Thursday, 13 December 2012

ಸಂಖ್ಯಾ ಮಹಾತ್ಮೆ....


ಸ್ನೇಹಿತರೆ ಇದನ್ನು ಲಘು ಹಾಸ್ಯಬರಹ  ಎಂದು ಓದಿ.. ಇದೇನಪ್ಪ ದೇವಿ ಮಹಾತ್ಮೆ ಇದ್ದಂಗೆ ಸಂಖ್ಯಾ ಮಹಾತ್ಮೆ ಅಂದುಕೊಂಡ್ರಾ... ಅದರ ಕಥೆ ಹೇಳ್ತೀನಿ ಕೇಳಿ...ಮನುಷ್ಯನಿಗೆ ಜೀವನದಲ್ಲಿ ಏನೇನೋ ಹುಚ್ಚು ಇರುತ್ತೆ.. ಕೆಲವು ಅಪಾಯಕಾರಿ ಆದರೆ ಇನ್ನು ಕೆಲವು, ಯಾರಿಗೂ ತೊಂದರೆ ಆಗದೆ ಇರುವಂಥದ್ದು..ಕೆಲವರ  ಹುಚ್ಚು ಕೆಲಸಗಳು, ಬೇರೆಯವರ  ಕಣ್ಣಿಗೆ ಕಾಣ್ಸತ್ತೆ...ಇನ್ನು ಕೆಲವರ ಹುಚ್ಚು ಅವರ  ಮನಸ್ಸಲ್ಲೇ ಇದ್ದು, ಅವರು ಮಾತ್ರ ಅದನ್ನ ಅನುಭವಿಸ್ತಾ ಇರ್ತಾರೆ..

ನನ್ನ ಬಗ್ಗೆ ಹೇಳ್ಬೇಕಂದ್ರೆ, ನನಗೂ ಒಂದು ರೀತಿ ಈ ಹುಚ್ಚು(ಕ್ರೇಜ್) ಇದೆ ಅನ್ನಬಹುದು. ಇದು ಸಹಾ ಒಂದು ರೀತಿ ಮನಸ್ಸಿನ್ನಲ್ಲೇ ಯಾವಾಗಲೂ ಮೂಡೋ ಒಂದು ತರಹದ ನಂಬಿಕೆ,ವಿಶ್ವಾಸ,ಕಲ್ಪನೆ. ಈ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನ್ನಷ್ಟಕ್ಕೆ ನಾನೇ ನಗ್ತೀನಿ... ಇದರಿಂದ ಲಾಭ ಅಥವಾ ನಷ್ಟ ಇಲ್ಲ ಅಂತ ಗೊತ್ತಿದ್ದರೂ ನಿತ್ಯದ ಜೀವನದಲ್ಲಿ ಮುಂದುವರಿತಾ ಹೋಗ್ತಾನೆ  ಇದೆ.... :-)


ನನಗೆ "ಸಂಖ್ಯೆ ಒಂದು" ಅಂದ್ರೆ ಅದೊಂಥರಾ ಪ್ರೀತಿ...ಪ್ರತಿ ಬಾರಿಯೂ, ಎಲ್ಲೆಡೆಯೂ ಅದನ್ನು ಹುಡುಕ್ತಾ ಇರ್ತೇನೆ. ಅದೊಂಥರಾ "ಅದೃಷ್ಟ " ಅಥವಾ "ಲಕ್ಕಿ ನಂಬರ್" ಅಂತಾರಲ್ಲ ಆ ಭಾವನೆ....

 ನಾನು ಹುಟ್ಟಿದ್ದು "ಒಂದನೇ ತಾರೀಕು", ಜೊತೆಗೆ ತಿಂಗಳು ಅಕ್ಟೋಬರ್ ಅಂದ್ರೆ ಹತ್ತನೇ ತಿಂಗಳು ..ಅದರಲ್ಲೂ "ಒಂದು" ಇದೆ..ಹೀಗಾಗಿ ಸಂಖ್ಯೆ ಒಂದು  ನನ್ನನ್ನು ಜನ್ಮದಿಂದ ಹಿಂಬಾಲಿಸಿ ಬರ್ತಾ ಇದೆ ಅನ್ಸುತ್ತೆ...ಬಹುಷಃ  ಇದು ನನ್ನ ಕೊನೆ ಉಸಿರು ಇರೋವರೆಗೋ ಹೀಗೆ ಮುಂದುವರಿತದೋ ಏನೋ ಎಂದು ಕೆಲವೊಮ್ಮೆ ಅನಿಸುವುದುಂಟು.....


ನನಗೆ ನೆನಪಿದ್ದ ಹಾಗೆ ಇದು ತುಂಬಾ ವರ್ಷ ಹಿಂದಿನ ನೆನಪು. ಹತ್ತನೇ ತರಗತಿ ಓದುತ್ತಿದ್ದಾಗ ಮಾರ್ಚ್-ಏಪ್ರಿಲ್ ಪರೀಕ್ಷೆಯಲ್ಲಿ,  ಹಾಲ್ ಟಿಕೆಟ್ ನಂಬರ್ ಸುಮಾರು ಆರು ಅಥವಾ ಏಳು ಸಂಖ್ಯೆಯದಿತ್ತು . ಆ ಪರೀಕ್ಷೆ ಕೊಠಡಿಯಲ್ಲಿ ಕುಳಿತು ಎಲ್ಲಾ ಸಂಖ್ಯೆಯನ್ನು ಕೂಡಿಸಿ ಎಲ್ಲಾದರೂ ಒಂದು ಬರುತ್ತಾ ಎಂದು ಲೆಕ್ಕ ಮಾಡಿದ್ದು ಈಗಲೂ ನೆನಪಿದೆ. ಆ ಸಂಖ್ಯೆ ಒಂದು   ಬಂದರೆ ಪಾಸಾಗ್ತಿನಿ ಅನ್ನೋ ಹುಚ್ಚು ಕಲ್ಪನೆ... :-)

ಈ ಚಾಳಿ ಈಗಲೂ ಮುಂದುವರಿತಾ ಇದೆ. ಇತ್ತೀಚಿನ ನೆನಪೆಂದರೆ, ನನಗೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ . ಪ್ರತಿ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನೇರಪ್ರಸಾರವನ್ನು 'ಈ ಟಿ ವಿಯಲ್ಲಿ " ಪ್ರಸಾರ ಮಾಡುತ್ತಾರೆ. ಕಳೆದ ವರ್ಷವೂ ಮಧ್ಯಾಹ್ನ ಹೀಗೆ ಟಿ ವಿ ನೋಡ್ತಾ ಇದ್ದೆ. ಮಂಗಳಾರತಿಯ ಸಮಯ. ಹಿನ್ನಲೆಯಲ್ಲಿ ಡಾ. ರಾಜಕುಮಾರ್ ಅವರ ಈ ಹಾಡು ಬರ್ತಾ ಇತ್ತು. 

"ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ,ಸ್ಮರಣೆ ಮಾತ್ರದಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ...
ಯೋಗಿ ಬರುವನಮ್ಮ, ಶುಭ ಯೋಗ ಬರುವುದಮ್ಮ , ರಾಘವೇಂದ್ರ ಗುರುರಾಯ ಬಂದು ಭವ  ರೋಗ ಕಳೆವನಮ್ಮ ...
ಮನವ ತೊಳೆಯಿರಮ್ಮ , ಭಕ್ತಿಯ ಮಣೆಯ  ಹಾಕಿರಮ್ಮ , ಧನ್ಯದಿಂದ ಕರೆದಾಗ ಬಂದು ಒಳಗಣ್ಣ ಬೆರೆವನಮ್ಮ ...
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ , ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ ....
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ, ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ.........." 

ಈ ಹಾಡು ಕೇಳ್ತಾ ಆರತಿ ನೋಡ್ತಾ, ಗೋಡೆ ಮೇಲಿದ್ದ ಗಡಿಯಾರ ನೋಡಿದ್ರೆ "ಸರಿಯಾಗಿ  ಒಂದು ಘಂಟೆ ಸಮಯ"...ಅದೇಕೋ ಗುರುರಾಯರ ಆಶೀರ್ವಾದ ಆಯ್ತು ಅನ್ನೋ  ಸಂತೋಷದ ಕಲ್ಪನೆ  .... :-)

ಇನ್ನು ಗಮ್ಮತ್ತಿನ ವಿಷಯ ಅಂದ್ರೆ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕುತೂ ಹಲದಿಂದ  ಗೂಗಲ್ ನಲ್ಲಿ "ನ್ಯುಮರೋಲಾಜಿ" ಬಗ್ಗೆ ಓದಿದ್ದು ..ಸಂಖ್ಯೆ  ೧ ಅಂದರೆ ಸೂರ್ಯ ಅದಕ್ಕೆ ಅಧಿಪತಿ,  ಒಂದನೇ ತಾರೀಕಿನಲ್ಲಿ ಹುಟ್ಟಿದವರಿಗೆ ಯಾವುದು ಶುಭ,ಅಶುಭ ಇತ್ಯಾದಿ  ಅನ್ನುವ ಎಲ್ಲಾ  ವಿಷಯ ಓದಿದ್ದು ... ಈ ವಿಷಯ ನಗು ಬರುವಂಥಹದ್ದೆ  ಆದ್ರೂ ಸತ್ಯ ಘಟನೆ... :-) 

ಪ್ರಪಂಚದಲ್ಲಿ ಎಲ್ಲ ಮನಸ್ಥಿತಿಯ ಜನರು ಇರ್ತಾರೆ ..ಅದರಲ್ಲಿ ನಾನು ಒಬ್ಬಳು. ಸ್ನೇಹಿತರೆ ನನ್ನ ಹಾಗೆ ನಿಮಗೂ ಏನಾದರೂ ಈ ರೀತಿಯ ಅಭ್ಯಾಸಗಳು ಇದ್ದರೆ ಮುಕ್ತವಾಗಿ ಹಂಚಿಕೊಳ್ಳಿ ....

ಪ್ರೀತಿಯಿಂದ

ಸುದೀಪ....


14 comments:

 1. ನಿಮ್ಮನ್ನ ಸಹೋದರಿ ಅನ್ನುವುದಕ್ಕೆ ಮನಸು ತುಂಬಾ ಇಷ್ಟವಾಗುತ್ತದೆ..ನಿಮ್ಮ ಬ್ಲಾಗಿನಲ್ಲಿ ಯಾವ ವಿಷಯ ಇಲ್ಲ ಎನ್ನುವ ಭಾವನೆ ಕಾಡುತ್ತದೆ.ಚಟ್ನಿ ಪುಡಿ ಯಿಂದ ಶುರುವಾದ ಲೇಖನ..ಎಲ್ಲ ವಿಷಯಗಳನ್ನು ಚಟ್ನಿ ಮಾಡಿ ಅವಿರತವಾಗಿ ಮುಂದುವರೆಯುತ್ತಿದೆ..ಸಂಖ್ಯೆ ಇರಬಹುದು, ಬಣ್ಣ ಇರಬಹುದು, ಅಥವಾ ಬೇರೆ ಇನ್ನೇನಾದರು ವಿಷಯಗಳು ಕೆಲವರನ್ನು ಕಾಡುವುದು ಸಹಜ...ಸುಂದರವಾಗಿ ಮೂಡಿಬಂದಿದೆ..ಅಭಿನಂದನೆಗಳು..
  ನನ್ನ ನಂಟು..ಎಂಟರ ಜೊತೆ..ಹತ್ತನೇ ತರಗತಿ ಮುಗಿದಾಗ ಮುಂದೆ ಏನು ಓದುವುದು ಎನ್ನುವ ಗೊಂದಲದಲ್ಲಿ..ಪಿ.ಯು.ಸಿ.ಗೆ ಲೇಟ್ ಆಗಿ ಸೇರಿದೆ..ಅಂದಿನ ದಿನಾಂಕ 08.08.88, ಕಟ್ಟಿದ ಶುಲ್ಕದ ಒಟ್ಟು ಮೊತ್ತ 8ಕ್ಕೆ ಸಮ ಆಗಿತ್ತು...ನನ್ನ ಹೆಸರು ಇಂಗ್ಲಿಷ್ ನಲ್ಲಿ ಎಂಟು ಅಕ್ಷರಗಳ ಸಮ್ಮಿಲನ, ನನ್ನ ದ್ವಿಚಕ್ರ ವಾಹನದ ನಂಬರ್ ಕೂಡಿದರೆ ಬರುವುದು 8, ಹಾಗೆ ನನ್ನ ನಾಲ್ಕು ಚಕ್ರದ ವಾಹನದ ಸಂಖ್ಯೆ ಕೂಡ...ನನ್ನ ಮನೆ ದೂರವಾಣಿಯ ಸಂಖ್ಯೆ ಕೂಡಿದಾಗ ಬರುವುದು ಎಂಟು, ಮೊಬೈಲ್ ಸಂಖ್ಯೆಯನ್ನು ಗಣಿತದ ಲೆಕ್ಕಾಚಾರ ಮಾಡಿದರೆ ಸಿಗುವುದು ಎಂಟು, ಹತ್ತನೇ ತರಗತಿಯ ಹಾಲ್ ಟಿಕೆಟ್ ಎಂಟು ಸಂಖ್ಯೆ ಇತ್ತು....ಮದುವೆಗೆ ಮೂರು ನಾಲ್ಕು ದಿನಾಂಕಗಳನ್ನು ಕೊಟ್ಟಿದ್ರು..ಅದರಲ್ಲಿ ಎಂಟು ಬಂತು..ಅದನ್ನೇ ಆಯ್ಕೆ ಮಾಡಿದೆ..ಹೀಗೆ ಸಾಗಿದೆ ಎಂಟರ ನಂಟು..

  ReplyDelete
  Replies
  1. ಶ್ರೀಕಾಂತ್ ನಿಜ ಹೇಳ್ಬೇಕಂದ್ರೆ ಇದನ್ನು ಬರೆಯಕ್ಕೆ ಸುಮಾರು ದಿನದಿಂದ ಹಿಂದೇಟು ಹಾಕ್ತಾ ಇದ್ದೆ...ಯಾರಾದರೂ ತಪ್ಪಾಗಿ ಭಾವಿಸ್ತಾರ...ಏನೆಲ್ಲಾ ಕಲ್ಪಿಸಬಹುದು ಎಂಬ ಸಣ್ಣ ಹಿಂಜರಿಕೆ...ಕೊನೆಗೆ ಅನ್ನಿಸ್ತು...ನನ್ನ ಹಾಗೆ ಅದೆಷ್ಟೋ ಜನ ಇರಬಹುದು ಅಂತ ಗಟ್ಟಿ ಮನಸು ಮಾಡಿ ಪ್ರಕಟಿಸಿದೆ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... :)

   Delete
 2. ಸಂಖ್ಯಾ ಶಾಸ್ತ್ರದ ಲಘು ಹಾಸ್ಯ ಬರಹ ಮಜವಾಗಿತ್ತು.

  ಅಂದಹಾಗೆ ಅಕ್ಟೋಬರ್ ಒಂದರಂದು ಹುಟ್ಟಿದವರು ಒಳ್ಳೆಯ ಅಡುಗೆ ನಿಪುಣರು, ಸ್ನೇಹಿತರನ್ನು ಪದೇ ಪದೇ ಊಟಕ್ಕೆ ಕರೆದು ಹೊಟ್ಟೆ ತುಂಬಾ ತಿನಿಸುಗಳನ್ನು ಮಾಡಿ ಹಾಕುವವರೂ ಆಗಿರುತ್ತಾರಂತೆ ಹಾದೇ?

  ನೀವು ಹೇಳಿ ಕೇಳಿ ನಂಬರ್ ಒನ್ ಅಲ್ವಾ ಮತ್ತೆ.

  ReplyDelete
  Replies
  1. ಧನ್ಯವಾದಗಳು ಬದರಿಜಿ... ಒಂದನೇ ತಾರೀಕಿನಂದು ಹುಟ್ಟಿದವರು ಅಡಿಗೆಯಲ್ಲಿ ನಿಪುಣರಿರಬಹುದು...ಆದರೆ ನಾನಂತೂ ಕೆಟ್ಟ ಕುಕ್... :)

   Delete
 3. ನಂಬರೋ ನಂಬರ್... ನನಗೆ ಸಂಖ್ಯಾ ಮಹಾತ್ಮೆ ಆಗಿಲ್ಲ ಅನ್ಸುತ್ತೆ :) ಚೆನ್ನಾಗಿ ಬರೆದಿದ್ದೀರಿ ಸುಮತಿ..

  ReplyDelete
  Replies
  1. ಓದಿದ್ದಕ್ಕೆ ವಂದನೆಗಳು...ಮನಸು(ಸುಗುಣ)... :)

   Delete
 4. ಅಂಕೆಯ ನಂಟು.... ನನಗೇನೂ ಹಾಗಿಲ್ಲ.... ನೀವು ಬರೆದ ರೀತಿ ಚೆನ್ನಾಗಿದೆ....

  ReplyDelete
  Replies
  1. ಧನ್ಯವಾದಗಳು ದಿನಕರ್ ಸರ್....

   Delete
 5. ಚೆನ್ನಾಗಿದೆ :) ಅಂದಹಾಗೆ ನನ್ನ ನಂಬರ್ ಐದು :)

  ReplyDelete
 6. ಹಮ್...ಒಂದು..ಅದರ ಬಗ್ಗೆಯೇ "ಒಂದು" ಲೇಖನ...
  ಚೆನಾಗಿತ್ತಕ್ಕಾ..
  ಹಾಂ ನನ್ನ ನೆಚ್ಚಿನ ಸಂಖ್ಯೆ ಮೂರು...
  ಬರೆಯುತ್ತಿರಿ ...
  ನಮಸ್ತೆ..

  ReplyDelete
  Replies
  1. ಧನ್ಯವಾದ ಚಿನ್ಮಯ್... :)

   Delete
 7. ನಾನು ಸ್ನೇಹಿತರ ಜೊತೆ ಇದ್ದಾಗ ಎಲ್ಲರೂ ನನ್ ಹತರಾನೆ ಅಡಿಗೆ ಮಾಡೋಕೆ ಹೇಳ್ತಾ ಇದ್ರು ....ಇವತ್ತೇ ಗೊತ್ತಾಗಿದ್ದು ಇದರ ಹಿಂದಿನ ಮರ್ಮ......ನಾನ್ ಹುಟ್ಟಿದ್ದು ಒಂದನೇ ತಾರೀಕು ನೋಡಿ.....ಧನ್ಯವಾದಗಳು ತಿಳಿಯ ಪಡಿಸಿದ್ದಕ್ಕೆ....

  ReplyDelete
  Replies
  1. ಧನ್ಯವಾದಗಳು...ಅಶೋಕ್ ಅವರೆ ... :)

   Delete