಲರ ಜೊತೆ ಆಟ ಆಡ್ತಿದ್ದೆ.ನಾನಂತೂ ದಷ್ಟ ಪುಷ್ಟವಾಗಿ ಬೆಳೆದಿದ್ದೆ. ನನ್ನ ಬರ್ತ್ ಡೇಗೆ ಬಂದವರೆಲ್ಲಾ ಅಮ್ಮನಿಗೆ ಹೇಳ್ತಾ ಇದ್ರು. 'ಮುದ್ದುಗೆ ದೃಷ್ಟಿ ತಗಿ' ಅಂತ. ಅಮ್ಮಾನೂ ನಗ್ತಾ ನಗ್ತಾ 'ಸರಿ ಆಯ್ತು' ಅಂತ ಅವರನ್ನೆಲ್ಲಾ ಬೀಳ್ಕೊಟ್ಟಿದ್ಲು.   ಆದ್ರೆ ಇತ್ತೀಚಿಗೆ ಅಮ್ಮ ಯಾಕೋ ತುಂಬಾ ಸೊರಗ್ತಾ  ಇದ್ದಾಳೆ ಅಂತ ನಂಗು ಅನ್ನಿಸ್ತಿತ್ತು. ಬೇಸರದ ವಿಷಯ ಅಂದ್ರೆ ಅದಕ್ಕೆಲ್ಲಾ ಕಾರಣ ನಾನೇ ಅಂತೆ :-(

ಪಕ್ಕದ ಮನೆ ಆಂಟಿ ಅಮ್ಮನಿಗೆ ಬೈತಾ ಇದ್ಲು. 'ನೋಡು, ಹೇಗಾಗಿದ್ದಿಯಾ, ಒಳ್ಳೆ ಕಡ್ಡಿ ತರಹ, ಇನ್ನಾದರೂ ಅವನಿಗೆ ಎದೆ  ಹಾಲು ಬಿಡ್ಸು, ಹೇಗೂ ಅವ್ನು ಬೇರೆ ಆಹಾರ ತಿಂತಾನಲ್ವಾ,'

 ಅದಕ್ಕೆ ಅಮ್ಮ, 'ಇನ್ನು ಆರು ತಿಂಗಳು ಕಳೀಲಿ ಅಕ್ಕ, ಇನ್ನು ಸಣ್ಣ ಕೂಸು,ನಿಧಾನಕ್ಕೆ ಬಿಡಿಸ್ತೀನಿ.....' ಅಂತ ಹೇಳಿದ್ರೆ, 'ಏನಾದ್ರೂ ಮಾಡ್ಕೋ .... ' ಅಂತ ಜವಾಬು ಕೊಟ್ಟು  ಆಂಟಿ ಅವರ  ಮನೆಗೆ ಹೋಗಿದ್ರು. 

 ಪಕ್ಕದ ಮನೆ ಆ  ಆಂಟಿ ಕಂಡರೆ ನನಗ್ಯಾಕೋ ತುಂಬಾನೇ ಸಿಟ್ಟು. ಈಕೆ ನನ್ನ ಮತ್ತು ಅಮ್ಮನ  ಸಂಬಂಧಾನ ಹಾಳು ಮಾಡೋಕ್ಕೆ ಬರ್ತಾ  ಇದ್ದಾಳೆ ಅನ್ನಿಸ್ತಿತ್ತು. ಒಂದಿನ ಹೀಗೆ ಅಮ್ಮ ನನಗೆ ಮಧ್ಯಾಹ್ನದ ಊಟ ಮಾಡ್ಸಿ, ಮುಖ ಎಲ್ಲಾ  ಕ್ಲೀನ್ ಮಾಡ್ಬೇಕಾದ್ರೆ ಈಕೆ ಸವಾರಿ ನಮ್ಮ ಮನೆಗೆ ಬಂತು . ಬಂದವಳೇ ಅಮ್ಮನಿಗೆ ಪುನಃ ಅದೇ  ಉಪದೇಶ ಕೊಡಕ್ಕೆ ಶುರು ಮಾಡಿದ್ಲು.  ಜೊತೆಗೆ  ನನ್ನನ್ನು ಎತ್ತಿಕೊಂಡು ಮುದ್ದು ಮಾಡ್ತಾ ಇದ್ಲು. ಅದೆಲ್ಲಿತ್ತೋ ನನ್ನ ಕೋಪ ಬರಿ ಮೈಯಲ್ಲಿದ್ದ ನಾನು ಆಕೆ ಬಟ್ಟೆ ಮೇಲೆ 'ಸುಸೂ...... ' ಮಾಡಿ ಸೇಡು ತೀರ್ಸಿಕೊಂಡಿದ್ದೆ.   ಆಕೆ ನನ್ನನ್ನ ಅಮ್ಮನ ಕೈಗೆ ಕೊಟ್ಟು, ನಂಗೆ ಎರಡು ನಿಧಾನಕ್ಕೆ  ಏಟು ಕೊಟ್ಟು, ಬೈತಾ, 'ನನ್ನ ಡ್ರೆಸ್ ಎಲ್ಲಾ ಹಾಳಾಯ್ತು, ನೀನೋ ನಿನ್ನ ಮಗನೋ.....' ಅಂತ ಜೋರಾಗಿ ಅನ್ಕೊತಾ ತನ್ನ ಮನೆಗೆ ಓಡಿದ್ಲು.  'ಹಾಗೆ ಆಗಬೇಕು...'  ಅಂತ ಮನಸ್ಸಲ್ಲಿ ಅನ್ಕೊತಾ ನಕ್ಕಿದ್ದೆ ಅವತ್ತು. :-)

ಆಗಲೇ ನಂಗೆ ಒಂದೂವರೆ  ವರ್ಷ ತುಂಬಿತ್ತು. ಮನೇಲಿ ಇದ್ರೆ ನನ್ನನ್ನ ಸುಧಾರಿಸಲಿಕ್ಕೆ ಆಗಲ್ಲ. ಇಡೀ ದಿನ ಅಮ್ಮನ ಹಿಂದೆ ಇದ್ದು ೨೪ ಘಂಟೆ ಹಾಲಿನ ಮಂತ್ರ ಹಾಕ್ತೀನಿ  ಅಂತ ಅಮ್ಮ, ಅಜ್ಜಿ ಮನೆಗೆ ಹೋಗಕ್ಕೆ ಬಟ್ಟೆ ಎಲ್ಲ ಪ್ಯಾಕ್ ಮಾಡಿದ್ಲು. ಅಲ್ಲಾದ್ರೆ ಮನೆ ತುಂಬಾ ಜನ. ಹೇಗಾದ್ರು ಹಾಲು ಕುಡಿಯೋದು ಬಿಡಿಸ್ಬೋದು ಅನ್ನೋದು ಅವಳ  ಪ್ಲಾನ್.  ಅಂತು ನನ್ನನ್ನ ಎತ್ತಿಕೊಂಡು ಅಮ್ಮ ಅಜ್ಜಿ ಮನೆಗೆ ಪ್ರಯಾಣ ಬೆಳೆಸಿದ್ಲು.  ಅಪ್ಪ ನಮ್ಮನ್ನ ಅದೇನೋ ಏರ್ಪೋರ್ಟ್ ಅನ್ನೋ ಕಡೆ ನಮ್ಮನ್ನು ಬಿಟ್ಟು ಹೊರಟುಹೋದರು. ನನಗು ಅದು ದೂರದ ಪ್ರಯಾಣ.  ಹೊಸ ಹೊಸ ಜಾಗಗಳನ್ನ ಕಣ್ತುಂಬಾ ನೋಡ್ತಾ ಮೈಮರೆತಿದ್ದೆ. ಅಜ್ಜಿ ಮನೆ ಇರೋದು ಪುಟ್ಟ ಊರು. ಸುತ್ತ ಮುತ್ತ ಹಸಿರು. ನನಗಂತು ತುಂಬಾ ಇಷ್ಟ ಆಯ್ತು ಅಜ್ಜಿಮನೆ. ಮನೇಲಿ ಚಿಕ್ಕಮ್ಮ, ಇಬ್ರು ಮೂವರು ಮಾವಂದಿರು , ಅತ್ತೆಯಂದಿರು, ಮಕ್ಕಳು, ಮನೆತುಂಬಾ ಜನವೋ ಜನ. ನಮ್ಮನೇಲಿ ಅಪ್ಪ, ಅಮ್ಮನ ಮುಖ ಅಷ್ಟೇ ನೋಡಿ ಗೊತ್ತಿದ್ದ ನನಗೆ  ಇಲ್ಲಿ ಇಷ್ಟು ಜನರನ್ನು ನೋಡಿ ಗಾಬರಿ, ಸುಸ್ತು, ಅಬ್ಬಾ, ಯಾರು ಇಷ್ಟು ಜನ, ಎಲ್ಲ ಹೊಸ ಮುಖಗಳು. ಎಲ್ರು ನನ್ನನ್ನು ಪ್ರೀತಿ  ಮಾಡೋವ್ರೆ. ನಾನು ಒಂಥರಾ 'ವಿ ಅಯ್ ಪಿ'  ಆಗಿದ್ದೆ ಆ ಮನೇಲಿ.  
ಹಾಲು ಬಿಡಿಸಬೇಕು ಅಂತ ಅದೇನೋ ಕಹಿ ಕಹಿ ಔಷಧಿಗಳನ್ನು ತನ್ನ ಎದೆಗೆ ಹಚ್ಚೋವ್ಳು ನನ್ನಮ್ಮ  . ಆದ್ರೆ ಆ ಅಮೃತದ ಸಿಹಿಗೆ ಯಾವ ಕಹಿಯು ನನ್ನ ನಾಲಿಗೆಗೆ ತಾಗ್ತಾನೆ ಇರಲಿಲ್ಲ. ಆ ಹಾಲಿನ  ರುಚಿಗೆ ಸಾಟಿ ಯಾವ್ದು ಇರಲಿಲ್ಲ ನನಗೆ. ಅದರ ಪರಿಮಳಕ್ಕೆ ಹಾಗೆ ಅಮಲು ಬಂದು ಸುಖವಾದ ನಿದ್ದೆ ಬರ್ತಾ ಇತ್ತು ನಂಗೆ.

ದಿನ ಕಳೆದ ಹಾಗೆ ರಾತ್ರಿ ಮಾತ್ರ ಹಾಲು ಕುಡ್ದು ಮಲಗ್ತಾ ಇದ್ದೆ. ಬೆಳಗ್ಗಿನ ಸಮಯ ಎಲ್ಲ ಅಷ್ಟೊಂದು ಜನ  ನನ್ನ ಜೊತೆ ಆಟ ಆಡ್ತಾ, ನನ್ನನ್ನ ಸುತ್ತಾಡಿಸ್ತಾ  ನನ್ನನ್ನು ಅಮ್ಮನಿಂದ ದೂರ ಇಡ್ತಿದ್ರು. ಅವರ ಪ್ಲಾನ್ ಎಲ್ಲಾ  ನನಗೆ ಗೊತ್ತೇ ಆಗ್ತಾ ಇರ್ಲಿಲ್ಲ. ಶುದ್ಧ ಬುದ್ದು ನಾನು.  ದಿನ ಕಳೆದಂತೆ ನಾನು ರಾತ್ರಿ ನಿದ್ದೆಯಿಂದ ಎದ್ರೆ ಅಮ್ಮ ಒಣ ದ್ರಾಕ್ಷಿಗಳನ್ನು ನನಗೆ ತಿನ್ನಕ್ಕೆ ಕೊಡ್ತಿದ್ಲು. ನಾನು ನಿದ್ದೆ ಕಣ್ಣಲ್ಲೇ  ಹಾಗೇ ಅದನ್ನು ಚೀಪ್ತಾ  ಬಾಯಾಡಿಸಿ ಮಲ್ಕೊತಾ ಇದ್ದೆ. 

ಅಂತು ಸುಮಾರು ದಿನಗಳ ಅಮ್ಮನ, ಅಜ್ಜಿಯ ಮನೆಯವರ ಪ್ರಯತ್ನದ ನಂತರ ನಾನು ಸ್ವಲ್ಪ ಸ್ವಲ್ಪ ಅಮ್ಮನ ಹಾಲು ಕುಡಿಯೋದು ಬಿಟ್ಟಿದ್ದೆ.  ಆದರೆ ಇದರ ಪರಿಣಾಮ ಅಮ್ಮನಿಗೆ ಎದೆಯಲ್ಲಿ ಹಾಲು ತುಂಬಿಕೊಂಡು ರಟ್ಟೆ ಎತ್ತಲಾಗದಷ್ಟು ನೋವು ಶುರುವಾಗಿತ್ತು. ಅದಕ್ಕೆ ಡಾಕ್ಟರನ್ನ ಭೇಟಿ ಮಾಡಿ  ಹಾಲು ಇಂಗಿಸಲಿಕ್ಕೆ  ಮಾತ್ರೆಗಳ ಸೇವನೆ ಶುರು ಮಾಡಿದ್ಲು. ನಾನು ಆ ಸಮಯದಲ್ಲಿ ಏಕೋ,  ಅಮ್ಮಾನೆ ನನ್ನನ್ನ ಎತ್ತಿಕೋ ಬೇಕು ಅಂತ ಹಠ ಮಾಡ್ತಾ ಇದ್ದೆ. ಅಮ್ಮನ ಮೈ ಮೇಲೆ ವಾಲಿದರೆ ಅವಳು 'ಅಯ್ಯೋ' ಅನ್ನುವ ನೋವಿನ ಉದ್ಗಾರ ಮಾಡ್ದಾಗ ನಾನು ದೂರ ಸರೀತಿದ್ದೆ. ನನಗೆ ಮಾತಾಡಕ್ಕೆ ಬರದಿದ್ರೂ,  ಎಲ್ಲಾ ಅರ್ಥ ಆಗ್ತಾ ಇತ್ತು. ನಾನು ಕ್ರಮೇಣ ಅಮ್ಮನ ಎದೆ ಹಾಲು ಕುಡಿಯೋದು ಸಂಪೂರ್ಣವಾಗಿ ನಿಲ್ಸಿದ್ದರಿಂದ ತುಂಬಾ ಸಪುರ ಆಗ್ತಾ ಇದ್ದೆ.  ಹೊಸ ಆಹಾರಕ್ಕೆ ನಾನು  ಹೊಂದಿಕೊಳ್ಳಬೇಕಿತ್ತು. 

ಅವತ್ತೊಂದು ದಿನ ಅಮ್ಮ, ಅಜ್ಜಿ ಏನೋ ಮಾತಾಡ್ಕೊಂಡು ನಗ್ತಾ ಇದ್ರು. ನಾನು ಸ್ವಲ್ಪ ಸ್ವಲ್ಪ ಕೇಳಿಸ್ಕೊಂಡೆ. ವಿಷಯ ಏನಪ್ಪಾ ಅಂದ್ರೆ, ಒಮ್ಮೆ ನಂಗೆ ಮೂರು ತಿಂಗಳು ಇರೋವಾಗ ಒಂದು ಇಂಜಕ್ಷನ್ ಕೊಟ್ಟಿದ್ರಂತೆ. ಅವತ್ತು ತುಂಬಾ ನೋವು ಅಂತ ಇಡೀ  ದಿನ ಅತ್ತಿದ್ನಂತೆ. ರಾತ್ರಿ ಸಹಾ ತೊಟ್ಟಿಲಲ್ಲಿ ಮಲಗ್ದೆ , ಅಮ್ಮನ ಪಕ್ಕ ಎದೆಹಾಲು ಕುಡಿತಾ ಮಲಗಿದ್ನಂತೆ. ಅಮ್ಮ ಏನಾದರೂ ಸ್ವಲ್ಪ ಮಗ್ಗುಲು ಬದಲಿಸಿದ್ರೆ ನಾನು ಜೋರಾಗಿ ಅಳೋದಂತೆ.  ಅಮ್ಮಂಗೂ ಪಾಪ ಒಂದೇ  ಕಡೆ ತಿರುಗಿ ಮಲಗಿ ಮಲಗಿ ಸಾಕಾಗಿತ್ತಂತೆ. ಬೆಳಗ್ಗಿನ ಜಾವ ಅರ್ಧಂಬರ್ಧ  ನಿದ್ದೆಲೇ ಅಮ್ಮ , ಅಜ್ಜಿ ಹತ್ರ ಕೇಳ್ತಾ ಇದ್ಲಂತೆ, 'ಅಮ್ಮ ಇನ್ನೆಷ್ಟು ಜನ ಹಾಲು ಕುಡಿಲಿಕ್ಕೆ ಇದ್ದಾರೆ' ಅಂತ ? ಇದನ್ನ ಕೇಳಿ ಅಜ್ಜಿ ನಗ್ತಾ, 'ದೊಡ್ಡ 'ಕ್ಯೂ' ಕಾಯ್ತಾ ಇದೆ ಕಣೆ , ಕಣ್ಣು ಬಿಟ್ಟು ನೋಡು' ಅಂತ ಅಮ್ಮನ್ನ ಎಬ್ಬಿಸಿ  ತಮಾಷೆ ಮಾಡಿದ್ಲಂತೆ. ಹೀಗೆ ನನ್ನಿಂದ ನಮ್ಮನೇಲಿ ಏನೇನೋ ಹಾಸ್ಯ ಘಟನೆಗಳು ನಡೀತಿರುತ್ತೆ. :-)

ಇನ್ನೊಂದು ಸುಂದರ ನೆನಪಂದ್ರೆ, ನನಗೆ ಆಗಷ್ಟೇ ಪುಟ್ಟ ಪುಟ್ಟ ಹಲ್ಲು ಬರಕ್ಕೆ ಪ್ರಾರಂಭ ಆಗಿತ್ತು. ಅಮ್ಮನ ಹಾಲು ಕುಡಿವಾಗ ಬೇಕೆಂದೇ ಕೆಲವೊಮ್ಮೆ ಅವಳ ಎದೆ ಕಚ್ಚಿ, ನಗ್ತಾ   ಅವಳಿಗೆ ನೋವು ಮಾಡ್ತಾ ಇದ್ದೆ. ಅವಳು ಕೋಪ ಮಾಡ್ದೇನೆ, ಮೆಲ್ಲಗೆ ಏಟು ಕೊಟ್ಟು 'ಕಳ್ಳ' ಅಂತ ಬೈತಿದ್ಲು. ಎಷ್ಟೆಲ್ಲಾ ಚಂದದ ನೆನಪುಗಳು. 

ನಾನು ಈಗ ಅನ್ನ, ದನದ ಹಾಲು, ತರಕಾರಿ, ಮೊಟ್ಟೆ ಎಲ್ಲ ಊಟ ಮಾಡ್ತೀನಿ. ನನಗೂ ಈಗ ಒಂದು ವರ್ಷ ಎಂಟು ತಿಂಗಳಾಯ್ತು, ದೊಡ್ಡವನಾಗಿದ್ದೀನಿ.  ಅಮ್ಮಾನೂ ಈಗ  ಮೈ ಕೈ ತುಂಬ್ಕೊಂಡು ಆರಾಮಾಗಿದ್ದಾಳೆ. 

ಆದ್ರೂ...ಆದ್ರೂ.....   ನಂಗೆ ಇನ್ನು ಸ್ವಲ್ಪ ದಿನ ಅಮ್ಮನ ಎದೆ ಹಾಲು ಕುಡೀಬೇಕಿತ್ತು. ಅಮ್ಮನ ಬೆಚ್ಚನೆ ಮಡಿಲಲ್ಲಿ ಮಲಗಿ, ಅವಳ ಹೊಟ್ಟೆಗೆ ನನ್ನ ಪುಟ್ಟ ಪುಟ್ಟ ಪಾದದಿಂದ  ಒದೆಯುತ್ತಾ   ಆ ಅಮೃತದ ಸವೀನ್ನ ಇನ್ನು ಇನ್ನೂ ಸವೀಬೇಕಿತ್ತು. 

ಐ ಮಿಚ್ ಇತ್ (i miss it) ನಂಗೂ ಚ್ವಲ್ಪ ಚ್ವಲ್ಪ ಇಂಗ್ಲೀಚ್ ಬಲತ್ತೆ.    ;-)Wednesday, 10 April 2013

ಆಹಾರ-ಅಲಂಕಾರ ಸುದೀಪ ಸ್ಟೈಲ್ ನಲ್ಲಿ ......ಭಾಗ - 2


ಈ  ಫೇಸ್ಬುಕ್ ನಿಜಕ್ಕೂ ಒಂದು ರೀತಿ ಕಲಿಕೆಯ ತಾಣವಾಗಿದೆ. ಸ್ವಲ್ಪ ಫ್ರೀ ಸಮಯ, ತುಂಬಾ ಒಳ್ಳೆ ಮೂಡ್ ಇದ್ದಾಗ ನಮ್ಮ ಕೆಲವೊಂದು ಫುಡ್ ಗ್ರೂಪ್ಗೊಸ್ಕರ, ಕೆಲವೊಮ್ಮೆ ಆಹಾರದಲ್ಲಿ ನಂಗೆ  ಇಂತಹಾ ತರಲೆ, ಕಿತಾಪತಿ ಮಾಡೋ ಆಸೆ ಆಗುತ್ತೆ. ಆದ್ರೂ ಇತ್ತೀಚೆಗೆ  ತುಂಬಾನೇ ಸೋಮಾರಿಯಾಗಿದ್ದೀನಿ. ಆದರೂ  ಕೆಲವು ದಿನನಿತ್ಯದ ಅಡಿಗೆಗಳನ್ನ ನಮ್ಮ ಫುಡ್ ಗ್ರೂಪ್ನಲ್ಲಿ upload ಮಾಡಿದ ವಿಭಿನ್ನ  ಚಿತ್ರಗಳು ಇವು. ಒಂದೆರಡು ನಿಮಿಷದಲ್ಲಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ :-) 


ಅದ್ಯಾಕೋ ಇದು ನನ್ನ ಇಷ್ಟದ picture . ಸಿಂಪಲ್ ಆಗಿ + healthy ಆಗಿ  ಒಂದು ಪಾಲಕ್ ಸೊಪ್ಪಿನ ಪಲ್ಯ ,  ಪುಟ್ಟ handbag ಮಾದರಿಯಲ್ಲಿ :-) 

ಕುಕ್ಕರ್ನಲ್ಲಿ  ಮೊದಲ ಬಾರಿ ಮಾಡಿದ ಬಿಸ್ಕಿಟ್ ಕೇಕ್ ಪ್ರಯತ್ನ :-)ಹೀರೆಕಾಯಿ ಪಲ್ಯ ಹಾಗೆ ಸುಮ್ನೆ...


ನಮ್ಮ alltime fav ಮೆಣಸಿನ ಬೋಂಡಾ


ಕಹಿ ಹಾಗಲಕಾಯಿ deepfry.... ಆದ್ರೂ ಟೇಸ್ಟಿ ಮತ್ತು healthy 


ನಮ್ಮ food groupನಲ್ಲಿ ಪ್ರತಿ ತಿಂಗಳು 11ಕ್ಕೆ artistic food deco  theme  ಇರುತ್ತೆ . ಈ ಬಾರಿ ಅವಸರ ಅವಸರ ವಾಗಿ ಸ್ನೇಹಿತರ ಒತ್ತಾಯಕ್ಕೆ ಅರ್ಧ ಘಂಟೆಯಲ್ಲಿ ತಯಾರಿಸಿದ ರವಾ ಕೇಸರಿಬಾತ್, ಪುಟ್ಟ ಮಕ್ಕಳ ಸಲ್ವಾರ್ ಸೂಟ್   ಶೈಲಿಯಲ್ಲಿ :-)ಖಾರ ಪೊಂಗಲ್ ..ರಥದ ಶೇಪ್ ಕೊಡೋ ದುಸ್ಸಾಹಸ. 
ಕುಂಬಳಕಾಯಿ ಹುಳಿ .... ಏನಾದರೂ ಅರ್ಥ ಆಯ್ತಾ? :-P 


ಚೀನಿಕಾಯಿ ಪಲ್ಯ... ಲೈಕ್ ದ ಕಲರ್ .... 


apple ರಬ್ಡಿ , ಫೋಟೋ ಕ್ಲಿಕ್ ಮಾಡುವಾಗ ಸಿಕ್ಕಿದ್ದು ಒಂದು ಚಂದದ  invitation ....  i ಲೈಕ್ ಇಟ್  ಅಷ್ಟೇ .... 

ಮಾವಿನ ಹಣ್ಣಿನ ಸೀಸನ್ ಶುರುವಾಯ್ತು.ಇದು ನನ್ನ ಇಷ್ಟದ pineapple ಮೆಣಸುಕಾಯಿ ...tasty ಟೇಸ್ಟಿ ...yummy  ಯಮ್ಮಿ ... :-)


ಇದೊಂದು ಸಿಂಪಲ್ ಅಳಸಂದೆ ಪಲ್ಯ.  ಒಂದು ನೆಕ್ಲೆಸ್  ಮತ್ತು earring  ಆಕಾರದಲ್ಲಿ  ಪ್ರೆಸೆಂಟ್ ಮಾಡಿದ್ದು  :-)


ಮಾವಿನಹಣ್ಣಿನ ಸಾಸಿವೆಯ ಇನ್ನೊಂದು ಅವತಾರ್ :-)

ಈ ಚಿತ್ರ ಅವತ್ತೊಮ್ಮೆ ಮನೆಯಲ್ಲಿ ತಯಾರಿಸಿದ ಕಡಲೆಬೇಳೆ ಹೋಳಿಗೆಯದ್ದು .  ಹೋಳಿಗೆ  ತಯಾರಿಸಿ ಪ್ಲೇಟ್ ನಲ್ಲಿ ಇಟ್ರೆ  ಯಾಕೋ ತುಂಬಾ dull ಅನ್ನಿಸ್ತು ಅಂತ ಚಂದದ ಈ ನೃತ್ಯಗಾತಿಯರ ಚಿತ್ರದ ಜೊತೆ ಕ್ಲಿಕ್ ಏನೋ ಮಾಡ್ದೆ. Dancers ತುಂಬಾ bright ಆಗಿ ಕಾಣ್ತಾ ಇದ್ದಾರೆ, but ಹೋಳಿಗೆಗಳು ಪುನಃ ಡಲ್  :-p 

ಮನೆಯಲ್ಲಿ ಯಾವಾಗಲು ಮಾಡುವ ಬೆಳ್ಳುಳ್ಳಿ ಚಟ್ನಿಗೆ ಪುಟ್ಟ ಕೈಗನ್ನಡಿ (ಹ್ಯಾಂಡ್ mirror ) ಆಕಾರ ನಿಡುವ ಹುಚ್ಚು ಪ್ರಯತ್ನ . 


ಗೋಬಿ ................ homemade :-)


ಯಾವಾಗಲೂ ರೆಸ್ಟೋರೆಂಟ್ ಗೆ ಹೋದಾಗ order ಮಾಡುವ 'ಪನೀರ್ ಬಟರ್ ಮಸಾಲ' ಮನೆಯಲ್ಲಿ ತಯಾರಿಸಿದಾಗ ಅದರ ಲುಕ್ ಹೀಗಿತ್ತು :-)

ಇದನ್ನೆಲ್ಲಾ ನೋಡಿದ ನೀವು, ಸುದೀಪನಿಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂತ ಬೈಕೊಂಡಿರಬಹುದು. ಪರವಾಗಿಲ್ಲ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ, ನನ್ನನ್ನ ಸಹಿಸಿಕೊಳ್ಳಿ ... :-P 


ಪ್ರೀತಿಯಿಂದ 

ಸುದೀಪ...