Thursday 24 October 2013

ಅಮ್ಮಾ... ಎಲ್ಲಿದ್ದೀಯಾ....... ಬೇಗ ಬಾ..... !!!!!!


ನನ್ನ ತಂದೆಯ  ಬಗ್ಗೆ ಹೇಳಬೇಕಂದ್ರೆ ಸ್ನೇಹಜೀವಿ.   ತುಂಬಾ ಪ್ರತಿಭಾವಂತರು. ಗಣಿತದಲ್ಲಿ A1. ಕೊನೆಯ ದಿನಗಳವರೆಗೂ ನಮ್ಮ  ಅಂಗಡಿಯಲ್ಲಿ ಕ್ಯಾಲ್ಕ್ಯುಲೇಟರ್ ಇರಲಿಲ್ಲ.. ಎಲ್ಲ ಲೆಕ್ಕಾಚಾರವೂ ಮನಸ್ಸಲ್ಲೇ . ಕಸದಿಂದ ರಸ ತೆಗೆಯುವ ವ್ಯಕ್ತಿ.  ಅವರ ಪ್ರಕಾರ ಯಾವುದೇ ಚಿಕ್ಕ ವಸ್ತುವು ವೇಸ್ಟ್ ಅಲ್ಲ. ಎಲ್ಲವು ಉಪಯೋಗಕ್ಕೆ ಬರುವಂಥದ್ದು. ಗೊತ್ತಿರದ ವಿದ್ಯೆ ಇಲ್ಲ. ಎಲ್ಲದರಲ್ಲೂ ಅಚ್ಚುಕಟ್ಟು. ಚಂದದ ಕೆಲಸ.  ಪರ್ಫೆಕ್ಟ್ ಅನ್ನೋ ಶಬ್ದಕ್ಕೆ ಇನ್ನೊಂದು ಹೆಸರು. ಅತೀವ  ತಾಳ್ಮೆ ಸಮಾಧಾನದ ಗುಣ. ಇನ್ನೊಮ್ಮೆ ಅವ್ರ ಮಗಳಾಗಿ ಹುಟ್ಟಿದರೂ ಆ ಸ್ವಭಾವ ನನ್ನಲ್ಲಿ ಬರಲಿಕ್ಕಿಲ್ಲ. ಒಬ್ಬರಿಗೂ ನೋಯಿಸದ ಮನಸ್ಸು. ತಮಗೆ ನೋವು ಮಾಡಿದವರಿಗೂ ಒಳ್ಳೆಯದಾಗಲಿ ಅನ್ನೋ ಹಾರೈಕೆ. 

ತನ್ನ 3 ಅಥವಾ 4 ವರ್ಷ ವಯಸ್ಸಲ್ಲೇ ತಮ್ಮ ತಾಯಿಯನ್ನ ಕಳೆದುಕೊಂಡ ನನ್ನ ತಂದೆ ಒಂದಿನ ಆದ್ರೂ ಅದರ ಬಗ್ಗೆ ಮಾತಾಡುತ್ತಲೇ ಇರ್ಲಿಲ್ಲ.  ತಾಯಿಯನ್ನ ನೋಡಿದ ನೆನಪು ಸಹಾ ಅವರಿಗಿರಲಿಲ್ಲ. ಮನೆಯಲ್ಲಿ ಅವರ ತಾಯಿಯ ಒಂದು ಫೋಟೋ ಸಹ ಇರಲಿಲ್ಲ. ಅವರು ಬೆಳೆದಿದ್ದೆಲ್ಲ ಒಂದು ಕೂಡು  ಕುಟುಂಬದಲ್ಲಿ. ಮನೆ ತುಂಬಾ 25-30 ಜನ ... ಹೇಗೋ ದೊಡ್ಡವರಾಗಿದ್ರು. ಮನೆಗೆ ಯಾವಾಗಲೂ ಬಂದು ಹೋಗೋ ನೆಂಟರು.  ಯಾವಾಗಲೂ ಗಿಜಿಗಿಜಿ ಅನ್ನುತ್ತಿದ್ದ ಮನೆ. ಎಂಟನೆ ತರಗತಿವರೆಗೆ ಓದಿದ ಅವರು ತಮ್ಮ ತಂದೆಗೆ ಸಹಾಯ ಮಾಡಬೇಕೆಂದು ವಿಧ್ಯಾಭ್ಯಾಸವನ್ನ ಅರ್ಧಕ್ಕೆ ಬಿಟ್ಟು ಅಂಗಡಿ ಸೇರಿದ್ದರು. ನಮ್ಮ ಅಂಗಡಿ  ಊರಿನ   ಪ್ರಸಿದ್ಧ ಅಂಗಡಿಗಳಲ್ಲಿ ಒಂದು ಎಂದು ಹೆಸರು ಮಾಡಿತ್ತು. 

ಹೀಗೆ ದಿನಗಳು, ವರ್ಷಗಳು ಕಳೆದುಹೋಗಿತ್ತು. ವ್ಯಾಪಾರ ವ್ಯವಹಾರ ಅವರ ಮದುವೆ, ಅಕ್ಕ ತಂಗಿ ತಮ್ಮಂದಿರ   ಮದುವೆ, , ಕಷ್ಟ ಸುಖ  ಎಲ್ಲವು ಹೀಗೆ ಸಾಗುತ್ತ ಸಾಗುತ್ತ ದಿನಗಳು ಉರುಳಿ ಹೋಗ್ತಾ ಇತ್ತು. 


ತಮ್ಮ 70ನೆ ವಯಸ್ಸಿನ ಸಮಯದಲ್ಲಿ ಊರಿನ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ. ಆ ದಿನಗಳು ಅವರ ಜೀವನದ ಅತ್ಯಂತ ಸಂತಸದ ದಿನಗಳಾಗಿತ್ತು .  ಇದರ ಮಧ್ಯದಲ್ಲಿ ಒಂದು ಮಾತ್ರೆಯ ಅಡ್ಡ ಪರಿಣಾಮದಿಂದ ಆರೋಗ್ಯ ದಿನೇ ದಿನೇ ಹದಗೆಡ್ತಾ ಇತ್ತು. ಇನ್ನು ಅಂಗಡಿ ನೋಡಿಕೊಳ್ಳಲು ಸಾಧ್ಯ ಇಲ್ಲ ಎಂದು ತಾವು 55 ವರ್ಷಗಳಿಂದ ದುಡಿದ ಅಂಗಡಿಯನ್ನು ಮುಚ್ಚುವ ನಿರ್ಧಾರವನ್ನು ನನ್ನ ಬಲವಂತಕ್ಕೆ ಮಾಡಿದ್ದರು.  ಇದ್ದಕ್ಕಿದ್ದಂತೆ  ಒಮ್ಮೆ ರಕ್ತವಾಂತಿಯಾಗಿ ರಾತೋರಾತ್ರಿ ಮಣಿಪಾಲದ ಆಸ್ಪತ್ರೆಗೆ ದಾಖಲಾದಾಗ ತಪಾಸಣೆಯ ನಂತರ  ತಿಳಿದದ್ದು,  ಅವರ  ಲಿವರ್ ಸಂಪೂರ್ಣ ಹಾಳಾಗಿತ್ತು. ಒಂದಷ್ಟು ತಿಂಗಳು ಔಷಧಿ,  ವಿಶ್ರಾಂತಿ ಎಂದು ನನ್ನ ಮನೆಯಲ್ಲಿ ಇದ್ದು ಪುನಃ ಊರಿಗೆ ಹೋಗಿ ಅಲ್ಲಿಯ ಎಲ್ಲವನ್ನು ಒಂದಷ್ಟು ವ್ಯವಸ್ಥೆ ಮಾಡಿ ಪುನಃ ಅನಿವಾರ್ಯವಾಗಿ ಉಡುಪಿಗೆ ಮನೆ ಸ್ಥಳಾಂತರ ಮಾಡಿದ್ದರು. 

ಪ್ರತಿ ತಿಂಗಳು  ನಿರಂತರ  ಮಣಿಪಾಲದ ಆಸ್ಪತ್ರೆ ಭೇಟಿ. . .. ಹೀಗೆ ಸಾಗಿತ್ತು ಒಂದು ಒಂದೂವರೆ  ವರ್ಷ.   ಕೊನೆಕೊನೆಗೆ 20 ದಿನ ಆಸ್ಪತ್ರೆಯಲ್ಲಿ 10 ದಿನ ಮನೆಯಲ್ಲಿ.. ಒಂದೆಡೆ ಮಗಳು,  ಅಳಿಯನಿಗೆ ತೊಂದರೆ ಎಂದು ನೋವು ತಿನ್ನೋ ಮನಸ್ಸು.  ಎಷ್ಟೇ ಸಮಾಧಾನ ಮಾಡಿದರು ಮನಸ್ಸಲ್ಲೇ ಪುನಃ ಅದೇ ಕೊರಗು. 

ಕೊನೆಕೊನೆಯಲ್ಲಿ ಉಲ್ಫನಗೊಂಡ  ಕಾಯಿಲೆ.  ನಡೆಯಲು ಆಗದ ಪರಿಸ್ಥಿತಿ. ಮಲಗಿದಲ್ಲೇ ಎಲ್ಲವೂ. ಆಹಾರ ತಿನ್ನಲು ಶಕ್ತಿಯಿರದೆ ನಿತ್ರಾಣ ದೇಹ . ಎದುರಿಗೆ ಇರುವ ವ್ಯಕ್ತಿಯ ಗುರುತು ಸಿಗದಷ್ಟು ದೇಹ ಕೃಶ. ಈ ಕಡೆಯ ಪ್ರಜ್ಞೆ ಇಲ್ಲದೆ ಕೆಲವು ದಿನಗಳು.   ಮನೆಯಲ್ಲಿ ಹಾಸಿಗೆ ಮೇಲೆ ಮಲಗಿ ಮಲಗಿ ಬೆಡ್ sour. ಇದಕ್ಕೆ ಪ್ರತಿದಿನ ಡ್ರೆಸ್ಸಿಂಗ್ ಅವಶ್ಯಕತೆ ಜೊತೆಗೆ  ವಾಟರ್ ಬೆಡ್ ಕೂಡ.    ಇನ್ನು ಮನೆಯಲ್ಲಿ ಆಗದು ಎಂದು ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಸಾಗಾಟ.  ಇತ್ತ ಕಡೆ ಇರದ ಪ್ರಜ್ಞೆ.  ಏನೇನೋ ಹಳೆಯ ನೆನಪು ಆಗಿ ತಮ್ಮಷ್ಟಕ್ಕೆ ತಾವೇ ಮಾತಾಡೋ ಅಪ್ಪ .  ಕೊನೆಯ ವಾರದಲ್ಲಿ ಶುರುವಾದ ಡಯಾಬಿಟಿಸ್ ಖಾಯಿಲೆ.  control ಗೆ ಬಾರದಷ್ಟು ರಕ್ತದ ಒತ್ತಡ.  



ಸುಮಾರು 65-70 ವರ್ಷಗಳು ತಮ್ಮ ತಾಯಿಯ ಬಗ್ಗೆ ಎಂದೂ  ಮಾತಾಡದೆ ಇದ್ದ ಒಬ್ಬ ವ್ಯಕ್ತಿ ಪ್ರಜ್ಞೆ ಇಲ್ಲದಿದ್ದರೂ ಆ ತಾಯಿಯ ನೆನಪು ಮಾಡುತ್ತಿದ್ದರು. ಅದೆಷ್ಟು ವರ್ಷ ಆ ತಾಯಿಯನ್ನು ಚಿಕ್ಕಂದಿನಲ್ಲೇ  ಕಳೆದುಕೊಂಡ ದುಃಖ ತಮ್ಮ ಮನಸ್ಸಲ್ಲೇ ಇಟ್ಟುಕೊಂಡಿದ್ದರೋ ಅವೆಲ್ಲವೂ ಆ  ಕೊನೆಯ ದಿನಗಳಲ್ಲಿ ಹೊರಬಂದಿತ್ತು. 


ಮೊದಲೆಲ್ಲ ರೇಡಿಯೋದಲ್ಲಿ 'ಪುಣ್ಯಕೋಟಿ ' ಗೋವಿನ ಹಾಡು ಬರ್ತಾ ಇತ್ತು. ಆ ಹಾಡು ಅಪ್ಪನನ್ನ ಎಲ್ಲೋ ಸ್ವಲ್ಪ ಭಾವುಕರನ್ನಾಗಿ ಮಾಡ್ತಾ ಇತ್ತು ಅದು ಬಿಟ್ರೆ ಕೆಲವು ಸಿನಿಮಾದಲ್ಲಿ ತಾಯಿಯ ಬಗ್ಗೆ ಬರುವ ಕೆಲವು ಮನಕಲಕುವ ದೃಶ್ಯಗಳು... ಅದನ್ನೂ ವೀಕ್ಷಿಸಿದಾಗ ಎಲ್ಲೋ ಸ್ವಲ್ಪ ನೋವು ಪಡ್ತಿದ್ದರೇನೋ ... ಅದೂ ತುಂಬಾ ಅಪರೂಪಕ್ಕೆ.... ಎಂದೂ ಯಾರೆದುರಿಗೂ ತಮ್ಮ ನೋವನ್ನ ತೋರಿಸಿಕೊಂಡವರಲ್ಲ... 

ಆದರೆ ಆಸ್ಪತ್ರೆಯಲ್ಲಿ ಆ ಇಡೀ ಒಂದು   ದಿನ  'ಅಮ್ಮಾ ಎಲ್ಲಿದ್ದೀಯಾ..... ಬಾ.... ನನ್ನನ್ನು ನಿನ್ನ ಜೊತೆ ಕರ್ಕೊಂಡು ಹೋಗು'  ಅನ್ನೋ ಸಾಲನ್ನ   ಕರೆದು ಕರೆದು ಮೌನಕ್ಕೆ ಶರಣಾಗಿದ್ರು. ಆ ದಿನವಿಡೀ ಹತ್ತಿರವಿದ್ದ ನನ್ನ ಮತ್ತು ಅಮ್ಮನ ಪಾಲಿಗೆ ಅತೀವ ಸಂಕಟ ಪಟ್ಟ ದಿನವಾಗಿತ್ತು .  ಅದೇ ಅಪ್ಪನ  ಕೊನೆಯ ಮಾತಾಗಿತ್ತು. ನಂತರದ   ಒಂದೆರಡು ದಿನದಲ್ಲಿ  ಲೋಕವನ್ನೇ ತ್ಯಜಿಸಿದ್ದರು.

ಹೇಗಿದ್ದ ಮನುಷ್ಯ ಹೇಗಾಗಿ ಬಿಡ್ತಾರೆ ಅಂತ ತುಂಬಾ ಹತ್ತಿರದಿಂದ ನೋಡಿದ ಅನುಭವ.....

ಹೀಗೆ ಅನಿಸಿದ್ದು..... ಅದು ಯಾವುದೇ ಆತ್ಮೀಯ ವಸ್ತು ಅಥವಾ ವ್ಯಕ್ತಿ ಇರಲಿ, ಕಳೆದುಕೊಂಡರೆ ಮಾತ್ರ ಅದರ ಬೆಲೆ ಗೊತ್ತಾಗೋದು ... ಅದು ಕೈಗೆಟಕುವಂತಿದ್ದರೆ ತಾತ್ಸಾರ, ಅಸಡ್ಡೆ ... 

ಅದರಲ್ಲೂ ಅಮ್ಮ ... ಅವಳು  ಇದ್ದಾಗ ಆಕೆಯ  ಬೆಲೆ ತಿಳಿಯೋದು ತುಂಬಾ ಕಡಿಮೆ. ಅವಳನ್ನು ಯಾವಾಗ್ಲೂ ನೋಯಿಸೋದೆ ಹೆಚ್ಚು.... ಪ್ರೀತಿಯ  ಧಾರೆ ಎರೆಯೋ ಅವಳಿಗೆ  ನಮ್ಮಿಂದ ಸಿಗುವ ಉಡುಗೊರೆ ಅದು .....    



  


22 comments:

  1. ಅಮ್ಮಾ ಅಂದರೆ ಮಾತಾಗಿ ಬಾರದಿದ್ದರೂ ಮನಸ ಸಲಹುವಾಕೆ...
    ನೋವು ಕಾಡಿದಾಗಲೆಲ್ಲ ಅಮ್ಮ ನೆನಪಾಗಿ ಹಾಡುತ್ತಾಳೆ...

    ReplyDelete
  2. ' 'ಅಮ್ಮಾ ಎಲ್ಲಿದ್ದೀಯಾ..... ಬಾ.... ನನ್ನನ್ನು ನಿನ್ನ ಜೊತೆ ಕರ್ಕೊಂಡು ಹೋಗು'' ಎಂದು ಓದಿ ಕಣ್ಣಲ್ಲಿ ನೀರಾಡಿತು. :(

    ReplyDelete
  3. ಅಮ್ಮನೆಂದರೆ ಹಾಗೆ. ಸರಿಸಾಟಿಯಿಲ್ಲದ ಬಂಧ. ಮನಸು ತಟ್ಟುವ ಬರಹ..

    ReplyDelete
    Replies
    1. ಒಪ್ಪಿದೆ ತಮ್ಮ ಮಾತು.... ಬ್ಲಾಗೆ ಭೇಟಿ ಕೊಟ್ಟು ಮೆಚ್ಚಿದ್ದಕ್ಕೆ ಧನ್ಯವಾದಗಳು :-)

      Delete
  4. ಒಟ್ಟು ಕುಟುಂಬದಲ್ಲಿ ಕೆಲವಷ್ಟು ತೀರಾ ಅನ್ನುವ attachment ಗಳಿರುತ್ತವೆ.
    ದೊಡ್ಡಮ್ಮ ದೊಡ್ಡಪ್ಪ ಚಿಕ್ಕಮ್ಮ ಚಿಕ್ಕಪ್ಪ ಹೀಗೆ ಪ್ರೀತಿ ತುಂಬಿದ ಹೃದಯಗಳು
    ಅಮ್ಮ ಅಪ್ಪರಂತೆಯೇ ಸಲಹುತ್ತಿರುತ್ತಾರೆ... ಅಮ್ಮನ ಕೊರತೆ ನೀಗಿಸುವಷ್ಟು ಅಧಿಕವಾಗಿ...
    ಅಮ್ಮ ಅಂದರೆ ಎಲ್ಲಿ ಅವರಿಗೆ ನೋವಾಗ್ತದೋ ಎಂದು... ಎಷ್ಟೋ ಭಾವಗಳನ್ನು ಬಚ್ಚಿಟ್ಟು
    ಬದುಕಿರುವ ಜೀವಗಳನ್ನು ಕಂಡಿದ್ದೇನೆ...ಇಲ್ಲೂ ಹಾಗೇ ಅಲ್ವಾ.....
    ಎಂದೂ ಅಮ್ಮಾ ಅಂದಿರದ ಜೀವದ ಬದುಕಿನ ಕೊನೆಯ ಮಾತೇ ಅಮ್ಮಾ ಅಂತಾದರೆ ಹೇಗಿರಬೇಡ...

    ತುಂಬಾ ಇಷ್ಟವಾಯಿತು...ಕೊನೆಯಲ್ಲಿ ಸ್ವಲ್ಪ ಕಷ್ಟವೂ ಆಯಿತು...

    ReplyDelete
    Replies
    1. ಧನ್ಯವಾದಗಳು ರಾಘವೇಂದ್ರ.... :-)
      ನಿಜ ಕುಟುಂಬದ ಯಾರು ಎಷ್ಟೇ ಪ್ರೀತಿ ಕೊಟ್ಟರೂ...
      ತಾಯಿಯ ಮಮತೆ, ವಾತ್ಸಲ್ಯ ನೀಗಿಸಲು ಅಸಾಧ್ಯ .....

      Delete
  5. ಸುಮಾರು 65-70 ವರ್ಷಗಳು ತಮ್ಮ ತಾಯಿಯ ಬಗ್ಗೆ ಎಂದೂ ಮಾತಾಡದೆ ಇದ್ದ ಒಬ್ಬ ವ್ಯಕ್ತಿ ಪ್ರಜ್ಞೆ ಇಲ್ಲದಿದ್ದರೂ ಆ ತಾಯಿಯ ನೆನಪು ಮಾಡುತ್ತಿದ್ದರು. ಅದೆಷ್ಟು ವರ್ಷ ಆ ತಾಯಿಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡ ದುಃಖ ತಮ್ಮ ಮನಸ್ಸಲ್ಲೇ ಇಟ್ಟುಕೊಂಡಿದ್ದರೋ ಅವೆಲ್ಲವೂ ಆ ಕೊನೆಯ ದಿನಗಳಲ್ಲಿ ಹೊರಬಂದಿತ್ತು.
    ಹೌದಲ್ಲವಾ ಮುನ್ನಾ?? ಯಾವಗಲೂ ಸ್ವಾಮಿ ದೇವಾ ಅನ್ನುವವರು ಕೊನೆಯಲ್ಲಿ 'ಅಮ್ಮಾssssss' ಅಂತಷ್ಟೆ ಹೇಳುತ್ತಿದ್ದರು. remembered everything and felt sad Munna...
    :-(
    pachchi

    ReplyDelete
    Replies
    1. Really tough to face those days pacchi.... after one year also i remember each n everyday... uff... :-(

      Delete
  6. ಹಿರಿಯರು ಹೀಗೆ ಮಾಡಿ ಎನ್ನುವುದು ಬೇರೆ ತಾವೇ ಆ ರೀತಿ ಬದುಕಿ ತೋರಿಸುವುದು ಬೇರೆ.
    ಈ ಬರಹ ಅಂತಹ ಹಿರಿಯರೆಲ್ಲರನ್ನು ನೆನಪಿಸಿತು.
    ಎಲ್ಲೇ ಇದ್ದರೂ ಅವರು ನಮ್ಮೊಂದಿಗೆ
    ವಿಷಾದ ವಾದರೂ ವಿಚಾರಕ್ಕೆ ಹಚ್ಚಿದ ಬರಹ

    ReplyDelete
    Replies
    1. ಧನ್ಯವಾದಗಳು ಸ್ವರ್ಣ ....

      Delete
  7. ಸಾವು..... ಇದೊ೦ದು ಕಾಡಿಕಲಕುವ ವಿಷಯ.... ಕಣ್ ತು೦ಬಿ ಬ೦ತು

    ReplyDelete
    Replies
    1. ನಿಜ....ಒಂದಲ್ಲ ಒಂದು ದಿನ ಎಲ್ಲರೂ ಎದುರಿಸುವ ಕಹಿ ಸತ್ಯ... :-(

      Delete
  8. ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಸಾಲದು, ಎಷ್ಟು ಬರೆದರೂ ಸಾಲದು.'ಚಿಕ್ಕವರಿದ್ದಾಗ ಎಷ್ಟು ಅತ್ತರೂ ಮನಸ್ಸಲ್ಲಿ ಎಷ್ಟು ಆನಂದವಿರುತ್ತದೆ.ದೊಡ್ಡವರಿದ್ದಾಗ ಎಷ್ಟು ನಕ್ಕರೂ ಎಷ್ಟೊಂದು ನೋವಿರುತ್ತದೆ.' ಎಂಬ ಮಾತು ಬಹಶ: ಜೊತೆಯಲ್ಲಿ ಅಮ್ಮನಿದ್ದಾಳೆ ಎಂಬುವುದರಿಂದಾಗಿ ಬಂದಿರ ಬೇಕು. ನಿಮ್ಮ ಬರಹ ನನಗೆ ಇಷ್ಟವಾಯಿತು.
    ದೀಪಾವಳಿ ಹಬ್ಬದ ಶುಭಾಶಯ. ನನ್ನ ಬ್ಲಾಗಿಗೂ ಭೇಟಿ ಕೊಡಿ.

    ReplyDelete
    Replies
    1. ಧನ್ಯವಾದಗಳು ಚಂದ್ರಶೆಖರ ಅವರೆ .... :)

      Delete
  9. ಅಮ್ಮ ಎನ್ನುವ ಒಂದು ಪದಕ್ಕೆ ಪರ್ಯಾಯವೆ ಇಲ್ಲ. ತಾಯಿಯನ್ನು ಸೃಷ್ಟಿಸಿದ ದೇವನು ಕೂಡ ಇನ್ನೊಂದು ಅಂಥಹ ಸೃಷ್ಠಿಮಾಡಲು ಸಾಧ್ಯವಾಗಿಲ್ಲ.. ಇಡಿ ಬದುಕನ್ನು ತಾಯಿ ಮಮತೆ ಇಲ್ಲದೆ ಬೆಳೆದು.. ತನ್ನ ಬಳಗ ಪ್ರತಿಯೊಂದು ವ್ಯಕ್ತಿಗೂ ತಾಯಿ ಮಮಕಾರವನ್ನು ಹಂಚಿದ ನಿಮ್ಮ ಪಿತರಿಗೆ ನನ್ನ ನಮನಗಳು.. ಜೀವನದುದ್ದಕ್ಕೂ ತತ್ವ ಆದರ್ಶಗಳನ್ನು ದಾರಿ ದೀಪಮಾಡಿಕೊಂಡವರು ತಮ್ಮ ಮಗಳು "ಸುದೀಪ" ಎನ್ನುವ ಹೆಸರಿನಿಂದ ಲೇಖನವನ್ನು ಬರೆಯುತ್ತಿರುವುದು ನಿಜಕ್ಕೂ ಒಂದು ಭಕ್ತಿ ಪೂರ್ವಕ ನಮನಗಳು ಹೌದು.. ಮನ ಮಿಡಿಯುತ್ತದೆ ಹಾಗೆಯೇ ಆ ಮಹಾನ್ ಚೇತನದ ಸುಂದರ ಬದುಕಿಗೆ ಒಂದು ಗೌರವ ಕೂಡ ಮನಸಲ್ಲಿ ಮೂಡಿಬರುತ್ತದೆ

    ReplyDelete
    Replies
    1. ಶ್ರೀಕಾಂತ್ ನೋ ವರ್ಡ್ಸ್....

      Delete
  10. I could not hold my tears by reading this Sumathi akka as I had seen Ananth maam when he was healthy and jovial. I can't even imagine him in that state but don't know how did u n Mayee managed him ......

    - Neetha Pete

    ReplyDelete
    Replies
    1. Neetha.... sometime this is reality of life... we r helpless... :-(

      Delete