Monday 9 July 2012

ಕೆಂಪು ಮಹಲ್...


ಮರಳು ಶಿಲ್ಪ...
ಅಂದ್ರೆ ನೆನಪಾಗೋದು ..ಸುಂದರ ಸಮುದ್ರ ತೀರದಲ್ಲಿ ಉತ್ತಮ ಕಲಾವಿದರಿಂದ ಮೂಡುವ ಅತ್ಯಂತ ಚಂದದ ಕಲಾಕ್ರುತಿಗಳು..ಈ ಕಲಾಕ್ರುತಿಗಳೆಂದರೆ ನನಗೆ ತುಂಬಾ ಆಸಕ್ತಿ.. ನಿಜವಾಗ್ಲು ಕಣ್ಣಿಗೆ ಹಬ್ಬ..


ಉಡುಪಿ ಹತ್ತಿರದ ಸಮುದ್ರ ತೀರದಲ್ಲಿ ಇಲ್ಲಿಯ ಸ್ಥಳೀಯ ಕಲಾವಿದರು ಯಾವಾಗಲು ಏನಾದರು ವಿಶೇಷ ಸಂಧರ್ಭಗಳಲ್ಲಿ ಮರಳು ಶಿಲ್ಪ ರಚಿಸುತ್ತಾರೆ..ಮಲ್ಪೆಯಲ್ಲಿ ವರ್ಷಕ್ಕೊಮ್ಮೆ ಬೀಚ್ ಉತ್ಸವ ನಡೆಯುತ್ತದೆ..ಸಂಜೆ ಅಲ್ಲಿ ಜನವೋ ಜನ..


ನಾನು ಇತ್ತೀಚೆಗೆ ಫೇಸ್ಬುಕ್ನಲ್ಲಿ ಕೆಲವೊಂದು ಫುಡ್ ಗ್ರೂಪ್ಗಳಿಗೆ ಸೇರಿದ್ದೇನೆ..ಅಲ್ಲಿ ದಿನಾ ಒಂದೊಂದು ವಿಷಯದ ಬಗ್ಗೆ ಆಹಾರ ಪ್ರದರ್ಶಿಸಲು ಇರುತ್ತದೆ..ಒಮ್ಮೆ ನಮ್ಮ ಇಷ್ಟದ ಆಹಾರ ಪ್ರದರ್ಶಿಸಬಹುದಿತ್ತು..ಮನೆಯಲ್ಲಿ ಹೊಸದಾಗಿ ಮಾಡಿದ ಬೆಳ್ಳುಳ್ಳಿ ಚಟ್ನಿಪುಡಿ ಇತ್ತು..ಸುಮ್ಮನೆ ಒಂದು ಬೌಲ್ನಲ್ಲಿ ಸ್ವಲ್ಪ ಪುಡಿ ಹಾಕಿ ಫ್ಹೊಟೊ ತೆಗೆದರೆ ಮಜಾ ಬರುವುದಿಲ್ಲ ಎಂದು ಯೋಚನೆ ಮಾಡುವಾಗ ನೆನಪಾದದ್ದೆ ಈ ಮರಳು ಶಿಲ್ಪ..ಸರಿ ಶುರುವಾಯ್ತು ನನ್ನ ಟೆನ್ಶನ್..ಹೇಗಪ್ಪ ಇದನ್ನು ಪ್ರೆಸೆಂಟ್ ಮಾಡೋದು ಅಂತ ಯೋಚನೆಮಾಡುವಾಗ ನೆನಪಾದದ್ದು ಏಳು ಅಧ್ಬುತಗಳಲ್ಲಿ ಒಂದಾದ ತಾಜ್ ಮಹಲ್..ಮರಳಿಗೂ ಚಟ್ನಿ ಪುಡಿಗು ಏನೂ ವ್ಯತ್ಯಾಸ ಇಲ್ಲ ಅಂತ ಶುರುಹಚ್ಕೊಂಡೆ..


ಒಂದು ಪ್ಲೇಟ್ನಲ್ಲಿ ಚಟ್ನಿ ಪುಡಿ ಹಾಕಿ ಕರಿಬೇವಿನ ಕಡ್ಡಿಯಿಂದ..ಗೋಪುರ, ಕಂಭ..ಹೀಗೆ ಒಂದೊಂದಾಗಿ ಚಿತ್ರಿಸುತ್ತ ಹೋದೆ..ಆಗಲೆ ಗೊತ್ತಾಗಿದ್ದು ಈ ಕಲೆ ಕಬ್ಬಿಣ್ಣದ ಕಡಲೆ ಎಂದು..ಈ ಮಧ್ಯೆ ಆ ದಿನ ನನ್ನ  ಮಗನಿಗೆ ಶಾಲೆಗೆ ರಜಾ ಬೇರೆ..ಅವನು "ಅಮ್ಮಾ ...ಆಯ್ತಾ..ಇನ್ನು ಎಷ್ಟು ಹೊತ್ತು".. ಅಂತ ರಗಳೆ ಬೇರೆ..ಅಂತೂ ನನ್ನ ಕೆಲಸ ಮುಗಿವಾಗ ಮುಕ್ಕಾಲು ಘಂಟೆ ದಾಟಿತ್ತು..ಮಗನಿಗೂ ಖುಶಿಯಾಯ್ತು..ಅವನು.."ಅಮ್ಮಾ..ತಾಜ್ ಮಹಲ್ ತರಹಾನೆ ಕಾಣುತ್ತೆ"..ಅಂದಾಗ ಮನಸ್ಸಿಗೆ ಸ್ವಲ್ಪ ಸಂತೋಷ ಸಹಾ..ಅಂತೂ ನನ್ನ ಮನಸ್ಸಿಗೆ ಸಮಾಧಾನ ಆದ ಮೇಲೆ ಅದರ ಫ್ಹೋಟೊ ತೆಗೆದು ಗ್ರೂಪ್ನಲ್ಲಿ ಅಪ್ಲೋಡ್ ಮಾಡಿದೆ..ಅದರ ಒಂದು ಝಲಕ್ ನಿಮಗೋಸ್ಕರ..





ನನ್ನ ಸಣ್ಣ ಪ್ರಯತ್ನದ ಅನುಭವವನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ..ಇದಕ್ಕೆಲ್ಲಾ ಮೂಲ ಪ್ರೇರಣೆ ಆ ಮರಳು ಕಲೆ..ಕಲಾವಿದರಿಗೆಲ್ಲಾ ನನ್ನ ವಂದನೆಗಳು..ನೋಡಲಿಕ್ಕೆ ಎಷ್ಟು ಸುಂದರವೋ ಅಷ್ಟೇ ಕಷ್ಟದ ಕೆಲಸ....
ಇದು ನನ್ನ ಬ್ಲಾಗ್ನ ಮೊದಲ ಬರಹ..
ಸ್ನೇಹಿತರೆ...ಓದಿದ್ದಕ್ಕೆ ಧನ್ಯವಾದಗಳು... :)


ಸ್ನೇಹಿತರೆ ಮಲ್ಪೆಯ ಎರಡು ಮರಳು ಕಲಾಕ್ರುತಿಗಳ ಚಿತ್ರ ನಿಮಗಾಗಿ.....