Wednesday 24 February 2016

ಗುಳಿಕೆನ್ನೆ ಹುಡುಗ ...



ಅವನು ಒಂದು ವಾರದ ಮೊದ್ಲೇ ಮನೆಗೆ ಬಂದು ಲಗ್ನಪತ್ರಿಕೆ ಕೊಟ್ಟು ಎಲ್ರಿಗೂ ಮದುವೆಗೆ ಬರ್ಲೇಬೇಕು ಅಂತಾ ಆಮಂತ್ರಣ ಕೊಟ್ಟು ಹೋಗಿದ್ದ ... ಯಾರಾದ್ರು ಮಿಸ್ ಮಾಡ್ಕೊಂಡ್ರೆ ಆಮೇಲ್ ಹೆಂಡ್ತಿ ಜೊತೆ ಬಂದು ಕ್ಲಾಸ್ ತೆಗೊತೀನಿ ಅಂತ ಕಣ್ಣು ಹೊಡ್ದಿದ್ದ ... ಓ ಆಗ್ಲೇ ಹೆಂಡ್ತಿ ಗುಣಗಾನ ... ಇರ್ಲಿ ಇರ್ಲಿ ಅಂದಿದ್ದೆ ... 

ಅವ್ನ  ಮದುವೆ ಅಂದ್ರೆ ಮಿಸ್ಮಾಡ್ಕೋಳೋದಾ ...ನೆವರ್...

ಬೆಳಿಗ್ಗೆ 9ಕ್ಕೆ ಮಹೂರ್ಥ ..  ಸ್ವಲ್ಪ ಬೇಗಾನೆ... ಆದ್ರೂ ಬೆಳಗ್ಗಿನ ನನ್ನ ಅಚ್ಚುಮೆಚ್ಚಿನ ಸಿಹಿ ನಿದ್ದೆ ಬಿಟ್ಟು ಅವನಿಗೋಸ್ಕರ ಐದಕ್ಕೆ ಎದ್ದು ಆದಷ್ಟು ಬೇಗ ಹೊರಡ್ಬೇಕು ... ಹೀಗಂದ್ಕೊಂಡು ಅದಾಗಲೇ ಒಂದು ತಿಂಗಳ ಹಿಂದೆ ಸಿದ್ಧ ಮಾಡಿ ಇಟ್ಟಿದ್ದ ಸೀರೆ , ರವಿಕೆ ಎಲ್ಲ  ಮತ್ತೊಮ್ಮೆ ಚೆಕ್ ಮಾಡಿ ರಾತ್ರಿ ಒಂದಾದ್ರೂ ಮಲಗದ ನಾನು ಅವತ್ತು ಬೇಗನೆ ಹಾಸಿಗೆಗೆ  ಹೋಗಿ ಮಲಗೋ ಪ್ರಯತ್ನ ಮಾಡಿದ್ದೆ ... .

ದಿನಾ ರಾತ್ರಿ ಒಂದು  ಘಂಟೆ ನಂತರ   ಮಲಗೋವಳಿಗೆ ಹತ್ತು ಘಂಟೆಗೆ  ಮಲಗಿದರೆ ನಿದ್ದೆ ಎಲ್ಲಿಂದ ಬರ್ಬೇಕು ? ಹಾಸಿಗೆಯಲ್ಲಿ ಹೊರಳಾಡಿದಷ್ಟೇ ಲಾಭ  ... ಜೊತೆಗೆ ಅವನ ಮತ್ತು ನನ್ನ ಈವರೆಗಿನ  ಸ್ನೇಹದಲ್ಲಿ  ಏನೆಲ್ಲಾ ನಡೀತು ಅನ್ನೋ ನೆನಪು ಒಂದೊದಾಗಿ ಹಾಗೇ ಮನದಲ್ಲಿ ಸಿನಿಮಾದ ರೀಲ್ನಂತೆ ಬಿಚ್ತಾ ಇದ್ರೆ ಅದರ ಸವಿಯನ್ನ ಮತ್ತೊಮ್ಮೆ ಸವಿತಾ ಇದ್ದೆ ....

ಅವನ ಅಪ್ಪ ಊರಿಗೆ ಪ್ರಸಿದ್ಧ ವ್ಯಕ್ತಿ ...ದೊಡ್ಡ ಉದ್ಯಮ .... ಎರಡು ಫ್ಯಾಕ್ಟರಿಗಳು ..
 ಅವನ ಅಪ್ಪ ನನ್ನಪ್ಪನ ಆತ್ಮೀಯ ಗೆಳೆಯ...
ಅವನಮ್ಮ ನನ್ನಮ್ಮ  ಗೆಳತಿಯರು..
obviously ನಾನು ಅವನೂ ಸ್ನೇಹಿತರೆ ...

ಅದೂ ಬಾಲ್ಯದ ಸ್ನೇಹ  ... ನಂಗೆಷ್ಟು ವರ್ಷಾನೋ ನಮ್ಮ ಸ್ನೇಹಕ್ಕು ಅಷ್ಟೇ ವರ್ಷ .. . 22 ವರ್ಷದ ಸ್ನೇಹ ಅಂದ್ರೆ ಸುಮ್ನೆನಾ ...  ಇಬ್ಬರಿಗೂ ನಾಲ್ಕು ವರ್ಷ ವಯಸ್ಸಿನ ಅಂತರ ಇದ್ರೂ ಅವನ ಬಾಲದಂತೆ ಹಿಂದಿಂದೆ ತಿರುಗಿ ಬೆಳೆದವಳು ನಾನು ... ಮೊದಲು ಅವನ ಮನೆ ನಮ್ಮನೆ ಪಕ್ಕದಲ್ಲಿ ಇದ್ದದರಿಂದ ಆ ಆತ್ಮೀಯ ಭಾವಕ್ಕೆ ಇನ್ನೂ ನೂರಾನೆ ಬಲ..

ಆಗಿನ್ನೂ ಅವನಿಗೆ ನಾಲ್ಕು ವರ್ಷ ಅಂತೆ .. ಅದುವರೆಗೂ ಅಕ್ಕ ಪಕ್ಕ ಯಾರೂ ಮಕ್ಕಳಿಲ್ಲದೆ  ಯಾರೂ ಸ್ನೇಹಿತರಿಲ್ಲದೆ ಒಂಟಿಯಾಗಿ ಬೆಳೆದವ ಅವನು ...  ಸ್ಕೂಲು, ನಮ್ಮ ಮನೆ, ಅವರ ಮನೆ ಇಷ್ಟೇ ಅವನ ಪ್ರಪಂಚ ... ನನ್ನಮ್ಮ ಅಂದ್ರೆ ಅವನಮ್ಮನಿಗಿಂತ  ಹೆಚ್ಚು ... ಊಟ ತಿಂಡಿ ಆಂಟಿ ಮನೆದೇ  ಬೇಕೆನ್ನೋ ಹಠ ಅಂತೆ .. ಅವನ ಮನೆಯಲ್ಲಿ ಆಳು ಕಾಳು  ಅಷ್ಟೈಶ್ವರ್ಯ ಇದ್ರೂ ನಮ್ಮ ಮಧ್ಯಮ ವರ್ಗದ ಮನೆಗೆ ಹೊಂದಿಕೊಂಡು  ಬಿಟ್ಟಿದ್ದ ... ಅದೇ ಸಮಯಕ್ಕೆ ನಾ ಹುಟ್ಟಿದ್ದು .. ಅವನ ಖುಷಿಗೆ ಎಲ್ಲೆ ಇಲ್ಲದ ದಿನಗಳವು ...  ತನ್ನ ಜೊತೆ ಆಟ ಆಡಲು ಪುಟ್ಟ ಗೊಂಬೆಯೇ ಸಿಕ್ಕಿತೆನ್ನೋ ಭಾವ ಅವನಲ್ಲಂತೆ  ... ಅಮ್ಮನಿಗೆ ಎದೆಹಾಲು ಇಲ್ಲದ್ದರಿಂದ ಬಾಟ್ಲಿ ಹಾಲೇ ಗತಿಯಾಗಿತ್ತಂತೆ ನನಗೆ...ತನ್ನ ಪುಟ್ಟ ಕಾಲುಗಳ ಮೇಲೆ ನನ್ನನ್ನು ಬಲವಂತವಾಗಿ ಮಲಗಿಸಲು ಹೇಳಿ  ನಂಗೆ ಬಾಟಲಿಯಿಂದ ಹಾಲು   ಕುಡಿಸೋ ಆತುರ, ಸಂತಸ ಸದಾ ಅವನಲ್ಲಂತೆ ..ತಾನು ಆ ಬಾಟ್ಲಿ ಹಾಲಿನ ರುಚಿ ಅದೆಷ್ಟೋ ಬಾರಿ ನೋಡಿದ್ದೇ ಅಂತ ಮುಂದೊಂದು ದಿನ ಹೇಳ್ಕೊಂಡಿದ್ದ... ಥೂ ಅಂತ ಬೈದಿದ್ದೆ ...  ಅವನ ಶಾಲೆಯ ಪದ್ಯಗಳೇ ನನಗೆ ಜೋಗುಳ...ಅವನ ಶಾಲೆಯ ಕಥೆಗಳನ್ನ ಕೇಳಿ ದೊಡ್ದವಳಾಗಿದ್ದೆ ನಾನು... ಊಟ ಪಾಠ ಆಟ ಎಲ್ಲದಕ್ಕೂ ಅವನೇ ಜೊತೆಗಾರ .. ಹೀಗಿತ್ತು ಆಗಿನ ನಮ್ಮ  ದಿನಚರಿ ... ಎರಡೂ ಮನೆಯ ಹೊಂದಾಣಿಕೆ  ಅದೆಷ್ಟಿತ್ತೆಂದರೆ ನಮ್ಮ ಸ್ನೇಹದ  ಒಡನಾಟಕ್ಕೆ ಯಾವತ್ತು ಎಲ್ಲೂ ಬೇಲಿ ಹಾಕಲಿಲ್ಲ ದೊಡ್ಡವರು ..





ಅದಾಗಲೇ ಅವ್ನು ತನ್ನ ಟೀನ್ ಏಜ್ ಹಂತದಲ್ಲಿದ್ದ ...ಕಾಲೇಜಿಗೆ ಹೋಗುತ್ತಿದ್ದ ...ಅವನ  ಚಂದ ಕಣ್ಣು ಕುಕ್ಕುವಂತಿತ್ತು... ಆಗಷ್ಟೇ ಚಿಗುರೊಡೆದ ಮೀಸೆ... ಧೃಡ ಮೈಕಟ್ಟು .. ಅದಕ್ಕೆ ತಕ್ಕ ಎತ್ತರ .. ಎಲ್ಲವೂ ಚಂದ ...  ... ಆಗಷ್ಟೇ ಹೈಸ್ಕೂಲ್ ಮೆಟ್ಟಿಲೀರಿದ್ದ ನನ್ನದು ಆ ಕಡೆ ಎಳಸೂ ಅಲ್ಲ, ಈ ಕಡೆ ಪ್ರೌಢಳೂ  ಅಲ್ಲ ಅಂತ ವಯಸ್ಸು.. ಕಣ್ಣಿಗೆ ಕಂಡಿದ್ದೆಲ್ಲ ಚಂದ ಅನ್ನೋ ವಯಸ್ಸು ... ವಯೋ ಸಹಜ ಆಕರ್ಷಣೆಗಳು ... ಆಗಷ್ಟೇ ನನ್ನ ದೇಹದಲ್ಲೂ  ಋತುಸ್ರಾವ ಶುರುವಾದ  ಸಮಯ ... ನನ್ನಲ್ಲೂ ಅಂದ ಚಂದ,  ದೇಹದಲ್ಲಿ ಬದಲಾವಣೆ ತನ್ನಷ್ಟಕ್ಕೆ ಆಗ್ತಾ ಇತ್ತು .ಎಲ್ಲಾ ಹುಡುಗಿಯರು ತಮ್ಮ ಸಮಸ್ಯೆ, ದುಗುಡ, ಗೊಂದಲ ಮೊದಲು ತಾಯಿ ಹತ್ರ ಹಂಚಿಕೊಂಡ್ರೆ, ನಾನೋ  ಆಗಿನ ನನ್ನ ಮನಸ್ಥಿತಿ ಹಂಚಿಕೊಡಿದ್ದು ಕೇವಲ ಅವನೊಂದಿಗೆ ಮಾತ್ರ... ಅಂತಹ ಮುಕ್ತತೆ ಅವನಲ್ಲಿ ನನ್ನದು ... ಎಲ್ಲದಕ್ಕೂ ಸಮಂಜಸವಾಗಿ ಹೀಗೀಗೆ ಆಗತ್ತೆ ಅನ್ನೋ ಉತ್ರ .... ಸ್ವಲ್ಪ ಹುಶಾರಲ್ಲಿರು.. ಇದೆಲ್ಲ ಹೆಣ್ಣಿಗೆ ಸಹಜ... ಪ್ರತಿ ತಿಂಗಳು ರಕ್ತಸ್ರಾವ ಮಾಮೂಲು .. ನೋವು ಸುಸ್ತು ಎಲ್ಲಾ ಆದ್ರೆ ಹೀಗಿಗೆ ಮಾಡು ...ವಿಶ್ರಾಂತಿ ತೆಗೋ ... ಅವನಿನ್ನೂ ಕಾಲೇಜ್ ಓದ್ತಾ ಇದ್ರೂ ಎಷ್ಟೆಲ್ಲಾ ಮಾಹಿತಿ ಅವನಲ್ಲಿ.. ನನ್ನಮ್ಮನಿಗಿಂತ ಒಂದು ಕೈ ಹೆಚ್ಚೇ ... ಈಗ್ಲೂ ಪ್ರತಿ ತಿಂಗಳೂ ಹೊಟ್ಟೆ ನೋವು, ಬೆನ್ನು ನೋವು, ಸೊಂಟ  ನೋವು ಆದ್ರೆ ಜೀವ ತಿನ್ನೋದು ಅವನದ್ದೇ .. ನೋವು ಅಂತ pain killer ನುಂಗ್ಬೇಡ ... ಅದೇ ಅಭ್ಯಾಸ ಆಗತ್ತೆ ಆಮೇಲೆ ... ಒಳ್ಳೇದಲ್ಲ ಆ ಮಾತ್ರೆಗಳು ಅನ್ನೋ ಬುದ್ದಿವಾದ ಪ್ರತಿಬಾರಿ ...

ಎಷ್ಟೋ ಬಾರಿ ಅಂದುಕೊಂಡದ್ದಿದೆ ... ಗೆಳತಿಗಾಗಿ  ಇಷ್ಟು ಕೇರ್ ತೆಗೆದುಕೊಳ್ಳೋ ಇವನು ಮದುವೆ ಆದ ಮೇಲೇ ತನ್ನ ಹೆಂಡತಿ ಮಕ್ಕಳನ್ನ ಅದೆಷ್ಟು ಕಾಳಜಿಯಿಂದ ನೋಡ್ಕೋಬಹುದು ಅಂತ ...

ಕಾಲೇಜಿನಲ್ಲಿ ಅದೆಷ್ಟೋ ಗೆಳತಿಯರು... ಏನೇ ಅವನ್ ಮೇಲ್ ಕ್ರಷಾ  .. ಸಖತ್ ಹ್ಯಾಂಡ್ಸಮ್ ಯಾ ... ಡಿಂಪಲ್  ಬೇರೆ ಅದೆಷ್ಟ ಮುದ್ದಾಗಿದೆ ...ಏನ್ ಲವ್ವಾ ... ಗುಟ್ಟು ಗುಟ್ಟಾಗಿ ಯಾವಾಗ್ ನೋಡಿದರೂ ಅವನ್ ಹಿಂದೆ ಮುಂದೆ ಸುತ್ತಾಡ್ತೀಯ .... ಲಕಿ ಕಣೆ ನೀನು ..ನಿಜ ವಿಷ್ಯ   ನಮಗೆ ಹೇಳಿದ್ರೆ  ನಾವೇನ್ ಕದ್ಕೊಂಡ್ ಹೋಗಲ್ಲ ಕಣೆ ಅವನನ್ನ,  ಅಂತೆಲ್ಲಾ  ಚುಡಾಯ್ಸಿದ್ರೆ... ಅವ್ರ ಮೇಲ್   ಸಿಟ್ಟಾಗಿ .. .' ಅವನು  ನನ್ನ ಬೆಸ್ಟ್   ಫ್ರೆಂಡ್ ಅಷ್ಟೇ ... ಮತ್ತೆನೂ ಅಲ್ಲ... ಅಂತ ಯೋಚನೆ ಕನಸು ಮನಸಲ್ಲೂ ಮಾಡಿಲ್ಲ...  ಮಾಡೋದು ಇಲ್ಲ...ಒಬ್ಬ ಹುಡ್ಗ ಹುಡುಗಿ ಸ್ನೇಹ ಅಂದರೆ  ಯಾವಾಗ್ಲೂ ಲವ್ವೇ ಅನ್ನೋ ಮೆಂಟಾಲಿಟಿ ನಿಮಗೆ....  ಹೋಗ್ರೆ ..  ಸ್ನೇಹಕ್ಕು ಬಣ್ಣ ಕಟ್ಟಿ ಮಾತಾಡೋದೇ ಆಯ್ತು ... ' ಅಂತ ಅಲ್ಲಿಂದ ಎದ್ದು ಹೋಗ್ತಿದ್ದೆ ... 

ನನ್ನ ಸೆಕೆಂಡ್ ಪಿಯುಸಿ ಪರೀಕ್ಷೆ,   ಸಿ ಯಿ ಟಿ ಪರೀಕ್ಷೆ ಎಲ್ಲವೂ ತನ್ನದೇ ಅನ್ನೋ ರೀತಿ...  ಸಮಸ್ಯೆ ಇದ್ದಲ್ಲೆಲ್ಲ ಹೇಳ್ಕೊಡ್ತಿದ್ದ ... ನನ್ನ ಸಮಸ್ಯೆ ಪರಿಹರಿಸೋ ಟೀಚರ್ ಗೆಳೆಯ ಅವನು ..  , ಉತ್ತಮ rank ಬಂದಾಗ ಅತಿ ಹೆಚ್ಚು ಸಂಭ್ರಮ ಪಟ್ಟವನವನು ... ಎಲ್ಲೆಲ್ಲೊ ಬೇರೆ ಊರಲ್ಲೆಲ್ಲ ಸೀಟ್ ಸಿಕ್ರೆ ನಿನ್ ಬಿಟ್ ಹೋಗದು ಹೇಗೋ ಅಂದಾಗ , ಇಷ್ಟೊಳ್ಳೆ rank ತೆಗೊಂಡಿದೀಯಾ ... ಬೆಂಗಳೂರಲ್ಲೇ ಸಿಗತ್ತೆ ಬಿಡು ... ಚಿಂತೆ ಮಾಡಬೇಡ ಅಂತ ಸಮಾಧಾನ ಮಾಡಿದ್ದ .. ಅವನಂದಂತೆ ಇಲ್ಲಿಯ ಉತ್ತಮ ಕಾಲೇಜಲ್ಲೇ ಇಂಜಿನಿಯರಿಂಗ್ ಸೀಟ್ ಸಿಕ್ಕಾಗ ಕುಣಿದಿದ್ದೆ ... ಅಲ್ವೇ ಈಗಲೇ ಹೀಗಾಡೊಳೊ ಮುಂದೆ ಮದ್ವೆ ಆದ್ರೆ ಈ ಊರ್ ಬಿಟ್ಟು ಹೋಗ್ತೀಯೋ ಇಲ್ವೋ ಅಂದಿದ್ದ ... ನೋಡೋ, ನಂದು ಕಂಡೀಶನ್ .. ಒಂದೋ ಅವನು ಮನೆ ಅಳಿಯ ಆಗ್ಬೇಕು , ಇಲ್ವೇ ನೀನು ನಿನ್ನ ಹೆಂಡ್ತಿ ಮಕ್ಕಳ ಸಮೇತ ಅವ್ನ ಊರಿಗ್ ಶಿಫ್ಟ್ ಆಗ್ಬೇಕು .... ಇದಕ್ಕೆ ಒಪ್ಪಿದರೆ ಮಾತ್ರ ಮದ್ವೆ ...ಇಲ್ಲಾ ಅಂದ್ರೆ ಇಲ್ಲೇ ಆರಾಮಾಗಿ ಅಪ್ಪ ಅಮ್ಮ ನಿನ್ ಜೊತೆ ಹಾಯಾಗ್ ಇರ್ತೀನಿ ಅಷ್ಟೇ ... ತಿಕ್ಲು ನೀನು ಅಂತ ಬೈಸ್ಕೊಂಡಿದ್ದೆ ... 



ಕಾಲೇಜ್ ಸೇರಿಕೊಂಡ  ಹೊಸದು ... ಅವ್ನ ಮೇಲೆ ರೇಗಾಡಿದ್ದೆ ... ಅದೇನ್ ಅಂತ ಹೆಸ್ರಿಟ್ಟಿಯೋ ನೀನು  ...ಕಾಲೇಜ್ನಲ್ಲಿ  ಎಲ್ರೂ ನನ್ನ 'ಜೈ ಜೈ ಸಂತೋಷಿ ಮಾತಾ  ...'  ಅನ್ನೋ ಹಾಡು ಹೇಳಿ  ಚುಡಾಯ್ಸ್ತಾರೆ ... ಗೊತ್ತ  ಅಂತ ಅವನ್ ಬೆನ್ನಿಗೆ ಎರಡ್ ಗುದ್ದಿದ್ದೆ... ಇರಲಿ ಬಿಡೆ ... ಎರ್ಡ್ ದಿನ ರೇಗಿಸ್ತರೆ .. ಆಮೇಲ್ ಅವ್ರಿಗ್ ಗೊತ್ತಾಗತ್ತೆ ... ಸಂತೋಷಿ ಇದ್ ಕಡೆ ಸಂತಸಕ್ಕೆ ಬರ ಇಲ್ಲ ಅಂತ ಸಮಾಧಾನ ಮಾಡಿದ್ದ ... 

ಅವನ ಸ್ನೇಹ ಅಂದ್ರೆ ಹಾಗೆ ... ಅಲ್ಲಿ ಮಾತಾಡದ ವಿಷಯಗಳೇ ಇರಲಿಲ್ಲ ಪ್ರೀತಿ, ಪ್ರೇಮ, ಕಾಮ, ಪೋಲಿತನ, ಕಾಲೇಜಿನ ಸ್ನೇಹಿತರ  ಲವ್ ಅಫೇರ್,  ಅವನ ಬ್ಯುಸಿನೆಸ್, ನನ್ನ ಕಾಲೇಜ್ ಸಂಬಂಧಪಟ್ಟ  ಎಲ್ಲವೂ ...  ಜೊತೆಜೊತೆ   ಹಾಸ್ಯ ನಗು ನೋವು ಅಳು ಬೇಸರ ದಿನಗಟ್ಟಲೆ ಮಾತು ಬಿಟ್ಟು ಮತ್ತೆ ರಾಜಿ ... ಹೀಗೆ 


ನನ್ನ ಗಂಡ ಆಗೊವ್ನು ಅಥವಾ ನಿನ್ನ ಹೆಂಡ್ತಿ ಆಗೊವ್ಳು  ನಮ್ಮಿಬ್ಬರ ಮಾತೆಲ್ಲಾದ್ರೂ ಕದ್ದು ಕೇಳಿದ್ರೆ ನಿಜಕ್ಕೂ ನಾವಿಬ್ರು ಸ್ನೇಹಿತ್ರೋ,  ಲವ್ವರ್ಸೋ ಅನ್ನೋ ಅನುಮಾನ ಗ್ಯಾರಂಟಿ ಬರತ್ತೆ ಕಣೋ ಅಂತ ಅದೆಷ್ಟೋ ಬಾರಿ ಹೇಳಿ ನಕ್ಕಿದ್ದಿದೆ... ಇಬ್ಬರಿಗೂ ಒಂದಂತೂ ತುಂಬಾ ಆಸೆ ಇತ್ತು ... ಲವ್ ಆಗ್ಬೇಕು ಜೀವನದಲ್ಲಿ .. ಅದರ ಸವಿ ಸವಿಬೇಕು ... ಯಾರು ಸಿಗಲ್ಲ ಕಣೋ ಎಷ್ಟೇ ಟ್ರೈ ಮಾಡಿದ್ರೂ  ... ಒಂದ್ ಕೆಲಸ ಮಾಡೋಣ್ವಾ...  ನಾವಿಬ್ರೇ ಲವ್  ಮಾಡುವಾ  ...ಪ್ರಾಬ್ಲಮ್ ಎಲ್ಲಾ ಸಾಲ್ವ್ ಅಂದಿದ್ದಕ್ಕೆ ಬೆನ್ನಿನ ಮೇಲೆ ಗುದ್ದು   ಬಿದ್ದಿತ್ತು ... ಆಹ್ ...ನೋವಿನಿಂದದ ಕೂಗಿದ್ದೆ ... ಸಾರಿ ಕಣೆ ..ಪೆಟ್ಟಾಯ್ತ?... ಅಂದಿದ್ದ ... ಇಲ್ಲ ಸುಮ್ನೆ ನಾಟಕ ಮಾಡ್ದೆ ಅಂದಿದ್ದಕ್ಕೆ ಮತ್ತೆರಡು ಗೂಸ ಕೊಟ್ಟಿದ್ದ .. :-P 

 ಒಂದೆರಡು   ವರ್ಷದ ಈಚೆ ಅವನ ತಂದೆ ಬೇರೆ ಹೊಸಮನೆ ಕಟ್ಟಿದಾಗ ಹೆಚ್ಚು ನೊಂದವಳು ನಾನೇ ಅನ್ಸತ್ತೆ ... ಬೇಕೆಂದಾಗ ನನ್ನ ಕೈಗೆ ಸಿಗಲ್ಲ ಈ ಗೆಳೆಯ ಅನ್ನೋ ದುಃಖ ತುಂಬಾ ದಿನ ಕಾಡಿತ್ತು . ಆದ್ರೂ ಇಡೀ ದಿನ, ಸಮಯ ಸಿಕ್ಕಾಗೆಲ್ಲಾ  ವಾಟ್ಸಾಪ್ ಅಂತ , ವಾರಕ್ಕೆರಡು ಬಾರಿ ಹೋಟೆಲ್  ಅಂತ ಹೇಗೋ ಒಡನಾಟಕ್ಕೆ ದಕ್ತಿದ್ದ ... ಸಿಕ್ಕಿದ್ದಷ್ಟೇ ಲಾಭ ಅಂದುಕೊಂಡು ಒಂದು ನಿಮಿಷ ವ್ಯರ್ಥ ಮಾಡದೇ  ಬಾಕಿ ಇದ್ದ ಎಲ್ಲವನ್ನು ಹಂಚಿಕೊಳ್ಳೊ  ತೃಪ್ತಿ ಇತ್ತು ನಮ್ಮಿಬ್ಬರ ಆ ಸ್ನೇಹ  ಬಂಧದಲ್ಲಿ ...

 ತನ್ನ ಉನ್ನತ ಶಿಕ್ಷಣ ಮುಗಿಸಿ  ಅಪ್ಪನ ವೃತ್ತಿಗೆ ಸಾಥ್ ನೀಡಿ ಇನ್ನೂ ಅವರ ಉದ್ದಿಮೆಯನ್ನ ವಿಸ್ತಾರ ಮಾಡಿ ಮೆಚ್ಚುಗೆ ಗಳಿಸಿದ ಸರಳ ಸಜ್ಜನ ಹುಡುಗ... .ಅದೇ ಪ್ರೀತಿಯ  ಗುಳಿಕೆನ್ನೆ ಹುಡುಗ ... ಆ ಮುಗುಳ್ನಗು ಜೊತೆಜೊತೆಗೆ ಆ ಕಣ್ಣಲ್ಲೇ ಸೂಸೊ ಆತ್ಮೀಯ ಭಾವ ... ಎಂಥವರನ್ನು ಅವನ ಪ್ರೀತಿಗೆ ಎಳೆದುಕೊಳ್ಳೊ  ವ್ಯಕ್ತಿತ್ವ ...

ಎರಡು ತಿಂಗಳ ಹಿಂದೆ ತಂದೆ ತಾಯಿ ನೋಡಿದ ಹುಡುಗಿ ಫೋಟೋ ತೋರ್ಸಿ ...
ಜಾತಕ ಹೊಂದತ್ತಂತೆ  ಕಣೆ ,,, ಸಂತು ಫೋಟೋ ನೋಡೇ ಹೇಗಿದಾಳ್ ಹುಡ್ಗಿ ?
ಅರೆ ನಿಂಗೆ ಇಷ್ಟ ಆದ್ರೆ ಆಯ್ತ್ ಕಣೋ ... ನನ್ ಪರ್ಮಿಸನ್ ಯಾಕಪ್ಪ ... 
ಒಮ್ಮೆ ನೋಡೇ .. ನಿನಗೂ ಖುಷಿಯಿದ್ರೆ ನಂಗ್ ಸಮಾಧಾನ ಕಣೆ ... 
ಆಹ್ ... ಲಕ್ಷಣವಾಗಿದಾಳ್  ಕಣೋ...  ಚಿಂತೆ ಬೇಡ ... ಆಲ್ ದ ಬೆಸ್ಟ್ ... ಅಂಕಲ್ ಆಂಟಿಗೆ ಇಷ್ಟ ಆಗಿದ್ದಾಳೆ ತಾನೇ ... ಯೋಚನೆ ಬೇಡ ... ಎಲ್ಲ ಒಳ್ಳೆದಾಗತ್ತೆ ...ಅದಕ್ಕಿಂತ ಹೆಚ್ಚು  ನಿಂಗೂ ಇಷ್ಟ ಆಗಿದಾಳ್  ತಾನೆ... ಶುಭಸ್ಯ ಶೀಘ್ರಂ ... ಬೇಗ ವಾಲಗ ಊದ್ಸು ... ನಂಗೊದ್ ಒಳ್ಳೆ ಸಿಹಿ ಊಟ ಹಾಕ್ಸು ಅಂದಿದ್ದೆ ... ಡನ್ ಅಂದಿದ್ದ ...

ಅದೇ ವಾರದಲ್ಲಿ ಸರಳವಾಗಿ ಹುಡುಗಿ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು ... ಎಕ್ಸಾಮ್ ಸಮಯ ಆದ್ದರಿಂದ ಹೋಗಿರಲಿಲ್ಲ ... ಫೋಟೋ ತೋರ್ಸಿದ್ದ .. ಮುದ್ದಾದ ಜೋಡಿ ... ನೈಸ್ ಕಣೋ ಅಂತ ಖುಷಿ ಪಟ್ಟಿದ್ದೆ ... ಕೂಡಲೇ  ಮದುವೆ ಇದ್ದದ್ದರಿಂದ ಶಾಪಿಂಗ್ ಅದೂ ಇದೂ ಅಂತ ಓಡಾಟದಲ್ಲಿ ಅದೆಷ್ಟು ಬೇಗ ಎರಡು ತಿಂಗಳು ಕಳೀತೋ ಗೊತ್ತೇ ಆಗಿಲ್ಲ ...


ಆಗಲೇ ತನ್ನ ಮದುವೆಗೆಂದು ದೊಡ್ಡ ಶೋ ರೂಮ್ ನಲ್ಲಿ ಚಂದದ ಸೀರೆ ಕೊಂಡು  ಉಡುಗೊರೆಯಾಗಿ ಕೊಟ್ಟಿದ್ದ..ಜೊತೆಗೆ ನನ್ನ ಅಪ್ಪ ಅಮ್ಮನಿಗೂ ಉಡುಗೊರೆ ...ಸಂತು ಬೇಗ ಬ್ಲೌಸ್ ಎಲ್ಲ ಹೊಲ್ಸು ... ಚಂದದ ಡಿಸೈನ್ ಇರೋವಂಥದ್ದು ... ಟೈಲರ್ ತುಂಬಾ ಟೈಮ್ ತೆಗೊಳ್ತಾನೆ ... ಕೊನೆ ಘಳಿಗೆಯಲ್ಲಿ ಕೊಡ್ಬೆಡ .. ಈಗ ಸೀಸನ್ ಬೇರೆ ... . ಅದರ ಖರ್ಚೆಲ್ಲ ನನ್ನದು .. ಅದಕ್ಕೆ ಮ್ಯಾಚ್ ಆಗೋ ಜ್ಯುವೆಲ್ಲರಿ, ಚಪ್ಪಲಿ ಎಲ್ಲಾ ನನ್ನ ಉಡುಗೊರೆ ಅಂತ ತಾನೇ ಖುದ್ದಾಗಿ ಶಾಪಿಂಗ್  ಮಾಡಿಸಿದ್ದ ... ಎಲ್ಲವೂ ಅವನ ಸೆಲೆಕ್ಶನ್ ... ನಿನ್ನದು ಗುಂಗುರು ತಲೆಗೂದಲು ... ಆ ಸೀರೆಗೆ ಈ ಹೇರ ಸ್ಟೈಲ್ ಚಂದ ಕಾಣತ್ತೆ ...  ಹೀಗೆ ಸಿಂಗರಿಸ್ಕೋಬೇಕು ...ಗೆಳತಿ ಹೀಗೆ ಬರ್ಬೇಕು ಅಂತ   ಎಲ್ಲವೂ ಎರಡು ತಿಂಗಳ ಮೊದಲೇ ನಿಗದಿ ಮಾಡಿ ಬಿಟ್ಟಿದ್ದ ...

ಅದ್ಸರಿ ಕಣೆ ಸಂತು ನಂಗೆ ಏನ್ ಕೊಡ್ತಿ  ಗಿಫ್ಟ್ ಮದ್ವೆಗೆ ಕೇಳಿದ್ದ ...
ಏ ಹೋಗೋ ... ಬೇಕಾದ್ರೆ ಅಮ್ಮನ್ ಕೈಲಿ ಒಂದೊಳ್ಳೆ ಊಟ...  ಅದಕ್ಕಿಂತ ಹೆಚ್ಚಿನದೇನು ನಿರೀಕ್ಷೆ ಮಾಡ್ಬೇಡ ಅಷ್ಟೇ 
ನಿನ್ ಜೀವನಕ್ಕೆ ನಾನೇ ಉಡುಗೊರೆಯಾಗಿ  ಸಿಕ್ ಮೇಲೆ ಇನ್ನೆಂಥ ಗಿಫ್ಟ್ ನಿಂಗೆ
ಅತಿ ಆಸೆ ಒಳ್ಳೇದಲ್ಲ ಅಂದಿದ್ದೆ ... 
ಹೋಗ್ ಹೋಗೆ... ನೀ ಹುಟ್ಟಕ್ಕು ಮೊದ್ಲೇ ನಿನ್ನಮ್ಮನ ಕೈ ತುತ್ತು ತಿಂದು ಬೆಳೆದವನು ನಾನು .. 
ಊಟ ಬೇಕಂದ್ರೆ ಎಷ್ಟೊತ್ತಿಗೂ ಬಂದ್ ಮಾಡ್ಕೊಂಡು ಹೋಗ್ತೀನಿ ..ನಿನ್ನ ದಯೆ ಬೇಕಾಗಿಲ್ಲ .. 
ಗೊತ್ತು ಕಣೊ ...ಜಾಸ್ತಿ ಬಿಲ್ಡ್ ಅಪ್ ಬೇಡ ಅಂತ ರೇಗಿಸಿದ್ದೆ .. 
ಕಂಜೂಸ್ ಅಂತ ಸಿಟ್ಟು ಮಾಡಿದ್ದ  ಅವನು....  

ಅವನ ಮದುವೆಗೆ ಹಾಕೋ ಬಟ್ಟೆಗಳ  ಸೆಲೆಕ್ಷನ್ ಎಲ್ಲ ನನ್ನದೆ   ... ರಿಸೆಪ್ಷನ್ಗೆ ಹಾಕಕ್ಕೆ ನೇವಿ ಬ್ಲೂ ಸೂಟ್ ...  ಅದಕ್ಕೆ  ಒಪ್ಪೋ ಟೈ ... ಮನ್ಮಥನಂತೆ ಕಾಣ್ತಿ ಕಣೋ  ಇದನ್ನ ಹಾಕಿದ್ರೆ ಅಂದಿದ್ದೆ .. ಅವನ ಹುಡುಗಿಗೆ ಸೀರೆ ಒಡವೆ ಆರಿಸಕ್ಕು ಜೊತೆಗೆ ನಾ ಅವನ ಬಾಲ .. 

ಇದೆಲ್ಲಾ  ನೆನಪು ಮಾಡ್ತಾ ಮಾಡ್ತಾ ಯಾವಾಗ ನಿದ್ದೆಗೆ ಜಾರಿದ್ನೋ ಗೊತ್ತಿಲ್ಲ... ಬೆಳಿಗ್ಗೆ ಅಮ್ಮ 5 ಕ್ಕೆ ಎಬ್ಬಿಸಿದಾಗಲೇ ಎಚ್ಚರ ..

ಬೇಗ ಎದ್ದು ರೆಡಿಯಾಗಿ ಅಮ್ಮನ್ ಹತ್ರ ಕಾಫಿ ಮಾತ್ರ ಸಾಕು ... ಬ್ರೇಕ್ ಫಾಸ್ಟ್ ಅಲ್ಲೇ ಮಾಡೋಣ ಅಂತ ವಾರೆಗಣ್ಣಲ್ ಅವರನ್ನ ನೋಡಿದ್ದೆ .. ಅವ್ರಿಗೂ ಗೊತ್ತು ... ಫಂಕ್ಷನ್ ತಿಂಡಿ ಊಟ ಅಂದ್ರೆ ಅದೆಷ್ಟು ಪಂಚ ಪ್ರಾಣ ನನಗೆ ಅಂತ ... ಅವ್ನೂ ಅಮ್ಮಾನೂ ಇಬ್ರೂ ಸೇರಿ ಅದೆಷ್ಟು ಬಾರಿ ಬೈದದ್ದುಂಟೋ ... ಯಾರಾದ್ರು ನೋಡಿದ್ರೆ ಮನೆಯಲ್ಲಿ ಊಟ ಹಾಕ್ತಾರೋ ಇಲ್ವೋ ಅನ್ಕೊಬೇಕು  ... ಅವರಿಬ್ಬರ ಮಾತಿಗೆ ನಿರ್ಲಕ್ಷ್ಯವೇ ಉತ್ತರ ನಂದು ... ಐ  ಲೈಕ್ ಇಟ್ ಅಷ್ಟೇ ...

ಸರಿ ಬೇಗ ಬೇಗ ಹೊರಡು ಅಂದ ಅಮ್ಮನ ಮಾತಿಗೆ ಹೂ ಗುಟ್ಟು ಕಾಫಿ ಹೀರಿ, ಸ್ನಾನ ಮಾಡಿ ಅವನೇ ಮದುವೆಗೆ ತೆಗೆಸಿಕೊಟ್ಟ ಸೀರೆ ತೊಟ್ಟೆ .. .. ಕನ್ನಡಿಯಲ್ಲಿ ನೋಡ್ಕೊಂಡೆ .. ಪರವಾಗಿಲ್ಲ ಲಕ್ಷಣವಾಗೆ ಇದೀನಿ ... ಸಿಳ್ಳೆ ಹೊಡಿತಾ ರೂಮ್ನಿಂದ ಹೊರ ಬಂದರೆ ಅದಾಗಲೇ ಅಪ್ಪ ಅಮ್ಮ ರೆಡಿ ಆಗ್ ಬಿಟ್ಟಿದ್ರು ... ರೈಟ್ ರೈಟ್ ಅಂತ ಕಾರ್  ಸ್ಟಾರ್ಟ್ ಮಾಡಿ ರಿವರ್ಸ್ ತೆಗ್ದು ಗೇಟ್ ಹಾಕಿ ಸೀದಾ ಕಲ್ಯಾಣ ಮಂಟಪದತ್ತ ನಮ್ಮ ಪಯಣ ಸಾಗಿತ್ತು ... ಅರ್ಧ ಘಂಟೆಯಲ್ಲಿ ತಲುಪಿದ್ದು ಆಯ್ತು ...


ಮುಖ್ಯರಸ್ತೆಯಲ್ಲೇ ಇರೋ ಪ್ರಸಿದ್ಧ ಕಲ್ಯಾಣ ಮಂಟಪ .. ಅದಾಗಲೇ ಶೃಂಗಾರಗೊಂಡು ನಳನಳಿಸ್ತಿತ್ತು ...
ಅದಾಗಲೇ ರಸ್ತೆಯ ಇಕ್ಕೆಲದಲ್ಲೂ ವಾಹನಗಳ ನಿಲುಗಡೆ .. ಅಬ್ಬ ಇನ್ನೂ ಘಂಟೆ ಏಳಾಗಿಲ್ಲ ... ಆಗ್ಲೇ ಈ ಪರಿ ವಾಹನಗಳ ಭರಾಟೆ ... ಇನ್ನೊಂದು ಎರಡು ಘಂಟೆ ಕಳೆದರೆ ಅದು ಹೇಗಿರತ್ತೋ ಇಲ್ಲಿಯ ವಾತಾವರಣ ಅಂತ ಮನಸ್ಸಲ್ಲೇ ಅಂದುಕೊಳ್ತಾ ನಮ್ಮ  ಕಾರು ಸಿಕ್ಕ ಸ್ವಲ್ಪ  ಜಾಗದಲ್ಲಿ ಪಾರ್ಕ್ ಮಾಡಿ ಅಪ್ಪ ಅಮ್ಮನ ಜೊತೆ ಒಳಗೆ  ನಡೆದಿದ್ದೆ ... ಅದಾಗಲೇ ಅತ್ಯುತ್ತಮವಾದ ಸಂಗೀತ ಕೇಳ್ತಿತ್ತು ... ದೊಡ್ಡ ಪಾರ್ಕಿಂಗ್ ಜಾಗದಲ್ಲೆಲ್ಲ ಆಗ್ಲೇ ಬಣ್ಣ ಬಣ್ಣದ ಶಾಮಿಯಾನ ಹಾಕಿ ರೆಡಿ ಮಾಡಿಯಾಗಿತ್ತು... ಒಂದು ಪಾರ್ಶ್ವದಲ್ಲಿ ಬಫೆಗೆ ವ್ಯವಸ್ಥೆ ಮಾಡಿದ್ರೆ ಇನ್ನೊಂದು ಕಡೆ ಕಣ್ಣು ಹಾಯುವಷ್ಟು ದೂರ ಟೇಬಲ್ ಖುರ್ಚಿಗಳ ಸಾಲು ಸಾಲು ...  ಸುಮಾರು ಮೂರರಿಂದ ನಾಲ್ಕು ಸಾವಿರ ಅತಿಥಿಗಳ ನಿರೀಕ್ಷೆ ಮನೆಯವರದ್ದು ... ಅದಕ್ಕೆ ತಕ್ಕ ವ್ಯವಸ್ಥೆ  ಕೂಡ ...

ಮುಂಭಾಗದಲ್ಲಿ ದೊಡ್ಡ ಹೂವಿನ ಅಲಂಕಾರದಲ್ಲಿ ಅವನ ಮತ್ತು ಅವಳ ಹೆಸರು ..

 ಸುಮಂತ್ weds  ದೀಪ್ತಿ 

ಆಹ್ ....  ಪ್ರೀತಿಯ ಜೀವದ ಗೆಳೆಯನ ಮದುವೆ ...

 ಅದಾಗಲೇ ಅವನ ಚಿಕ್ಕಪ್ಪಂದಿರು ಹೊರ ಬಾಗಿಲಲ್ಲೇ ನಿಂತು ಅತಿಥಿಗಳನ್ನ ಕೈ ಕುಲುಕಿ ಆಮಂತ್ರಣ  ಮಾಡ್ತಾ ಇದ್ರು .. ಅಪ್ಪನನ್ನ ಕಂಡವರೇ 'ಹೋ ...ಬರ್ಬೇಕು ... ಬನ್ನಿ ಬನ್ನಿ ... ಖುಷಿ ಆಯ್ತು... ತಿಂಡಿ ತಿಂದ್ಕೊಂಡೆ ಮಂಟಪಕ್ಕೆ ಹೋಗಿ ಅಂತಾನೆ ನಮ್ಮೆಲ್ಲರನ್ನ ಭೋಜನ ಶಾಲೆಯ ಬಾಗಿಲವರೆಗೆ ಬಿಟ್ಟು ಬಂದ್ರು ... ಅದಾಗಲೇ ನೂರಾರು ಜನರು ತಿಂಡಿ ತಿಂತಾ ಅಲ್ಲೆಲ್ಲ ಹಬ್ಬದ ವಾತಾವರಣ .... ಗುಸುಗುಸು ಶಬ್ದ ... ತಟ್ಟೆ ಲೋಟಗಳ ಶಬ್ದ ... ತಿಂಡಿಯ  ಘಮ ... ನಾವು ಮೂವರು ಒಂದೆಡೆ ಕೂತ ಕೂಡ್ಲೆ ದೊಡ್ಡ ತಟ್ಟೆಯಲ್ಲಿ ದೋಸೆ ಚಟ್ನಿ, ಇಡ್ಲಿ ವಡಾ, ಬಟ್ಟಲಲ್ಲಿ ಸಾಂಬಾರ್, ಕ್ಯಾರೆಟ್ ಹಲ್ವಾ ,   ಕಾಫಿ... ಆಹ್ ಎಲ್ಲಾ ನನ್ನ ಫೆವರಿಟ್ .ಅದಾಗಲೇ ಮೆನು ಏನಂತಾ ಮೊದ್ಲೇ ಹೇಳ್ ಬಿಟ್ಟಿದ್ದ ಅವ್ನು ... . ನಿಧಾನವಾಗಿ ಎಲ್ಲವನ್ನು ಮೆಲ್ಲುತ್ತ ಸುತ್ತ ಮುತ್ತ ನೋಡ್ತಾ  ಕೂತ  ಜನರನ್ನ ಗಮನಿಸ್ತಾ ತಿಂಡಿ ತಿಂದು ಮುಗಿಸಿದ್ದೆ ..ಅವ್ನೇನಾದ್ರು ಪಕ್ಕದಲ್  ಇದ್ದಿದ್ರೆ  ಮದ್ವೆ ಮನೇಲ್ ಊಟ ಮಾಡ್ಬೇಕಂತ ಅದೇನ್ ನಿನ್ನೆಯಿಂದ ಊಟ ಮಾಡಿದಿಯೋ ಇಲ್ವೋ ತಿಂಡಿಪೋತಿ   ಅಂತಿದ್ದ...   ಕೈ ತೊಳೆದು ಅಪ್ಪ ಅಮ್ಮನ ಜೊತೆ ಮಂಟಪಕ್ಕೆ ಹೆಜ್ಜೆ ಇಡ್ತಾ ಇದ್ರೆ ಅದಾಗಲೇ ನೂರಾರು ಜನರು ಅಕ್ಕ ಪಕ್ಕದಲ್ಲಿ ...

ಅವರ ಘನತೆಗೆ ತಕ್ಕಂತೆ ಇಡೀ ಕಲ್ಯಾಣಮಂಟಪ ಆಧುನಿಕವಾಗಿ  ಚಂದವಾಗಿ ಅಲಂಕೃತಗೊಂಡಿತ್ತು .... ಹೊರ ಭಾಗದಲ್ಲಿ ರೋಸ್ ವಾಟರ್ ಪರಿಮಳ ಅದೆಲ್ಲಿಂದ ಬರ್ತಿತ್ತೋ ಗೊತ್ತಿಲ್ಲ  ...ಸಭಾಂಗಣದ ಒಳಗೆ ಕಾಲಿಡ್ತಿದ್ದ ಹಾಗೆ  ಮುಕ್ಕಾಲು ಭಾಗ ಖುರ್ಚಿಗಳೆಲ್ಲ ಭರ್ತಿಯಾಗಿತ್ತು ... . ಎಲ್ಲೆಲ್ಲೂ ರೇಷ್ಮೆ ಸೀರೆಗಳ ಸರಪರ ಸದ್ದು ... ಹೊಸ ಫ್ಯಾಶನ್ ಆಭರಣಗಳು ಹೆಂಗಸರ ಮೈ ಅಲಂಕರಿಸಿತ್ತು .... ಚಿಕ್ಕಚಿಕ್ಕ ಹೆಣ್ಣು ಮಕ್ಕಳಿಗೆ ರೇಷ್ಮೆ ಲಂಗ,  ಪುಟ್ಟ ಹುಡುಗರಿಗೆ ಕುರ್ತಾ ಶೇರ್ವಾನಿ,  ವಯಸ್ಸಿಗೆ  ಬಂದ ಹುಡುಗಿಯರ ಡಿಸೈನರ್ ಲಂಗ ದಾವಣಿ, ಹೊಸ ಟ್ರೆಂಡ್  ಝುಮ್ಕಾಸ್,  ಚಂದದ ಕೇಶಾಲಂಕಾರ...  ಅವನ ಮನೆಯ ಹತ್ತಿರದ ಸಂಬಂಧಿಗಳು ಗರಿ ಗರಿ  ರೇಷ್ಮೆ ಸೀರೆ, ಡಿಸೈನರ್ ರವಿಕೆ ಉದ್ದ ಜಡೆ, ಉಡುಪಿ ಮಲ್ಲಿಗೆ,  ಕೈಗೆ ಬಾಜುಬಂಧಿ, ನೆತ್ತಿ ಬೊಟ್ಟು, ಮ್ಯಾಚಿಂಗ್ ಆಭರಣಗಳು ಟೊಟಲಿ ಎಲ್ಲವೂ ಚಂದ ... ಒಂದು ದಿನದ ಸಂಭ್ರಮ .ಮನೆ ಮಗನ ಮದುವೆ ... .ಎಲ್ಲರಿಗೂ  ತಾವು ಚಂದ ಕಾಣಬೇಕೆನ್ನೋ ಆಸೆ ... ಫೋಟೋ ವಿಡಿಯೋಗಳ ಭರಾಟೆ ಎಲ್ಲೆಲ್ಲೂ ... ಅಷ್ಟು ದೊಡ್ಡ ಮಂಟಪದ ಪೂರ್ತಿ ಭಾಗವನ್ನ ಸೆರೆ ಹಿಡಿಯೋ ಪ್ರಯತ್ನ ಕ್ಯಾಮೆರಮ್ಯಾನ್ಗಳದ್ದು ... ಅಲ್ಲಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ... ದೂರದ ಮಂಟಪದಲ್ಲಿ ಆಗುವ ಮದುವೆ  ಕಲಾಪಗಳನ್ನ ಸೆರೆ ಹಿಡಿದು ದೂರದಲ್ಲಿ ಕೂತ ಜನರಿಗೆ ದೊಡ್ಡ ಸ್ಕ್ರೀನ್ನಲ್ಲಿ ನೋಡಬಹುದಾಗಿತ್ತು  ..ಹೊರಗೆ ಬೆವರು ಕಿತ್ತು ಬರೋ ಸೆಖೆ ಇದ್ರೂ  A C ಯಿಂದ ತಂಪಾದ ಇಡೀ ಸಭಾಂಗಣ ... ಅತ್ತಿತ್ತ ಸುಳಿದಾಡೋ  ಹೆಂಗಸರಿಂದ ಮಲ್ಲಿಗೆಯ ಘಮ ... ಆಹ್ ... ಅದನ್ನ ಸುಮ್ಮನೆ ಹೀರಬೇಕಷ್ಟೇ .... ಸ್ವರ್ಗ... ಅಲ್ಲಲ್ಲಿ ಸೆಲ್ಫಿ  ತೆಗೆದು ಫೇಸ್ಬುಕ್ whatsapp ಗೆ ಅಪ್ಲೋಡ್ ಮಾಡೋ ಜನಗಳ ಕ್ರೇಜ್ ... ಸುಮ್ಮನೆ ನೋಡಬೇಕಷ್ಟೇ ... 


ಅದಾಗಲೇ ಅಲಂಕೃತ ಮಂಟಪದ ತುಂಬಾ ವೇದ ಮಂತ್ರ ಘೋಷಗಳು ಪ್ರಾರಂಭ ಆಗೋ ಸೂಚನೆ ಕೊಡ್ತಾ ಇತ್ತು ... ಅಷ್ಟು ದೂರದಿಂದಲೇ ನಮ್ಮನ್ನ ಗಮನಿಸದ ಅವನು ಕೈ ಬೀಸಿ 'ಹಾಯ್' ಅಂದಿದ್ದ ..ಮುಖದಲ್ಲಿ ನೂರು ವೊಲ್ಟ್ ಬಲ್ಬ್ ಹತ್ತಿದ ಕಳೆ .. . ರೇಷ್ಮೆ ಪಂಚೆ,  ಮೈ ತುಂಬಾ ಶಾಲು ... ಅಬ್ಬ ಸಧ್ಯ .. ಬೆನ್ನು, ಎದೆ ಮೇಲೆ ತುಂಬ್ಕೊಡಿರೋ  ರೋಮಗಳೆಲ್ಲ ಕಾಣದಂತೆ ಪರ್ಫೆಕ್ಟ್ ಆಗಿ ಕವರ್ ಮಾಡಿದ್ದ.. ಒಂದು ತುಂಟ ನಗು ನನ್ನ ಮುಖದ ತುಂಬಾ ... ಹೀಗೆಲ್ಲ ಯೋಚನೆ ಮಾಡಿದ್ದು  ಗೊತ್ತಾದ್ರೆ 'ಹಾಳಾಗಿದ್ದಿಯಾ ನೀನು' ಅಂತ ಉಗಿಸ್ಕೊಳ್ಳೋದು ಗ್ಯಾರಂಟಿ ಇತ್ತು ...ಹೌದಲ್ವಾ ... ಯಾವಾಗ್ಲೂ ಇದೇ ತುಂಟತನ, ಕಿತಾಪತಿ, ಕಿಲಾಡಿ  ಆಲೋಚನೆಯೇ ನಂದು ... ಅದ್ಯಾವಾಗ ಸರಿ ಹೋಗ್ತೀನೊ ... ಅವತ್ತು ಚುಡಾಯ್ಸಿದ್ದ ಮಾತೆಲ್ಲ ಮತ್ತೆ ನೆನಪು ...  'ಅಬ್ಬಾ ಅದೇನ್ ಮೈ ತುಂಬಾ ಕೂದ್ಲು ನಿಂಗೆ ... ಕರಡಿ ವಂಶದವನಾ ನೀನು ? ಅಂತ ಯಾವಾಗ್ಲೂ ರೆಗ್ಸೋ ನಾನು ... ಇರ್ಲಿ ಬಿಡೆ ... ನಾನೇನ್ ಬೇಕಂತಾ ಬೆಳ್ಸಿದೀನಾ ಅನ್ನೋ ಅವ್ನು ..  .ಮದ್ವೆಗೆ ವ್ಯಾಕ್ಸಿಂಗ್ ಆದ್ರೂ ಮಾಡ್ಸ್ಕೊಳ್ಳೊ ಅನ್ನೋ ನಾನು ...  ಆಮೇಲ್ ಚರ್ಮ ಕಿತ್ತ್ಕೊಂಡ್ ಬರತ್ತೆ ಅಷ್ಟೇ ಅನ್ನೋ ಅವ್ನು ... ಇಬ್ಬರದ್ದು ಹಂಚು ಹಾರಿ ಹೋಗೋ ಹಾಗೆ ನಗು ... ಆಹ್ ಒಂದೊಂದು ಹೆಜ್ಜೆಗೂ ಒಂದೊಂದು ನೆನಪುಗಳು ...

ಇವತ್ತಂತೂ ಅವನ ಅಪ್ಪ ಅಮ್ಮಾನು ಮಗನ ಹಾಗೆ ಮುದ್ಮುದ್ದಾಗಿ ಕಾಣ್ತಿದ್ರು  ... ಒಬ್ಬನೇ ಮಗನ ಮದುವೆ ಸಂಭ್ರಮ ಅವರ ಮುಖದಲ್ಲೇ ಕಾಣ್ತಿತ್ತು ...    ಸಖತ್ ಮಿಂಚಿಂಗು ... ಅಂಕಲ್ ಚಂದದ ಝರಿ ಪೇಟ, ಕುರ್ತಾ ಶೇರ್ವಾನಿ ಅದರ ಮೇಲೊಂದು ಶಾಲು ಹಾಕಿದರೆ, ಆಂಟಿ ಅಧ್ಭುತವಾದ ಕಾಂಜಿವರಂ ಸೀರೆಯಲ್ಲಿ ... ಇಬ್ಬರನ್ನು  ಹತ್ರ ಹತ್ರ ನಿಲ್ಸಿ ಫೋಟೋಗೆ ಫೋಸ್ ಕೊಡಿ   ಅಂದ್ರೆ ಆಂಟಿ ಕೆನ್ನೆ ಈಗ್ಲೂ  ಕೆಂಪು ಕೆಂಪು .. ಅಂಕಲ್ನ ತುಂಟ   ವಾರೆನೋಟ ..

ಇನ್ನೊಂದು ಮಗ್ಗುಲಲ್ಲಿ ದೀಪ್ತಿಯ ಗೌರಿ ಪೂಜೆ ಶಾಸ್ತ್ರ ನಡಿತಿತ್ತು ..ಅವಳಂತೂ ಚಂದದ ಗೊಂಬೆ ... ನನ್ನಷ್ಟೇ ವಯಸ್ಸು ... ಮೃದು, ಸೌಮ್ಯ ಹಸನ್ಮುಖಿ ವದನ ...ಕೈಗೆ ಹಚ್ಚಿದ ಮೆಹಂದಿ ರಂಗು .. ಅವನಿಗೆ  ತಕ್ಕ ಜೋಡಿ ... . ಒಂದೆಡೆ ಸುಶ್ರಾವ್ಯವಾದ ಸ್ಯಾಕ್ಸೋಫೋನ್ ವಾದನ ...





ಮುಹೂರ್ಥ ಸಮಯ ಹತ್ತಿರ  ಬಂದಂತೆ ಒಂದೆಡೆ ಗಟ್ಟಿಮೇಳ ಅನ್ನುತ್ತಿದ್ದ ಪುರೋಹಿತರು,,, ಅಕ್ಷತೆ ತಲೆ ಮೇಲೆ ಹಾಕಿ ಶುಭ ಹಾರೈಸೋ ಅವನ ಕುಟುಂಬದವರು ...  ಹಾಗೆ ದೀಪ್ತಿಯ ಕಣ್ಣಲ್ಲಿ ಕಣ್ಣಿತ್ತು ತಾಳಿ ಕಟ್ಟಿದ್ದ ಅವ್ನು,ಕುಂಕುಮ ಅವಳ ಹಣೆಗೆ ಹಚ್ಚಿದ್ದ ...ಸಪ್ತಪದಿ ತುಳಿದಿದ್ದ ಅಗ್ನಿ ಸಾಕ್ಷಿಯಾಗಿ ..  ತನ್ನ ಪ್ರೀತಿಯನ್ನ ಕಣ್ಣಲ್ಲೇ ವ್ಯಕ್ತ ಪಡಿಸಿದ್ದ ...  ಇದೆಲ್ಲಾ ದೂರದಲ್ಲಿ  ಕೂತೆ ಕಣ್ಣು ತುಂಬಿಕೊಂಡಿದ್ದೆ ...ಪ್ರೀತಿಯ ಗೆಳೆಯನ ಜೀವನ ಸುಖವಾಗಿರಲಿ ಅಂತ ಮನಸ್ಸು ತುಂಬಿ ಹಾರೈಸಿದ್ದೆ ..

೧೧ ಘಂಟೆಗೆ  ರಿಸೆಪ್ಶನ್ .... ಬಂದ ಸಾವಿರಾರು ಜನರು ಮಂಟಪದ ಬಳಿ ಹೂವಿನ ಬೊಕ್ಕೆ, ಉಡುಗೊರೆ ಹಿಡಿದು ನವ ದಂಪತಿಗಳನ್ನ ಹಾರೈಸೋರೆ. ಅಬ್ಬ ಈ ಜನ ಸಾಗರದಲ್ಲಿ ಕಾಲು ಹಾಕಕ್ಕು ಜಾಗ ಇಲ್ಲ. ಮತ್ತೆ ಹೋಗೋಣ ಅಮ್ಮ ವಿಶ್ ಮಾಡಕ್ಕೆ ಅಂದಿದ್ದೆ ... ಸರಿ ಅಂತ ಅವ್ರು ತಲೆದೂಗಿದ್ರು. ಅವರಲ್ಲೂ ಖುಷಿಯ ಭಾವ ... ತಾನು ಆಡಿಸಿದ ಮಗು ಈಗ ಹೊಸ  ಜೀವನಕ್ಕೆ ಕಾಲಿಡ್ತಾ ಇದಾನೆ .. ಅವ್ರ ಮುಖವೇ ಅದನ್ನ ಆ ಸಂತೋಷವನ್ನ  ಹೇಳ್ತಿತ್ತು ... 


ಅದೆಷ್ಟು ಉದ್ದದ ಸರತಿ ಸಾಲು..ಕೊನೆಗೂ  ನಾವು ಪುಷ್ಕಳ ಊಟ ಮುಗಿಸಿ ಎರಡು ಘಂಟೆ ಹೊತ್ತಿಗೆ ವಧು ವರರಿಗೆ ವಿಶ್ ಮಾಡಕ್ಕೆ Q ನಲ್ಲಿ  ನಿಂತರೆ ಆಮೆಯಂತೆ ನಿಧಾನಕ್ಕೆ ಒಂದೊಂದೆ ಹೆಜ್ಜೆ ಮುಂದೆ ಸಾಗ್ತಿತ್ತು ಜನರ ಸರತಿ ಸಾಲು  ..ದೊಡ್ಡ ದೊಡ್ಡ ವಿ ಐ ಪಿಗಳು ಶುಭ ಹಾರೈಸಕ್ಕೆ ಸಾಲುಗಟ್ಟಿ ನಿಂತಿದ್ದರು . ಅವನೋ ಸೂಟ್ ಧರಿಸಿ ಫಳ ಫಳ ಮಿಂಚೊ ಶೂ ಹಾಕಿ ಮಿಂಚ್ತಾ  ಇದ್ರೆ,  ನವ ವಧು ದೀಪ್ತಿ ಆಗಷ್ಟೇ ಕೈ ಹಿಡಿದ ಬಾಳಸಂಗಾತಿಯ ಜೊತೆ ಕೈ ಕುಲುಕೋ ಜನರ ಹಾರೈಕೆ ಸ್ವೀಕರಿಸ್ತಾ ಮುಗುಳ್ನಗು ಬೀರ್ತಾ  ಇದ್ಲು ... ಅಂತೂ ಅರ್ಧ ಘಂಟೆ  ಈ ದೃಶ್ಯ ಕಣ್ಣು ತುಂಬಿಕೊಂಡು ನಾವು ಅವರ ಬಳಿ  ಸಾಗ್ತಿದ್ದ ಹಾಗೆ, ನನ್ನೆಡೆಗೆ ಕಣ್ಣು ಹೊಡೆದು 'ಲುಕಿಂಗ್ ಬ್ಯೂಟಿಫ಼ುಲ್ ಸಂತು'  ಅಂತ ಕೈ ಕುಲುಕಿ ಹೆಂಡ್ತಿಗೆ ನನ್ನ  ಅಪ್ಪ ಅಮ್ಮನ ಪರಿಚಯ ಮಾಡ್ಸಿ,  ನನ್ನೆಡೆ  ತಿರುಗಿ 'ಮೈ ಒನ್ ಎಂಡ್ ಓನ್ಲಿ  ಡಿಯರ್ ಫ್ರೆಂಡ್ ಸಂತೋಷಿ ಅಲಿಯಾಸ್ ಸಂತು ' ಅಂದ್ರೆ  ನಾನೋ ಹೆಮ್ಮೆಯಿಂದ 'ಹಾಯ್' ಅಂದು  ನಕ್ಕಿದ್ದೆ ..ಅವಳಿಗೂ ಗೊತ್ತು ನನ್ನ ಅವನ ಬಂಧ ಹೇಗೆಂದು ...ಅದೆಷ್ಟು ನನ್ನ ಫೋಟೋ ತೋರ್ಸಿ ಕೊರೆದಿದ್ನೋ ಗೊತ್ತಿಲ್ಲ ...'ಹ್ಯಾಪಿ ಮ್ಯಾರೀಡ್ ಲೈಫ್' ಅಂತ ವಿಶ್ ಮಾಡಿ ಫೋಟೋ, ವಿಡಿಯೋಗೆ ಫೋಸ್ ಕೊಟ್ಟು ...   'ಏನು  ರಾತ್ರಿ ಡಿಸ್ಟರ್ಬ್ ಮಾಡ್ಬೇಕಾ ಇವತ್ತು ? ಆಲ್ ದ ಬೆಸ್ಟ್ ಕಣೋ ... ಹೆದ್ರಬೇಡ ... ಧೈರ್ಯದಿಂದ ಮುನ್ನುಗ್ಗು.. ಏನಾದ್ರೂ ಡೌಟ್ ಇದ್ರೆ ಕಾಲ್ ಮಾಡೋ  ' ಅಂತ  ಅವನ ಕಿವಿಯಲ್ಲಿ ಪಿಸುಗುಟ್ಟಿದ್ರೆ  ನನ್ನೆಡೆ ದೊಡ್ಡ ಕಣ್ಣು ಮಾಡಿ ದುರುಗುಟ್ಟಿ 'ಸಾಯಿಸ್ತೀನಿ' ಅನ್ನೋ ಲುಕ್ ಕೊಟ್ಟಿದ್ದ ... ಇಟ್ಸ್ ನೈಸ್ ಟು  ಇರಿಟೇಟ್ ಹಿಮ್ ಆಲ್ವೇಸ್ ... ನನ್ನ ಅತಿ ಮೆಚ್ಚಿನ  ಹಾಬಿ ಕೂಡ ... ಮದುವೆ ನಿಶ್ಚಿತಾರ್ಥ ಆದ ಮೇಲೆ ಅದೆಷ್ಟು ರೇಗಿಸಿದ್ನೋ .... ಬಡ್ಡಿ ಸಮೇತ ನಿನ್ನ ಮದುವೆಲೂ ತಿರುಗಿಸಿ ಕೊಡ್ತೀನಿ ಅಂತ ಆವಾಜ್ ಹಾಕಿದ್ದ ... 'ಹು ಕೇರ್ಸ್'  ... ಅಷ್ಟೇ ನನ್ನ ಜವಾಬು ...


ಅಪ್ಪನಿಗೆ ತುಂಬಾ ಹೊತ್ತು ಇದ್ದರೆ ಕೂತು ಕೂತು ಬೆನ್ನು ನೋವು ಕಾಡೋದರಿಂದ  ಅವನಿಗೆ ಕೈ ಬೀಸಿ ನಾಳೆ ಸಿಗ್ತೀನಿ ಅಂತ ಕಣ್ಣಲ್ಲೇ ಸನ್ನೆ ಮಾಡಿ, ಲವ್ ಯೂ ಬೋತ್ ... ಮನದಲ್ಲೇ ಅಂದಿದ್ದೆ . ಹಿಂದೆ ಕಾಯ್ತಾ ಇದ್ದ ಜನಕ್ಕೆ ಅವಕಾಶ ಮಾಡಿಕೊಟ್ಟು ಮದುವೆ ಸಭಾಂಗಣದಿಂದ ಹೊರ ನಡೆಯುತ್ತಿದ್ದಂತೆ ಅದೆಷ್ಟೋ ಭಾವಗಳು ಹೃದಯದಲ್ಲಿ ನರ್ತನ ಮಾಡ್ತಿದ್ವು ....   ಎಲ್ಲವೂ ಮಧುರ ಭಾವಗಳೇ ... ಅದೇ ಮೆಲುಕು ಹಾಕ್ತ ಕಾರ್ ಓಡಿಸ್ತಾ ನನ್ನಿಷ್ಟದ ಮತ್ತು ಅವನಿಷ್ಟದ  ಹಳೆ ಹಿಂದಿ ಹಾಡು, ಯಾವಾಗ್ಲೂ ನಾವಿಬ್ಬರೇ ಜೊತೆ ಜೊತೆಯಾಗಿ ಗುನುಗೋ ಹಾಡು 'ಯೇ ದೋಸ್ತೀ ಹಮ್  ನಹೀ  ತೊಡೇಂಗೆ .....ತೊಡೇಂಗೇ ದಂ ಮಗರ್ ತೇರಾ ಸಾಥ್ ನಾ ಛೋಡೆಂಗೆ .... . '  ಹಾಡ್ತಾ ಕಳೆದು ಹೋಗಿದ್ದೆ . ..










No comments:

Post a Comment