Thursday, 26 November 2015

ಮೆಲುಕು


ಅಪ್ಪ ಒಂದು ಶರ್ಟ್ ಹೊಲೆದ್ರೆ 25 ಪೈಸೆ ಕೂಡ ಸಿಗದ ಕಾಲ ಅದು.  ಸಿರ್ಸಿ ಕಡೆಯಿಂದ ವಲಸೆ  ಬಂದು ಮಲೆನಾಡಿನ   ಪೇಟೆಯಲ್ಲಿ ಒಂದಷ್ಟು ದಿನ ಬಾಡಿಗೆ ಮನೆಯಲ್ಲಿ ಇದ್ದು  ನಂತರ ಅಲ್ಲೇ ಪಕ್ಕದ ಹಳ್ಳಿಯಲ್ಲಿ 30 ರೂಪಾಯಿಗೆ ಸ್ವಲ್ಪ ಭೂಮಿ ಖರೀದಿಸಿದ್ರು ಅಪ್ಪ ಮತ್ತು  ಚಿಕ್ಕಪ್ಪ . ಆಗೆಲ್ಲಾ  ಹೆಚ್ಚು ಕಮ್ಮಿ ಎಲ್ರ ಮನೆಯ ಆರ್ಥಿಕ  ಪರಿಸ್ಥಿತಿ ಒಂದೇ.    . ದುಡ್ಡಿಗೆ ಬಂಗಾರದ ಬೆಲೆ ಇದ್ರೂ  ಅದನ್ನ ಗಳಿಸೋದು ಸುಲಭ ಏನಿರ್ಲಿಲ್ಲ .  ಇಬ್ಬರಿಗೂ ದೊಡ್ಡ ಸಂಸಾರದ ಜವಾಬ್ದಾರಿ. ಮನೆ ತುಂಬಾ ಮಕ್ಳು . ನಾನೋ ಏಳು ಜನ ಅಣ್ಣ -ಅಕ್ಕಂದಿರಲ್ಲಿ ಕೊನೆಯ ಮಗಳು  ಮನೇಲಿ. ಅಮ್ಮ ಇಡೀ ದಿನ ಊಟ ತಿಂಡಿ ಇದರಲ್ಲೇ ವ್ಯಸ್ತರಾಗಿದ್ರೆ,  ದೊಡ್ಡ ಅಕ್ಕಂದಿರ ಕೃಪಾ  ಕಟಾಕ್ಷದಲ್ಲೇ ಬೆಳೆದು ದೊಡ್ದವಳಾಗಿದ್ದೆ.  ಅವರೇ ಸ್ನಾನ, ತಿಂಡಿ ತಿನ್ಸೊ ಜವಾಬ್ದಾರಿ ನೋಡ್ಕೊಂಡು ಬೆಳೆಸಿದ್ರು.  

 ಅಪ್ಪ ಬೆಳಿಗ್ಗೆ 8.30 ಘಂಟೆ ಎನ್ನುವಾಗ ಪಕ್ಕದೂರಿಗೆ  ಹೊಲಿಗೆ ವೃತ್ತಿಗೆ ಹೊರಡಬೇಕು...ಅಲ್ಲಿ ಒಂದು ಜವಳಿ ಅಂಗಡಿ ಕಟ್ಟೆಯ ಮೇಲೆ ಕೂತು ಸಂಜೆವರೆಗೆ ಹೊಲಿಗೆ ವೃತ್ತಿ ಅವರದ್ದು ...  ಬೆಳಗಿನ ಜಾವ ಐದಕ್ಕೆ ಅಮ್ಮ ಎದ್ದು ಅಡಿಗೆ ಮನೆ ಸೆಗಣಿಯಿಂದ  ಸಾರಿಸಿ, ಮಡೀಲಿ ಸ್ನಾನ ಮಾಡಿ,  ಬಾವಿಯಿಂದ ನೀರು ತಂದು , ಅಡಿಗೆ ತಯಾರಿ ಮಾಡ್ಬೇಕು . ಆ ದಿನದಿಂದಲೂ ಬೆಳಗ್ಗಿನ ಊಟ ಖಾಯಂ ನಮ್ಮನೇಲಿ ...  ಮಕ್ಕಳು ಅದನ್ನೇ ಶಾಲೆಗೆ  ಬುತ್ತಿ ಕೊಂಡೊಯ್ಯಬೇಕು...  ಜೊತೆಗೆ ದೇವರ ಪೂಜೆ ಶುರು ಆಗೊದ್ರೊಳ್ಗೆ  ನೈವೇದ್ಯಕ್ಕೆ ಅನ್ನ  ಸಿದ್ಧವಿರಬೇಕು .ಅಷ್ಟರಲ್ಲಿ ನಾನು ಹೊಸ್ತಿಲಿಗೆ ರಂಗೋಲಿ, ಪೂಜೆಗೆ ಹೂವು ಎಲ್ಲ ಅಣಿಗೊಳಿಸಬೇಕು  ..ಇದು ಪ್ರತಿದಿನದ ಕಾಯಕ.. ಕೊಟ್ಟಿಗೆಯಲ್ಲಿ ಇದ್ದ ಸುಮಾರು 25-30 ದನ ಕರುಗಳಿಗೆ ಕಲಗಚ್ಚು ಇಡೋ ಕೆಲಸ ನಂದಾದ್ರೆ, ಹುಲ್ಲು ಹಾಕೋದು ಅಕ್ಕನ ಕೆಲಸ ..."ಎದುರಿಗಿದ್ದ ದನಗಳಿಗೆ ಮಾತ್ರ ಕಲಗಚ್ಚು ಇಟ್ಟು ಹಿಂದೆ ಕಟ್ಟಿರೋ ದನಗಳಿಗೆ ಕುಡಿಯಕ್ಕೆ ಇಟ್ಯೊ ಇಲ್ವೋ..."  ಅನ್ನೋ ಅಪ್ಪನ ಪ್ರಶ್ನೆಗೆ ನಖ ಶಿಖಾ ಅಂತ ತಲೆಗೇರೋ ಕೋಪ ... ಕೆಲವು ದನಗಳಿಗಂತೂ  ಸೇರೋದೇ ಇಲ್ಲ ಆ ಕಲಗಚ್ಚು ... "ನೀ ಕುಡೀದೇ ಇದ್ರೆ ನಾ ಅಪ್ಪನ ಹತ್ರ ಬೈಸ್ಕೊಬೇಕು" ಅಂತ ಅವುಗಳ ಮೇಲೂ ನನ್ನ ಕೋಪ ...  

ನಂತರ  ಅಣ್ಣ ಕೊಟ್ಟಿಗೆಯಲ್ಲಿ ಇದ್ದ ದನಗಳನ್ನ ಮೇಯಕ್ಕೆ  ಹೊರಗೆ ಕಳಿಸ್ತಿದ್ದ .. ಈ ಕೆಲಸ ಮುಗಿದ ಕೂಡ್ಲೆ ಬೆಳಗಿನ  ಊಟ ಶುರು ಆಗೋದ್ರೊಳ್ಗೆ  ನಾನು ಅಕ್ಕ ಕೊಟ್ಟಿಗೆಯಲ್ಲಿ ದನಗಳಿಗೆ ಮೆತ್ತಗೆ  ಮಲಗಲು ಸೊಪ್ಪು ಕತ್ತರಿಸಿ ತರಬೇಕು... ಅದನ್ನು ಹಾಸಿ ಅಣಿ ಮಾಡಬೇಕು .. ಅದರ ಮೇಲೆ ಅವುಗಳ ಮೂತ್ರ ಸೆಗಣಿ ಎಲ್ಲ ಸೇರಿ ಗೊಬ್ಬರ ಆದ್ರೆ ನಮ್ಮದೇ ಗದ್ದೆ -ತೋಟಕ್ಕೆ ಬೇಕಾದಷ್ಟು ಆಗುತ್ತಿತ್ತು ..ಈ ಎಲ್ಲ ಕೆಲಸದ ನಡುವೆಯೂ ಸೊಪ್ಪು ತರಲು ಹೋದಾಗ  ಆ ಆ ಕಾಲದಲ್ಲಿ ಅದೇನೆಲ್ಲಾ ಹಣ್ಣು ಕಾಯಿಗಳು ಸಿಗತ್ತೋ ಅವನ್ನೆಲ್ಲಾ ಕೊಯ್ದು ಆಮೇಲೆ ತಿನ್ನುವುದಕ್ಕೆ ಮುಚ್ಚಿ ಇಡೋ ಕೆಲಸ ನಂದು ..


ಅಪ್ಪಂಗೋ ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ ... ಎದುರು ಕೋಪ...  ಮನಸು ಅಷ್ಟೇ ಒಳ್ಳೆದಾಗಿದ್ರು ಈ ಮುಂಗೋಪಕ್ಕೆ ಹೆದರಿ ಅವ್ರ ಎದ್ರು  ಓಡಾಟವೇ ತಪ್ಪಿಸಿ ಹೋಗ್ತಿದ್ವಿ ಎಲ್ರು. ಆದ್ರೆ ಅವ್ರಿಗೋ ಎಲ್ಲರೂ ಜೊತೆಗೆ ಕೂತು ತಿಂಡಿ ಊಟ ಮಾಡ್ಬೇಕು ..ಅತೀವ ಶಿಸ್ತು ... ಊಟಕ್ಕೆ  ಹುಳಿ, ಮಸಾಲೆ ಪದಾರ್ಥಗಳ   ಊಟ ಆದ ನಂತರ ಕಡ್ಡಾಯವಾಗಿ ಮಜ್ಜಿಗೆ ಅನ್ನ ಎಲ್ರೂ ಊಟ ಮಾಡಬೇಕು ...  ಮನೆಯಲ್ಲಿ ಹಸುವಿನ ಹಾಲಿಲ್ಲದಾಗ ಕಡ್ಡಾಯವಾಗಿ ಬಿಸಿನೀರು, ಉಪ್ಪು, ತುಪ್ಪದ ಊಟ ಮಾಡ್ಲೇಬೇಕು. ನಂಗೋ ಈ ಸಾರು, ಬಿಸಿ ನೀರು , ಉಪ್ಪು ತುಪ್ಪದ  ಊಟ ಅಂದ್ರೆ ಎಲ್ಲಿಲ್ಲದ ಕೋಪ. ಕಾರಣ ಇಷ್ಟೇ .,.. ಅದು ಬಾಳೆ ಎಲೆಯಲ್ಲಿ ನಿಲ್ಲೋದು ಇಲ್ಲ...ಸೀದಾ  ಹರಿದು ಹೋಗ್ತಾ ಇರತ್ತೆ. ಮಸಾಲೆ ಪದಾರ್ಥಗಳಾದ್ರೆ ಅತೀವ ಸಂತಸ ಆ ದಿನದ ಊಟ ...

 ಅಪ್ಪ  ಪಕ್ಕದ ಊರಿಗೆ ಹೊಲಿಗೆ ಕೆಲಸಕ್ಕೆ ಮನೆ ಎದುರಿನ ಪುಟ್ಟ ಕೆರೆ ದಾಟಿ ಅಷ್ಟು ದೂರ ಹೋದ ಕೂಡ್ಲೆ  ನನ್ನ ಕೆಲಸ  ಶುರು ... ಒಂದು ಮರ ಬಿಡದೆ ಹತ್ತಿ ಏನೇನು ಹಣ್ಣು ಸಿಗುತ್ತೋ ಎಲ್ಲಾ ಧ್ವಂಸ...   ಕಬ್ಬಿನ  ಗಿಡದಲ್ಲಿ  ಎರಡು ಗಂಟು ದೊಡ್ದದಾಗಕ್ಕೆ ಬಿಡದೆ ಸ್ವಾಹ ... ಹಲಸಿನ ಬೀಜ ಬಚ್ಚಲುಮನೆ ಬೆಂಕಿಯಲ್ಲಿ ಬೇಯಿಸಿ ಗುಳುಂ...  ಮಾವಿನ ಹಣ್ಣು ಅಡಿಕೆ ಮರದ ಹಾಳೆಯಲ್ಲಿ ತುಂಬಿಕೊಂಡು ಕೆರೆಯಲ್ಲಿ ತೊಳೆದು ತಿಂದದ್ದಕ್ಕೆ ಲೆಕ್ಕ ಇಲ್ಲ... ಅದೇನು ಅಷ್ಟು ತಿಂಡಿಪೋತಿ ಆಗಿದ್ನೋ ಗೊತ್ತಿಲ್ಲ... 

ಬಿಡುವಿನ ಸಮಯದಲ್ಲಿ ಅಕ್ಕನ ಹತ್ತಿರ ಅಂಗೈಯಲ್ಲಿ ಚಿವುಟೋ ಆಟ ಒಂದು ದಿನ  ... ಆಕೆ ದೊಡ್ಡವಳಾದ್ದರಿಂದ ತನ್ನೆಲ್ಲ ಬಲ ಉಪಯೋಗಿಸಿ ಚಿವುಟಿ ರಕ್ತ ಬರೆಸಿ ನೋಯಿಸಿದ್ದಕ್ಕೆ ತಿಂಗಳುಗಟ್ಟಲೆ ಮಾತು ಬಿಟ್ಟಿದ್ದು...  ಅಣ್ಣನ ಮಗ ಓರಗೆಯವನೇ  ಆದ್ದರಿಂದ ಇಬ್ಬರಿಗೂ ಒಂದೇ  ಶಾಲೆ ... ಇಬ್ಬರಿಗೂ ಒಂದೇ  ಮರದ ಬೊಡ್ಡೆಯ ಛತ್ರಿ....  ಸರ್ಕಸ್ ಮಾಡ್ತಾ  ಗದ್ದೆಯ ಅಂಚಿನಲ್ಲಿ ಇಬ್ಬರ ನಡೆದಾಟ... ಥಂಡಿ ಪ್ರಕೃತಿಯ ಅವನಿಗೆ ಮೂಗಲ್ಲಿ ಯಾವಾಗ್ಲೂ ಸುರಿಯೋ  ಗೊಣ್ಣೆ.   ಅವನ ಕಿವಿ ಸೋರುವ ಕೀವಿನ ವಾಸನೆ ವರ್ಷಗಟ್ಟಲೆ ಅನುಭವಿಸಿದ್ದು...ಅಬ್ಬಾ ... 

ದನ, ನಾಯಿಗಳ ಜೊತೆ ಮನುಷ್ಯರ ತರಹವೇ ಮಾತಾಡೋ ಅಣ್ಣ...  "ಕಿವೀಲಿ ಅದೆಷ್ಟು ಕಸ ತುಂಬ್ಕೊಂಡಿದೆ...  ತೆಗಿತೀನಿ ಬಾರೆ " ಅಂತ ಹಸುಗಳ ಕಿವಿ ನಿಧಾನವಾಗಿ ಸ್ವಚ್ಛ ಮಾಡಿದ್ರೆ, ಅವ್ನ ಮಾತಿಗೆ ಅವು ಕಿವಿ ಕೊಟ್ಟು ತೆಗಿ ಅಂತ  ನಿಲ್ಲೋದು ..ನಿಧಾನಕ್ಕೆ ಕೈ ಬೆರಳಿನಿಂದ ತುಂಬಿದ ಕಸ ತೆಗೆದರೆ ಅವಕ್ಕೂ ಖುಷಿ,,.... "ಯಾಕೆ ಕರುನ್ನ ಬಿಟ್ಟು ಬೇಗ ಮುಂದೆ ಬಂದೆ..?  ಕರ್ಕೊಂಡು ಬರ್ಬೇಕಂತ ಗೊತ್ತಾಗಲ್ಲ ನಿಂಗೆ "  ಅಂತ  ಮೊದಲೇ ಕೊಟ್ಟಿಗೆಗೆ ಬಂದ ದನಕ್ಕೆ ಕೇಳೋದು.....   "ಯಾರು ಅನ್ನ ಹಾಕಿಲ್ಲ್ವ ಇವತ್ತು ನಿಂಗೆ ... ಬಾ ಊಟ  ಬಡಿಸ್ತೀನಿ "...  ಅಂದ್ರೆ ಅವನ ಹಿಂದೆ ಬಾಲ ಅಲ್ಲಾಡಿಸ್ಕೊಂಡು ಓಡೋ  ನಾಯಿ... ಬೆಕ್ಕುಗಳಿಗಂತೂ ತನ್ನ ಊಟದ ಎಲೆಯಿಂದಾನೆ ಪ್ರತಿದಿನ ಅನ್ನ   ಬಡಿಸೋ ಅಣ್ಣ ...ಅವನ ಪ್ರಾಣಿ ಪ್ರೀತಿ ಚಂದ ಯಾವಾಗ್ಲೂ ... 

ಆಗೆಲ್ಲಾ ಹಬ್ಬ ಹರಿದಿನ ಅಂದ್ರೆ ತಿನ್ನೋದಕ್ಕೆ ವಿಧ ವಿಧ ಬಗೆಯ ತಿಂಡಿ ಮಾಡ್ತಾರಂತ ಸಂಭ್ರಮ ... ಅಜ್ಜನ  ವೈದಿಕಕ್ಕೆ ಅಮ್ಮ  ಮಾಡ್ತಾ ಇದ್ದ ಡಬ್ಬಗಟ್ಲೆ ಚಿರೋಟಿಯ ರುಚಿ ಇನ್ನು ಬಾಯಿಯಲ್ಲಿ ಹಾಗೇ ಇದೆ ...  ಅಪ್ಪನಿಗೋ, ಕಾರ್ಯಕ್ರಮಕ್ಕೆ ಬಂದು ಹೊರಡೋ  ನೆಂಟರಿಗೆಲ್ಲ ಚಿರೋಟಿ ಕಟ್ಟಿ ಕೊಡಬೇಕು  ಅಂತ ಅಮ್ಮನಿಗೆ ಆಜ್ಞೆ ...ಎಲ್ಲರಿಗೂ ಕೊಟ್ಟು ಖಾಲಿಯಾದ್ರೆ  ನಮಗೇನೂ ಉಳಿಯಲ್ಲ  ಅನ್ನೋ ಸಿಟ್ಟು ನಮಗೆ ...  ಹಂಚಿ ತಿನ್ನೋ  ಖುಷಿ ಗೊತ್ತಿಲ್ಲದ ವಯಸ್ಸದು...

 ನನಗೋ  ಬೆಕ್ಕು ಅಂದ್ರೆ ಪಂಚಪ್ರಾಣ.... ಅದಂತೂ ನನ್ನ ಹೊದಿಕೆಯೊಳಗೆ ಪ್ರತಿದಿನ ನುಸುಳಿ ಬೆಚ್ಚಗೆ ಮಲಗ್ತಿತ್ತು...  ಹೀಗಿದ್ದ  ದಿನದಲ್ಲೇ ಮಳೆಗಾಲದ ಒಂದು ರಾತ್ರಿ ಹಾಸಿಗೆಯಲ್ಲೇ ಮರಿ ಹಾಕಿ ವಾಕರಿಕೆ ಬರಿಸಿತ್ತು ಆ  ದಿನ ಅದು. ಹಾಸಿಗೆಯೆಲ್ಲ  ರಕ್ತಮಯ ಆಗಿ ಒಗಿಯಕ್ಕು ಆಗದೆ ಗಲೀಜು ಗಲೀಜು ಆಗಿ ಬೆಕ್ಕಂದ್ರೆ ಬದ್ಧ ವೈರಿ ಆಗಿದ್ದು ಇತಿಹಾಸ ...

ಬೆಳಗಿನ ಜಾವ ಹಲಸಿನ ಹಣ್ಣು ಕೊಯ್ದರೆ, ಮಕ್ಕಳು ತಿಂದು ಹೊಟ್ಟೆ ನೋವು ಮಾಡ್ಕೊಂಡ್ರೆ, ಪದೇ ಪದೇ ಗುಡ್ಡಕ್ಕೆ ಹೋಗಕ್ಕೆ ನಮ್ಮಿಂದ ಸಾಧ್ಯ ಇಲ್ಲ   ಅಂತ ಅತ್ತಿಗೆಯರ ಹತ್ರ ಬೈಸಿಕೊಳ್ಳೋದು ತಪ್ಪಿಸುವುದಕ್ಕೊಸ್ಕರ, ಅಣ್ಣನ ಪುಟ್ಟ ಮಕ್ಕಳು  ಮಲಗೋದೇ ಕಾಯ್ಕೊಂಡಿದ್ದು,   ಒಳ್ಳೆ ಜಾತಿಯ ಕೊಯ್ದಿಟ್ಟ ಹಲಸಿನ ಹಣ್ಣನ್ನ ಆ ರಾತ್ರಿ ಸಮಯದಲ್ಲಿ  ಅರ್ಧದಷ್ಟನ್ನ ತಿಂದರೆ ತೃಪ್ತಿ ಇತ್ತು ಆ ದಿನಗಳಲ್ಲಿ.... 

ಇದ್ದ ಒಂದು ಜೊತೆ ಲಂಗ, ಒಂದು ನೋಟ್ಬುಕ್, ಒಂದು ಪೆನ್ಸಿಲ್ ಕಡ್ಡಿ ಖರ್ಚಾದರೆ ಮತ್ತೆ ಕೊಡಿಸು ಎಂದು  ಕೇಳಕ್ಕೂ ಹೆದರಿಕೆ...   ಅಪ್ಪನ ಭಯ..ಅವರಿಗೂ ಅಷ್ಟೇ ಹಣದ ಸಮಸ್ಯೆ .. ಇಡೀ ಸಂಸಾರ ತೂಗಿಸೋದು ಸುಲಭದ ಮಾತಾಗಿರಲಿಲ್ಲ... ಶಾಲೆ ಶುರುವಾಗಿ ಅದೆಷ್ಟೋ ದಿನದ ನಂತರ ಮೇಷ್ಟ್ರ ಹತ್ತಿರ ಬೈಸಿಕೊಂಡು ಬೈಸಿಕೊಂಡು ಸಿಗೋ ಪುಸ್ತಕಗಳು... ಶಾಲೆಯಲ್ಲಿ ಒಂದು ದಿನ ಕಾಪಿ ಸರಿಯಾಗಿ ಬರೆದಿಲ್ಲ ಅಂತ ಹೆಡ್ ಮಾಸ್ಟರ್ ಲಂಗ ಎಳೆದು ಹಿಡಿದು ಅಂಡಿನ ಮೇಲೆ ಬಿಟ್ಟ ಬೆತ್ತದ   ಪೆಟ್ಟಿನ ನೋವು ಅದೆಷ್ಟೋ ಹೊತ್ತು ಚುರುಗುಟ್ಟಿತ್ತು ... ಅದೆಷ್ಟು ನೆನಪುಗಳು ಶಾಲೆ ಅಂದ್ರೆ .. 

ಶಾಲೆಯಿಂದ ಸಂಜೆ 4 ಘಂಟೆಗೆ ಮನೆಗೆ  ಬರೋವಾಗ ಬೆಳಿಗ್ಗೆ ೧೧ ಘಂಟೆ ತಿಂಡಿ ಮತ್ತು ಮಧ್ಯಾನ್ಹ 3 ಘಂಟೆ ತಿಂಡಿ ಅಕಸ್ಮಾತ್ ಎಲೆ ಮೇಲೆ ಇರದಿದ್ದರೆ ಅಸಾಧ್ಯ ಕೋಪ.. ನಮಗೂ ಉಳಿಸದೆ ಇವರು ಮಾತ್ರ ಮಾಡಿಕೊಂಡು ತಿಂತಾರೆ ಅನ್ನೋ ಸಂಶಯ ತಲೆಯಲ್ಲಿ ... ಆದ್ರೆ ಅದನ್ನ ತೋರ್ಸಿಕೊಳ್ಳೊ  ಹಂಗೂ ಇಲ್ಲ ....ಸುಮ್ಮನೆ ಮನಸಲ್ಲೇ ಕೋಪ ಮಾಡ್ಕೊಂಡು ಎಲೆ ಮೇಲೆ ಬಡಿಸಿದ್ದನ್ನ ತಿಂದು ಹೋಗಬೇಕಿತ್ತು ... ನಾನೋ ಬಕಾಸುರ ವಂಶದವಳು ...

ಆ ಹಳ್ಳಿಯಲ್ಲಿ ಇದ್ದದ್ದು ಆರನೇ ತರಗತಿ ಮಾತ್ರ ಆದ್ದರಿಂದ ನನ್ನ ಓದು ಅಷ್ಟಕ್ಕೇ ನಿಂತಿತ್ತು 

ಅಮ್ಮ ಮಾಡೋ ರೊಟ್ಟಿ ... ಅದನ್ನ ಎಲ್ರಿಗೂ ಒಂದೊಂದು ತುಂಡು ಹಂಚಿ ಕೊಟ್ರೆ ಆಹ್ ಅಮೃತ ಸಮ್ಮಾನ ಅದು ... ಆಗೆಲ್ಲ ರುಬ್ಬೋ ಕಲ್ಲು, ಕಟ್ಟಿಗೆ ಒಲೆ , ಹಿತ್ತಾಳೆ ಪಾತ್ರೆಯಲ್ಲಿ ಮಾಡಿದ ಅಡಿಗೆ ... ಆ ರುಚಿ ಈಗ್ಲೂ  ಬಾಯಲ್ಲಿ ನೀರು ತರಿಸತ್ತೆ .. 

ಹಳ್ಳಿ ಮನೆಯಾದ್ದರಿಂದ ನಾಲ್ಕು ಹೊತ್ತು ಬಾಳೆ ಎಲೆಯ ಮೇಲೆ ತಿಂಡಿ ಊಟ ... ಅದನ್ನ ಕೊಯ್ದು ತೋಟದಿಂದ ತಂದು  ಒಪ್ಪವಾಗಿ ಜೋಡಿಸುವ ಕೆಲಸ ನಂದು ... ಅಲ್ಲೂ ಸಂಜೆ ತೋಟದಲ್ಲಿ ಬಾಳೆಗೊನೆಯ ಹೂವಿನಲ್ಲಿ ಸಿಗೋ ಸಿಹಿ  ಮಕರಂದವನ್ನ ಹಕ್ಕಿಗಳಿಗೂ ಸಿಗದೇ ಹೀರಿದ್ದು ... ಪೇರಳೆ, ನೇರಳೆ ಹಣ್ಣುಗಳನ್ನು ಹಣ್ಣಾಗಕ್ಕು ಬಿಡದೆ ಹಾಗಾಗೆ ತಿಂದದ್ದು ... ಅಡಿಕೆ ಮರದ ಸೋಗೆಯ ರಾಶಿಯಲ್ಲಿ ಮುಚ್ಚಿಟ್ಟ ಕಬ್ಬಿನ  ಕೋಲುಗಳು  ಅಣ್ಣನ ಕೈಗೆ  ಸಿಕ್ಕಿ ಬೈಸಿಕೊಂಡಿದ್ದು ...
ಅಪರೂಪಕ್ಕೆ ಬರೋ ಇನ್ನೊಬ್ಬ ಅಣ್ಣ,  ಅತ್ತಿಗೆಯ ಹತ್ತಿರ "ಸೀತಾ ... ಆ ತಿಂಡಿ ಮಾಡು ... ಈ ಅಡಿಗೆ ಮಾಡು"  ಅಂದ್ರೆ ಮಹದಾನಂದ ... ಅಪರೂಪಕ್ಕೆ ಪಕ್ವಾನ್ನದ ಸವಿ ಸವಿಯೋ ಭಾಗ್ಯ ...

ಮನೆಯ ಒಂದೇ  ಪಡಸಾಲೆಯಲ್ಲಿ ಸಾಲಾಗಿ ಮಲಗಿದಾಗ ಬಿಟ್ಟ 'ಹೂಸು' ನನ್ನದೇ ಅನ್ನೋ ಅಪ್ಪನ ಅಪವಾದ ಬೇರೆ ... ...ದಿನ ಇಡೀ ಏನೇನೊ ಹಾಳು  ಮೂಳು   ತಿಂದು  ಹೊಟ್ಟೆ ಕೆಟ್ಟಿದೆ ..ಅನ್ನೋ   ಸಹಸ್ರ ಅರ್ಚನೆ ...

ಮದುವೆಯಾದ ಅಕ್ಕಂದಿರು ಮನೆಗೆ ಬಂದಾಗ ಯಾರ್ ಯಾರದೋ ಮಿಮಿಕ್ರಿ ಮಾಡಿ ಅವರೆಲ್ಲ ನಕ್ಕು ನಕ್ಕು ಮರುದಿನ ಅಕ್ಕನಿಗೆ ರಾತ್ರಿ ನಿದ್ದೆ ಇಲ್ಲದೆ ತಲೆನೋವಾಗಿದ್ದಕ್ಕೆ  ಅಮ್ಮನಿಂದ ಬೈಗುಳ ನನಗೆ.... 

ಸಂಜೆ ಆಗ್ತಾ ಇದ್ದ ಹಾಗೆ ಸೀಮೆಎಣ್ಣೆ ದೀಪ .... ಸಂಜೆ 7 ಘಂಟೆಗೆಲ್ಲ ಊಟದ  ತಯಾರಿ ... ಊಟ ಮುಗಿಯುತ್ತಿದ್ದ ಹಾಗೆ ಭಜನೆ... ನಂತರ ಕೂಡಲೆ ನಿದ್ದೆ ... ಮಳೆಗಾಲ ಚಳಿಗಾಲದಲ್ಲಿ ಗಡದ್ದಾಗಿ ಕಂಬಳಿ ಹೊದ್ದು ನಿದ್ದೆ ಮಾಡೋ ಆ ಸುಖ... ಆಹ್ ... ಸ್ವರ್ಗ .. 

ಮನೆಯಲ್ಲೇ ಬೆಳೆಯೋ ಕಬ್ಬಿನಿಂದ ಆಲೆಮನೆಯಲ್ಲಿ ವರ್ಷಕ್ಕೊಮ್ಮೆ ಬೆಲ್ಲ ತಯಾರಿ .... ವರ್ಷದ ಕೊನೆಯಲ್ಲಿ ಬೆಲ್ಲ ಖಾಲಿ ಆದ್ರೆ ಅಂಗಡಿಯಿಂದ ಬರ್ತಾ ತಂದ  ಬೆಲ್ಲದ ಉಂಡೆಯ ಪೊಟ್ಟಣ ದಿಂದ ನಾಲ್ಕಾರು ಬೆಲ್ಲದ ಉಂಡೆಯ ರುಚಿ  ದಾರಿ ಮಧ್ಯದಲ್ಲೇ ... 

ವರ್ಷಕ್ಕೊಮ್ಮೆ  ಬಿಡುತ್ತಿದ್ದ ಕಸಿ ಮಾವಿನ ಹಣ್ಣು, ದಿಂಡು ಮಾವಿನ  ಮಾವು ಎಲ್ಲವನ್ನೂ ಹಂಚಿಯೇ ತಿನ್ನಬೇಕು ಅನ್ನೋ ಅಪ್ಪನ ಮಾತು . ನನಗೋ ಎಲ್ಲರಿಗೂ ಹಂಚಿದರೆ ಬೇಗ ಖಾಲಿ ಆಗುತ್ತೆ ಅನ್ನೋ ಅಸಹನೆ. ಅಪ್ಪನ ಎದ್ರಿಗೆ ಮಾತಾಡೋ ಧೈರ್ಯ ಇಲ್ದೆ ಇದ್ರೂ ಕೋಪಕ್ಕೆನೂ ಕಡಿಮೆ ಇರ್ಲಿಲ್ಲ. 

ಶಾಲೆ ಬಿಟ್ಟು ಸ್ವಲ್ಪ ದೊಡ್ದವರಾಗ್ತಿದ್ದ ಹಾಗೆ ಮನೆ, ತೋಟದ ಕೆಲಸಕ್ಕೆ ಕೈ ಜೋಡಿಸೋ ಜವಾಬ್ದಾರಿ ...

ಕೊಟ್ಟಿಗೆಯಿಂದ ೧೫ ದಿನಕ್ಕೊಮ್ಮೆ ಗೊಬ್ಬರ ಗುಂಡಿಯಲ್ಲಿ ಕೊಟ್ಟಿಗೆಯಲ್ಲಿನ ದನದ ಸೆಗಣಿ , ಮೂತ್ರ , ಸೊಪ್ಪು ಎಲ್ಲದರಿಂದ ಸಿದ್ಧವಾದ ಗೊಬ್ಬರವನ್ನ ಕೊಕ್ಕೆಯಿಂದ  ಎಳೆದು ಗೊಬ್ಬರ ಗುಂಡಿಯಲ್ಲಿ ಶೇಖರಿಸಬೇಕು ... ಅಲ್ಲಿಂದ ದೊಡ್ಡ ದೊಡ್ಡ ಬುಟ್ಟಿಯಲ್ಲಿ ಗೊಬ್ಬರ  ಹೊಸದಾಗಿ ಮಾಡಿದ  ತೋಟಕ್ಕೆ ಗದ್ದೆಗೆ ಆ ಆ ಸಮಯದಲ್ಲಿ ತಲೆಯ ಮೇಲೆ  ಹೊತ್ತೊಯ್ಯಬೇಕಾದ್ರೆ ಭಾರದಿಂದ ತಲೆ ಗಡ  ಗಡ ಅಲ್ಲಾಡಿ ಕೆನ್ನೆ, ತಲೆಯಿಂದ ಅಸಾಧ್ಯ ಬೆವರು.. ತಂಬಿಗೆ ತುಂಬಾ ನೀರು ಕುಡಿದರೂ ಆರದ ಬಾಯಾರಿಕೆ .. ತಂಬಿಗೆ ಎತ್ತಿ ಕುಡಿದದ್ದನ್ನ ನೋಡಿದ್ರೆ ಬೈಯೋ ಅಪ್ಪ .. ನೀರನ್ನ ಲೋಟದಲ್ಲಿ ಬಗ್ಗಿಸಿ ಕುಡಿ ...ಅನ್ನೊ ಬುದ್ದಿವಾದ 


 ಮಳೆಗಾಲದಲ್ಲಿ ಶುರು ಗದ್ದೆಯ ಕೆಲಸ ... ಗದ್ದೆ ಎತ್ತುಗಳಿಂದ ಊಳೋ  ಅಣ್ಣ ... ಎತ್ತುಗಳಿಗೆ ಥಂಡಿ ಆಗದೆ ಶಕ್ತಿ ಕೊಡೋ ಹುರುಳಿ ಬೇಯಿಸುವ ಕಾಲ ಅದು  ... ಅದನ್ನು ಬೇಯಿಸಿ ಸ್ವಲ್ಪ ಒರಳು ಕಲ್ಲಿನಲ್ಲಿ ಗುದ್ದಿ ಅವಕ್ಕೆ ತಿನ್ನಕ್ಕೆ ಕೊಡೊ ಪದ್ಧತಿ .. ಒರಳು  ಕಲ್ಲಿನ ಸುತ್ತ ಎಲೆಯಲ್ಲಿ ಆಗತಾನೆ ಬೇಯಿಸಿದ ಹುರುಳಿಗೆ ಉಪ್ಪು, ತೆಂಗಿನೆಣ್ಣೆ ಹಾಕಿ ಸವಿದದ್ದು ... ಇನ್ನು ಆ ರುಚಿ ಬಾಯಲ್ಲಿ ಹಾಗೆ ಇದೆ... ಸಂಜೆಗೆ ಬಿಸಿ ಅನ್ನದ ಜೊತೆ ಹುರುಳಿ ಸಾರು ಊಟಕ್ಕೆ...  

ವರ್ಷಕ್ಕೊಮ್ಮೆ ನೆಟ್ಟಿಯ ಸಮಯದಲ್ಲಿ  ಅಭ್ಯಾಸ ಇಲ್ಲದೆ ಬಗ್ಗಿ ಗಿಡ ನೆಡೋವಾಗ ಕಾಡೋ ಬೆನ್ನು ನೋವು ..  ಗದ್ದೆಯ ಅಂಚಿಗೆ ಬೆನ್ನು ಕೊಟ್ಟು ಸ್ವಲ್ಪ ವಿರಾಮ... ಅಕ್ಕನಿಂದ ಬೈಗುಳ ... ಮಳೆ, ಕಂಬಳಿ ಕೊಪ್ಪೆ , ಎಷ್ಟೆಲ್ಲಾ ನೆನಪುಗಳು ... ಭತ್ತ  ಕೊಯ್ಲು ಸಮಯದಲ್ಲಿ ಕತ್ತರಿಸಿದ ಎರಡನೇ ದಿನಕ್ಕೆ ಒಣಗದಿದ್ದರೆ ಆ ಕಟ್ಟುಗಳನ್ನೆಲ್ಲ ಮತ್ತೆ ತಿರುಗಿಸಿ ಬಿಸಿಲಿಗೆ ಹರಡಬೇಕು ... ನಂತರ ಗದ್ದೆಯಿಂದ  ತಲೆ ಮೇಲೆ ಭತ್ತದ ಕಟ್ಟುಗಳನ್ನು ಹೊತ್ತು ತಂದು ಕುತ್ತರಿ ಮಾಡಬೇಕು ... ಒಂದು ತಿಂಗಳ ನಂತರ ಇಡೀ ಅಂಗಳದಲ್ಲಿ ಅದನ್ನೆಲ್ಲ  ಹರಡಿ ರೌಂಡ್ಗಲ್ಲಿಗೆ ಎತ್ತನ್ನು ಕಟ್ಟಿ ಅದರ ಮೇಲೆ ಸುತ್ತಿಸಿ ಭತ್ತ ಬೇರೆಯಾದ ಮೇಲೆ ಹುಲ್ಲನ್ನು ಬೀಸಿ ಸ್ವಚ್ಛ ಮಾಡಿ ಭತ್ತವನ್ನು ಪಣತದಲ್ಲಿ ಶೇಖರಿಸಬೇಕು. ಹುಲ್ಲನ್ನು ಕಟ್ಟಿ  ಇಡೀ ವರ್ಷಕ್ಕೆ ದನ ಕರುಗಳಿಗೆ ತಿನ್ನಲು ಗುಡ್ಡೆ ಮಾಡಬೇಕಿತ್ತು ..   ಅಗತ್ಯ ಇದ್ದಾಗೆಲ್ಲ ಪಟ್ಟಣದ ಮಿಲ್ಲಿಗೆ ಎತ್ತಿನ ಗಾಡಿಯಲ್ಲಿ  ಭತ್ತ ಕೊಂಡೊಯ್ದು ಅಕ್ಕಿ ಮಾಡಿ ತರೋದು ಅಣ್ಣನ ಕೆಲಸ ... 

ಇದರ ಜೊತೆ ಜೊತೆಗೆ ಭತ್ತದ ಕಟಾವು ಮುಗಿದ ಕೂಡ್ಲೆ ತರಕಾರಿ ಬೆಳೆಸೋ ಕೆಲಸ ...ಸೌತೆ , ಕುಂಬಳ , ಬೆಂಡೆ, ಮೆಣಸು, ಬದನೆ , ಹಾಗಲ  ಹೀಗೆ ಎಲ್ಲಾ ತರಹದ ತರಕಾರಿ ಮನೆ ಖರ್ಚಿಗೆ ಬೇಕಾದಷ್ಟು ಬೆಳೀತಿದ್ವು ..  ಸ್ವಲ್ಪ ದೂರದ ಪುಟ್ಟ ಕೆರೆಯಿಂದ ಕೊಡಪಾನದಲ್ಲಿ ಹೊತ್ತು ಗಿಡ ಬೆಳೆಸೂ ಕಷ್ಟ ..  ....
ಕಬ್ಬಿನ  ಗದ್ದೆಗೆ ಕೊಡಪಾನದಲ್ಲಿ ಅದೇ  ಕೆರೆಯಿಂದ ಎರಡೂ ಹೊತ್ತು ನೀರು ಹಾಕೋ ಕಾಯಕ ಪ್ರತಿದಿನ ಅಕ್ಕ ಮತ್ತು ನಂಗೆ ....ಅದನ್ನು ಹುಚ್ಚುಚ್ಚಾಗಿ ಹಾಕಿದ್ದು ನೋಡಿದ್ರೆ ಅಪ್ಪನಿಂದ ಬೈಗುಳ ... ಚಂದ ಮಾಡಿ ಗಿಡಕ್ಕೆ ಪೆಟ್ಟಾಗದಂತೆ ಹಾಕಿ  ಅನ್ನೋ ಆದೇಶ ... 

ಚಳಿಗಾಲ ಶುರು ಆಗ್ತಾ ಇದ್ದ ಹಾಗೆ ಅಡಿಕೆ ಕೊಯಲು ಶುರು ...ತೋಟದಿಂದ ಕೆಲ್ಸದವರು ಅಡಿಕೆ ಗೊನೆ ತುಂಡು ಮಾಡಿ ಕೆಳಗೆ ಇಳಿಸುತ್ತಿದ್ದಂತೆ  ಅವನ್ನು ಹೊತ್ತು ಮನೆಯ ಅಂಗಳಕ್ಕೆ ತರಬೇಕು ... ನಂತರ ಅದರದ್ದೇ ಮಣೆಯಲ್ಲಿ ಅದನ್ನು ಸಿಪ್ಪೆ ಬಿಡಿಸಿ ಸುಲಿಯೋ  ಕೆಲಸ ... ಅಣ್ಣ ಬೇಯಿಸಿದರೆ ಅಮ್ಮ ಅದನ್ನ ತೋಡಿ ತೋಡಿ ಬುಟ್ಟಿಯಲ್ಲಿ ತುಂಬಿಸ್ತಿದ್ರು ... ಬಿಸಿಬಿಸಿ ಬೇಯಿಸಿದ ಅಡಿಕೆ ಬುಟ್ಟಿಯನ್ನು ಅಣ್ಣ ತಲೆ ಮೇಲೆ ಹೊತ್ತು ಚಪ್ಪರಕ್ಕೆ ತಂದ್ರೆ ಅದನ್ನ ಹರವೋದು ನನ್ನ ಅಕ್ಕನ ಕೆಲಸ ....  ಆ ಸಮಯದಲ್ಲಿ ಯಾವಾಗ್ಲೂ ಕಾಡೋ ಮಳೆ ... ಚಪ್ಪರ ಹತ್ತಿ  ಒಣ ಹಾಕಿದ ಅಡಿಕೆಗಳಿಗೆ  ತಟ್ಟಿ  ಮುಚ್ಚಿ ಜೋಪಾನ ಮಾಡೋ ಕೆಲಸ ... ಅದು ಒಣಗಿದ ಮೇಲೆ ಅಡಿಕೆ ಆರ್ಸೋ ಕೆಲ್ಸ... ಅಮ್ಮ ಅಂತೂ ತುಂಬಾ ಚುರುಕು ಈ ಕೆಲಸದಲ್ಲಿ .... ಹೀಗೆಲ್ಲಾ ಹಳ್ಳಿ ಮನೆಯಲ್ಲಿ ನಿರಂತರ ಕೆಲಸ ತಪ್ಪಿದ್ದಲ್ಲ ... 

ಎಷ್ಟು ಚಂದದ ಜವಬ್ದಾರಿ ಇಲ್ಲದ ಆ ಹಳ್ಳಿಯ ಬಾಲ್ಯದ ದಿನಗಳು ... 

ಈ ಮೆಲುಕೆಲ್ಲಾ ನನ್ನ ಅಮ್ಮನದು .. :-) ಅವರ  ಬಾಲ್ಯದ ನೆನಪುಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡೋ ಪುಟ್ಟ ಪ್ರಯತ್ನ ನಂದು  ... 
:-)

ಪ್ರೀತಿಯಿಂದ 

ಸುದೀಪ ..... 


Friday, 11 September 2015

ಚುರುಮುರಿ ಮೆಲುಕು....


ಸೋದರಮಾವನಿಗೋ  ಮೊದಲೇ ಗಡಿಬಿಡಿ.... ಅದಾಗಲೆ ಧಾರೆ ಮಹೂರ್ತದ ಸಮಯ ಹತ್ರ ಬರ್ತಾ ಇತ್ತು .... ಇನ್ನು ಆಗಿಲ್ವಾ ಅಲಂಕಾರ ಅಂತ ಮಧುಮಗಳ  ರೂಮಿನ ಬಾಗಿಲು ಹೊರಗಿನಿಂದ ಬಡೀತಾ ಇದ್ರು .... ಅಂತೂ ಆ beautician ಅದೇನೋ ಭಾರದ  ಚವರಿ
ಹಾಕಿ ಅದ್ರ ಮೇಲೆ ಸುಗಂಧರಾಜ ಹೂವಿನ ಜಡೆ fix ಮಾಡಿ ಒಂದಷ್ಟು ಬಣ್ಣ ಮೆತ್ತಿ ಅಂತೂ ಆಕೇನ  ಹೊರಗೆ ಕಳಿಸಿ ಕೊಟ್ಳು ...ಇವಳೋ  ಮೊದಲೇ ಮುಜುಗರದ ಪ್ರಾಣಿ... ಒಂದುವರೆ  ತಿಂಗಳು ಮೊದಲೇ ಗೊತ್ತಾಗಿದ್ದ ಮದುವೆ ದಿನ ... ಆ ದಿನ ಇಟ್ಟಾಗಿನಿಂದ  ಅಮ್ಮನಿಗೆ ಅದೆಷ್ಟು ಬಾರಿ "ಹೇಗಮ್ಮ ಅಷ್ಟು ಜನರ ಎದುರು ಸ್ಟೇಜ್ ಮೇಲೆ ಕೂರೋದು:"....  ಅಂತ ನೂರು ಬಾರಿ ಕೇಳಿ ಕೇಳಿ ಬೈಸಿಕೊಂಡಿದ್ದಾಳೆ  ...  ಹಾಗೂ ಹೀಗೂ ಸೋದರ ಮಾವ ಆಕೆಯ ಕೈ ಹಿಡಿದುಕೊಂಡು ಮಂಟಪದ ಹತ್ತಿರ ಆ ತುಂಬಿದ ಸಭೆಯಲ್ಲಿ ಕರೆದುಕೊಂಡು ಹೋಗ್ತಾ ಇರ್ಬೇಕಾದ್ರೆ ಎಲ್ಲರ ದೃಷ್ಟಿಯೂ ಆಕೆಯ ಮೇಲೆ ... ಒಂದಷ್ಟು ಭಾವಗಳ ಮಧ್ಯೆಯೇ ತಲೆ ತಗ್ಗಿಸಿ ಹೋಗೋವಾಗ ಏನೋ missing missing... ಅರೇ ಇವ್ರು ಅವಸರದಲ್ಲಿ ಹುಡುಗನಿಗೆ ಹಾಕೋ ಮಾಲೇನೇ  ತನ್ನ ಕೈಯಲ್ಲಿ ಕೊಟ್ಟಿಲ್ವಲ್ಲ ... ಎಂಥ ಅವಸ್ಥೆ ಇದು... order ಕೊಟ್ಟ ಹೂ ಅಂಗಡಿಯವನು ತಂದಿದಾನೋ ಇಲ್ವೋ ...ನೂರೆಂಟು ಯೋಚನೆ ತಲೆಯಲ್ಲಿ ತುಂಬುವಷ್ಟರಲ್ಲೇ ಮಾವ ಅದಾಗಲೇ ಮಂಟಪದ ಹತ್ತಿರ ಕರೆದುಕೊಂಡು ಬಂದಾಗಿತ್ತು ...ಮಾವನಿಗೆ ನಮಸ್ಕಾರ ಮಾಡು ಅಂತ ಪುರೋಹಿತರು ಹೇಳ್ದಾಗ ಬಗ್ಗಿ ನಮಸ್ಕಾರ ಮಾಡಿ ಅವ್ರು ತಲೆ ಮೇಲೆ ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಿ ಮಂಟಪದಿಂದ  ಹೊರನಡೆಡಿದ್ರು ...  ಹುಡುಗನ ಎದುರು ಅದಾಗಲೇ ಇಬ್ಬರು ಪುರೋಹಿತರು ಮುಖ ಕಾಣದಂತೆ ಶಲ್ಯವನ್ನು ಅಡ್ಡ ಹಿಡಿದಿದ್ದರು ... ಪಕ್ಕದಲ್ಲಿ ಅಪ್ಪ ಅಮ್ಮ ... ಹತ್ತಿರ ಬರುತ್ತಿದ್ದ ಮಹೂರ್ಥದ ಘಳಿಗೆ....ಭಟ್ಟರು ಅದೇನೋ   ಸುಲಘ್ನೆ ಸಾವಧಾನ  ಮಂತ್ರ ಪಠಿಸ್ತಾ ಇದ್ರೆ  ಆಕೆಯ ಮನದಲ್ಲೋ "ಹೂವಿನ ಹಾರ..." ಎಲ್ಲಿ ಅನ್ನೋ ಸಿಲ್ಲಿ ಯೋಚನೆ ... ಪಕ್ಕದಲ್ಲಿ ನಿಂತ ಅಮ್ಮನ ಮುಖ ನೋಡಿದ್ರೆ ಅವ್ರು "ಏನು" ಅನ್ನೋ ರೀತಿಯಲ್ಲಿ ತಲೆ ಅಲ್ಲಾಡಿಸಿ  ಸನ್ನೆ ಮಾಡಿದ್ರೆ ... ಆಕೆ ಮೆಲ್ಲಗೆ " ಅಮ್ಮಾ ... ಹೂವಿನ ಹಾರಾನೇ ಕೊಟ್ಟಿಲ್ಲ ನನ್ನ ಕೈಯಲ್ಲಿ " ಅಂದ್ರೆ ಅವಳ ಅಮ್ಮ "ಸುಮ್ನೆ ನಿಂತ್ಕೋ... " ಅಂತ ಗುರಾಯ್ಸಿದ್ರು... ಬಹುಶಃ ಮದುವೆ ಮಂಟಪದಲ್ಲೂ  ಬೈಸಿಕೊಂಡ ಮೊದಲ ಮದುಮಗಳು ಆಕೆ .... :-(


ಇಷ್ಟೆಲ್ಲಾ ಯೋಚನೆ ಮಾಡ್ತಾ ಇರ್ಬೇಕಾದ್ರೆ ಶಲ್ಯದ ಆ ಬದಿಯಿಂದ ಒಬ್ಬ ಪುರೋಹಿತರು ನಿಧಾನಕ್ಕೆ ಆಕೆಯ ಕೈಯಲ್ಲಿ ಹೂವಿನ ಹಾರ ಕೊಟ್ರೆ ... ಉಸ್ಸಪ್ಪಾ.. ಅಂತೂ ಒಂದು ಸಮಸ್ಯೆ ಬಗೆಹರೀತು ಅಂತ ನಿಟ್ಟುಸಿರು  ಬಿಡ್ತಾಳಾಕೆ .... ಎದುರಿಗಿದ್ದ ಶಲ್ಯದ ತೆರೆ ಸರಿದಾಗ ನಗುತ್ತ ನಿಂತ ಹುಡುಗ ... ಅರೆ ಇವನೋ ತನಗಿಂತ ತುಂಬಾ ಎತ್ತರ ..ಜೊತೆಗೆ ಈಗ ತಲೆ ಮೇಲೊಂದು ಪೇಟ ... ಅವನ ಗತ್ತು ನೋಡಿದ್ರೆ ಸ್ವಲ್ಪ ಆದರು ತಲೆ ಬಗ್ಗಿಸಿ ಹೆಲ್ಪ್ ಮಾಡೋ ಆಸಾಮಿ ಅಲ್ಲ ಅನ್ನೋ ಹಾಗೆ ತಲೆಯೆತ್ತಿ ನಿಂತಿದ್ದ ... ಅಕ್ಕ ಪಕ್ಕ ನಿಂತ ಅವನ ಕಡೆಯವರು ತಲೆ ಬಗ್ಗಿಸ್ಬೇಡ...  .ಆಮೇಲೆ  ಜೀವನ ಪೂರ್ತಿ ಆಕೆ ಎದುರಲ್ಲಿ ತಲೆ ಬಗ್ಗಿಸಬೇಕಾಗತ್ತೆ ಅನ್ನೋ ಸೂಚನೆ ಕೊಡ್ತಾ ಇದ್ರು  ... . ಕೈಯಲ್ಲಿ ಮಾಲೆ ಅಂತೂ ಸಿಕ್ತು ...ತಾನು ಮುಂಗಾಲಿನ ಬೆರಳುಗಳ ಮೇಲೆ ನಿಂತು  ಬ್ಯಾಲೆನ್ಸ್ ಮಾಡಿದ್ರು ಹಾರ ಅವ್ನ ಕುತ್ತಿಗೆಗೆ ಸರಿಯಾಗಿ ಬೀಳೋದು ಸಂಶಯ ... ಛೆ ...ಎಲ್ಲ ಸಮಸ್ಯೆ ಒಂದರ ಹಿಂದೆ ಒಂದು ಇವತ್ತೇ ಕಾಡ್ಬೇಕಾ  ... ಮನಸಲ್ಲಿ ಯೋಚನೆ ಮಾಡ್ತಿರ್ಬೆಕಾದ್ರೆ ಅತ್ತ ಪುರೋಹಿತರ ಮಂತ್ರ ಪಠಣ ಗಟ್ಟಿಯಾಗ್ತಾ ಇತ್ತು ...ಇತ್ತ ಸುತ್ತ ನೆರೆದಿದ್ದ ಸಂಬಂಧಿಕರಿಗೂ ಕುತೂಹಲ ....ಮದುಮಗಳು ಅದು ಹೇಗೆ ಮಾಲೆ ಹಾಕ್ತಾಳೆ ಅಂತ ... ಎಲ್ಲರಿಗೂ ಅಲ್ಲಿ ಹಾಸ್ಯದ ವಾತಾವರಣ ಅನ್ಸಿದ್ರೆ ಆಕೆಗೋ " ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ " ಅನ್ನೋ ಸ್ಥಿತಿ ...  ಹಾರ ಹಾಕು ಹುಡುಗನಿಗೆ ಅನ್ನೋ ಪುರೋಹಿತರ ಆದೇಶ ಬಂದ ಕೂಡ್ಲೆ  ಕಷ್ಟಪಟ್ಟು ಹಾರವನ್ನ, ಹುಡುಗನ ಪೇಟವನ್ನು ದಾಟಿ ಕುತ್ತಿಗೆಗೆ ಬೀಳೋ ಹಾಗೆ ಗುರಿಯಿಟ್ಟು ನಿಧಾನಕ್ಕೆ ಎಸೆದಿದ್ದಳಾಕೆ  .... ಪುಣ್ಯಕ್ಕೆ ಅದು ಪರ್ಫೆಕ್ಟ್ ಆಗಿ ಕುತ್ತಿಗೆಗೆ ಬಿದ್ದಿತ್ತು ..  ಒಂದು ಕಡೆ ವಾಲಗದವರಿಂದ  ಗಟ್ಟಿ ಮೇಳದ ಸದ್ದಾದರೆ ಇನ್ನೊಂದು ಕಡೆ  ಅಕ್ಕ ಪಕ್ಕ ಕೂತ ನೆಂಟರು ಸ್ನೇಹಿತರಿಂದ  ನಗು ಚಪ್ಪಾಳೆ .... 
ಈ ಘಟನೆ ನಡೆದು ಅದಾಗಲೇ 14 ವರ್ಷ ಮೊನ್ನೆ ಮೊನ್ನೆ ಪೂರ್ತಿ ಆಯ್ತು .. 

ಸುಖ ದುಃಖ ಸರಿ ಸಮನಾಗಿ ಹಂಚಿಕೊಳ್ತೇವೆ ಅನ್ನೋ ನಿರ್ಧಾರ ಮಾಡಿ ಸಪ್ತಪದಿ ತುಳಿದು ದಾಂಪತ್ಯಕ್ಕೆ ಕಾಲಿಟ್ಟದ್ದು ಮೊನ್ನೆ ಮೊನ್ನೆ ಅನ್ನಿಸುವಂತೆ ... :-)


ಪ್ರೀತಿಯಿಂದ 
ಸುದೀಪ ... 


Thursday, 26 March 2015

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 5


ಯಾರಾದ್ರು ಅತಿ ಹೆಚ್ಚು ದ್ವೇಷ ಮಾಡೋ, ತುಂಬಾ ಬೋರ್ ಆಗೋ ಕೆಲಸ ಯಾವ್ದು ಅಂದ್ರೆ.. ನನ್ listನಲ್ಲಿ ಮೊದಲ್ನೇ ಉತ್ತರ 100% ಗ್ಯಾರಂಟಿ  'ಅಡಿಗೆ ಮಾಡೋದು' ಅಂತ   ಆಗಿರತ್ತೆ ....  ಯಾರಾದ್ರು ಅಡಿಗೆ ಮಾಡಿ ಬಡ್ಸಿದ್ರೆ   (ಅದೂ ಕೂಡ ತುಂಬಾ ತಿನ್ನೋ ಶಕ್ತಿ ಇಲ್ಲ ...ಜೊತೆಗೆ slow eater ಬೇರೆ...) ಒಂದು ಘಂಟೆ ತಟ್ಟೆ ಮುಂದೆ ಕೂತ್ಕೊಂಡು ಅಂತೂ ಇಂತೂ ಪದಾರ್ಥ ಖಾಲಿ ಮಾಡೋ ಅಸಾಮಿ....ತಿನ್ನಕ್ಕೂ ಪ್ರಯೋಜನ ಇಲ್ಲ... :-p    ಅಂತಹ ನಾನು ಈ ಫೇಸ್ಬುಕ್ ಅನ್ನೋ ಫುಡ್ ಗ್ರೂಪ್ಗಳಿಗೆ ಅಪರೂಪಕ್ಕೆ  ಏನೋ ಒಂದು ಅಡಿಗೆ ಮಾಡಿ ಅದನ್ನ ಪ್ಲೇಟ್ನಲ್ಲಿ  ಅಲಂಕರಿಸಿ ಫೋಟೋ ತೆಗ್ದು upload ಮಾಡ್ತೀನಿ ಅಂದ್ರೆ ನಿಜಕ್ಕೂ ನಂಗೆ ಆಶ್ಚರ್ಯ .... ಜೊತೆಗೆ ಅಲ್ಲಿ ಸ್ನೇಹಿತರ  ಪ್ರೋತ್ಸಾಹದ ಕಾಮೆಂಟ್ಗಳಿಗೆ ಸ್ವಲ್ಪ ಉಬ್ಬಿ ಖುಷಿ ಪಡೋ ಪ್ರಾಣಿ ....ಈ ಬ್ಲಾಗ್ ಪ್ರಾರಂಭಸಿ ಹೆಚ್ಚು ಕಮ್ಮಿ 3 ವರ್ಷದಲ್ಲಿ ಇದು ಐದನೇ ಸಂಚಿಕೆ.... ಈ ಬಾರಿ ಸ್ವಲ್ಪವೇ ಚಿತ್ರಗಳು... ಅರ್ಧ ನಿಮಿಷದಲ್ಲಿ ನೋಡಿ ಮುಗಿಸಬಹುದು... :-) 

ಹೇಗಿದೆ ಅಂತ ನೋಡಿ... 

3...

2 ..

1.

                                                                        START.... 


ರವಾ ಚಕ್ಲಿ 

ತೊಂಡೆಕಾಯಿ ಪಲ್ಯ 
ಪತ್ರೊಡೆ ಬೀಟ್ರೂಟ್   ಪಲ್ಯ ಆಲೂ ಪರಾಟ ಗೋಧಿ ಹಿಟ್ಟು ಲಾಡು ಡೋಕ್ಲ ಸ್ಟ್ರಾಬೆರಿ ಫಿರ್ನಿ ಕ್ಯಾಬೇಜ್ ಪಲ್ಯ ಈ ವರ್ಷದ ಮೊದಲ ಮಾವಿನಹಣ್ಣಿನ ಸಾಸಿವೆ ...ಅಂಬೆ ಉಪ್ಕರಿ (ಕೊಂಕಣಿಯಲ್ಲಿ)ಹಲಸಿನಕಾಯಿ ಹುಳಿ + ಫೋಡಿ ಕಾರ್ನ್ ಪುಲಾವ್ .... ತುಂಬಾ ಹಳೆಯ ಚಿತ್ರ....


ಮತ್ತಷ್ಟು ಚಿತ್ರಗಳೊಂದಿಗೆ  ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗ್ತೀನಿ ..

ಅಲ್ಲಿವರೆಗೂ

ಪ್ರೀತಿಯಿಂದ

ಸುದೀಪ...

:-)