Thursday, 13 December 2012

ಸಂಖ್ಯಾ ಮಹಾತ್ಮೆ....


ಸ್ನೇಹಿತರೆ ಇದನ್ನು ಲಘು ಹಾಸ್ಯಬರಹ  ಎಂದು ಓದಿ.. ಇದೇನಪ್ಪ ದೇವಿ ಮಹಾತ್ಮೆ ಇದ್ದಂಗೆ ಸಂಖ್ಯಾ ಮಹಾತ್ಮೆ ಅಂದುಕೊಂಡ್ರಾ... ಅದರ ಕಥೆ ಹೇಳ್ತೀನಿ ಕೇಳಿ...ಮನುಷ್ಯನಿಗೆ ಜೀವನದಲ್ಲಿ ಏನೇನೋ ಹುಚ್ಚು ಇರುತ್ತೆ.. ಕೆಲವು ಅಪಾಯಕಾರಿ ಆದರೆ ಇನ್ನು ಕೆಲವು, ಯಾರಿಗೂ ತೊಂದರೆ ಆಗದೆ ಇರುವಂಥದ್ದು..ಕೆಲವರ  ಹುಚ್ಚು ಕೆಲಸಗಳು, ಬೇರೆಯವರ  ಕಣ್ಣಿಗೆ ಕಾಣ್ಸತ್ತೆ...ಇನ್ನು ಕೆಲವರ ಹುಚ್ಚು ಅವರ  ಮನಸ್ಸಲ್ಲೇ ಇದ್ದು, ಅವರು ಮಾತ್ರ ಅದನ್ನ ಅನುಭವಿಸ್ತಾ ಇರ್ತಾರೆ..

ನನ್ನ ಬಗ್ಗೆ ಹೇಳ್ಬೇಕಂದ್ರೆ, ನನಗೂ ಒಂದು ರೀತಿ ಈ ಹುಚ್ಚು(ಕ್ರೇಜ್) ಇದೆ ಅನ್ನಬಹುದು. ಇದು ಸಹಾ ಒಂದು ರೀತಿ ಮನಸ್ಸಿನ್ನಲ್ಲೇ ಯಾವಾಗಲೂ ಮೂಡೋ ಒಂದು ತರಹದ ನಂಬಿಕೆ,ವಿಶ್ವಾಸ,ಕಲ್ಪನೆ. ಈ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನ್ನಷ್ಟಕ್ಕೆ ನಾನೇ ನಗ್ತೀನಿ... ಇದರಿಂದ ಲಾಭ ಅಥವಾ ನಷ್ಟ ಇಲ್ಲ ಅಂತ ಗೊತ್ತಿದ್ದರೂ ನಿತ್ಯದ ಜೀವನದಲ್ಲಿ ಮುಂದುವರಿತಾ ಹೋಗ್ತಾನೆ  ಇದೆ.... :-)


ನನಗೆ "ಸಂಖ್ಯೆ ಒಂದು" ಅಂದ್ರೆ ಅದೊಂಥರಾ ಪ್ರೀತಿ...ಪ್ರತಿ ಬಾರಿಯೂ, ಎಲ್ಲೆಡೆಯೂ ಅದನ್ನು ಹುಡುಕ್ತಾ ಇರ್ತೇನೆ. ಅದೊಂಥರಾ "ಅದೃಷ್ಟ " ಅಥವಾ "ಲಕ್ಕಿ ನಂಬರ್" ಅಂತಾರಲ್ಲ ಆ ಭಾವನೆ....

 ನಾನು ಹುಟ್ಟಿದ್ದು "ಒಂದನೇ ತಾರೀಕು", ಜೊತೆಗೆ ತಿಂಗಳು ಅಕ್ಟೋಬರ್ ಅಂದ್ರೆ ಹತ್ತನೇ ತಿಂಗಳು ..ಅದರಲ್ಲೂ "ಒಂದು" ಇದೆ..ಹೀಗಾಗಿ ಸಂಖ್ಯೆ ಒಂದು  ನನ್ನನ್ನು ಜನ್ಮದಿಂದ ಹಿಂಬಾಲಿಸಿ ಬರ್ತಾ ಇದೆ ಅನ್ಸುತ್ತೆ...ಬಹುಷಃ  ಇದು ನನ್ನ ಕೊನೆ ಉಸಿರು ಇರೋವರೆಗೋ ಹೀಗೆ ಮುಂದುವರಿತದೋ ಏನೋ ಎಂದು ಕೆಲವೊಮ್ಮೆ ಅನಿಸುವುದುಂಟು.....


ನನಗೆ ನೆನಪಿದ್ದ ಹಾಗೆ ಇದು ತುಂಬಾ ವರ್ಷ ಹಿಂದಿನ ನೆನಪು. ಹತ್ತನೇ ತರಗತಿ ಓದುತ್ತಿದ್ದಾಗ ಮಾರ್ಚ್-ಏಪ್ರಿಲ್ ಪರೀಕ್ಷೆಯಲ್ಲಿ,  ಹಾಲ್ ಟಿಕೆಟ್ ನಂಬರ್ ಸುಮಾರು ಆರು ಅಥವಾ ಏಳು ಸಂಖ್ಯೆಯದಿತ್ತು . ಆ ಪರೀಕ್ಷೆ ಕೊಠಡಿಯಲ್ಲಿ ಕುಳಿತು ಎಲ್ಲಾ ಸಂಖ್ಯೆಯನ್ನು ಕೂಡಿಸಿ ಎಲ್ಲಾದರೂ ಒಂದು ಬರುತ್ತಾ ಎಂದು ಲೆಕ್ಕ ಮಾಡಿದ್ದು ಈಗಲೂ ನೆನಪಿದೆ. ಆ ಸಂಖ್ಯೆ ಒಂದು   ಬಂದರೆ ಪಾಸಾಗ್ತಿನಿ ಅನ್ನೋ ಹುಚ್ಚು ಕಲ್ಪನೆ... :-)

ಈ ಚಾಳಿ ಈಗಲೂ ಮುಂದುವರಿತಾ ಇದೆ. ಇತ್ತೀಚಿನ ನೆನಪೆಂದರೆ, ನನಗೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ . ಪ್ರತಿ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನೇರಪ್ರಸಾರವನ್ನು 'ಈ ಟಿ ವಿಯಲ್ಲಿ " ಪ್ರಸಾರ ಮಾಡುತ್ತಾರೆ. ಕಳೆದ ವರ್ಷವೂ ಮಧ್ಯಾಹ್ನ ಹೀಗೆ ಟಿ ವಿ ನೋಡ್ತಾ ಇದ್ದೆ. ಮಂಗಳಾರತಿಯ ಸಮಯ. ಹಿನ್ನಲೆಯಲ್ಲಿ ಡಾ. ರಾಜಕುಮಾರ್ ಅವರ ಈ ಹಾಡು ಬರ್ತಾ ಇತ್ತು. 

"ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ,ಸ್ಮರಣೆ ಮಾತ್ರದಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ...
ಯೋಗಿ ಬರುವನಮ್ಮ, ಶುಭ ಯೋಗ ಬರುವುದಮ್ಮ , ರಾಘವೇಂದ್ರ ಗುರುರಾಯ ಬಂದು ಭವ  ರೋಗ ಕಳೆವನಮ್ಮ ...
ಮನವ ತೊಳೆಯಿರಮ್ಮ , ಭಕ್ತಿಯ ಮಣೆಯ  ಹಾಕಿರಮ್ಮ , ಧನ್ಯದಿಂದ ಕರೆದಾಗ ಬಂದು ಒಳಗಣ್ಣ ಬೆರೆವನಮ್ಮ ...
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ , ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ ....
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ, ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ.........." 

ಈ ಹಾಡು ಕೇಳ್ತಾ ಆರತಿ ನೋಡ್ತಾ, ಗೋಡೆ ಮೇಲಿದ್ದ ಗಡಿಯಾರ ನೋಡಿದ್ರೆ "ಸರಿಯಾಗಿ  ಒಂದು ಘಂಟೆ ಸಮಯ"...ಅದೇಕೋ ಗುರುರಾಯರ ಆಶೀರ್ವಾದ ಆಯ್ತು ಅನ್ನೋ  ಸಂತೋಷದ ಕಲ್ಪನೆ  .... :-)

ಇನ್ನು ಗಮ್ಮತ್ತಿನ ವಿಷಯ ಅಂದ್ರೆ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕುತೂ ಹಲದಿಂದ  ಗೂಗಲ್ ನಲ್ಲಿ "ನ್ಯುಮರೋಲಾಜಿ" ಬಗ್ಗೆ ಓದಿದ್ದು ..ಸಂಖ್ಯೆ  ೧ ಅಂದರೆ ಸೂರ್ಯ ಅದಕ್ಕೆ ಅಧಿಪತಿ,  ಒಂದನೇ ತಾರೀಕಿನಲ್ಲಿ ಹುಟ್ಟಿದವರಿಗೆ ಯಾವುದು ಶುಭ,ಅಶುಭ ಇತ್ಯಾದಿ  ಅನ್ನುವ ಎಲ್ಲಾ  ವಿಷಯ ಓದಿದ್ದು ... ಈ ವಿಷಯ ನಗು ಬರುವಂಥಹದ್ದೆ  ಆದ್ರೂ ಸತ್ಯ ಘಟನೆ... :-) 

ಪ್ರಪಂಚದಲ್ಲಿ ಎಲ್ಲ ಮನಸ್ಥಿತಿಯ ಜನರು ಇರ್ತಾರೆ ..ಅದರಲ್ಲಿ ನಾನು ಒಬ್ಬಳು. ಸ್ನೇಹಿತರೆ ನನ್ನ ಹಾಗೆ ನಿಮಗೂ ಏನಾದರೂ ಈ ರೀತಿಯ ಅಭ್ಯಾಸಗಳು ಇದ್ದರೆ ಮುಕ್ತವಾಗಿ ಹಂಚಿಕೊಳ್ಳಿ ....

ಪ್ರೀತಿಯಿಂದ

ಸುದೀಪ....


Thursday, 6 December 2012

ನೀಲಿ ಪರ್ಸನಲ್ ಡೈರಿ.....


 ಮೊನ್ನೆ ಮನೇಲಿ ವಾರ್ಡ್ ರೋಬ್ ಕ್ಲೀನ್ ಮಾಡೋವಾಗ ಈ ನೀಲಿ ಪರ್ಸನಲ್ ಡೈರಿ ಸಿಕ್ತು... ಹಾಗೆ ಒಂದೊಂದೆ ಪುಟ ತೆಗಿಬೇಕಾದ್ರೆ ಸಾವಿರಾರು ಹಳೆ ನೆನಪುಗಳು.... ಇದು ಸುಮಾರು ಹದಿನಾಲ್ಕು ವರ್ಷದ ಹಿಂದಿನ ಡೈರಿ... 1998 ಇಸವಿದು....ಅಂಥದ್ದೇನಿದೆ ಇದರಲ್ಲಿ...???!!!!!
  ಆಗ ನಾನು ಅಂತಿಮ ಬಿಕಾಂ ಓದ್ತಿದ್ದ ವರ್ಷ... ಯಾವಾಗಲು ಕಾಲೇಜ್ನಲ್ಲಿ ಜನವರಿ-ಫೆಬ್ರವರಿ ತಿಂಗಳು ಬಂತು ಅಂದ್ರೆ ಅಂತಿಮ ವರ್ಷದ ವಿಧ್ಯಾರ್ಥಿಗಳೆಲ್ಲ ಒಂದು ರೀತಿ busy ಅಂತಾನೆ ಹೇಳಬಹುದು.. ಅಂತಿಮ ವರ್ಷದ ಪರೀಕ್ಷೆಯ ತಯಾರಿಗಲ್ಲ.... ಸ್ನೇಹಿತರಿಂದ "ಆಟೋಗ್ರಾಫ " ಸಂಗ್ರಹಿಸುವ ಕೆಲಸದಲ್ಲಿ.... :) ಕಾಲೇಜಿನ ಆತ್ಮೀಯ ಜೂನಿಯರ್ಸ್ ಸ್ನೇಹಿತರು  , ಲೆಕ್ಚರರ್ಸ್ ಹತ್ರಾ ಎಲ್ಲಾ ಪುಸ್ತಕ ಕೊಟ್ಟು ಪ್ಲೀಸ್ ಏನಾದ್ರೂ ಬರೆದು ಕೊಡಿ ಎಂಬ ದೃಶ್ಯ ಸಾಮಾನ್ಯ, ಎಲ್ಲರ ಪುಸ್ತಕಗಳಲ್ಲೂ ಅದೇ ಅದೇ ಕಾಪಿ-ಪೇಸ್ಟ್ ವಾಕ್ಯಗಳು ...ಹೊಸದಾಗಿ ಏನು ಬರಿಬೇಕಂತ ತಲೆಗೆ ಹೊಳಿತಾನೆ ಇರಲಿಲ್ಲ     :-)

ನಿಜಕ್ಕೂ ಆ ಸಮಯ  ಸ್ವಚ್ಚಂದ ಜೀವನಕ್ಕೆ ವಿದಾಯ ಹೇಳುವ ಕಾಲಘಟ್ಟ  ಅಂತಾನೆ  ಹೇಳಬಹುದು..ಕಾಲೇಜಿನ ಹುಡುಗಾಟಿಕೆ ಬಿಟ್ಟು ಸಮಾಜದಲ್ಲಿ ಒಂದು ಜವಾಬ್ದಾರಿ ವಹಿಸುವ ವ್ಯಕ್ತಿಗಳಾಗಿ ಮೂಡುವ  ದಿನಗಳವು... 


ಮೊನ್ನೆ ಕೂತುಕೊಂಡು ಡೈರಿ  ತೆರೆದಾಗ ಮೊದಲ ಪುಟದಲ್ಲಿ ನನ್ನ ಅಕ್ಷರಗಳ ಸಾಲುಗಳು ಹೀಗಿತ್ತು....೧೪ ವರ್ಷದ ಹಿಂದೆ ಈ ರೀತಿ ಬರೆಯುವ ಅಭ್ಯಾಸ...ಯಾವಾಗಲು ಕಪ್ಪು ಇಂಕ್ ಪೆನ್ ಉಪಯೋಗಿಸ್ತಿದ್ದೆ... ಅದು ಹೀರೋ ಕಂಪನಿದು... :) ಆಗ ಆಟೋಗ್ರಾಫ್ ಪುಸ್ತಕ ಅಂತಂದ್ರೆ ಆ ವರ್ಷದ ಹೊಸ ಡೈರಿಯನ್ನ ನಾವು ಉಪಯೋಗಿಸ್ತಾ ಇದ್ವಿ...ಕೆಲವು ಸ್ನೇಹಿತರು ತಮ್ಮ ಜನ್ಮದಿನಾಂಕದ ಪುಟದಲ್ಲಿ ಬರೆದು ಕೊಡೋವ್ರು....


ಕಾಲೇಜಲ್ಲಿ ನನ್ನ ಐವರು ಸ್ನೇಹಿತೆಯರದ್ದು ಒಂದು ಗುಂಪು... ಯಾವಾಗಲು ತಲೆಹರಟೆ, ಕಿತಾಪತಿ, ನಗು,ನಮ್ಮದೇ ಪ್ರಪಂಚದಲ್ಲಿ ನಾವು....ಸುಂದರ ದಿನಗಳವು.... ನಮ್ಮ ಗ್ರೂಪಿಗೆ ಕೆಲವರು "five stars" ಅಂತ ಕರೆಯೋವ್ರು....ನಮ್ಮ ಎಲ್ಲರ ಪುಸ್ತಕಗಳಲ್ಲೂ vps3 ಅಂತ ಬರ್ದಿರ್ತಿತ್ತು ....ಹಂಗಂದ್ರೆ ವಾಣಿ, ಪ್ರತಿಮ,ಸುಷ್ಮಾ , ಸುಮ ಮತ್ತು ಸುಮತಿ .. :) ಒಬ್ಬರಿಗಿಂತ    ಒಬ್ಬರು ತಲೆಹರಟೆಗಳು ಅನ್ನಬಹುದು...ಆ ವಯಸ್ಸೇ ಹಾಗೆನೋ ....ಈಗೆಲ್ಲ ಬರಿಯ ನೆನಪುಗಳು...  ಈಗ ಐದು ಜನ ಐದು ಊರುಗಳಲ್ಲಿ ....ಅದೆಷ್ಟು ವರ್ಷ ಆಯ್ತೋ ಎಲ್ಲರು ಒಟ್ಟು ಸೇರಿ.... :(

ಆ ನಾಲ್ವರಲ್ಲೂ ನನ್ನ ಆತ್ಮೀಯ ಸ್ನೇಹಿತೆ ಅಂದ್ರೆ "ಸುಮ "...ನನ್ನ ಹೆಸರನ್ನೇ ಅರ್ಧ 
ಹಂಚಿಕೊಂಡಿದ್ದಳು ಸಹಾ.... ಇಬ್ಬರಲ್ಲೂ "ಗುಟ್ಟು " ಎಂಬ ಶಬ್ದವೇ ಇರಲಿಲ್ಲ...ಎಲ್ಲವನ್ನು ಹಂಚಿಕೊಂಡ ಸ್ನೇಹಿತೆ ಎನ್ನಬಹುದು...

ಆಕೆ ಬರೆದುಕೊಟ್ಟ ಕೆಲವು ಸಾಲುಗಳು ಹೀಗಿತ್ತು ನನ್ನ ಪುಸ್ತಕದಲ್ಲಿ... 


ನಂತರದ ಇನ್ನೊಬ್ಬ ಸ್ನೇಹಿತೆ "ಪ್ರತಿಮ "....ನಮ್ಮ ಐವರ ಗುಂಪಿನ ಇನ್ನೊಬ್ಬ ಗೆಳತಿ... ಅವಳ ಕೆಲವು ನೆನಪಿನ ಬುತ್ತಿ  ನನ್ನ ಪುಸ್ತಕದಲ್ಲಿ....ಇನ್ನೊಬ್ಬ  ಆತ್ಮೀಯ ಸ್ನೇಹಿತೆ ಸುಷ್ಮಾ.... ಕಾಲೇಜ್ ಜೀವನದಲ್ಲಿ ಮರೆಯಲಾಗದ ಗೆಳತಿ...ಅವಳು ಪ್ರೀತಿಯಿಂದ ಬರೆದು ಕೊಟ್ಟ ಅಕ್ಷರಗಳು....

ವಾಣಿ ಎಂಬ ಗೆಳತಿಯ ಹಸ್ತಾಕ್ಷರ ಮಾತ್ರ ಮಿಸ್ಸಿಂಗ್ ಈ ಪುಸ್ತಕದಲ್ಲಿ... :( .ಅಂತಿಮ ಬಿಕಾಂ ಕಲಿಯುವಾಗಲೇ ಮದುವೆಯಾದ ಸ್ನೇಹಿತೆ... :)
 

 ಒಬ್ಬ ಸ್ನೇಹಿತೆ ಮಾತ್ರ ೧ ವರ್ಷದಿಂದ ಜೊತೆಗಿದ್ದರೂ ಆತ್ಮಿಯಳಾಗಿದ್ದು ಮಾತ್ರ ಅಂತಿಮ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ....ನೋಡಲು ಸುಂದರವಾಗಿದ್ದ ಆ ಗೆಳತಿಯ ಮನಸ್ಸು ತುಂಬಾ ಮೃದು, ಕೋಮಲ.... ಆ ಗುಣಕ್ಕೆ ಬಹುಷಃ ಮನಸೋತಿದ್ದೆ ನಾನು... ಅವಳ ಹೆಸರು ಸಾವಿತ್ರಿಯಾಗಿದ್ದರು, ಅದೇಕೋ  ನಾನು ಅವಳನ್ನು ಪ್ರೀತಿಯಿಂದ "ತನುಜ" ಅಂತ ಕರಿತಿದ್ದೆ... ಈಗಲೂ ತುಂಬಾ ನೆನಪಾಗುವ ಮುದ್ದು ಹುಡುಗಿ...ಈಗ ಸಂಪರ್ಕದಲ್ಲೇ ಇಲ್ಲ ಎನ್ನುವ ಬೇಸರ ಕಾಡ್ತಾ ಇರತ್ತೆ....

ಆಕೆ ಬರೆದು ಕೊಟ್ಟ ಕೆಲವು ಸಾಲುಗಳು ಹೀಗಿತ್ತು .....ಪ್ರೀತಿಯ ಅಣ್ಣ "ಗುರು " ದಾವಣಗೆರೆಯಲ್ಲಿ ಇದ್ದರೂ ಅವನು ಊರಿಗೆ ಬಂದಾಗ ಪುಸ್ತಕ ಕೊಂಡು ಹೋಗಿ ಬರೆದು ಕೊಟ್ಟ ಕೆಲವು ಸಾಲುಗಳು....ಸಂಬಂಧಿಯಾಗಿದ್ದರೂ ಕೇವಲ ಪತ್ರಗಳ ಮೂಲಕವೇ ನಮ್ಮಿಬ್ಬರ  ಆತ್ಮೀಯತೆ.... ನನ್ನನ್ನು "ದೀಪು"  ಎಂದು ಕರೀತಿದ್ದ ....... ಹೀಗಿತ್ತು ಅವನ ಪದಗಳು ನನ್ನ ಡೈರಿಯಲ್ಲಿ ....ನಮ್ಮ ಪ್ರಾಧ್ಯಾಪಕರಾದ "ನಟರಾಜ್ ಅರಳಸುರುಳಿ" ಅವರು ಬರೆದುಕೂಟ್ಟ ಪುಟವಿದು...ಅವರೊಬ್ಬ cartoonist ಸಹಾ..... :)


ಇನ್ನು ಅದೆಷ್ಟೋ ಸ್ನೇಹಿತರ ಸಾಲುಗಳಿವೆ ಈ ಡೈರಿಯಲ್ಲಿ....ತುಂಬಾ ಪ್ರೀತಿಪಾತ್ರರ ನೆನಪನ್ನ ಮಾತ್ರ ಇಲ್ಲಿ ನೆನೆಸಿಕೊಂಡಿದ್ದೇನೆ....

ಹೀಗೆ ಒಂದು ಪುಸ್ತಕ ಕಾಲೇಜು ದಿನಗಳ ನೂರಾರು ನೆನಪುಗಳನ್ನು ಹೊತ್ತು  ತಂದು ಬಿಡ್ತು .... ಆಗೆಲ್ಲ ನಮ್ಮ ಸೀನಿಯರ್ ವಿಧ್ಯಾರ್ಥಿಗಳು, ಪ್ರತಿವರ್ಷ  ಆಟೋಗ್ರಾಪ್ ಹಾಕಿಸಕೊಳ್ತಾರೆ ...ಹಾಗೆ ನಾವು ಅವರನ್ನ ಫಾಲೋ ಮಾಡೋದು...ಅಂತ ತಿಳಿದಿದ್ದ ಹುಡುಗಾಟದ ದಿನಗಳವು... ಆದರೆ ಅದರ ಬೆಲೆ ಏನು ಅಂತ ನಿಜ ಅರ್ಥದಲ್ಲಿ ತಿಳಿದಿದ್ದು ಈಗಲೇ...ಎಷ್ಟೊಂದು ಹಳೆಯ ಮಧುರ ನೆನಪನ್ನು ಈ ಪುಸ್ತಕದ ಮುಖಾಂತರ ಸವಿಬಹುದು ಎಂಬ ಚಂದದ ಪಾಠ ಕಲಿಸಿಕೊಟ್ಟು ಬಿಡ್ತು... :-) 

ಪ್ರೀತಿಯಿಂದ

ಸುದೀಪ....