Friday 31 August 2012

ಪುಟ್ಟಕ್ಕನ ಪ್ರೀತಿಯ ತಮ್ಮ...

ಒಂದೇ ತಾಯಿಯ ಹೊಟ್ಟೆಯಲ್ಲಿ  ಹುಟ್ಟಿದರೆ ಮಾತ್ರ ಅಕ್ಕ-ತಮ್ಮ, ಅಣ್ಣ-ತಂಗಿ ಸಂಬಂಧಾನ...?? ಖಂಡಿತಾ ಇದು ತಪ್ಪು 
ಅಭಿಪ್ರಾಯ ಅಂತ ಪುಟ್ಟಕ್ಕನ ಅನುಭವದ ಮಾತು.

ಪುಟ್ಟಕ್ಕ ಒಬ್ಬ ಸಾಮಾನ್ಯ ಗೃಹಿಣಿ.. ತನ್ನ ತಂದೆ ತಾಯಿಗೆ ಒಬ್ಬಳೇ ಮಗಳು. ಮದುವೆಯಾಗಿ ಸ್ವಲ್ಪ ವರ್ಷ ಕಳೆದಿವೆ.. ಅವಳದು ಸುಖೀ ಸಂಸಾರ. ಜೀವನದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಅವಳ ಜೀವನದಲ್ಲಿ ಅವಳಿಗೆ ಬೇಕನಿಸಿದ್ದೆಲ್ಲಾ ಸಿಕ್ಕಿದೆ. ಅವಳು ಶಾಲೆ, ಕಾಲೇಜಿಗೆ ಹೋಗುವಾಗ ಯಾವುದೇ ಸಮಸ್ಯೆ, ತೊಂದರೆ ಇರಲಿಲ್ಲ. ಅವಳನ್ನೆಂದೂ ಒಂಟಿತನ ಕಾಡಿದ್ದಿಲ್ಲ.. ಆದರೆ ಮದುವೆ ಆದ ಮೇಲೆ ಏನೋ ಕೊರತೆ ಅವಳ ಮನಸ್ಸಿನಲ್ಲಿ ಯಾವಾಗಲೂ ಕಾಡುತ್ತಿತ್ತು. ಅವಳ ಎಷ್ಟೋ ವಿಚಾರಗಳನ್ನು ತನ್ನ ತಂದೆ ತಾಯಿಯರ ಹತ್ತಿರ ಹೇಳಿಕೊಳ್ಳಲು ಆಗದೇ ಅವಳ ಮನಸ್ಸಿನಲ್ಲೇ ಅದು  ಉಳಿದುಹೋಗುತ್ತಿತ್ತು . ಕಾರಣ ಇಷ್ಟೆ..ತನ್ನ ನೋವನ್ನು ಅವರ ಹತ್ತಿರ ಹೇಳಿದರೆ..ಅವರೆಲ್ಲಿ ನೋವು ಪಡುತ್ತಾರೋ ಎಂದು ಅವಳ ಚಿಂತೆ..ಆಗೆಲ್ಲಾ ಅವಳಿಗೆ ಅನಿಸಿದ್ದುಂಟು..ತನಗೂ ಯಾರಾದರು ಒಡಹುಟ್ಟಿದವರಿದ್ದರೆ ನನ್ನ ಮನಸ್ಸಿನ ಮಾತುಗಳನ್ನು, ,ಭಾವನೆಗಳನ್ನು ಅವರ ಬಳಿ 
ಹಂಚಿಕೊಳ್ಳಬಹುದಿತ್ತು..ಎಂದು ಎಷ್ಟೋ ಸಾರಿ ದುಃಖ ಪಟ್ಟಿದ್ದುಂಟು.. ಕುಟುಂಬ ಸದಸ್ಯರು ಒಟ್ಟಾದಾಗ ಸಹೋದರ,ಸಹೋದರಿಯರ ಒಡನಾಟ, ಪ್ರೀತಿ, ನಗು, ಅವರ ಒಬ್ಬರ ಕಷ್ಟಕ್ಕೆ ಇನ್ನೊಬ್ಬರ ಸಹಾಯ ಇದನ್ನೆಲ್ಲಾ ನೋಡುವಾಗ ಪುಟ್ಟಕ್ಕನಿಗೆ ಅನಿಸಿದ್ದುಂಟು...ನನ್ನ ಜೀವನದಲ್ಲಿ ನಾನು ಮಹತ್ವವಾದ ಸಂಬಂಧವೊಂದನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನೋವುಪಟ್ಟಿದ್ದುಂಟು..


ಹೀಗೆ ದಿನಗಳು ಸಾಗುತ್ತಿರುವಾಗ ಫ಼ೇಸ್ ಬುಕ್ ಎಂಬ ಸಾಮಾಜಿಕ ತಾಣದಲ್ಲಿ ಯಾರೋ ಫ಼್ರೆಂಡ್ ಮೂಲಕ ಒಬ್ಬ ಹುಡುಗ 
ಅವಳಿಗೆ ಪರಿಚಯ ಆಗುತ್ತಾನೆ. ಅವನು ವಯಸ್ಸಿನಲ್ಲಿ ಅವಳಿಗಿಂತ ಒಂದೆರಡು ವರ್ಷ ಚಿಕ್ಕವನೇ ಆದರೂ ಅವನ ಸಾಹಿತ್ಯ 
ಪ್ರೀತಿ, ಅವನ ಬರಹ, ಲೇಖನಗಳು, ಕವನಗಳು ಎಂಥವರನ್ನು ಮೆಚ್ಚಿಸುತ್ತದೆ. ಅವನ ವಯಸ್ಸಿಗೆ ಮೀರಿದ ಪ್ರತಿಭೆ ಪುಟ್ಟಕ್ಕನಿಗೆ 
ನಿಜವಾಗಲೂ ಆಶ್ಚರ್ಯ ಮೂಡಿಸುತ್ತದೆ. ಸುಮಾರು ಜೂನ್ ಜುಲೈ ತಿಂಗಳಲ್ಲಿ ಅವರ ಪರಿಚಯ..ಹಾಯ್, ಹಲೋ ಗುಡ್ಮಾರ್ನಿಂಗ್ ಎಂದು ಪ್ರಾರಂಭವಾಗುತ್ತದೆ..

ಅವತ್ತು  ಆಗಸ್ಟ್ ತಿಂಗಳ ಎರಡನೆ ತಾರೀಕು..ಶುಭ ಶುಕ್ರವಾರ ಅವತ್ತು ರಕ್ಷಾಬಂಧನ..ಅವನ ಇಮೈಲ್ಗೆ ಪುಟ್ಟಕ್ಕ ರಾಖಿಯ ಶುಭಾಶಯ ಕಳಿಸುತ್ತಾಳೆ.  ಅವತ್ತು ಚಾಟಿಂಗ್  ಮಾಡುವಾಗ....ಪುಟ್ಟಕ್ಕ  ಯಾವುದೋ ವಿಷಯಕ್ಕೆ  " ನನಗೆ ಯಾರು ಅಕ್ಕ , ತಮ್ಮ, ಅಣ್ಣ, ಇಲ್ಲಪ್ಪ ಜಗಳ ಆಡೋದಿಕ್ಕೆ "ಅಂದಾಗ..."ನಂಜೊತೆ ಜಗಳ ಅಡು" ಅಂದಿದ್ದ ಆ ಹುಡುಗ...ಹೀಗೇ ಏನೋ ವಿಷಯಕ್ಕೆ ಪುಟ್ಟಕ್ಕ "ಹೌದಾ"ಅಂದಿದ್ದಕ್ಕೆ.."ಹೌದಾ" ಶಬ್ದದ ಇನ್ನೊಂದು ಅರ್ಥ "ಅಂಬಾರಿ" ಅಂತ ವಿಕಿಪಿಡಿಯಾದ ಲಿಂಕ್ ಕಳಿಸಿ ಸುಸ್ತಾಗಿಸಿದ್ದ ಪುಟ್ಟಕ್ಕನಿಗೆ..ಆಗ ಪುಟ್ಟಕ್ಕ ಮನಸ್ಸಿನಲ್ಲೇ "ಈ ಹುಡುಗನಿಂದ ತುಂಬಾ ಹೊಸ ಹೊಸ ವಿಷಯ ಕಲಿಯಲಿಕ್ಕೆ  ಇದೆ ಅಂದುಕೊಳ್ತಾಳೆ.." 

ಹಾಗೆ ಚಾಟಿಂಗ್ ಮುಂದುವರೆಸ್ತಾ ಇರೋವಾಗ "ನಿಮ್ಮ ಅಭ್ಯಂತರ ಇಲ್ಲದಿದ್ದರೆ ನಿಮ್ಮ ಫೋನ್ ನಂಬರ್ ಕಳಿಸ್ತೀರಾ" ಅಂದಾಗ ಪುಟ್ಟಕ್ಕನಿಗೆ ನಿಜವಾಗ್ಲೂ ಒಮ್ಮೆ ಹೆದರಿಕೆ ಆಗುತ್ತೆ..ಯಾಕಪ್ಪ ಅಂದಾಗ "ಸುಮ್ನೆ ತಲೆತಿನ್ನೋಕೆ" ಅಂತಾನೆ.."ತಮಾಶೆ ಮಾಡ್ತಾ ಇದ್ದೀರಾ" ಎಂದಾಗ "ಇಲ್ಲ ಸೀರಿಯಸ್ಸಾಗೆ ಕೇಳ್ತಾ ಇದ್ದೀನೆ" ಅಂತಾನೆ ಅವನು.. ಸ್ವಲ್ಪ ಹೊತ್ತು ಏನೆಲ್ಲಾ ಮಾತುಕತೆ ಆದಮೇಲೆ, "ಯಾಕೊ ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಾ ಇದೆ" ಅಂದಾಗ ಪುಟ್ಟಕ್ಕನಿಗೆ ಏನು ಜವಾಬು ಹೇಳಬೇಕು ಅಂತಾನೆ ತಿಳಿಯೋದಿಲ್ಲ.."ಅಲ್ಲಪ್ಪ ಇಷ್ಟು ಹೊತ್ತು ಅದೇ ತಾನೇ ಮಾಡಿದ್ದು" ಅಂದಾಗ "ಅದು ಚಾಟಿಂಗ್" ಅನ್ತಾನೆ... ಅದಕ್ಕೆ ಪುಟ್ಟಕ್ಕ "ನೋಡಪ್ಪ ಚಾಟಿಂಗ್ಗೂ ಫೋನಲ್ಲಿ ಮಾತಾಡಲಿಕ್ಕೂ ಅಂತಹಾ ವ್ಯತ್ಯಾಸ ಏನೂ ಇಲ್ಲ" ಅಂದಾಗ ಸಿಟ್ಟು ಬಂದು ಟು..ಟು..ಬೈ..ಬೈ ..ಅಂತಾನೆ...ಪುನಃ ಏನೋ ಪುಟ್ಟಕ್ಕ ಪ್ರಶ್ನೆ ಕೇಳಿದಾಗ "ನಿಮ್ಮ ನಂಬರ್ ಹೇಳಿದ್ರೆ ಮಾತ್ರ ಉತ್ತರ ಕೊಡ್ತೇನೆ ಅಂತಾನೆ "ಏನು ಬ್ಲಾಕ್ಮೇಲ್ ಮಾಡ್ತಾ ಇದ್ದೀರಾ" ಅಂದಾಗ "ಕೊನೆಗೂ ನೀವು ನಿಮ್ಮ ನಂಬರ್ ಕೊಡೊಲ್ವಾ"ಅಂತಾನೆ..ಅದಕ್ಕೆ ಪುಟ್ಟಕ್ಕ "ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡೋ ತನಕ ಖಂಡಿತಾ ಇಲ್ಲ... ದ್ವೇಷ" ಅಂತಾಳೆ...ಅದಕ್ಕೆ ಅವನು "ಓ ದೇವರೆ ನಿಮ್ಮ ದ್ವೇಷಕ್ಕೆ ನನ್ನ ಜವಾಬು" ಎಂದು ತನ್ನ ಮೊಬೈಲ್ ನಂಬರ್ ನೀಡುತ್ತಾನೆ... ಪುಟ್ಟಕ್ಕ ಆ ನಂಬರನ್ನು ತನ್ನ ಮೊಬೈಲ್ನಲ್ಲಿ ಸೇವ್ ಮಾಡಿ ಇಡುತ್ತಾಳೆ...ಆದರೆ ಆ ಶುಕ್ರವಾರದ ರಾತ್ರಿ ಮಾತ್ರ ಪುಟ್ಟಕ್ಕನಿಗೆ ನಿದ್ದೆ ಬರುವುದಿಲ್ಲ..ಆ ಹುಡುಗ ಹೇಳಿದ ಮಾತು "ಯಾಕೊ ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಾ ಇದೆ" ಇದನ್ನು ಯೋಚನೆ ಮಾಡಿಯೆ ಅವಳ ಮನಸ್ಸು ಯಾಕೋ ಅಶಾಂತಿಯ ಗೂಡಾಗುತ್ತದೆ... ಈ ಹುಡುಗ ಯಾಕೆ ಹೀಗೆ ತನಗೆ ಕಾಡ್ತಾ ಇದ್ದಾನೆ ಅಂತ ಯೋಚಿಸುತ್ತಾಳೆ..ಯಾಕೋ ಈ ಹುಡುಗ ತನ್ನ ಮನಸ್ಸಿಗೆ ತುಂಬಾ ಹತ್ತಿರ ಆಗ್ತಾ ಇದ್ದಾನೆ ಅಂತಹ ಅನುಭವ..ಹೀಗೆ ನಿದ್ದೆ ಇಲ್ಲದೆ ರಾತ್ರಿ ಕಳೆಯುತ್ತಾಳೆ
..



ಮರುದಿನ ಆಗಸ್ಟ್ ನಾಲ್ಕನೆಯ ತಾರೀಕು.. ಪುನಃ ಚಾಟಿಂಗ್ನಲ್ಲಿ ಇಬ್ಬರೂ ಸಿಗುತ್ತಾರೆ..ಅವನಿಗೆ ಏನೇ ಪ್ರಶ್ನೆ ಕೇಳಿದರು "ಸಿಬಿಐ 
ಕೆಲಸಾನ" ಅಂತ ಕೇಳುವ ಅಭ್ಯಾಸ.."ನಿಮಗೆ ಉತ್ತರ ಬೇಕಾದ್ರೆ ಫೋನ್ ನಂಬರ್ ಕೊಡಿ ಇದೇ ಅವನ ಅಸ್ತ್ರವಾಗಿತ್ತು..ಪುಟ್ಟಕ್ಕನಿಗಂತೂ ಹಿಂಸೆ.."ನೀವು ನಿಮ್ಮ ಅಕ್ಕ ತಂಗಿ ಹತ್ತಿರ ಹೀಗೆ ಜಗಳ ಆಡ್ತೀರಾ" ಅಂದದ್ದಕ್ಕೆ..."ತಮಗೂ 
ಅದೇ ಪ್ರಶ್ನೆ" ಅಂತಾನೆ..."ಏನು ಮಾಡ್ಲಪ್ಪ ನಮಗೆ ಯಾರು ಒಡಹುಟ್ಟಿದವರಿಲ್ಲ..ಗೊತ್ತುಂಟಲ್ಲ".. ಅಂದದ್ದಕ್ಕೆ 
"ಅಕ್ಕ..ನಾನಿದ್ದೀನಲ್ಲ ನನ್ನ ಜೊತೆ ಜಗಳ ಆಡು ಅಂತಾನೆ"...ಅದಕ್ಕೆ ಪುಟ್ಟಕ್ಕ "ಮತ್ತೇನು ಮಾಡೋದು ...ಅದೇ ಗತಿ" 
ಅಂತಾಳೆ...ಆ ಹುಡುಗನಿಗೆ ನಿಜಕ್ಕೂ ನಗು ಬಂದಿರಬೇಕು.. ಹೀಗೆ ಆ ದಿನ ಸಹಾ ಪುಟ್ಟಕ್ಕ ಅವನಿಗೆ ತನ್ನ ನಂಬರ್ 
ಕೊಡೋದಿಲ್ಲ..

ಅವತ್ತು ಆಗಸ್ಟ್ ಐದನೆಯ ತಾರೀಕು...ಭಾನುವಾರ.."ಸ್ನೇಹಿತರ ದಿನಾಚರಣೆ" ..ಬೆಳಿಗ್ಗೆಯೆ ಶುಭಾಶಯ ಕೋರುತ್ತಾನೆ ಹುಡುಗ... ಪುನಃ ಸಂಜೆ ಚಾಟಿಂಗ್ನಲ್ಲಿ ಸಿಕ್ಕಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ತಾರೆ..ಅದಕ್ಕೆ ಹುಡುಗ .."ನಾನೆ ಗೆದ್ದೆ..ನಿಮ್ಮ ವಿಶಯ ಎಲ್ಲ ಹೇಳಿದ್ರಿ" ಅಂತಾನೆ..ಆಮೇಲೆ..."ನಿಮಗೊತ್ತಾ ಅಕ್ಕ..ನಾನು ಈ ತನಕ ಇಷ್ಟು ಸಮಯ ಯಾರ ಹತ್ತಿರ ಚಾಟಿಂಗ್ ಮಾಡಿದ್ದಿಲ್ಲ..." ಅಂತಾನೆ..."ಹಾಗಾದ್ರೆ  ನನ್ನ ಹತ್ತಿರ ಇಷ್ಟು ಸಮಯ ಚಾಟಿಂಗ್ ಮಾಡಿದ್ದಕ್ಕೆ ಕಾರಣವೇನು"....? ಪುಟ್ಟಕ್ಕ  ಕೇಳ್ತಾಳೆ..."ನೀವು ನನ್ನ ಪ್ರೀತಿಯ ಅಕ್ಕ ಅಲ್ವಾ..." ಹುಡುಗನ ಉತ್ತರ...
"ಧನ್ಯವಾದ ಕಣಪ್ಪ..ಈ ವಿಷಯ ಮೊನ್ನೆ ಶುಕ್ರವಾರವೆ ನನ್ನ ಅನುಭವಕ್ಕೆ ಬಂದಿದೆ. ನೀನು ಹೇಳಿದ ಒಂದು ಮಾತು ನನ್ನ ಮನಸ್ಸನ್ನೇ ಆ ದಿನ ಅಲ್ಲೋಲ ಕಲ್ಲೋಲ ಮಾಡಿತ್ತು" ಎಂದಾಗ "ಯಾವ ಮಾತಕ್ಕ" ಅನ್ನುತ್ತಾನೆ..."ಯಾಕೊ ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಾ ಇದೆ"  ಅಂದೆಯಲ್ಲ ನೆನಪಿದೆಯಾ"...? ಅದು ಎನ್ನುತ್ತಾಳೆ ಪುಟ್ಟಕ್ಕ...

"ಓ ...ಅದಾ...ನನ್ನ ಹತ್ತಿರ ಸುಮಾರು ೫೦೦ಕ್ಕಿಂತಲೂ ಹೆಚ್ಚಿನ ನಂಬರ್ಗಳಿವೆ..ನಾನು ಯಾರ ಹತ್ತಿರ ಆದ್ರೂ ಮಾತಾಡೋದು ತುಂಬಾ ಕಡಿಮೆ..ನನಗೆ ಯಾರ ಹತ್ತಿರ ಆದ್ರೂ ಮಾತಾಡಬೇಕು ಅನ್ನಿಸಿದ್ರೆ ಅವರು ತುಂಬಾ ಸ್ಪೆಶಲ್ ಆಗಿರ್ತಾರೆ.." ಇದು ಆ ಹುಡುಗನ ಉತ್ತರ ಆಗಿತ್ತು... ಹೀಗೆ ಆ ಹುಡುಗನ ಜೊತೆ ಚಾಟಿಂಗ್ ಮುಗಿದ ಮೇಲೆ ಪುಟ್ಟಕ್ಕನಿಗೆ ಏನನ್ನಿಸಿತೋ...ಅವನ ಮೊಬೈಲ್ಗೆ ಫೋನ್ ಮಾಡುತ್ತಾಳೆ..ಆ ಕಡೆಯಿಂದ ಹುಡುಗನಿಗೆ ನಿಜಕ್ಕೂ ಆಶ್ಚರ್ಯ ಆಗಿರಬೇಕು...ಇಬ್ಬರಿಗೂ ಐದು ನಿಮಿಷ ಮಾತಾಡಲಿಕ್ಕೆ ಏನೂ ವಿಷಯ ಇರಲಿಲ್ಲ...ಇಬ್ಬರೂ..ಬೆ..ಬ್ಬೆ...ಬ್ಬೆ..ಅಂತ ತೊದಲುತ್ತಿದ್ದರು....ಹೇಗೆ ಮಾತು ಮುಂದುವರಿಸಬೇಕೆಂದು ಇಬ್ಬರಲ್ಲೂ ಗೊಂದಲ..ಗಂಟೆಗಟ್ಟಲೆ ಚಾಟಿಂಗ್ ಮಾಡಿದ ಇಬ್ಬರಿಗೂ ಆ ಐದು ನಿಮಿಷ ಫೋನ್ನಲ್ಲಿ ಮಾತಾಡ್ಲಿಕ್ಕೆ ಕಷ್ಟವಾದ ದಿನವದು...ಆದರೂ ಸ್ನೇಹಿತರ ದಿನಾಚರರಣೆಗೆ ಒಳ್ಳೆಯ ಉಡುಗೊರೆ ಇಬ್ಬರಿಗೂ ಸಿಕ್ಕಿತ್ತು...
ಕೊನೆಗೆ ಪುಟ್ಟಕ್ಕನ ಎಸ್ ಎಮ್ ಎಸ್ ಹೀಗಿತ್ತು.."ತಮ್ಮಾ ...ಮೆಸ್ಸೇಜ್ ಮಾಡೋದು ಸುಲಭ...ಆದರೆ ಮಾತಾಡೋದು ತುಂಬಾ ಕಷ್ಟ..." ಅವನಿಗೂ ಬಹುಶಃ ಹಾಗೇ ಅನಿಸಿರಬೇಕು...."ತುಂಬಾ ಸಂತೋಷ ಆಯ್ತು" ಅವನ ಮರುತ್ತರ ಬಂದಿತ್ತು.

ಆದರೆ ಈಗ ಪುಟ್ಟಕ್ಕನ ಜೀವನದಲ್ಲಿ ತುಂಬಾ ಬದಲಾವಣೆ...ಐದು ನಿಮಿಷ ಮಾತಾಡಲಿಕ್ಕೆ ಒದ್ದಾಡುತ್ತಿದ್ದವರು ಈಗ ಒಂದು ಘಂಟೆಗೂ ಕಡಿಮೆ ಎಂದಿಗೂ ಮಾತು ಮುಗಿಸಿದ್ದಿಲ್ಲ... ಈಗ ಮೆಸೇಜ್ಗಿಂತಲೂ ಫೋನ್ ಮಾಡಿದರೆ ತುಂಬಾ ಒಳ್ಳೆಯದು ಎಂಬ ಭಾವನೆ ಪುಟ್ಟಕ್ಕನಿಗೆ..ಆ ಹುಡುಗನಿಂದ ಫೋನ್ ಬಂದು ೪-೫ ದಿನ ಕಳೆದರೆ ಪುಟ್ಟಕ್ಕ ಆಲೋಚನೆ ಮಾಡ್ತಾಳೆ...ಏನಪ್ಪ...ತುಂಬಾ ದಿನ ಆಯ್ತು...ಅವನ ಹತ್ತಿರ ಮಾತಾಡಿ ಎಂದು.... ಆ ಹುಡುಗನಂತೂ ತುಂಬಾ ಅಂರ್ತಮುಖಿ ತನ್ನ ಜೀವನದ ನೋವನ್ನು  ಯಾರ ಹತ್ತಿರವೂ ಹಂಚಿಕೊಂಡವನಲ್ಲ..ಅಂಥಹ ಹುಡುಗ ಪುಟ್ಟಕ್ಕನ ಹತ್ತಿರ ಮನ ಬಿಚ್ಚಿ ಹೇಳಿಕೊಳ್ಳುತ್ತಾನೆ..ಇದರಿಂದ ಪುಟ್ಟಕ್ಕನಿಗೆ ತುಂಬಾ ಖುಷಿ...ಏಕೆಂದರೆ..ಯಾವುದೇ ವ್ಯಕ್ತಿಯಾಗಲಿ ತನ್ನ ಜೀವನದ ಸಂಗತಿಗಳನ್ನು ಆತ್ಮೀಯರಲ್ಲಿ ಮಾತ್ರ ಹೇಳಿಕೊಳ್ಳುತ್ತಾನೆ..ಯಾರದ್ದಾದರು ಜೀವನದಲ್ಲಿ ಒಬ್ಬ ನಂಬಿಕೆಯ ವ್ಯಕ್ತಿಯ ಪಾತ್ರವಹಿಸುವುದು ಸುಲಭದ ಮಾತಲ್ಲ...ಅದೂ ಇಂಥಹ ಫೇಸ್ಬುಕ್ ಎಂಬ ಮಾಯಾಜಾಲದಲ್ಲಿ...ಆದರೂ ಆ ಹುಡುಗನ ಪ್ರೀತಿಗೆ ತಾನು ಅರ್ಹಳು, ಅವನ ಬದುಕಿನಲ್ಲಿ ತನಗೂ ಚಿಕ್ಕ ಸ್ಥಾನ ಇದೆ ಎಂಬ ಭಾವನೆಯೆ ಅವಳಿಗೆ ಸಂತೋಷದ ವಿಷಯ..

ಪುಟ್ಟಕ್ಕನಿಗೆ ಈಗ ತನ್ನ ಬಾಲ್ಯದ ಜೀವನ ಮರುಕಳಿಸುತ್ತಿದೆ ಎಂಬ ಅನುಭವ...ಆ ಹುಡುಗನ ಜೊತೆ ಪ್ರೀತಿಯ ಮಾತುಕತೆ, ಜಗಳ, ಕೋಪ, ಸಮಾಧಾನ, ತನ್ನ ಮನಸ್ಸಿನ ಭಾವನೆ ಸಹಾ ಅವನೊಂದಿಗೆ ಹಂಚಿಕೊಳ್ಳುತ್ತಾಳೆ...ಅವಳು ಏನೆಲ್ಲಾ ಕಳೆದುಕೊಂಡಿದ್ದಳೋ...ಅದೆಲ್ಲಾ ಪುನಃ ಅವಳಿಗೆ ಸಿಕ್ಕಿದೆ..ಒಮ್ಮೆ ಏನೋ ಸಣ್ಣ ವಿಷಯಕ್ಕೆ ಆ ಹುಡುಗನ ತಪ್ಪು ಇಲ್ಲದಿದ್ದರೂ ಅವನ ಮನಸ್ಸನ್ನು ನೋಯಿಸಿ ಪಶ್ಚಾತಾಪ ಪಟ್ಟಿದ್ದಾಳೆ...ಅದಕ್ಕೆ ಆ ಹುಡುಗನ ಉತ್ತರ "ಭಿನ್ನಾಭಿಪ್ರಾಯಗಳು ಮನುಷ್ಯರ ಸಂಬಂಧಗಳನ್ನು ಇನ್ನು ಗಟ್ಟಿಗೊಳಿಸುತ್ತದಂತೆ" .... ಒಮ್ಮೆ ಅವನ ಪರಿಚಯವಾದ ಪ್ರಾರಂಭದಲ್ಲಿ ಪುಟ್ಟಕ್ಕ ಅವನಿಗೆ ಒಂದು ಪ್ರಶ್ನೆ ಕೇಳಿದ್ದಳು..."ಸಹೋದರಿ ಆತ್ಮೀಯ ಸ್ನೇಹಿತೆ ಅಂತೆ ..ಹೌದಾ" ಎಂದು...? ಅದಕ್ಕೆ ಅವನ ಉತ್ತರ...."ಇರಬಹುದು"....ಆಮೇಲೆ ಸ್ವಲ್ಪ ದಿನ ಬಿಟ್ಟು ಪುನಃ ಅದೇ ಪ್ರಶ್ನೆ ಕೇಳಿದಾಗ...ಅವನ ಉತ್ತರ..."ಹಾಗೇ ಅನಿಸುತ್ತೆ.."  ನೋಡೋಣ...ಇನ್ನೊಮ್ಮೆ ಅದೇ ಪ್ರಶ್ನೆ ಕೇಳಿದರೆ ಅವನ ಉತ್ತರ ಹೇಗಿರಬಹುದು...ಎಂದು ಪುಟ್ಟಕ್ಕನ ಯೋಚನೆ... :) ಕೆಲವೊಮ್ಮೆ ಫೋನ್ ಮಾಡಿ ಮಾತಾಡುವಾಗ... ಎಷ್ಟೋ ಕಿಲೋಮೀಟರ್ ದೂರದಲ್ಲಿದ್ದರೂ ಅದು ಹೇಗೆ ಸಂಬಂಧಗಳು ಬೆಸೆಯುತ್ತದೋ ಇಬ್ಬರಿಗೂ ಕೆಲವೊಮ್ಮೆ ಆಶ್ಚರ್ಯ ಆಗುವುದುಂಟು..

ಪುಟ್ಟಕ್ಕನಿಗೆ ಮಂತ್ರಾಲಯದ ಗುರುಗಳು.. ರಾಘವೆಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ, ನಂಬಿಕೆ...ಆ ಹುಡುಗ ರಾಘವೇಂದ್ರ  ಸ್ವಾಮಿಗಳ ಆರಾಧನೆಯ ಸಮಯದಲ್ಲಿ ಪರಿಚಯವಾಗಿ ತುಂಬಾ ಆತ್ಮೀಯನಾಗಿದ್ದಾನೆ..ಜೊತೆಗೆ ರಕ್ಷಾಬಂಧನದ ಸಮಯ..ಸ್ನೇಹಿತರ ದಿನಾಚರಣೆಯಂದು ಮೊದಲ ಮಾತುಕತೆ...ಎಲ್ಲಾ ಶುಭಶಕುನ ಅನಿಸುತ್ತಿದೆ...ಅವನು ಎಲ್ಲಾದರು ಇರಲಿ...ಅವನ ಮುಂದಿನ ಜೀವನ ಚೆನ್ನಾಗಿರಲಿ..ಅವನು ಇಷ್ಟಪಟ್ಟಿದ್ದೆಲ್ಲಾ ಅವನಿಗೆ ಯಾವುದೇ ಸಮಸ್ಯೆ ಇಲ್ಲದೇ ಲಭಿಸಲಿ..ಎಂದು ಆ ದೇವರಲ್ಲಿ ಪುಟ್ಟಕ್ಕನ  ಪ್ರಾರ್ಥನೆ...

ಅಂದ  ಹಾಗೆ ಇನ್ನೊಂದು  ತಮಾಷೆಯ ವಿಷಯವೆಂದರೆ ಅವಳಿಗೆ "ಪುಟ್ಟಕ್ಕ" ಎಂದು ಒಮ್ಮೆ ಆ ಹುಡುಗನೇ ಚಾಟಿಂಗ್ ಮಾಡುವಾಗ ಇಟ್ಟ ಹೆಸರು..  :)










































14 comments:

  1. :-)absolutely loved the way u have written!!
    pachchi

    ReplyDelete
  2. ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ನದಿ..ಬಂಗಾಳದ ಕೊಲ್ಲಿ ತಲುಪುವ ತನಕ ಎಲ್ಲಿಯೂ ನಿಲ್ಲದೆ ಹರಿಯುತ್ತದೆ..ನಿಮ್ಮ ಲೇಖನವು ಹಾಗೆ ಉಸಿರು ಬಿಡಿಸದೆ ಸರಾಗವಾಗಿ ಒಂದೇ ಓಘದಲ್ಲಿ ಓಡಿಸುತ್ತೆ..ತುಂಬಾ ಸುಂದರ ಲೇಖನ...ಹೌದು ನೀವು ಹೇಳಿದಂತೆ..ಸಹೋದರ ಸಹೋದರಿ ಸಂಬಂಧ..ರಕ್ತದಿಂದ ಬರಬೇಕಿಲ್ಲ..ವಿಶ್ವಾಸ, ನಂಬಿಕೆ, ಅನುಕಂಪ ಇವೆ ಅದಕ್ಕೆ ಬುನಾದಿ..
    ಒಳ್ಳೆಯ ಲೇಖನ ಸಹೋದರಿ..ತುಂಬಾ ಇಷ್ಟವಾಯಿತು..

    ReplyDelete
  3. tumbaa sundaravaagi odisikonDu hoyitu..
    chennaagi barediddiraa.....

    real story ennuva haagide...

    ReplyDelete
  4. ಪುಟ್ಟಕ್ಕ, ನೀವು ನಿಮ್ಮ ತಮ್ಮ ಹೀಗೆ ನೂರ್ಕಾಲ ಚೆನ್ನಾಗಿರಿ.. ದೇವರು ನಿಮ್ಮಿಬ್ಬರಿಗೂ ಒಳ್ಳೆಯದನ್ನು ಮಾಡಲಿ...

    ReplyDelete
  5. ಸಾಮಾಜಿಕ ತಾಣಗಳೆಂದರೆ ವಿಕೃತಿಗಳೇ ಜಾಸ್ತಿ ಎಂದು ಹಲುಬುವವರು ಹೆಚ್ಚು.ಆ ಹಲುಬುವಿಕೆಗಿಂತ ನಮ್ಮ ಗಟ್ಟಿತನದ ಆವರಣದೊಳಗೆ ನಮ್ಮದೇ ಪ್ರಪಂಚವನ್ನು ಕಂಡುಕೊಳ್ಳದವರಿಲ್ಲ. ಸಂಬಂಧಗಳು ಕೇವಲ ಹತ್ತಿರವಿದ್ದಾಗಲಷ್ಟೆ ಬೆಳೆಯುತ್ತದೆ ಎನ್ನುವುದು ಕೂಡ ತಪ್ಪು. ನಿಮ್ಮ ಕತೆಯೊಳಗಿನ ಅನುಭವಗಳು ನನ್ನ ಅನುಭವಗಳು ಕೂಡ. ಎಷ್ಟೋ ಜನ ಪುಟಕ್ಕನವರು ನನ್ನ ಬಳಿಯೂ ಇದ್ದಾರೆ.

    ನಿರೂಪಣೆ ಹೀಗೆ ಸಾಗಲಿ. ಶುಭವಾಗಲಿ. ಮುಂದಿನ ಬರಹಕ್ಕೆ ಕಾಯುತ್ತೇನೆ.

    ReplyDelete
  6. ನಾನು "ತಾಗಿ"ಸುವುದರ (Tagging) ವಿರೋಧಿ.
    ಆದರೂ, ಓದಿ ಮುಗಿಸಿದ ಮೇಲೆ, ಈಗ ತಾಗಿಸಿದ್ದಕ್ಕೆ ಬೇಸರ ಇಲ್ಲ ಅಂತ ಅನಿಸುತ್ತಿದೆ.

    ಇನ್ನು ನನ್ನ ಪ್ರತಿಕ್ರಿಯೆ:
    ಇಷ್ಟವಾದ ಓದು!

    ReplyDelete
  7. ಪುಟ್ಟಕ್ಕ ಮತ್ತು ಅವಳ ತಮ್ಮ ಇಬ್ಬರಿಗೂ ಈ ಅಕ್ಕನ ಶುಭಹಾರೈಕೆಗಳು..... ಸುಮತಿ, ತುಂಬಾ ಆತ್ಮೀಯ ಬರಹ!

    ReplyDelete
  8. ಸುಮತಿಯವರೆ..
    ತುಂಬಾ ಆಪ್ತವಾಗಿ ಬರೆಯುತ್ತೀರಿ....

    ಇಷ್ಟವಾಯಿತು...
    keep writting .........

    ReplyDelete
  9. ಸಾಮಾಜಿಕ ತಾಣಗಳನ್ನು ಸದ್ಭಳಕೆ ಮಾಡಿಕೊಂಡಾಗ ಇಂತಹ ಒಲುಮೆ ಪ್ರಾಪ್ತಿಯಾಗುತ್ತದೆ.

    ಇಲ್ಲಿ ನನಗೆ ಎಲ್ಲರೂ ಅಕ್ಕಂದಿರೇ ಮತ್ತು ಗುರುಗಳೇ.

    ಸುಮತಿ, ಮಾಲತಿ, ಪ್ರಕಾಶಣ್ಣ, ಬಾಲು, ಆಜಾದ್, ಶ್ರೀಕಾಂತ್, ಶೀಲಾ, ಉಮಾ, ನರಸಿಂಹ ಹೀಗೆ ಒಂದೇ ಎರಡೇ ನನಗೆ ಲಭ್ಯವಾದ ಒಲುಮೆಗಳು.

    ಈಗಷ್ಟೇ ದಾವಣಗೆರೆಯಲ್ಲಿ ಡಾಕ್ಟರ್ ಆಗುಲು ಹೊರಟಿರುವ ವಿದ್ಯಾಳನ್ನ ನಾನು ಕರೆಯುವುದೇ ಪುಟ್ಟಿ ಅಂತ!

    ಅತ್ಯುತ್ತಮ ಬರಹ. ಮೆಚ್ಚುಗೆಯಾಯ್ತು.

    ReplyDelete
  10. ಸುಂದರ ಬರಹ.....ಆದ ಹುಟ್ಟಿದವರು ಮಾತ್ರ ಅಣ್ಣ--ತಂಗಿ, ಅಕ್ಕಾ-ತಮ್ಮಂದಿರಲ್ಲ....ನಾನು ಫೇಸ್ ಬುಕ್ ಹಾಗೂ ಆರ್ಕುಟ್ ತಾಣಗಳಲ್ಲಿ 'ಅಣ್ಣ' ಎಂದೇ ಪರಿಚಿತ. ಈ ವರ್ಷ ರಕ್ಷಾ- ಬಂಧನದಲ್ಲಿ ಪೋಸ್ಟ್ ಮೂಲಕ ಬಂದ ರಾಖಿ ಗಳ ಸಂಖ್ಯೆ ೧೦ ಕ್ಕಿಂತು ಜಾಸ್ತಿ....ಪ್ರೀತಿ-ವಿಶ್ವಾಸ ವಿದ್ದಲ್ಲಿ ಸಂಬಂಧ ತಾನಾಗಿಯೇ ಬೆಸೆದು ಕೊಳ್ಳುತ್ತದೆ. ಉತ್ತಮ ಬರಹ.....ಅಭಿನಂದನೆಗಳು....

    ReplyDelete
  11. Sumathi!!,
    ಏನು ಹೇಳಬೇಕು ಅಂತ ಯೋಚಿಸುತ್ತಿದ್ದೇನೆ.
    ಅಷ್ಟೊಂದು ಆತ್ಮೀಯವಾಗಿದೆ ಲೇಖನ ಮತ್ತು ಅದರ ಹಿಂದಿನ ಅಂತರಂಗ.
    ಇಬ್ಬರೂ ಒಳ್ಳೆಯವರೇ!! ನಿಷ್ಕಲ್ಮಶ ಮನಸ್ಸುಳ್ಳವರು. ಇಬ್ಬರೂ ಚೆನ್ನಾಗಿರಲಿ!! :)

    ಈ ಲೇಖನ ನೋಡಿ ಎಲ್ಲರೂ ಸಾಮಾಜಿಕ ತಾಣಗಳಲ್ಲೂ ಹೇಗೆ ಆತ್ಮೀಯರಾಗಬಹುದು ಎಂಬುದನ್ನು ಕಲಿಯಬೇಕು.
    ಮೊದಲು ನಿಮ್ಮ ಲೇಖನ ನೋಡಿರಲಿಲ್ಲ, ಈಗ ನೋಡಿದ ಮೇಲೆ ಒಳ್ಳೆಯ ಲೇಖನವೊಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಅನ್ನಿಸುತ್ತಿದೆ.

    All the best!!

    ReplyDelete
    Replies
    1. ಸಂತೋಷ್ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬು ಮನದ ಥ್ಯಾಂಕ್ಸ್. ಸಂಬಂಧಗಳು ಹಾಗೇನೆ, ನಮಗೆ ಗೊತ್ತಿಲ್ಲದೇ ಕೆಲವೊಮ್ಮೆ ಹತ್ತಿರ ತರತ್ತೆ. ಕಾರಣ ಹುಡುಕಿದರೂ ಸಿಗೋಲ್ಲ. ಅದನ್ನು ಸವಿಯಬೇಕು ಅಷ್ಟೇ... :))

      Delete