Thursday, 25 October 2012

ಆಹಾರ - ಅಲಂಕಾರ ...ಸುದೀಪ ಸ್ಟೈಲ್ ನಲ್ಲಿ....ಭಾಗ - 1

ಫೇಸ್ಬುಕ್ ಮನುಷ್ಯನ  ಮೇಲೆ ಹೇಗೆಲ್ಲಾ ಪ್ರಭಾವ ಬೀರಬಹುದು...???? ಇದರಿಂದ ಏನೆಲ್ಲಾ ಹೊಸ ಹೊಸ ವಿಚಾರಗಳನ್ನು 

ಕಲಿಯಬಹುದು ...?? 

 ಅದಕ್ಕೆ ಸಣ್ಣ ಉದಾಹರಣೆ ಈ ತಾಣದಲ್ಲಿ ಹರಡಿರುವ ವಿಧವಿಧದ ಗುಂಪುಗಳು...ಕೆಲವರಿಗೆ ಸಾಹಿತ್ಯ ಇಷ್ಟ ಆದರೆ ಇನ್ನು 

ಕೆಲವರಿಗೆ ಸಿನೆಮಾ,ಮತ್ತೊಬ್ಬರಿಗೆ ಕಲೆ,ಇನ್ನು ಕೆಲವರಿಗೆ ಗಾರ್ಡನಿಂಗ್ ...ಹೀಗೆ ಪಟ್ಟಿ ಬೆಳೆಯುತ್ತಾ  ಹೋಗುತ್ತದೆ ... ಅವರವರ 

ಅಭಿರುಚಿಗೆ ತಕ್ಕಂತೆ   ಸದಸ್ಯರು ತಮ್ಮ ತಮ್ಮ ಗುಂಪನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನೊಂದು 

ಉಪಯೋಗ ಅಂದರೆ ನಮ್ಮ ಅಭಿರುಚಿಗೆ ತಕ್ಕ ಹೊಸ ಹೊಸ ಸ್ನೇಹಿತರ ಭೇಟಿ ಪ್ರಪಂಚದ  ಮೂಲೆ  ಮೂಲೆಯಿಂದಲೂ  

ನಮಗೆ ಲಭಿಸುತ್ತಾರೆ .....

.ನನ್ನ ಇಷ್ಟದ ಗುಂಪು ಅಡಿಗೆಗೆ ಸಂಭಂದಿಸಿದ್ದು ..ಇತ್ತೀಚೆಗೆ  ಸೇರಿದ ಆಹಾರದ ಗುಂಪುಗಳಲ್ಲಿ ಮನೆಯಲ್ಲಿ ಮಾಡಿದ 

ಪದಾರ್ಥಗಳನ್ನು ನನ್ನದೇ ರೀತಿಯಲ್ಲಿ ಶೃಂಗರಿಸುವುದು  ನನ್ನ ಹವ್ಯಾಸಗಳಲ್ಲಿ ಒಂದು...ಅದರ ಕೆಲವು ಚಿತ್ರಗಳು ಈ ಬಾರಿಯ 

ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೇನೆ .....ಇದನ್ನು ನೋಡಿದ ಮೇಲೆ ಖಂಡಿತಾ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ... :)) 




ಹಲಸಿನ ಹಣ್ಣಿನ ಕಡುಬು  ನನ್ನ ಮೊದಲ ಪ್ರಯತ್ನ ಈ  ಆಹಾರ ಕಲೆಯಲ್ಲಿ 


ಸಾಧಾರಣವಾಗಿ   ಎಲ್ಲರ  ಮನೆಯಲ್ಲೂ  ತಯಾರಿಸುವ   ಅಕ್ಕಿಯ  ಒತ್ತು  ಶ್ಯಾವಿಗೆ .... ಇತ್ತೀಚಿನ  ಭಾಷೆಯಲ್ಲಿ  ರೈಸ್  ನೂಡಲ್ಸ್ .... ನಮ್ಮ  ಹೂವಿನ ಜಡೆ  ಅಥವಾ  ಮೊಗ್ಗಿನ  ಜಡೆ  ಮಾದರಿಯಲ್ಲಿ 




ನಾಗರಪಂಚಮಿಯಂದು  ಮಾಡಿದ ಅರಿಷಣ  ಎಲೆ ಕಡುಬು 



ಮಾಲತಿ ಚಿಕ್ಕಮ್ಮನಿoದ  ಕಲಿತ  ಪಡುವಲ  ಬೀಜದ ತಂಬಳಿ 



ಕ್ಯಾಬೇಜ್  ಪಲ್ಯ  ಬೆಳಿಗ್ಗೆ  ಒಂದು  ಮದುವೆ  ಪತ್ರಿಕೆಯಲ್ಲಿ  ನೋಡಿದ  ಗಣಪತಿಯಿಂದ  ಪಡೆದ  ಸ್ಪೂರ್ತಿ 




ನೂಲು ಹುಣ್ಣಿಮೆ ಹಬ್ಬದಂದು ನಾವು ಯಾವಾಗಲು ತಯಾರಿಸುವ ಉದ್ದಿನಬೇಳೆಯ  ಕಡುಬು 
 ಬ್ರಾಹ್ಮಣನ ಆಕಾರ ದಲ್ಲಿ 




ರಾಖಿ ಹಬ್ಬಕ್ಕೆಂದು ತಯಾರಿಸಿದ  ಸಾಬುದಾನ ಪಾಯಸ 




ಅಕ್ಕಿ ಬೇಳೆ  ಕಾಳುಗಳಿಂದ  ತಯಾರಿಸಿದ ಕಾರ್ಟೂನ್  ಚಿತ್ರ 





ಹಾಗಲಕಾಯಿ ಮೊಸಳೆ 




ಹಾಗಲಕಾಯಿ ಎಣ್ಣೆಯಲ್ಲಿ ಫ್ರೈ ಮಾಡಿ ಹೀಗೊಂದು  ಚಿತ್ರ 



ನಮ್ಮ ಪತ್ರೋಡೆ   ಎಂಬ ತಿನಿಸಿಂದ   ಪಾಂಡಾ ಪ್ರಾಣಿಯ ಪ್ರತಿಕೃತಿ




ನಮ್ಮ ಇಷ್ಟದ ದಾಳಿತೋವೆ   ತೊಗರಿಬೇಳೆಯಿ0ದ  ಮಾಡಿದ್ದು 





ನನ್ನ ಪ್ರೀತಿಯ  ಮಾವಿನ ಹಣ್ಣಿನ ಸಾಸಿವೆ  




ಎಲ್ಲರ ಮನೆಯಲ್ಲೂ ಮಾಡುವ ಪುಲಾವ್  



ಹಲಸಿನ ಬೀಜದ ಚಟ್ನಿ 




ನಮ್ಮ ಜಂಬೋ  ಸೆವೆನ್ ಕಪ್ ಬರ್ಫಿ  


ಹೀರೇಕಾಯಿ ಸಿಪ್ಪೆ ಚಟ್ನಿ ಒಂದು ಚಿತ್ರ ನೋಡಿ ಪ್ರೇರಣೆ ಪಡೆದಿದ್ದು 



ಮರಕೆಸು ಎಲೆಯ ಪತ್ರೊಡೆ ಮಳೆಗಾಲದ ತಿನಿಸು 









ಕ್ಯಾಬೇಜ್ ಅಂಬಡೆ  ನನ್ನದೇ ಶೈಲಿಯಲ್ಲಿ  


ನೇಂದ್ರ  ಬಾಳೆ  ಹಣ್ಣಿನ  ಸಿಹಿ ಹುಳಿ ಕೇರಳದ ಪುಕಳಮ್  ಶೈಲಿಯಲ್ಲಿ 




ಕೃಷ್ನಾಷ್ಟಮಿಗೆ  ನೈವೇದ್ಯಕ್ಕೆಂದು  ತಯಾರಿಸಿದ ಸಿಹಿ ಅವಲಕ್ಕಿ




ಬೆಳ್ಳುಳ್ಳಿ ಚಟ್ನಿ ಹೂವಿನ ಜೊತೆ 


ನಾವು ಬೆಳಗಿನ ತಿಂಡಿಗೆ ತಯಾರಿಸುವ ಗೋಧಿ ಶ್ಯಾವಿಗೆ ಉಸ್ಲಿ 



ಈ ಚಿತ್ರವನ್ನು ನನ್ನ ಮೊದಲ ಬರಹದಲ್ಲಿ ನೋಡೇ ಇರ್ತೀರಾ  ಬೆಳ್ಳುಳ್ಳಿ ಚಟ್ನಿ ಪುಡಿ 







ಉಪ್ಪಿಟ್ಟು ...ಛೋ ಟು  ಇಲಿಗಳ ಆಕಾರದಲ್ಲಿ 


ಸಿಂಪಲ್ ತರಕಾರಿ ಪಲ್ಯ 


ಹಯಗ್ರೀವ ಎಂಬ ಸಿಹಿ ಮೆಹಂದಿ ರೂಪದಲ್ಲಿ 



ನಮ್ಮ ಉಪ್ಪಿಟ್ಟು ಅವಲಕ್ಕಿ ಕರ್ನಾಟಕ ಸ್ಪೆಷಲ್ 



ಇಷ್ಟೆಲ್ಲಾ  ಚಿತ್ರಗಳನ್ನು  ನೋಡಿ  ಸುಸ್ತಾದರೆ   ಕೆಳಗಿನ   ತಂಪು ತಂಪು   ಐ ಸ್ ಕ್ರೀಮ್  ಸವಿಯಿರಿ... :))


ಥಂಡಾ  ಥಂ ಡಾ  ಐ ಸ್ ಕ್ರೀಮ್ 






ಧನ್ಯವಾದಗಳು....ಸ್ನೇಹಿತರೇ.....

ಪ್ರೀತಿಯಿಂದ

ಸುದೀಪ.........














Thursday, 4 October 2012

ಹೆಸರಿನಲ್ಲೇನಿದೆ...????!!!!



"ಹೆಸರಿನಲ್ಲೇನಿದೆ"....ಯಾರಿಗಾದರೂ ಈ ಪ್ರಶ್ನೆ ಕೇಳಿದರೆ ಉತ್ತರ ಬಹುಷಃ ಹೀಗಿರುತ್ತೆ...."ಅಯ್ಯೋ...ಅದು ಗುರುತು ಹಿಡಿಯಲಿಕ್ಕೆ ಒಂದು ಐಡೆಂಟಿಟಿ ಮಾತ್ರ.."  ಅಥವಾ.."ಮನುಷ್ಯನ ಗುಣ, ನಡತೆ, ವ್ಯಕ್ತಿತ್ವ ಮಾತ್ರ ಮುಖ್ಯ...ಹೆಸರಲ್ಲೇನಿದೆ... ಮಣ್ಣು..." ಇನ್ನೂ ಕೆಲವರು..."ಹೋಗ್ರಿ ಸುಮ್ನೆ..ಒಳ್ಳೊಳ್ಳೆ ದೇವರ ಹೆಸರೆಲ್ಲಾ ಇಟ್ಟುಕೊಂಡು ಅವರು ಮಾಡೋ ಅನಾಚಾರ ನೋಡಿದ್ರೆ ಸಾಕು...." ಹೀಗೆ ಅವರವರ ಭಾವಕ್ಕೆ ತಕ್ಕಂತೆ ಉತ್ತರ ಕೊಡಬಹುದು....

ಆದರೆ ನನ್ನ ಮಟ್ಟಿಗಂತೂ ನನ್ನ ಹೆಸರಿನ ಹಿಂದೆ ತುಂಬಾ ಹಳೆಯ ನೆನಪುಗಳಿವೆ...ಅದನ್ನೇ ಬರೆಯೋಣ ಅಂತ ಇಷ್ಟೊತ್ತು ಪೀಠಿಕೆ ಹಾಕಿದ್ದು...ಅದನ್ನು ನಿಮಗೆ ಹೇಳೊಕ್ಕೆ ಮುಂಚೆ ನನ್ನ "ಅಮೊಮ"(ಅಜ್ಜಿ) ಬಗ್ಗೆ ಸ್ವಲ್ಪ ಹೇಳಲೇ ಬೇಕಾಗುತ್ತೆ...ಇಲ್ಲಾ ಅಂದ್ರೆ ಈ ಕಥೆ ಮುಂದುವರಿಸಲಿಕ್ಕೆ ಆಗೋದಿಲ್ಲ...ಅಂದ ಹಾಗೆ ನನ್ನ ಪ್ರೀತಿಯ ಅಜ್ಜಿ ಶ್ರೀಮತಿ. ಶಾಂತ ಶೆಣೈ.



ಹಳೆಯ ನೆನಪು ಪ್ರೀತಿಯ ಅಮೊಮನೊಂದಿಗೆ

ನನ್ನ ತಂದೆ ತಾಯಿಗೆ ನಾನು ಹತ್ತು ವರ್ಷ ನಂತರ ಹುಟ್ಟಿದ ಮಗಳು..ಅದಕ್ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ದೇವಸ್ಥಾನದಲ್ಲಿ ನನ್ನ ಹೆಸರು ಇಡ್ತೀವಿ ಅಂತ ಹರಕೆ ಹೊತ್ತಿದ್ರಂತೆ. ಸರಿ..ಹಾಗೆ ನನಗೆ ತೊಟ್ಟಿಲು ಶಾಸ್ತ್ರ ಮಾಡುವಾಗ ಹೆಸರು ಇಟ್ಟಿಲ್ಲ. ಮನೆಯಲ್ಲಿ ನಾನೇ ಚಿಕ್ಕ ಮಗು ಆಗಿದ್ದರಿಂದ ಎಲ್ಲರಿಗೂ ನನ್ನ ಕಂಡ್ರೆ ಸ್ವಲ್ಪ ಜಾಸ್ತೀನೆ ಪ್ರೀತಿ..ನಾನು ಚಿಕ್ಕವಳಿರುವಾಗ ನಮ್ಮ ತೀರ್ಥಹಳ್ಳಿ ಮನೆಯಲ್ಲಿ ಸುಮಾರು ೨೦ ಜನ ಇದ್ದರು.ನಮ್ಮದು ಅವಿಭಕ್ತ ಕುಟುಂಬ. ಹೀಗಾಗಿ ಮಗುವಿಗೆ ನಾಮಕರಣದ ಶಾಸ್ತ್ರ ಮಾಡೋದು ಹೇಗೂ ತಡ ಉಂಟು....ಅದಕ್ಕೆ ಅಲ್ಲಿಯವರೆಗೂ ನನ್ನ ಅಮೊಮ ಎಲ್ಲರಿಗೂ "ಮಗೂನ್ನ "ದೀಪ" ಅಂತ ಕರೀರಿ" ಅಂದ್ರಂತೆ...ಮನೆಯಲ್ಲಿ ಅಷ್ಟು ಜನ ಇದ್ರೂ ಒಬ್ಬರೂ "ದೀಪ" ಅನ್ನೋ ಹೆಸರನ್ನು ಕರೆದಿಲ್ಲ. ತಮಗೆ ತೋಚಿದ ಅಡ್ದ ಹೆಸರಿನಿಂದಲೇ ಕರೆಯುತ್ತಿದ್ದರು. ಇಂದೂ ಸಹಾ ಹಾಗೇ ಕರೆಯುತ್ತಾರೆ..ಆದರೆ ನನ್ನ ಅಮೊಮ ಮಾತ್ರ ತನ್ನ ಕೊನೆ ಉಸಿರಿನವರೆಗೂ ನನ್ನನ್ನು "ದೀಪ".."ದಿಪ್ಪೂ" ಅಂತಾನೇ ಕರೀತಿದ್ರು... :)) ಅವರ ಕಾಲವಾದ ನಂತರ ಎಲ್ಲರಿಗೂ, ನನ್ನನ್ನೂ ಸೇರಿಸಿ ಹೆಚ್ಚು-ಕಮ್ಮಿ ಆ ಹೆಸರೇ ಮರೆತು ಹೋಗಿತ್ತು. ಅನ್ನಬಹುದು...

ಹೀಗೆ ಸ್ಕೂಲ್, ಕಾಲೇಜ್ ವಿಧ್ಯಾಭ್ಯಾಸ ಆಯ್ತು..ಅಲ್ಲೆಲ್ಲಾ ನಾನು "ಸುಮತಿ" ಎಂಬ ಹೆಸರಿನಿಂದಲೇ ಪರಿಚಿತೆ..ಅದು ನನಗೆ ದೇವಸ್ಥಾನದಲ್ಲಿ ಇಟ್ಟ ಹೆಸರು... :))

ನಂತರ ಮದುವೆಯಾಯ್ತು..ನಮ್ಮಲ್ಲಿ ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಹೆಸರು ಬದಲಿಸುವ ಶಾಸ್ತ್ರ ಇದೆ..ಮದುವೆ ಮಂಟಪದಲ್ಲೇ ಹೊಸ ಹೆಸರನ್ನು ಅತ್ತೆ-ಸೊಸೆಯ ಕಿವಿಯಲ್ಲಿ ಮೂರು ಸಾರಿ ಹೇಳುತ್ತಾರೆ..ಯಾವಾಗಲೂ ಮದುವೆಗಳಲ್ಲಿ ಇದೊಂದು ಕುತೂಹಲದ ವಿಚಾರ..ಮದುಮಗಳಿಗೆ ಹೊಸ ಹೆಸರು ಏನಿರಬಹುದೆಂದು...??? ಹಾಗೆ ನನ್ನ ಮದುವೆಯಲ್ಲಿ ಸಹಜವಾಗಿ ನಾನು ಸ್ವಲ್ಪ ಉತ್ಸುಕಳಾಗಿದ್ದೆ..ನನ್ನ ಗಂಡನ ಹೆಸರು.."ದೇವದತ್" ಹಾಗಾಗಿ ನನ್ನ ಹೆಸರು ಹೇಗಿರಬಹುದು...!!!! ಸರಿ ಅತ್ತೆ ನನ್ನ ಕಿವಿಯ ಹತ್ತಿರ ಬಂದು ಹೇಳಿದ ಹೆಸರು ನನ್ನನ್ನು ಸಂತೋಷ ಮತ್ತು ಆಶ್ಚರ್ಯ ಎರಡನ್ನೂ ಆ ಘಳಿಗೆಯಲ್ಲಿ ಉಂಟು ಮಾಡಿತ್ತು... ಅವರು ನನಗೆ ಇಟ್ಟ ಹೆಸರು ಸಹಾ "ದೀಪ"...ಸುಮಾರು ೧೨ ವರ್ಷಗಳ ಹಿಂದೆ ಮರೆತಿದ್ದ ಹೆಸರಿಗೆ "ಪುನಃ ಜೀವ" ಬಂದಿತ್ತು...ಅಮೊಮನ ನೆನಪನ್ನು ಆ ಸಮಯದಲ್ಲಿ ತರಿಸಿತ್ತು.. :)) ಈಗ ಗಂಡನ ಮನೆಯಲ್ಲಿ ಎಲ್ಲರಿಗೂ ನಾನು "ದೀಪ"...ಬಹುಷಃ ಅವರು ಎರಡಕ್ಷರದ ಹೆಸರು...ಕರಿಯಲಿಕ್ಕೆ ತುಂಬಾ ಸುಲಭ...ಹಾಗೇ "ದೀಪ ದೇವದತ್" ಹೀಗೆ ಆಲೋಚನೆ ಮಾಡಿದ್ದರೆನಿಸುತ್ತೆ.. :)) ಇದು ನನ್ನ ಹೆಸರಿನ ಹಿಂದೆ ಇರುವ ಸಣ್ಣ ಕಥೆ...

ಆಂದ ಹಾಗೇ ಸ್ವಲ್ಪ ದಿನದ ಹಿಂದೆ ನಾನು ಹೊಸ ಬ್ಲಾಗ್ ಶುರು ಮಾಡಿದಾಗ... ಏನು ಹೆಸರು ಇಡಲಿ ಎಂದು ಆಲೋಚನೆ ಮಾಡ್ತಿದ್ದಾಗ... "ಸುದೀಪ" ಹೆಸರು ಆಯ್ಕೆ ಮಾಡಿಕೊಂಡಿದ್ದೆ...ಸುಮತಿಯ.."ಸು"+"ದೀಪ" = "ಸುದೀಪ" ....ನನ್ನ ಎರಡು ಹೆಸರುಗಳ ಸಮಾಗಮ...ಚೆನ್ನಾಗಿದೆ ಅನ್ನಿಸ್ತು... :)) ನನಗಂತೂ ಇಷ್ಟ ಆಯ್ತು..ಓದುವ ನಿಮಗೆ ಹೇಗನಿಸ್ತೋ ಗೊತ್ತಿಲ್ಲ...

ನಿಜ.. ಹೆಸರಿಗಿಂತ ಪ್ರೀತಿ, ಗುಣ, ನಡತೆ, ಒಳ್ಳೆಯ ವ್ಯಕ್ತಿತ್ವ ತುಂಬಾನೆ ಮುಖ್ಯ..ಆದರೂ ಕೆಲವೊಮ್ಮೆ ಇದೆಲ್ಲಾ ನೆನಪಾಗುತ್ತೆ..:))

ಯಾವಾಗಲೂ ಪ್ರೀತಿಯಿಂದ ನಿಮ್ಮೆಲ್ಲರ....

ಸುದೀಪ... :))




Saturday, 29 September 2012

ಕಲ್ಲುಹೃದಯ...


ನನ್ನ ಮಗ ಅಶ್ವಿನ್ ಹುಟ್ಟಿದ್ದು ತೀರ್ಥಹಳ್ಳಿಯ ಮಾನಸ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ. ಅವತ್ತು ತಾರೀಕು ೨೦ ಜನವರಿ ೨೦೦೩. ಸ್ವಲ್ಪ ಸಮಸ್ಯೆ ಇದ್ದದ್ದರಿಂದ ಸಹಜ ಹೆರಿಗೆಯಾಗದೆ ನನಗೆ ಶಸ್ತ್ರಕ್ರಿಯೆಯ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಹೆರಿಗೆ ಆಗಿ ಎರಡು ದಿನ ನಂತರ ನನಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು.  ರಕ್ತಪರೀಕ್ಷೆ ಮಾಡಿದಾಗ ಮೂತ್ರ ಸೋಂಕಿನಿಂದ ಎಂದು ತಿಳಿದು ಬಂತು...ಅದಕ್ಕೆ ಲೀಟರ್ಗಟ್ಟಲೆ ನೀರು ಕುಡಿಯಬೇಕಿತ್ತು...ನನ್ನ ತಂದೆ ಪಾಪ...ತಮ್ಮ ಅಂಗಡಿ ಬಾಗಿಲು ಹಾಕಿದ ನಂತರ ನನ್ನನ್ನು ಒಮ್ಮೆ ಆಸ್ಪತ್ರೆಗೆ ಬಂದು ಮಾತನಾಡಿಸಿ, ಅಲ್ಲೇ ಇದ್ದ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಅಪ್ಪ-ಅಮ್ಮ ಇಬ್ಬರೂ ಊಟ ಮಾಡಿ, ಮನೆಗೆ ಹೋಗುವಾಗ ಒಗೆಯುವ ಬಟ್ಟೆಗಳನ್ನು ಸಹಾ ತೆಗೆದುಕೊಂಡು ಹೋಗುತ್ತಿದ್ದರು..ಮತ್ತೆ ಮನೆಗೆ ಹೋಗಿ ದೊಡ್ಡ ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ, ಅದನ್ನು ತಣ್ಣಗೆ ಮಾಡಿ, ಮಾರನೇ ದಿನ ಬೆಳಿಗ್ಗೆ ಆಸ್ಪತ್ರೆಗೆ ಬರುವಾಗ ಬಾಟಲಿಯಲ್ಲಿ ತುಂಬಿಕೊಂಡು ಬರುತ್ತಿದ್ದರು...ಹೀಗೆ ಮಗುವಿಗೂ ಹುಟ್ಟಿದ ಎರಡು ಮೂರು ದಿನ ಮೈ ಸ್ವಲ್ಪ ಹಳದಿ ಬಣ್ಣ ಇದ್ದುದರಿಂದ, ಆಸ್ಪತ್ರೆಯಲ್ಲೇ ನಾವು ಚಿಕಿತ್ಸೆಗಾಗಿ ನಿಲ್ಲಬೇಕಾಯ್ತು. ಏಳನೇ ದಿನ ಹೇಗೂ ನನಗೆ ಸಿಸೆರಿಯನ್ ಶಸ್ತ್ರಕ್ರಿಯೆಯ ಹೊಲಿಗೆ ಬಿಚ್ಚಬೇಕಾದ್ದರಿಂದ..ಅಷ್ಟೂ ದಿನ ಆಸ್ಪತ್ರೆಯಲ್ಲಿ ಝಂಡಾ ಹೂಡಿದ್ದೆವು...ಆಗ ಅಲ್ಲಿ ನಡೆದ ಎಷ್ಟೋ ಘಟನೆಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಉಳಿದಿದೆ..ತುಂಬಾ ಕಾಡುವ ನೆನಪೆಂದರೆ....ಈ ಕೆಳಗಿನ ಘಟನೆ...



ಅವತ್ತು ೨೧ ಜನವರಿ, ನನ್ನ ಹೆರಿಗೆಯಾದ ಮಾರನೇ ದಿನ. ಸಂಜೆ ದೀಪ ಹಚ್ಚುವ ಸಮಯ. ಬಹುಷಃ ೭ ಘಂಟೆ ಸಮಯ. ಆಸ್ಪತ್ರೆಯಿಡೀ ಗದ್ದಲ. ಸಂಬಂಧಿಕರನ್ನು, ರೋಗಿಗಳನ್ನು ಹೀಗೆ ಪರಿಚಯದವರನ್ನು ಮಾತನಾಡಿಸಲಿಕ್ಕೆ ಜನಗಳು ಬರುತ್ತಿದ್ದರು. ಕಾರಿಡಾರ್ನಲ್ಲಿ ಎಲ್ಲರೂ ಅತ್ತಿಂದಿತ್ತ ಓಡಾಡುವವರೆ. ನನ್ನ ಪಕ್ಕದ ಮಂಚದಲ್ಲಿ ಒಬ್ಬ ಹುಡುಗಿ ಸಹಾ ಗಂಡು ಮಗುವನ್ನು ಹೆತ್ತಿದ್ದಳು. ಅವಳನ್ನು ನೋಡಿಕೊಳ್ಳಲು ಅವಳ ಹತ್ತಿರ ಆಕೆಯ ಅಕ್ಕ ಇದ್ದರು. ಸ್ವಲ್ಪ ಮಧ್ಯ ವಯಸ್ಸಿನ ಹೆಂಗಸಾಕೆ. ಪಾಪದ ಸ್ವಭಾವ. ಈ ಹೊರಗಿನ ಗದ್ದಲದಲ್ಲಿ ಯಾರೋ ಒಬ್ಬ ಹೊಸ ಹೆಂಗಸು ಆಕೆಯ ಹತ್ತಿರ ಬಂದು..."ಅಕ್ಕಾ..ಈ ಮಗುವನ್ನು ಸ್ವಲ್ಪ ನೋಡಿಕೊಳ್ಳಿ..ನನ್ನ ಸೊಸೆ ಇನ್ನೊಂದು ರೂಮಿನಲ್ಲಿ ಇದ್ದಾಳೆ. ವೈದ್ಯರು ಹೊಸ ಔಷಧಿ ಬರೆದು ಕೊಟ್ಟಿದ್ದಾರೆ. ಕೆಳಗಿನ ಮೆಡಿಕಲ್ ಶಾಪ್ನಲ್ಲಿ ಸಿಗುತ್ತಿಲ್ಲ. ನಾನು ಇನ್ನೊಂದು ಅಂಗಡಿಯಲ್ಲಿ ವಿಚಾರಿಸಿ ಬೇಗ ತಂದು ಬಿಡುತ್ತೇನೆ..." ಎಂದು ಆಕೆ ಒಪ್ಪದಿದ್ದರೂ, ಆಕೆಯನ್ನು ಪುಸಲಾಯಿಸಿ, ಮಗುವನ್ನು ಆಕೆಯ ಕೈಗಿಟ್ಟು ಹೊರಡುತ್ತಾಳೆ. ಇಷ್ಟೆಲ್ಲಾ ಆದರೂ ಈ ವಿಷಯ ಯಾರ ಗಮನಕ್ಕೂ ಬರುವುದಿಲ್ಲ. ಯಾರೋ ಪರಿಚಯದ ಹೆಂಗಸಿರಬೇಕು...ಈಕೆ ಮಾತನಾಡುತ್ತಿದ್ದಾಳೆ ಎಂದು ಎಲ್ಲರೂ ಎಣಿಸುತ್ತಾರೆ...ಐದು ನಿಮಿಷ ಆಯ್ತು...ಹತ್ತು ನಿಮಿಷ ಆಯ್ತು...ಕೊನೆಗೆ ಕಾಲು ಘಂಟೆ ಆದರೂ ಆ ಹೆಂಗಸಿನ ಸುಳಿವೇ ಇಲ್ಲ...ಈಗ ಇವರಿಗೆ ನಿಜಕ್ಕೂ ಗಾಬರಿ ಶುರುವಾಗ್ತದೆ..ಮಂಚದ ಮೇಲೆ ಮಲಗಿಸಿದ ಮುದ್ದಾದ ಹೆಣ್ಣು ಮಗು. ತಲೆಗೆ ಟೊಪ್ಪಿ, ಕಾಲಿಗೆ ಸಾಕ್ಸ್, ಚಂದದ ಅಂಗಿ, ಬಣ್ಣದ ಬಟ್ಟೆಯಲ್ಲಿ ಸುತ್ತಿದ..ಹತ್ತು ದಿನಗಳ ಒಳಗಿನ ಮಗು.. ಯಾವ ಯೋಚನೆಯಿಲ್ಲದೆ...ಮುದ್ದಾಗಿ ಮಲಗಿತ್ತು..ನಿಧಾನಕ್ಕೆ ಒಬ್ಬರಿಂದ ಒಬ್ಬರಿಗೆ ಈ ವಿಷಯ ತಿಳಿದು, ಎಲ್ಲರೂ ಆ ಮಗುವನ್ನು ನೋಡಲು ಹಿಂಡು ಹಿಂಡು ಬರಲಿಕ್ಕೆ ಶುರು ಮಾಡಿದ್ದರು. "ಅಯ್ಯೋ..ಎಷ್ಟು ಮುದ್ದಾಗಿದೆ ಮಗು..ಯಾವ ಪಾಪಿಗಳೊ..ಬಿಟ್ಟು ಹೋಗಿದ್ದಾರೆ.." ಎಂದು ಒಬ್ಬರೆಂದರೆ, ಇನ್ನೊಬ್ಬರು..."ಯಾವ ಕರ್ಮ ಮಾರಾಯ್ರೆ...ಹೇಸಿಗೆ ಇಲ್ಲದ ಜನ..." ಅಂತ ತಲೆಗೊಂದರಂತೆ ಮಾತಾಡ್ಲಿಕ್ಕೆ ಶುರು ಮಾಡಿದ್ದರು...ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಆ ಹೆಂಗಸಿನ ಸೀರೆಯ ಗುರುತು ತಿಳಿದುಕೊಂಡು ಆಸ್ಪತ್ರೆಯಿಡೀ ಜಾಲಾಡಿದರೂ ಫಲಿತಾಂಶ ಮಾತ್ರ ಸೊನ್ನೆ...ಅವಳು ಮಗುವನ್ನು ಬಿಟ್ಟು ಎಲ್ಲೋ ಪರಾರಿಯಾಗಿದ್ದಳು.


ಚಿತ್ರಕೃಪೆ-ಅಂತರ್ಜಾಲ 



ನಂತರ ಒಂದೆರಡು ದಿನ ಆಸ್ಪತ್ರೆಯ ಸಿಬ್ಬಂದಿಯೇ..ಆ ಮಗುವಿನ ಲಾಲನೆ-ಪೋಷಣೆ ಮಾಡಿದ್ದರು...ವಿಷಯ ತಿಳಿದ ಯಾರೋ ಸಹೃದಯಿಗಳು, ಮಕ್ಕಳಿಲ್ಲದವರು...ಕಾನೂನು ರೀತ್ಯ ಆ ಮಗುವನ್ನು ದತ್ತು ತೆಗೆದುಕೊಂಡರು. ಈ ನೆನಪು ಈಗಲೂ ನನ್ನನ್ನು ಕಾಡುತ್ತಿರುತ್ತದೆ.


ಈ ಜಗತ್ತಿನಲ್ಲಿ ಎಷ್ಟೊಂದು ಕಲ್ಲುಹೃದಯದ ಜನರಿರ್ತಾರೆ ಎಂದು ಕಣ್ಣಾರೆ ಕಂಡ ದಿನವದು. ಆ ತಾಯಿಗೆ ಅದೇನು ಸಮಸ್ಯೆಯೋ...ಹೆಣ್ಣು ಮಗುವೆಂಬ ತಾತ್ಸಾರವೋ, ಹಣದ ಸಮಸ್ಯೆಯೋ ಅಥವಾ ವ್ಯಭಿಚಾರಕ್ಕೆ ಬಲಿಯಾಗಿ ಹುಟ್ಟಿದ ಕೂಸೋ ಗೊತ್ತಿಲ್ಲ. ನಾನು ಯಾವಾಗಲೂ ವೃತ್ತಪತ್ರಿಕೆಯಲ್ಲಿ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗುವ..ಸಮಾಚಾರವನ್ನು ಓದುತ್ತಾ ಇರುತ್ತಿದ್ದೆ..ಆದರೆ ನನ್ನ ಕಣ್ಣ ಮುಂದೆ ಹೀಗೊಂದು ದುರಂತ ನಡೆಯುತ್ತದೆ ಎಂದು ಯಾವತ್ತೂ ಎಣಿಸಿರಲಿಲ್ಲ... :(

ಆದರೂ ಒಂದು ಸಂತೋಷದ ವಿಷಯವೆಂದರೆ ಒಬ್ಬ ವ್ಯಕ್ತಿ ಮಗುವನ್ನು ತಿರಸ್ಕರಿಸಿದರೆ.... ನೂರು ವ್ಯಕ್ತಿಗಳು ಮರು ಜೀವನ ಕೊಡಲು ತಯಾರಿರುತ್ತಾರೆ.... :))



Friday, 21 September 2012

ಸ್ನೇಹ....ಚಿರಂಜೀವಿ....


ನಾವು ನಮ್ಮ ಜೀವನದಲ್ಲಿ ತುಂಬಾ ತರಹದ ಆತ್ಮೀಯ ಸ್ನೇಹಿತರನ್ನು ನೋಡ್ತಾ ಇರ್ತೇವೆ... ತಮ್ಮ ಮಿತ್ರನಿಗಾಗಿ ಪ್ರಾಣಕ್ಕೆ...ಪ್ರಾಣ ಕೊಡುವವರು ಇರ್ತಾರೆ.. ಸ್ನೇಹಿತರಿಗೆ ಕಷ್ಟ ಬಂದರೆ ತಮ್ಮ ಆಸ್ತಿ-ಪಾಸ್ತಿ, ಐಶ್ವರ್ಯ ಎಲ್ಲವನ್ನೂ ತ್ಯಾಗ ಮಾಡುವವರು ಇರ್ತಾರೆ..ಇನ್ನು ಕೆಲವರಿಗಂತೂ ತಮ್ಮ ಹೆಂಡತಿ, ಮಕ್ಕಳಿಗಿಂತ ಸ್ನೇಹಿತರೆ..ಅಚ್ಚುಮೆಚ್ಚಾಗಿರ್ತಾರೆ..ಈಗೆಲ್ಲಾ ಸ್ನೇಹಿತರ ಹತ್ತಿರ ಹಣ ಇರುವ ತನಕ ಅವರ ಜೊತೆ ಮಜಾ ಮಾಡಿ..ನಂತರ ಅವರನ್ನು ಮರೆತು ಬಿಡುವ ಕಾಲ...


"ಸ್ನೇಹ" ಎಂದ ಕೂಡಲೆ ನನ್ನ ನೆನಪಿಗೆ ಬರುವುದು...ಸುಮಾರು ಹನ್ನೊಂದು ವರ್ಷಗಳ ಹಿಂದೆ ನಾನು ನೋಡಿದ ಇಬ್ಬರು ವ್ಯಕ್ತಿಗಳು..ನನಗೆ ಆಗಸ್ಟ್ ೩೧,೨೦೦೧ ರಲ್ಲಿ ಮದುವೆ..ಅದಾಗಿ ಒಂದು ತಿಂಗಳ ನಂತರ ನಾವು ಒಂದು ವಾರದ "ದಕ್ಷಿಣ ಭಾರತ" ಪ್ರವಾಸಕ್ಕೆಂದು ವಿಕ್ರಮ್ ಟ್ರಾವೆಲ್ಸ್ನಲ್ಲಿ ಟಿಕೆಟ್ ಬುಕ್ ಮಾಡಿದ್ದೆವು..ನಮ್ಮ ಪ್ರಯಾಣ ಮಂಗಳೂರಿನಿಂದ ಪ್ರಾರಂಭ...ಹಿಂದಿನ ದಿನವೇ ಹೋಟೆಲ್ನಲ್ಲಿ ರೂಮ್ ಮಾಡಿದ್ದೆವು..ಮರುದಿನ ಬೆಳಿಗ್ಗೆ ಅಲ್ಲಿಂದ ಮೈಸೂರಿಗೆ ನಮ್ಮ ಪ್ರಯಾಣ..ನಂತರ ಊಟಿ, ಕೊಡೈಕೆನಾಲ್, ಮೆಟ್ಟುಪಾಳ್ಯಂ, ತೆಕ್ಕಾಡಿ, ಕೊಚ್ಚಿನ್..ಹೀಗೆ ನಮ್ಮ ಊರುಗಳ ಪ್ರಯಾಣ ನಿಗದಿಯಾಗಿತ್ತು..


ಬಹುಷಃ ಮೈಸೂರಿನ ಹತ್ತಿರ ಇಬ್ಬರು ವ್ಯಕ್ತಿಗಳು ನಮ್ಮ ಸಹಪ್ರಯಾಣಿಕರಾಗಿ ಬಸ್ ಹತ್ತುತ್ತಾರೆ..ಒಬ್ಬರು ಎರಡೂ ಕೈಗಳಲ್ಲೂ ಊರುಗೋಲಿನ ಸಹಾಯದಿಂದ ನಿಧಾನವಾಗಿ ಬಸ್ನಲ್ಲಿ ಹತ್ತುತ್ತಾರೆ..ಅವರ ಸ್ನೇಹಿತರು ಲಗ್ಗೇಜ್ ಎಲ್ಲವನ್ನೂ ಹಿಡಿದುಕೊಂಡು..ಅವರಿಗೆ ಸಹಾಯ ಮಾಡುತ್ತಾ ಇರುತ್ತಾರೆ.. ನಾವೆಲ್ಲಾ ಆಗ ಅಂದುಕೊಳ್ತೇವೆ...ಇಷ್ಟು ಕಷ್ಟದಲ್ಲಿ ಇವರು ಅದು ಹೇಗೆ ಒಂದು ವಾರ ಪ್ರಯಾಣ ಮಾಡುತ್ತಾರೆ..? ಎಂದು...ಹೀಗೆ ಎಲ್ಲಾ ಕಡೆಯೂ ತುಂಬಾ ನಡೆಯಲಿಕ್ಕೆ ಇದ್ದರೆ ಅವರು ಬಸ್ನಲ್ಲಿಯೆ ಕುಳಿತಿರುತ್ತಿದ್ದರು..ಅಥವಾ ಸ್ವಲ್ಪ ದೂರ ನಿಧಾನಕ್ಕೆ ನಡೆದು ಬರುತ್ತಿದ್ದರು...ಬಹುಷಃ ಅವರಿಗೆ ತುಂಬಾ ಬೆನ್ನು ನೋವು ಮತ್ತು ಕಾಲು ನೋವು ಬರುತ್ತಿತ್ತು..ಎಲ್ಲಾ ಸಮಯದಲ್ಲೂ ಅವರ ಸ್ನೇಹಿತರು ಅವರಿಗೆ ಸಹಾಯ ಮಾಡುತ್ತಿದ್ದರು..ತುಂಬಾ ಕಡಿಮೆ ಮಾತಾಡುತ್ತಿದ್ದರು..

ಊರುಗೋಲು ಹಿಡಿದುಕೊಂಡು ನಡೆಯುವವರು ನಮ್ಮ ಭಾರತ ದೇಶದ ಸೇನೆಗಾಗಿ ದುಡಿದ "ಒಬ್ಬ ವೀರ ಯೋಧ..." ಸುಮಾರು ಒಂದೆರಡು ವರ್ಷಗಳ ಹಿಂದೆ ನಡೆದ "ಕಾರ್ಗಿಲ್" ಯುದ್ಧದಲ್ಲಿ ಅವರ ಕಾಲುಗಳಿಗೆ ತುಂಬಾ ಏಟಾಗಿ, ಪೆಟ್ಟಾಗಿ ಎಷ್ಟೋ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು..ಪುನಃ ಮನೆಗೆ ಬಂದು ಸುಮಾರು ತಿಂಗಳುಗಳ ಕಾಲ ವಿಶ್ರಾಂತಿ..ಸ್ವಲ್ಪ ಬದಲಾವಣೆ ಇರಲಿ ಎಂದು ಅವರ ಸ್ನೇಹಿತರು ಅವರನ್ನು ಈ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು.. ಪುನಃ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಅವರನ್ನು ಸೇನೆಗೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ..ಅವರು ಆಸ್ಪತ್ರೆಯಲ್ಲಿ ಇದ್ದಾಗ ಕೆಲವು ರಾಜಕೀಯ ಪುಢಾರಿಗಳು ಕೆಲಸ ಕೊಡಿಸುತ್ತೇವೆಂದು ಭರವಸೆ ನೀಡಿ ನಂತರ ತಿರುಗಿಯೂ ನೋಡುತ್ತಿರಲಿಲ್ಲವಂತೆ..ನಮ್ಮ ಪ್ರಯಾಣದ ಸಮಯದಲ್ಲಿ ಅವರು  ಬೇರೆಯ ಕೆಲಸ ಹುಡುಕುತ್ತಿದ್ದರು..ಅವರಿಗೆ ಬಹುಷಃ ಆಗ ಕೇವಲ ೨೫-೨೬ ವರ್ಷ ಅಷ್ಟೆ ಇರಬಹುದು..ಅವರು ನಮ್ಮ ಜೊತೆ ಯುದ್ಧದ ಅನುಭವ ಎಲ್ಲಾ ಹಂಚಿಕೊಳ್ಳುತ್ತಿದ್ದರು..ದಿನಗಟ್ಟಲೆ ಊಟ-ತಿಂಡಿಯಿಲ್ಲದೆ ...ಕೇವಲ ಚೊಕೊಲೇಟೋ..ಒಂದು ಬಿಸ್ಕಿಟ್ ಪ್ಯಾಕೆಟ್ನಲ್ಲಿ ಹೇಗೆ ದಿನಗಳು ಕಳೆಯುತ್ತಿದ್ದರು...ಪಾಕಿಸ್ತಾನದ ಸೈನಿಕರು ಸತ್ತ ಹಾಗೆ ಬಿದ್ದು..ಹತ್ತಿರ ಹೋಗಿ ಪರೀಕ್ಷೆ ಮಾಡುವಾಗ ಹೇಗೆ ಆಕ್ರಮಣ ಮಾಡುತ್ತಿದ್ದರೆಂದು...ಅವರಿಗೆ ಇದನ್ನೆಲ್ಲಾ ಹೇಳುವಾಗಲೇ ರೋಷ ಬರುತ್ತಿತ್ತು...ಅವರಲ್ಲಿ ಒಬ್ಬರ ಹೆಸರು.."ನವೀನ್" ಇರಬೇಕು...ಸರಿಯಾಗಿ ನೆನಪಿಲ್ಲ..ಹಾಳಾದ ಮರೆವು... :(



ನಮ್ಮ ಪ್ರಯಾಣದ ಕೊನೆಯ ದಿನ ಬಸ್ಸಿನ ಎಲ್ಲಾ ಪ್ರಯಾಣಿಕರು ಸೇರಿ ಅವರಿಗೊಂದು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡು..ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ನೀಡಿದ್ದೆವು...




ಈಗ ಇಬ್ಬರೂ ಯಾವ ಊರಿನಲ್ಲಿದ್ದಾರೋ ಗೊತ್ತಿಲ್ಲ......????

ಆದರೂ ಈ ಚಿತ್ರ ನೋಡಿದಾಗೆಲ್ಲಾ ನಾವು ಅವರ ನೆನಪು ಮಾಡ್ತಾ ಇರ್ತೇವೆ... ಅವ್ರೆಲ್ಲೇ ಇರಲಿ....ಇಬ್ಬರು ಸ್ನೇಹಿತರಿಗೂ ಒಳ್ಳೆಯದಾಗಲಿ.. :-)


Saturday, 15 September 2012

ಅಬ್ಬಾ..ಮರೆಯಲಾಗದ ಆತಂಕ...


ಬೆಳಿಗ್ಗೆ ೮.೩೦ ರ ಸಮಯ...ಅವತ್ತು ಮೇ.೩..೨೦೧೨.. ನಾನು ಮನೆಯಲ್ಲಿ ತಿಂಡಿ ತಿಂದು ಮುಗಿಸಿದ್ದೆನಷ್ಟೆ...ಯಜಮಾನರು ಆಫೀಸಿಗೆ ಹೊರಡಲು ತಯಾರಿ ನಡೆಸುತ್ತಿದ್ದರು. ಅಷ್ಟರಲ್ಲಿ ನನ್ನ ಯಜಮಾನರಿಗೆ ಅಮ್ಮನ ಫೋನ್..." ಆದಷ್ಟು ಬೇಗ ಆಸ್ಪತ್ರೆಗೆ ಬನ್ನಿ...ಇವರಿಗೆ ಸ್ವಲ್ಪ ಸೀರಿಯಸ್.." ಅದನ್ನು ಕೇಳಿದ್ದೆ..ತಡ..ಇದ್ದ ಕೆಲಸವನ್ನೆಲ್ಲಾ ಬದಿಗಿಟ್ಟು ಇಬ್ಬರೂ ಲಗುಬಗೆಯಿಂದ ಆಸ್ಪತ್ರೆಯೆಡೆ ಬೈಕಿನಲ್ಲಿ ದೌಡಾಯಿಸಿದೆವು...ಅಲ್ಲಿ ಮೂರನೆ ಮಹಡಿಯಲ್ಲಿ ಅಪ್ಪನ ವಾರ್ಡ್..ನಮ್ಮ ಗ್ರಹಚಾರಕ್ಕೆ ಆ ಸಮಯದಲ್ಲಿ ಬೆಳಿಗ್ಗೆಯೇ ಏನೋ ಸರ್ವಿಸಿಂಗ್ ಕೆಲಸ ನಡೆಯುತ್ತಿತ್ತು..ಸರಿ...ಹಾಗೆಯೇ ಇಬ್ಬರೂ ಏದುಸಿರು ಬಿಡುತ್ತಾ ಮಹಡಿ ಹತ್ತಿದೆವು...ನಾವು ಇನ್ನೇನು ಮೂರನೆ ಮಹಡಿಗೆ ಕಾಲಿಡುತ್ತಿದ್ದಂತೆ...ನಮ್ಮ ಎದುರಿಗೆ ಅಪ್ಪನನ್ನು "ತೀವ್ರನಿಘಾ ಕೊಠಡಿಗೆ" ಸ್ಥಳಾಂತರ ಮಾಡುತ್ತಿದ್ದರು...ಅಮ್ಮ ಹಿಂದೆಯೇ ಬರುತ್ತಿದ್ದರು...ಏನಾಯ್ತು ವಿಚಾರಿಸಿದಾಗ.."ಬೆಳಿಗ್ಗೆ ಸ್ವಲ್ಪ ಆಹಾರ ತೆಗೆದುಕೊಂಡ ಮೇಲೆ ಬಾಯಿಂದ ನೊರೆ ಬರಲಿಕ್ಕೆ ಪ್ರಾರಂಭ ಆಯ್ತು...ಕೂಡಲೆ ಸಿಸ್ಟರ್ಗೆ ವಿಷಯ ತಿಳಿಸಿದೆ..ಅವರು ರೂಮಿನಲ್ಲೇ ಪ್ರಥಮ ಚಿಕಿತ್ಸೆ ನೀಡಲು ಶುರುಮಾಡಿದರು..ನಂತರ ಇವರು ಅದಕ್ಕೆ ಸ್ಪಂದಿಸದೇ ಇದ್ದಾಗ ಈಗ ಐ.ಸಿ.ಯು ಗೆ ಕರೆದುಕೊಂಡು ಹೋದರು.." ಎಂದರು...ಇಷ್ಟೆಲ್ಲಾ ಆಗುವಾಗ ಆಸ್ಪತ್ರೆಯವರು ಅಪ್ಪನ ವೈದ್ಯರಿಗೆ ವಿಷಯ ತಿಳಿಸಿದ್ದಾರೆ..ಅವರು ಬರುವಷ್ಟರಲ್ಲಿ ಪುನಃ ಅಪ್ಪ ಐ.ಸಿ.ಯುನಲ್ಲಿ"ರಕ್ತ ವಾಂತಿ" ಮಾಡಿದ್ದಾರೆ...ಇದರಿಂದ ಶ್ವಾಸಕೋಶದ ರಕ್ತನಾಳಗಳು ಒಡೆದು ಹೋಗಿ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿತ್ತು...ವೈದ್ಯರು ಬಂದವರೇ ಅಪ್ಪನನ್ನು ಪರೀಕ್ಷೆ ಮಾಡಿ ..ನಮ್ಮ ಹತ್ತಿರ... "ತುಂಬಾ ರಕ್ತ ಹೋಗಿದೆ...ಎರಡು ಬಾಟಲಿ ರಕ್ತ ಕೊಟ್ಟು ನೋಡೋಣ...ಪ್ಲಾಟೆಲೆಟ್ ಗಣಿಕೆ  ತುಂಬಾ ಕಡಿಮೆ ಆಗ್ತಾ ಇದೆ..ಹೀಗೆ ಮುಂದುವರಿದರೆ..ತುಂಬಾ ಕಷ್ಟ ...ನಾನು ನನ್ನ ಪ್ರಯತ್ನ ಮಾಡುತ್ತೇನೆ..ನೋಡೋಣ ಏನಾಗುತ್ತದೆ ಎಂದು"...ಹೇಳಿದಾಗ ಇನ್ನೂ ಗಾಬರಿ ನಮ್ಮ ಸ್ಥಿತಿ...ಸರಿ ಅವರ "ಎಪಾಸಿಟಿವ್"ರಕ್ತ ತರಲು ನನ್ನ ಯಜಮಾನರು ಮಣಿಪಾಲಕ್ಕೆ ಹೊರಟರು..ಅಲ್ಲಿ ಹೋದರೆ ಬ್ಲಡ್ ಬ್ಯಾಂಕ್ನವರಿಗೆ ಯಾರದ್ದಾದರು ಬೇರೆ ಎರಡು ಬಾಟಲಿ ರಕ್ತ ಕೂಡಲೇ ನೀಡಬೇಕಂತೆ..ಸರಿ ತನ್ನ ಸ್ನೇಹಿತರಿಗೆ ಫೋನ್ ಮಾಡಿ, ಅವರು ತಮ್ಮ ಆಫೀಸ್ ಕೆಲಸ ಬಿಟ್ಟು ರಕ್ತ ಕೊಟ್ಟಾದ ಮೇಲೆ...ಇವರು ರಕ್ತದ ಪ್ಯಾಕೆಟ್ ತರುವಾಗ ಸುಮಾರು ಹನ್ನೊಂದು ಘಂಟೆಯ ಸಮಯ...ಸರಿ ಅದನ್ನು ಕೂಡಲೇ ಅಪ್ಪನಿಗೆ ಕೊಡಲಾಯಿತು...ಇನ್ನೆರಡು ಘಂಟೆ ಅದು ಹೇಗೆ ಕಳೆದೆವೋ ದೇವರಿಗೆ ಗೊತ್ತು..ಆಗಲೇ ಮಧ್ಯಾಹ್ನ ಊಟದ ಸಮಯ...ಅಲ್ಲೇ ಕ್ಯಾಂಟಿನಿಂದ ಬಂದ ಊಟ ನಾನು, ಅಮ್ಮ ಜೊತೆಯಲ್ಲಿ ಮಾಡಿದೆವು...ಸಂಜೆ ಆಯ್ತು...ವೈದ್ಯರು ಪುನಃ  ರೌಂಡ್ಸ್ಗೆ ಬಂದರು..."ಏನೂ ಚೇತರಿಕೆಯಿಲ್ಲ..ಅವರ ಸ್ಥಿತಿ ಬೆಳಿಗ್ಗೆಯ ರೀತಿಯೇ ಮುಂದುವರಿಯುತ್ತಿದೆ".. ಎಂದಾಗ ನಮ್ಮಲ್ಲಿ ಪುನಃ ಆತಂಕ..ರಾತ್ರಿಯಾಯಿತು..ಅಮ್ಮ ಒಬ್ಬರೇ ಮಲಗಬೇಕೆಂದು ನಾನು ಅವರ ಜೊತೆ ರಾತ್ರಿ ಅಲ್ಲೇ ಕಳೆದೆ...ನೆಮ್ಮದಿ ಇಲ್ಲದ ರಾತ್ರಿಯದು...

ಅವತ್ತು ಮೇ ೪ನೇ ತಾರೀಕು...ಅಂತೂ ಇಂತೂ ಬೆಳಕಾಯ್ತು..ಬೆಳಿಗ್ಗೆ ೬ರ ಸಮಯ..ಬೇಗ ಮುಖ ತೊಳೆದು ಐ.ಸಿ.ಯು ಹತ್ತಿರ ಇಬ್ಬರೂ ಓಡಿದೆವು...ನಿಧಾನಕ್ಕೆ ಒಳಗೆ ಹೋದರೆ ತಣ್ಣಗಿನ ಎ.ಸಿಯ ತಂಪು...ತಂಪು.. ಕೀ.ಗುಟ್ಟುವ ಏನೇನೋ ಮೆಶಿನುಗಳು...ಎಲ್ಲಾ ಹಾಸಿಗೆಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು...ಒಬ್ಬೊಬ್ಬರದು ಒಂದೊಂದು ಅವಸ್ಥೆ...ಅಪ್ಪನ ಮಂಚದ ಹತ್ತಿರ ನಿಧಾನಕ್ಕೆ ಹೋದರೆ ನಿಮಿಷಕ್ಕೊಮ್ಮೆ ಈ ಲೋಕದ ಪರಿವೆಯೇ ಇಲ್ಲದೇ ಕೇವಲ ಧೀರ್ಘವಾಗಿ ಉಸಿರು ತೆಗೆಯುತ್ತಿದ್ದಾರೆ...ಏನೇನೋ ಔಷಧಿಗಳು ಸೂಜಿಯ ಮೂಲಕ ಅಪ್ಪನ  ದೇಹ ಸೇರುತ್ತಿದೆ..ಎಲ್ಲಿಯೋ ಒದ್ದಾಡುತ್ತಿರುವ ಕಣ್ಣಿಗೆ  ಕಾಣದ ಸಣ್ಣದೊಂದು ಜೀವ...ಇನ್ನೂ ದೇಹದಲ್ಲಿತ್ತು..ಇದನ್ನೆಲ್ಲಾ ಕಣ್ಣು ತುಂಬಿಕೊಂಡು ಹೊರಗೆ ಬಂದೆವು...ಅಷ್ಟರಲ್ಲಿ ನನ್ನ ಯಜಮಾನರು ಬಂದರು...ಅವರು ಮಾವನನ್ನು ಒಳಗೆ ಹೋಗಿ ನೋಡಿ ಬಂದರು..ಅಪ್ಪನ ದೇಹಸ್ಥಿತಿಯ ಬಗ್ಗೆ ಮಾತನಾಡಲು ಮೂವರ ಬಳಿಯು ಮಾತಿರಲಿಲ್ಲ..ಕಣ್ಣಾರೆ ಕಂಡ ಮೇಲೆ ಮಾತಾನಾಡಲು ಶಬ್ದಗಳೇ ಇರಲಿಲ್ಲ..

ಇದರ ಮಧ್ಯೆ ನನ್ನ ಇನ್ನೊಂದು ಸಮಸ್ಯೆ ..ಒಂದು ತಿಂಗಳ ಹಿಂದೆಯೇ ಮಗನ ಪರೀಕ್ಷೆಯ ನಂತರ ಮೇ ತಿಂಗಳ ರಜದಲ್ಲಿ ಪಾಸ್ಪೊರ್ಟ್ಗಾಗಿ ಅದೇ ಮೇ 4ರಂದು ದಿನ ಆಯ್ಕೆ ಮಾಡಿಕೊಂಡಿದ್ದೆವು...ಅದಕ್ಕಾಗಿ ಮಂಗಳೂರಿನ ಪಾಸ್ಪೋರ್ಟ್ ಕಛೇರಿಗೆ ಅವತ್ತು ಹೋಗಬೇಕಿತ್ತು..ಇಲ್ಲಿಯ ಪರಿಸ್ಥಿತಿ ನೋಡಿದರೆ ಹೇಗೆ ಹೋಗೋದು ಎನ್ನುವ ಗೊಂದಲ...ಕೊನೆಗೆ ಅಮ್ಮನೇ.."ಹೋಗಿಬನ್ನಿ...ದೇವರಿದ್ದಾನೆ..."ಎಂದು  ಕಳಿಸಿಕೊಟ್ಟರು...ನಮಗೆ ೧೧.೩೦ ಘಂಟೆಗೆ ಸಮಯ ನಿಗದಿ ಮಾಡಿದ್ದರು...ಆಸ್ಪತ್ರೆಯಿಂದ ಸೀದಾ ಮನೆಗೆ ಬಂದು ಇದ್ದ ಬದ್ದ ಸಣ್ಣ ಕೆಲಸ ಮುಗಿಸಿ ೯ ಘಂಟೆ ಬಸ್ಸಿಗೆ ಮಂಗಳೂರಿಗೆ ಹೊರಟೆವು..ಅಲ್ಲಿ ತಲುಪುವಾಗ ೧೦.೩೦...ಇನ್ನು ಅಲ್ಲಿ ಎಷ್ಟು ಹೊತ್ತಾಗುತ್ತದೋ ಎಂದು ಎದುರಿಗೆ ಸಿಕ್ಕ ಹೋಟೆಲೊಂದರಲ್ಲಿ ಕಾಫಿ ಕುಡಿದು ಪಾಸ್ಪೋರ್ಟ್ ಕಛೇರಿಗೆ ಹೊರಟೆವು...ಅಲ್ಲಂತೂ ಹೊರಗಿನಿಂದಲೇ ಸರತಿ ಸಾಲು ಹನುಮಂತನ ಬಾಲದಂತೆ ಉದ್ದವಾಗಿತ್ತು...ಅದನ್ನು ನೋಡಿಯೇ ನನಗೆ ತಲೆ ನೋಯಲಿಕ್ಕೆ ಶುರು ಆಯ್ತು...ಇಲ್ಲಿ ಇನ್ನು ಎಷ್ಟು ಕಾಯಬೇಕೋ ಎಂದು....ಸರಿ ನಮ್ಮ ನಿಗದಿತ ಸಮಯ ಹತ್ತಿರ ಬಂದಂತೆ ತಪಾಸಣೆಯ ನಂತರ ಒಳಬಿಡಲಾಯಿತು..ಅಲ್ಲಿಂದ ಮುಂದೆ ದಾಖಲೆಗಳ ವಿಚಾರಣೆ..ಅಲ್ಲೂ ಸಹಾ ನನ್ನ ಎರಡೆರಡು ಹೆಸರಿನಿಂದ ಗೊಂದಲ...ಹೇಗೋ ಅದೂ ಪರಿಹಾರವಾಗಿ...ನಂತರ ಪುನಃ ಕಾಯುವಿಕೆ..ಆಗಲೇ ಯಜಮಾನರ ಫೋನ್ ರಿಂಗಾಯಿತು..ಅವರು ಮಾತಾಡಿ ನನ್ನ ಹತ್ತಿರ ವಿಷಯ ತಿಳಿಸುವಾಗ ಅವರ ಮುಖ ಕಪ್ಪು ಕಪ್ಪು..."ನಿನ್ನ ತಂದೆ ತೀರಿ ಹೋದ್ರಂತೆ ..ಕಣೆ..ಅತ್ತೆಯ ಫೋನ್..." ಇದನ್ನು ಕೇಳಿಯೇ ನಾನು ಭಾಗಷಃ ಕುಸಿದು ಹೋಗಿದ್ದೆ...ನನ್ನ ಮನಸ್ಸಿಗೆ ಆಗ ಕೂಡಲೇ ಬಂದ ವಿಚಾರ..."ಅಮ್ಮನ ಪರಿಸ್ಥಿತಿ ಹೇಗಿರಬಹುದು...ಅವರ ಹತ್ತಿರ ಅಲ್ಲಿ ಯಾರೂ ಇಲ್ಲ...ತನ್ನ ೪೪ ವರ್ಷ ಜೊತೆಯಾದ ಸಂಗಾತಿ...ಇನ್ನಿಲ್ಲ...ಎಂದು ಹೇಳುವಾಗ ಅವರು ಎಷ್ಟು ನೊಂದಿರಬಹುದು...?

ಕೊನೆಗೆ ನನಗೆ ನಾನೇ ಸಮಾಧಾನ ಮಾಡಿಕೊಂಡು ಇನ್ನು ಮುಂದೆ ಏನು ಮಾಡುವುದು..ಇಬ್ಬರೂ ಚರ್ಚೆ ಮಾಡಿ..ಮೊದಲು ನನ್ನ ಚಿಕ್ಕಪ್ಪ ಶ್ರೀಕಾಂತ್ ಶೆಣೈಯವರಿಗೆ ಫೋನ್ ಮಾಡಿದರೆ..ಅವರ ಫೋನ್ ಸ್ವಿಚಾಫ್ ಎಂದು ಬರುತ್ತಿತ್ತು..ಸರಿ ಈಗೇನು ಮಾಡೋದು ಎಂದು ಚಿಕ್ಕಮ್ಮ ಮಾಲತಿ ಶೆಣೈಯವರಿಗೆ ಫೋನ್ ಮಾಡಿದ್ರೆ..ದೇವರ ದಯ ಅವರ ಜೊತೆ ಸಂಪರ್ಕ ಸಾಧ್ಯ ಆಯ್ತು..ಅವರಿಗೆ ವಿಷಯ ತಿಳಿಸಿದೆ..ಅವರು "ಶ್ರೀಕಾಂತ್ಗೆ ನಾನು ಹೇಳ್ತೀನಿ" ಅಂತ ಹೇಳಿದರು. ಸರಿ ಇನ್ನೊಬ್ಬ ಚಿಕ್ಕಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ...ಸ್ವಲ್ಪ ಹೊತ್ತಿನಲ್ಲಿ ಶ್ರೀಕಾಂತ್ ಚಿಕ್ಕಪ್ಪನ ಫೋನ್ ನನಗೆ ಬಂತು.."ನಾವು ಕೂಡಲೇ ಬೆಂಗಳೂರಿನಿಂದ ಹೊರಡ್ತಾ ಇದ್ದೇವೆ..ಚಿಂತೆ ಮಾಡ್ಬೇಡ..." ಅಂತ..ಪಾಪ ಅವರು ಯಾವುದೋ ಮೀಟಿಂಗ್ನಲ್ಲಿ ಇದ್ದರಂತೆ..ಚಿಕ್ಕಮ್ಮ ಬೇರೆಯವರಿಗೆ ವಿಷಯ ತಿಳಿಸಿ, ನಂತರ ಅವರು ಚಿಕ್ಕಪ್ಪನಿಗೆ ಸುದ್ದಿ ಮುಟ್ಟಿಸಿದ್ದರಂತೆ...ಇನ್ನು ಮುಂದೆ..ಅಮ್ಮ ಆಸ್ಪತ್ರೆಯಲ್ಲಿ ಒಬ್ಬರೇ ಇದ್ದಾರೆ..ಅವರ ಹತ್ತಿರ ಯಾರಾದ್ರೂ ಇರಬೇಕಲ್ವಾ.. ಇದು ನೆನಪಾದಾಗ..ಉಡುಪಿಯಲ್ಲಿ ನನ್ನ ತಂದೆಯ ತಂಗಿ ಮನೆ ಇದೆ..ಅವರ ಗಂಡ ನನ್ನ ರಮೇಶ್ ಮಾವನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ..ಪಾಪ ಅವರು ತಮ್ಮ ಬ್ಯಾಂಕ್ ಕೆಲಸ ಬಿಟ್ಟು..."ನಾನು ಅತ್ತಿಗೆಯ ಜೊತೆ ಇರ್ತೇನೆ..ಶ್ರ್‍ಈಕಾಂತ್ ಬರುವುದು ಹೇಗೂ ತಡ ಉಂಟಲ್ವಾ...ನೀನು ಚಿಂತೆ ಮಾಡ್ಬೇಡಾ..ಮಂಗಳೂರಿನ ಕೆಲಸ ಮುಗಿಸಿಯೇ ಬಾ..ಗಡಿಬಿಡಿ ಮಾಡ್ಬೇಡ"..ಅಂತ ಧೈರ್ಯ ಹೇಳಿದರು...ಇಷ್ಟೆಲ್ಲಾ ಫೋನಲ್ಲಿ ಮಾತುಕಥೆ ಯಾರಿಗೂ ಅಕ್ಕಪಕ್ಕ ಕೂತವರಿಗೆ  ಕೇಳದಂತೆ ಮಾಡಿದ್ದೆ...ಯಾಕೆಂದರೆ ಆ ಆಫೀಸ್ನಲ್ಲಿ..ಮೊಬೈಲ್ ಸ್ವಿಚ್ ಆಫ್ ಮಾಡಿ ಅಂತ ಗಳಿಗೆಗೊಮ್ಮೆ ಹೇಳುತ್ತಿದರು...ನನ್ನ ಗಂಡ ಸಹಾ ತನ್ನ ಅಮ್ಮನಿಗೆ ಕರೆ ಮಾಡಿ ಸ್ವಲ್ಪ ಆಸ್ಪತ್ರೆಗೆ ಹೋಗಿ ಅತ್ತೆಯ ಜೊತೆ ಇರಲಿಕ್ಕೆ ಹೇಳಿದರು...ಇಷ್ಟೆಲ್ಲಾ ಗೊಂದಲದಿಂದ ಈ ಪಾಸ್ಪೋರ್ಟ್ ಬೇಡ...ಏನೂ ಬೇಡ...ಓಡಿ ಹೋಗೋಣ ಅನ್ನಿಸ್ತಾ ಇತ್ತು...ಇದರ ಮಧ್ಯೆ ವಿಷಯ ತಿಳಿದು ಸಂಬಂಧಿಕರು ನನಗೆ ಗಳಿಗೆಗೊಮ್ಮೆ ಫೋನ್ ಮಾಡ್ಲಿಕ್ಕೆ ಪ್ರಾರಂಭ ಮಾಡಿದ್ದರು..ಅವರಿಗೆಲ್ಲಾ ಉತ್ತರಿಸಿ ನಾನಂತೂ ಅರೆಜೀವವಾಗಿದ್ದೆ..ಅಂತೂ ಪಾಸ್ಪೋರ್ಟ್ನ ಎಲ್ಲಾ ಕೆಲಸ ಮುಗಿಸಿ ಹೊರಗೆ ಬರುವಾಗ ೨ ಘಂಟೆಯಾಗುತ್ತಾ ಬಂದಿತ್ತು..


ಇನ್ನು ಉಡುಪಿಗೆ ಒಂದೂವರೆ ಘಂಟೆಗಳ ಪ್ರಯಾಣ... ಹತ್ತಿರವೇ ಇದ್ದ ಬಸ್ ನಿಲ್ದಾಣಕ್ಕೆ ಬಂದಾಗ ವೋಲ್ವೋ ಬಸ್ ಸಿಕ್ಕಿತು...ನನಗೆ ಆ ತಂಪಾದ ಗಾಳಿಯಲ್ಲೂ...ಹೇಳಿಕೊಳ್ಳಲಾಗದ ಅದೇನೋ ಸಂಕಟ...ಏನೇನೋ ಹಳೆಯ ನೆನಪುಗಳು....ಅಪ್ಪನ ಪ್ರೀತಿ, ವಾತ್ಸಲ್ಯ ಎಲ್ಲಾ ಕಣ್ಣ ಮುಂದೆ ಬರುತ್ತಿತ್ತು....ನನಗೆ ಗೊತ್ತಿಲ್ಲದೆ ಕಣ್ಣೀರು ಹರಿಯುತ್ತಿತ್ತು...ಅಷ್ಟು ಸಮಯದಿಂದ ಒತ್ತಿಟ್ಟ ದುಃಖ ಕರಗುತ್ತಿತ್ತು...ಅಂತೂ ಮನೆ ತಲುಪುವಾಗ ೩.೩೦...ಅವಸರದಲ್ಲಿ ಒಂದಿಷ್ಟು ಹಣ ತೆಗೆದುಕೊಂಡು ಸಿಟಿ ಆಸ್ಪತ್ರೆಗೆ ಓಡಿದೆವು...ಈಗ ಅಲ್ಲಿಯ ಲಿಫ್ಟ್ ನಮಗೋಸ್ಕರವೇ ಕಾದಂತೆ ಮೂರನೆಯ ಮಹಡಿ ತಲುಪಿಸಿತು...ಅಮ್ಮನ ಮುಖ ನೋಡಲಿಕ್ಕೂ ನನಗೆ ಏನೋ ಸಂಕಟ...ಆಗಲೇ ತುಂಬಾ ಜನ ಸಂಬಂಧಿಕರು ಅಪ್ಪನ ವಾರ್ಡ್ನಲ್ಲಿ ಇದ್ದರು...ಅಪ್ಪನ ನಿರ್ಜೀವ ದೇಹ...ಐ.ಸಿ.ಯು ಪಕ್ಕದ ರೂಮಿನಲ್ಲಿ ಇಟ್ಟಿದ್ದೇವೆ ಎಂದರು...ಸರಿ ಆ ಕೊಠಡಿಯ ಬಾಗಿಲು ಮುಚ್ಚಿತ್ತು..ನಿಧಾನ ತೆರೆದು ಒಳ ಹೋದರೆ..ಅಪ್ಪನನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಇಡಲಾಗಿತ್ತು..ಬೆಳಿಗ್ಗೆ ಇದ್ದ "ಗುಟುಕು ಜೀವ" ಯಾವಾಗಲೋ ಹಾರಿ ಹೋಗಿತ್ತು..ಇಷ್ಟೆಲ್ಲಾ ಆದ್ರೆ ಆಯ್ತಾ...ಮುಂದಿನ ವ್ಯವಸ್ಥೆ ಏನು ಎಂಬ ಚರ್ಚೆ ಪ್ರಾರಂಭ ಆಯ್ತು..ಶ್ರೀಕಾಂತ್ ಚಿಕ್ಕಪ್ಪ ಬರಲಿಕ್ಕೆ ರಾತ್ರಿಯಾಗುತ್ತೆ...ಅಲ್ಲಿಯ ತನಕ ದೇಹವನ್ನು ಹಾಗೆ ಇಡಲಿಕ್ಕೆ ಸಾಧ್ಯ ಇಲ್ಲ...ಉಡುಪಿಯ ದಹನಕ್ಕೆ ಸಹಾಯ ಮಾಡುವ ಕಾರ್ಯಕರ್ತರು ರಾತ್ರಿ ಬೇಡ...ಮರುದಿನವೇ ಮುಂದೂಡೋಣ ಎಂಬ ಸಲಹೆ ಇತ್ತರು...ಸರಿ..ಅಲ್ಲಿಯ ತನಕ ದೇಹವನ್ನು ಗಾಳಿಗೆ ಇಟ್ಟರೆ ಊದಿಕೊಳ್ಳುವುದರಿಂದ ಶವಾಗಾರದಲ್ಲಿ ಇಡೋಣ ಎಂದು ನಿರ್ಧಾರ ತೆಗೆದುಕೊಂಡೆವು..ಆದರೆ ಆ ಆಸ್ಪತ್ರೆಯಲ್ಲಿ ಶವಾಗಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ..ಪುನಃ "ಮಣಿಪಾಲಕ್ಕೆ" ಸ್ಥಳಾಂತರಿಸಬೇಕಿತ್ತು..ಆಗಲೇ ಸಮಯ ೫.೩೦ ಆಗುತ್ತಾ ಬಂದಿತ್ತು..ಅಲ್ಲಿಯ ಶವಾಗಾರ ಸಂಜೆ ೬ ಘಂಟೆಗೆ ಮುಚ್ಚಿಬಿಡುತ್ತಾರಂತೆ..ಸರಿ..ಆಸ್ಪತ್ರೆ ಡಿಸ್ಚಾರ್ಜ್ನ ಬಿಲ್ಲು ಕಟ್ಟಿ ಆಂಬುಲೆನ್ಸ್ನಲ್ಲಿ ಅಪ್ಪನ ದೇಹವನ್ನು ಮಣಿಪಾಲಕ್ಕೆ ಸ್ಥಳಾಂತರ ಮಾಡಿದೆವು...ನಾನು,ಅಮ್ಮ ಮಾವನ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದ ಎಲ್ಲಾ ಸಾಮಾನುಗಳನ್ನು ತುಂಬಿಸಿಕೊಂಡು ಕಡಿಯಾಳಿಯ ಮನೆಗೆ ಹೊರಟೆವು..ಆದರೆ ನಾವು ಹೋಗುವಾಗ ಇದ್ದ ಜೀವ ಮಾತ್ರ ಪುನಃ ಕರೆತರಲಾಗದೆ ಬರಿಗೈಯ್ಯಲ್ಲಿ ಮನೆಗೆ ಮರಳಿದ್ದೆವು... :(

ಇಷ್ಟೆಲ್ಲಾ ಆಗುವಾಗ ತೀರ್ಥಹಳ್ಳಿಯಿಂದ ಅವರ ಆತ್ಮೀಯರು,ಅಂಗಡಿಯ ಅಕ್ಕಪಕ್ಕದವರು,ಸಂಬಂಧಿಕರು ಅವರನ್ನು ಅಂತಿಮವಾಗಿ ನೋಡಲೆಂದು ಕಾರು,ವ್ಯಾನ್ ಮಾಡಿ ಬಂದರು. ಅವರಿಗೆಲ್ಲಾ....ದಹನ ಕಾರ್ಯ ಮಾರನೇ ದಿನ ಇದ್ದದ್ದರಿಂದ ಅವರನ್ನು ನೋಡಲಾರದೇ ಅಮ್ಮನ ಹತ್ತಿರ ಮಾತನಾಡಿಸಿ ತಮ್ಮ ಊರಿಗೆ ಮರಳಿದರು. ರಾತ್ರಿ ೯ ಘಂಟೆಯ ತನಕ ನಮಗೆ ಇದೇ ಕೆಲಸ..ಅಮ್ಮ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ...ಸ್ವಲ್ಪ ಅನ್ನ ಮಾಡಿ ಬಲವಂತದಿಂದ ಊಟದ ಶಾಸ್ತ್ರ ಮಾಡಿದೆವು...ಸುಮಾರು ೧೧.೩೦ರ ಸಮಯಕ್ಕೆ ಚಿಕ್ಕಪ್ಪ, ಚಿಕ್ಕಮ್ಮ, ಮಕ್ಕಳು ಪರಿವಾರ ಸಮೇತ ಬೆಂಗಳೂರಿನಿಂದ ಬಂದಿಳಿಯುತ್ತಾರೆ..ಸ್ವಲ್ಪ ಅರ್ಧ ಘಂಟೆ ಮಾತಾಡಿ ಎಲ್ಲರೂ ನಿದ್ದೆಯ ಶಾಸ್ತ್ರ ಮಾಡಿದೆವು.

ಮಾರನೇ ದಿನ ಮೇ ೫ ನೇ ತಾರೀಕು...ಬೆಳಕಾಯ್ತು..೮ ಘಂಟೆ ಸುಮಾರಿಗೆ ಎಲ್ಲರೂ ಮಣಿಪಾಲದ ಶವಾಗಾರಕ್ಕೆ ಹೋಗಿ ಅಪ್ಪನ ದೇಹವನ್ನು ಮನೆಗೆ ತರುತ್ತಾರೆ. ಏನೆಲ್ಲಾ ವಿಧಿ-ವಿಧಾನ ಮಾಡಬೇಕಿತ್ತೋ ಅದನ್ನೆಲ್ಲಾ ಮಗನ ಸ್ಥಾನದಲ್ಲಿ ನಿಂತು ಶ್ರೀಕಾಂತ ಚಿಕ್ಕಪ್ಪ ನೆರವೇರಿಸುತ್ತಾರೆ.. ತುಳಸಿಕಟ್ಟೆಯ ಹತ್ತಿರ ಅವರ ದೇಹಕ್ಕೆ ನೀರು ಹೊಯ್ದು  ಮನೆಯವರೆಲ್ಲಾ ಎಳ್ಳು-ನೀರು ಬಿಟ್ಟು ಕಡೆಯ ಸಲ ನಮ್ಮ ನಮನ ಸಲ್ಲಿಸಿದ್ದೆವು..ತೀರ್ಥಹಳ್ಳಿಯಿಂದ ಪುನಃ ಅವರ ಅಭಿಮಾನಿಗಳು...(ಅವರು ಅಲ್ಲಿಯ ವೆಂಕಟರಮಣ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದರಿಂದ ಅಲ್ಲಿಯ ಕಮಿಟಿ ಸದಸ್ಯರು ಬಂದಿದ್ದರು) ಸಂಬಂಧಿಕರು ಬಂದಿದ್ದರು.. ಪುನಃ ಅವರನ್ನು ಅಂಬುಲೆನ್ಸ್ನಲ್ಲಿ ಉಡುಪಿಯ ಬೀಡಿನಗುಡ್ಡೆಯ ಸ್ಮಶಾನಕ್ಕೆ ಕೊಂಡೊಯ್ದು  ಅಲ್ಲಿ ದಹನ ಕಾರ್ಯ ನಡೆಸಲಾಯಿತು....

ಇಷ್ಟಕ್ಕೆಲ್ಲಾ ಕಾರಣವಾದ ವಿಷಯವೆಂದರೆ...ಅವರು ಕೆಲವು ವರ್ಷಗಳಿಂದ ಸೇವಿಸುತ್ತಿದ್ದ ಒಂದು ರಕ್ತದೊತ್ತಡದ ಮಾತ್ರೆ...ಅದರ ಅಡ್ದ ಪರಿಣಾಮದಿಂದ..ಯಾವುದೇ ಧೂಮಪಾನ, ಮಧ್ಯಪಾನದ ಚಟ ಇಲ್ಲದ ಮನುಷ್ಯನ ಯಕ್ರುತ್ತು(ಲಿವರ್), ಕುಡುಕರ ಲಿವರ್ನಂತೆ ಕಾರ್ಯನಿರ್ವಹಿಸುತ್ತಿರಲಿಲ್ಲ...ಇಡೀ ಮೈಯೆಲ್ಲಾ ನೀರು ತುಂಬಿಕೊಂಡು..ಕಲ್ಮಶಗಳು ಹೊರಗೆ ಹೋಗದೇ ಅವರು ಬೆಲೂನಿನಂತೆ ಉಬ್ಬುತ್ತಿದ್ದರು..  ಮಾತ್ರೆಗೆ ಕಡಿಮೆಯಾಗದ ಇದು ಇಂಜಕ್ಶನ್ ಮೂಲಕ ಅವರ ತೂಕವನ್ನು ಕಡಿಮೆ ಮಾಡಿಸಲು ಆಗಾಗ್ಗೆ ಮಣಿಪಾಲದ ಆಸ್ಪತ್ರೆಗೆ ಸೇರಿಸಬೇಕಿತ್ತು...


ವಿಪರ್ಯಾಸವೆಂದರೆ...ಕಳೆದ ವರ್ಷ ಮೇ..೫ನೇ ತಾರೀಖಿನಂದು ನನ್ನ ಮಗನ ಉಪನಯನ(ಬ್ರಹ್ಮೋಪದೇಶ). ಅವತ್ತು ನಗುತ್ತಾ, ಎಲ್ಲರೊಡನೆ ಮಾತನಾಡುತ್ತಾ..ಮೊಮ್ಮಗನ ಉಪನಯನದ ಸಂತೋಷ ಅನುಭವಿಸಿದ ಅಜ್ಜ...ಈ ವರ್ಷ ಅದೇ ಮೇ ೫ರಂದು...ಯಾರೊಡನೆ ಮಾತನಾಡದೇ ಸ್ಮಶಾನದ ಚಿತೆಯಲ್ಲಿ ಬೂದಿಯಾಗಿದ್ದರು.. 







ಈ ಚಿತ್ರದಲ್ಲಿ ಎಡದಿಂದ ಮೊದಲನೆಯವರು ನನ್ನ ಮಾಲತಿ ಚಿಕ್ಕಮ್ಮ, ಅವರ ಪಕ್ಕ ಎರಡೆನೆಯವರು ನನ್ನ ತಂದೆ ಟಿ.ವಿ.ಅನಂತ ಶೆಣೈ(ಬಿಳಿ ಮುಂಡು, ಶರ್ಟ್ ಧರಿಸಿದವರು), ಮೂರನೆಯವರು ನನ್ನ ಶ್ರೀಕಾಂತ್ ಚಿಕ್ಕಪ್ಪ, ನಾಲ್ಕನೆಯವರು ನನ್ನ ಇನ್ನೊಬ್ಬ ನಾಗರಾಜ್ ಚಿಕ್ಕಪ್ಪ...ಈ ಚಿತ್ರ ನನ್ನ ಮಗನ ಉಪನಯನದ ದಿನ ತೆಗೆದದ್ದು....ಈಗ ಉಳಿದಿರುವುದು ಕೇವಲ ಈ ಚಿತ್ರಗಳು ಮತ್ತು ನೆನಪುಗಳು ಮಾತ್ರ....

Friday, 31 August 2012

ಪುಟ್ಟಕ್ಕನ ಪ್ರೀತಿಯ ತಮ್ಮ...

ಒಂದೇ ತಾಯಿಯ ಹೊಟ್ಟೆಯಲ್ಲಿ  ಹುಟ್ಟಿದರೆ ಮಾತ್ರ ಅಕ್ಕ-ತಮ್ಮ, ಅಣ್ಣ-ತಂಗಿ ಸಂಬಂಧಾನ...?? ಖಂಡಿತಾ ಇದು ತಪ್ಪು 
ಅಭಿಪ್ರಾಯ ಅಂತ ಪುಟ್ಟಕ್ಕನ ಅನುಭವದ ಮಾತು.

ಪುಟ್ಟಕ್ಕ ಒಬ್ಬ ಸಾಮಾನ್ಯ ಗೃಹಿಣಿ.. ತನ್ನ ತಂದೆ ತಾಯಿಗೆ ಒಬ್ಬಳೇ ಮಗಳು. ಮದುವೆಯಾಗಿ ಸ್ವಲ್ಪ ವರ್ಷ ಕಳೆದಿವೆ.. ಅವಳದು ಸುಖೀ ಸಂಸಾರ. ಜೀವನದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಅವಳ ಜೀವನದಲ್ಲಿ ಅವಳಿಗೆ ಬೇಕನಿಸಿದ್ದೆಲ್ಲಾ ಸಿಕ್ಕಿದೆ. ಅವಳು ಶಾಲೆ, ಕಾಲೇಜಿಗೆ ಹೋಗುವಾಗ ಯಾವುದೇ ಸಮಸ್ಯೆ, ತೊಂದರೆ ಇರಲಿಲ್ಲ. ಅವಳನ್ನೆಂದೂ ಒಂಟಿತನ ಕಾಡಿದ್ದಿಲ್ಲ.. ಆದರೆ ಮದುವೆ ಆದ ಮೇಲೆ ಏನೋ ಕೊರತೆ ಅವಳ ಮನಸ್ಸಿನಲ್ಲಿ ಯಾವಾಗಲೂ ಕಾಡುತ್ತಿತ್ತು. ಅವಳ ಎಷ್ಟೋ ವಿಚಾರಗಳನ್ನು ತನ್ನ ತಂದೆ ತಾಯಿಯರ ಹತ್ತಿರ ಹೇಳಿಕೊಳ್ಳಲು ಆಗದೇ ಅವಳ ಮನಸ್ಸಿನಲ್ಲೇ ಅದು  ಉಳಿದುಹೋಗುತ್ತಿತ್ತು . ಕಾರಣ ಇಷ್ಟೆ..ತನ್ನ ನೋವನ್ನು ಅವರ ಹತ್ತಿರ ಹೇಳಿದರೆ..ಅವರೆಲ್ಲಿ ನೋವು ಪಡುತ್ತಾರೋ ಎಂದು ಅವಳ ಚಿಂತೆ..ಆಗೆಲ್ಲಾ ಅವಳಿಗೆ ಅನಿಸಿದ್ದುಂಟು..ತನಗೂ ಯಾರಾದರು ಒಡಹುಟ್ಟಿದವರಿದ್ದರೆ ನನ್ನ ಮನಸ್ಸಿನ ಮಾತುಗಳನ್ನು, ,ಭಾವನೆಗಳನ್ನು ಅವರ ಬಳಿ 
ಹಂಚಿಕೊಳ್ಳಬಹುದಿತ್ತು..ಎಂದು ಎಷ್ಟೋ ಸಾರಿ ದುಃಖ ಪಟ್ಟಿದ್ದುಂಟು.. ಕುಟುಂಬ ಸದಸ್ಯರು ಒಟ್ಟಾದಾಗ ಸಹೋದರ,ಸಹೋದರಿಯರ ಒಡನಾಟ, ಪ್ರೀತಿ, ನಗು, ಅವರ ಒಬ್ಬರ ಕಷ್ಟಕ್ಕೆ ಇನ್ನೊಬ್ಬರ ಸಹಾಯ ಇದನ್ನೆಲ್ಲಾ ನೋಡುವಾಗ ಪುಟ್ಟಕ್ಕನಿಗೆ ಅನಿಸಿದ್ದುಂಟು...ನನ್ನ ಜೀವನದಲ್ಲಿ ನಾನು ಮಹತ್ವವಾದ ಸಂಬಂಧವೊಂದನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನೋವುಪಟ್ಟಿದ್ದುಂಟು..


ಹೀಗೆ ದಿನಗಳು ಸಾಗುತ್ತಿರುವಾಗ ಫ಼ೇಸ್ ಬುಕ್ ಎಂಬ ಸಾಮಾಜಿಕ ತಾಣದಲ್ಲಿ ಯಾರೋ ಫ಼್ರೆಂಡ್ ಮೂಲಕ ಒಬ್ಬ ಹುಡುಗ 
ಅವಳಿಗೆ ಪರಿಚಯ ಆಗುತ್ತಾನೆ. ಅವನು ವಯಸ್ಸಿನಲ್ಲಿ ಅವಳಿಗಿಂತ ಒಂದೆರಡು ವರ್ಷ ಚಿಕ್ಕವನೇ ಆದರೂ ಅವನ ಸಾಹಿತ್ಯ 
ಪ್ರೀತಿ, ಅವನ ಬರಹ, ಲೇಖನಗಳು, ಕವನಗಳು ಎಂಥವರನ್ನು ಮೆಚ್ಚಿಸುತ್ತದೆ. ಅವನ ವಯಸ್ಸಿಗೆ ಮೀರಿದ ಪ್ರತಿಭೆ ಪುಟ್ಟಕ್ಕನಿಗೆ 
ನಿಜವಾಗಲೂ ಆಶ್ಚರ್ಯ ಮೂಡಿಸುತ್ತದೆ. ಸುಮಾರು ಜೂನ್ ಜುಲೈ ತಿಂಗಳಲ್ಲಿ ಅವರ ಪರಿಚಯ..ಹಾಯ್, ಹಲೋ ಗುಡ್ಮಾರ್ನಿಂಗ್ ಎಂದು ಪ್ರಾರಂಭವಾಗುತ್ತದೆ..

ಅವತ್ತು  ಆಗಸ್ಟ್ ತಿಂಗಳ ಎರಡನೆ ತಾರೀಕು..ಶುಭ ಶುಕ್ರವಾರ ಅವತ್ತು ರಕ್ಷಾಬಂಧನ..ಅವನ ಇಮೈಲ್ಗೆ ಪುಟ್ಟಕ್ಕ ರಾಖಿಯ ಶುಭಾಶಯ ಕಳಿಸುತ್ತಾಳೆ.  ಅವತ್ತು ಚಾಟಿಂಗ್  ಮಾಡುವಾಗ....ಪುಟ್ಟಕ್ಕ  ಯಾವುದೋ ವಿಷಯಕ್ಕೆ  " ನನಗೆ ಯಾರು ಅಕ್ಕ , ತಮ್ಮ, ಅಣ್ಣ, ಇಲ್ಲಪ್ಪ ಜಗಳ ಆಡೋದಿಕ್ಕೆ "ಅಂದಾಗ..."ನಂಜೊತೆ ಜಗಳ ಅಡು" ಅಂದಿದ್ದ ಆ ಹುಡುಗ...ಹೀಗೇ ಏನೋ ವಿಷಯಕ್ಕೆ ಪುಟ್ಟಕ್ಕ "ಹೌದಾ"ಅಂದಿದ್ದಕ್ಕೆ.."ಹೌದಾ" ಶಬ್ದದ ಇನ್ನೊಂದು ಅರ್ಥ "ಅಂಬಾರಿ" ಅಂತ ವಿಕಿಪಿಡಿಯಾದ ಲಿಂಕ್ ಕಳಿಸಿ ಸುಸ್ತಾಗಿಸಿದ್ದ ಪುಟ್ಟಕ್ಕನಿಗೆ..ಆಗ ಪುಟ್ಟಕ್ಕ ಮನಸ್ಸಿನಲ್ಲೇ "ಈ ಹುಡುಗನಿಂದ ತುಂಬಾ ಹೊಸ ಹೊಸ ವಿಷಯ ಕಲಿಯಲಿಕ್ಕೆ  ಇದೆ ಅಂದುಕೊಳ್ತಾಳೆ.." 

ಹಾಗೆ ಚಾಟಿಂಗ್ ಮುಂದುವರೆಸ್ತಾ ಇರೋವಾಗ "ನಿಮ್ಮ ಅಭ್ಯಂತರ ಇಲ್ಲದಿದ್ದರೆ ನಿಮ್ಮ ಫೋನ್ ನಂಬರ್ ಕಳಿಸ್ತೀರಾ" ಅಂದಾಗ ಪುಟ್ಟಕ್ಕನಿಗೆ ನಿಜವಾಗ್ಲೂ ಒಮ್ಮೆ ಹೆದರಿಕೆ ಆಗುತ್ತೆ..ಯಾಕಪ್ಪ ಅಂದಾಗ "ಸುಮ್ನೆ ತಲೆತಿನ್ನೋಕೆ" ಅಂತಾನೆ.."ತಮಾಶೆ ಮಾಡ್ತಾ ಇದ್ದೀರಾ" ಎಂದಾಗ "ಇಲ್ಲ ಸೀರಿಯಸ್ಸಾಗೆ ಕೇಳ್ತಾ ಇದ್ದೀನೆ" ಅಂತಾನೆ ಅವನು.. ಸ್ವಲ್ಪ ಹೊತ್ತು ಏನೆಲ್ಲಾ ಮಾತುಕತೆ ಆದಮೇಲೆ, "ಯಾಕೊ ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಾ ಇದೆ" ಅಂದಾಗ ಪುಟ್ಟಕ್ಕನಿಗೆ ಏನು ಜವಾಬು ಹೇಳಬೇಕು ಅಂತಾನೆ ತಿಳಿಯೋದಿಲ್ಲ.."ಅಲ್ಲಪ್ಪ ಇಷ್ಟು ಹೊತ್ತು ಅದೇ ತಾನೇ ಮಾಡಿದ್ದು" ಅಂದಾಗ "ಅದು ಚಾಟಿಂಗ್" ಅನ್ತಾನೆ... ಅದಕ್ಕೆ ಪುಟ್ಟಕ್ಕ "ನೋಡಪ್ಪ ಚಾಟಿಂಗ್ಗೂ ಫೋನಲ್ಲಿ ಮಾತಾಡಲಿಕ್ಕೂ ಅಂತಹಾ ವ್ಯತ್ಯಾಸ ಏನೂ ಇಲ್ಲ" ಅಂದಾಗ ಸಿಟ್ಟು ಬಂದು ಟು..ಟು..ಬೈ..ಬೈ ..ಅಂತಾನೆ...ಪುನಃ ಏನೋ ಪುಟ್ಟಕ್ಕ ಪ್ರಶ್ನೆ ಕೇಳಿದಾಗ "ನಿಮ್ಮ ನಂಬರ್ ಹೇಳಿದ್ರೆ ಮಾತ್ರ ಉತ್ತರ ಕೊಡ್ತೇನೆ ಅಂತಾನೆ "ಏನು ಬ್ಲಾಕ್ಮೇಲ್ ಮಾಡ್ತಾ ಇದ್ದೀರಾ" ಅಂದಾಗ "ಕೊನೆಗೂ ನೀವು ನಿಮ್ಮ ನಂಬರ್ ಕೊಡೊಲ್ವಾ"ಅಂತಾನೆ..ಅದಕ್ಕೆ ಪುಟ್ಟಕ್ಕ "ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡೋ ತನಕ ಖಂಡಿತಾ ಇಲ್ಲ... ದ್ವೇಷ" ಅಂತಾಳೆ...ಅದಕ್ಕೆ ಅವನು "ಓ ದೇವರೆ ನಿಮ್ಮ ದ್ವೇಷಕ್ಕೆ ನನ್ನ ಜವಾಬು" ಎಂದು ತನ್ನ ಮೊಬೈಲ್ ನಂಬರ್ ನೀಡುತ್ತಾನೆ... ಪುಟ್ಟಕ್ಕ ಆ ನಂಬರನ್ನು ತನ್ನ ಮೊಬೈಲ್ನಲ್ಲಿ ಸೇವ್ ಮಾಡಿ ಇಡುತ್ತಾಳೆ...ಆದರೆ ಆ ಶುಕ್ರವಾರದ ರಾತ್ರಿ ಮಾತ್ರ ಪುಟ್ಟಕ್ಕನಿಗೆ ನಿದ್ದೆ ಬರುವುದಿಲ್ಲ..ಆ ಹುಡುಗ ಹೇಳಿದ ಮಾತು "ಯಾಕೊ ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಾ ಇದೆ" ಇದನ್ನು ಯೋಚನೆ ಮಾಡಿಯೆ ಅವಳ ಮನಸ್ಸು ಯಾಕೋ ಅಶಾಂತಿಯ ಗೂಡಾಗುತ್ತದೆ... ಈ ಹುಡುಗ ಯಾಕೆ ಹೀಗೆ ತನಗೆ ಕಾಡ್ತಾ ಇದ್ದಾನೆ ಅಂತ ಯೋಚಿಸುತ್ತಾಳೆ..ಯಾಕೋ ಈ ಹುಡುಗ ತನ್ನ ಮನಸ್ಸಿಗೆ ತುಂಬಾ ಹತ್ತಿರ ಆಗ್ತಾ ಇದ್ದಾನೆ ಅಂತಹ ಅನುಭವ..ಹೀಗೆ ನಿದ್ದೆ ಇಲ್ಲದೆ ರಾತ್ರಿ ಕಳೆಯುತ್ತಾಳೆ
..



ಮರುದಿನ ಆಗಸ್ಟ್ ನಾಲ್ಕನೆಯ ತಾರೀಕು.. ಪುನಃ ಚಾಟಿಂಗ್ನಲ್ಲಿ ಇಬ್ಬರೂ ಸಿಗುತ್ತಾರೆ..ಅವನಿಗೆ ಏನೇ ಪ್ರಶ್ನೆ ಕೇಳಿದರು "ಸಿಬಿಐ 
ಕೆಲಸಾನ" ಅಂತ ಕೇಳುವ ಅಭ್ಯಾಸ.."ನಿಮಗೆ ಉತ್ತರ ಬೇಕಾದ್ರೆ ಫೋನ್ ನಂಬರ್ ಕೊಡಿ ಇದೇ ಅವನ ಅಸ್ತ್ರವಾಗಿತ್ತು..ಪುಟ್ಟಕ್ಕನಿಗಂತೂ ಹಿಂಸೆ.."ನೀವು ನಿಮ್ಮ ಅಕ್ಕ ತಂಗಿ ಹತ್ತಿರ ಹೀಗೆ ಜಗಳ ಆಡ್ತೀರಾ" ಅಂದದ್ದಕ್ಕೆ..."ತಮಗೂ 
ಅದೇ ಪ್ರಶ್ನೆ" ಅಂತಾನೆ..."ಏನು ಮಾಡ್ಲಪ್ಪ ನಮಗೆ ಯಾರು ಒಡಹುಟ್ಟಿದವರಿಲ್ಲ..ಗೊತ್ತುಂಟಲ್ಲ".. ಅಂದದ್ದಕ್ಕೆ 
"ಅಕ್ಕ..ನಾನಿದ್ದೀನಲ್ಲ ನನ್ನ ಜೊತೆ ಜಗಳ ಆಡು ಅಂತಾನೆ"...ಅದಕ್ಕೆ ಪುಟ್ಟಕ್ಕ "ಮತ್ತೇನು ಮಾಡೋದು ...ಅದೇ ಗತಿ" 
ಅಂತಾಳೆ...ಆ ಹುಡುಗನಿಗೆ ನಿಜಕ್ಕೂ ನಗು ಬಂದಿರಬೇಕು.. ಹೀಗೆ ಆ ದಿನ ಸಹಾ ಪುಟ್ಟಕ್ಕ ಅವನಿಗೆ ತನ್ನ ನಂಬರ್ 
ಕೊಡೋದಿಲ್ಲ..

ಅವತ್ತು ಆಗಸ್ಟ್ ಐದನೆಯ ತಾರೀಕು...ಭಾನುವಾರ.."ಸ್ನೇಹಿತರ ದಿನಾಚರಣೆ" ..ಬೆಳಿಗ್ಗೆಯೆ ಶುಭಾಶಯ ಕೋರುತ್ತಾನೆ ಹುಡುಗ... ಪುನಃ ಸಂಜೆ ಚಾಟಿಂಗ್ನಲ್ಲಿ ಸಿಕ್ಕಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ತಾರೆ..ಅದಕ್ಕೆ ಹುಡುಗ .."ನಾನೆ ಗೆದ್ದೆ..ನಿಮ್ಮ ವಿಶಯ ಎಲ್ಲ ಹೇಳಿದ್ರಿ" ಅಂತಾನೆ..ಆಮೇಲೆ..."ನಿಮಗೊತ್ತಾ ಅಕ್ಕ..ನಾನು ಈ ತನಕ ಇಷ್ಟು ಸಮಯ ಯಾರ ಹತ್ತಿರ ಚಾಟಿಂಗ್ ಮಾಡಿದ್ದಿಲ್ಲ..." ಅಂತಾನೆ..."ಹಾಗಾದ್ರೆ  ನನ್ನ ಹತ್ತಿರ ಇಷ್ಟು ಸಮಯ ಚಾಟಿಂಗ್ ಮಾಡಿದ್ದಕ್ಕೆ ಕಾರಣವೇನು"....? ಪುಟ್ಟಕ್ಕ  ಕೇಳ್ತಾಳೆ..."ನೀವು ನನ್ನ ಪ್ರೀತಿಯ ಅಕ್ಕ ಅಲ್ವಾ..." ಹುಡುಗನ ಉತ್ತರ...
"ಧನ್ಯವಾದ ಕಣಪ್ಪ..ಈ ವಿಷಯ ಮೊನ್ನೆ ಶುಕ್ರವಾರವೆ ನನ್ನ ಅನುಭವಕ್ಕೆ ಬಂದಿದೆ. ನೀನು ಹೇಳಿದ ಒಂದು ಮಾತು ನನ್ನ ಮನಸ್ಸನ್ನೇ ಆ ದಿನ ಅಲ್ಲೋಲ ಕಲ್ಲೋಲ ಮಾಡಿತ್ತು" ಎಂದಾಗ "ಯಾವ ಮಾತಕ್ಕ" ಅನ್ನುತ್ತಾನೆ..."ಯಾಕೊ ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಾ ಇದೆ"  ಅಂದೆಯಲ್ಲ ನೆನಪಿದೆಯಾ"...? ಅದು ಎನ್ನುತ್ತಾಳೆ ಪುಟ್ಟಕ್ಕ...

"ಓ ...ಅದಾ...ನನ್ನ ಹತ್ತಿರ ಸುಮಾರು ೫೦೦ಕ್ಕಿಂತಲೂ ಹೆಚ್ಚಿನ ನಂಬರ್ಗಳಿವೆ..ನಾನು ಯಾರ ಹತ್ತಿರ ಆದ್ರೂ ಮಾತಾಡೋದು ತುಂಬಾ ಕಡಿಮೆ..ನನಗೆ ಯಾರ ಹತ್ತಿರ ಆದ್ರೂ ಮಾತಾಡಬೇಕು ಅನ್ನಿಸಿದ್ರೆ ಅವರು ತುಂಬಾ ಸ್ಪೆಶಲ್ ಆಗಿರ್ತಾರೆ.." ಇದು ಆ ಹುಡುಗನ ಉತ್ತರ ಆಗಿತ್ತು... ಹೀಗೆ ಆ ಹುಡುಗನ ಜೊತೆ ಚಾಟಿಂಗ್ ಮುಗಿದ ಮೇಲೆ ಪುಟ್ಟಕ್ಕನಿಗೆ ಏನನ್ನಿಸಿತೋ...ಅವನ ಮೊಬೈಲ್ಗೆ ಫೋನ್ ಮಾಡುತ್ತಾಳೆ..ಆ ಕಡೆಯಿಂದ ಹುಡುಗನಿಗೆ ನಿಜಕ್ಕೂ ಆಶ್ಚರ್ಯ ಆಗಿರಬೇಕು...ಇಬ್ಬರಿಗೂ ಐದು ನಿಮಿಷ ಮಾತಾಡಲಿಕ್ಕೆ ಏನೂ ವಿಷಯ ಇರಲಿಲ್ಲ...ಇಬ್ಬರೂ..ಬೆ..ಬ್ಬೆ...ಬ್ಬೆ..ಅಂತ ತೊದಲುತ್ತಿದ್ದರು....ಹೇಗೆ ಮಾತು ಮುಂದುವರಿಸಬೇಕೆಂದು ಇಬ್ಬರಲ್ಲೂ ಗೊಂದಲ..ಗಂಟೆಗಟ್ಟಲೆ ಚಾಟಿಂಗ್ ಮಾಡಿದ ಇಬ್ಬರಿಗೂ ಆ ಐದು ನಿಮಿಷ ಫೋನ್ನಲ್ಲಿ ಮಾತಾಡ್ಲಿಕ್ಕೆ ಕಷ್ಟವಾದ ದಿನವದು...ಆದರೂ ಸ್ನೇಹಿತರ ದಿನಾಚರರಣೆಗೆ ಒಳ್ಳೆಯ ಉಡುಗೊರೆ ಇಬ್ಬರಿಗೂ ಸಿಕ್ಕಿತ್ತು...
ಕೊನೆಗೆ ಪುಟ್ಟಕ್ಕನ ಎಸ್ ಎಮ್ ಎಸ್ ಹೀಗಿತ್ತು.."ತಮ್ಮಾ ...ಮೆಸ್ಸೇಜ್ ಮಾಡೋದು ಸುಲಭ...ಆದರೆ ಮಾತಾಡೋದು ತುಂಬಾ ಕಷ್ಟ..." ಅವನಿಗೂ ಬಹುಶಃ ಹಾಗೇ ಅನಿಸಿರಬೇಕು...."ತುಂಬಾ ಸಂತೋಷ ಆಯ್ತು" ಅವನ ಮರುತ್ತರ ಬಂದಿತ್ತು.

ಆದರೆ ಈಗ ಪುಟ್ಟಕ್ಕನ ಜೀವನದಲ್ಲಿ ತುಂಬಾ ಬದಲಾವಣೆ...ಐದು ನಿಮಿಷ ಮಾತಾಡಲಿಕ್ಕೆ ಒದ್ದಾಡುತ್ತಿದ್ದವರು ಈಗ ಒಂದು ಘಂಟೆಗೂ ಕಡಿಮೆ ಎಂದಿಗೂ ಮಾತು ಮುಗಿಸಿದ್ದಿಲ್ಲ... ಈಗ ಮೆಸೇಜ್ಗಿಂತಲೂ ಫೋನ್ ಮಾಡಿದರೆ ತುಂಬಾ ಒಳ್ಳೆಯದು ಎಂಬ ಭಾವನೆ ಪುಟ್ಟಕ್ಕನಿಗೆ..ಆ ಹುಡುಗನಿಂದ ಫೋನ್ ಬಂದು ೪-೫ ದಿನ ಕಳೆದರೆ ಪುಟ್ಟಕ್ಕ ಆಲೋಚನೆ ಮಾಡ್ತಾಳೆ...ಏನಪ್ಪ...ತುಂಬಾ ದಿನ ಆಯ್ತು...ಅವನ ಹತ್ತಿರ ಮಾತಾಡಿ ಎಂದು.... ಆ ಹುಡುಗನಂತೂ ತುಂಬಾ ಅಂರ್ತಮುಖಿ ತನ್ನ ಜೀವನದ ನೋವನ್ನು  ಯಾರ ಹತ್ತಿರವೂ ಹಂಚಿಕೊಂಡವನಲ್ಲ..ಅಂಥಹ ಹುಡುಗ ಪುಟ್ಟಕ್ಕನ ಹತ್ತಿರ ಮನ ಬಿಚ್ಚಿ ಹೇಳಿಕೊಳ್ಳುತ್ತಾನೆ..ಇದರಿಂದ ಪುಟ್ಟಕ್ಕನಿಗೆ ತುಂಬಾ ಖುಷಿ...ಏಕೆಂದರೆ..ಯಾವುದೇ ವ್ಯಕ್ತಿಯಾಗಲಿ ತನ್ನ ಜೀವನದ ಸಂಗತಿಗಳನ್ನು ಆತ್ಮೀಯರಲ್ಲಿ ಮಾತ್ರ ಹೇಳಿಕೊಳ್ಳುತ್ತಾನೆ..ಯಾರದ್ದಾದರು ಜೀವನದಲ್ಲಿ ಒಬ್ಬ ನಂಬಿಕೆಯ ವ್ಯಕ್ತಿಯ ಪಾತ್ರವಹಿಸುವುದು ಸುಲಭದ ಮಾತಲ್ಲ...ಅದೂ ಇಂಥಹ ಫೇಸ್ಬುಕ್ ಎಂಬ ಮಾಯಾಜಾಲದಲ್ಲಿ...ಆದರೂ ಆ ಹುಡುಗನ ಪ್ರೀತಿಗೆ ತಾನು ಅರ್ಹಳು, ಅವನ ಬದುಕಿನಲ್ಲಿ ತನಗೂ ಚಿಕ್ಕ ಸ್ಥಾನ ಇದೆ ಎಂಬ ಭಾವನೆಯೆ ಅವಳಿಗೆ ಸಂತೋಷದ ವಿಷಯ..

ಪುಟ್ಟಕ್ಕನಿಗೆ ಈಗ ತನ್ನ ಬಾಲ್ಯದ ಜೀವನ ಮರುಕಳಿಸುತ್ತಿದೆ ಎಂಬ ಅನುಭವ...ಆ ಹುಡುಗನ ಜೊತೆ ಪ್ರೀತಿಯ ಮಾತುಕತೆ, ಜಗಳ, ಕೋಪ, ಸಮಾಧಾನ, ತನ್ನ ಮನಸ್ಸಿನ ಭಾವನೆ ಸಹಾ ಅವನೊಂದಿಗೆ ಹಂಚಿಕೊಳ್ಳುತ್ತಾಳೆ...ಅವಳು ಏನೆಲ್ಲಾ ಕಳೆದುಕೊಂಡಿದ್ದಳೋ...ಅದೆಲ್ಲಾ ಪುನಃ ಅವಳಿಗೆ ಸಿಕ್ಕಿದೆ..ಒಮ್ಮೆ ಏನೋ ಸಣ್ಣ ವಿಷಯಕ್ಕೆ ಆ ಹುಡುಗನ ತಪ್ಪು ಇಲ್ಲದಿದ್ದರೂ ಅವನ ಮನಸ್ಸನ್ನು ನೋಯಿಸಿ ಪಶ್ಚಾತಾಪ ಪಟ್ಟಿದ್ದಾಳೆ...ಅದಕ್ಕೆ ಆ ಹುಡುಗನ ಉತ್ತರ "ಭಿನ್ನಾಭಿಪ್ರಾಯಗಳು ಮನುಷ್ಯರ ಸಂಬಂಧಗಳನ್ನು ಇನ್ನು ಗಟ್ಟಿಗೊಳಿಸುತ್ತದಂತೆ" .... ಒಮ್ಮೆ ಅವನ ಪರಿಚಯವಾದ ಪ್ರಾರಂಭದಲ್ಲಿ ಪುಟ್ಟಕ್ಕ ಅವನಿಗೆ ಒಂದು ಪ್ರಶ್ನೆ ಕೇಳಿದ್ದಳು..."ಸಹೋದರಿ ಆತ್ಮೀಯ ಸ್ನೇಹಿತೆ ಅಂತೆ ..ಹೌದಾ" ಎಂದು...? ಅದಕ್ಕೆ ಅವನ ಉತ್ತರ...."ಇರಬಹುದು"....ಆಮೇಲೆ ಸ್ವಲ್ಪ ದಿನ ಬಿಟ್ಟು ಪುನಃ ಅದೇ ಪ್ರಶ್ನೆ ಕೇಳಿದಾಗ...ಅವನ ಉತ್ತರ..."ಹಾಗೇ ಅನಿಸುತ್ತೆ.."  ನೋಡೋಣ...ಇನ್ನೊಮ್ಮೆ ಅದೇ ಪ್ರಶ್ನೆ ಕೇಳಿದರೆ ಅವನ ಉತ್ತರ ಹೇಗಿರಬಹುದು...ಎಂದು ಪುಟ್ಟಕ್ಕನ ಯೋಚನೆ... :) ಕೆಲವೊಮ್ಮೆ ಫೋನ್ ಮಾಡಿ ಮಾತಾಡುವಾಗ... ಎಷ್ಟೋ ಕಿಲೋಮೀಟರ್ ದೂರದಲ್ಲಿದ್ದರೂ ಅದು ಹೇಗೆ ಸಂಬಂಧಗಳು ಬೆಸೆಯುತ್ತದೋ ಇಬ್ಬರಿಗೂ ಕೆಲವೊಮ್ಮೆ ಆಶ್ಚರ್ಯ ಆಗುವುದುಂಟು..

ಪುಟ್ಟಕ್ಕನಿಗೆ ಮಂತ್ರಾಲಯದ ಗುರುಗಳು.. ರಾಘವೆಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ, ನಂಬಿಕೆ...ಆ ಹುಡುಗ ರಾಘವೇಂದ್ರ  ಸ್ವಾಮಿಗಳ ಆರಾಧನೆಯ ಸಮಯದಲ್ಲಿ ಪರಿಚಯವಾಗಿ ತುಂಬಾ ಆತ್ಮೀಯನಾಗಿದ್ದಾನೆ..ಜೊತೆಗೆ ರಕ್ಷಾಬಂಧನದ ಸಮಯ..ಸ್ನೇಹಿತರ ದಿನಾಚರಣೆಯಂದು ಮೊದಲ ಮಾತುಕತೆ...ಎಲ್ಲಾ ಶುಭಶಕುನ ಅನಿಸುತ್ತಿದೆ...ಅವನು ಎಲ್ಲಾದರು ಇರಲಿ...ಅವನ ಮುಂದಿನ ಜೀವನ ಚೆನ್ನಾಗಿರಲಿ..ಅವನು ಇಷ್ಟಪಟ್ಟಿದ್ದೆಲ್ಲಾ ಅವನಿಗೆ ಯಾವುದೇ ಸಮಸ್ಯೆ ಇಲ್ಲದೇ ಲಭಿಸಲಿ..ಎಂದು ಆ ದೇವರಲ್ಲಿ ಪುಟ್ಟಕ್ಕನ  ಪ್ರಾರ್ಥನೆ...

ಅಂದ  ಹಾಗೆ ಇನ್ನೊಂದು  ತಮಾಷೆಯ ವಿಷಯವೆಂದರೆ ಅವಳಿಗೆ "ಪುಟ್ಟಕ್ಕ" ಎಂದು ಒಮ್ಮೆ ಆ ಹುಡುಗನೇ ಚಾಟಿಂಗ್ ಮಾಡುವಾಗ ಇಟ್ಟ ಹೆಸರು..  :)










































Monday, 13 August 2012

ಆ ದಿನದ ನೆನಪು




ಇನ್ನೊಂದು ತಿಂಗಳು ಕಳೆದರೆ ಈ ಘಟನೆ ನಡೆದು ೧೧ ವರ್ಷ ತುಂಬುತ್ತದೆ...ಆ ದಿನದ ನೆನಪಾದರೆ ಇಷ್ಟು ಬೇಗ ಕಳೆಯಿತೇ ಆ

ಹನ್ನೊಂದು ವರ್ಷ ಎಂದೆನಿಸುವುದು ಸುಳ್ಳಲ್ಲ....ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಒಂದು ಮೂಲೆಯಲ್ಲಿ ಈ ಭಯಾನಕ

ದುರಂತ ಆ ದಿನ ನಡೆದಿತ್ತು... ಇದನ್ನು ಕರಾಳ ದಿನವೆಂದೇ ಹೇಳಬಹುದು..ಇಡೀ ಪ್ರಪಂಚವನ್ನೇ ಅಲುಗಾಡಿಸಿತ್ತು ಆ ದಿನ ..

         ಅವತ್ತು ಸೆಪ್ಟೆಂಬರ್ ಹನ್ನೊಂದು ಎರಡು ಸಾವಿರದ ಒಂದನೇ ಇಸವಿ.. ಆ ದಿನ ನನ್ನ ಮದುವೆಯಾಗಿ ಕೇವಲ ಹತ್ತು ದಿನ 

ಕಳೆದಿತ್ತಷ್ಟೆ..ಹೊಸ ಜೀವನ, ಹೊಸ ಪರಿಸರ, ಹೊಸ ಸಂಬಂಧಗಳು ಹೀಗೆ ನಿರಾತಂಕವಾಗಿ ಸಾಗಿತ್ತು...ಆ ದಿನ ಸಹಾ 

ಮಾಮೂಲಿನಂತೆ ಬೆಳಕಾಗಿತ್ತು..ಬೆಳಗಿನ ತಿಂಡಿ  ಆದ ಮೇಲೆ ಯಜಮಾನರು ತಮ್ಮ ಕೆಲಸಕ್ಕೆ ಆಫೀಸಿಗೆ ಹೋಗಿದ್ದರು.. ಮನೆ 

ಗುಡಿಸಿ,ಒರೆಸಿ ಆದ ಮೇಲೆ ಮಧ್ಯಾಹ್ನದ ಅಡಿಗೆ ತಯಾರಿ ಸಹಾ ಮುಗಿದಿತ್ತು..ಸುಮಾರು ಒಂದು ಘಂಟೆಗೆ ಯಜಮಾನರು 

ಊಟಕ್ಕೆ ಬಂದು ಊಟ ಮಾಡಿ ಪುನಃ ಆಫೀಸಿಗೆ ಹೋಗಿ ಆಗಿತ್ತು.. ಮಧ್ಯಾಹ್ನ ನಾನು ಸಹಾ ಊಟ ಮಾಡಿ ಒಂದು ಸಣ್ಣ ನಿದ್ದೆ 

ತೆಗೆದು ಸಂಜೆಯ ಚಹಾ ತಯಾರಿ ನಡೆದಿತ್ತು..ಸಂಜೆ ಸುಮಾರು ಐದು ಘಂಟೆ ಆಗ್ತಾ ಬಂದಿತ್ತು.. ಅಷ್ಟರಲ್ಲಿ ಫ್ಹೋನ್ 

ರಿಂಗಾಯಿತು..ಯಾರಪ್ಪ ಅಂತ ಯೋಚನೆ ಮಾಡ್ತಾ...ಹಲೋ...ಅಂದಾಗ ಧ್ವನಿ ಯಜಮಾನರದ್ದೆ ಆಗಿತ್ತು...ಏನಪ್ಪ...ಇಷ್ಟು 

ಹೊತ್ತಿನಲ್ಲಿ ಅಂತ ಕೇಳಿದಾಗ "ಟಿ ವಿ ನೋಡ್ತಾ ಇದ್ದೀಯಾ" ಅಂದರು.."ಇನ್ನು  ಹಾಕಿಲ್ಲ...ಚಹಾ ಆಗ್ತಾ ಇದೆ" ಅಂದೆ..ಅದಕ್ಕೆ 

ಅವರು ಬೇಗ ನ್ಯೂಸ್ ಚಾನಲ್ ನೋಡು ಅಂತ ಫ್ಹೊನ್ ಕಟ್ ಮಾಡಿದ್ರು  ಅಂಥಹದ್ದೇನಪ್ಪ ನ್ಯೂಸ್ ಅಂಥ ಟಿ ವಿ  

..ಚಾಲೂ ಮಾಡಿದ್ರೆ...ಬ್ರೇಕಿಂಗ್ ನ್ಯೂಸ್ಗಳ ಸರಮಾಲೆಯೇ ನಡೆದಿತ್ತು...ನನಗೆ ಒಂದು ಕ್ಷಣ ಅದನ್ನು ಅರ್ಥ ಮಾಡಿಕೊಳ್ಳಕ್ಕೆ 

ಕೆಲವು ನಿಮಿಷಗಳೇ ಬೇಕಾಯ್ತು.. ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ಎರಡು ಗಗನಚುಂಬಿ ಬೃಹತ್  ಕಟ್ಟಡಗಳಿಗೆ  

ವಿಮಾನ ಡಿಕ್ಕಿ ಹೊಡೆದ ವಿಡಿಯೋಗಳು ಪ್ರಸಾರವಾಗುತ್ತಿತ್ತು..ಒಂದು ಕಟ್ಟಡಕ್ಕೆ ವಿಮಾನ ಅಪ್ಪಳಿಸಿ ಬೆಂಕಿ 

ಹೊತ್ತಿಉರಿಯುವಾಗಲೇ ಸ್ವಲ್ಪ ನಿಮಿಷದಲ್ಲಿ ಇನ್ನೊಂದು ವಿಮಾನ  ಮತ್ತೊಂದು ಕಟ್ಟಡಕ್ಕೆ ಅಪ್ಪಳಿಸುತ್ತದೆ. ಕ್ಷಣಾರ್ಧದಲ್ಲಿ 

ಬೆಂಕಿಯ ಹೊಗೆ ಆ ಅಂತಸ್ತುಗಳಿಗೆಲ್ಲ ಹರಡುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜನಗಳು ಕಿಟಕಿಗಳಿಂದ ಹಾರುತ್ತಿರುವ 

ದ್ರಶ್ಯ,ಇನ್ನೊಂದು ಸ್ವಲ್ಪ ಸಮಯದಲ್ಲೇ ಎರಡೂ ಕಟ್ಟಡಗಳು ನೆಲಕ್ಕೆ ಉರುಳಿ ಬೀಳುತ್ತದೆ. ಇಷ್ಟೆಲ್ಲಾ ಸುಮಾರು ಒಂದು 

ಘಂಟೆಯಲ್ಲಿ ನಡೆದು ಹೋಗುತ್ತದೆ. ಸಾವಿರಾರು ಜನರು ತಮ್ಮ ಪ್ರಾಣ ಯಾವುದೇ ತಪ್ಪು ಮಾಡದೇ ಕಳೆದುಕೊಳ್ಳುತ್ತಾರೆ..  

        ಅಲ್ಲಿ ಆಗ ಸುಮಾರು ಬೆಳಿಗ್ಗೆ ಒಂಬತ್ತು ಘಂಟೆಯ ಸಮಯ. ಸಹಜವಾಗಿ ನೌಕರರು ತಮ್ಮ ಕಛೇರಿಗಳಲ್ಲಿ ಕೆಲಸ ಶುರು 

ಮಾಡಿಕೊಂಡಿದ್ದರು.ಮನೆಯಿಂದ ಹೊರಡುವಾಗ ಅವರು ಕನಸು ಮನಸ್ಸಿನಲ್ಲೂ ಇಂಥಹ ವಿಧ್ವಂಸಕ ಕೃತ್ಯ ನಡೆಯುತ್ತದೆ 

ಅಂದು ಬಹುಶಃ ಯೋಚಿಸಿರಲಿಕ್ಕಿಲ್ಲ. ಕೆಳಗೆ ಜನರ ಆಕ್ರಂದನ, ಆಶ್ಚರ್ಯದಿಂದ ನೋಡುತ್ತಿರುವ ಜನಗಳು, ಆಂಬುಲೆನ್ಸ್, ಫ಼ೈರ್ 

ಎಂಜಿನ್ಗಳ ರೊಯ್...ರೊಯ್..ಸದ್ದು...ಇಡೀ ವಾತಾವರಣವೇ ಗೊಂದಲಮಯ.. ಒಬ್ಬ ಕಲ್ಲು ಹೃದಯದ ವ್ಯಕ್ತಿಯ ಕೃತ್ಯದಿಂದ 

ಅದೆಷ್ಟೋ ನಿರ್ದೋಶಿ ಜೀವಿಗಳ ಮಾರಣಹೋಮ..
          
          ಪ್ರತಿವರ್ಷ ನನ್ನ ಮದುವೆಯ ವಾರ್ಶಿಕೋತ್ಸವ ಬಂದಾಗಲೂ ಈ ಘಟನೆ ಮನಸ್ಸಿನಲ್ಲಿ ಆ ದಿನದ ನೆನಪನ್ನು ಮೆಲಕು 

ಹಾಕುತ್ತದೆ.. ನಮ್ಮ ಮನೆಯಲ್ಲಿ ಸಂಭ್ರಮದಲ್ಲಿ  ಸಿಹಿ ತಿಂದು ಆಚರಿಸಿದರೆ ಇನ್ನು ಹತ್ತೇ ದಿನದಲ್ಲಿ ಅದೆಷ್ಟೋ ಮನೆಗಳಲ್ಲಿ ತಮ್ಮ 

ತಂದೆ ತಾಯಿಯನ್ನೋ,  ಸಹೋದರ ಸಹೋದರಿಯರನ್ನೋ, ಆತ್ಮೀಯ ಸ್ನೇಹಿತರನ್ನೋ, ಕುಟುಂಬ ವರ್ಗದವರನ್ನೋ 

ಕಳೆದುಕೊಂಡ ಆ ವ್ಯಕ್ತಿಗಳು ಸಂಕಟವನ್ನು ಅನುಭವಿಸುತ್ತಾರೆ ಅನಿಸುವುದುಂಟು.. ಎಲ್ಲ ವಿಧಿ ಲಿಖಿತ.

        .ಇದೇ ಜೀವನದ ಆಟ...ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಕಥೆ ನಡೆಯುತ್ತಿರುತ್ತದೆ..  

ಆ  ದಿನ ನಡೆದ ಘಟನೆಗಳ ಚಿತ್ರಗಳು ಲಗತ್ತಿಸಿದ್ದೇನೆ..ಇವು ಮನಸ್ಸನ್ನು ನಿಜವಾಗಲೂ ನೋಯಿಸುತ್ತದೆ..



ಎಷ್ಟೊಂದು ಅಧ್ಬುತವಾದ ಕಟ್ಟಡಗಳು




ಢಿಕ್ಕಿ ಹೊಡೆಯುವ ವಿಮಾನ




 ಕಿಟಕಿಗಳಿಂದ ಪ್ರಾಣ ಉಳಿಸಿ ಎಂದು ಕೇಳುವ ಜನರು





ಬೆಂಕಿಯ ಕೆನ್ನಾಲಿಗೆ






ಧರೆಗೆ ಉರುಳುತ್ತಿರುವ ಕಟ್ಟಡ 




ಜೀವಕ್ಕಾಗಿ ಓಡುವ ನಾಗರೀಕರು





ಎಲ್ಲೆಲ್ಲೂ ಧೂಳುಮಯ





ಗಾಯಾಳು




(AP)


ಈಗ ಉಳಿದಿರುವ ನೆನಪು ಝೀರೊ ಗ್ರೌಂಡ್ನದ್ದು ಮಾತ್ರ 



.