Friday, 1 February 2013

ಹುಡುಗ...... ನಿನ್ನದೇ ನೆನಪು ಕಣೋ......!!!!!!


ನಾನು ಚಿಕ್ಕವಳಿದ್ದಾಗ ಅಜ್ಜನ ಮನೆಗೆ ಹೋಗೋದೇ ಕಡಿಮೆ ಇತ್ತು. ಅಜ್ಜ-ಅಜ್ಜಿ ತೀರಿ ಹೋಗಿದ್ದರಿಂದ ಅದು, ಅಜ್ಜನ ಮನೆಗಿಂತ ಹೆಚ್ಚಾಗಿ,  ಪ್ರೀತಿಯ ಸೋದರಮಾವನ ಮನೆ. ಅಲ್ಲಿ ಅಪರೂಪಕ್ಕೆ ಹೋಗೋಕ್ಕೆ ಕಾರಣಾನೂ ಇದೆ, ಯಾಕಂದ್ರೆ, ನನ್ನ ಬಾಲ್ಯ, ಓದು ಎಲ್ಲಾ ನಡೆದದ್ದು ಉತ್ತರ ಭಾರತದ ದೆಹಲಿಯಲ್ಲೇ. ಅಪ್ಪನಿಗೆ ಅಲ್ಲೇ ಬ್ಯಾಂಕ್ನಲ್ಲಿ ಮ್ಯಾನೇಜರ್ ಕೆಲಸ. ಊರಲ್ಲಿ ಅಪ್ಪನ ಕಡೆಯವರು ಅಂತ ಆಪ್ತರು, ಸಂಬಂಧಿಕರು  ಯಾರೂ ಇರಲಿಲ್ಲ. ಆದ್ರೆ ಅಮ್ಮನ ತವರುಮನೇಲಿ ಏನಾದ್ರೂ ವಿಶೇಷ ಸಮಾರಂಭಗಳಾದಾಗ ಎಲ್ಲೋ ವರ್ಷಕ್ಕೆ ಒಮ್ಮೆಯೂ, ಎರಡು ವರ್ಷಕ್ಕೊಮ್ಮೆಯೋ ಅಮ್ಮನ ಜೊತೆ ನಾನು ನನ್ನ ತಂಗಿನೂ ರೈಲಲ್ಲಿ ಬರ್ತಾ ಇದ್ದದ್ದು ಇನ್ನೂ  ನೆನಪಿದೆ. ಬಂದ್ರೂ ಕಾರ್ಯಕ್ರಮ ಮುಗ್ಸೋದು, ಅಪ್ಪನಿಗೆ ಅಲ್ಲಿ ಊಟಕ್ಕೆ ತೊಂದರೆ ಅಂತ ಬೇಗ ಬೇಗ ಹೊರಡೋದು. ಆಗ ಬೇರೆ ಚಿಕ್ಕ ವಯಸ್ಸು.ಯಾವ ಸಂಬಂಧಿಕರ ಪರಿಚಯನೂ ನೆಟ್ಟಗೆ ಇರಲಿಲ್ಲ. ಯಾರಾದ್ರೂ "ನೀನು ಲಕ್ಷ್ಮಿ ಮಗಳಲ್ವೇನೆ, ಅದೆಷ್ಟು ದೊಡ್ಡವಳಾಗಿದ್ದೀಯಾ...' ಹಿಂಗೆ ಮಾತು ಶುರು ಮಾಡಿದ್ರೆ, ಅವರ ಮುಖ ನೋಡಿ, ಒಂದು ಸಣ್ಣ ನಗು  ಅಥವಾ ಅಮ್ಮ ಹತ್ತಿರ ಇದ್ರೆ, ಅವರ ಸೆರಗಿನ ಹಿಂದೆ ಬಚ್ಚಿಟ್ಕೋಳ್ಳೋದು..... ಅದಕ್ಕೆ ಅವ್ರು, "ಎಷ್ಟು ನಾಚಿಕೆನಪ್ಪಹುಡುಗಿಗೆ" ಅಂತ ಹೇಳೋದು.....".  ಹೀಗೆ ಇರುತ್ತಿದ್ದ ನಾಲ್ಕೈದು ದಿನಗಳು, ಅದೆಷ್ಟು ಬೇಗ ಉರುಳಿ ಹೋಗ್ತಾ ಇತ್ತೋ ಗೊತ್ತಾಗ್ತಿರಲಿಲ್ಲ. ಕಾರ್ಯಕ್ರಮಕ್ಕೆ ಬರ್ತಿದ್ದ ರಾಶಿ ಜನರಲ್ಲಿ,  ಒಬ್ಬರ ಪರಿಚಯ ಸಹಾ ನೆನಪಿಟ್ಟುಕೊಳ್ಳಲು  ಆಗ್ತಾ ಇರಲಿಲ್ಲ. ಪುನಃ ಇನ್ನೆರಡು ವರ್ಷ ಬಿಟ್ಟು ಬಂದಾಗ ಇದೇ ಕಥೆ ಪುನರಾವರ್ತನೆ ಆಗ್ತಾ ಇತ್ತು.

ಮಾವನ ಮನೇಲ್ಲಿ ನನ್ನೊಂದಿಗೆ ಸಲಿಗೆಯಿಂದ,ಪ್ರೀತಿಯಿಂದ  ಇದ್ದದ್ದು ಪ್ರೀತಿಯ ಮಾವನ ಮಗಳು 'ಶಿಲ್ಪ'. ನನಗಿಂತ ಸ್ವಲ್ಪ ಪ್ರಾಯದಲ್ಲಿ 2-3 ವರ್ಷ ದೊಡ್ಡವಳಾದರೂ ಅದೇನೋ ವಿಪರೀತ ಅನಿಸುವಷ್ಟು ಸ್ನೇಹ ನಮ್ಮಿಬ್ಬರಲ್ಲಿ. ಇಬ್ಬರ ಪಿಸುಪಿಸು ಮಾತು, ಹತ್ತಿರದ ತೋಟ, ಕೆರೆ, ಗದ್ದೆಗಳಲ್ಲಿ ತಿರುಗಾಟ, ಹತ್ತಿರದ ದೇವಸ್ಥಾನಗಳ ಭೇಟಿ ಇದಕ್ಕೆಲ್ಲ ಕೊನೆ ಇರಲಿಲ್ಲ.  ಆ ಮನೆಯಲ್ಲಿ ಅವಳಿಗಿಂತ ನನ್ನ ಇನ್ನೊಂದು ಆಕರ್ಷಣೆ ಅಂದ್ರೆ, ಮಾವನ ಮಗ 'ಅಭಿಜಾತ'. ಎಲ್ರ ಪ್ರೀತಿಯ 'ಅಭಿ'. ಅವನೋ ಯಾವಾಗಲೂ ಅವನ ವಯಸ್ಸಿನ ಸ್ನೇಹಿತರ ಜೊತೆ ಜಾಸ್ತಿ ಇರ್ತಿದ್ದ. ಮಾತು ಕಡಿಮೆ. ಆದ್ರೂ ನಾನು ಯಾಕೋ, ಆ ಚಿಕ್ಕ ವಯಸ್ಸಿನಲ್ಲೇ ಅವನನ್ನ  ನಾನು ತುಂಬಾ ಇಷ್ಟ ಪಡ್ತಿದ್ದೆ. ಅವನು ನನಗಿಂತ ಸುಮಾರು ಐದಾರು ವರ್ಷ ದೊಡ್ಡೋನು. ಅವನು ಅವನ ಸ್ನೇಹಿತರ ಜೊತೆ ಆಟ ಆಡೋವಾಗ ನನ್ನನ್ನು, ಶಿಲ್ಪನ್ನು ಅವನ ಗುಂಪಿಗೆ ಸೇರಿಸ್ತಾ ಇರ್ಲಿಲ್ಲ. ಅವನ ಸ್ನೇಹಿತರದ್ದೆ ಒಂದು ಗುಂಪು. ಅವನಿಗೆ ನಾವು  ಹುಡುಗೀರು ಅವನ ಜೊತೆ ಆಟಕ್ಕೆ ಬಂದರೆ ಒಂಥರಾ ನಾಚಿಕೆ. ಆದ್ರೂ ನಾವೇನು ಕಡಿಮೆ ಇಲ್ಲ ಅಂತ ಅವನ ಜೊತೆ ಜಗಳ ಆಡಿ ಆಟಕ್ಕೆ ಸೇರ್ತಿದ್ವಿ. ಮನೆಗೆ ಬಂದು ಇಬ್ಬರಿಗೂ ಸರಿಯಾಗಿ ಬೈತಿದ್ದ. "ನಿಮಗೆ ಸ್ವಲ್ಪಾನೂ ನಾಚಿಕೆ ಇಲ್ಲ, ನನ್ನ ಮಾನ ಕಳೀತೀರಾ ಅಂತ ಕೂಗಾಡ್ತಿದ್ದ". . ಅವನ ಮಾತಿಗೆ ನಾವಿಬ್ಬರೂ ಕ್ಯಾರೇ ಮಾಡದೇ ಮರುದಿನ ಪುನಃ ಅವನ ಜೊತೆ  ಜಗಳ ಆಡಿ ಆಟ ಆಡ್ತಿದ್ವಿ.

ಅಪ್ಪನಿಗೆ ಯಾವಾಗ ತಮ್ಮ ಕೆಲಸದಲ್ಲಿ ಭಡ್ತಿ ಸಿಕ್ಕಿ ಬೆಂಗಳೂರಿಗೆ ವರ್ಗಾವಣೆ ಆಯ್ತೋ, ಅಲ್ಲಿಂದ ನನ್ನ ಮಾವನ ಮನೆಯ ಭೇಟಿ ಇನ್ನೂ  ಜಾಸ್ತಿ ಆಯ್ತು. ಪ್ರತಿ ಅಕ್ಟೋಬರ್ ರಜೆಯಲ್ಲಿ, ಏಪ್ರಿಲ್-ಮೇ ರಜೆಯಲ್ಲಿ ಪರೀಕ್ಷೆ ಮುಗಿಸಿ ಓಡಿ ಬರ್ತಾ ಇದ್ದೆ.ಅವತ್ತಿನ್ನೂ ಚೆನ್ನಾಗ್ ನೆನಪಿದೆ. ದೆಹಲಿಯಿಂದ ಬೆಂಗಳೂರಿಗೆ ಬಂದ ಮೇಲೆ ಮೊದಲನೆಬಾರಿ ಮಾವನ ಮನೆಗೆ ಬಂದಿದ್ದೆ. ಅದೂ ಸುಮಾರು ನಾಲ್ಕು ವರ್ಷಗಳ ನಂತರ. ಆಗಷ್ಟೇ ನನ್ನ ಹತ್ತನೇ ತರಗತಿ ಪರೀಕ್ಷೆ ಮುಗಿದಿತ್ತು.  ಮೇ ತಿಂಗಳ ರಜಾ ದಿನಗಳನ್ನು ಕಳೀಲಿಕ್ಕೆ ಅಂತ ಅಮ್ಮನ ಜೊತೆ ಹಠ ಮಾಡಿ  ಅವರನ್ನು, ತಂಗೀನ್ನೂ ಜೊತೇಲಿ ಕರ್ಕೊಂಡು ಬಂದಿದ್ದೆ. ಅವತ್ತು ಸಂಜೆ ಸಮಯ. ಎಲ್ಲರೂ ಟಿ ವಿ ನೋಡ್ತಾ ಇದ್ವಿ.ಆಗ ಮಾವನ ಮನೇಲಿ ಮಾತ್ರ ಟಿ  ವಿ ಇರೋದ್ರಿಂದ, ಅಕ್ಕ ಪಕ್ಕದ ಮನೆಯವರು ಅಲ್ಲಿ ಬಂದು ಸಂಜೆ ಸಮಯ ಒಟ್ಟಾಗಿ ಸಿನಿಮಾನೋ, ಧಾರವಾಹಿನೋ ನೋಡ್ತಿದ್ರು. ದೊಡ್ಡ ಸಂತೆಯ ವಾತಾವರಣ, ಅಲ್ಲಿ ನೆರೆದ ಸೇರಿದ ಹೆಂಗಸರು ಮಕ್ಕಳಿಂದ ಗೌಜಿ, ಗದ್ದಲ . ಅದು ದೊಡ್ಡ ಮನೆ. ಉದ್ದದ ಪಡಸಾಲೆ.  ಸಂಜೆ ಆಗ್ತಾನೆ ಕಾಲೇಜು ಮುಗ್ಸಿ ಅಭಿ ಮನೆಗೆ ಬಂದ. ನನಗಂತೂ ಅವನನ್ನು ನೋಡಿ ಶಾಕ್, ಸುಮಾರು ನಾಲ್ಕು ವರ್ಷಗಳ ನಂತ್ರ ನೋಡಿರೋದ್ರಿಂದ ಅವನಲ್ಲಿನ ಬದಲಾವಣೆಗಳು ಸರಿಯಾಗಿ ಕಾಣಿಸ್ತಾ ಇತ್ತು. ಅವತ್ತು ಅವನ ಅಂತಿಮ ವರ್ಷದ ಬಿ.ಎಸ್ಸಿ ಪರೀಕ್ಷೆಯ ಕೊನೆಯ ದಿನ. ಅವ್ನು ನನ್ನನ್ನ ನೋಡಿ ಮುಗುಳ್ನಕ್ಕು ಒಳಗೆ ಹೋದ. ಅಲ್ಲಿ ಎಲ್ರೂ ಇದ್ದಿದ್ದರಿಂದ ಇಬ್ಬರೂ ಏನೂ ಮಾತಾಡ್ಲಿಲ್ಲ. ಆ ಘಳಿಗೆಯಲ್ಲಿ ಅವನನ್ನು ನೋಡಿದ ನನ್ನ ಮನಸ್ಸು ಹಾಗೇ ಏನೇನೋ ಆಲೋಚನೆ ಮಾಡ್ತಾ ಇತ್ತು. ಎಷ್ಟು ಚಂದ ಆಗಿದ್ದಾನಲ್ವಾ.!!!! ಚಂದದ ಮೀಸೆ, ನೀಟಾಗಿ ಶೇವ್ ಮಾಡಿದ ಮುಖ, ಅವನಿಗೆ ಒಪ್ಪೋ ಹೇರ್ ಸ್ಟೈಲ್ ....ಎಲ್ಲಾನೂ ಚಂದಾನೆ.... ನೀಲಿ ಜೀನ್ಸ್, ಬಿಳಿ ಟಿ-ಶರ್ಟ್ , ಮುದ್ದು ಮುದ್ದಾಗಿ ಕಂಡಿದ್ದ ಅವತ್ತು ನನ್ನ ಕಣ್ಣಿಗೆ. ರಾತ್ರಿ ಊಟ ಮಾಡೋವಾಗ, "ನಿನ್ನ ಪರೀಕ್ಷೆ ಹೇಗಿತ್ತೆ, ತೇಜೂ.." ಅಂತ ಅವ್ನು ಕೇಳ್ದಾಗ,  ಅವ್ನ ಬಾಯಲ್ಲಿ ನನ್ನ ಹೆಸ್ರು ಕೇಳಿನೇ ರೋಮಾಂಚನಗೊಂಡಿದ್ದೆ. ಅಪ್ಪ-ಅಮ್ಮ "ತೇಜಸ್ವಿನಿ' ಅಂತ ಹೆಸರಿಟ್ರು ಎಲ್ರಿಗೂ ನಾನು 'ತೇಜೂನೇ"...."ಹಾ...ಹಾ... ಸುಲಭ ಇತ್ತು ಕಣೋ ಅಭಿ... ",ಅಂತ ಎರಡು ನಿಮಿಷ ಬಿಟ್ಟು ಉತ್ತರ ಕೊಟ್ಟಿದ್ದೆ. ಅವನನ್ನು ನೋಡೀನೇ ಮಾತು ಮರ್ತು ಹೋಗಿದ್ದೆ.....ಎಂಥ ಹುಚ್ಚು ವಯಸ್ಸು ಅದು.....

ಆ ರಜಾ ದಿನಗಳು ಹೇಗೆ ಓಡ್ತಾ ಇತ್ತು ಅಂತಾನೇ ತಿಳೀತಿರಲಿಲ್ಲ. ಮುಂಚಿನ ಹಾಗೆ ಅವನ ಜೊತೆ ಜಗಳ ಆಡೋದು, ತಲೆಹರಟೆ ಮಾಡೋದು  ಎಲ್ಲಾ ಕಡಿಮೆ ಆಗಿತ್ತು. ಅವನ ಎದುರಿಗೆ ಮಾತಾಡೋಕ್ಕೆ ಒಂದು ರೀತಿ ಮುಜುಗರ, ನಾಚಿಕೆ ಆಗ್ತಾ ಇತ್ತು. ಈಗಂತೂ ಅವನು ಇನ್ನು ತುಂಬಾ ತುಂಬಾ ಇಷ್ಟ ಆಗ್ತಿದ್ದ. ಅವನ ಗಂಭೀರ ಸ್ವಭಾವ, ಎಲ್ಲರನ್ನು ಪ್ರೀತಿಸುವ ಗುಣ, ಸ್ವಲ್ಪವೂ ಅಹಂಕಾರ ಇಲ್ಲದ ಮನಸ್ಸು ಅವನ ಹತ್ತಿರ ನನ್ನನ್ನ ಸೆಳಿತಾ ಇತ್ತು.  ಅದರಲ್ಲೂ  ಅಭಿದು ಇನ್ನೊಂದು ವಿಷಯ ತುಂಬಾ ತುಂಬಾ ನೆನಪಾಗೋದಂದ್ರೆ,   ಯಾವಾಗ್ಲೂ ಶುಭ್ರವಾಗಿ ಇರಬೇಕು ಅನ್ನೋ ಅವ್ನ ಸ್ವಭಾವ. ಅವನ ಬಟ್ಟೆ, ಅವನ ರೂಮು, ಅವ್ನ ಗಾಡಿ  ಎಲ್ಲವೂ ಮಿಂಚ್ತಾ ಇರ್ಬೇಕು, ಅದೇ ಅವನಿಗಿಷ್ಟ . ಪ್ರತಿಬಾರಿ ರೂಪಕ್ಕಾನೋ, ಅಥವಾ ಶಿಲ್ಪಾನೋ ಅವನ ಶರ್ಟ್-ಪ್ಯಾಂಟ್ ಒಗೀಬೇಕಾದ್ರೆ, ಟ್ಯಾಂಕ್ನಲ್ಲಿ ,ಡ್ರಂ ಗಳಲ್ಲಿ ತುಂಬಿಸಿಟ್ಟ ನೀರಿಂದ ಬಟ್ಟೆ ಒಗೆಯೋದು ಬೇಡ, ಗಲೀಜು ಅಂತ ಅದೆಷ್ಟು ಕೊಡ ನೀರನ್ನಬೇಕಾದ್ರೂ ಬಾವಿಯಿಂದ ಸೇದ್ತಾ ಇದ್ದ ಅವನು...!!! ಆಗೆಲ್ಲ ಅವ್ರು ಅವ್ನಿಗೆ ತಮಾಷೆ ಮಾಡೋವ್ರು, "ಅಭಿ, ಇದೇ ರೀತಿ ಅದೆಷ್ಟು ಕ್ಲೀನ್, ಕ್ಲೀನ್ ಅಂತ ನಮ್ಮ ಪ್ರಾಣ ತೆಗಿತೀಯಾ...ನೋಡೋಣ, ನಿನ್ನ ಹೆಂಡ್ತಿ ಆಗೋಳು ಅದೆಷ್ಟು ಕ್ಲೀನ್ ಇರ್ತಾಳೆ ..??" ಅಂತ ಅವ್ರೆಲ್ಲಾ ಚುಡಾಯ್ಸಿದ್ರೆ , ಅವನು ಒಂದು ಸಣ್ಣ ನಗು ನಗ್ತಾ ಇದ್ದ. ಆಗ  ಅದೆಕೋ ನನ್ನ ಗಲ್ಲಗಳು ನಾಚಿಕೆಯಿಂದ ಕೆಂಪಾಗ್ತಾ ಇತ್ತು. ಅವನ ಹೆಂಡತಿಯ ಸ್ಥಾನದಲ್ಲಿ, ನನ್ನನ್ನ ನಾನೇ ಕಲ್ಪಿಸಿಕೊಂಡು ಮೈ ಮರೀತಾ ಇದ್ದೆ.


ಅವ್ನ ಜೊತೆ, ಮನೆಯವರೆಲ್ಲ ಸೇರಿ ಇಸ್ಪೀಟ್ ಆಟ ಆಡುವಾಗ ಪಕ್ಕದಲ್ಲಿ ಕೂತ ಅವನು,ನನಗೋಸ್ಕರ ಬೇಕಾಗಿಯೇ ಅದೆಷ್ಟೋ ಸಲ ಸೋತಿದ್ದ. "ನಿನಗೆ ಆಡಕ್ಕೆ ಬರಲ್ಲ ಕಣೆ ತೇಜೂ, ಒಳ್ಳೆ ಪೆದ್ದು ತರಹ ಆಡ್ತೀಯಾ...." ಅಂದ್ರು ನಾನು ಮಾತಾಡ್ದೆ ಮುಗುಳ್ನಗ್ತಾ ಇದ್ದೆ. ಆಗೆಲ್ಲಾ ನನ್ನ ಮನಸ್ಸು ಅವ್ನನ್ನು ಇನ್ನು ಭದ್ರವಾಗಿ ನನ್ನೆದೆಯಲ್ಲಿ ಬಚ್ಚಿಟ್ಟುಕೊಂಡಿತ್ತು. ನನ್ನನ್ನು ಅವ್ನು ಇಷ್ಟ ಪಡ್ತಾ ಇದ್ದಾನೆ , ಅಂತ ನನಗೆ ನಾನೇ ತೀರ್ಮಾನ ಮಾಡ್ಕೊಂಡು ಬಿಟ್ಟಿದ್ದೆ. ಇದೇ ಭಾವನೇಲಿ ಅವ್ನನ್ನ ಪೂಜಿಸ್ತಿದ್ದೆ, ಆರಾಧಿಸ್ತಿದ್ದೆ. ಆದರೆ ಒಂದು ಬಾರಿಯೂ ಬಾಯಿ ಬಿಟ್ಟು ಈ ವಿಷಯಾನ ಅವ್ನ  ಹತ್ತಿರ ಹಂಚಿಕೊಂಡಿಲ್ಲ. ಅದೇ ನಾನು ಮಾಡಿದ ತಪ್ಪು ಅನ್ಸುತ್ತೆ ... ನಾನು ಮನ ಬಿಚ್ಚಿ ಈ ವಿಷಯ ಹೇಳಿದ್ರೂ, ಅವ್ನ ಉತ್ತರ ಏನಿರ್ತಾ ಇತ್ತೋ ಗೊತ್ತಿಲ್ಲ....!!!!

ಹೀಗೆ ನಾನು ಪ್ರಥಮ ವರ್ಷದ ಡಿಗ್ರಿ ಓದೋವಾಗ ಶಿಲ್ಪನ ಮದುವೆ ಆಗಿತ್ತು. ಆಗ ನಾನು ಅದೆಷ್ಟು ಬೇಸರ ಮಾಡ್ಕೊಂಡಿದ್ದೆ . ಇನ್ನು ಮಾವನ ಮನೆಗೆ ಬಂದ್ರೆ ನನ್ನ ಜೊತೆ ಯಾರಿರ್ತಾರೆ ಮಾತಾಡಕ್ಕೆ, ಸುತ್ತಾಡಕ್ಕೆ.... ಶಿಲ್ಪನ್ನ ಇಷ್ಟ ಪಟ್ಟ ಹುಡುಗ ತುಂಬಾ ಚೆನ್ನಾಗಿದ್ದ. ಅವಳನ್ನ ಪಾಪ ಆದೆಷ್ಟು ಗೋಳುಹೊಯ್ಕೊಂಡಿದ್ದೆ ಆಗ.... ಮದುವೆಗೆ ಒಂದು ವಾರ ಮುಂಚೇನೆ ಅಲ್ಲಿ ಹಾಜರಾಗಿದ್ದೆ. ಅವಳ ಸೀರೆ, ಅವಳ ಒಡವೆ ಬಗ್ಗೆ ಅದೆಷ್ಟು ಮಾತಾಡಿದ್ವಿ. ಇಬ್ಬರಿಗೂ ಇನ್ನು ಇಷ್ಟು ಮಾತಾಡಕ್ಕೆ ಸ್ವಾತಂತ್ರ್ಯ ಇರಲ್ಲ ಅಂತ ಆಗಲೇ ಎಲ್ಲಾ ಮಾತು ಮುಗಿಸಿದ್ವಿ. ಮದುವೆ ಹಿಂದಿನ ದಿನ ಸಂಭ್ರಮವೇ ಸಂಭ್ರಮ....  ಅದೆಷ್ಟು ಅವಳನ್ನ ಚುಡಾಯಿಸಿ ಹಿಂಸೆ ಮಾಡಿದ್ದೆ. ಪಾಪ, ಅವಳಂತೂ ನನ್ನ ಎಲ್ಲಾ ಕೀಟಲೆಗಳನ್ನು ಸಹಿಸಿಕೊಂಡು ನಗ್ತಾ ನಗ್ತಾ ಇದ್ಲು. ಮರುದಿನದ ಮದುವೆಗೆ ನಾನಂತೂ ತುಂಬಾ ಮುತುವರ್ಜಿಯಿಂದ ಅಲಂಕಾರ ಮಾಡ್ಕೊಂಡಿದ್ದೆ. ಅದಕ್ಕೆಲ್ಲಾ ಅಭಿನೇ ಕಾರಣ ಅನ್ಬೇಕು. ಅವನು ನನ್ನನ್ನು ನೋಡ್ಬೇಕು. ಪ್ರೀತಿಯಿಂದ ಒಂದೆರಡು ಮಾತಾಡ್ಬೇಕು ಅಂತ ಎಷ್ಟೆಲ್ಲಾ ಕನಸು ಕಾಣ್ತಾ ಇದ್ದೆ. ಆದರೆ ಅವನು ಮಾತ್ರ ಏನೂ ಗೊತ್ತಿಲ್ಲದೇ ಇರೋವನ ತರಹ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಮದುವೆ ಮನೇಲಿ ಓಡಾಡ್ತಾ ಇದ್ದ. ನನ್ನನ್ನ ನಿರಾಶೆ ಮಾಡ್ಬಿಟ್ಟ ಅವತ್ತು. ಮದುವೆ ಎಲ್ಲಾ ಮುಗಿದ ಮೇಲೆ ಶಿಲ್ಪನ್ನ  ಗಂಡನ ಮನೇಗೆ ಕಳ್ಸೋ ಬೇಸರ. ಜೊತೆಗೆ ಪ್ರೀತಿಯ ಸ್ನೇಹಿತೆಯ ಅಗಲಿಕೆ. ಆದರೆ ಅಮೇಲಿದ್ದ ಎರಡು ದಿನಗಳು ಖುಷಿ ಕೊಟ್ಟಿತ್ತು.  ಎರಡು ದಿನದ ನಂತರ ಹೊಸ ಮದುಮಕ್ಕಳನ್ನ ಕರೆದುಕೊಂಡು ಮನೆದೇವರ ದರ್ಶನಕ್ಕೆ ಮನೆಮಂದಿಯೆಲ್ಲಾ ಹೋಗೋದಿತ್ತು. ಆಗ ಪುನಃ ಶಿಲ್ಪನ ಸಂಗಡ ಸ್ವಲ್ಪ ಸಮಯ ಕಳಿಯಕ್ಕೆ ಸಿಕ್ಕಿತ್ತು, ಜೊತೆಗೆ ಅಭಿ ಜೊತೆ ಸಹಾ... ಅವನು ಈಗೀಗ ನನ್ನ ಜೊತೆ ಮಾತಾಡ್ತಾ ಇದ್ದ. ನನಗಂತೂ ಏನೋ ಉಡುಗೊರೆ ಸಿಕ್ಕಂತೆ  ಖುಷಿ ಪಡ್ತಾ ಇದ್ದೆ . ಕೊನೆಗೂ ನನ್ನನ್ನ ಅರ್ಥ ಮಾಡ್ಕೋತಾ ಇದ್ದಾನೆ ಅನ್ನಿಸ್ತಾ ಇತ್ತು.

ಆಗಲೇ ನನ್ನ ಪ್ರಥಮ  ವರ್ಷದ ಪರೀಕ್ಷೆ ಮುಗ್ದು ರಜಾ ಶುರು ಆಗಿತ್ತು. ಶಿಲ್ಪನ ಕಾಗದ ಆಗಲೇ ಪೋಸ್ಟ್ ಮೂಲಕ ಬಂದಿತ್ತು. "ತೇಜೂ, ರಜಾ ಶುರು ಆದ ಕೂಡಲೇ ನನ್ನ ಮನೆಗೆ ಬಾ.. ನೀನು ನನ್ನ ಮನೆಗೆ ಇನ್ನು ಬಂದಿಲ್ಲ. ಅಭಿ ನಿನ್ನನ್ನು ಕರ್ಕೊಂಡು ಬರ್ತಾನೆ. ತಪ್ಪಿಸ್ಕೊಂಡ್ರೆ  ನಿನ್ನ ಮೇಲೆ ಕೋಪ...ಜಾಗ್ರತೆ " ಅಂತ ಬೇರೆ ಎಚ್ಚರಿಕೆ ಕೊಟ್ಟಿದ್ಲು.. ಅವಳ ಕಾಗದ ತಲುಪಿದ್ದೆ ತಡ, ರಜಾ ಶುರು ಆದ ಕೂಡ್ಲೆ ಲಗೇಜ್ ಪ್ಯಾಕ್ ಮಾಡಿ ಹೊರಟದ್ದೇ. ಮಾವನ ಮನೆಗೆ ಹೋಗಿ, ಅಲ್ಲಿ ಅಭಿ ಬರೋ ತನಕ ಕಾದು, ಅವನ ಜೊತೆ ಪ್ರಯಾಣ ಬೆಳೆಸಿದ್ದೆ. ಮೊದಲ್ನೇ ಬಾರಿ ಅವನೊಂದಿಗೆ ಒಬ್ಬಳೇ ಪ್ರಯಾಣ ಹೋಗ್ತಾ ಇರೋದು. ..ನಮ್ಮ ಜೊತೆ ರಜೆಗೆಂದು ಅಜ್ಜನ ಮನೆಗೆ ಬಂದ ಅವನ ರೂಪಕ್ಕನ ಮಗಳನ್ನ ಬೇರೆ ಅವರ ಮನಗೆ ಕರ್ಕೊಂಡು ಹೋಗ್ಬೇಕಿತ್ತು. ಅವಳೋ ಪಾಪ 6 ವರ್ಷದ ಮುದ್ದು ದಿವ್ಯ. ಎಲ್ಲರ ಮುದ್ದಿನ ದಿವಿ. ಬಸ್ಸಿನ ಗಾಳಿಗೆ ಮುದ್ದು ಪುಟಾಣಿಗೆ ನಿದ್ದೆ ಬಂದ್ರೆ, ಅವಳನ್ನು ನಾವಿಬ್ಬರು ನಮ್ಮ ತೊಡೆ ಮೇಲೆ ಮಲಗಿಸಿಕೊಂಡು ಆ ಒಂದೂವರೆ ಘಂಟೆ ಪ್ರಯಾಣ ಮಾಡಿದ್ದೆವು. ಆಗ ನಾನು ಏನೆಲ್ಲಾ ಕನಸು ಕಾಣ್ತಾ ಇದ್ದೆ. ಅವನ ಸನಿಹ ಕೂತುಕೊಂಡು ಆ ಧೀರ್ಘ ಪ್ರಯಾಣ... ಉಫ್...ಆ ಸಮಯದಲ್ಲಿ ನಾನು ನಿಜವಾಗ್ಲೂ ಕಳೆದುಹೋಗಿದ್ದೆ. ಮುಂದೊಂದು ದಿನ ಇದೇ ಜಾಗದಲ್ಲಿ ನಮ್ಮ ಮುದ್ದು ಮಕ್ಕಳು, ಹೀಗೆ ಅವನ ಜೊತೆ ಪ್ರಯಾಣ, ಇನ್ನು ಏನೇನೋ....ಹಗಲುಗನಸು ಕಾಣ್ತಾ ಇದ್ದೆ. ಆ ಊರಿಗೆ ಹೋಗಿ ತಲುಪಿದ ಕೂಡಲೇ ದಿವಿನ ಮೊದ್ಲು ಅವಳ ಅಮ್ಮನ ಹತ್ರ ಬಿಟ್ಟು ನಾವು ಹೊರಟಿದ್ವಿ. ಅದೇ ಊರಲ್ಲಿ ಅಭಿಗೆ ಕೆಲಸ. ಅಲ್ಲೇ ಅವನೊಂದು ರೂಮ್ ಮಾಡಿ ಉಳ್ಕೊಂಡಿದ್ದ. ಮೊದ್ಲು ನನ್ನನ್ನು ತನ್ನ ರೂಮಿಗೆ ಕರೆದೊಯ್ದ. ಆ ಚಿಕ್ಕ ಮನೆ ಅವ್ನು ಅದೆಷ್ಟು ನೀಟಾಗಿ ಇಟ್ಟುಕೊಂಡಿದ್ದ ಅಂದ್ರೆ ನಂಗೆ ನಾಚಿಕೆ ಆಯ್ತು. ನಾನು ಇಷ್ಟು ಕ್ಲೀನ್ ಆಗಿ ನಮ್ಮನೇನ ಇಟ್ಟುಕೊಳ್ಳಲ್ಲ ಅನ್ನಿಸ್ತು.   ಅಲ್ಲಿ ಸ್ವಲ್ಪ ಮುಖ ತೊಳೆದು ಫ್ರೆಶ್ ಆಗಿ ಪುನಃ ಇಬ್ಬರೂ ಹೊರಟ್ವಿ. ಅವನ    ಬೂದು ಬಣ್ಣದ ಹೊಸ 'ಬಜಾಜ್ ಸ್ಕೂಟರ್ನ ' ಒರೆಸಿ ಸ್ಟಾರ್ಟ್ ಮಾಡ್ದ.   ಹಿಂದಿನ ಸೀಟಿನಲ್ಲಿ ಅವನ ಮೈಗೆ ಸ್ವಲ್ಪವೂ ತಾಗದೇ ಕೂತ್ಕೊಂಡಿದ್ದೆ. ಅವನು ಮೊದಲು ನನ್ನನ್ನ ಒಂದು ಐಸ್ಕ್ರೀಮ್ ಪಾರ್ಲರ್ಗೆ ಕರ್ಕೊಂಡು ಹೋಗಿ ನನ್ನ ಇಷ್ಟದ 'ಫ್ರೂಟ್ ಸಲಾಡ್' ಆರ್ಡರ್ ಮಾಡ್ದ. ಇಬ್ಬರೂ ನಿಧಾನವಾಗಿ ಮಾತಾಡ್ತಾ ತಿಂದು ಶಿಲ್ಪನ ಮನೆಗೆ ಹೊರಟ್ವಿ.

ಅವನ  ಗಾಡಿಯಲ್ಲಿ ಕೂತು, ಅವನು ಅಷ್ಟು ನನ್ನ ಸಮೀಪದಲ್ಲಿ ಇದ್ರೂ ಜಾಗರೂಕತೆಯಿಂದ ಕೂತಿದ್ದೆ. ಸುಮಾರು 20-30 ನಿಮಿಷಗಳ ಪ್ರಯಾಣ ಶಿಲ್ಪನ ಮನೆಗೆ. ಅಷ್ಟು ಹೊತ್ತು ಅವ್ನ ಜೊತೆ ಏಕಾಂತದಲ್ಲಿ ಇದ್ದ ನಾನು ಈ ಲೋಕದಲ್ಲೇ ಇರಲಿಲ್ಲ.ಅವನ ಬಗ್ಗೆ ಕನಸು ಕಾಣ್ತಾ ಇದ್ದೆ. ಹಾಗೇ ಅವನನ್ನು ಗಟ್ಟಿಯಾಗಿ ತಬ್ಬಿ ಹಿಡಿದು ಜೀವನವಿಡೀ ಅವನ ಜೊತೆನೇ ಇರ್ಬೇಕು .....ಹೀಗೇ ನಮ್ಮಿಬ್ಬರ ಪ್ರಯಾಣ ಸಾಗ್ತಾನೇ ಇರ್ಬೇಕು....ಇನ್ನು ಏನೇನೋ ....!!!! ಅವ್ನು ಹೊರಡೋಕ್ಕಿಂತ ಮೊದ್ಲೇ ನನಗೆ ಹೇಳಿದ್ದ. "ತೇಜೂ, ಶಿಲ್ಪನ ಮನೆಗೆ ಹೋಗೋ ಮುಂಚೆ ಸ್ವೀಟ್ಸ್ ತೆಗೋಬೇಕು, ನೆನಪು ಮಾಡು ಅಂತ.." ನಾನೊಂದು ಮಂಕುದಿಣ್ಣೆ ತರ ಅವನ ಧ್ಯಾನದಲ್ಲಿ ಮರೆತೇ ಬಿಟ್ಟಿದ್ದೆ. ಅವನು ಯಾವುದೋ ಅಂಗಡಿ ಮುಂದೆ ಗಾಡಿ ನಿಲ್ಸಿ ಸಿಹಿತಿಂಡಿಗಳು, ಹೂವು ಎಲ್ಲಾ ಖರೀದಿ ಮಾಡಿದ್ರೆ ನನಗೇ  ನಾಚಿಕೆ ಆಯ್ತು. ಎಂಥ ಮರೆವು ನನಗೆ...ಛೆ...!!!!

ಅಂತೂ ಇಂತೂ ಅವಳ ಮನೆ ತಲುಪಿ, ಅಭಿ ಅವಳು ಕೊಟ್ಟ ತಿಂಡಿ ತಿಂತಾ ಕಾಫಿ ಕುಡಿತಾ ಇದ್ರೆ ನಾನು ತಿಂಡಿ ತಟ್ಟೆ ಹಿಡ್ಕೊಂಡು, ಕನಸಿನಲ್ಲಿ ಮುಳುಗಿದ್ದೆ. ಕೊನೆಗೆ ಶಿಲ್ಪನೇ, ನನ್ನನ್ನು ಎಚ್ಚರಿಸಿ, "ಯಾಕೆ ತೇಜೂ...ತಿಂಡಿ ಚೆನ್ನಾಗಿಲ್ವನೇ...??? " ಅಂದ್ರೆ, ನಾನು "ಚೆನ್ನಾಗಿದೆ ಕಣೆ, ಈಗಷ್ಟೇ ;ಐಸ್ಕ್ರೀಮ್ ತಿಂದು ಬಂದ್ನಲ್ಲ , ಹೊಟ್ಟೆ ತುಂಬಿದೆ" ಅಂತ ಸುಳ್ಳು ಹೇಳಿದ್ದೆ. ಅವ್ನು ನನ್ನನ್ನು ಅಲ್ಲಿ ಬಿಟ್ಟು, " ಮುಂದಿನ ವಾರ ಬಂದು ಕರ್ಕೊಂಡು ಹೋಗ್ತೀನಿ ಕಣೆ ತೇಜೂ, ರೆಡಿಯಾಗಿರು, ಅಲ್ಲಿತನಕ ನಿನ್ನ ಫ್ರೆಂಡ್ ಜೊತೆ ಆರಾಮಾಗಿರು " ಅಂತ ನನ್ನನ್ನು ಬಿಟ್ಟು ಹೋಗಿದ್ದ. ಅವತ್ತಿಡೀ ಅವನದ್ದೇ ಧ್ಯಾನ. ಅವನು ಹಾಕಿದ್ದ ಪರ್ಫ್ಯೂಮ್ನ ನವಿರಾದ ಪರಿಮಳ ಇನ್ನು ನನ್ನ ಜೊತೆ ಹಾಗೆ ಬಿಟ್ಟು ಹೋಗಿದ್ದ. ಶಿಲ್ಪ ಪ್ರತಿದಿನ ಅವಳ ಮನೆ ಹತ್ತಿರ ಇರುವ ಎಲ್ಲಾ ವಿಶೇಷ ಸ್ಥಳಗಳಿಗೆ ಕರ್ಕೊಂಡು ಹೋಗಿ ತೋರಿಸ್ತಾ ಇದ್ಲು. ಒಂದು ವಾರ ಹೇಗೋ ಶಿಲ್ಪನ ಮನೇಲಿ ಕಳೆದು ಪುನಃ ಅಭಿ ದಾರಿ ಕಾಯ್ತಾ ಕೂತಿದ್ದೆ. ಅಂತೂ ಒಂದು ವಾರದ ನಂತರ ನನ್ನನ್ನ ಕರ್ಕೊಂಡು ಹೋಗಲಿಕ್ಕೆ ಬಂದ. ಪುನಃ ಅವನ ಸ್ಕೂಟರ್ನಲ್ಲಿ ಪ್ರಯಾಣ. ಅವನ ರೂಮ್ನಲ್ಲಿ ಗಾಡಿ ಇಟ್ಟು, ಅಲ್ಲಿಂದ ಮಾವನ ಮನೆಗೆ ಬಸ್ಸಿನಲ್ಲಿ ಜೊತೆಯಾಗಿ ಹೊರಟಿದ್ವಿ. ಈ ಬಾರಿ ದಿವಿ ಪುಟ್ಟಿ ನಮ್ಮ ಜೊತೆ ಇರ್ಲಿಲ್ಲ. ನಾನು ಮತ್ತು ಅಭಿ ಮಾತ್ರ. ಅದೇನೋ ಆನಂದ, ಅದೇನೋ ವಿಚಿತ್ರ ಸಂತೋಷ ನನ್ನ ಮನಸ್ಸು ಅನುಭವಿಸ್ತಾ ಇತ್ತು. ಆದರೆ ಇದ್ಯಾವುದರ ಬಗ್ಗೆಯೂ ಅಭಿಗೆ ಸಣ್ಣ ಸುಳಿವು ಸಿಗದಂತೆ ಜಾಗ್ರತೆ ವಹಿಸ್ತಾ ಇದ್ದೆ.  ಎಷ್ಟೋ ಬಾರಿ ಅಂದುಕೊಂಡಿದ್ದೆ, "ನಾನು ನಿನ್ನನ್ನು  ತುಂಬಾ ಇಷ್ಟ ಪಡ್ತಾ ಇದ್ದೀನಿ ಕಣೋ, ಅಭಿ " ಅಂತ ಹೇಳ್ತೀನಿ ಅಂತ, ಆದರೆ ಯಾಕೋ ಧೈರ್ಯಾನೇ ಸಾಕಾಗ್ತಾ ಇರ್ಲಿಲ್ಲ. ನನ್ನ ಮಾತುಗಳು ನನ್ನ ಮನಸ್ಸಲ್ಲೇ ಉಳಿದು ಬಿಟ್ಟಿತ್ತು. ಮಾವನ ಮನೆಗೆ ಹೋದ ಮೇಲೆ, ಅತ್ತೆ ಅಂತೂ ನನ್ನನ್ನು ತಮ್ಮ ಸೊಸೆ ತರಹ ನೋಡ್ತಾ ಇದ್ರು. . ಅವ್ರ ಪ್ರತಿ ಮಾತ್ನಲ್ಲೂ, ನಾನು ಅವ್ರ ಮನೆ ಸೊಸೆ ಆಗಿ ಬರಬೇಕು ಅಂತ ಅದೆಷ್ಟು ಆಸೆ ಇತ್ತು ಅಂತ ನನಗೆ ಅರ್ಥ ಆಗ್ತಾ ಇತ್ತು.

ಆದ್ರೆ ನಮ್ಮ ಎಲ್ಲ ಆಸೆಗಳಿಗು ಅವ್ನ ಒಂದೇ ಒಂದು ಮಾತು ಅಂತ್ಯ ಹಾಡಿಬಿಡ್ತು . ಶಿಲ್ಪನ ಮದುವೆ ಆಗಿ ಎರಡು ವರ್ಷ ಆದಮೇಲೆ ಅವನಿಗೆ ಇನ್ನೂ  ಒಳ್ಳೆ ಕೆಲಸ ಸಿಕ್ಕಿತ್ತು. ಆಗ ಅವನಿಗೆ 26 ವರ್ಷ. ಅವ್ನ ಮದುವೆ ಮಾತುಕತೆ ಮನೇನಲ್ಲಿ ಪ್ರಾರಂಭ ಆಗಿತ್ತು. ಅತ್ತೆಗೆ ಹೊರಗಡೆಯಿಂದ ಬೇರೆ ಹೆಣ್ಣು ತರೋ ಬದಲು, ಮನೆಯಲ್ಲೇ, ಸಂಬಂಧದಲ್ಲೇ ಇರೋ ನನ್ನ ಬಗ್ಗೆ ಹೆಚ್ಚಿನ ಅಕ್ಕರೆ ಇತ್ತು. ಅತ್ತೆ ಅವ್ನ ಹತ್ತಿರ ಈ ವಿಷಯ ಪ್ರಸ್ತಾಪ ಮಾಡ್ದಾಗ , "ಶಿಲ್ಪ ನಂಗೆ ಹೇಗೆ ತಂಗಿನೋ, ತೇಜೂನೂ ಹಾಗೇ ....ನಾನು ಯಾವತ್ತು ಅವಳನ್ನು ಆ ದೃಷ್ಟಿಯಿಂದ ನೋಡಿಲ್ಲ..." ಅಂತ ಒಂದೇ  ಮಾತಲ್ಲಿ ತೀರ್ಮಾನ ಕೊಟ್ಟು ಬಿಟ್ಟಿದ್ದ. ಇದನ್ನ ಅತ್ತೆ ಅಮ್ಮನಿಗೆ ಹೇಳೋವಾಗ ಕೇಳಿಸಿಕೊಂಡ ನನ್ನ ಹೃದಯ ಹಾಗೇ ನೀರಿನ ಮೇಲಿನ ಗುಳ್ಳೆಯಂತೆ ಒಡ್ದು ಹೋಗಿತ್ತು. ಆ ಮಾತನ್ನು ಕೇಳಿ ಸುಧಾರಿಸಿಕೊಳ್ಳಬೇಕಾದರೆ ತುಂಬಾ ಸಮಯ, ತಿಂಗಳುಗಳೇ ಹಿಡಿದಿತ್ತು. ಆದರೆ ಅವನಿಗದರ ಸುಳಿವೇ ಇಲ್ಲದೇ ಅವನು ನಿಶ್ಚಿಂತೆಯಿಂದ ಇದ್ದ.


ನಂತರ ಅಭಿ, ಮಾವನ ಸ್ನೇಹಿತರ ಮಗಳನ್ನ ಒಪ್ಪಿದ್ದು, ಅದರಂತೆ ನಿಶ್ಚಿತಾರ್ಥಕ್ಕೆ ದಿನ ಗೊತ್ತು ಮಾಡಿದ್ದು ಎಲ್ಲಾ ವಿಷಯಗಳು ನನ್ನ ಕಿವಿಗೆ ಬೀಳ್ತಾ ಇದ್ರೂ ನಾನು ನಿರ್ಲಿಪ್ತಳಾಗಿದ್ದೆ. ಅವ್ನ ನಿಶ್ಚಿತಾರ್ಥದ ದಿನ ಕಾಲೇಜಲ್ಲಿ ಪರೀಕ್ಷೆಯ ನೆಪ ಹೇಳಿ ಮನೆಯಲ್ಲೇ ಉಳಿದಿದ್ದೆ. ಅವ್ನನ್ನು ಆ ಹುಡುಗಿಯ ಪಕ್ಕ ನೋಡಕ್ಕೂ ನಂಗೆ ಇಷ್ಟ ಇರ್ಲಿಲ್ಲ. ಅಷ್ಟೊಂದು ಕದಡಿತ್ತು ನನ್ನ ಮನಸ್ಸು.

ಅವ್ನ ನಿಶ್ಚಿತಾರ್ಥವಾಗಿ ಎರಡು ತಿಂಗಳಲ್ಲೇ ಮದುವೆ ನಿಗದಿಯಾಗಿತ್ತು. ಅದಕ್ಕೂ ನಾನು ತಪ್ಪಿಸಿಕೊಳ್ಬೇಕು ಅಂತ ಶತಪ್ರಯತ್ನ ಮಾಡಿದ್ರೂ , ಅಪ್ಪ-ಅಮ್ಮನ ಬಲವಂತಕ್ಕೆ ಕೋಲೆಬಸವನಂತೆ ಅವರ ಹಿಂದೆ ಬಂದಿದ್ದೆ. ಎಲ್ಲರೂ ಮದುವೆಯ ಸಡಗರದಲ್ಲಿ ಇದ್ರೆ, ನಾನೊಳ್ಳೆ ಆಕಾಶ ತಲೆ  ಮೇಲೆ ಬಿದ್ದ ಹಾಗೆ ಮೂಲೆ ಹಿಡಿದು ಕೂತಿದ್ದೆ. ಎಲ್ಲರೂ ಕೇಳೊವ್ರೆ, "ತೇಜೂ, ಯಾಕೆ ಹುಶಾರಿಲ್ವನೆ..???" ಎಲ್ಲಾರಿಗೂ ನನ್ನ ಉತ್ತರ, 'ಸ್ವಲ್ಪ ತಲೆನೋವು....' ಅಂತು ಇಂತು ರಾತ್ರಿ ಕಳೆದು ಬೆಳಗಾದ್ರೆ ಮನೆಯಿಡೀ ಮದುವೆ ಸಡಗರ. ನಾನು ಯಾವುದೇ ಆಸಕ್ತಿ ಇಲ್ದೆ ನನ್ನ ಪಾಡಿಗೆ ನಾನು ಇದ್ದು ಬಿಟ್ಟಿದ್ದೆ. ಎಲ್ರೂ ಮದುವೆ  ಹಾಲ್ಗೆ ಹೋಗಿ ಅವರವರ ಗಡಿಬಿಡಿಯಲ್ಲಿ ಇದ್ರೆ, ನಾನು ಮುಂದೆ ನಡೆಯೋ ಶಾಸ್ತ್ರಗಳನ್ನು ಎದುರಿಸಲಾಗ್ದೆ ಒದ್ದಾಡ್ತಾ ಇದ್ದೆ. ಅವ್ನು ಅವ್ನ  ಪಾಡಿಗೆ ಅವನ ಜೀವನದ ರಸ ನಿಮಿಷಗಳನ್ನ ಎದುರು ನೋಡ್ತಾ ಇದ್ದ. ಧಾರೆಯ ಸಮಯ ಹತ್ತಿರ ಬರ್ತಾ ಇದ್ದಂತೆ, ನನ್ನೆದೆಯಲ್ಲಿ ನಗಾರಿಯಂತೆ ಹೃದಯ ಬಡ್ಕೊಳ್ತಾ  ಇತ್ತು. ನನ್ನ ಜಾಗದಲ್ಲಿ ಆ ಹುಡುಗೀನ್ನ ನೋಡಿ ಮನಸ್ಸು  ವಿಲವಿಲ ಒದ್ದಾಡ್ತಾ ಇತ್ತು. ನನ್ನ ತಂದೆ-ತಾಯಿ ಧಾರೆ ಎರೆದು ನನ್ನನ್ನ ಅವನಿಗೆ ಒಪ್ಪಿಸೋ ಬದಲು ಯಾರೋ  ಆ ಕೆಲ್ಸ ಮಾಡ್ತಾ ಇದ್ರು. ಯಾರಿಗೂ ಇದರ ಪರಿವೆಯೇ ಇಲ್ದಂತೆ ಆನಂದವಾಗಿದ್ರು.  ಯಾವಾಗ ಅವ್ನು  ಅವಳ ಕುತ್ತಿಗೆಗೆ ತಾಳಿ ಕಟ್ಟಿದ್ನೋ  , ಆ ನಿಮಿಷದಲ್ಲಿ ನನ್ನೆಲ್ಲಾ ಆಸೆಗಳು ಬೂದಿಯಂತೆ  ಸುಟ್ಟು ಹೋಯ್ತು.

ಮದುವೆ ಕಾರ್ಯಕ್ರಮ ಎಲ್ಲಾ ಮುಗ್ಸಿ, ಸಂಜೆ ಹೊಸ ಹೆಂಡತಿ ಜೊತೆ ಅವ್ನು  ಮನೆ ಕಡೆ ಹೆಜ್ಜೆ ಹಾಕ್ತಾ ಇದ್ರೆ, ನಾನು ಅಸಹಾಯಕಳಾಗಿ ನೋಡ್ತಾ ಇದ್ದೆ. ರಾತ್ರಿಗೆ ಎಲ್ರೂ ಅವನ ಮೊದಲ ರಾತ್ರಿಗೆ ರೂಮನ್ನ ನಗ್ತಾ ನಗ್ತಾ , ತಮಾಷೆ ಮಾಡ್ತಾ ಶೃಂಗಾರ ಮಾಡ್ತಾ ಇದ್ರೆ, ನಾನು ನಿರ್ಜೀವ ಶವದಂತೆ ಎಲ್ಲಾ ನೋಡ್ತಾ ಕೂತಿದ್ದೆ, ಒಳಗೊಳಗೆ ಮತ್ಸರದಿಂದ ಕುದೀತಾ ಇದ್ದೆ. ಆ ಸಮಯದಲ್ಲಿ ನನ್ನ ಕೋಪ, ಆ ಹೊಸ ಹುಡುಗಿಯ ಕಡೆ ತಿರುಗಿತ್ತು. ಏನೂ ಅರಿಯದ ಆಕೆ ನನ್ನ ವೈರಿಯಂತೆ ಕಾಣಿಸ್ತಾ ಇದ್ಲು. ನನ್ನವನಾಗಬೇಕಿದ್ದ ಹುಡುಗನ್ನ ಇವಳು ವರಿಸಿದ್ಲು ಅನ್ನೋ ದ್ವೇಷ ಮನಸ್ಸಲ್ಲಿ ಮೂಡ್ತಾ ಇತ್ತು. ರಾತ್ರಿ ಊಟದ ಸಮಯದಲ್ಲಿ ಅವ್ನು ಆ  ಹುಡುಗೀನ್ನ ಪ್ರೀತಿಯಿಂದ ಕಣ್ಣು ತುಂಬಿಸಿ ಕೊಳ್ತಾ ಇದ್ರೆ, ನನ್ನಿಂದ ಸಹಿಸಿಕೊಳ್ಳಕ್ಕೆ ಆಗ್ದೆ ಅರ್ಧ ಊಟ ಬಿಟ್ಟು ಎದ್ದಿದ್ದೆ.

ಅವತ್ತು ರಾತ್ರಿ ಎಲ್ರೂ ಅವ್ನನ್ನ ಗೋಳಾಡಿಸ್ತಾ, ಅವಳೊಂದಿಗೆ ರೂಮೊಳಗೆ ದಬ್ಬಿ ಮಜಾ ಮಾಡ್ತಾ, ಚುಡಾಯಿಸ್ತಾ ಇದ್ರೆ, ನಾನು ಹಲ್ಲು ಕಚ್ಚಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ತಾ ಇದ್ದೆ. ಆ ರಾತ್ರಿನ್ನ ಅದು ಹೇಗೆ ಕಳೆದೆನೋ, ಸಂಕಟದ ರಾತ್ರಿಯಾಗಿತ್ತು. ನಿದ್ದೆ ಇಲ್ಲದ ರಾತ್ರಿಯಾಗಿತ್ತು. ಕೆಟ್ಟ ಕಲ್ಪನೆಗಳ ರಾತ್ರಿಯಾಗಿತ್ತು. ಮನಸ್ಸು ಕಲಕಿ ಹುಚ್ಚು ಹಿಡಿದವಳಂತೆ ಆಗಿದ್ದೆ. ಆಗಲೇ ತೀರ್ಮಾನಿಸಿಬಿಟ್ಟಿದ್ದೆ. ಬೆಳಿಗ್ಗೆ ಅವ್ನು ಏಳೊದ್ರೊಳಗೆ ಅಲ್ಲಿಂದ ಊರಿಗೆ ಹೋಗಿ ಬಿಡಬೇಕು ಅಂತ. ಅಮ್ಮನನ್ನ ಅಪ್ಪನನ್ನ ಕಿರಿಕಿರಿ ಮಾಡಿ, ಹಠ ಮಾಡಿ  ಬೆಳಗ್ಗಿನ ಬಸ್ಸಿಗೆ ಹೊರಡಿಸಿದ್ದೆ. ಯಾರೆಷ್ಟೇ ಹೇಳಿದ್ರೂ ಕೇಳದೆ, ಅಪ್ಪ- ಅಮ್ಮ, ತಂಗಿಯ ಜೊತೆ ಪ್ರಯಾಣ ಬೆಳೆಸಿದ್ದೆ.

 ನಂತರ ಒಂದು ವರ್ಷ ಅದು ಇದು ಕ್ಲಾಸಿಗೆ ಸೇರಿ ಅಭಿನ್ನ  ಮರಿಯಕ್ಕೆ ಪ್ರಯತ್ನಿಸಿದ್ದೆ. ನಾನೆಷ್ಟೇ ಬೇಡ ಅಂತ ಕಿತ್ತೊಗೆದ್ರೂ ಅವ್ನ ನೆನಪುಗಳು ಪುನಃ ಪುನಃ ನನ್ನನ್ನ ಇನ್ನಿಲ್ಲದಂತೆ ಕಾಡ್ತಾ ಇತ್ತು. ಅದೇ ಸಮಯಕ್ಕೆ ನನ್ನ ಕಾಲೇಜು ಮುಗಿದಿತ್ತು. ಮನೆಯಲ್ಲಿ ನಂಗೂ ಮದುವೆಯ ಮಾತುಕತೆ ಪ್ರಾರಂಭ ಆಗಿತ್ತು. ನಾನು ಯಾವುದಕ್ಕೂ ವಿರೋಧ ವ್ಯಕ್ತ ಮಾಡ್ದೆ, ದೊಡ್ಡವರ ಮಾತಿಗೆ ಒಪ್ಪಿಗೆ  ಸೂಚಿಸಿದ್ದೆ. ಅದೇ ಸಮಯಕ್ಕೆ 'ಪ್ರದೀಪ್' ಜಾತಕ, ನನ್ನ ಜಾತಕದ ಜೊತೆ  ಕೂಡಿ ಬಂದಿತ್ತು. ಒಳ್ಳೆಯ ಕೆಲಸದಲ್ಲಿ ಇರುವ ಹುಡುಗ. ಅಪ್ಪ ಅಮ್ಮನಿಗೆ ಇಷ್ಟ ಆಗಿದ್ದ. ಅವನ ಮನೆಯವರೆಲ್ಲರಿಗೂ ನಾನು ಒಪ್ಪಿಗೆ ಆಗಿದ್ದೆ. ಮುಂದಿನ ಮಾತುಕತೆ ಶೀಘ್ರವಾಗಿ ಮುಗಿದಿತ್ತು. ನಾಲ್ಕು  ತಿಂಗಳ ಅಂತರದಲ್ಲಿ 'ಲಗ್ನ' ಗೊತ್ತು ಮಾಡಿದ್ರು.

ಮದುವೆಯ ಎಲ್ಲಾ ಕೆಲಸಗಳು ಭರಾಟೆಯಿಂದ ಸಾಗಿತ್ತು. ಮದುವೆಯ ಹಿಂದಿನ ದಿನವೇ ಮಾವ, ಅತ್ತೆ, ಅಭಿ, ಅವನ ಹೆಂಡತಿ, ಪುಟ್ಟಮಗಳು  ಎಲ್ಲಾ ಬಂದಿದ್ರು. ಅವನು ಬಂದದ್ದು  ಅಪ್ಪನಿಗೆ ನೂರಾನೆ ಬಲ ಬಂದಂತೆ ಆಗಿತ್ತು. ಎಲ್ಲಾ ಕೆಲಸಗಳ ಜವಾಬ್ದಾರಿ ನೋಡಿಕೊಂಡಿದ್ದ . ನಾನು ಅವನ ಬಗ್ಗೆ ಯಾವುದೇ ಭಾವನೆ ಇಲ್ಲದೆ ಶಾಂತವಾಗಿದ್ದೆ. ಅವನಿಗೂ ಅವನದೇ ಸಂಸಾರ ಇರೋವಾಗ, ನಾನ್ಯಾಕೆ ಇನ್ನೂ ಅವನನ್ನು ಇಷ್ಟ ಪಡ್ಲಿ...???? ನನಗೆ ನನ್ನದೇ ಹೊಸ ಜೀವನ ಕಾಯ್ತಾ ಇರ್ಬೇಕಾದ್ರೆ ಹಳೆಯದನ್ನು ನೆನಪಿಸಿ, ಮನಸ್ಸನ್ನು ಯಾಕೆ ರಾಡಿ ಮಾಡಿ ಕೊಳ್ಬೇಕು... ????  ಅಂತ ನನ್ನನ್ನು, ನನ್ನ ಮನಸ್ಸನ್ನು ನಾನೇ ಬಲವಂತವಾಗಿ  ಬದಲಾಯಿಸಿಕೊಂಡಿದ್ದೆ. !!!!!!!!

ನನ್ನ ಮದುವೆಯ ಕಾರ್ಯ ಸುಸೂತ್ರವಾಗಿ ನಡೆದಿತ್ತು. ಪ್ರದೀಪ್ ಜೊತೆ ಸಪ್ತಪದಿ ತುಳಿದಿದ್ದೆ. ಮನಸ್ಸಲ್ಲಿ ಇದ್ದ ಎಲ್ಲಾ ಗೊಂದಲಗಳನ್ನ ಅಗ್ನಿಯಲ್ಲಿ ಸುಟ್ಟಿದ್ದೆ. ಅವನ ಮನಸ್ಸಿನ, ಅವನ ಮನೆಯ ಹೆಣ್ಣಾಗಿ, ಅವನ ಜೊತೆ ಸಾಗಿದ್ದೆ. ಯಾವುದೇ ಕೆಟ್ಟ ಯೋಚನೆಯಿಲ್ಲದೆ ಸಂಸಾರ ಮಾಡಿದ್ದೆ. ಅವನ ಕಷ್ಟ ಸುಖಗಳಲ್ಲಿ ಅರ್ಧಾಂಗಿ ಆಗಿದ್ದೆ. ಅವ್ನು ನನ್ನ ಉಸಿರಾಗಿದ್ದ. ಇಬ್ಬರು ಮುದ್ದು ಮಕ್ಕಳ ಪ್ರೀತಿಯ ತಾಯಿಯಾಗಿದ್ದೆ. ಅವರ ಆಟ-ಪಾಠಗಳಲ್ಲಿ ಸಂತೋಷ ಕಂಡಿದ್ದೆ .

ಎಲ್ಲಾ ಸರಿ..... ಆದ್ರೆ...ಆದ್ರೆ.....!!!!!

ಅಭಿ,ಇವತ್ತ್ಯಾಕೋ, ಬೆಳಿಗ್ಗೆಯಿಂದ ನೀನೇ ಕಾಡ್ತಾ ಇದ್ದಿ ಕಣೋ...!!!! ಇಷ್ಟು ದಿನ ಇಲ್ಲದ್ದು ಇವತ್ತ್ಯಾಕೆ ಹೀಗೆ..??!!! ನನ್ನ ಒಂದು ಪ್ರಶ್ನೆಗೂ ಉತ್ತರಾನೇ ಸಿಕ್ತಾ ಇಲ್ಲ .....ಇವತ್ತು,.ನಿನ್ನ ಜೊತೆ ಕಳೆದು ಹೋದ ಒಂದೊಂದು ದಿನಗಳು ನೆನಪಾಗ್ತಾ ಇದೆ . ಎಲ್ಲಾ ನೆನಪಿನಲ್ಲೂ ನೀನೇ ತುಂಬಿದೀಯಾ....ಆಶ್ಚರ್ಯ ಆಗ್ತಾ ಇದಿಯಾ...?? ಸತ್ಯ ಕಣೊ ... ಮನಸ್ಸಲ್ಲಿ ಇದ್ದ ನೆನಪುಗಳು, ಇವತ್ಯಾಕೋ ಹೊರಹೊಮ್ತಾ ಇದೆ...ಆದರೆ ನಿನಗದರ ಗೋಚರವೇ ಇಲ್ಲ...ಎಂಥ ವಿಪರ್ಯಾಸ ನೋಡು.... ನಾನೊಬ್ಬಳೇ ಇಲ್ಲಿ ಒಂಟಿ ಗೂಬೆ ತರಹ ನಿನ್ನ ಜಪ ಮಾಡ್ತಾ ಇದ್ದೀನಿ...!!!

ಅಭಿ ಆಶ್ಚರ್ಯ ಅಂದ್ರೆ ನನಗಿಗಾಗ್ಲೇ, 45ರ ಪ್ರಾಯ, ನೀನು 50 ವರ್ಷದ  ಗಡಿ ಈಗ್ತಾನೆ ದಾಟಿದ್ದಿ. ಈ ಘಟನೆಗಳೆಲ್ಲಾ ನಡೆದು ಸುಮಾರು 25 ವರ್ಷಗಳೇ ಕಳೆದು ಹೋಗಿದೆ. ನನ್ನ ಇಬ್ಬರೂ ಮಕ್ಕಳು ನನ್ನ ಭುಜದೆತ್ತರಕ್ಕೆ ಬೆಳೆದಿದ್ದಾರೆ . ಕಾಲೇಜಿಗೆ ಹೋಗ್ತಾ ಇದ್ದಾರೆ. ಇನ್ನು ನಿನ್ನ ಮಗಳು ಮದುವೆ ವಯಸ್ಸಿಗೆ ಬಂದು, ಅಳಿಯ ಹುಡುಕುವ ತಯಾರಿಯಲ್ಲಿ ಇದ್ದಿಯಾ.. !!!! ಇಷ್ಟೆಲ್ಲಾ ಆದ್ರೂ ಅಷ್ಟು ಹಳೆಯ ಒಂದೊಂದು ನೆನಪು ನನ್ನ ಮನಸ್ಸಲ್ಲಿ ಈಗತಾನೆ ನಡೆದಿತ್ತು, ಅನ್ನೋ ಅಷ್ಟು ಹಚ್ಚ ಹಸುರಾಗಿದೆ ಕಣೋ, ಇದರರ್ಥ, ಇನ್ನು ನೀನು ನನ್ನ ಮನಸ್ಸಲ್ಲಿ ಹಾಗೆ ಇದ್ದೀಯ ಅಂತಾನಾ....!!!!. ನಾನು ಮೊದಲು ಅಂದುಕೊಂಡಿದ್ದೆ. ಇನ್ನು ನಿನಗೆ ನನ್ನ ಜೀವನದಲ್ಲಿ, ಮನಸ್ಸಲ್ಲಿ  ಯಾವುದೇ ಜಾಗ ಇಲ್ಲ ಅಂತ  ....!!! ಆದ್ರೆ ಆ ನನ್ನ ಲೆಕ್ಕಾಚಾರ ತಪ್ಪಾಯ್ತು ....ಎಷ್ಟಾದ್ರೂ ನೀನು ನನ್ನ ಮೊದಲ ಪ್ರೀತಿ ಅಲ್ವಾ..... ಯಾವುದೇ ಹುಡುಗಿ, ಅಷ್ಟು ಸುಲಭದಲ್ಲಿ ತನ್ನ ಮೊದಲ ಪ್ರೀತಿ ಮರೆಯಲ್ಲ. ಅವಳ ಉಸಿರು ಇರೋವರೆಗೂ ಅದು ಹಾಗೆ ಅವಳ ಜೊತೆ ನೆನಪಾಗಿ ಉಳಿದು ಬಿಡುತ್ತೆ ...ಅವನ ಜೊತೆ ಮದುವೆ ಆಗದಿದ್ರೂ, ಅವನ ಜೊತೆ ಕಳೆದ ಒಂದೊಂದು ಕ್ಷಣಗಳು  ಯಾವಾಗ್ಲೂ ಕಾಡ್ತಾನೆ ಇರುತ್ತೆ .....ಇವತ್ತು ಬಹುಶಃ ಆ ಸುಳಿಯಲ್ಲಿ ನಾನು ಸಿಕ್ಕಿ ಹಾಕ್ಕೊಂಡಿದೀನಿ ಅನ್ಸುತ್ತೆ....ಆ ನೆನಪುಗಳನ್ನು, ಈ ಕ್ಷಣಾನೂ ಆನಂದಿಸ್ತಾ ಇದ್ದೀನಿ ಕಣೋ...!!! ಇದು ತಪ್ಪು ಅಂತ ನನಗೊತ್ತು .... ಆದರೆ ನನ್ನ ಮನಸ್ಸಿಗೆ, ನೆನಪುಗಳಿಗೆ ಕಡಿವಾಣ ಹಾಕಕ್ಕೆ ಇವತ್ತು ನನ್ನಿಂದ ಸಾಧ್ಯ ಆಗ್ತಾನೇ  ಇಲ್ಲ ಕಣೋ .....!!!!

ಏನೇ ಆಗ್ಲಿ ಕಣೋ ಅಭಿ, ನೀನು  ನನ್ನ ಮಾವನ ಮಗಾನೇ, ನನ್ನ ಹಕ್ಕಿನ ಹುಡುಗಾನೇ, ಹಾಗೆ ನನ್ನ ಮನಸ್ಸಿನ ಮೂಲೆನಲ್ಲಿ, ಒಂದು ಕಡೆ ಇದ್ದುಬಿಡು. ಯಾವಾಗ್ಲಾದ್ರು ತುಂಬಾ..... ತುಂಬಾ....... ನೆನಪಾದಾಗ ಆ ಸವಿನೆನಪುಗಳನ್ನು ಮೆಲಕು ಹಾಕ್ತಾ ಇರ್ತೀನಿ....!!!!!!

27 comments:

 1. ಬಹಳ ಆಪ್ಯಾಯ ಅನುಭವದ ಮತ್ತು ಅಷ್ಟೇ ಹಿಡಿದಿಟ್ಟು ಓದಿಸಿಕೊಂಡು ಹೋಗುವ ನಾವೇ ಅನುಭವಿಸಿದ ಯಾವುದೋ ಘಟನೆಯನ್ನು ನೆನಪಿಸುವ ನಿರೂಪಣೆಯಲ್ಲೂ ಬಿಗುವನ್ನು (ಅಥವಾ ಹಿಡಿತ ಅಂದ್ರೆ ಸರಿಯೇನೋ..)ಬಿಟ್ಟುಕೊಡದ ಲೇಖನ..ತುಂಬಾ ಇಷ್ಟ ಆಯ್ತು.
  ಜೀವನವೇ ಹೀಗೆ...ಅದರಲ್ಲೂ ಬಾಲ್ಯದ ಪ್ರೀತಿಗೆ ವೈವಾಹಿಕ ಸಂಬಂಧದ ಕಟ್ಟುಗಳನ್ನು ಹಾಕಲಾಗುವುದಿಲ್ಲ...ಅದೊಂದು ಮಧುರ ಸಂಬಂಧ, ಭಾವನೆ ಅದು ಇದ್ದರೇ ಮನಸಿಗೆ ಮುದ... ಅದಕ್ಕಾಗಿಯೇ ಇರಬೇಕು...ನೀವು ಆ ನೆನಪು ಇರಲಿ ಎಂದು ಒಪ್ಪಿಕೊಂಡದ್ದು.... ನನ್ನ ವೀಕ್ ಎಂಡ್ ಮಸ್ತ್ ಆಯ್ತು..ಈ ದಿನ.

  ReplyDelete
  Replies
  1. ಅಜಾದ್ ಭಾಯ್...ನಿಜ, ಆ ಚಿಕ್ಕಂದಿನ ಸಣ್ಣ ಸಣ್ಣ ಕ್ರಶ್ಗಳನ್ನ ಮರೆಯಕ್ಕೆ ಆಗಲ್ಲ. ಅವೆಲ್ಲ ಚಂದದ ನೆನಪುಗಳು... :)) ಧನ್ಯವಾದಗಳು ತಮ್ಮ ಸುಂದರ ಪ್ರತಿಕ್ರಿಯೆಗೆ... :))

   Delete
 2. ಅಬ್ಬಾ...ಆತ್ಮೀಯವಾದ ಬರಹ ಅಕ್ಕಾ....
  ತುಂಬಾ ಇಷ್ಟವಾಯ್ತು ಬರೆದ ರೀತಿ...
  ಬರೆಯುತ್ತಿರಿ :)..
  ಹಿಂದೆ ನೀವು ಬರೆದ ಆ ಟ್ಯಾಕ್ಸಿಯ ಡ್ರೈವರನ ಕಥೆಯಲ್ಲಿ ಬರಿಯ ಆಕರ್ಷಣೆ ಇತ್ತು...
  ಇಲ್ಲಿ ಅದನ್ನು ಮೀರಿ ಮುಂದೆ ಹೋಗಿದ್ದೀರಿ...
  ಓದಿಸಿಕೊಂಡು ಹೋಗುವ ಶೈಲಿ...
  ಹಾಂ ಇದು ನನ್ನ ಸ್ವಂತದ ಅಭಿಪ್ರಾಯ..ಕಥೆಗೆ ಹೊಂದುತ್ತದೆಯೋ ಇಲ್ಲವೋ ಗೊತ್ತಿಲ್ಲ...
  ಅಲ್ಲಿ ಅಭಿಯ ತಾಯಿ ಮದುವೆಯ ಪ್ರಸ್ತಾಪ ಮಾಡಿದಾಗ ಕಥಾ ನಾಯಕಿಗೆ ಖುಷಿಯಾಗಿ ಮುಂದಿನ ಕನಸು ಕಾಣುವಂತೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬಹುದಿತ್ತೇನೋ ಅಂತ...ಆಮೇಲೆ ಅವನು ಬೇಡ ಎಂದಾಗ ಅವನ ಮೇಲೆ ಒಂದಿಷ್ಟು ಕೋಪ ಬರುವುದೂ ಸಹಜ ಎನಿಸಿತು...
  ಒಂದ್ಸಲ ಯೋಚನೆ ಮಾಡಿ ನೋಡಿ..ಗೊತ್ತಿಲ್ಲ ನನಗೆ ಈ ವಿಷಯಗಳೆಲ್ಲ...
  ನೋಡಿ ಒಂದ್ಸಲ ಆ ಕಡೆ ಎಂದಷ್ಟೇ ಹೇಳಬಲ್ಲೆ...
  ಬರೆಯುತ್ತಿರಿ...
  ಓದುವುದೊಂದೇ ನಮ್ ಕೆಲ್ಸಾ...
  ನಮಸ್ತೆ

  ReplyDelete
  Replies
  1. ಹೌದು ಚಿನ್ಮಯ್, ನಿಮ್ಮ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆ ಇದೆ. ಇನ್ನು ಚೆನ್ನಾಗಿ ನಿರೂಪಿಸಬಹುದಿತ್ತು. ಮುಂದಿನ ಬಾರಿ ಬರೆವಾಗ ಈ ಸಣ್ಣ ಸಣ್ಣ ವಿಷಯ ಗಮನವಿಟ್ಟುಕೊಳ್ತೇನೆ...ಧನ್ಯವಾದಗಳು ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.. :))

   Delete
 3. ಸುಮತಿ,
  ಹದಿಹರೆಯದ ಮಕ್ಕಳ ಪ್ರೇಮಕ್ಕೆ ಸಂಬಂಧಿಸಿದ ಅವರ ಮನಸ್ಸಿನ ಭಾವನೆಗಳು ಅತ್ಯಂತ ಬಾಲಿಶವಾಗಿರುತ್ತವಂತೆ. ಆದರೆ ಅವೆಲ್ಲವುಗಳ ಮಧ್ಯೆ ಒಂದು ಹೇಳಲಾಗದ ನವಿರಾದ ಪ್ರೇಮ ಕಾವ್ಯವೊಂದು ಹುಟ್ಟಿಕೊಂಡಿರುತ್ತದೆ. ಅದು ಕೊನೆಯುಸಿರೆಳೆದು ಮಣ್ಣಾದರೂ ಅಲ್ಲೆಲ್ಲೋ ಸುಳಿದಾಡುತ್ತಲೇ ಇರುತ್ತದೆ. ಅಂಥದ್ದೊಂದು ನವಿರಾದ ಪ್ರೇಮ ಕಾವ್ಯವನ್ನು ಅತ್ಯಂತ ಜಾಗರೂಕವಾಗಿ ಎಲ್ಲಿಯೂ ಬೇಸರವಾಗದಂತೆ ನಮಗೆ ಉಣಬಡಿಸಿದ್ದೀರಿ. ಬಹುಶಃ ನಾನು ಓದಿದ ನಿಮ್ಮೆಲ್ಲ ಪೋಸ್ಟ್ ಗಳಲ್ಲಿ ಅತ್ಯಂತ ಇಷ್ಟವಾದದ್ದು ಎಂದು ಹೇಳಬಯಸುತ್ತೇನೆ.
  ನನ್ನ ನೆನ್ನೆಯ ಬ್ಲಾಗ್ ಗೆ ಏನು ಪ್ರತಿಕ್ರಿಯೆಗಳು ಬಂದಿರಬಹುದು ಅಂದು ನೋಡುವ ಮೊದಲೇ ನಿಮ್ಮ ಈ ಪೋಸ್ಟ್ ನ್ನು ಓದಿದೆ, ಅದೂ ಒಂದೇ ಗುಕ್ಕಿನಲ್ಲಿ!! Thanks for such posts.
  Keep Writing ಮಾಡ್ತಾ ಇರಿ!! :)

  ReplyDelete
  Replies
  1. Ohhh...thank u so much Santhosh.... :) ಈ ಲೇಖನ ತುಂಬಾ ಉದ್ದ ಆಯ್ತು ಅಂತ ನನ್ನ ಅನಿಸಿಕೆ. ಟೈಪ್ ಮಾಡಿ ಮಾಡಿ ನನಗೆ ಬೇಸರ ಬಂತು.. :) ಇನ್ನು ಅದೆಷ್ಟೋ ಸಾಲುಗಳು ಇತ್ತು, ಶಾರ್ಟ್ ಮಾಡಿ ಮಾಡಿ ಇಲ್ಲಿ ತಂಕ ತಂದು ನಿಲ್ಲಿಸಿದ್ದೇನೆ. ಇಷ್ಟಪಟ್ಟಿದ್ದಕ್ಕೆ ಇನ್ನೊಮ್ಮೆ ಧನ್ಯವಾದಗಳು.

   Delete
 4. tumbaa chennagi barediddeeri Madam, ellarigoo avaravara baalyada nenapannu saviyuvantide nimma kathe/anubhava. :) tumbaa ishta aaythu :)

  ReplyDelete
  Replies
  1. ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ಸುಬ್ರಮಣ್ಯ ಹೆಗ್ಡೆ ಅವರೆ..... :)

   Delete
 5. ಕೆದುಕಿದಷ್ಟೂ ಮುದನೀಡುವ ನೆನಪುಗಳಿರಲಿ
  ಬಗೆದ ಬಿಲಗಳಾಳ ಚಿನ್ನವೇ ಹೊಳೆಯಲಿ
  ಮೀಟುವೆಡೆಯೆಲ್ಲ ಸಿಹೀ ನೀರ ಕೊಳವಾಗಲಿ

  ಬಹಳ ಮುದನೀಡಿದ ಈ ಬರಹಕ್ಕೆ ನನ್ನ ನುಡಿ ಬಹುಮಾನವಿದು...

  ReplyDelete
  Replies
  1. ಓಹ್,ಬದರೀಜಿ....ಹೃದಯ ತುಂಬಿದ ಧನ್ಯವಾದಗಳು ತಮ್ಮ ಚಂದದ ಪ್ರತಿಕ್ರಿಯೆಗೆ... :))

   Delete
 6. Hey akka... superb.. thumba chennagide.. nanna nenapina putagaLannu omm e teresithu.. HeLalagade uLida mathugaLu aadaroo aaLavagi manassinoLage berooridavu ivu.. thumba apyayamanavagide nimma baraha... inthaha vichara ellara jeevanadalli ondalla ondu reeetiyalli nadediruttade alva?? hrudyavagisidakke thumbu hrudayada dhanyavadagaLu.. love you. keep on writing..... :)

  ReplyDelete
  Replies
  1. Apoorva thank u so much for your sweet reply... :) yaa, may it happens in everyones life. This is just a small imagination of mine. Thank u so much again ,,,love u tooo ... :))

   Delete
  2. Tumba chennagi imagine madkondu barediddira....idu nimma jeevenadalli nadeda satya ghatane yeno anno tharaha ittu.....

   Delete
 7. ಎಷ್ಟು ಸೊಗಸಾದ ಬೆಚ್ಚನೆಯ ಲಹರಿ! ನನ್ನ ಓದುವ ಲಿಸ್ಟಿನಲ್ಲಿ ನಿಮ್ಮ ಬ್ಲಾಗಿನ ಬುಕ್ ಮಾರ್ಕ್ ಬಹುದಿನದಿಂದ ಕಾಯುತ್ತಿತ್ತು. ಇವತ್ತು ಓದಿದೆ. ಸೊಗಸಾಗಿ ಬರೆಯುತ್ತೀರಿ. ಭಾಷೆ-ಭಾವ ಎರಡೂ ಹದವಾಗಿ ಬೆರೆತಿದೆ.

  ReplyDelete
  Replies
  1. ಮಂಜುನಾಥ ಸರ್, ತಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬು ಮನಸ್ಸಿನ ವಂದನೆಗಳು. :))

   Delete
 8. ಒಳ್ಳೆಯ ನಿರ್ದೇಶಕನಿಗೆ ಈ ಕಥೆ ಕೊಟ್ಟರೆ...ಸುಂದರವಾದ ಚಿತ್ರ ಕಥೆ ರಚಿಸಿ ಸುಮಧುರ ಹಾಡುಗಳನ್ನು ಸೇರಿಸಿ..ಸುಂದರ ತಾಣಗಳಲ್ಲಿ ಚಿತ್ರಿಸಿ ಒಂದು ಅದ್ಭುತ ಎನ್ನಿಸುವ ಭಾವನೆಗಳ ಲೋಕವನ್ನು ಪ್ರೇಕ್ಷಕರಿಗೆ ಕೊಡಬಹುದು. ಎಷ್ಟು ಸೊಗಸಾಗಿ ಬರೆದಿದ್ದೀರ..ಲೇಖನ ಸಲಿಸಾಗಿ ಓದಿಸಿಕೊಂಡು ಹೋಗಿದೆ ಎಂದರೆ ಅದರಲ್ಲಿ ನೀವು ಗುಪ್ತ ಗಾಮಿನಿಯ ಹಾಗೆ ಜೋಡಿಸಿರುವ ಕೌತುಕತೆ...ತುಂಬಾ ಸುಂದರ ಬರಹ...ಹಾಗೂ ಬಾಲ್ಯದ ಲೋಕದಿಂದ ಸಿಗಿದು, ಬಗೆದು, ಕೆತ್ತಿ ಸುಂದರವಾಗಿ ರಚಿಸಿರುವ ಒಂದು ಸುಮಧುರ ಶಿಲ್ಪ ಈ ಲೇಖನ....ಅಭಿನಂದನೆಗಳು ಒಳ್ಳೆಯ ಲೇಖನ ಕೊಟ್ಟದ್ದಕ್ಕೆ...

  ReplyDelete
  Replies
  1. ಓಹ್ ಶ್ರೀಕಾಂತ್, ತುಂಬಾ ಚಂದದ ಪ್ರತಿಕ್ರಿಯೆ. ಇದೊಂದು ಸಣ್ಣ ಪ್ರಯತ್ನವಷ್ಟೇ.... ಹೀಗೆ ತಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿ ಇರಲಿ. ಮತ್ತೊಮ್ಮೆ ಪ್ರೀತಿಯ ಧನ್ಯವಾದಗಳು.

   Delete
 9. ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಈ ಲೇಖನ ಓದಿ ನನ್ನ ಬಾಲ್ಯದ ಸವಿ ನೆನಪುಗಳು ಸವಿಯುವಂತೆ ಆಯಿತು .... ತುಂಬಾ ಧನ್ಯವಾದಗಳು.....

  ReplyDelete
  Replies
  1. ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ಮಣಿ ಮನೋಜ್... :) ಆಗಾಗ್ಗೆ ಬರ್ತಾ ಇರಿ ಬ್ಲಾಗ್ಗೆ.. :)

   Delete
 10. ಬಾಲ್ಯದ ದಿನಗಳು ನೆನಪಾದವು. ನನಗೂ ನನ್ನ ಅಜ್ಜನ ಮನೆ ಈಗ ಸೋದರಮಾವನ ಮನೆ

  ReplyDelete
 11. ಚಿಕ್ಕ ವಯಸ್ಸಿನ ಕ್ರುಶ್ ಗಳು ಮತ್ತು ಬೆಳೆಯುತ್ತಾ ಅದೇ ಬೇರೆ ಬದುಕೇ ಬೇರೆಯಾಗಿ ತಮ್ಮ ಮುಂದೆ ನಿಲ್ಲುವ ಬಗೆ.. ತನ್ನ ಜೊತೆಯಾದ ಬದುಕನ್ನೇ ಪ್ರೀತಿಸುತ್ತಾ ಸಣ್ಣದೊಂದು ಅಕ್ಕರೆ ನಡೆದು ಬಂದ ದಾರಿಯೆಡೆಗೆ ಇರಿಸುವ ರೀತಿ, ಇವುಗಳ ಕುರಿತಾದ ಚಂದದ ಬರಹ ಅಕ್ಕ...
  ನನಗಂತೂ ತುಂಬಾ ಇಷ್ಟ ಆಯಿತು.. :)

  ReplyDelete
  Replies
  1. ಥ್ಯಾಂಕ್ಯೂ ಸುಷ್ಮಾ (ಮೌನರಾಗ) ಇಷ್ಟಪಟ್ಟಿದ್ದಕ್ಕೆ... :)

   Delete
 12. THUMBA CHENNAGIDE MEDAM MANASINA BAVANEGALANNU CHENNAGI VEKTHA PADISIDHIRA

  ReplyDelete