Thursday 24 October 2013

ಅಮ್ಮಾ... ಎಲ್ಲಿದ್ದೀಯಾ....... ಬೇಗ ಬಾ..... !!!!!!


ನನ್ನ ತಂದೆಯ  ಬಗ್ಗೆ ಹೇಳಬೇಕಂದ್ರೆ ಸ್ನೇಹಜೀವಿ.   ತುಂಬಾ ಪ್ರತಿಭಾವಂತರು. ಗಣಿತದಲ್ಲಿ A1. ಕೊನೆಯ ದಿನಗಳವರೆಗೂ ನಮ್ಮ  ಅಂಗಡಿಯಲ್ಲಿ ಕ್ಯಾಲ್ಕ್ಯುಲೇಟರ್ ಇರಲಿಲ್ಲ.. ಎಲ್ಲ ಲೆಕ್ಕಾಚಾರವೂ ಮನಸ್ಸಲ್ಲೇ . ಕಸದಿಂದ ರಸ ತೆಗೆಯುವ ವ್ಯಕ್ತಿ.  ಅವರ ಪ್ರಕಾರ ಯಾವುದೇ ಚಿಕ್ಕ ವಸ್ತುವು ವೇಸ್ಟ್ ಅಲ್ಲ. ಎಲ್ಲವು ಉಪಯೋಗಕ್ಕೆ ಬರುವಂಥದ್ದು. ಗೊತ್ತಿರದ ವಿದ್ಯೆ ಇಲ್ಲ. ಎಲ್ಲದರಲ್ಲೂ ಅಚ್ಚುಕಟ್ಟು. ಚಂದದ ಕೆಲಸ.  ಪರ್ಫೆಕ್ಟ್ ಅನ್ನೋ ಶಬ್ದಕ್ಕೆ ಇನ್ನೊಂದು ಹೆಸರು. ಅತೀವ  ತಾಳ್ಮೆ ಸಮಾಧಾನದ ಗುಣ. ಇನ್ನೊಮ್ಮೆ ಅವ್ರ ಮಗಳಾಗಿ ಹುಟ್ಟಿದರೂ ಆ ಸ್ವಭಾವ ನನ್ನಲ್ಲಿ ಬರಲಿಕ್ಕಿಲ್ಲ. ಒಬ್ಬರಿಗೂ ನೋಯಿಸದ ಮನಸ್ಸು. ತಮಗೆ ನೋವು ಮಾಡಿದವರಿಗೂ ಒಳ್ಳೆಯದಾಗಲಿ ಅನ್ನೋ ಹಾರೈಕೆ. 

ತನ್ನ 3 ಅಥವಾ 4 ವರ್ಷ ವಯಸ್ಸಲ್ಲೇ ತಮ್ಮ ತಾಯಿಯನ್ನ ಕಳೆದುಕೊಂಡ ನನ್ನ ತಂದೆ ಒಂದಿನ ಆದ್ರೂ ಅದರ ಬಗ್ಗೆ ಮಾತಾಡುತ್ತಲೇ ಇರ್ಲಿಲ್ಲ.  ತಾಯಿಯನ್ನ ನೋಡಿದ ನೆನಪು ಸಹಾ ಅವರಿಗಿರಲಿಲ್ಲ. ಮನೆಯಲ್ಲಿ ಅವರ ತಾಯಿಯ ಒಂದು ಫೋಟೋ ಸಹ ಇರಲಿಲ್ಲ. ಅವರು ಬೆಳೆದಿದ್ದೆಲ್ಲ ಒಂದು ಕೂಡು  ಕುಟುಂಬದಲ್ಲಿ. ಮನೆ ತುಂಬಾ 25-30 ಜನ ... ಹೇಗೋ ದೊಡ್ಡವರಾಗಿದ್ರು. ಮನೆಗೆ ಯಾವಾಗಲೂ ಬಂದು ಹೋಗೋ ನೆಂಟರು.  ಯಾವಾಗಲೂ ಗಿಜಿಗಿಜಿ ಅನ್ನುತ್ತಿದ್ದ ಮನೆ. ಎಂಟನೆ ತರಗತಿವರೆಗೆ ಓದಿದ ಅವರು ತಮ್ಮ ತಂದೆಗೆ ಸಹಾಯ ಮಾಡಬೇಕೆಂದು ವಿಧ್ಯಾಭ್ಯಾಸವನ್ನ ಅರ್ಧಕ್ಕೆ ಬಿಟ್ಟು ಅಂಗಡಿ ಸೇರಿದ್ದರು. ನಮ್ಮ ಅಂಗಡಿ  ಊರಿನ   ಪ್ರಸಿದ್ಧ ಅಂಗಡಿಗಳಲ್ಲಿ ಒಂದು ಎಂದು ಹೆಸರು ಮಾಡಿತ್ತು. 

ಹೀಗೆ ದಿನಗಳು, ವರ್ಷಗಳು ಕಳೆದುಹೋಗಿತ್ತು. ವ್ಯಾಪಾರ ವ್ಯವಹಾರ ಅವರ ಮದುವೆ, ಅಕ್ಕ ತಂಗಿ ತಮ್ಮಂದಿರ   ಮದುವೆ, , ಕಷ್ಟ ಸುಖ  ಎಲ್ಲವು ಹೀಗೆ ಸಾಗುತ್ತ ಸಾಗುತ್ತ ದಿನಗಳು ಉರುಳಿ ಹೋಗ್ತಾ ಇತ್ತು. 


ತಮ್ಮ 70ನೆ ವಯಸ್ಸಿನ ಸಮಯದಲ್ಲಿ ಊರಿನ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ. ಆ ದಿನಗಳು ಅವರ ಜೀವನದ ಅತ್ಯಂತ ಸಂತಸದ ದಿನಗಳಾಗಿತ್ತು .  ಇದರ ಮಧ್ಯದಲ್ಲಿ ಒಂದು ಮಾತ್ರೆಯ ಅಡ್ಡ ಪರಿಣಾಮದಿಂದ ಆರೋಗ್ಯ ದಿನೇ ದಿನೇ ಹದಗೆಡ್ತಾ ಇತ್ತು. ಇನ್ನು ಅಂಗಡಿ ನೋಡಿಕೊಳ್ಳಲು ಸಾಧ್ಯ ಇಲ್ಲ ಎಂದು ತಾವು 55 ವರ್ಷಗಳಿಂದ ದುಡಿದ ಅಂಗಡಿಯನ್ನು ಮುಚ್ಚುವ ನಿರ್ಧಾರವನ್ನು ನನ್ನ ಬಲವಂತಕ್ಕೆ ಮಾಡಿದ್ದರು.  ಇದ್ದಕ್ಕಿದ್ದಂತೆ  ಒಮ್ಮೆ ರಕ್ತವಾಂತಿಯಾಗಿ ರಾತೋರಾತ್ರಿ ಮಣಿಪಾಲದ ಆಸ್ಪತ್ರೆಗೆ ದಾಖಲಾದಾಗ ತಪಾಸಣೆಯ ನಂತರ  ತಿಳಿದದ್ದು,  ಅವರ  ಲಿವರ್ ಸಂಪೂರ್ಣ ಹಾಳಾಗಿತ್ತು. ಒಂದಷ್ಟು ತಿಂಗಳು ಔಷಧಿ,  ವಿಶ್ರಾಂತಿ ಎಂದು ನನ್ನ ಮನೆಯಲ್ಲಿ ಇದ್ದು ಪುನಃ ಊರಿಗೆ ಹೋಗಿ ಅಲ್ಲಿಯ ಎಲ್ಲವನ್ನು ಒಂದಷ್ಟು ವ್ಯವಸ್ಥೆ ಮಾಡಿ ಪುನಃ ಅನಿವಾರ್ಯವಾಗಿ ಉಡುಪಿಗೆ ಮನೆ ಸ್ಥಳಾಂತರ ಮಾಡಿದ್ದರು. 

ಪ್ರತಿ ತಿಂಗಳು  ನಿರಂತರ  ಮಣಿಪಾಲದ ಆಸ್ಪತ್ರೆ ಭೇಟಿ. . .. ಹೀಗೆ ಸಾಗಿತ್ತು ಒಂದು ಒಂದೂವರೆ  ವರ್ಷ.   ಕೊನೆಕೊನೆಗೆ 20 ದಿನ ಆಸ್ಪತ್ರೆಯಲ್ಲಿ 10 ದಿನ ಮನೆಯಲ್ಲಿ.. ಒಂದೆಡೆ ಮಗಳು,  ಅಳಿಯನಿಗೆ ತೊಂದರೆ ಎಂದು ನೋವು ತಿನ್ನೋ ಮನಸ್ಸು.  ಎಷ್ಟೇ ಸಮಾಧಾನ ಮಾಡಿದರು ಮನಸ್ಸಲ್ಲೇ ಪುನಃ ಅದೇ ಕೊರಗು. 

ಕೊನೆಕೊನೆಯಲ್ಲಿ ಉಲ್ಫನಗೊಂಡ  ಕಾಯಿಲೆ.  ನಡೆಯಲು ಆಗದ ಪರಿಸ್ಥಿತಿ. ಮಲಗಿದಲ್ಲೇ ಎಲ್ಲವೂ. ಆಹಾರ ತಿನ್ನಲು ಶಕ್ತಿಯಿರದೆ ನಿತ್ರಾಣ ದೇಹ . ಎದುರಿಗೆ ಇರುವ ವ್ಯಕ್ತಿಯ ಗುರುತು ಸಿಗದಷ್ಟು ದೇಹ ಕೃಶ. ಈ ಕಡೆಯ ಪ್ರಜ್ಞೆ ಇಲ್ಲದೆ ಕೆಲವು ದಿನಗಳು.   ಮನೆಯಲ್ಲಿ ಹಾಸಿಗೆ ಮೇಲೆ ಮಲಗಿ ಮಲಗಿ ಬೆಡ್ sour. ಇದಕ್ಕೆ ಪ್ರತಿದಿನ ಡ್ರೆಸ್ಸಿಂಗ್ ಅವಶ್ಯಕತೆ ಜೊತೆಗೆ  ವಾಟರ್ ಬೆಡ್ ಕೂಡ.    ಇನ್ನು ಮನೆಯಲ್ಲಿ ಆಗದು ಎಂದು ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಸಾಗಾಟ.  ಇತ್ತ ಕಡೆ ಇರದ ಪ್ರಜ್ಞೆ.  ಏನೇನೋ ಹಳೆಯ ನೆನಪು ಆಗಿ ತಮ್ಮಷ್ಟಕ್ಕೆ ತಾವೇ ಮಾತಾಡೋ ಅಪ್ಪ .  ಕೊನೆಯ ವಾರದಲ್ಲಿ ಶುರುವಾದ ಡಯಾಬಿಟಿಸ್ ಖಾಯಿಲೆ.  control ಗೆ ಬಾರದಷ್ಟು ರಕ್ತದ ಒತ್ತಡ.  



ಸುಮಾರು 65-70 ವರ್ಷಗಳು ತಮ್ಮ ತಾಯಿಯ ಬಗ್ಗೆ ಎಂದೂ  ಮಾತಾಡದೆ ಇದ್ದ ಒಬ್ಬ ವ್ಯಕ್ತಿ ಪ್ರಜ್ಞೆ ಇಲ್ಲದಿದ್ದರೂ ಆ ತಾಯಿಯ ನೆನಪು ಮಾಡುತ್ತಿದ್ದರು. ಅದೆಷ್ಟು ವರ್ಷ ಆ ತಾಯಿಯನ್ನು ಚಿಕ್ಕಂದಿನಲ್ಲೇ  ಕಳೆದುಕೊಂಡ ದುಃಖ ತಮ್ಮ ಮನಸ್ಸಲ್ಲೇ ಇಟ್ಟುಕೊಂಡಿದ್ದರೋ ಅವೆಲ್ಲವೂ ಆ  ಕೊನೆಯ ದಿನಗಳಲ್ಲಿ ಹೊರಬಂದಿತ್ತು. 


ಮೊದಲೆಲ್ಲ ರೇಡಿಯೋದಲ್ಲಿ 'ಪುಣ್ಯಕೋಟಿ ' ಗೋವಿನ ಹಾಡು ಬರ್ತಾ ಇತ್ತು. ಆ ಹಾಡು ಅಪ್ಪನನ್ನ ಎಲ್ಲೋ ಸ್ವಲ್ಪ ಭಾವುಕರನ್ನಾಗಿ ಮಾಡ್ತಾ ಇತ್ತು ಅದು ಬಿಟ್ರೆ ಕೆಲವು ಸಿನಿಮಾದಲ್ಲಿ ತಾಯಿಯ ಬಗ್ಗೆ ಬರುವ ಕೆಲವು ಮನಕಲಕುವ ದೃಶ್ಯಗಳು... ಅದನ್ನೂ ವೀಕ್ಷಿಸಿದಾಗ ಎಲ್ಲೋ ಸ್ವಲ್ಪ ನೋವು ಪಡ್ತಿದ್ದರೇನೋ ... ಅದೂ ತುಂಬಾ ಅಪರೂಪಕ್ಕೆ.... ಎಂದೂ ಯಾರೆದುರಿಗೂ ತಮ್ಮ ನೋವನ್ನ ತೋರಿಸಿಕೊಂಡವರಲ್ಲ... 

ಆದರೆ ಆಸ್ಪತ್ರೆಯಲ್ಲಿ ಆ ಇಡೀ ಒಂದು   ದಿನ  'ಅಮ್ಮಾ ಎಲ್ಲಿದ್ದೀಯಾ..... ಬಾ.... ನನ್ನನ್ನು ನಿನ್ನ ಜೊತೆ ಕರ್ಕೊಂಡು ಹೋಗು'  ಅನ್ನೋ ಸಾಲನ್ನ   ಕರೆದು ಕರೆದು ಮೌನಕ್ಕೆ ಶರಣಾಗಿದ್ರು. ಆ ದಿನವಿಡೀ ಹತ್ತಿರವಿದ್ದ ನನ್ನ ಮತ್ತು ಅಮ್ಮನ ಪಾಲಿಗೆ ಅತೀವ ಸಂಕಟ ಪಟ್ಟ ದಿನವಾಗಿತ್ತು .  ಅದೇ ಅಪ್ಪನ  ಕೊನೆಯ ಮಾತಾಗಿತ್ತು. ನಂತರದ   ಒಂದೆರಡು ದಿನದಲ್ಲಿ  ಲೋಕವನ್ನೇ ತ್ಯಜಿಸಿದ್ದರು.

ಹೇಗಿದ್ದ ಮನುಷ್ಯ ಹೇಗಾಗಿ ಬಿಡ್ತಾರೆ ಅಂತ ತುಂಬಾ ಹತ್ತಿರದಿಂದ ನೋಡಿದ ಅನುಭವ.....

ಹೀಗೆ ಅನಿಸಿದ್ದು..... ಅದು ಯಾವುದೇ ಆತ್ಮೀಯ ವಸ್ತು ಅಥವಾ ವ್ಯಕ್ತಿ ಇರಲಿ, ಕಳೆದುಕೊಂಡರೆ ಮಾತ್ರ ಅದರ ಬೆಲೆ ಗೊತ್ತಾಗೋದು ... ಅದು ಕೈಗೆಟಕುವಂತಿದ್ದರೆ ತಾತ್ಸಾರ, ಅಸಡ್ಡೆ ... 

ಅದರಲ್ಲೂ ಅಮ್ಮ ... ಅವಳು  ಇದ್ದಾಗ ಆಕೆಯ  ಬೆಲೆ ತಿಳಿಯೋದು ತುಂಬಾ ಕಡಿಮೆ. ಅವಳನ್ನು ಯಾವಾಗ್ಲೂ ನೋಯಿಸೋದೆ ಹೆಚ್ಚು.... ಪ್ರೀತಿಯ  ಧಾರೆ ಎರೆಯೋ ಅವಳಿಗೆ  ನಮ್ಮಿಂದ ಸಿಗುವ ಉಡುಗೊರೆ ಅದು .....