Thursday 13 December 2012

ಸಂಖ್ಯಾ ಮಹಾತ್ಮೆ....


ಸ್ನೇಹಿತರೆ ಇದನ್ನು ಲಘು ಹಾಸ್ಯಬರಹ  ಎಂದು ಓದಿ.. ಇದೇನಪ್ಪ ದೇವಿ ಮಹಾತ್ಮೆ ಇದ್ದಂಗೆ ಸಂಖ್ಯಾ ಮಹಾತ್ಮೆ ಅಂದುಕೊಂಡ್ರಾ... ಅದರ ಕಥೆ ಹೇಳ್ತೀನಿ ಕೇಳಿ...ಮನುಷ್ಯನಿಗೆ ಜೀವನದಲ್ಲಿ ಏನೇನೋ ಹುಚ್ಚು ಇರುತ್ತೆ.. ಕೆಲವು ಅಪಾಯಕಾರಿ ಆದರೆ ಇನ್ನು ಕೆಲವು, ಯಾರಿಗೂ ತೊಂದರೆ ಆಗದೆ ಇರುವಂಥದ್ದು..ಕೆಲವರ  ಹುಚ್ಚು ಕೆಲಸಗಳು, ಬೇರೆಯವರ  ಕಣ್ಣಿಗೆ ಕಾಣ್ಸತ್ತೆ...ಇನ್ನು ಕೆಲವರ ಹುಚ್ಚು ಅವರ  ಮನಸ್ಸಲ್ಲೇ ಇದ್ದು, ಅವರು ಮಾತ್ರ ಅದನ್ನ ಅನುಭವಿಸ್ತಾ ಇರ್ತಾರೆ..

ನನ್ನ ಬಗ್ಗೆ ಹೇಳ್ಬೇಕಂದ್ರೆ, ನನಗೂ ಒಂದು ರೀತಿ ಈ ಹುಚ್ಚು(ಕ್ರೇಜ್) ಇದೆ ಅನ್ನಬಹುದು. ಇದು ಸಹಾ ಒಂದು ರೀತಿ ಮನಸ್ಸಿನ್ನಲ್ಲೇ ಯಾವಾಗಲೂ ಮೂಡೋ ಒಂದು ತರಹದ ನಂಬಿಕೆ,ವಿಶ್ವಾಸ,ಕಲ್ಪನೆ. ಈ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನ್ನಷ್ಟಕ್ಕೆ ನಾನೇ ನಗ್ತೀನಿ... ಇದರಿಂದ ಲಾಭ ಅಥವಾ ನಷ್ಟ ಇಲ್ಲ ಅಂತ ಗೊತ್ತಿದ್ದರೂ ನಿತ್ಯದ ಜೀವನದಲ್ಲಿ ಮುಂದುವರಿತಾ ಹೋಗ್ತಾನೆ  ಇದೆ.... :-)


ನನಗೆ "ಸಂಖ್ಯೆ ಒಂದು" ಅಂದ್ರೆ ಅದೊಂಥರಾ ಪ್ರೀತಿ...ಪ್ರತಿ ಬಾರಿಯೂ, ಎಲ್ಲೆಡೆಯೂ ಅದನ್ನು ಹುಡುಕ್ತಾ ಇರ್ತೇನೆ. ಅದೊಂಥರಾ "ಅದೃಷ್ಟ " ಅಥವಾ "ಲಕ್ಕಿ ನಂಬರ್" ಅಂತಾರಲ್ಲ ಆ ಭಾವನೆ....

 ನಾನು ಹುಟ್ಟಿದ್ದು "ಒಂದನೇ ತಾರೀಕು", ಜೊತೆಗೆ ತಿಂಗಳು ಅಕ್ಟೋಬರ್ ಅಂದ್ರೆ ಹತ್ತನೇ ತಿಂಗಳು ..ಅದರಲ್ಲೂ "ಒಂದು" ಇದೆ..ಹೀಗಾಗಿ ಸಂಖ್ಯೆ ಒಂದು  ನನ್ನನ್ನು ಜನ್ಮದಿಂದ ಹಿಂಬಾಲಿಸಿ ಬರ್ತಾ ಇದೆ ಅನ್ಸುತ್ತೆ...ಬಹುಷಃ  ಇದು ನನ್ನ ಕೊನೆ ಉಸಿರು ಇರೋವರೆಗೋ ಹೀಗೆ ಮುಂದುವರಿತದೋ ಏನೋ ಎಂದು ಕೆಲವೊಮ್ಮೆ ಅನಿಸುವುದುಂಟು.....


ನನಗೆ ನೆನಪಿದ್ದ ಹಾಗೆ ಇದು ತುಂಬಾ ವರ್ಷ ಹಿಂದಿನ ನೆನಪು. ಹತ್ತನೇ ತರಗತಿ ಓದುತ್ತಿದ್ದಾಗ ಮಾರ್ಚ್-ಏಪ್ರಿಲ್ ಪರೀಕ್ಷೆಯಲ್ಲಿ,  ಹಾಲ್ ಟಿಕೆಟ್ ನಂಬರ್ ಸುಮಾರು ಆರು ಅಥವಾ ಏಳು ಸಂಖ್ಯೆಯದಿತ್ತು . ಆ ಪರೀಕ್ಷೆ ಕೊಠಡಿಯಲ್ಲಿ ಕುಳಿತು ಎಲ್ಲಾ ಸಂಖ್ಯೆಯನ್ನು ಕೂಡಿಸಿ ಎಲ್ಲಾದರೂ ಒಂದು ಬರುತ್ತಾ ಎಂದು ಲೆಕ್ಕ ಮಾಡಿದ್ದು ಈಗಲೂ ನೆನಪಿದೆ. ಆ ಸಂಖ್ಯೆ ಒಂದು   ಬಂದರೆ ಪಾಸಾಗ್ತಿನಿ ಅನ್ನೋ ಹುಚ್ಚು ಕಲ್ಪನೆ... :-)

ಈ ಚಾಳಿ ಈಗಲೂ ಮುಂದುವರಿತಾ ಇದೆ. ಇತ್ತೀಚಿನ ನೆನಪೆಂದರೆ, ನನಗೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ . ಪ್ರತಿ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನೇರಪ್ರಸಾರವನ್ನು 'ಈ ಟಿ ವಿಯಲ್ಲಿ " ಪ್ರಸಾರ ಮಾಡುತ್ತಾರೆ. ಕಳೆದ ವರ್ಷವೂ ಮಧ್ಯಾಹ್ನ ಹೀಗೆ ಟಿ ವಿ ನೋಡ್ತಾ ಇದ್ದೆ. ಮಂಗಳಾರತಿಯ ಸಮಯ. ಹಿನ್ನಲೆಯಲ್ಲಿ ಡಾ. ರಾಜಕುಮಾರ್ ಅವರ ಈ ಹಾಡು ಬರ್ತಾ ಇತ್ತು. 

"ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ,ಸ್ಮರಣೆ ಮಾತ್ರದಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ...
ಯೋಗಿ ಬರುವನಮ್ಮ, ಶುಭ ಯೋಗ ಬರುವುದಮ್ಮ , ರಾಘವೇಂದ್ರ ಗುರುರಾಯ ಬಂದು ಭವ  ರೋಗ ಕಳೆವನಮ್ಮ ...
ಮನವ ತೊಳೆಯಿರಮ್ಮ , ಭಕ್ತಿಯ ಮಣೆಯ  ಹಾಕಿರಮ್ಮ , ಧನ್ಯದಿಂದ ಕರೆದಾಗ ಬಂದು ಒಳಗಣ್ಣ ಬೆರೆವನಮ್ಮ ...
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ , ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ ....
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ, ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ.........." 

ಈ ಹಾಡು ಕೇಳ್ತಾ ಆರತಿ ನೋಡ್ತಾ, ಗೋಡೆ ಮೇಲಿದ್ದ ಗಡಿಯಾರ ನೋಡಿದ್ರೆ "ಸರಿಯಾಗಿ  ಒಂದು ಘಂಟೆ ಸಮಯ"...ಅದೇಕೋ ಗುರುರಾಯರ ಆಶೀರ್ವಾದ ಆಯ್ತು ಅನ್ನೋ  ಸಂತೋಷದ ಕಲ್ಪನೆ  .... :-)

ಇನ್ನು ಗಮ್ಮತ್ತಿನ ವಿಷಯ ಅಂದ್ರೆ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕುತೂ ಹಲದಿಂದ  ಗೂಗಲ್ ನಲ್ಲಿ "ನ್ಯುಮರೋಲಾಜಿ" ಬಗ್ಗೆ ಓದಿದ್ದು ..ಸಂಖ್ಯೆ  ೧ ಅಂದರೆ ಸೂರ್ಯ ಅದಕ್ಕೆ ಅಧಿಪತಿ,  ಒಂದನೇ ತಾರೀಕಿನಲ್ಲಿ ಹುಟ್ಟಿದವರಿಗೆ ಯಾವುದು ಶುಭ,ಅಶುಭ ಇತ್ಯಾದಿ  ಅನ್ನುವ ಎಲ್ಲಾ  ವಿಷಯ ಓದಿದ್ದು ... ಈ ವಿಷಯ ನಗು ಬರುವಂಥಹದ್ದೆ  ಆದ್ರೂ ಸತ್ಯ ಘಟನೆ... :-) 

ಪ್ರಪಂಚದಲ್ಲಿ ಎಲ್ಲ ಮನಸ್ಥಿತಿಯ ಜನರು ಇರ್ತಾರೆ ..ಅದರಲ್ಲಿ ನಾನು ಒಬ್ಬಳು. ಸ್ನೇಹಿತರೆ ನನ್ನ ಹಾಗೆ ನಿಮಗೂ ಏನಾದರೂ ಈ ರೀತಿಯ ಅಭ್ಯಾಸಗಳು ಇದ್ದರೆ ಮುಕ್ತವಾಗಿ ಹಂಚಿಕೊಳ್ಳಿ ....

ಪ್ರೀತಿಯಿಂದ

ಸುದೀಪ....






Thursday 6 December 2012

ನೀಲಿ ಪರ್ಸನಲ್ ಡೈರಿ.....


 ಮೊನ್ನೆ ಮನೇಲಿ ವಾರ್ಡ್ ರೋಬ್ ಕ್ಲೀನ್ ಮಾಡೋವಾಗ ಈ ನೀಲಿ ಪರ್ಸನಲ್ ಡೈರಿ ಸಿಕ್ತು... ಹಾಗೆ ಒಂದೊಂದೆ ಪುಟ ತೆಗಿಬೇಕಾದ್ರೆ ಸಾವಿರಾರು ಹಳೆ ನೆನಪುಗಳು.... ಇದು ಸುಮಾರು ಹದಿನಾಲ್ಕು ವರ್ಷದ ಹಿಂದಿನ ಡೈರಿ... 1998 ಇಸವಿದು....ಅಂಥದ್ದೇನಿದೆ ಇದರಲ್ಲಿ...???!!!!!
  



ಆಗ ನಾನು ಅಂತಿಮ ಬಿಕಾಂ ಓದ್ತಿದ್ದ ವರ್ಷ... ಯಾವಾಗಲು ಕಾಲೇಜ್ನಲ್ಲಿ ಜನವರಿ-ಫೆಬ್ರವರಿ ತಿಂಗಳು ಬಂತು ಅಂದ್ರೆ ಅಂತಿಮ ವರ್ಷದ ವಿಧ್ಯಾರ್ಥಿಗಳೆಲ್ಲ ಒಂದು ರೀತಿ busy ಅಂತಾನೆ ಹೇಳಬಹುದು.. ಅಂತಿಮ ವರ್ಷದ ಪರೀಕ್ಷೆಯ ತಯಾರಿಗಲ್ಲ.... ಸ್ನೇಹಿತರಿಂದ "ಆಟೋಗ್ರಾಫ " ಸಂಗ್ರಹಿಸುವ ಕೆಲಸದಲ್ಲಿ.... :) ಕಾಲೇಜಿನ ಆತ್ಮೀಯ ಜೂನಿಯರ್ಸ್ ಸ್ನೇಹಿತರು  , ಲೆಕ್ಚರರ್ಸ್ ಹತ್ರಾ ಎಲ್ಲಾ ಪುಸ್ತಕ ಕೊಟ್ಟು ಪ್ಲೀಸ್ ಏನಾದ್ರೂ ಬರೆದು ಕೊಡಿ ಎಂಬ ದೃಶ್ಯ ಸಾಮಾನ್ಯ, ಎಲ್ಲರ ಪುಸ್ತಕಗಳಲ್ಲೂ ಅದೇ ಅದೇ ಕಾಪಿ-ಪೇಸ್ಟ್ ವಾಕ್ಯಗಳು ...ಹೊಸದಾಗಿ ಏನು ಬರಿಬೇಕಂತ ತಲೆಗೆ ಹೊಳಿತಾನೆ ಇರಲಿಲ್ಲ     :-)

ನಿಜಕ್ಕೂ ಆ ಸಮಯ  ಸ್ವಚ್ಚಂದ ಜೀವನಕ್ಕೆ ವಿದಾಯ ಹೇಳುವ ಕಾಲಘಟ್ಟ  ಅಂತಾನೆ  ಹೇಳಬಹುದು..ಕಾಲೇಜಿನ ಹುಡುಗಾಟಿಕೆ ಬಿಟ್ಟು ಸಮಾಜದಲ್ಲಿ ಒಂದು ಜವಾಬ್ದಾರಿ ವಹಿಸುವ ವ್ಯಕ್ತಿಗಳಾಗಿ ಮೂಡುವ  ದಿನಗಳವು... 


ಮೊನ್ನೆ ಕೂತುಕೊಂಡು ಡೈರಿ  ತೆರೆದಾಗ ಮೊದಲ ಪುಟದಲ್ಲಿ ನನ್ನ ಅಕ್ಷರಗಳ ಸಾಲುಗಳು ಹೀಗಿತ್ತು....೧೪ ವರ್ಷದ ಹಿಂದೆ ಈ ರೀತಿ ಬರೆಯುವ ಅಭ್ಯಾಸ...ಯಾವಾಗಲು ಕಪ್ಪು ಇಂಕ್ ಪೆನ್ ಉಪಯೋಗಿಸ್ತಿದ್ದೆ... ಅದು ಹೀರೋ ಕಂಪನಿದು... :) 



ಆಗ ಆಟೋಗ್ರಾಫ್ ಪುಸ್ತಕ ಅಂತಂದ್ರೆ ಆ ವರ್ಷದ ಹೊಸ ಡೈರಿಯನ್ನ ನಾವು ಉಪಯೋಗಿಸ್ತಾ ಇದ್ವಿ...ಕೆಲವು ಸ್ನೇಹಿತರು ತಮ್ಮ ಜನ್ಮದಿನಾಂಕದ ಪುಟದಲ್ಲಿ ಬರೆದು ಕೊಡೋವ್ರು....


ಕಾಲೇಜಲ್ಲಿ ನನ್ನ ಐವರು ಸ್ನೇಹಿತೆಯರದ್ದು ಒಂದು ಗುಂಪು... ಯಾವಾಗಲು ತಲೆಹರಟೆ, ಕಿತಾಪತಿ, ನಗು,ನಮ್ಮದೇ ಪ್ರಪಂಚದಲ್ಲಿ ನಾವು....ಸುಂದರ ದಿನಗಳವು.... ನಮ್ಮ ಗ್ರೂಪಿಗೆ ಕೆಲವರು "five stars" ಅಂತ ಕರೆಯೋವ್ರು....ನಮ್ಮ ಎಲ್ಲರ ಪುಸ್ತಕಗಳಲ್ಲೂ vps3 ಅಂತ ಬರ್ದಿರ್ತಿತ್ತು ....ಹಂಗಂದ್ರೆ ವಾಣಿ, ಪ್ರತಿಮ,ಸುಷ್ಮಾ , ಸುಮ ಮತ್ತು ಸುಮತಿ .. :) ಒಬ್ಬರಿಗಿಂತ    ಒಬ್ಬರು ತಲೆಹರಟೆಗಳು ಅನ್ನಬಹುದು...ಆ ವಯಸ್ಸೇ ಹಾಗೆನೋ ....ಈಗೆಲ್ಲ ಬರಿಯ ನೆನಪುಗಳು...  ಈಗ ಐದು ಜನ ಐದು ಊರುಗಳಲ್ಲಿ ....ಅದೆಷ್ಟು ವರ್ಷ ಆಯ್ತೋ ಎಲ್ಲರು ಒಟ್ಟು ಸೇರಿ.... :(

ಆ ನಾಲ್ವರಲ್ಲೂ ನನ್ನ ಆತ್ಮೀಯ ಸ್ನೇಹಿತೆ ಅಂದ್ರೆ "ಸುಮ "...ನನ್ನ ಹೆಸರನ್ನೇ ಅರ್ಧ 
ಹಂಚಿಕೊಂಡಿದ್ದಳು ಸಹಾ.... ಇಬ್ಬರಲ್ಲೂ "ಗುಟ್ಟು " ಎಂಬ ಶಬ್ದವೇ ಇರಲಿಲ್ಲ...ಎಲ್ಲವನ್ನು ಹಂಚಿಕೊಂಡ ಸ್ನೇಹಿತೆ ಎನ್ನಬಹುದು...

ಆಕೆ ಬರೆದುಕೊಟ್ಟ ಕೆಲವು ಸಾಲುಗಳು ಹೀಗಿತ್ತು ನನ್ನ ಪುಸ್ತಕದಲ್ಲಿ... 










ನಂತರದ ಇನ್ನೊಬ್ಬ ಸ್ನೇಹಿತೆ "ಪ್ರತಿಮ "....ನಮ್ಮ ಐವರ ಗುಂಪಿನ ಇನ್ನೊಬ್ಬ ಗೆಳತಿ... ಅವಳ ಕೆಲವು ನೆನಪಿನ ಬುತ್ತಿ  ನನ್ನ ಪುಸ್ತಕದಲ್ಲಿ....







ಇನ್ನೊಬ್ಬ  ಆತ್ಮೀಯ ಸ್ನೇಹಿತೆ ಸುಷ್ಮಾ.... ಕಾಲೇಜ್ ಜೀವನದಲ್ಲಿ ಮರೆಯಲಾಗದ ಗೆಳತಿ...ಅವಳು ಪ್ರೀತಿಯಿಂದ ಬರೆದು ಕೊಟ್ಟ ಅಕ್ಷರಗಳು....





ವಾಣಿ ಎಂಬ ಗೆಳತಿಯ ಹಸ್ತಾಕ್ಷರ ಮಾತ್ರ ಮಿಸ್ಸಿಂಗ್ ಈ ಪುಸ್ತಕದಲ್ಲಿ... :( .ಅಂತಿಮ ಬಿಕಾಂ ಕಲಿಯುವಾಗಲೇ ಮದುವೆಯಾದ ಸ್ನೇಹಿತೆ... :)
 

 ಒಬ್ಬ ಸ್ನೇಹಿತೆ ಮಾತ್ರ ೧ ವರ್ಷದಿಂದ ಜೊತೆಗಿದ್ದರೂ ಆತ್ಮಿಯಳಾಗಿದ್ದು ಮಾತ್ರ ಅಂತಿಮ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ....ನೋಡಲು ಸುಂದರವಾಗಿದ್ದ ಆ ಗೆಳತಿಯ ಮನಸ್ಸು ತುಂಬಾ ಮೃದು, ಕೋಮಲ.... ಆ ಗುಣಕ್ಕೆ ಬಹುಷಃ ಮನಸೋತಿದ್ದೆ ನಾನು... ಅವಳ ಹೆಸರು ಸಾವಿತ್ರಿಯಾಗಿದ್ದರು, ಅದೇಕೋ  ನಾನು ಅವಳನ್ನು ಪ್ರೀತಿಯಿಂದ "ತನುಜ" ಅಂತ ಕರಿತಿದ್ದೆ... ಈಗಲೂ ತುಂಬಾ ನೆನಪಾಗುವ ಮುದ್ದು ಹುಡುಗಿ...ಈಗ ಸಂಪರ್ಕದಲ್ಲೇ ಇಲ್ಲ ಎನ್ನುವ ಬೇಸರ ಕಾಡ್ತಾ ಇರತ್ತೆ....

ಆಕೆ ಬರೆದು ಕೊಟ್ಟ ಕೆಲವು ಸಾಲುಗಳು ಹೀಗಿತ್ತು .....



ಪ್ರೀತಿಯ ಅಣ್ಣ "ಗುರು " ದಾವಣಗೆರೆಯಲ್ಲಿ ಇದ್ದರೂ ಅವನು ಊರಿಗೆ ಬಂದಾಗ ಪುಸ್ತಕ ಕೊಂಡು ಹೋಗಿ ಬರೆದು ಕೊಟ್ಟ ಕೆಲವು ಸಾಲುಗಳು....ಸಂಬಂಧಿಯಾಗಿದ್ದರೂ ಕೇವಲ ಪತ್ರಗಳ ಮೂಲಕವೇ ನಮ್ಮಿಬ್ಬರ  ಆತ್ಮೀಯತೆ.... ನನ್ನನ್ನು "ದೀಪು"  ಎಂದು ಕರೀತಿದ್ದ ....... ಹೀಗಿತ್ತು ಅವನ ಪದಗಳು ನನ್ನ ಡೈರಿಯಲ್ಲಿ ....











ನಮ್ಮ ಪ್ರಾಧ್ಯಾಪಕರಾದ "ನಟರಾಜ್ ಅರಳಸುರುಳಿ" ಅವರು ಬರೆದುಕೂಟ್ಟ ಪುಟವಿದು...ಅವರೊಬ್ಬ cartoonist ಸಹಾ..... :)


ಇನ್ನು ಅದೆಷ್ಟೋ ಸ್ನೇಹಿತರ ಸಾಲುಗಳಿವೆ ಈ ಡೈರಿಯಲ್ಲಿ....ತುಂಬಾ ಪ್ರೀತಿಪಾತ್ರರ ನೆನಪನ್ನ ಮಾತ್ರ ಇಲ್ಲಿ ನೆನೆಸಿಕೊಂಡಿದ್ದೇನೆ....

ಹೀಗೆ ಒಂದು ಪುಸ್ತಕ ಕಾಲೇಜು ದಿನಗಳ ನೂರಾರು ನೆನಪುಗಳನ್ನು ಹೊತ್ತು  ತಂದು ಬಿಡ್ತು .... ಆಗೆಲ್ಲ ನಮ್ಮ ಸೀನಿಯರ್ ವಿಧ್ಯಾರ್ಥಿಗಳು, ಪ್ರತಿವರ್ಷ  ಆಟೋಗ್ರಾಪ್ ಹಾಕಿಸಕೊಳ್ತಾರೆ ...ಹಾಗೆ ನಾವು ಅವರನ್ನ ಫಾಲೋ ಮಾಡೋದು...ಅಂತ ತಿಳಿದಿದ್ದ ಹುಡುಗಾಟದ ದಿನಗಳವು... ಆದರೆ ಅದರ ಬೆಲೆ ಏನು ಅಂತ ನಿಜ ಅರ್ಥದಲ್ಲಿ ತಿಳಿದಿದ್ದು ಈಗಲೇ...ಎಷ್ಟೊಂದು ಹಳೆಯ ಮಧುರ ನೆನಪನ್ನು ಈ ಪುಸ್ತಕದ ಮುಖಾಂತರ ಸವಿಬಹುದು ಎಂಬ ಚಂದದ ಪಾಠ ಕಲಿಸಿಕೊಟ್ಟು ಬಿಡ್ತು... :-) 

ಪ್ರೀತಿಯಿಂದ

ಸುದೀಪ....














Thursday 29 November 2012

ಸೈಡ್ ವ್ಯೂ ಮಿರರ್ ಕ್ರಷ್ ....




ರಕ್ಷಾ ಒಂಭತ್ತನೇ ತರಗತಿ ವಿಧ್ಯಾರ್ಥಿನಿ .... ಹದಿನಾಲ್ಕು ವರ್ಷದ ಹುಡುಗಿ ....ಆಗಷ್ಟೇ ಮೊಗ್ಗರಳಿ ಹೂವಾದ ವಯಸ್ಸು...ಆ ಸೌoದರ್ಯ  ಅವಳ ಮೈ ಮನವನ್ನು ತುಂಬಿ ಇನ್ನೂ ಆಕರ್ಷಿಸುತ್ತಿತ್ತು...ಒಮ್ಮೆ ನೋಡಿದರೆ ತಿರುಗಿ ಇನ್ನೊಮ್ಮೆ ನೋಡಬೇಕು ಎನ್ನುವ ರೂಪ...ಮನೆ ಹತ್ತಿರವೇ ಇರುವ ಹೈಸ್ಕೂಲ್ ....ನಡೆದುಕೊಂಡು ಹೋದರೆ ಸುಮಾರು ಹತ್ತು ನಿಮಿಷದ ದಾರಿ.... ಮನೆ ಹತ್ತಿರದ ಇಬ್ಬರು ಸ್ನೇಹಿತೆಯರ ಜೊತೆ ದಿನವೂ ಅವಳು ಶಾಲೆಗೆ ಹೋಗಿಬರುತ್ತಿದ್ದಳು....


ಶಾಲೆಗೆ ಹೋಗುವ ದಾರಿಯಲ್ಲಿ ಅದೊಂದು ಟ್ಯಾಕ್ಸಿ ಸ್ಟ್ಯಾಂಡ್ .... ಅಲ್ಲಿಯ ಚಾಲಕರು ಹೆಚ್ಚು ಕಮ್ಮಿ ಪರಿಚಿತರೇ ...ದಿನವೂ  ನೋಡುವ ಮುಖಗಳೇ ....ಆಗ ಮಳೆ ಕಡಿಮೆಯಾಗುತ್ತಿದ್ದ ಸಮಯ...ದಿನಕ್ಕೊಮ್ಮೆ ಎಲ್ಲೋ ಸಣ್ಣ ತುಂತುರು ಮಳೆ... ಆ ದಿನ ಸಹಾ ಬೆಳಿಗ್ಗೆ 9 ಗಂಟೆ ಸಮಯ ...ಮೂವರು ಸ್ನೇಹಿತೆಯರು ಮಾತಾಡುತ್ತಾ ಶಾಲೆಯತ್ತ  ನಡೆಯುತಿದ್ದರು....ಸಣ್ಣದಾಗಿ ಮಳೆ ಪ್ರಾರಂಭವಾಯ್ತು  ...ತಮ್ಮ ಛತ್ರಿ ಬಿಡಿಸಿ ಮುಂದೆ ಸಾಗುವಾಗ ರಕ್ಷಾಗೆ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಯಾವುದೋ ಹೊಸ ಮುಖ ನೋಡಿದ ಹಾಗೆ....ಪುನಃ ತಿರುಗಿ ನೋಡಿದರೆ ತಪ್ಪಾಗುತ್ತದೆ ಎಂದು ಸುಮ್ಮನೆ ಶಾಲೆಯತ್ತ ಹೆಜ್ಜೆ ಹಾಕುತ್ತಾಳೆ... ಶಾಲೆ ಮುಗಿಸಿ ಸಂಜೆ ಮನೆಗೆ ಮರಳುವಾಗಲು  ಕುತೂಹಲ....ಆದರೆ ಸ್ಟ್ಯಾಂಡ್ ನಲ್ಲಿ ಆ ಹೊಸ ಮುಖದ ಸುಳಿವಿಲ್ಲ....

ಮರುದಿನ ಶಾಲೆಗೆ ಹೋಗುವಾಗ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ  ಹೊಸದೊಂದು ಹೊಳೆಯುವ ಗಾಡಿಯನ್ನು  ದೂರದಿಂದಲೇ ರಕ್ಷಾ ಗುರುತಿಸುತ್ತಾಳೆ...ಅದರ ಹತ್ತಿರ ಬರುವಾಗ, ಡ್ರೈವರ್ ಸೀಟಿನಲ್ಲಿ ಕೂತ ವ್ಯಕ್ತಿ,  ಹತ್ತಿರ ಇರುವ ಸೈಡ್ ಮಿರರ್ನಿಂದ ಇವಳನ್ನೇ ನೋಡುತ್ತಿದ್ದಾನೆ...ಅವಳ ಕಣ್ಣು ಅದೇ ಸಮಯಕ್ಕೆ ಕನ್ನಡಿ ನೋಡಿ ತನ್ನನ್ನು ಗಮನಿಸುವ  ಕಣ್ಣುಗಳನ್ನು   ಕಂಡು ಕೂಡಲೇ ತಲೆತಗ್ಗಿಸಿ ಮುಂದೆ ಸಾಗುತ್ತಾಳೆ ...ಇಬ್ಬರ ದೃಷ್ಟಿ ಒಂದು ಕ್ಷಣಕ್ಕೆ ಅಲ್ಲಿ ಒಂದಾಗಿಬಿಟ್ಟಿತ್ತು ...ಆದರೆ ಒಂದೇ  ಕ್ಷಣ ನೋಡಿದ ಆ ಕನ್ನಡಿಯಲ್ಲಿನ ಮುಖ ರಕ್ಷಾಳ  ಮನಸ್ಸಿನಲ್ಲಿ ಅಚ್ಚಾಗಿರುತ್ತದೆ.....ಸುಮಾರು 23-24  ವರ್ಷದ ಹುಡುಗ ಇರಬಹುದು ....ಕುಡಿ ಮೀಸೆ, ಸಿನೆಮಾ ನಟನಂತೆ ಕಾಣುವ ಚಂದದ ಮುಖ, ಕಪ್ಪು ಕಣ್ಣುಗಳು.....ಏನೋ ಆಕರ್ಷಣೆ .....





ಶಾಲೆಗೆ ಹೋದರೂ ಆ ಮುಖವೇ ಕಣ್ಣ ಮುಂದೆ...ಪಾಠದ ಕಡೆ ಗಮನವೇ ಇಲ್ಲ...ಯಾವಾಗ ಸಂಜೆ ಆಗುತ್ತದೋ ..ಪುನಃ ಅವನನ್ನು ಯಾವಾಗ ನೋಡುತ್ತೇನೋ ಎಂಬ ಕಾತುರ....ಆ ವಯಸ್ಸೆ ಹಾಗೆ ಏನೋ ಸುಂದರವಾಗಿ ಕಂಡದ್ದು  ಪುನಃ ಪುನಃ ನೋಡಬೇಕೆಂಬ ಆತುರ , ಕಾತುರ...ಸಂಜೆ ಸಮಯ ಪುನಃ ಅದೇ ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿರುತ್ತದೆ...ಅವನ ನೆನಪಲ್ಲೇ ಮನೆಯಲ್ಲಿ ಸಮಯ ಕಳಿತಾಳೆ .....

ಹೀಗೆ ದಿನಗಳು ಸಾಗುತ್ತಿರುತ್ತದೆ...ಒಂದು ದಿನ ಒಬ್ಬ ಡ್ರೈವರ್ ಗಟ್ಟಿಯಾಗಿ.."ಲೋ...ಸೂರಜ್ ...ಇಲ್ಲಿ ಬಾ..." ಅಂತ ಕರೆದಾಗ ಆ ಹುಡುಗ ,...."ಹಾ...ಬಂದೆ" ಅಂತಾ ಓಡ್ತಾನೆ ..ಆಗ ಇದನ್ನು ಕೇಳಿಸಿಕೊಂಡ ರಕ್ಷಾ ...ಎಷ್ಟು ಚಂದದ ಹೆಸರು ಅಂತ ಮನಸ್ಸಿನಲ್ಲೇ ಅಂದುಕೊತಾಳೆ... ತನ್ನ ಎಲ್ಲ ಶಾಲೆಯ ಪುಸ್ತಕದ ಕೊನೆಯ ಪುಟದಲ್ಲೂ  ಯಾರಿಗೂ ತಿಳಿಯದಂತೆ "ಸೂರಜ್ ..ಸೂರಜ್ ..."ಎನ್ನುವ ಅಕ್ಷರಗಳು ಗೀಚುತ್ತಾಳೆ .... ಇಷ್ಟಾದರೂ ಅವಳ ಸ್ನೇಹಿತೆಯರಿಗೆ ಇದರ ಸುಳಿವೇ ಇರುವುದಿಲ್ಲ....


ದಿನಾ ಬೆಳಿಗ್ಗೆ, ಸಂಜೆ  ಶಾಲೆಯ ಹೋಗುವ ಬರುವ ಸಮಯದಲ್ಲಿ ಹುಡುಗನ ದೃಷ್ಟಿ ಮತ್ತು ರಕ್ಷಾಳ ನೋಟ ಆ ಸೈಡ್ ಮಿರರ್ ಮೇಲೆ...ಹತ್ತಿರ  ಬಂದ ಕೂಡಲೇ ಇಬ್ಬರೂ ತಮ್ಮ ನೋಟ ಬದಲಿಸುವುದು...ಹೀಗೆ ಅದೆಷ್ಟು ದಿನಗಳು ಕಳೆದವೋ ..ಇಬ್ಬರಿಗೂ ತಿಳಿಯದು...ಬರಬರುತ್ತ ಸಣ್ಣ ಮುಗುಳ್ನಗು ಕನ್ನಡಿಯಲ್ಲಿ ವಿನಿಮಯ ಆಗಲಿಕ್ಕೆ ಪ್ರಾರಂಭ ಆಗುತ್ತೆ..... ಆ ಸಣ್ಣ ನಗುವಿನಲ್ಲಿ ಅದೇನೋ ಗೆದ್ದ ಆನಂದ ಇಬ್ಬರಿಗೂ....ಅವನು ಎಲ್ಲಾದರು ಟ್ರಿಪ್ಗೆ ಹೋದರೆ ರಕ್ಷಾಳ ಮನಸ್ಸು ಖಾಲಿ ಖಾಲಿ..ಇನ್ನು ಯಾವಾಗ ಅವನನ್ನು ನೋಡ್ತಿನೋ ಎಂಬ ಆತಂಕ...

ಹಾಗೆಯೇ ಒಮ್ಮೆ 4 ದಿನ ಕಳೆದಿತ್ತು .ಮದುವೆ  ಸೀಸನ್ ಬೇರೆ....ಹುಡುಗನ ಸುಳಿವೇ ಇಲ್ಲ ...ಅವನ ಯೋಚನೆಯಲ್ಲಿ ರಕ್ಷಾ  ದಿನ ದೂಡುತ್ತಿರುತ್ತಾಳೆ....ಅವತ್ತು  ಬೆಳಿಗ್ಗೆ ತಾಯಿ ಕೊಟ್ಟ ತಿಂಡಿ ತಿನ್ನುತ್ತ ಅಲ್ಲಿಯೇ ಟೀಪಾಯಿ  ಮೇಲೆ ಇದ್ದ ಪೇಪರ್ ನೋಡಿ ಸೂಕ್ಷ್ಮ ಮನಸ್ಸಿನ ರಕ್ಷಾ ಹೃದಯಾಘಾತದಿಂದ ಕುಸಿದು ಬೀಳ್ತಾಳೆ  ....

ಕಾರಣ...... ಪತ್ರಿಕೆಯ ಮುಖಪುಟದಲ್ಲಿ  ಕಂಡ  ಸುದ್ಧಿ .....

ಚಿತ್ರದುರ್ಗ: ಭೀಕರ ಅಪಘಾತ

ಸೂರಜ್ ಎಂಬ 24 ವರ್ಷದ ಚಾಲಕ ಸ್ಥಳದಲ್ಲೇ ಸಾವು.....
ಚಿತ್ರದುರ್ಗದಲ್ಲಿ ಮದುವೆ ಮುಗಿಸಿ ಬೆಂಗಳೂರಿಗೆ ಹೊರಟಿದ್ದ ಟ್ಯಾಕ್ಸಿ, ಹಿಂದಿನಿಂದ ಢಿಕ್ಕಿ ಹೊಡೆದ ಟ್ರಕ್ ನ ರಭಸಕ್ಕೆ ಪಕ್ಕದ ಗದ್ದೆಯಲ್ಲಿ ಉರುಳಿ ಗಾಡಿಯ ನಿಯಂತ್ರಣ ಸಿಗದ ಚಾಲಕ ಸ್ಥಳದಲ್ಲೇ ಜವರಾಯನ ತೆಕ್ಕೆಗೆ...ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಉಳಿದ ನಾಲ್ವರ ಸ್ಥಿತಿ  ಗಂಭೀರ....







Thursday 22 November 2012

ಗೋವಾದಲ್ಲಿ ಐದು ರಾತ್ರಿ...ಆರು ದಿನ ....ಭಾಗ 3


ಸ್ನೇಹಿತರೇ ...ಹಿಂದಿನ ಸಂಚಿಕೆಯಲ್ಲಿ ಅಪ್ಲೋಡ್ ಆಗದ  "ರಿವರ್ ಕ್ರೂಸ್ನ" ಇನ್ನೊಂದು ವಿಡಿಯೋ ನಿಮಗಾಗಿ...ಈ ಬಾರಿ ಪುನಃ ಕಷ್ಟ ಪಟ್ಟು  ಅಪ್ಲೋಡ್ ಆಗಿದೆ.....ಇದು ನನ್ನ ಇಷ್ಟದ ವಿಡಿಯೋ ಸಹಾ .... :))




ಮುಂದುವರಿದ ಪ್ರವಾಸ ಕಥೆ.....

ಮರುದಿನ ಅಂದರೆ ಅವತ್ತು ತಾರೀಕು ಅಕ್ಟೋಬರ್ 20...ಸ್ನೇಹಿತರ ಮನೆಯಲ್ಲಿ ಬೆಳಕಾಯ್ತು ...ಬಿಸಿಬಿಸಿ ಚಹಾ ಸೇವನೆಯ ನಂತರ ಸ್ನೇಹಿತರ   ಮಗನ ಶಾಲೆಯಲ್ಲಿ ಅವತ್ತು "ಓಪನ್ ಡೇ " ಇದ್ದದ್ದರಿಂದ ಅವರಿಗೆ ಶಾಲೆಗೆ ಹೋಗಬೇಕಿತ್ತು....ಬೇಗ ಬೇಗ ಸ್ನಾನ ಮುಗಿಸಿ ...ಸ್ನೇಹಿತೆ ತಯಾರಿಸಿದ ಚಿತ್ರಾನ್ನ ತಿಂದು...ನಾವು ರೆಡಿಯಾದ್ವಿ .. ಅವರು ಶಾಲೆಗೆ ಹೋಗಿ ಅಲ್ಲಿಯ ಕೆಲಸ ಮುಗಿಸಿ ಬಂದ ನಂತರ , ಅವರ ಮಗ ದಾಮೋದರ್ ಸಹಾ ನಮ್ಮ ಜೊತೆ ಆ ದಿನ ಪ್ರವಾಸಕ್ಕೆ ಹೊರಟಿದ್ದ .....

 ನಂತರ  ನಮ್ಮ ಅವತ್ತಿನ ಪ್ರಯಾಣ ಶುರು ಆಗಿದ್ದು 10 ಘಂಟೆಗೆ ...ನಿಸರ್ಗ ರಮಣೀಯವಾದ "ದೂದ್ ಸಾಗರ್ ಫಾಲ್ಸ್ಗೆ".... ಗೋವ ಟೂರಿಸಂನವರು ಫಾಲ್ಸ್ನ  ಪ್ಯಾಕೇಜನ್ನು ಇನ್ನು ಶುರು ಮಾಡದೆ ಇರುವುದರಿಂದ ನಾವು ಖಾಸಗಿ ಟ್ಯಾಕ್ಸಿ ಮಾಡಿ ಹೊರಟಿದ್ದೆವು...ಮಡಗಾಂವ್ನಿಂದ ಸುಮಾರು ಒಂದು ಘಂಟೆಯ ಪ್ರಯಾಣ... ನಮ್ಮ ಡ್ರೈವರ್ ಅಬ್ದುಲ್ಲ ದಾರಿಯಲ್ಲಿ ಸಿಗುವ ಯಾವುದೇ ವಿಶೇಷ ಸ್ಥಳಗಳ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತ ಡ್ರೈವ್ ಮಾಡ್ತಿದ್ದರು ....ಆ ರಸ್ತೆ ಮಾತ್ರ ತುಂಬಾ ತಿರುವುಗಳು...ನಿಮಿಷಕ್ಕೊಂದು ತಿರುವು ....ನನಗಂತು ತಲೆ ಹೊಟ್ಟೆಯಲ್ಲಿ ತಿರುಗಿದ ರೀತಿ ಸಂಕಟ.....ಸಾಕಪ್ಪಾ ...ಸಾಕು ಈ ಪ್ರಯಾಣ ಅನ್ನಿಸ್ತಿತ್ತು ..

.ಕೊನೆಗೂ ನಮ್ಮ ಸ್ಥಳ ತಲುಪಿದಾಗ ಹನ್ನೊಂದು ಘಂಟೆ ಸಮಯ ....ನಮಗೆ ಅಲ್ಲಿಯ ಆಫೀಸಿನಲ್ಲಿ ಹಣ ಕಟ್ಟಿ ಅವರದ್ದೇ ವಾಹನದಲ್ಲಿ ಮುಂದಿನ ಪ್ರಯಾಣ....ನಮ್ಮ ಖಾಸಗಿ ವಾಹನಕ್ಕೆ ಒಳಗೆ ಅನುಮತಿಯಿಲ್ಲ ...ಅವರು ಸಧ್ರಢವಾಗಿರುವ ಜೀಪ್ನಲ್ಲಿ ಸುಮಾರು 8-9 ಜನರನ್ನು ಕೂರಿಸಿಕೊಂಡು ಪ್ರಯಾಣ ಶುರು ಮಾಡ್ತಾರೆ...ಪುನಃ ಸುಮಾರು ಮುಕ್ಕಾಲು ಘಂಟೆಯ ದಾರಿ .....ಆ ದಾರಿ ನೆನಪಿಸಿಕೊಂಡರೆ ಈಗಲೂ ಚಳಿ-ಜ್ವರ ಬರುತ್ತೆ....ಸುತ್ತಲು ಕಾಡು ...ಕೊರಕಲು ಹಾದಿ..ಕಲ್ಲು ಮಣ್ಣುಗಳ ಒರಟಾದ ರಸ್ತೆ..ಬೆನ್ನು, ಸೊಂಟದಲ್ಲಿ ಎಷ್ಟು ಮೂಳೆಗಳಿವೆ  ಎಂಬುದನ್ನು ಲೆಕ್ಕ ಹಾಕಬಹುದು...ಅಷ್ಟೊಂದು ಅಲುಗಾಟ ... ಇಡೀ ಮೈಯನ್ನು ನುಜ್ಜು ಗುಜ್ಜಾಗ್ಸಿ ಬಿಡುತ್ತದೆ ಆ ಪ್ರಯಾಣ...

ಆ  ಜೀಪ್ನಲ್ಲಿ ಕೂತು ಒಂದು ಫೋಟೋ ತೆಗಿಬೇಕಂದ್ರೆ ಹರಸಾಹಸ.... ಹತ್ತಾರು ಕ್ಲಿಕ್ಕ್ಗಳು ...ಎಲ್ಲವೂ ಬ್ಲರ್.... ಎಷ್ಟು ಕಷ್ಟ ಅಂದ್ರೆ, ನಾನು ಕೂತ ಸೀಟ್ನಿಂದ  ಕೆಳಗೆ ಬೀಳ್ತಿನೋ,  ಅಥವಾ ನನ್ನ ಕೈಯಲ್ಲಿದ್ದ ಕ್ಯಾಮರಾ ಬೀಳ್ತದೋ ಎಂಬ ಭಯ...ಅಷ್ಟೊಂದು ಜಂಪ್ ...ಜಂಪ್ ..... :)) 




ಹೀಗಿತ್ತು ಅಲ್ಲಿಯ ರಸ್ತೆ....




ಜೀಪಿನಲ್ಲಿ ಪಯಣಿಸುವಾಗ ದಾರಿ ಮಧ್ಯೆ ಕಂಡುಬಂದ ಹಕ್ಕಿಗಳ ಗುಂಪು...




ಮಧ್ಯ ಮಧ್ಯದಲ್ಲಿ ಸಿಗುವ ಸಣ್ಣ ತೊರೆಗಳು...ನಮ್ಮ ಜೀಪ್ ಅದನ್ನು ದಾಟಿಕೊಂಡು ಹೋಗಬೇಕು...ಕೆಲವೊಮ್ಮೆ ನೀರು ಜೀಪಿನ ಒಳಗೆ ನುಗ್ಗಿ ನಮ್ಮ ಕಾಲನ್ನು ತೊಯ್ಸಿತ್ತು ...ಅಷ್ಟೊಂದು ಆಳವಾಗಿತ್ತು ಆ ನೀರು  ....ಅಕಸ್ಮಾತ್ ಎಲ್ಲಾದರು ಮಣ್ಣಿನಲ್ಲಿ ಚಕ್ರಗಳು ಸಿಕ್ಕಿ ಹಾಕಿಕೊಂಡರೆ "ಗೋವಿಂದಾ".....




ಅಂತು ಇಂತು ನಮ್ಮ ತಾಣ ತಲುಪುವಾಗ ಹನ್ನೆರಡು ಘಂಟೆ...ಅಲ್ಲಿಂದ ಪುನಃ ನಡೆದುಕೊಂಡು ಜಲಪಾತ ತಲುಪಬೇಕಿತ್ತು ...ಸ್ವಲ್ಪ ಮೋಡದ ವಾತಾವರಣ ಇತ್ತು ಹಾಗಾಗಿ ಬಿಸಿಲಿನ ಗೊಡವೆ  ಇರಲಿಲ್ಲ ...ತಂಪಾದ ಹವೆ....ನಮಗೆ ಕೇವಲ ಒಂದು ಘಂಟೆಯ ಸಮಯ ಅಲ್ಲಿ ವೀಕ್ಷಿಸಲು ನಮ್ಮ ಡ್ರೈವರ್ ನಿಗಧಿ ಮಾಡಿದ್ದರು....

ಜೊತೆಗೆ ಇಬ್ಬರು ಮಕ್ಕಳು,  ಅವರಿಬ್ಬರ ಕೈ ಹಿಡಿದುಕೊಂಡು ನಡೆಯಬೇಕಿತ್ತು...ಸ್ವಲ್ಪ ಸ್ವಲ್ಪ ಜಾರುವ ಪಾಚಿಕಟ್ಟಿದ  ಬಂಡೆಕಲ್ಲುಗಳು ..ಮರಳಿನಲ್ಲಿ ಕಾಲಿಟ್ಟರು ಜಾರುವ ಪಾದ..

ಮಧ್ಯ ಮಧ್ಯ ಸಿಗುವ ಸಣ್ಣ ಸಣ್ಣ ಹಳ್ಳಗಳು  ...ತಂಪಾದ ನೀರು ...ಅದರಲ್ಲಿ ದಾಟುವಾಗ ಒಳ್ಳೆ ಐಸ್ ನೀರಲ್ಲಿ ನಡೆದ ಅನುಭವ...



ತಂಪು ತಂಪು ಹರಿವ ನೀರು.... ನಿಸರ್ಗದ ಚಂದ ಇಲ್ಲಿ ಬರ್ಪುರ್ ಕಾಣಬಹುದು.... 




ದಾರಿ ಮಧ್ಯೆ ಹೀಗಿತ್ತು ಕಲ್ಲು ಬಂಡೆಗಳ ರಾಶಿ...



ಸುಮಾರು 10-15 ನಿಮಿಷ ನಡೆದು ಹೋಗ್ತಾ ಇರಬೇಕಾದ್ರೆ, ನಮ್ಮ ಎದುರಿಗೆ ಕಾಣ ಸಿಕ್ಕಿದ್ದು ಈ ಸುಂದರ ಹಾಲಿನ ಹೊಳೆ...ಇದೇ .."ದೂದ್  ಸಾಗರ್ ಜಲಪಾತ"




ಪ್ರಕೃತಿಯ ಮಧ್ಯೆ ನಾವು...




ಇಲ್ಲಿ ಹೆಚ್ಚಾಗಿ ಕಾಣ ಸಿಗುವವರು ಸಹಾ ವಿದೇಶೀ ಪ್ರವಾಸಿಗರೇ.. ಗೋವಾದ  ಮುಖ್ಯ ಆಕರ್ಷಣೆ ಇವರಿಂದಲೇ ಎನ್ನಬಹುದು....







ಚಿತ್ರದ ಮಧ್ಯದಲ್ಲಿ ಕಾಣುತ್ತಿರುವುದು ರೈಲ್ವೆ ಮಾರ್ಗ....




ನಾವು ನಾಲ್ವರು....ಜೊತೆಜೊತೆಗೆ....




ನಾವು ಅಲ್ಲಿ ಇರುವಾಗಲೇ ಗೂಡ್ಸ್ ರೈಲೊಂದು ಪ್ರಯಾಣಿಸುವ ಮನೋಹರ ದೃಶ್ಯ ...





ಮಂಗಗಳಿಗಂತೂ ಪ್ರವಾಸಿಗರಿಂದ ಭೂರಿ ಭೋಜನ....




ಇದನ್ನೆಲ್ಲಾ ಕಣ್ಣು ತುಂಬಿಕೊಂಡು, ಸವಿದು ನಿಗಧಿತ  ಸಮಯಕ್ಕೆ ಹೊರಡಬೇಕಿತ್ತು....ನಮ್ಮ ಡ್ರೈವರ್ ನಮಗಾಗಿ ಕಾಯುತ್ತಿದ್ದ ..ಪುನಃ ಅದೇ ಕೊರಕಲು ರಸ್ತೆಯ ಪ್ರಯಾಣ....ನಮ್ಮ ಜೀಪಿನಿಂದ ಸ್ವಲ್ಪ ಹಿಂದೆ ಬರುತ್ತಿದ್ದ ಇನ್ನೊಂದು ಗಾಡಿ, ಅದು  ನೀರಿನೊಳಗೆ ಪ್ರಯಾಣಿಸುವಾಗ ಕ್ಲಿಕ್ಕ್ ಮಾಡಿದ್ದು....


ಅಂತು ಅವರ ಆಫೀಸಿನ ಹತ್ತಿರ ನಮ್ಮನಿಳಿಸುವಾಗ ಸುಮಾರು ಮಧ್ಯಾಹ್ನದ ಎರಡು   ಘಂಟೆ....ಊಟದ ಸಮಯವಾಗುತ್ತಿತ್ತು...ನಮ್ಮ ಡ್ರೈವರ್ ಅಬ್ದುಲ್ಲಾ ಊಟದ ಹೋಟೆಲ್ ತಲುಪಲಿಕ್ಕೆ ಇನ್ನು ಅರ್ಧ ಘಂಟೆ ಪ್ರಯಾಣ ಇದೆ ಅಂದ...ಅವನು ಇಳಿಸಿದ್ದು ಒಂದು "ಉಡುಪಿ ಹೋಟೆಲ್ನಲ್ಲಿ"....ಅಲ್ಲಿ ಊಟ ಮುಗಿಸಿ ನಮ್ಮ ಮುಂದಿನ ಪ್ರಯಾಣ ಹತ್ತಿರವೇ ಇದ್ದ ಇನ್ನೊಂದು ಬೀಚ್ ...ಅದರ ಹೆಸರು..."ಪೋಲೋಲಿಂ " (pololeum beach)...

ಇದು ನನ್ನ ಇಷ್ಟವಾದ ಆ ಕಿನಾರೆಯ ಒಂದು ಚಿತ್ರ .... :))




ಅಲ್ಲಿ ತಲುಪುವಾಗಲೇ ಸುಮಾರು ನಾಲ್ಕು ಘಂಟೆಯ ಸಮಯ ...ಅಲ್ಲಿ ಒಂದು ಕಡೆ ಸಮುದ್ರವಾದರೆ ಇನ್ನೊಂದು ಕಡೆ ಸಿಹಿನೀರಿನ ಕೆರೆ ಇದೆ....ಅಲ್ಲಿ ಸಹಾ ಸಣ್ಣ ದೋಣಿಗಳಲ್ಲಿ ಒಂದು ಸುತ್ತು ಹಾಕಿಸುತ್ತಾರೆ...ಸುತ್ತಲು ಚಂದದ ಪ್ರಕೃತಿ ...ಕೈಯಿಂದ ಹುಟ್ಟುಹಾಕುವ ದೋಣಿಯಲ್ಲಿ ನಮ್ಮ ಪ್ರಯಾಣ....ಸುಮಾರು ಮುಕ್ಕಾಲು ಘಂಟೆ ....ತುಂಬಾ ಬಿಸಿಲಿತ್ತು ಆ ಸಮಯದಲ್ಲಿ ...ನನಗೆ ಬಿಸಿಲೆಂದರೆ ಅಲರ್ಜಿ....ಆ ದೋಣಿ ಚಲಾಯಿಸುವವನು ಆ ಹಕ್ಕಿ , ಈ ಹಕ್ಕಿ , ಆ ಮರ,ಈ ಮರ ಎಂದು  ಅದರ ಹೆಸರನ್ನೆಲ್ಲಾ ವಿವರಿಸುತ್ತಾ ಇದ್ದರೆ ನನಗೆ ಸುಸ್ತು...ನಾವು ಮನೆಯಲ್ಲಿ ಕೊಂಕಣಿ ಮಾತಾಡುವುದಾದರು ಗೋವಾ ಕೊಂಕಣಿಯ ಶೈಲಿಯೇ  ಬೇರೆ.... ನನಗೆ ಅರ್ಧ ಅರ್ಥ ಆದರೆ ಇನ್ನರ್ಧ ಅರ್ಥ ಆಗುವುದಿಲ್ಲ ...ಅವನು ಹೇಳಿದ್ದಕ್ಕೆಲ್ಲ  ಸುಮ್ಮನೆ "ಹೂ ...ಹೂ ..." ಅಂತ ತಲೆ ಆಡಿಸ್ತಾ ಕೂತಿದ್ದೆ....ಮಕ್ಕಳಿಬ್ಬರು ಅವರ ಪ್ರಪಂಚದಲ್ಲಿ.....

ಹೀಗೆ ಸಾಗುವಾಗ ತೆಗೆದ ಕೆಲವು ಚಿತ್ರಗಳು....






ದೋಣಿಯಲ್ಲಿ ಪ್ರಯಾಣ ಮಾಡುತ್ತಿರುವ  ದೀಪ.... ದೇವದತ್ ... ;-)










ಅಲ್ಲೊಂದು ದೊಡ್ಡ ಬಂಡೆ ...ಅದರ ಮೇಲೊಂದು ಚಿಕ್ಕ ಉರುಟಾದ ಕಲ್ಲು...ಅದು ಹೇಗೆ ಬ್ಯಾಲೆನ್ಸ್ ಮಾಡುತ್ತಿತ್ತೋ ಗೊತ್ತಿಲ್ಲ...ಹೀಗಿರುತ್ತೆ ಕೆಲವೊಮ್ಮೆ ನಿಸರ್ಗದ ಅಂದ ಚಂದ ...





ಆಗ ತಾನೇ ಹಾರಲು ಹೋರಾಟ ಚಂದದ ಪಕ್ಷಿ 




ನಮ್ಮ ಬೋಟಿಂಗ್ ಆದ ನಂತರ ಪುನಃ ಸಮುದ್ರ ದಡಕ್ಕೆ ಬಂದಾಗ ಅಲ್ಲಿಯ ವಾತಾವರಣ ಹೀಗಿತ್ತು...ಸಂಜೆ ಐದರ ಸಮಯ....



ದಾಮೋದರ್ ತೆಗೆದ ನಮ್ಮ ಚಿತ್ರ...:))



ಮಕ್ಕಳಿಗೆ ಸಮುದ್ರ ಸ್ನಾನ ಮಾಡಬೇಕೆಂಬ ಆಸೆಯಿದ್ದುದ್ದರಿಂದ  ಮನೆಯಿಂದ ಹೊರಡುವಾಗಲೇ ಎರಡು ಜೊತೆ ಬಟ್ಟೆ , ಟವೆಲ್ ಎಲ್ಲಾ ತೆಗೊ0ಡು  ಬಂದಿದ್ದೆವು... ನನ್ನ ಯಜಮಾನರು ಮಕ್ಕಳನ್ನು ಕರೆದುಕೊಂಡು ನೀರಿಗೆ ಇಳಿದರೆ ...ನಾನು ಅವರ ಬಟ್ಟೆ , ಬ್ಯಾಗ್ ಕಾದುಕೊಂಡು ದಡದಲ್ಲಿ ಇದ್ದ ಒಂದು ಬೋಟ್ ಹತ್ತಿ ಕೂತಿದ್ದೆ....

ಸೂರ್ಯಾಸ್ತದ ಸಮಯ ... ಹೀಗಿತ್ತು ಗೋವಾದಲ್ಲಿ..... 



 ಈ ಚಿತ್ರದ ಜೊತೆ ಸುಂದರ ನೆನಪಿದೆ...ಅದೆಂದರೆ .....ನಾನು ಗೋವಾಕ್ಕೆ ಹೋದಾಗಿನಿಂದಲೂ ನನ್ನ ಮೊಬೈಲ್ನಲ್ಲಿ "ಫೇಸ್ ಬುಕ್ " ನೋಡಿರಲಿಲ್ಲ....ಕೆಲವೆಡೆ ನೆಟ್ವರ್ಕ್ ಇದ್ದರೆ ಇನ್ನು ಕೆಲವೆಡೆ ಇಲ್ಲ...ನೆಟ್ವರ್ಕ್ ಸಿಗುವಾಗ ನೋಡೋಕ್ಕೆ ಸಮಯವಿರಲಿಲ್ಲ ... ನಮ್ಮ ರೆಸಾರ್ಟ್ನಲ್ಲoತು bsnl network ಇಲ್ಲವೇ ಇಲ್ಲ....ಹಾಗೆ ಸುಮ್ಮನೆ ಕೂತ ನನಗೆ ...ನೆನಪಾಗಿದ್ದು ಫೇಸ್ ಬುಕ್ .... ಸಿಗ್ನಲ್ ಸಿಕ್ತು...ಓಪನ್ ಮಾಡ್ದೆ...ಆಗ ಕಂಡಿದ್ದು ಒಬ್ಬ ಸ್ನೇಹಿತರ "ಹಾಡಿನ ಲಿಂಕ್ "... ಅದು ಕನ್ನಡದ ಇತ್ತೀಚಿನ ಚಿತ್ರದ ಒಂದು ರೋಮ್ಯಾಂಟಿಕ್ ಹಾಡು ..ಆ ಹಾಡಿನಲ್ಲಿ ನನಗೆ ತುಂಬಾ ಇಷ್ಟವಾದ ಸಂಗೀತ ಮತ್ತು ಸಾಹಿತ್ಯ ಸಹಾ....

 ಅದನ್ನು ನೋಡಿ ಅಲ್ಲಿ ಕಾಮೆಂಟ್ ಮಾಡದೇ ....ನನ್ನ ಹತ್ತಿರ ಅವರ ಫೋನ್ ನಂಬರ್ ಇತ್ತು...ಅವರಿಗೊಂದು sms ಕಳಿಸ್ದೆ... " ಹೇ ..ಈ ಹಾಡು ,ಸಾಹಿತ್ಯ ಎಲ್ಲಾ ನಂಗೂ ತುಂಬಾ ಇಷ್ಟ..." ಅಂತ.... ಅದಕ್ಕೆ ಅವರ ಮರು sms ಹೀಗಿತ್ತು...." ಆ ಹಾಡನ್ನು ನನ್ನ ಧ್ವನಿಯಲ್ಲಿ ಕೇಳಬೇಕoದರೆ ನoಗೆ ಫೋನ್ ಮಾಡು...."  ಅಂತ ...ಅವರಂತೂ ನನ್ನ ಫ್ರೆಂಡ್ಗಳಲ್ಲಿ  ತುಂಬಾ ತುಂಬಾ ಕಂಜೂಸ್ ಅಂತಾನೆ ಹೇಳ್ಬಹುದು... :)) ನನ್ನ ಗ್ರಹಚಾರ ..... ಇವರನ್ನು    ಹೇಗೂ ರಿಪೇರಿ ಮಾಡಕ್ಕೆ ಆಗಲ್ಲ ... ಇರಲಿ  ಅಂತ  .ನಾನೇ ಫೋನ್ ಮಾಡ್ದೆ....ಅವರ ಹತ್ತಿರ ಮಾತಾಡದೆ ತುಂಬಾ ದಿನ ಸಹಾ ಆಗಿತ್ತು ....ಅದು ಸಹಾ STD ... :)) 15-20 ನಿಮಿಷ ಮಾತು ಮುಗಿದ ಮೇಲೆ ಆ ಹಾಡನ್ನು ಹಾಡಿದ್ರು ..." ಪರವಾಗಿಲ್ಲ ಸುಮಾರಾಗಿತ್ತು...".ಆದರು ಸಹಾ ..."ತುಂಬಾ ಚೆನ್ನಾಗಿದೆ" ಅಂತ ಸ್ವಲ್ಪ ಹೊಗಳ್ದೆ ... :)) ಪಾಪ ನಿಜ ಅಂತ ನಂಬಿದ್ರೋ ಗೊತ್ತಿಲ್ಲ.. :p ಅಕಸ್ಮಾತ್ ಇದನ್ನ ಓದಿದರೆ ಅಷ್ಟೇ.... ನನ್ನ ಕಥೆ ಮುಗೀತು... :))  ಹೀಗೆ ಒಂದೊಂದು ಚಿತ್ರದ ಹಿಂದೆ ಸಣ್ಣ ಸಣ್ಣ ನೆನಪುಗಳು ಇರುತ್ತೆ... ಪ್ರತಿ ಸಾರಿ ಈ ಚಿತ್ರ ನೋಡಿದಾಗ ಆ ಕ್ಷಣದ ನೆನಪಾಗುತ್ತೆ.... :))

ನಮ್ಮ ಮಾತು, ಹಾಡು ಮುಗಿವಾಗ ನೀರಿನಲ್ಲಿ ಆಟ ,ಸ್ನಾನ ಮುಗಿಸಿ ಮಕ್ಕಳು ವಾಪಾಸ್ ಬಂದರು...ಡ್ರೆಸ್ ಎಲ್ಲ ಬದಲಿಸಿ ಅಲ್ಲಿಂದ ಹೊರಡುವಾಗ ಆರು ಘಂಟೆ...ಅಲ್ಲಿಂದ ಒಂದು ಘಂಟೆ ಪ್ರಯಾಣ ಮಡಗಾಂವ್  ಸ್ನೇಹಿತರ ಮನೆಗೆ....

ಮನೆ ತಲುಪಿ ಮಕ್ಕಳು ಸ್ನಾನ ಮುಗ್ಸಿದ್ದ ಮೇಲೆ ಆಟ ಶುರುಮಾಡಿದ್ರು ...ನಾನು ನನ್ನ ಸ್ನೇಹಿತೆ ಜೊತೆ ಹರಟೆ...ನನ್ನ ಗಂಡ ಸ್ನೇಹಿತರ ಅಂಗಡಿಗೆ...ದಾಮೋದರ್ಗೆ  ಅವತ್ತು "A+ ಗ್ರೇಡ್ " ಬಂದಿದ್ದರಿಂದ ತಂದೆಗೆ ಮನೆಗೆ ಹೋದ ಕೂಡಲೇ ಫೋನ್ ಮಾಡಿ "ಪಿಜ್ಹಾ ಪಾರ್ಟಿ " ಅರೇ0ಜ್ ಮಾಡಿದ್ದ...ರಾತ್ರಿ ಊಟದ ಚಿಂತೆ ಇರಲಿಲ್ಲ....ಸ್ನೇಹಿತೆ ಮರುದಿನದ ತಿಂಡಿಗೆ ದೋಸೆ ಹಿಟ್ಟನ್ನು ಮಾತಾಡ್ತಾ ಮಾತಾಡ್ತಾ ರೆಡಿ ಮಾಡಿದ್ರು...9 ಘಂಟೆ ಸಮಯದಲ್ಲಿ ಅಂಗಡಿ ಹುಡುಗ ಪಿಜ್ಹಾ ಮತ್ತು ಕೋಕಾ ಕೋಲಾ ಕೊಟ್ಟು ಹೋದ...ನಾವು ನಾಲ್ವರು ಚೆನ್ನಾಗಿ  ತಿಂದು, ಕುಡಿದು ಮುಗಸಿದ್ವಿ ... :)) 

ಸ್ವಲ್ಪ ಸಮಯ ಬಿಟ್ಟು ಸ್ನೇಹಿತರು, ಗಂಡ ಎಲ್ಲ ಮನೆಗೆ ಬಂದ್ರು ....ಎಲ್ಲಾ ಮುಗಿವಾಗ ಸುಮಾರು 12 ಘಂಟೆ ಸಮಯ ...ಅಲ್ಲಿಗೆ ಅವತ್ತಿನ ದಿನಾ ಮುಗಿದಿತ್ತು...ಚಂದದ ನಿದ್ದೆ...ಸುಂದರ ಕನಸುಗಳು ... 

ಮರುದಿನ ಅಕ್ಟೋಬರ್ 21....  ಗೋವಾದಲ್ಲಿ ನಮ್ಮ ಕೊನೆಯ ದಿನ...ಉಡುಪಿಗೆ  ಮಧ್ಯಾಹ್ನದ ರೈಲ್ವೆ ಟಿಕೆಟ್ ಬುಕ್ ಆಗಿತ್ತು....ಅವತ್ತು ಭಾನುವಾರ...ಎಲ್ಲರು ಎದ್ದದ್ದು ಸ್ವಲ್ಪ ನಿಧಾನವಾಗಿ... ಬೆಳಗಿನ ಚಹಾ ಕುಡಿದು ಅದು ಇದು ಮಾತಾಡ್ತಾ ತಿಂಡಿಯ ಸಮಯ...ಬಿಸಿ ಬಿಸಿ ದೋಸೆ-ಚಟ್ನಿ.... :) 

ಹತ್ತು  ಘಂಟೆಗೆ ಎಳನೀರಿನ  ಸಮಾರಾಧನೆ.... ಮಕ್ಕಳಿಗೆ ಚೋಕೊಲೋವಾ ಕೇಕ್ ...ನಂತರ ಸ್ವಲ್ಪ ಸುತ್ತಾಡಿ ಹೊರಟಿದ್ದು   ಒಂದು ಅಧ್ಭುತ ರೆಸ್ಟೋರಂಟ್ ನಲ್ಲಿ ಲಂಚ್ಗೆ ..ಆಗ ಸುಮಾರು 12 ಘಂಟೆ ಸಮಯ.... 

ನಮಗೆ ಎರಡು ದಿನ ಸತ್ಕಾರ ಮಾಡಿದ ಸ್ನೇಹಿತರ ಕುಟುಂಬ...ರೆಸ್ಟೋರಂಟ್ನಲ್ಲಿ ... 




ನಾರ್ಥ್ ಇಂಡಿಯಾ ತಿಂಡಿ  ಮುಗಿಸಿ ಆಗಲೇ ಪ್ಯಾಕಿಂಗ್ ಮಾಡಿ ಇಟ್ಟಿದ್ದ ಲಗೇಜ್  ತಂದು ....ಸ್ನೇಹಿತರಿಗೆ "ಬಾಯ್" ಹೇಳಿ ಸ್ಟೇಷನ್ಗೆ ಬರುವಾಗ ಆಗಲೇ ನಮ್ಮ ರೈಲು ಸಿದ್ಧವಾಗಿ ನಿಂತಿತ್ತು.... ಮಧ್ಯಾಹ್ನ ಎರಡಕ್ಕೆ ಪ್ರಯಾಣ ಶುರು...

ಚಂದದ ಗೋವಾಕ್ಕೆ ವಿದಾಯ ಹೇಳುತ್ತಾ...ಹಲವು ನೆನಪುಗಳ ಜೊತೆ ಪ್ರಯಾಣ ಮರಳಿ ನಮ್ಮ ಗೂಡಿಗೆ....

ಆರು ದಿನಗಳು ...ಆರು ನಿಮಿಷಗಳಂತೆ ಕಳೆದು ಹೋಗಿತ್ತು..... 

ಪ್ರಯಾಣ ಮಧ್ಯೆ ಚಹಾ, ಬಿಸ್ಕಿಟ್ ತಿಂತಾ ಸಮಯ ಕಳೆಯುತ್ತಿತ್ತು ....ಸಂಜೆ ಕವಿದು ಕತ್ತಲಾಗುವ ಸಮಯ....ಊರು ಹತ್ತಿರ ಹತ್ತಿರ ಬರುತ್ತಿದ್ದಂತೆ ......ನೀಲಂ ಚಂಡಮಾರುತದ ಅಡ್ಡ ಪರಿಣಾಮ ಶುರುವಾಗಿತ್ತು....ಭಟ್ಕಳ, ಕುಮಟ , ಕುಂದಾಪುರ ದಾಟುವಾಗ ಜೋರು ಮಳೆ.... ಚಳಿಗಾಳಿ.... 

ದೂರದಿಂದ ಮಣಿಪಾಲದ ಲೈಟ್ ಕಾಣುತ್ತಿತ್ತು ... ನಮ್ಮ ಇಂದ್ರಾಳಿ ನಿಲ್ದಾಣ ಹತ್ತಿರ ಬರುತ್ತಿತ್ತು...ಪುನಃ ಲಗೇಜ್ ತೆಗೆದು ಇಳಿಯಬೇಕಿತ್ತು ...ರೈಲು ನಂತರ ಮಂಗಳೂರಿನೆಡೆಗೆ ಪಯಣಿಸಲಿಕ್ಕಿತ್ತು .... ನಮ್ಮ ಸ್ಟೇಷನ್ನಲ್ಲಿ ಸ್ವಲ್ಪ ಸಮಯ ಮಾತ್ರ ನಿಲುಗಡೆ....ಆ ಮಳೆಯಲ್ಲಿ ಲಗೇಜ್ ಎತ್ತಿಕೊಂಡು ಇಳಿವಾಗ ಸಾಕೋ ಸಾಕು.... ಭಾನುವಾರ ಆದ್ದರಿಂದ ರಿಕ್ಷಾಗಳು ಸಾಕಷ್ಟಿರಲಿಲ್ಲ..ಕೊನೆಗೆ ಒಬ್ಬ ಗುರುತಿನ ಡ್ರೈವರ್ಗೆ ಫೋನ್ ಮಾಡಿ ಆಟೋ ಹತ್ತಿ ಮನೆಗೆ ತಲುಪುವಾಗ ರಾತ್ರಿ 8.30.... ಹೊರಗೆ ಮಿ0ಚುತಿತ್ತು ...ಸಣ್ಣಗೆ ಜಿಟಿಜಿಟಿ ಮಳೆ....

ಮನೆ ತಲುಪಿ ಕೈ ಕಾಲು ತೊಳೆದು .... ಆಗಲೇ ಅತ್ತೆ ಮಾಡಿಟ್ಟ ಊಟ ಮಾಡಿ ಮಲಗಿದ್ದಷ್ಟೇ ..... ಪ್ರಯಾಣದ ಆಯಾಸಕ್ಕೆ ಒಳ್ಳೆಯ ನಿದ್ರೆ.... :))

ಹೀಗೆ  ನಮ್ಮ ಗೋವಾದಲ್ಲಿ ಐದು ರಾತ್ರಿ...ಆರು ದಿನ ಮುಗಿದಿತ್ತು.... :))

ಪ್ರೀತಿಯ ಸ್ನೇಹಿತರೆ ನನ್ನ ಜೊತೆ ಗೋವಾದ ಪ್ರಯಾಣ ಮಾಡಿದ ನಿಮಗೆಲ್ಲರಿಗೂ ವಂದನೆಗಳು.... :))

ಪ್ರೀತಿಯಿಂದ 

ಸುದೀಪ .....


Tuesday 13 November 2012

ಗೋವಾದಲ್ಲಿ ಐದು ರಾತ್ರಿ.. ಆರು ದಿನ.... ಭಾಗ-2

......ಮುಂದುವರಿದ ಪ್ರವಾಸ ಕಥೆ.....


 ಅಕ್ಟೋಬರ್ 18....ಇವತ್ತು  ಸ್ವಲ್ಪ ಲೇಟಾಗೆ ನಮಗೆ ಬೆಳಗಾಯ್ತು ..ಯಾಕಂದ್ರೆ ಇವತ್ತಿನ ಪ್ರಯಾಣದ ಸಮಯ ಶುರು 9.30ಕ್ಕೆ ...ಬೆಳಿಗ್ಗೆ 6.30 ಕ್ಕೆ  ಎದ್ದು ಬ್ರಶ್,ಸ್ನಾನ ಎಲ್ಲಾ ಮುಗಿಸಿ ನಮ್ಮ ರೆಸಾರ್ಟ್ನಿಂದ ಹೊರಟಿದ್ದು  8 ಘಂಟೆಗೆ ....ಅಂಜುನಾದಿಂದ ಮಾಪುಸಾ ತಲುಪುವಾಗ ಸಮಯ  8.30 .  ಪುನಃ ನಮ್ಮ "ವೃಂದಾವನ " ಹೋಟೆಲ್ಗೆ ಹೋಗಿ ತಿಂಡಿ-ಕಾಫಿ ಮುಗಿಸಿ ಮಾಪುಸಾ ರೆಸಿಡೆನ್ಸಿ ತಲುಪಿದ್ವಿ..
ಅವತ್ತು ನಮ್ಮ ಪ್ರಯಾಣ "ಉತ್ತರ ಗೋವಾ " ಕಡೆಗೆ ....ನಮ್ಮ ಬಸ್ ಮೊದಲು ಹೊರಟಿದ್ದು "ಕೊಲಂಗುಟ್  ರೆಸಿಡೆನ್ಸಿಗೆ "...ಅಲ್ಲಿ ಸುಮಾರು ಸಹಪ್ರಯಾಣಿಕರು ಹತ್ತಿದ ಮೇಲೆ ನಮ್ಮ  ಪ್ರಯಾಣ ಶುರು ...ಆಗ ಸುಮಾರು ಹತ್ತು ಘಂಟೆ ..ಬಿಸಿಲು ನಮ್ಮ ನೆತ್ತಿ ಸುಡಲು ಶುರು ಮಾಡಿತ್ತು ...

ಮೊದಲು ನಾವು ಭೇಟಿ ಕೊಟ್ಟಿದ್ದು   ಗೋವಾದ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳ .."ಅಗುಡಾ ಫೋರ್ಟ್ " (Aguada Fort)  ...ಇದು ಇರೋದು ಮಾಂಡವಿ ನದಿಯ ದಡದಲ್ಲಿ ..ಇದು ಹದಿನೇಳನೆ ಶತಮಾನದ ಪೋರ್ಚುಗೀಸರ ಕಾಲದ್ದು .ಆಗ ಅವರ ಎದುರಾಳಿಗಳಾಗಿದ್ದ ಡಚ್ ಮತ್ತು ಮರಾಠರಿಂದ ರಕ್ಷಿಸಿಕೊಳ್ಳಲು ಇದನ್ನು ಕಟ್ಟಿದ್ದರು. ಕೆಂಪು ಕಲ್ಲಿನ ಕೋಟೆ..ಇಲ್ಲಿ ಆಗ ಸಿಹಿನೀರಿನ ವ್ಯವಸ್ಥೆ ಇತ್ತಂತೆ . ಅಲ್ಲಿ ಸಾಗುವ ಹಡಗುಗಳಿಗೆ ಆಗ  ನೀರಿನ ವ್ಯವಸ್ಥೆ ಮಾಡುತ್ತಿದ್ದರಂತೆ....ಅದಕ್ಕೆ ಈ ಸ್ಥಳಕ್ಕೆ "ಅಗುಡಾ " ಎಂಬ ಹೆಸರು ...ಅಗುಡಾ  ಅಂದರೆ "ನೀರು" ....ಸ್ವಲ್ಪ ಸಮಯ  ಈ ಕೋಟೆಯನ್ನು ಜೈಲಾಗಿ ಸಹಾ ಉಪಯೋಗಿಸುತ್ತಿದ್ದರಂತೆ ...ಈ  ಕೋಟೆಯ ಎದುರುಗಡೆ ಅದೆಷ್ಟು ದೊಡ್ಡ ಕಂದಕಗಳೆಂದರೆ ಯಾವ ಖೈದಿಯು ತಪ್ಪಿಸಿಕೊಳ್ಳಲಾರದಷ್ಟು ...






ಇದು ಅಲ್ಲಿಯ ಲೈಟ್ ಹೌಸ್ ....




ಕೋಟೆಯ ಒಳಭಾಗದ ಒಂದು ನೋಟ 


ಸುಂದರ ಒಳಾಂಗಣ




ಕೋಟೆಯ ಹೊರಭಾಗದ ಒಂದು ದೃಶ್ಯ








ಈ ಕೆಳಗಿನ ಚಿತ್ರ ನೋಡಿದರೆ ನೆನಪಾಗೋದು ನಮ್ಮ ಪ್ರಯಾಣದಲ್ಲಿ ಸಹಪ್ರಯಾಣಿಕರಾಗಿದ್ದ ಈ ದಂಪತಿಗಳು ...ಈ ಅಂಕಲ್ ದೆಹಲಿಯಿಂದ ಬಂದವರು ...ತುಂಬಾ ತಮಾಷೆ ಮನುಷ್ಯ ....ಈಗ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ...ನಾನದಕ್ಕೆ "ಅಂಕಲ್ ಈಗ ಮನೆಯಲ್ಲಿ ಸಮಯ ಹೇಗೆ ಕಳೆಯುತ್ತಿರಿ ..??? " ಅಂದಿದ್ದಕ್ಕೆ ..."ದೀಪಾ ...ಕುಚ್ ನಹಿಜಿ ...ಖಾತೆ ಹೇ ....ಪೀತೇ ಹೇ ....ಸೋತೇ ಹೇ ...ಅಗರ್ ಟೈಮ್ ಮಿಲಾ ತೋ ಬೀವಿ ಸೆ ಪ್ಯಾರ್ ಭೀ ಕರ್ತೆ ಹೇ ..." ಅಂದಾಗ ಅಲ್ಲೊಂದು ದೊಡ್ಡ ನಗೆ ಎಲ್ಲರ ಮುಖದಲ್ಲಿ ಮೂಡಿತ್ತು ..ಅವರ ಹೆಂಡತಿ ಪಾಪ ನಾಚಿ ಕೆಂಪಾಗಿದ್ದರು ...ಕಣ್ಣಿನಿಂದಲೇ ಗಂಡನನ್ನು ಬೈದಿದ್ದರು ಸಹಾ .... :))




ಕೋಟೆಯನ್ನೆಲ್ಲಾ ಸುತ್ತು ಬಂದು ಅಲ್ಲಿಂದ ನಾವು ಸುಮಾರು ಒಂದು ಘಂಟೆ ಪ್ರಯಾಣ ಮಾಡಿ ತಲುಪಿದ್ದು ..    "ಮಾಯೇಮ್ ಲೇಕ್ "..ನಿಸರ್ಗದ ಮಡಿಲಲ್ಲಿರುವ ಇಲ್ಲಿ ಬೋಟಿಂಗ್ ವ್ಯವಸ್ಥೆ ಸಹಾ ಇದೆ. ನನ್ನ ಮಗನಿಗೆ ಆ ಉರಿ ಬಿಸಿಲಿನಲ್ಲೂ ಆ ಪೆಡಲ್ ಬೋಟ್ನಲ್ಲಿ ಹೋಗಬೇಕೆಂಬ ಆಸೆ...ಸರಿ ಎಂದು ನಾವು ಹೊರಟಿದ್ದು ಹೀಗೆ...




ಸುಂದರ ಪ್ರಕೃತಿ ನಮ್ಮ ಮುಂದೆ ಹೀಗಿತ್ತು 



ಕೇವಲ ಒಂದೇ ಒಂದು ಬಾತು ಈಜುತ್ತಿತ್ತು ನಮ್ಮ ದೋಣಿಯ ಹತ್ತಿರ ....



 
ಸುಮಾರು ಬಾತುಕೋಳಿಗಳು ತುಂಬಾ ದೂರದಲ್ಲಿ ಇದ್ದವು. ಅಲ್ಲಿದ್ದ ಸೆಕ್ಯುರಿಟಿ, "ಮೇಡಂ ..ನಿಮ್ಮ ಹತ್ತಿರ ಬಿಸ್ಕತ್ ಅಥವಾ ಏನಾದರು ತಿಂಡಿ ಇದ್ದರೆ ಕೊಡಿ ...ನಾನು ಅವುಗಳನ್ನು ಕರಿತೀನಿ" ಅಂದಾಗ  " ಸರಿ ಕರಿಯಪ್ಪಾ " ಅಂದೆ..ಅವನು .."ಬಾ ..ಬಾ ...ಬಾ ..." ಅಂತ ಕರೆದದ್ದೇ ತಡ ....ಬಾತುಗಳು
ಶಬ್ದ ಮಾಡುತ್ತಾ ಬರುವ ಬಗೆ ಹೀಗಿತ್ತು .... :))



ಆ ಬಾತುಗಳು  ಮುದ್ದು ಮುದ್ದಾಗಿ ಚಿಪ್ಸ್ ತಿಂದದ್ದು ಹೀಗೆ .... :))



ಮಾಯೇಮ್  ಲೇಕ್ ನಂತರ ನಾವು ದಾರಿ ಮಧ್ಯೆ ಭೇಟಿ ನೀಡಿದ ಒಂದು ಸ್ಥಳ 
ಮಹಾದೇವ ದೇವಸ್ಥಾನ ....


ದೇವಸ್ಥಾನದ ದರ್ಶನದ ನಂತರ ಊಟದ ಸಮಯವಾಗುತ್ತಿತ್ತು ....ನಮ್ಮ ಬಸ್ ನಿಂತದ್ದು ಒಂದು ವೆಜ್-ನಾನ್ ವೆಜ್ ರೆಸ್ಟೋರಂಟ್ ಹತ್ತಿರ....ಆಗಲೇ ಜನಗಳು ತುಂಬಿದ್ದರು..ನನ್ನ ಗಂಡ ಗೋವಾದ "ಫಿಶ್-ಥಾಲಿಗೆ " ಆರ್ಡರ್ ಕೊಟ್ಟರೆ ನಾನು ವೆಜ್ ಥಾಲಿ ....ಅವರ ಊಟದ ವಾಸನೆ ಅನುಭವಿಸಿ ನನಗಂತು ಊಟ ಮಾಡಿದ್ದು ಸಮಾಧಾನವಾಗಿಲ್ಲ... :( ಈ ಕಾರಣಕ್ಕೆ ನನ್ನಿಂದ ಸ್ವಲ್ಪ ಬೈಸಿಕೊಂಡರು ...ಸಹಾ....ಊಟ  ಮುಗಿಸಿ ನಮ್ಮ ಮುಂದಿನ ಪ್ರಯಾಣ  "ವ್ಯಾಗಾಟಾರ್ ಬೀಚ್...."

ಚಂದದ ವ್ಯಾಗಾಟಾರ್ ಬೀಚ್ನ ಒಂದು ದೃಶ್ಯ ..


ಅಲ್ಲೊಂದು ಶೂಟಿಂಗ್ ನಡೀತಿತ್ತು ...ತೆಲುಗು ಚಿತ್ರದ ಹಾಡಿನದ್ದು ...


ವ್ಯಾಗಟಾರ್ ಬೀಚ್ ನಂತರ ನಮ್ಮ ಪಯಣ "ಅಂಜುನಾ ಸಮುದ್ರದ" ಕಡೆಗೆ .
.ಇದು ನಮ್ಮ ರೆಸಾರ್ಟ್ನಿಂದ ಕೇವಲ ಅರ್ಧ ಕಿ.ಮೀ ದೂರ ಇತ್ತು ....ಇಲ್ಲಿಯ ವಿಶೇಷತೆ ಅಂದರೆ ತೀರದಲ್ಲಿ ಮರಳು ಕಡಿಮೆ ...ಬಂಡೆ ಕಲ್ಲುಗಳೇ ಜಾಸ್ತಿ .....ಗೋವಾದಲ್ಲಿನ ಸಮುದ್ರಗಳು ಒಂದಕ್ಕಿಂತ ಒಂದು ಭಿನ್ನ .....



ಅಂಜುನಾದ ತೀರದಲ್ಲಿ ನಮ್ಮ ಕುಟುಂಬ ...


ಅಲ್ಲಿಗೆ ಅದು ನಮ್ಮ ಕೊನೆಯ ವೀಕ್ಷಣಿಯ ಸ್ಥಳವಾಗಿತ್ತು ..... ಆದರೆ ಇವತ್ತೇಕೋ ನೋಡಿದ ಸ್ಥಳಗಳಿಗಿಂತ ಪ್ರಯಾಣವೇ ಜಾಸ್ತಿ ಅನ್ನಿಸ್ತಾ ಇತ್ತು....ಹೀಗೆ ನಾನು ಯೋಚನೆ ಮಾಡ್ತಾ ಇದ್ದರೆ ಬಸ್ಸಿನಲ್ಲಿ "ಅಶ್ವಿನ್" ಮತ್ತು "ಮನ್ನತ್" ಆಟ ಹೀಗೆ ಸಾಗಿತ್ತು ....stone... paper..scissors......


ಪುನಃ ನಮ್ಮ ಪ್ರಯಾಣ ಸಾಗಿದ್ದು ಕೊಲ್ಲo ಗುಟ್ ರೆಸಿಡೆನ್ಸಿಗೆ... ನಂತರದ ನಮ್ಮ ಕಾರ್ಯಕ್ರಮ ..ಪಣಜಿಯಲ್ಲಿರುವ ಸಂಜೆ 6 ಘಂಟೆಗೆ ಶುರುವಾಗುವ "ರಿವರ್ ಕ್ರೂಸ್"....ಸುಮಾರು ದೊಡ್ಡ ಬೋಟ್ನಲ್ಲಿ ಒಂದು ಘಂಟೆಯ ಪ್ರಯಾಣ ...ಭರ್ಪೂರ್  ಮೋಜು-ಮಸ್ತಿ ...ಅಂದರೆ ಹಾಡು, ನೃತ್ಯ .....ಆ ದೋಣಿಯಲ್ಲಿ ಸುಮಾರು ದೊಡ್ಡ ವೇದಿಕೆ ...150 ರಿಂದ 200 ಖುರ್ಚಿಗಳು ... ಮಕ್ಕಳಿಗೆ , ಮಹಿಳೆಯರಿಗೆ ,ಪುರುಷರಿಗೆ , ಜೋಡಿಗಳಿಗೆ , ಎಲ್ಲರಿಗೂ ನೃತ್ಯ ಮಾಡುವ ಅವಕಾಶ....ಜೊತೆಗೆ ಅವರ ಸಿಬ್ಬಂದಿಯಿಂದ ಹಾಡು ನೃತ್ಯ ...ಸಂಜೆಯ ಸಮಯ...ಕತ್ತಲಾಗುತ್ತಾ ಬರ್ತಿತ್ತು ...ನಾವು ಒಂದು ಘಂಟೆ ನೀರಿನಲ್ಲಿ ತೇಲುತ್ತಿದ್ದೇವೆ ಎಂದು ಮರೆಸುವಷ್ಟು ಮನರಂಜನೆ .... 

ದೋಣಿಯೊಳಗೆ ಹೀಗೆ ಕೂತಿದ್ವಿ ನಾವು .... :))



ಅವರ ಸಿಬ್ಬಂದಿಯಿಂದ ಮೊದಲ ನೃತ್ಯ ...ದೇಶ ಭಕ್ತಿಯ ಹಾಡಿಗೆ....



ನಮ್ಮ ಬೋಟ್ ನಿಂದ ಕಂಡ ಇನ್ನೊಂದು ಅಲಂಕೃತ ದೋಣಿ ...



ಸಧ್ಯಕ್ಕೆ  ಅಪ್ಲೋಡ್ ಆದ ಒಂದೇ ವಿಡಿಯೋ ...ಗೋವಾದಲ್ಲಿ ಪ್ರಸಿದ್ಧಿಯಾದ ತೆಂಗಿನಕಾಯಿಯ  ಚಿಪ್ಪಿನ ಜೊತೆ ಒಂದು "ಗೋವನ್ ನೃತ್ಯ "....ಇನ್ನೆರಡು ಚಂದದ ವಿಡಿಯೋಗಳು ಯಾಕೋ ಕೈ ಕೊಟ್ಟಿದೆ ...ಅಪ್ಲೋಡ್ ಮಾಡಕ್ಕೆ ಆಗತಾನೆ ಇಲ್ಲ .. :((


ರಿವರಕ್ರುಸ್ ಮುಗಿಸಿ ಹೊರ ಬರುವಾಗ ಸಮಯ 7.45 ದಾಟಿತ್ತು ...ನಮಗೆ ಅಂಜುನಾಗೆ ಕೊನೆಯ ಬಸ್ 8 ಕ್ಕೆ ....ನಮ್ಮ ಡ್ರೈವರ್ ಪಾಪ...ಫಾಸ್ಟ್ ಆಗಿ ಗಾಡಿ ಓಡಿಸಿ ಸುರಕ್ಷಿತವಾಗಿ ನಮಗೆ ಬಸ್ ನಿಲ್ದಾಣಕ್ಕೆ ತಲುಪಿಸಿದ್ದರು ...ಅವರಿಗೊಂದು .."ಥ್ಯಾಂಕ್ಸ್ " ಹೇಳಿ ಬಸ್ ಹಿಡಿದು ಅಂಜುನಾ ತಲುಪುವಾಗ ರಾತ್ರಿ 8.45 ...ರೂಮಿಗೆ ಬಂದು ಒಮ್ಮೆ ಫ್ರೆಶ್ ಆಗಿ ರಾತ್ರಿಯ ಊಟಕ್ಕೆ ಇನ್ನೊಂದು ಹೋಟೆಲ್ಗೆ ಹೋದ್ವಿ ...ಅದರ ಹೆಸರು.."ಇಥಿಯೋಪಿಯಾ "...ನನ್ನ ಪುಣ್ಯಕ್ಕೆ ಅಲ್ಲಿಯ ವಾತಾವರಣ ಚೆನ್ನಾಗಿತ್ತು ..ಊಟ ಮುಗಿಸಿ ರೂಮ್ ತಲುಪಿದ ನಂತರ ಪ್ಯಾಕಿಂಗ್ ಮಾಡಬೇಕಿತ್ತು ...ಮರುದಿನ ನಮ್ಮ ಚೆಕ ಔಟ್  ಇತ್ತು ...ಎಲ್ಲಾ ಮುಗಿಸಿ ಮಲಗುವಾಗ ಹನ್ನೊಂದು ಘಂಟೆ .... ಉಫ್ .......

ಮರುದಿನ ಅಕ್ಟೋಬರ್ 19...ಬೆಳಕಾಯ್ತು ..ಎಲ್ಲಾ ಬೆಳಗಿನ ಕೆಲಸ ಮುಗಿಸಿ ರಿಸೆಪ್ಶನ್ನಲ್ಲಿ ಬಿಲ್ ಚುಕ್ತಾ ಮಾಡಿ ರೆಸಾರ್ಟ್ನಿಂದ ಹೊರಬರುವಾಗ ನೆನಪಾದದ್ದು ...ನಾವು ಮೂರೂ ದಿನದಿಂದ ಇಲ್ಲಿ ಇದ್ದರು ..ಬೆಳಿಗ್ಗೆ ಅವಸರದಲ್ಲಿ ಹೊರಡೋದು ...ಕತ್ತಲೆಯಾದ ಮೇಲೆ ರೂಮು ಸೇರೋದು...ಹಾಗಾಗಿ   ಒಂದು ಫೋಟೋ ತೆಗೆದಿಲ್ಲ ಎಂದು .....ಕೂಡಲೇ ಕ್ಯಾಮರಾ ಹೊರತೆಗೆದು ಕ್ಲಿಕ್ಕಿಸಿದ ಚಿತ್ರಗಳು ಹೀಗಿದ್ದವು ....

ಇದು ಅಲ್ಲಿಯ ವಿಶ್ರಾಂತಿ ಸ್ಥಳ...



ನಮ್ಮ ರೂಮ್ನ ಹೊರಭಾಗದಲ್ಲಿ..... 



ಬೆಳಗಿನ ಎಳೆ ಬಿಸಿಲಿನಲ್ಲಿ ರೆಸಾರ್ಟ್ನ ಲುಕ್ ಹೀಗಿತ್ತು..



ಅಲ್ಲಿಯ ಅತಿ ಸುಂದರ ಈಜುಕೊಳ 



ನಮ್ಮ ರೆಸಾರ್ಟ್ನ ಮುಂಭಾಗ ....


ಫೋಟೋ ಸೆಶನ್ ಮುಗಿಸಿ ಬಸ್ ಹಿಡಿದು ಬರಬೇಕಾದರೆ ಆಗಲೇ ಒಂದು ಬಸ್ ಮಿಸ್....:(   ನನ್ನ ಗಂಡ ಅಂತು "ಬೇಗ ಬರೋದು ಬಿಟ್ಟು ಅದೇನು ಫೋಟೋ ಹುಚ್ಚು" ಅಂತ ಗೊಣಗ್ತಾ ಇದ್ದರು ...ಅದಕ್ಕೆ ನಾನು "ಬಸ್ ಇನ್ನೊಂದು ಸಿಗುತ್ತೆ ...ಫೋಟೋ ಬೇಕಂದ್ರೆ ಪುನಃ ಗೋವಾಕ್ಕೆ ಬರಕ್ಕೆ ಆಗತ್ತಾ ಅಂತ " ಉತ್ತರ ಕೊಟ್ಟು ಸುಮ್ಮನಾಗಿಸಿದ್ದೆ ....

ನಂತರ ಹತ್ತು ನಿಮಿಷ ಕಾದು ಬಂದ ಬಸ್ನಲ್ಲಿ ಮಾಪುಸಾಗೆ ಬಂದು ತಿಂಡಿ ತಿಂದು ನಾವು ಹೊರಟದ್ದು ಪಣಜಿಗೆ..... ಎರಡು ದೊಡ್ಡ ಬ್ಯಾಗನ್ನು ಬಸ್ಸಿನ ಡಿಕ್ಕಿಯಲ್ಲಿ ಹಾಕಿದ್ರೆ, ಇನ್ನೊಂದು ಬ್ಯಾಗ್ ನಾವು ಕೂರುವ ಮೇಲೆ ಇರುವ ಸಾಮಾನಿಡುವ ಜಾಗದಲ್ಲಿ ಇಟ್ಟಿದ್ದೆವು ....ಪಣಜಿಯಲ್ಲಿ ಇಳಿದು ನೀರಿನ ಬಾಟಲ್ ಅಂತ ನೆನಪಾದ್ರೆ ...ನೀರಿದ್ದ  ನಮ್ಮ ಒಂದು ಬ್ಯಾಗ್ ಬಸ್ ಒಳಗಡೇನೆ  ಮರೆತಿದ್ವಿ...ಪುನಃ ಓಡಿದರೆ ದೇವರ ದಯದಿಂದ ಬಸ್ ಇನ್ನು  ಅಲ್ಲೇ ಇತ್ತು ...ನಮ್ಮ ಬ್ಯಾಗ್ ಸಹಾ ಸುರಕ್ಷಿತವಾಗಿತ್ತು ...ಅಕಸ್ಮಾತ್ ಕಳೆದಿದ್ದರೆ ಅದರಲ್ಲಿದ್ದ ಇನ್ನೊಂದು ಕ್ಯಾಮರಾ ನಮ್ಮ ಕೈ ತಪ್ಪಿ ಹೋಗುತ್ತಿತ್ತು ....

ಪಣಜಿಯಿಂದ  ನಮ್ಮ ಪ್ರಯಾಣ ...ಸ್ನೇಹಿತರ ಮನೆ "ಮಡಗಾಂವ್ ಗೆ" ...ಇನ್ನು ನಮ್ಮ ಎರಡು ದಿನದ ಉಳಿಯುವ ವ್ಯವಸ್ಥೆ ಅವರ ಮನೆಯಲ್ಲಿ ....ಅಲ್ಲಿ ತಲುಪುವಾಗಲೇ 11 ಘಂಟೆ ...ಲಗೇಜ್ ಎಲ್ಲಾ ಇಟ್ಟು ಸ್ವಲ್ಪ "ಚಾ" ಕುಡಿದು ನಾವು ಹೊರಟಿದ್ದು "ಜಾoಬವಲಿ   ದಾಮೋದರ ದೇವಸ್ಥಾನಕ್ಕೆ ..." ಅದು ನಮ್ಮ ಕುಲದೇವರಾದ್ದರಿಂದ ಅಲ್ಲಿ ಭೇಟಿ ಕೊಡಬೇಕಿತ್ತು ...ಪುನಃ ಬಸ್ ಪ್ರಯಾಣ ...ಅಲ್ಲಿ ತಲುಪುವಾಗ ಮಧ್ಯಾಹ್ನ 1.30 ....ದೇವರ ಸೇವೆ ಮಾಡಿಸಿ ಅಲ್ಲಿಯೇ ಊಟದ ವ್ಯವಸ್ಥೆ ಇದ್ದದ್ದರಿಂದ ಅದನ್ನು ಮುಗಿಸಿದ್ದೆವು... ತುಂಬಾ ದಿನದ ನಂತರ ಅನ್ನ-ಸಾಂಬಾರು , ಉಪ್ಪಿನಕಾಯಿ,ಪಲ್ಯ ತಿಂದಿದ್ದೆವು...ನಾನು ಅಲ್ಲಿ ಹೋಗದೆ ಸುಮಾರು ಆರು ವರ್ಷಗಳೇ ಕಳೆದಿತ್ತು ..ನನ್ನ ಮಗ ಮೂರೂ ವರ್ಷದವನಿದ್ದಾಗ ಒಮ್ಮೆ ಭೇಟಿ ನೀಡಿದ್ದೆವು ..ಆಗ ಅವನು "ಶೂ " ಹಾಕಿಕೊಂಡು ದೇವಳದ ಒಳಗೆ ಬರಬೇಕೆಂದು ಹಠ ಮಾಡ್ತಾ ಇದ್ದ...ಈ ಸಾರಿ ಅವನಿಗೆ "ನೆನಪಿದೆಯೇನೋ ನಿನ್ನ ಪುಂಡತನ ?? ".....ಎಂದರೆ "ಇಲ್ಲ" ಅಂತಾ ತಲೆಆಡಿಸ್ತಾ  ಉತ್ತರ ಕೊಟ್ಟ .....

ಕೆಳಗೆ ಅಲ್ಲಿಯ ಕೆಲವು ಚಿತ್ರಗಳು ಇದೆ ನೋಡಿ 
ಶ್ರೀ ದಾಮೋದರ ದೇವಸ್ಥಾನ ...ಜಾoಬವಲಿ ..ಗೋವಾ ..



ದೇವಸ್ಥಾನದ ಒಳಭಾಗದಲ್ಲಿ ಕ್ಯಾಮರಾ ನಿಷಿದ್ಧ ಇರುವುದರಿಂದ ಹೊರಗಿನಿಂದಲೇ ಒಂದು ಕ್ಲಿಕ್ ....



ದೇವಸ್ಥಾನದ ಹೊರಭಾಗದಲ್ಲಿ ನಾವು...


ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡು 4 ಘಂಟೆಗೆ ಅಲ್ಲಿoದ ಪುನಃ ಮಡಗಾಂವ್ ಗೆ ವಾಪಸ್ಸು ....ಅಲ್ಲಿ ತಲುಪಿದಾಗ ಸಂಜೆ ...ಎದುರಿಗೆ ಸಿಕ್ಕಿದ್ದು "ಕಾಮತ್ ಹೋಟೆಲ್ " ಅಲ್ಲಿ ಕಾಫಿ-ತಿಂಡಿ ತಿಂದು ಹತ್ತಿರವೇ ಇದ್ದ ಉದ್ಯಾನವನಕ್ಕೆ ಹೋದ್ವಿ .....

ಅಲ್ಲಿ ತೆಗೆದ ಒಂದು ಫುಲ್ ಫ್ಯಾಮಿಲಿ ಚಿತ್ರ ...



ಸುಂದರ ಉದ್ಯಾನವನದ ಒಂದು ನೋಟ 


ನಂತರ ಸ್ವಲ್ಪ ಮಡಗಾಂವ್ ಪೇಟೆ -ಅಂಗಡಿ ಸುತ್ತಿ ಸ್ನೇಹಿತರ ಜೊತೆ 8 ಘಂಟೆಗೆ ಅವರ ಮನೆ ತಲುಪಿದ್ವಿ....

ಅಲ್ಲಿ ಅವರ ಮಗನ ಜೊತೆ ನನ್ನ ಮಗ.. :)) ಇಬ್ಬರು ಟಿ ವಿ , ಕಂಪ್ಯೂಟರ್ ಅಂತ ಫುಲ್ ಬ್ಯುಸಿ .....


 ...ಅವರು ರಾತ್ರಿಗೆ ಊಟಕ್ಕೆ ಚಿಕನ್ ಐಟಂ  ಪಾರ್ಸೆಲ್ ತಂದಿದ್ದರು...ನನಗೋಸ್ಕರ ಸಸ್ಯಾಹಾರಿ ತಿoಡಿಗಳು..ಇದನ್ನೆಲ್ಲಾ ತಿಂದು ಮುಗಿಸಿ, ಹರಟೆ ಹೊಡೆದು  ಮಲಗುವಾಗ ರಾತ್ರಿ ಸುಮಾರು 11.30 ಘಂಟೆ ... 

ಅಲ್ಲಿಗೆ ಅವತ್ತಿನ ನಮ್ಮ ದಿನ-ರಾತ್ರಿ  ಮುಗಿದಿತ್ತು ...

ಇನ್ನುಳಿದ ಪ್ರಯಾಣ ಕಥೆಗಳು ಮುಂದಿನ ಸಂಚಿಕೆಯಲ್ಲಿ....

ಪ್ರೀತಿಯಿಂದ 

ಸುದೀಪ .....