Saturday, 2 March 2013

ಹಾಗೇ ಸುಮ್ನೆ.....ಕ್ಷೇಮ                              ಶ್ರೀ                               12 -02-2012                                              

ಮೊದ್ಲೆಲ್ಲಾ ಯಾರಿಗಾದರೂ ಕಾಗದ ಬರೀಬೇಕು ಅಂದ್ರೆ ಹಿಂಗೆ ಶುರು ಮಾಡ್ತಾ ಇದ್ದೆ. ಅದೇ ಅಭ್ಯಾಸ ಬಲ. ಈಗ್ಲೂ ಕ್ಷೇಮ, ಶ್ರೀ, ತಾರೀಕು ಅಂತ ಬರ್ದಿದ್ದೀನಿ. ನನಗೆ ನಗು ಬರ್ತಾ ಇದೆ. ಅಂದ ಹಾಗೆ ನನ್ನ ಹೆಸರು ಮಧುರ. ಗಂಡನ ಹೆಸರು ಹೇಮಂತ್ .  ಮಗಳ ಹೆಸರು ಅನುಪಮ. ನನ್ನ ಮಗಳು ತುಂಬಾ ದೊಡ್ಡವಳು ಅಂದುಕೊಂಡು ಬಿಟ್ರಾ? ನಿಮ್ಮ ಕಲ್ಪನೆ ನಿಜಕ್ಕೂ ಸುಳ್ಳು, ಯಾಕಂದ್ರೆ ಅವಳಿಗೆ ಈಗ ಇನ್ನೂ ಕೇವಲ ಒಂದು  ತಿಂಗಳಷ್ಟೇ. ಪುಟ್ಟ ಕೂಸು. ಮುದ್ದು ಮುದ್ದಾಗಿದ್ದಾಳೆ ನನ್ನ ತರಹ. ಅವಳು ನನ್ನ ಮುದ್ದು ಕಂದ . , ನನ್ನ ಪ್ರಪಂಚ . ಇದನ್ನೆಲ್ಲಾ ಯಾಕೆ ಹೇಳ್ತೀನಿ ಅಂದುಕೊಂಡ್ರಾ.... !!! ವಿಷಯಕ್ಕೆ ಬರ್ತೀನಿ ಇರಿ. ನನ್ನ ಮಗಳಿಗೆ ಈಗ ಕೇವಲ ಒಂದು ತಿಂಗಳು ಅಂದ್ರೆ, ನಾನು ಒಂದು  ತಿಂಗಳ  ಬಾಣಂತಿ ಅಂತ ಅರ್ಥ ತಾನೆ....!!!!  ಒಂದು ತಿಂಗಳಿಂದ ಮಲಗಿ ಮಲಗಿ ಬೇಸರ ಆಗಿತ್ತು ಅಂತ ಅಮ್ಮನ ಹತ್ತಿರ ಹಠ ಮಾಡಿ ಪೇಪರ್, ಪೆನ್ನು ತರ್ಸಿ ಇದನ್ನೆಲ್ಲಾ ಬರೀತಾ ಇದ್ದಿನಿ. ಸುಮ್ನೆ ಟೈಂಪಾಸ್. ಅಮ್ಮನಿಗೆ ಮಾತು ಕೊಟ್ಟಿದ್ದೀನಿ. ಕೇವಲ ನಾಲ್ಕೇ ದಿನದಲ್ಲಿ ಬರದು ಮುಗಿಸ್ತೀನಿ. ದಿನಕ್ಕೆ ಅರ್ಧ ಘಂಟೆ ಮಾತ್ರ. ಅದು ಮಲ್ಕೊಂಡೆ. ಆಯಾಸ ಮಾಡ್ಕೊಳ್ಳಲ್ಲ, ತೊಂದರೆ ಕೊಡಲ್ಲ   ಅಂತ ಪೂಸಿ ಹೊಡ್ದು ಒಪ್ಸಿದ್ದೀನಿ. ಅಂದ ಹಾಗೆ ಏನು ಬರೀಲಿ ಅಂತ ಈಗ ಟೆನ್ಶನ್ .... :-) .  ಇದೆಲ್ಲ creative ಐಡಿಯಾಗಳು ಯಾವಾಗ್ಲೂ ನಂಗೆ ಹೇಗೆ ಬರುತ್ತೆ ಅಂತ ಕೆಲವೊಮ್ಮೆ ಆಶ್ಚರ್ಯ ಆಗುತ್ತೆ.!!!!! ನೋಡೋಣ, ನನ್ನ ಜೀವನದ  ಕಥೆನೇ ನೆನಪು ಮಾಡ್ಕೊಂಡು, ಮಾಡ್ಕೊಂಡು  ಸಂಕ್ಷಿಪ್ತವಾಗಿ ಬರೀತೀನಿ. ಜೀವನದಲ್ಲಿ ಏನೂ ಸಾಧಿಸಿಲ್ಲ. ಎಲ್ಲರಿಗೂ ಬೇಜಾರು ಬರೋಷ್ಟು  ತೊಂದರೆ, ಕಿರಿಕಿರಿ ಮಾಡಿದ್ದೆ ನನ್ನ ಸಾಧನೆ ಅನ್ನಬಹುದು..... ಅದೆಲ್ಲ ಒಂದು ಕಡೆ ಇರಲಿ..  ಓದಕ್ಕೆ ರೆಡಿನಾ? ಶುರು ಮಾಡ್ತೀನಿ ಓದಿ ......
ನಂದು ಒಂದು ಪುಟ್ಟ ಕುಟುಂಬ. ಅಪ್ಪ, ಅಮ್ಮ, ನಾನು ನನ್ನ ತಮ್ಮ. ಇಷ್ಟೇ ನಮ್ಮ ಪ್ರಪಂಚ. ನಾನು ಸ್ವಲ್ಪ ಚೆಲ್ಲು ಚೆಲ್ಲು, ಬಜಾರಿ, ಹಠಮಾರಿ, ಗಂಡುಬೀರಿಯಂತೆ . ಇದೆಲ್ಲಾ ನನಗೆ ಸಿಕ್ಕಿರೋ ಬಿರುದುಗಳು. ಹಿಂಗೆಲ್ಲ ಕರೆಯೋದು ನನ್ನ ಮನೆಯವ್ರು, ಫ್ರೆಂಡ್ಸ್ etc etc..... ನಾನು ಅಪ್ಪನ ಮುದ್ದು ಆದ್ರೆ, ನನ್ನ ತಮ್ಮ ಅಮ್ಮನ ಕೂಸು. ನಮ್ಮನೇಲಿ ನನಗೂ ನನ್ನ ತಮ್ಮನಿಗೂ ಒಂದೇ  ವಿಷಯಕ್ಕೆ ಯಾವಾಗ್ಲೂ ಜಗಳ ಆಗೋದು. ಅದಂದ್ರೆ, ಅವನು ಯಾವಾಗ ನೋಡಿದ್ರೂ ಅಮ್ಮನ ಬಾಲದ ಹಾಗೆ ಅಡಿಗೆ ಮನೇಲಿ ಅಮ್ಮನಿಗೆ ಸಹಾಯ ಮಾಡೋದು, ಮನೆ ಕ್ಲೀನ್ ಮಾಡಕ್ಕೆ ದೊಡ್ಡ ಸಾಹಸಿ ತರಹ ನನ್ನ ಎದ್ರಿಗೆ ಫೋಸ್ ಕೊಡೋದು, ಇದನ್ನೆಲ್ಲಾ ನೋಡಿ ನನ್ನಮ್ಮ ನನಗೆ, "ಅವನು ನೋಡು ಗಂಡು ಹುಡುಗ, ಆದ್ರೂ ಮನೆಕೆಲಸದಲ್ಲಿ ನಂಗೆ ಎಷ್ಟು ಸಹಾಯ ಮಾಡ್ತಾನೆ. ನೀನು ಇದ್ದಿಯಾ ತಿನ್ನೋದು, ಕುಡಿಯೋದು, ಫ್ರೆಂಡ್ಸ್ ಅಂತ ಅಲಿಯೋದು ಇದೆ ಆಯ್ತು" ಅಂತ ಬೈಯೊದು. ಆಗ ನನ್ನ ಸಿಟ್ಟು ತಿರುಗೋದು ತಮ್ಮನ ಮೇಲೆ. "ನಿನಗೆ ಸುಮ್ನೆ ಬೇರೆ ಹುಡುಗ್ರ ತರಹ ಇರಕ್ಕೆ ಆಗಲ್ವೇನೋ, ಅದೇನು ಒಳ್ಳೆ ಹುಡುಗಿ ತರಹ ಮೂರುಹೊತ್ತು ಅಮ್ಮನ ಸೆರಗು ಹಿಡ್ಕೊಂಡು ಹಿಂದೆ ಹಿಂದೆ ಸುತ್ತಾಡ್ತೀಯ" ಅಂತ ಅವನ ಮೇಲೆ ರೇಗ್ತಿದ್ದೆ. ನಾನು ಹಾಗೆನೇ ಯಾವಾಗ್ಲೂ ಹಾಕೋದು ಜೀನ್ಸ್, ಟಿ-ಶರ್ಟ್, ಹೇರ್ ಸ್ಟೈಲ್ ಸಹಾ ಹುಡುಗರ ಹಂಗೇನೆ  .... ಅದೇಕೋ ಫ್ರಾಕ್, ಮಿಡಿ, ಸ್ಕರ್ಟ್ ಅಂದ್ರೆ ಒಂಥರಾ ಹಿಂಸೆ ಆಗ್ತಿತ್ತು. ಆ ಸ್ಕೂಲ್ ಯುನಿಫಾರ್ಮ್ ಕಷ್ಟ ಪಟ್ಟು ಮನಸ್ಸಿಲ್ಲದೇ, ವಿಧಿಯಿಲ್ಲದೇ ಹಾಕ್ತಾ ಇದ್ದೆ. ಯಾವಾಗ ಕಾಲೇಜಿಗೆ ಬಂದನೋ ಅಲ್ಲಿ ನನ್ನ ಪುಣ್ಯಕ್ಕೆ ಪ್ಯಾಂಟ್, ಶರ್ಟ್ ಹಾಕಕ್ಕೆ ಅನುಮತಿ ಸಿಕ್ತು.. ಉಫ್ ... ಅಂತ ಉಸಿರು ಬಿಟ್ಟಿದ್ದು ಇನ್ನೂ ನೆನಪಿದೆ. ಇಷ್ಟೆಲ್ಲಾ ಇದ್ದ ನಾನು ಓದಿನಲ್ಲಿ ಮಾತ್ರ ಯಾವಾಗಲೂ ಫಸ್ಟ್. ನನ್ನ ಓದು ಮುಗಿದ ನಂತರ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಅನಾಯಾಸವಾಗಿ ಸಿಕ್ತು . ಸಾವಿರ ಸಾವಿರ ಸಂಬಳ  ಪ್ರತಿ ತಿಂಗಳು ಅಮ್ಮನಿಗೆ, ಅಪ್ಪನಿಗೆ ಗಿಫ್ಟ್, ತಮ್ಮನಿಗೆ ಪಾಕೆಟ್ ಮನಿ.  ಚಂದದ ಜೀವನ. ಈ ಮಧ್ಯದಲ್ಲೇ ನನ್ನ ಭೇಟಿ ಆಗಿದ್ದು ಹೊಸದಾಗಿ ಆಫೀಸಿಗೆ ಸೇರಿದ ಸೀನಿಯರ್ ಸಹೋದ್ಯೋಗಿ  'ಹೇಮಂತ್' ಜೊತೆ. ಅದೇನೋ ಆ  ಆಕರ್ಷಣೆ ನನ್ನನ್ನು ಗೊತ್ತಿಲ್ಲದೇ ಅವನ ಹತ್ತಿರ ಹತ್ತಿರ ತಂದು ಬಿಡ್ತು. ನನ್ಗೆ ಹೋಲಿಸಿದ್ರೆ ವಿರುದ್ದ ಸ್ವಭಾವ ಅವನದ್ದು. ನಾನು ಎಷ್ಟು ಮಾತಾಡ್ತಿನೋ, ಅವನು ಅಷ್ಟೇ ಸೈಲೆಂಟ್ .  ಆದ್ರೂ ಅದೇನು ನೋಡಿ ಅವನನ್ನು ಪ್ರಿತಿಸಿದ್ನೋ ಇನ್ನೂ ಗೊತ್ತಿಲ್ಲ. ನಮ್ಮ  ಪ್ರೀತಿ , ಮದುವೆಗೆ ಯಾವ ಅಡ್ಡಿನೂ ಬರಲಿಲ್ಲ. ಧಾಂ ಧೂಮ್ ಅಂತ ಅಪ್ಪ, ಅಮ್ಮ ಅವನ ಜೊತೆ ಮದುವೆ ಮಾಡಿ ಕೊಟ್ಟು ಬಿಟ್ರು . ಬಹುಷಃ ಅವರಿಗೆ ನನ್ನ ಕಾಟ ಸಹಿಸಕ್ಕೆ ಆಗ್ದೆ  ಮನೆಯಿಂದ ಸಾಗ ಹಾಕಿದ್ರೆ ಸಾಕು ಅನ್ನಿಸ್ತು ಅನಿಸುತ್ತೆ, ಹೀಗಂತ ನಾನು ಯಾವಾಗ್ಲು ಅವರ ಕಾಲು ಎಳೀತಾ ಇರ್ತೀನಿ.
ಇವತ್ತಿಗೆ ಇಷ್ಟು ಸಾಕು ಅನ್ಸುತ್ತೆ. ಮುಂದಿನ ಭಾಗ ನಾಳೆ ಬರಿತೀನಿ. 

                                                                                                                                                                         13-02-2012

ಗಂಡು ಹುಡುಗರಂತೆ ಅದೇನೋ ಹೇಳ್ತಾರಲ್ಲ ಟಾಮ್ ಬಾಯ್  ಹಂಗೆ ಬೆಳೆದ   ನಾನು ಸಹಾ ಒಂದು ವರ್ಷದ ಹಿಂದೆ ಮೆಂಟಲ್ ತರಾ ಆಗಿದ್ದೆ ಅಂದ್ರೆ ನಂಬ್ತೀರಾ? ಅದು ಸಹಾ  ಪರಿಪೂರ್ಣ ಹೆಣ್ಣಾಗುವ ತವಕದಲ್ಲಿ. ಇದು  ಸತ್ಯವಾದ ಮಾತು, ಯಾಕಂದ್ರೆ ಕೆಲವೊಮ್ಮೆ ಪರಿಸ್ಥಿತಿ ಎಂಥವರನ್ನು ಏನೇನೊ ಮಾಡಿಬಿಡುತ್ತೆ. ಈ ಮನಸ್ಸು ಬಹಳ ಸೂಕ್ಷ್ಮ. ಯಾವಾಗ ಕೆಟ್ಟು ತಿಕ್ಕಲು ತರಹ ಆಡ್ತೀವೋ ಗೊತ್ತೇ ಆಗೋದಿಲ್ಲ. ಮನಸ್ಸಿಗೆ ಬೇಕು ಅನಿಸಿದ್ದು ಕೂಡಲೇ ಸಿಗಬೇಕು . ಸಿಗಲಿಲ್ಲ ಅಂದ್ರೆ ಕೆಟ್ಟ ಕಲ್ಪನೆಗಳು, ಕೆಟ್ಟ ಯೋಚನೆಗಳು ಇಡಿ ದೇಹವನ್ನೇ ಛಿದ್ರ ಮಾಡಿ ಹಾಕುತ್ತೆ.  ಆಗ್ತಾನೆ ಹೊಸದಾಗಿ ಮದುವೆ ಆಗಿತ್ತು. ಇಷ್ಟಪಟ್ಟ ಹುಡುಗ. ಜೊತೆಗೆ ಮಧುಚಂದ್ರಕ್ಕೆ ಹೋಗಿದ್ದು ಕುಲು-ಮನಾಲಿಗೆ. ಅಲ್ಲಿಯ ತಂಪು ತಂಪು ವಾತಾವರಣ, ಆ ಬೆಚ್ಚಗಿನ ಇನಿಯನ ಅಪ್ಪುಗೆ ಹಂಗೆ ನನ್ನನ್ನೇ ನಾ ಮರ್ತು ಬಿಟ್ಟಿದ್ದೆ. ಅಲ್ಲಿ ಕಳೆದ ಹತ್ತು ದಿನಗಳು ಪುನಃ ನನ್ನ ಜೀವನದಲ್ಲಿ ಸಿಗುತ್ತೋ ಇಲ್ವೋ ಗೊತ್ತಿಲ್ಲ.


 ಇಬ್ರೂ ಕೆಲಸಕ್ಕೆ ಹೋಗೋದ್ರಿಂದ ಆರು ತಿಂಗಳು ಮಕ್ಕಳು ಬೇಡ ಅನ್ನೋ ನಿರ್ಧಾರ ಮಾಡಿದ್ದೆವು. ಸರಿ, ದಿನಗಳು, ತಿಂಗಳುಗಳು ಹೇಳ್ದೆ ಕೇಳ್ದೆ ಓಡ್ತಾ ಇತ್ತು. ಆರು ತಿಂಗಳಿನ  ಮೇಲೆ ಇನ್ನು ಮೂರು  ತಿಂಗಳು ಕಳೆದಿತ್ತು. ಗರ್ಭಿಣಿಯಾಗುವ ಯಾವುದೇ ಸೂಚನೆ ಇರಲಿಲ್ಲ. ದಿನೇ ದಿನೇ ಇದೇ  ತಲೆನೋವು. ನಾನು ತಾಯಿಯಾಗ್ತೀನೋ ಇಲ್ವೋ ಅನ್ನೋ ಒಂದು ಸಂಶಯ. ಇದನ್ನು ಯೋಚಿಸಿಯೇ ನನ್ನ ಮನಸ್ಸಿನ ಆರೋಗ್ಯ ಹಾಳಾಗ್ತಾ ಇತ್ತು.
ಇದನ್ನೆಲ್ಲಾ ಗಮನಿಸ್ತಾ ಇದ್ದ ಹೇಮಂತ್ ನನಗೆ ಧೈರ್ಯ ಹೇಳ್ತಿದ್ದ . "ಮಧು ನಾವೇನು ಮುದುಕರಾಗಿದ್ದೀವಾ....? ಇನ್ನು ಮದುವೆಯಾಗಿ ಒಂಬತ್ತು  ತಿಂಗಳು ಆಗುತ್ತೆ ಅಷ್ಟೇ, ಯಾಕೆ ಅಷ್ಟೊಂದು ತಲೆ ಕೆಡಿಸಿ ಕೊಳ್ತಿ?" ಅವನು ಏನೇ ಹೇಳಿದ್ರು ನನ್ನ ಮನಸ್ಸು ಬೇಡದಿದ್ದೆ ಆಲೋಚನೆ ಮಾಡ್ತಾ ಇತ್ತು.
ಇಷ್ಟು ಸಾಲದು ಅಂತ ಒಂಥರಾ ಕಾಯಿಲೆ ಶುರು ಆಗಿತ್ತು. ನನ್ನ ಹೊಟ್ಟೆ ದೊಡ್ಡದಾಗ್ತಾ  ಇರೋ ಹಾಗೆ ಭ್ರಮೆ .  ನಾನು ಗರ್ಭಿಣಿ ಅನ್ನೋ ತರಹ ಫೀಲ್ ಆಗ್ತಾ ಇತ್ತು. ಇದನ್ನೇ ಹೇಮಂತ್ ಹತ್ರ ಹೇಳಿದ್ರೆ, "ನಿನ್ನ monthly periods stop ಆಗಿದಿಯಾ?" ಅಂತ ಕೇಳ್ದ.  ಅದಕ್ಕೆ "ಇಲ್ಲ ಅಂದೆ".....  "ಹಾಗಾದ್ರೆ ಹೇಗೆ ಅದು ಪ್ರೆಗ್ನೆಂಟ್ ಆಗೋಕ್ಕೆ ಸಾಧ್ಯ? ಹುಚ್ಚುಚ್ಚಾಗಿ ಕಲ್ಪನೆ ಮಾಡ್ಕೋಬೇಡ"...  ಅಂತ ನನಗೆ ಬೈದ. "ಇಲ್ಲ ನಿಜ ಕಣೋ, ನನಗೆ ಹಾಗೆ ಅನಿಸ್ತಾ ಇದೆ. ನಾನು ಎಲ್ಲ್ಲೋ ಓದಿದ್ದೀನಿ, ಕೆಲವ್ರಿಗೆ ಗರ್ಭಿಣಿ ಆದ್ರೂ ಪ್ರತಿ ತಿಂಗಳು ಮುಟ್ಟಾಗ್ತಾರೆ" ಅಂತ ಸಮಜಾಯಿಷಿ ನೀಡ್ದೆ . "ಎಲ್ಲೋ ಏನೋ ಆಗುತ್ತೆ ಅಂತ ನೀನು ಕಲ್ಪನೆ ಮಾಡೋದು  ಬೇಡ ..." ಅಂದ . "ಅದೆಲ್ಲಾ ಸುಳ್ಳು, ನಿನ್ನ ಭ್ರಮೆ ಅಷ್ಟೇ ಅಂತ...." ನನ್ನನ್ನು ಸುಮ್ಮನಾಗಿಸಕ್ಕೆ ಪ್ರಯತ್ನ ಪಟ್ಟ. ಅವನು ಜಪ್ಪಯ್ಯ ಅಂದ್ರು ನನ್ನ ಮಾತು ಒಪ್ಪಕ್ಕೆ ತಯಾರಿಲ್ಲ. ಆ ಸಮಯದಲ್ಲಿ ಅವನ ಈ ನಡವಳಿಕೆ  ನನಗೆ ಇನ್ನು ಕೆರಳಿಸ್ತು. "ಬೇಕಾದ್ರೆ ಡಾಕ್ಟರ್ ಹತ್ರ ಹೋಗೋಣ ಅವರೇ ಹೇಳಲಿ ಆಗ ನಾನು ಹೇಳಿದ್ದು ಸರಿನೋ ಅಲ್ವೋ ಅಂತ ಗೊತ್ತಾಗುತ್ತೆ...." ಅಂತ ಪಟ್ಟು ಹಿಡ್ದು ಅವನನ್ನ ಒಪ್ಪಿಸ್ದೆ. "ನಿನಗಂತೂ ಬುದ್ಧಿ ಇಲ್ಲ, ನನಗೂ  ಇಲ್ಲ ಅನ್ಕೊತಾರೆ ನೋಡದವರು ಅಂತ .... " ಗೊಣಗಿದ್ರು ಅವನನ್ನ ಆಸ್ಪತ್ರೆಗೆ ನನ್ನ ಜೊತೆ ಬರಕ್ಕೆ ಒಪ್ಪಿಸ್ಬೇಕಾದ್ರೆ ಉಸ್ಸಪ್ಪ ಅಂತ ಉಸಿರು ಬಿಟ್ಟಿದ್ದೆ. 

ಈ ಮನಸ್ಸು ಕುಸಿದಾಗ್ಲೇ ಈ ದೇವರು ಅನ್ನೋ ನಂಬಿಕೆ ಇನ್ನೂ ಜಾಸ್ತಿ ಆಗೋದು. ಮೊದಲೆಲ್ಲ ದೇವರು, ದೇವಸ್ಥಾನ ಅಂದರೆ ಮೈಲಿ ದೂರ ಇರ್ತಿದ್ದದ್ದು  ನಾನೇನಾ ಅನ್ನೋ ಅನುಮಾನ ಬೇರೆ ಪ್ರಾರಂಭ ಆಗಿತ್ತು. ಇದ್ದಬದ್ದ ದೇವರಿಗೆಲ್ಲ ಹರಕೆ ಹೊತ್ತು 'ದೇವರೇ ನಮಗೆ ಮಗು ಆಗೋ ಹಾಗೆ ಆಶೀರ್ವಾದ ಮಾಡಪ್ಪ' ಅಂತ ಬೇಡ್ಕೊತಾ ಇದ್ದೆ. ಈಗ ನಗು ಬರುತ್ತೆ. ಆದ್ರೆ ಆ ಸಮಯದಲ್ಲಿ ದಿಕ್ಕೇ ತೋಚ್ತಿರಲಿಲ್ಲ.

ಅವತ್ತು ಹೇಮಂತ್ ಮತ್ತು ನಾನು ಇಬ್ರೂ ಆಫೀಸಿಗೆ ರಜೆ ಹಾಕಿ ಆಸ್ಪತ್ರೆ ಹತ್ರ ಹೊರಟಿದ್ವಿ. ನಾನು ಅವನಿಗೆ ಹೇಳ್ತಾ ಇದ್ದೆ. "ಹೇಮಂತ್ ಬೈಕ್ ನಿಧಾನ ಓಡ್ಸೋ ..." ಅಂತ ಅವ್ನು ಪ್ರಶ್ನಾರ್ಥಕವಾಗಿ "ಯಾಕೆ ಅಂದ?" "ಅದು ರೋಡ್ ತುಂಬಾ ಹೊಂಡಗಳು, ಗರ್ಭಿಣಿಯರು ನಿಧಾನಕ್ಕೆ ಹೋಗ್ಬೇಕು ಇಂತಹ ಜಾಗದಲ್ಲಿ ಗೊತ್ತಿಲ್ವಾ ನಿನಗೆ ಅಂದೆ?"....  "ಕರ್ಮ" ಅಂತ ನನ್ನನ್ನು ಬೈತಾ ಇನ್ನು ಜೋರಾಗಿ ಗಾಡೀ ಓಡ್ಸಿ ಆಸ್ಪತ್ರೆ ಬಾಗಿಲಲ್ಲಿ ಗಾಡಿ ನಿಲ್ಲಿಸ್ದ.

ಅದೊಂದು ನಮ್ಮೂರಿನ ದೊಡ್ಡ ಖಾಸಗಿ ನರ್ಸಿಂಗ್ ಹೋಂ. ಮೊದಲನೇ ಮಹಡಿಯ ಕೊನೆಯಲ್ಲಿರುವುದೇ "ಸ್ತ್ರೀ ರೋಗ  ಮತ್ತು ಗರ್ಭಿಣಿಯರ ತಪಾಸಣಾ ರೂಮ್". ಅದಾಗಲೇ  ಸಮಯ ಬೆಳಗ್ಗಿನ 9 ಘಂಟೆ ಆಗಿತ್ತು . ಮಹಿಳೆಯರ ಸರದಿ ಸಾಲೇ ಆಗಲೇ ಕಾಯ್ತಾ ಕುಳಿತಿತ್ತು. ನಾನು ಕೆಳಗಿನ ರಿಸೆಪ್ಶನ್ನಲ್ಲಿ ನನ್ನ ಕಾರ್ಡ್ ನೋಂದಾಯಿಸಿ, ಅಲ್ಲಿಗೆ ತಲುಪಿದಾಗ ಆಗಲೇ ಖುರ್ಚಿಗಳು ಭರ್ತಿಯಾಗಿತ್ತು. ಮೂಲೆಯಲ್ಲಿ ಇದ್ದ ಸ್ವಲ್ಪ ಜಾಗದಲ್ಲಿ ಕಷ್ಟಪಟ್ಟು ಕುತ್ಕೊಂಡು ಸುತ್ತಲೂ ಒಮ್ಮೆ ನೋಡಿದ್ರೆ,. ಗರ್ಭಿಣಿಯರು, ಸಣ್ಣ ಮಕ್ಕಳು ವಾತಾವರಣವೆಲ್ಲಾ ಗುಜು ಗುಜು ಮಾತುಗಳ ಸದ್ದು.

ನನ್ನ ಪಕ್ಕದಲ್ಲಿ ಕೂತ  ಹೆಂಗಸು ಕುತೂಹಲದಿಂದ ನೋಡ್ದಾಗ ಒಂಥರಾ ಮುಜುಗರ. ಜೊತೆಗೆ ಆಕೆಯಿಂದ ಪ್ರಶ್ನೆಗಳು ಪ್ರಾರಂಭ ಆಗಿತ್ತು. ಎಷ್ಟು ತಿಂಗಳಮ್ಮ ? ಒಬ್ಬಳೇ ಬಂದಿದ್ದೀಯಾ? ಮೊದಲನೇ ಮಗುನಾ ನಿನಗೆ? ಇನ್ನು ಹಲವಾರು ಏನೇನೋ ಪ್ರಶ್ನೆಗಳು. ಅಷ್ಟರಲ್ಲಿ ಸಧ್ಯ ಎಂಟ್ರಿ ಮಾಡಿದ ನನ್ನ ಫೈಲ್ ಬಂದಿತ್ತು. ಸಿಸ್ಟರ್ ಗಟ್ಟಿಯಾಗಿ "ಮಧುರಾ ಬನ್ರಿ" ಅಂದಾಗ ಒಂದೇ ಉಸಿರಿಗೆ ಅಲ್ಲಿ ಓಡಿದೆ  . ಅಲ್ಲಿ ತೂಕ ನೋಡಿ ಪುನಃ ನನ್ನ ಸರದಿಗಾಗಿ ಕಾಯ್ತಾ ಕೂತೆ. ಅಷ್ಟರಲ್ಲಿ ಸುಮಾರು ಪ್ರಶ್ನೆಗಳು, ಗೊಂದಲಗಳು ನನ್ನ ಮನಸ್ಸಲ್ಲಿ ನಡೀತಾ ಇತ್ತು.

ಕೊನೆಗೂ ನನ್ನ ಹೆಸರು ಕರ್ದಾಗ ಡಾಕ್ಟರ್ ರೂಮ್ ಒಳಗೆ ಹೆದರ್ತಾ ಕಾಲಿಟ್ಟರೆ,  ಅಲ್ಲಿ ಇದ್ದ ಇನ್ನು ಮದುವೆಯಾಗದ ಅಸಿಸ್ಟೆಂಟ್ ಡಾಕ್ಟರ್ಗಳ ಗುಂಪು ನೋಡಿ ನನ್ನ ಬಾಯೆಲ್ಲಾ ಒಣಗಿತ್ತು. ಅದರಲ್ಲಿ ಒಬ್ಬಳು ನಗ್ತಾ, "ಕೂತ್ಕೊಳ್ಳಿ ಮೇಡಂ" ಅಂತ ಖುರ್ಚಿ ತೋರ್ಸಿದಾಗ ಪೇಚು ಮುಖ ಮಾಡ್ತಾ ಕೂತ್ಕೊಂಡೆ . "ಏನು ಸಮಸ್ಯೆ ಹೇಳಿ " ಅಂದಾಗ . ನಾನು ಮುಜುಗುರ ಪಡ್ತಾ , "ಅದು ನನಗೆ ಗರ್ಭಿಣಿ ಅನ್ನೋ ಅನುಮಾನ" ಅಂತ ಮೆಲ್ಲಕ್ಕೆ ಉಸುರಿದ್ದೆ.  ಅವಳು ಕೇಳಿದ್ದು ಪುನಃ ಅದೇ ಪ್ರಶ್ನೆ. "ಮಧುರ ಅವರೇ ನಿಮ್ಮ ಮುಟ್ಟಾದ ಕೊನೆಯ ತಾರೀಕೇನು?"
ನಾನು ಉತ್ತರ ಕೊಡಕ್ಕೆ ಮೇಲೆ ಕೆಳಗೆ ನೋಡ್ತಾ .." ಅದು ಅದು....  ಇದೇ ತಿಂಗಳು ಹತ್ತನೇ ತಾರೀಕು" ಅಂದೆ
ಆಕೆ ಅದನ್ನ ಫೈಲ್ನಲ್ಲಿ ಬರಕೊಂಡು, "ಹಾಗಾದ್ರೆ ಇನ್ನು ೧೫ ದಿನ ಆಗಿಲ್ಲ ಅದ್ಹೇಗೆ ಪ್ರೆಗ್ನೆಂಟ್ ಅಂತ ನಿರ್ಧಾರ ಮಾಡಿದ್ರಿ?" ಅಂದಾಗ ಆಕೆಯ ಪ್ರಶ್ನೆಗೆ ಏನು ಉತ್ತರ ಕೊಡ್ಬೇಕು ಅಂತಾನೆ ತೋಚಲಿಲ್ಲ. "ಅದು ನನಗೆ ಅನುಮಾನ ಅಷ್ಟೇ..." ಅಂದಾಗ, ನನ್ನನ್ನು ವಿಚಿತ್ರವಾಗಿ ನೋಡ್ತಾ , "ಸರಿ ಇರ್ಲಿ" ಅಂತ ಆಕೆ ನನ್ನನ್ನ treatment room ಗೆ  ಕರ್ಕೊಂಡು ಹೋಗಿ ತಪಾಸಣೆ ಮಾಡಿದ್ಲು. ನಾನು ಆಕೆಯ ಮುಖವನ್ನೇ ಆಸೆಯಿಂದ ನೋಡ್ತಾ ಇದ್ದೆ. ಏನಾದರೂ ಸಂತೋಷದ ವಿಷಯ ಹೇಳ್ತಾಳೋ ಅಂತ ... ಆಕೆಯ ಮುಖ ಭಾವದಲ್ಲಿ "ಎಲ್ಲಿಂದ ತೊಂದರೆ ಕೊಡೋಕ್ಕೆ ಬರ್ತಾರೋ ಅನ್ನೋಷ್ಟು ನಿರ್ಲಕ್ಷ್ಯ ಇತ್ತು. ನಾನು ಮನಸ್ಸಿನಲ್ಲೇ ಆಕೆನ್ನ ಬೈಕೋತಾ ಇದ್ದೆ. "ನಿನಗೇನಮ್ಮ ಗೊತ್ತಾಗುತ್ತೆ ನನ್ನಂಥವರ ಸಂಕಟ" ಅಂತ ..... 

ಆಕೆ ಫೈಲ್ನಲ್ಲಿ ಅದೇನೋ ಬರದು ಆಕೆಯ ಸೀನಿಯರ್ ಡಾಕ್ಟರ್ ಹತ್ರ ನನ್ನನ್ನ ಕರ್ಕೊಂಡು ಹೋದ್ಲು. ಅವರೊಬ್ಬ ಮಧ್ಯ  ವಯಸ್ಸಿನ ಮಹಿಳೆ ಮುಖದಲ್ಲಿ ಕಳೆ ತುಂಬಿ ತುಳಕ್ತಾ ಇತ್ತು. ಆಕೆಯನ್ನ ನೋಡಿದ್ರೆ ಅರ್ಧ ಕಾಯಿಲೆ ವಾಸಿ ಆಗ್ಬೇಕು, ಹಂಗೆ ಲಕ್ಷಣವಾಗಿದ್ರು.ಅವ್ರು ಒಂದು ಚಂದದ ನಗು ನಗ್ತಾ ತಮ್ಮ ಎದುರಿಗೆ ಇದ್ದ ಖುರ್ಚಿ ತೋರ್ಸಿ "ಕೂತ್ಕೋ" ಅಂದ್ರು . ಅಸಿಸ್ಟಂಟ್ ಡಾಕ್ಟರ್ ಕೊಟ್ಟ ಫೈಲನ ಒಮ್ಮೆ ಓದಿ ನನ್ನ ಮುಖ ನೋಡಿ, "ಯಾಕಮ್ಮ ಈ ರೀತಿ ಅನುಮಾನ ಬಂತು ನಿಮಗೆ ಅಂತ ಕೇಳಿದ್ರು"? ನಾನು ಇರೋ ವಿಷಯ ಎಲ್ಲಾ ಅವರ ಹತ್ತಿರ ಮನಸ್ಸು ಬಿಚ್ಚಿ ಹೇಳ್ದೆ . "ನಿನ್ನ ಜೊತೆ ಯಾರು ಬಂದಿದ್ದಾರೆ..." ಅಂತ ಅವ್ರು ಕೇಳ್ದಾಗ, ನನ್ನ ಗಂಡ 'ಹೇಮಂತ್' ಅಂತ ಉತ್ತರ ಕೊಟ್ಟೆ . ಡಾಕ್ಟ್ರು ಹೊರಗಡೆಯಿದ್ದ ಸಿಸ್ಟರ್ ಕರ್ದು "ಅಲ್ಲಿ ಮಿಸ್ಟರ್ ಹೇಮಂತ್ ಅಂತ ಇದ್ದಾರೆ ಅವರನ್ನ ಸ್ವಲ್ಪ ಕರೀರಿ ಅಂದ್ರು" . ನನಗಂತೂ ಆಗ ನಿಜಕ್ಕೂ ಸಂಕಟ, ಛೆ ... ನನ್ನಿಂದ ಇವನೂ  ಈಗ ಮುಜುಗರ ಪಡ್ಬೇಕು. ಸುಮ್ನೆ ಮನೇಲೆ ಇರಬೇಕಿತ್ತು. ನನ್ನ ಬುದ್ದಿಗಿಷ್ಟು ಅಂತ ಮನಸ್ಸಲ್ಲೇ ಬೈದುಕೊಂಡೆ ....

"ಯಾರ್ರೀ ಅದು ಹೇಮಂತ್, ಡಾಕ್ಟ್ರು ಕರೀತಾ ಇದಾರೆ, ಬೇಗ ಬನ್ರಿ ..... " ಸಿಸ್ಟರ್ ಗಟ್ಟಿಯಾಗಿ ಕೂಗಿದ್ದು ಕೇಳಿಸ್ತು 
 ತಡಬಡಿಸ್ತಾ ರೂಮಿನ ಒಳಗೆ ಕಾಲಿಟ್ಟ ಹೇಮಂತ್ .... 
ಅವನನ್ನು ನೋಡಿ ಡಾಕ್ಟ್ರು "ಕೂತ್ಕೊಳ್ರಿ.... " ಅಂತ ಎದುರಿನ ಖಾಲಿ ಇರುವ ನನ್ನ  ಪಕ್ಕದ ಖುರ್ಚಿ ತೋರ್ಸಿದ್ರು
"ಹೇಮಂತ್, ಮನೇಲಿ ಯಾರೆಲ್ಲಾ ಇದ್ದೀರ್ರೀ...???" ಡಾಕ್ಟ್ರು ಅವನಿಗೆ ಪ್ರಶ್ನೆ ಮಾಡಿದ್ರು.
"ನಾನು, ಹೆಂಡ್ತಿ ಮಾತ್ರ ಡಾಕ್ಟ್ರೆ, ನನ್ನ ಅಪ್ಪ, ಅಮ್ಮ ಊರಲ್ಲಿ ಇದ್ದಾರೆ."
"ಮನೇಲಿ ಮಗು ಬೇಕು ಅಂತ ಯಾರಾದ್ರೂ ಒತ್ತಡ ಹಾಕ್ತಾ ಇದ್ದಾರ ಹೇಮಂತ್?"
"ಹಂಗೇನಿಲ್ಲ ಡಾಕ್ಟ್ರೆ, ಯಾರು ಆ ವಿಷಯಾನೇ ಮಾತಾಡೋದಿಲ್ಲ, ಇವಳೇ ಸುಮ್ನೆ ಇಲ್ಲದ್ದನ್ನ ಕಲ್ಪಿಸಿಕೊಂಡು  ಮನಸ್ಸು ಹಾಳು ಮಾಡ್ಕೋತಾ ಇದ್ದಾಳೆ"
"ಸರಿ ಇರ್ಲಿ ಬಿಡಿ, ಇನ್ನು ಈಕೆ ಗರ್ಭ ಧರಿಸಿಲ್ಲ. ನಾನು ಕೆಲವು ಟೆಸ್ಟ್ ಬರದು ಕೊಡ್ತೇನೆ. ಕೂಡಲೆ ಈಗಲೇ ಮಾಡ್ಸಿ . ಮಧ್ಯಾಹ್ನ ರಿಪೋರ್ಟ್ ಬರತ್ತೆ. ಅದನ್ನು ನೋಡಿ ಮುಂದೇನು ಅಂತ ಹೇಳ್ತೀನಿ ಸರಿನಾ...."
"ಓಕೆ ಥ್ಯಾಂಕ್ಯೂ ಡಾಕ್ಟರ್ " ಅಂತ ಅವನು ತಲೆ ಅಲ್ಲಾಡಿಸಿ ನನ್ನನ್ನು ಕರ್ಕೊಂಡು ಹೊರಬಂದ
ಅವರು ಬರೆದುಕೊಟ್ಟ ಎಲ್ಲಾ ಟೆಸ್ಟ್ ಮಾಡ್ಸಿ ಮುಗಿಬೇಕಾದ್ರೆ ಮಧ್ಯಾಹ್ನ 12 ಘಂಟೆ ಹತ್ತಿರ ಬಂದಿತ್ತು
ಅಲ್ಲಿಯೇ ಕ್ಯಾಂಟೀನ್ ನಲ್ಲಿ ಊಟ ಮಾಡಿ ಹೊರಗೆ ಗಾರ್ಡನ್ ಕೆಳಗಿನ ಮರದ ಕೆಳಗೆ ನಾನು ಹೇಮಂತ್ ಕೂತ್ಕೊಂಡ್ವಿ ...
"ಇನ್ನು ಆ ರಿಪೋರ್ಟ್ ಏನು ಬರುತ್ತೊ. ಅದರಲ್ಲಿ ಏನಾದ್ರೂ ತೊಂದರೆ ಇದೆ ಅಂತ ಆದ್ರೆ ಏನು ಮಾಡೋದು ಹೇಮಂತ್"
"ಹಾಗೆಲ್ಲ ಏನು ಆಗೋಲ್ಲ ಮಧು, ಧೈರ್ಯವಾಗಿರು. ಏನೇ ಆದ್ರೂ ಈಗ ಒಳ್ಳೆಯ ವೈದ್ಯಕೀಯ ಸೌಲಭ್ಯ ಇದೆ. ಯೋಚನೆ ಮಾಡ್ಬೇಡ "
"ಅಲ್ಲ ಕಣೋ ಹೇಮಂತ್, ನಾನು ತೆಗೊಳ್ತಾ ಇದ್ದ contraceptive pillsನಿಂದ ಏನಾದ್ರೂ ಸೈಡ್ ಎಫೆಕ್ಟ್ ಆಗಿದ್ರೆ .... "
"ಹಾಗೆಲ್ಲ ಎನೂ ಆಗಿರಲ್ಲ ಮಧು, ಸುಮ್ನೆ ತಲೆ ಕೆಡ್ಸ್ಕೊಬೇಡ . ಗೊತ್ತಾಯ್ತಾ"
"ನಮಗೆ ಮಕ್ಕಳು ಆಗತ್ತೆ ಅಲ್ವೇನೊ ಹೇಮಂತ್, ಇಲ್ಲ ಅಂದ್ರೆ ನೀನು ಇನ್ನೊಂದು ಮದುವೆ ಮಾಡ್ಕೊಳೋ ಪ್ಲೀಸ್, ನನ್ನಿಂದ ನಿಂಗೆ ಅನ್ಯಾಯ ಆಗ್ಬಾರ್ದು. "
"ಈಗ ಸುಮ್ನೆ ಬಾಯಿ ಮುಚ್ತೀಯಾ ಅಥವಾ ಹಿಂಗೆ ಕಿರಿ ಕಿರಿ ಮಾಡ್ತಾ ಇರ್ತೀಯಾ...??? ಒಂದು ಮದುವೆನೇ ಸಾಕಾಗಿದೆ, ಅದರ ಮೇಲೆ ಇನ್ನೊಂದು ಮದುವೆಯಂತೆ ... ಏನಂಥ ತಿಳ್ದಿದ್ದೀಯಾ ನನ್ನನ್ನ... ನೀನು ಸ್ವಲ್ಪ ಈ ಬಂಡಲ್ ಸಿನೆಮಾ, ಸೀರಿಯಲ್ ನೋಡೋದು ಕಡಿಮೆ ಮಾಡು. ಅರ್ಥ ಆಯ್ತಾ. " ಅಂತ ಸಿಟ್ಟಿನಿಂದ ದಬಾಯಿಸಿದ್ದ.
"ಯಾಕೋ ಇಷ್ಟು ರೇಗ್ತೀಯಾ . ಇರೋ ವಿಷಯ ಹೇಳಿದ್ರೆ ..... !!!!
"ಚುಪ್ .... ಬಿಲ್ಕುಲ್ ಚುಪ್ ...ಇನ್ನೊಂದು ಮಾತಾಡಿದ್ರೆ ಇಲ್ಲೇ ಬಿಟ್ಟು ಹೋಗ್ತೀನಿ ಅಷ್ಟೇ ...."
"ಏ ಸಾರಿ ಕಣೋ, ನಿನ್ನನ್ನ ಬಿಟ್ಟು ಇರಕ್ಕೆ ನಂಗೂ ಆಗಲ್ಲ ಕಣೋ . ಏನೋ ಟೆನ್ಶನ್ ನಲ್ಲಿ ಮಾತಾಡ್ದೆ . "  ಅವನ ಸಿಟ್ಟು ಮುಖ ನೋಡಿ ಶಾಂತವಾಗಿ ಕೂತ್ಕೊಂಡೆ. 

ಸಂಜೆ ನಾಲ್ಕು ಘಂಟೆ ನಂತರ ರಿಪೋರ್ಟ್ ಬಂದಿತ್ತು.  ಹೆದರುತ್ತಲೇ ಡಾಕ್ಟರ್ ರೂಮಿನ ಒಳಗೆ ಕಾಲಿಡುತ್ತಾ ಇದ್ದಂತೆ ಆಕೆ ಮಂದಸ್ಮಿತೆಯಾಗಿ ನಮ್ಮನ್ನ ಒಳಗೆ ಕರ್ದು, "ಮಧುರ, ಹೇಮಂತ್ ಹೆದರೋ ಅಂಥದ್ದು ಏನೂ ಇಲ್ಲ. ರಿಪೋರ್ಟ್ ನಾರ್ಮಲ್ ಇದೆ. ಕೆಲವೊಮ್ಮೆ ಸ್ವಲ್ಪ ಜನರಿಗೆ  ಗರ್ಭ ಧರಿಸಲಿಕ್ಕೆ ತಡ ಆಗುತ್ತೆ.  ಗಾಭರಿ ಬೇಡ, ಮನಸ್ಸು ಪ್ರಶಾಂತವಾಗಿ ಇಟ್ಕೊ ಮಧುರ ಎಲ್ಲಾ ಸರಿಹೊಗುತ್ತೆ". ಅಂತ ಧೈರ್ಯ ತುಂಬಿದ್ರು ನಂಗೆ.  ನಾನು ಅವರ ಚೇಂಬರ್ನಲ್ಲಿ ಕುಣಿಯೋದು ಒಂದೇ ಬಾಕಿ. ಅಷ್ಟು ಮನಸ್ಸು ನಿರಾಳವಾಗಿತ್ತು. 
"ನೋಡಮ್ಮ ಮುಂದಿನ ಸಲ ಇಂಥಹ ಮುಜುಗರ ಬೇಡ. ನಾನೊಂದು strip ಹೆಸರು ಬರೆದು ಕೊಡ್ತೀನಿ. ಮೆಡಿಕಲ್ ಶಾಪ್ನಲ್ಲಿ ಸಿಗುತ್ತೆ. ನಿಮ್ಗೆ  ೨-೩ ತಿಂಗಳು ಮುಟ್ಟು  ನಿಂತು ಪ್ರೆಗ್ನೆಂಟ್ ಅನ್ನೋ ಅನುಮಾನ ಬಂದಾಗ ಈ pregnency test kitನಲ್ಲಿ ಮನೇಲೆ ಮೊದಲು ಒಮ್ಮೆ urine test  ಮಾಡಿ ಇಲ್ಲಿಗೆ ಬನ್ನಿ..." ಅಂತ prescription ಬರದು ಕೊಟ್ರು.
ಅವರಿಗೆ ಧನ್ಯವಾದ ಹೇಳ್ತಾ  ಕಾರಿಡಾರಲ್ಲಿ ಹೆಜ್ಜೆ ಹಾಕಿದ್ವಿ. 

"ಅಲ್ಲ ಕಣೋ ಹೇಮಂತ್, ಮದುವೆ ಆದಮೇಲೆ ಏನೇನೋ ಎಲ್ಲಾ ಮೆಡಿಕಲ್ ಶಾಪ್ನಿಂದ ತರ್ತಿದ್ದೆ, ಇದು ಗೊತ್ತಿರ್ಲಿಲ್ವೇನೋ ನಿಂಗೆ?"
"ಅಯ್ಯೋ ಮೆತ್ತಗೆ ಮಾತಾಡೇ, ಅಕ್ಕಪಕ್ಕದವ್ರು ಕೇಳಿಸಿಕೊಂಡರೆ ನಕ್ಕಾರು, ಏನು ಪೋಲಿಗಳು ಇವ್ರು ಅಂತ..."
"ನಗಲಿ ಬಿಡೋ, ನಾವೇನು ಕದ್ದು ಮುಚ್ಚಿ ಓಡಾಡ್ತಾ ಇದ್ದೀವಾ... ಗಂಡ ಹೆಂಡ್ತಿ ತಾನೇ ...ಯಾರೂ ನಗಲ್ಲ ಬಿಡು..."
"ನಿಜಕ್ಕೂ ನನಗೆ ಇದು ಗೊತ್ತಿರಲಿಲ್ಲ ಕಣೆ, ನಾನೇನು ೪-೫ ಮದುವೆ ಆಗಿದೀನಾ, ಅದು ಹೆಂಗಸರ ವಿಚಾರ, ಇದೆಲ್ಲ ಗೊತ್ತಿರಕ್ಕೆ? ನಿಂಗೆ ಗೊತ್ತಿರಲಿಲ್ವೆನೆ ಇದು?"
"ನಂಗೂ ಇದು ಮೊದಲ್ನೇ ಮದುವೆ ಕಣೋ, ನಂಗೆ ಹೇಗೆ ಗೊತ್ತಿರುತ್ತೆ ಹೇಳು? ಇಬ್ಬರು ವಾದ ಮಾಡ್ತಾ ಬೈಕ್ ಹತ್ತಿರ ಬಂದ್ವಿ .
"ಈಗ್ಲಾದ್ರೂ ಬೈಕ್ ಫಾಸ್ಟ್ ಆಗಿ ಓಡಿಸ್ಲಾ ಮಧು..." ಅಂತ ಹೇಮಂತ್ ನನ್ನನ್ನು ಕೀಟಲೆ ಮಾಡ್ದಾಗ, "ಹು" ಅಂತ ಉತ್ತರವನ್ನಷ್ಟೇ ಕೊಟ್ಟು ನಗೆ ಚೆಲ್ಲಿದೆ. 


                                                                14-02-2012

ಹಾಗೆ ಇನ್ನೆರಡು ತಿಂಗಳು ಕಳೆದಿತ್ತು. ಒಂದು ಮಧ್ಯಾಹ್ನ ಹೇಮಂತ್ ಗೆ ಫೋನ್ ಮಾಡ್ದೆ.
"ಏಯ್ ಹೇಮಂತ್,  ಡಾಕ್ಟ್ರು ಬರ್ದುಕೊಟ್ಟ prescription ಎಲ್ಲಿ ಇಟ್ಟಿದ್ದೀಯೋ ?"
"ನನ್ನ ಪರ್ಸನಲ್ಲೇ ಇದೆ ಯಾಕೆ ಮಧು?"
"ಅದು, ಮತ್ತೆ ಸಂಜೆ ಬರುವಾಗ ನೆನಪಿಂದ ಮೆಡಿಕಲ್ ಶಾಪ್ನಿಂದ ತೆಗೊಂಡು ಬಾರೊ.... ಪ್ಲೀಸ್ ..."
"ಏನೇ, ಏನಾದ್ರೂ ಗುಡ್ ನ್ಯೂಸಾ ... ?"
"ಗೊತ್ತಿಲ್ಲ, ನಾಳೆ ಹೇಳ್ತೀನಿ, ಮರೀದೇ ತೆಗೊಂಡುಬಾ."
"ಈ ಬಾರಿನೂ ಅನುಮಾನಾನಾ ಅಥ್ವಾ ನಿಜಾನಾ" ಅಂತ ಅವನು ಕೇಳ್ದಾಗ,
"ನಾನು ಪ್ರತಿ ತಿಂಗಳು ನನ್ನ ಪಿರಿಯಡ್ ದಿನಾನ್ನ ಕ್ಯಾಲೆಂಡರ್ನಲ್ಲಿ ಬರದು ಇಡ್ತೀನಿ ಗೊತ್ತಾಯ್ತಾ...." ಅಂದೆ
ಅದಕ್ಕೆ ಅವನು, "ಈ ವರ್ಷದ್ದೇ ಕ್ಯಾಲೆಂಡರ್ ಅಲ್ವಾ," ಅಂತ ನನ್ನ ರೇಗಿಸ್ದಾಗ  "ಮನೆಗೆ ಬಾ ಆಮೇಲೆ ನಿನ್ನ ವಿಚಾರಿಸಿಕೊಳ್ತಿನಿ ಅಂತ" ಫೋನ್ ನಲ್ಲಿ  ದಬಾಯಿಸಿದ್ದೆ.
ಮರುದಿನ ಆ ಯೂರಿನ್ ಪ್ರೆಗ್ನೆನ್ಸಿ ಟೆಸ್ಟ್ ನಲ್ಲಿ "ಪಾಸಿಟಿವ್ ' ಅಂತ ತೋರಿಸ್ದಾಗ, ಹಂಗೆ ಹೇಮಂತ್ ಜೊತೆ ಆ ದಿನವಿಡೀ ಸಂತಸ ಪಟ್ಟಿದ್ದೆ .

ಮತ್ತೆ ದಿನಗಳು, ತಿಂಗಳುಗಳು ಓಡಲಿಕ್ಕೆ ಪ್ರಾರಂಭ ಆಗಿತ್ತು. ನಮ್ಮಿಬ್ಬರ ತಂದೆ -ತಾಯಿಯರು ಅಜ್ಜ-ಅಜ್ಜಿ ಆಗುವ ಕನಸು ಕಾಣ್ತಾ ಇದ್ರು. ಮನೆಯಲ್ಲಿ ಸಂಭ್ರಮ.  ಅದರ ಮಧ್ಯೆ morning sickness ಬೇರೆ. ಅದು ತಿಂದರೆ ವಾಂತಿ, ಇದು ತಿಂದರೆ ವಾಂತಿ. ಮೊದಲ ಕೆಲವು ತಿಂಗಳು ಈ ಸಮಸ್ಯೆಯಲ್ಲೇ ಕಳೆದು ಹೊಯ್ತು. ನಂತರ ಬಯಕೆ ಶುರು ಆಯ್ತು. ಏನೇನೋ ಅಪರೂಪದ ತಿಂಡಿ ತಿನಿಸುಗಳನ್ನ ತಿನ್ನುವ ಆಸೆ. ಜೊತೆಗೆ ಪ್ರತಿದಿನ ಕಬ್ಬಿಣದ ಮಾತ್ರೆ ಮತ್ತು folic acid ಮಾತ್ರೆಗಳ ಸೇವನೆ . ಸುಮಾರು ಆರು ತಿಂಳಾದಾಗ ಹೊಟ್ಟೆಯಲ್ಲಿ ನಿಧಾನವಾಗಿ ಮಿಸುಕಾಡುವ ಮಗು. ಅದರ ಅನುಭವ ಮಾತ್ರ ವರ್ಣಿಸಲಿಕ್ಕೆ ಸಾಧ್ಯ ಇಲ್ಲ. 
ದಿನಾ ರಾತ್ರಿ,

"ಹೇಮಂತ್ ನೋಡೋ, ಮಗು ಹೆಂಗೆ ಕಾಲಿಂದ ಒದಿಯುತ್ತೆ. ಅಬ್ಬಾ ತುಂಬಾ ನೋವು ಕಣೋ..."
"ಬಹುಶಃ ನಿನ್ನ ತರಹಾನೇ ತರಲೆ ಇರ್ಬೇಕು ಮಧು. ಇನ್ನು ಇಬ್ಬಿಬ್ರನ್ನು ನಾನು ಹೇಗೆ ಸಂಭಾಳಿಸೋದೋ..... "
"ಹೇಮಂತ್, ರಾತ್ರಿಯೆಲ್ಲಾ ನಿದ್ದೆ ಮಾಡಕ್ಕೆ ಬಿಡಲ್ಲ ಗೊತ್ತಾ.....".
"ಅನುಭವಿಸು ಮಧು, ಇಷ್ಟು ದಿನ ನೀನು ನನಗೆ ಮಾಡ್ತಾ ಇದ್ದ ಹಿಂಸೆ ಎಲ್ಲಾ ಈಗ ನನ್ನ ಮಗು ನಿಂಗೆ ಮಾಡುತ್ತೆ."ಅಂತ ಅವನ ಒಗ್ಗರಣೆ ಬೇರೆ.


ರಾತ್ರಿಯೆಲ್ಲ ಜಾಗರಣೆ. ಬೆಳಗಿನ ಜಾವ ಹತ್ತುವ ನಿದ್ದೆ. ಜೊತೆಗೆ ಕೆಲಸಕ್ಕೆ ಹೋಗುವ ಗಡಿಬಿಡಿ. ಪಾಪ ಹೇಮಂತ್ ಸಹಾ ನನ್ನ ಜೊತೆ ಅಡಿಗೆ ಕೆಲಸಕ್ಕೆ ಸಹಾಯ ಮಾಡಿ ನನ್ನನ್ನ ಆಫೀಸಿಗೆ ಡ್ರಾಪ್ ಕೊಡ್ತಾ ಇದ್ದ. ಏಳನೇ ತಿಂಗಳು ತುಂಬ್ತಾ ಇದ್ದ ಹಾಗೆ 'ಸೀಮಂತದ ಶಾಸ್ತ್ರ' ಅದೂ ಸಾಂಗವಾಗಿ ನೆರವೇರಿದ ಮೇಲೆ ಆಫೀಸಿಗೆ ಲೀವ್ ಹಾಕಿ  ಅಮ್ಮನ ಮನೆಗೆ ಪ್ರಯಾಣ.  ಅಲ್ಲಿ  ಅಮ್ಮನ ಕೈಯಲ್ಲಿ ಮಾಡಿದ ನನ್ನ  ಇಷ್ಟದ ಅಡಿಗೆ, ತಿಂಡಿಯ ಭೂರಿ ಭೋಜನ .... ದಿನಗಳು ತುಂಬ್ತಾ ಇತ್ತು. ಡೆಲಿವರಿ ಡೇಟ್ ಹತ್ತಿರ ಬರ್ತಾ ಇದ್ದ ಹಾಗೆ ಅದೇನೋ ಆತಂಕ ಶುರು ಆಗಿತ್ತು. ಆಸ್ಪತ್ರೆ ಮನೆಯಿಂದ ತುಂಬಾ ದೂರ ಇರೋದರಿಂದ ಹೆರಿಗೆಗೆ ಕೊಟ್ಟ ಹಿಂದಿನ ದಿನವೇ ಅಡ್ಮಿಟ್ ಆಗಿದ್ದೆ. ಮರುದಿನ ತಪಾಸಣೆ ಮಾಡಿದ ಡಾಕ್ಟರ್ ನೋವು ಬರಲು ಇಂಜಕ್ಷನ್ ಕೊಟ್ಟಿದ್ರು. ಆದ್ರೆ ಕೇವಲ ಬೆನ್ನು ಮತ್ತು ಸೊಂಟ ನೋವು ಬರುತ್ತಾ ಇತ್ತೇ ವಿನಃ ಹೊಟ್ಟೆನೋವು ಬರುವ ಲಕ್ಷಣ ಕಾಣ್ತಾ ಇರಲಿಲ್ಲ. ಹಲ್ಲು ಕಚ್ಚಿ ಆ ನೋವನ್ನು ಅನುಭವಿಸ್ತಾ ಇದ್ದೆ. 

"ನನಗೆ ಇಷ್ಟೆಲ್ಲಾ ನೋವು ಇರುತ್ತೆ ಅಂತಾ ಗೊತ್ತೇ ಇರ್ಲಿಲ್ಲ ಕಣೋ ಹೇಮಂತ್ ...."
"ಇನ್ನೊಂದು ಸ್ವಲ್ಪ ಹೊತ್ತು ಮಧು ತಡ್ಕೋ  , ಮಗು ಕೈಗೆ ಬಂದ ಮೇಲೆ ನೋವೆಲ್ಲಾ ಮಂಗಮಾಯ ಕಣೆ" 
"ಹೌದು ಕಣೋ, ಹೇಳೋಕ್ಕೆ ಅದೆಷ್ಟು ಸುಲಭ ..... ಛೆ ..ಈ ಹೆರಿಗೆ ನೋವೆಲ್ಲಾ ನಾವು ಹೆಣ್ಣು ಮಕ್ಕಳೇ ಯಾಕೆ ಅನುಭವಿಸ್ಬೇಕೋ..." ಅಂತ ಆ ನೋವಿನಲ್ಲೂ ಗೊಣಗ್ತಾ ಇದ್ದೆ...  

ಕೊನೆಗೂ ಮಗು ತಿರುಗದೇ ನಾರ್ಮಲ್ ಹೆರಿಗೆ ಆಗುವ ಲಕ್ಷಣ ಕಾಣ್ದೆ ಇದ್ದಾಗ, ಡಾಕ್ಟರ್  ಇನ್ನು ಶಸ್ತ್ರಕ್ರಿಯೆ ಮಾಡ್ಬೇಕು ಅನ್ನೋ ನಿರ್ಧಾರ ತೆಗೊಂಡ್ರು . ಆಗಲೇ ಸಮಯ ಮಧ್ಯಾಹ್ನ ನಾಲ್ಕು ಘಂಟೆ ಆಗ್ತಾ ಇತ್ತು. ನನ್ನನ್ನ "ಓಟಿಗೆ" ಕರ್ಕೊಂಡು ಹೋಗ್ತಾ ಇದ್ರೆ ಅಮ್ಮ, ಅಪ್ಪ, ಹೇಮಂತ್,ತಮ್ಮ  ಎಲ್ಲರ ಮುಖದಲ್ಲೂ ಆತಂಕದ ಛಾಯೆ. "ಧೈರ್ಯವಾಗಿರು ಎಂಬ ಸಣ್ಣ ಭರವಸೆ". ಮುಂದಿನ ಕೆಲಸಗಳು ಸುಸೂತ್ರವಾಗಿ ನಡೆದಿತ್ತು. ನನ್ನ ಕಣ್ಣಿಗೆ ಬಟ್ಟೆ ಕಟ್ಟಿ, ಬೆನ್ನಿಗೆ ಅನಸ್ತೇಶಿಯಾ ಇಂಜಕ್ಷನ್ ಕೊಟ್ಟು ದೇಹ ಮರಗಟ್ಟಿದ ಮೇಲೆ ತಮ್ಮ ಕೈಚಳಕ ತೋರಿಸಿ, ಡಾಕ್ಟರ್ ನಿಮಿಷಗಳಲ್ಲಿ ಮುದ್ದು ಕಂದನನ್ನು ಎತ್ತಿ ಹೊರತೆಗೆದಿದ್ದರು. ಇದೆಲ್ಲಾ ಕಣ್ಣಿಗೆ ಬಟ್ಟೆ ಕಟ್ಟಿದ ಒಂದು ಮೂಲೆಯಿಂದ  ಕಾಣ್ತಾ ಇತ್ತು ನಂಗೆ. ಮಗುವಿನ ಅಳು, ಜೊತೆಗೆ ರಕ್ತಸಿಕ್ತವಾಗಿದ್ದ ಕೂಸನ್ನು ಅಲ್ಲೇ ಇದ್ದ ನೀರಿನ ಟಬ್ನಲ್ಲಿ ಕ್ಲೀನ್ ಮಾಡಿ ಬಟ್ಟೆಯಿಂದ ಸುತ್ತಿ ಹೊರಗೆ ಕರೆದುಕೊಂಡು ಹೋದಾಗ ನನ್ನ ಜನ್ಮ ಸಾರ್ಥಕ ಅನ್ನೋ ನಿಟ್ಟುಸಿರು. ಮುಂದೆ ಕತ್ತರಿಸಿದ ನನ್ನ ಹೊಟ್ಟೆಗೆ ಹೊಲಿಗೆ ಹಾಕಿ ನನ್ನನ್ನ ವಾರ್ಡ್ಗೆ ಶಿಫ್ಟ್ ಮಾಡೋವಾಗ ನನ್ನ ಸುತ್ತ ನೆರೆದ ಮನೆಯವರೆಲ್ಲರ ಕಣ್ಣಲ್ಲಿ ಹೊಳಪು. 


ಹೀಗೆ ಮಾತಾಡ್ತಾ ನನ್ನ ಮುಖದಲ್ಲಿ ಇದ್ದ ಸಂತೋಷ ಕಂಡು ಅಮ್ಮ, "ಮಧು ನಿನಗೇನಾದ್ರೂ ನಾರ್ಮಲ್ ಹೆರಿಗೆ ಆಗಿದ್ರೆ ಇಷ್ಟೊಂದು ಖುಷಿ ಇರ್ತಾ ಇರ್ಲಿಲ್ಲ. ಇನ್ನು ಅದೆಷ್ಟು ನೋವು ಸಹಿಸ್ಬೇಕಿತ್ತು ಗೊತ್ತ..." ಅಂದಾಗ, "ಇರ್ಲಿ ಬಿಡಮ್ಮ ಮುಂದಿನ ಸಾರಿ ನಾರ್ಮಲ್ ಡೆಲಿವರೀನೇ ಗ್ಯಾರಂಟಿ ಆಗೋದು ನೋಡು ಬೇಕಾದ್ರೆ..." ಅಂತ ಅಮ್ಮನಿಗೆ ಕಣ್ಣು ಹೊಡ್ಡಿದ್ದೆ. ಅದಕ್ಕೆ ಅವರು, " ಮೊದಲು ಈ ಕೂಸನ್ನ ದೊಡ್ಡ ಮಾಡು ಆಮೇಲೆ ಅದರ ಬಗ್ಗೆ ಯೋಚನೆ ಮಾಡು, ಒಂದಲ್ಲ ಇನ್ನೆರಡು ಮಕ್ಕಳಾಗ್ಲಿ ನನಗೆ ಸಂತೋಷ"  ಅಂತ ನಕ್ಕಿದ್ದರು. ಅವತ್ತು ನನ್ನ ಹೆರಿಗೆಯಾಗಿ 12 ನೇ ದಿನ. ಮಗುವಿಗೆ ನಾಮಕರಣ, ತೊಟ್ಟಿಲಿಗೆ ಹಾಕುವ ಸಂಭ್ರಮ.  ಅಲಂಕರಿಸಿದ ತೊಟ್ಟಿಲು. ಮನೆ ತುಂಬಾ ನೆಂಟರು . ಮಗುವಿಗೆ ಏನು ಹೆಸರಿಡೋದು ಎಂದು ನಾನು ಮೊದಲೇ ನಿರ್ಧಾರ ಮಾಡಿದ್ದೆ. ಗಂಡು ಮಗು  ಆದ್ರೆ 'ಅನುಪಮ್' ಹೆಣ್ಣಾದರೆ  'ಅನುಪಮ'.  ಇದಕ್ಕೆ ಕಾರಣವೂ ಇತ್ತು. ನನ್ನ ಪ್ರೀತಿಯ ಸ್ನೇಹಿತೆಯ ಹೆಸರದು. ಸುಮಾರು ೩-೪ ವರ್ಷ ಒಟ್ಟಿಗೆ ಓದಿದ ಬಾಲ್ಯ ಗೆಳತಿ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ ಆದರು ಅವಳ ನೆನಪಿಗೆ ಆ ಹೆಸರು ಇಡಬೇಕು  ಅಂತ ನನ್ನ ಇಚ್ಚೆ. ಇದಕ್ಕೆ ಸಂಪೂರ್ಣ ಒಪ್ಪಿಗೆ ಹೇಮಂತ್ನದು. ಬೆಳಿಗ್ಗೆಯೇ ಮಾವನ ತೊಡೆ ಮೇಲೆ ಮಲಗಿಸಿ ಪುಟ್ಟಿಗೆ ಕಿವಿ ಚುಚ್ಚುವ ಸಡಗರ. ಪಾಪದ್ದು ಎಳೆ ಕಂದ ಆ ಚುಚ್ಚುವ  ನೋವಿಗೆ  ಮುಖವೆಲ್ಲ ಕೆಂಪು ಕೆಂಪು . ಜೊತೆಗೆ ಅಳು. ಇದನ್ನೆಲಾ ಕೇಳಿಸಿಕೊಂಡ ನನಗೆ ಸಂಕಟ. ಇದಕ್ಕೆ ಅನ್ನೋದೋ ಅನ್ಸುತ್ತೆ ತಾಯಿಕರಳು. ಮಗುವಿಗೆ ಸ್ವಲ್ಪ ನೋವಾದರೂ ತಡೆಯಲಾಗದ ದುಃಖ, ಕಣ್ಣು ತುಂಬಿ ಬರ್ತಾ ಇತ್ತು. ಬಹುಶಃ 'ಅಮ್ಮ' ಅನ್ನೋ ಶಬ್ದದ ಅರ್ಥ ಅವತ್ತೇ ನನಗೆ ಗೊತ್ತಾಗಿದ್ದು.  ಮಧ್ಯಾಹ್ನ ಮಗುವಿಗೆ ತೊಟ್ಟಿಲಿಗೆ ಹಾಕಿ, ಅದರ ಕಿವಿಯಲ್ಲಿ ಅಜ್ಜಿ "ಅನುಪಮ"  ಅನ್ನೋ  ಹೆಸರಿಟ್ಟಿದ್ರು. ಅವತ್ತಿನ ಕಾರ್ಯಕ್ರಮ ಚೆನ್ನಾಗಿ ಮುಗಿದಿತ್ತು. 


ಆಶ್ಚರ್ಯ ಅಂದ್ರೆ ನನ್ನ  ತಮ್ಮ ಅಮ್ಮನಿಗೆ ಅಡಿಗೆ , ಕ್ಲೀನಿಂಗ್ ನಲ್ಲಿ ಮಾತ್ರ ಅಲ್ಲ , ಕಾಲೇಜ್ ಮುಗಿಸಿ ಮನೆಗೆ ಬಂದ ಮೇಲೆ, ಮಗು ನೋಡ್ಕೊಳ್ಳೋದ್ರಲ್ಲೂ ಎತ್ತಿದ ಕೈ ಅಂತ ಗೊತ್ತಾಯ್ತು. ನಾನು ಅವನಿಗೆ ಕೀಟಲೆ ಮಾಡ್ತಾ ಇದ್ದೆ. "ಲೋ ಹುಡ್ಗಾ, ಇನ್ನೇನು ನಿನ್ನ ಹೆಂಡ್ತಿಗೆ ಆರಾಮೋ ಆರಾಮೋ . ಅವಳು ಮದುವೆ ಆದ ಮೇಲೆ  ಕಾಲು ಮೇಲೆ ಕಾಲು ಹಾಕಿಕೊಂಡು ಕೂತ್ರೆ ಆಯ್ತು. ಅದೇನು ಅದೃಷ್ಟ ಮಾಡಿದ್ದಾಳೆ ಕಣೋ , ಅವಳು ನಿನ್ನ ಮದುವೆಯಾದ್ರೆ ಎಷ್ಟು ಸುಖಿ" ಅಂತ ರೇಗಿಸ್ತಾ ಇರ್ತೆನೆ. ನನಗಿಂತ ಚೆನ್ನಾಗಿ ಮಗುನ ಅವನು ನೋಡ್ಕೋತಾನೆ, ಈಗ ಮಾವ ಅನ್ನೋ ಪಟ್ಟ ಬೇರೆ . ಖುಷಿಯಾಗುತ್ತೆ ಅವನನ್ನು ನೋಡಿದ್ರೆ. ದೂರದಲ್ಲಿದ್ದಾಗ ತುಂಬಾ ಮಿಸ್ ಮಾಡ್ತಾ ಇದ್ದೆ. ಈಗ ಬಾಣಂತನಕ್ಕೆ ತವರಿಗೆ ಬಂದು ಅವನ ಜೊತೆ ಸಮಯ ಕಳೆಯೋದು its wonderful. ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಇಬ್ರೂ ನಗಾಡೋದು, ಕಾಲು ಎಳೆಯೋದು like it like it ... :-)
ಇವತ್ತು ಅನು ಪುಟ್ಟಂಗೆ ಒಂದನೇ ತಿಂಗಳ ಇಂಜಕ್ಷನ್ ಪಾಪ ಬೆಳಿಗ್ಗೆಯಿಂದ ಅದರ ನೋವಿಗೆ ಅಳ್ತಾ ಇದ್ದಾಳೆ. ಅದೆಷ್ಟು ನಾನು ಮತ್ತು ಅಮ್ಮ ಮೆತ್ತನೆಯ ದಿಂಬು ಅವಳ ಸುತ್ತ ಇಟ್ಟು ಮುದ್ದಾಡಿದ್ರು  ನೋವಿನಿಂದ ಮುಖ ಅತ್ತು  ಅತ್ತು ಸುಸ್ತಾಗಿದೆ.                                                                                                           15-02-2012 

 ಇವತ್ತು ನನ್ನ ರೂಮೆಲ್ಲ ಒಳ್ಳೆ ಘಮ.  ಅನು ಪುಟ್ಟಿಗೆ ಈಗಷ್ಟೇ ಸ್ನಾನ ಆಯ್ತು.  ಸಾಂಬ್ರಾಣಿಯ (ಲೋಭಾನದ) ಪರಿಮಳ ಇಡೀ ಕೋಣೆಯೆಲ್ಲ ತುಂಬಿಕೊಂಡಿದೆ  ಅನು  ಪುಟ್ಟಿನ ಬಿಳಿ ವಸ್ತ್ರದಲ್ಲಿ ಚೆನ್ನಾಗಿ ಸುತ್ತಿ ಅಮ್ಮ ತೊಟ್ಟಿಲಲ್ಲಿ ಮಲಗ್ಸಿದ್ದಾರೆ. ಅದೆಷ್ಟೇ ಸುತ್ತಿದ್ದರೂ ಇನ್ನೊಂದು ಘಂಟೆಯಲ್ಲಿ ಕೈ ಕಾಲು ಎಲ್ಲ ಆರಾಮಾಗಿ ಬಿಡಿಸಿಕೊಳ್ತಾಳೆ. ಅಮ್ಮ ಮೊನ್ನೆಯಿಂದ ಕೇಳ್ತಾ ಇದ್ದಾರೆ, ಅದೇನು ಬರಿತಾ ಇದೀ, ತೋರ್ಸು ನಾನು ಸ್ವಲ್ಪ ಓದ್ತೀನಿ  ಅಂತ ," ..... "ಎಲ್ಲ  ಬರೆದು ಮುಗ್ಸಿದ್ ಮೇಲೆ ಓದು ಅಂತ ಹೇಳಬಿಟ್ಟಿದ್ದೀನಿ." ಇದನ್ನೇನಾದ್ರೂ ಅವ್ರು ಓದಿದ್ರೆ ಅಷ್ಟೆ  ಸಹಸ್ರ ನಾಮಾರ್ಚನೆ ನಂಗೆ . "ಸ್ವಲ್ಪಾನು ನಾಚಿಕೆ ಇಲ್ಲ ಏನೆಲ್ಲಾ ಬರ್ದಿದ್ದೀಯಾ ಅಂತ ಬಯ್ಯಬಹುದು"....  ಅಥವಾ "ತನ್ನ ಗಂಡುಬೀರಿ ಮಗಳ ಮನಸ್ಸಲ್ಲಿ ಇಷ್ಟೆಲ್ಲಾ ಇತ್ತಾ ಅಂತ ಆಶ್ಚರ್ಯ ಪಡ್ಬಹುದು", ಕಾದು  ನೋಡ್ಬೇಕು. ಯಾವುದಕ್ಕೂ ಅಮ್ಮನ ಕೈಗೆ ಸಿಗಬಾರದು ಅಂತ ದಿನಾಲು ಪೇಪರನ್ನ ದಿಂಬಿನ ಕೆಳಗೆ ಮುಚ್ಚಿ ಇಡ್ತಾ ಇದ್ದೀನಿ. ಇನ್ನು ಹೇಮಂತ್ ಇದನ್ನ ಓದಿದ್ರೆ , asusual  'ನೀನು ಪೋಲಿ ಕಣೆ ಮಧು, ನೋ ಚೇಂಜ್  ' ಅಂತ ನಗ್ಬಹುದು. ಇನ್ನಾದರೂ ಜೀವನದಲ್ಲಿ ಸೀರಿಯಸ್ ಆಗಿರೋದು ಕಲಿಬೇಕು. ಏನೇ ಆದ್ರೂ ನನ್ನ ತರಲೆ ಬುದ್ದಿ ಬಿಡಕ್ಕೆ ಆಗಲ್ಲ. ಅದು ಹುಟ್ಟುಗುಣ ಅನ್ಸುತ್ತೆ. ಹಾಗಿರೋಕ್ಕೆ ನಾನು  ತುಂಬಾ ಇಷ್ಟ ಪಡ್ತೀನಿ ಕೂಡ .

ನನಗೆ ಕೊನೆಯಲ್ಲಿ ಅನಿಸಿದ್ದು ಇಷ್ಟೇ .ಅದೆಷ್ಟೋ ಜನ ಹೆಣ್ಣುಮಗು ಅಂತ ಗರ್ಭಪಾತ ಮಾಡಿಸ್ತಾರೆ. ಆ ಪುಟ್ಟ ಜೀವದ ಯೋಚನೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಮೊಗ್ಗನ್ನ ಹೊಸಕಿ ಹಾಕ್ತಾರೆ.  ಅದೆಷ್ಟೋ  ಜನ, ತುಂಬಾ ಮಕ್ಕಳಿರುವವರನ್ನು ನೋಡಿ ಹಾಸ್ಯ ಮಾಡ್ತಾರೆ, ಅದೆಷ್ಟು ಜೋಕಗಳು ಎಲ್ಲಾ ಕಡೆ ಹರಿದಾಡುತ್ತೆ. ಆದರೆ ನಿಜಜೀವನದಲ್ಲಿ ಮಕ್ಕಳಿಲ್ಲ ಅನ್ನೋವ್ರ ಸಂಕಟ, ದುಃಖ, ಗಂಡನಲ್ಲಿ ದೋಷ ಇದ್ದರೂ ಬಂಜೆ ಅನಿಸಿಕೊಂಡು ನೋವು ಪಡುವ ಮಹಿಳೆಯರು, ವರ್ಷಗಟ್ಟಲೆ ಔಷಧಿ , ಮಾತ್ರೆ ಸೇವಿಸ್ತಾ ಒಂದು ಕೂಸು ತನ್ನ ಮಡಿಲು ತುಂಬಲಿ ಅನ್ನೋ ಹೆಂಗಸರು ,  ಇದನ್ನೆಲ್ಲಾ ಅನುಭವಿಸಿದವರಿಗೆ ಗೊತ್ತಾಗೋದು. ನನ್ನ ಕಥೆ ಏನೋ ಸುಖಾಂತ್ಯ ಕಾಣ್ತು  ಅಂತ  ಎಲ್ಲ ಮಹಿಳೆಯರಿಗೂ ಈ ಭಾಗ್ಯ ಇರೊದಿಲ್ಲ. ಒಂದು ಮಗು ಬೇಕು ಅಂತ ಹಂಬಲಿಸ್ತಾ ಇರ್ತಾರೆ. ದತ್ತು ತೆಗೋಬಹುದು ಅಥವಾ ಹೊಸ ಹೊಸ ವಿಧಾನಗಳಿಂದ ಮಕ್ಕಳನ್ನು ಪಡೆಯುವ ಸೌಲಭ್ಯ ಇದ್ರು ಹಣಕಾಸಿನ ಸಮಸ್ಯೆ , ವಿಪರೀತ ಸಂಪ್ರದಾಯವಾದಿಗಳು ಹೀಗೆ ಅನೇಕ ಸಮಸ್ಯೆಗಳಿಂದ ಕೆಲವು ಮನೆಗಳಲ್ಲಿ ಇದಕ್ಕೆ ಅವಕಾಶ ಇಲ್ದೆ ದಿನನಿತ್ಯ ಎಷ್ಟೋ ಮಂದಿ ನರಕಯಾತನೆ ಅನುಭವಿಸ್ತಾ ಇರ್ತಾರೆ. ನಿಜಕ್ಕೂ ದುಃಖದ ವಿಚಾರ.  ಜೀವನ ಯಾವತ್ತು ಅಂದುಕೊಂಡಷ್ಟು ಸುಖವಾಗಿರಲ್ಲ. 

ಇವತ್ತು ಕೊನೆದಿನ. ಬರ್ದು ಮುಗಿಸ್ಲೇ ಬೇಕು. ಅಂದ ಹಾಗೆ ಅಮ್ಮನಿಗೆ ಮಾತು ಕೊಟ್ಟಿದ್ದು ಮುರಿಯಕ್ಕೆ ಆಗಲ್ಲ.  ಇದರ  ಮುಂದಿನ ಭಾಗವನ್ನ ಇನ್ನೊಂದು ಮೂರ್ನಾಲ್ಕು ವರ್ಷ ಬಿಟ್ಟು ಮುಂದುವರಿಸಬೇಕು. ಯಾಕಂದ್ರೆ ಆಗ ಅನು ಪುಟ್ಟಿ ಸ್ವಲ್ಪ ದೊಡ್ದವಳಾಗಿರ್ತಾಳೆ. ಬರೆಯೋಕೆ ಬೇಜಾನ್ ವಿಷಯ ಇರ್ತದೆ. ಆಗ ನಾನು, ನನ್ನ ಜೀವನಾನೂ ತುಂಬಾ ಬದಲಾಗಿರಬಹುದು ಅನ್ಸುತ್ತೆ  . ಇಲ್ಲಿಗೆ ಮುಗಿಸ್ತೀನಿ .... ಅಲ್ಲಿವರೆಗೂ ಒಂದು ಪುಟ್ಟ ವಿರಾಮ... :-)


22 comments:

 1. ಏನು ಬರೆದರೂ ಹಬ್ಬ ಮಾಡುವ ನಿಮ್ಮ ಲೇಖನದ ವೈಖರಿ ಮನಕ್ಕೆ ಮುದ ನೀಡುತ್ತದೆ. ಪ್ರತಿಯೊಬ್ಬರ ಜೀವನದ ಒಂದು ಮಜಲು ತಾಯ್ತನ, ಅಪ್ಪನ ಜವಾಬ್ಧಾರಿ. ಇಂತಹ ಒಂದು ಸುಮಧುರ ವಿಷಯವನ್ನು ಹಾಸ್ಯ, ನೋವು, ಅಳಲು, ತುಂಟತನ ಇದೆಲ್ಲವನ್ನು ಸೇರಿಸಿ ಬೆರೆಸಿ ಉಣಬಡಿಸಿರುವ ರೀತಿಗೆ ಒಂದು ಹಾಟ್ಸ್ ಆಫ್. ತಾಯ್ತನದ ಆ ಹಂತಗಳನ್ನು ಮೃದುವಾಗಿ ಹೇಳಬೇಕಾದ್ದನ್ನು ವೈಭವಿಕರಿಸದೆ ಹೇಳಿರುವ ರೀತಿ ಮನಕ್ಕೆ ತಾಕುತ್ತದೆ. ಲೇಖನದ ಕೊನೆಯ ಆಶಯದಂತೆ ಎಲ್ಲರು ಮಕ್ಕಳ್ಳನ್ನು ಮಕ್ಕಳ ಹಾಗೆ ಕಾಣಬೇಕು ಎನ್ನುವ ಸಂದೇಶ ಮನ ಮುಟ್ಟುತ್ತದೆ. ಪತಿರಾಯನ ಮಮತೆ, ತಾಯಿ ತಂದೆಯರ ಪ್ರೀತಿಯ ಮಮಕಾರ ಎಲ್ಲವನ್ನು ಪದಗಳಾಗಿ ಮೂಡಿಸಿರುವುದು ನಿಮ್ಮ ಪ್ರತಿಭೆಗೆ ಹಿಡಿದ ಕೈಗನ್ನಡಿ.
  ಇದಕ್ಕೆಲ್ಲ ಕಳಶವಿಟ್ಟಂತೆ ಪತ್ರದ ರೀತಿಯಲ್ಲಿ ಹಂತ ಹಂತವಾಗಿ ಬರೆದಿರುವ ಶೈಲಿ ಶಾಲಾ ದಿನಗಳಿಗೆ ನನ್ನನ್ನು ಕರೆದೊಯ್ದಿತ್ತು.
  ಇಷ್ಟವಾಯಿತು ಸಹೋದರಿ

  ReplyDelete
  Replies
  1. ಧನ್ಯವಾದಗಳು ಶ್ರೀಕಾಂತ್... ನಿಮ್ಮ ಚಂದದ ಪ್ರತಿಕ್ರಿಯೆಗೆ... :))

   Delete
 2. ಬರಹ ನನ್ನನ್ನಂತೂ ಓದಿಸಿಕೊಂಡು ಹೋಯ್ತು....
  ಜೊತೆಗೊಂದಿಷ್ಟು ಸಹಜ ಕುತೂಹಲವೂ ಇತ್ತು ಎನ್ನಿ...
  ಧನ್ಯವಾದಗಳು ಅಕ್ಕಾ..
  ಬರೆಯುತ್ತಿರಿ..
  ನಮಸ್ತೆ ....

  ReplyDelete
  Replies
  1. ಚಿನ್ಮಯ್.... Thank u so much... :))

   Delete
 3. ಬದುಕ ಹೊಸ ತಲ್ಲಣಗಳು, ಅಮ್ಮನಾಗುವ ಸಂರ್ಭಮದ ಹೊಳಪು ಮತ್ತು ಅಮ್ಮನ ಮಡಿಲ ಘಮ ಎಲ್ಲವೂ ತುಂಬಿರುವ ಬರಹ...
  ನಿರಾಳವಾದ ಓದು...ಇಷ್ಟವಾಯಿತು....

  ReplyDelete
  Replies
  1. ಇಷ್ಟಪಟ್ಟಿದ್ದಕ್ಕೆ ಕೃತಜ್ಞತೆಗಳು, ಶ್ರೀವತ್ಸ... :))

   Delete
 4. ಸುಂದರ ಬರಹ , ಆತ್ಮೀಯ ಎನಿಸುತ್ತದೆ. ನನ್ನ ಸ್ವಂತ ಅಕ್ಕನ ಹೆರಿಗೆಯ ಕಥೆಯನ್ನೇ ಬರೆದ ಹಾಗಿದೆ. ತುಂಬಾ ಇಷ್ಟ ಆಯ್ತು ಅಕ್ಕ.

  ReplyDelete
  Replies
  1. ಸುಬ್ರಮಣ್ಯ ಹೆಗ್ಡೆ ಅವರೆ .... ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು :))

   Delete
 5. ಸರಾಗವಾಗಿ ಓದಿಸಿಕೊಂಡು ಹೋಗುವುದು ಒಂದು ಕಲೆ, ಅದು ದೀಪಾಜೀಗೆ ಸಿದ್ಧಿಸಿದೆ. ಒಳ್ಳೆಯ ಬರಹಕ್ಕೆ ಧನ್ಯವಾಗಳು.

  ಪುಟ್ಟಿಯ ನೆಪದಲ್ಲಿ ನಾವೂ ಪುಳಕ್ಕೆ ಒಳಗಾದೆವು.

  ReplyDelete
  Replies
  1. ಬದರೀಜಿ,ಧನ್ಯವಾದಗಳು....:))

   Delete
 6. ಹುಡುಗಿ ಅದೆಷ್ಟೇ ತುಂಟಿ, ಗಂಭೀರತೆ ಇಲ್ಲವದವಳು ಅನಿಸಿಕೊಂಡರೂ ತನ್ನ ತಾಯ್ತನವನ್ನು ಮಾತ್ರ ಇನ್ನಿಲ್ಲದಂತೆ ಪ್ರೀತಿಸುತ್ತಾಳೆ... ಅಂತಹದೇ ಕಥಾ ನಾಯಕಿಯ ತುಂಟಾಟ,ಆಸೆ, ತಲ್ಲಣ, ನಿರೀಕ್ಷೆಗಳು ಚಂದವಾಗಿ ನಿರೂಪಿಸಲ್ಪಟ್ಟಿದೆ.. ಜೊತೆಗೆ ಕೊನೆಯಲ್ಲಿ ನಾಯಕಿ ಹೇಳುವ ಆಶಯ ಮಸ್ತಾಗಿದೆ.
  ಅಕ್ಕಾ... ಕಥೆಯನ್ನು ಸಿಕ್ಕ ಪಟ್ಟೆ ಇಷ್ಟ ಪಟ್ಟೆ ಅಂತ ಮಾತ್ರ ಹೇಳಬಲ್ಲೆ..

  ReplyDelete
  Replies
  1. Thank u so much Mounaraaga (Sushma)... :))

   Delete
 7. ತುಂಬಾ ಚೆನ್ನಾಗಿ ಬರೆದಿದಿರಿ , ಅನುಪಮ ಹೆಸರು ನಂಗೂ ತುಂಬಾ ಇಷ್ಟ.

  ReplyDelete
  Replies
  1. ಸ್ವರ್ಣ...ಧನ್ಯವಾದಗಳು... :))

   Delete
 8. ಸಖತ್ತಾಗಿದೆ ದೀಪಕ್ಕ..
  ಆ ಒಂಭತ್ತು ತಿಂಗಳು ಮಧುರ, ಹೇಮಂತ್ ನನ್ನ ಕಣ್ಮುಂದೇ ಬಂದಗಾಯ್ತು. ಕೊನೆಯಲ್ಲಿ ಕೊಟ್ಟಿರೋ ಸಂದೇಶನೂ ಸೊಗಸಾಗಿದೆ.
  ಮಹಿಳೆಯರ ದಿನ ಓದ್ತಾ ಇರೋದ್ರಿಂದ ಈ ದಿನದ್ದೂ ಶುಭಾಶಯ :-)

  ReplyDelete
  Replies
  1. ಧನ್ಯವಾದಗಳು ಪ್ರಶಸ್ತಿ ಇಷ್ಟಪಟ್ಟಿದ್ದಕ್ಕೆ... :) ನಿಮ್ಮ ಶುಭಾಶಯಕ್ಕೂ thank u so much.. :))

   Delete
 9. ವಿಷಯವನ್ನು ಬರೆಯುವುದು ನಿರೂಪೈಸುವುದು ದೃಶ್ಯಿಸುವುದು ಮೂರಕ್ಕೂ ವ್ಯತ್ಯಾಸ ಇದೆ... ನಾವೆಲ್ಲಾ ಬರೆಯುತ್ತೇವೆ, ಓದಿದ್ರೆ ಅರ್ಥೈಸಿಕೊಂಡು ಜೀರ್ಣಿಸಿಕೊಳ್ಳಬೇಕಾದ್ದು ಓದುಗನ ಕರ್ತವ್ಯ...ಆದರೆ ನಿಮ್ಮಂಥ ಕೆಲವರು ಬರೆದದ್ದು ದೃಶ್ಯಿಸಿದಂತೆ ಕಣ್ಣಮುಮ್ದೆ ನಿಲ್ಲುತ್ತೆ...ತಂತಾನೇ ಅರ್ಥವಾಗುತ್ತೆ...ಆಪ್ಯಾಯ ಅನುಭದ ಸುಂದರ ನಿರೂಪಣೆ.

  ReplyDelete
  Replies
  1. ಇತ್ತೀಚಿಗೆ ಶುರು ಮಾಡಿದ ಸಣ್ಣ ಪ್ರಯತ್ನ ಈ ಬರವಣಿಗೆ. ಎಷ್ಟರ ಮಟ್ಟಿಗೆ ಈ ಪ್ರಯತ್ನ ಓದುಗರ ಮುಟ್ಟುತ್ತಿದೆಯೋ ತಿಳಿದಿಲ್ಲ. ಮನಸ್ಸಿಗೆ ತೋಚಿದ್ದು ಗೀಚುವುದು ಅಷ್ಟೇ ಅಜಾದ್ ಭಾಯ್....ಪ್ರತಿಕ್ರಿಯೆಗೆ ಧನ್ಯವಾದಗಳು :))

   Delete
 10. Hi Sumathi,
  Superb Post!!
  You have not missed many small things which are very important but cant be forgotten. When I started reading this I did not know the complete article is so much interesting.
  Keep up the good writing.

  ReplyDelete
  Replies
  1. Ohhhh...Thank u so much Santhosh for your valuable response... :))

   Delete
 11. This comment has been removed by a blog administrator.

  ReplyDelete
 12. ® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete