Friday, 21 September 2012

ಸ್ನೇಹ....ಚಿರಂಜೀವಿ....


ನಾವು ನಮ್ಮ ಜೀವನದಲ್ಲಿ ತುಂಬಾ ತರಹದ ಆತ್ಮೀಯ ಸ್ನೇಹಿತರನ್ನು ನೋಡ್ತಾ ಇರ್ತೇವೆ... ತಮ್ಮ ಮಿತ್ರನಿಗಾಗಿ ಪ್ರಾಣಕ್ಕೆ...ಪ್ರಾಣ ಕೊಡುವವರು ಇರ್ತಾರೆ.. ಸ್ನೇಹಿತರಿಗೆ ಕಷ್ಟ ಬಂದರೆ ತಮ್ಮ ಆಸ್ತಿ-ಪಾಸ್ತಿ, ಐಶ್ವರ್ಯ ಎಲ್ಲವನ್ನೂ ತ್ಯಾಗ ಮಾಡುವವರು ಇರ್ತಾರೆ..ಇನ್ನು ಕೆಲವರಿಗಂತೂ ತಮ್ಮ ಹೆಂಡತಿ, ಮಕ್ಕಳಿಗಿಂತ ಸ್ನೇಹಿತರೆ..ಅಚ್ಚುಮೆಚ್ಚಾಗಿರ್ತಾರೆ..ಈಗೆಲ್ಲಾ ಸ್ನೇಹಿತರ ಹತ್ತಿರ ಹಣ ಇರುವ ತನಕ ಅವರ ಜೊತೆ ಮಜಾ ಮಾಡಿ..ನಂತರ ಅವರನ್ನು ಮರೆತು ಬಿಡುವ ಕಾಲ...


"ಸ್ನೇಹ" ಎಂದ ಕೂಡಲೆ ನನ್ನ ನೆನಪಿಗೆ ಬರುವುದು...ಸುಮಾರು ಹನ್ನೊಂದು ವರ್ಷಗಳ ಹಿಂದೆ ನಾನು ನೋಡಿದ ಇಬ್ಬರು ವ್ಯಕ್ತಿಗಳು..ನನಗೆ ಆಗಸ್ಟ್ ೩೧,೨೦೦೧ ರಲ್ಲಿ ಮದುವೆ..ಅದಾಗಿ ಒಂದು ತಿಂಗಳ ನಂತರ ನಾವು ಒಂದು ವಾರದ "ದಕ್ಷಿಣ ಭಾರತ" ಪ್ರವಾಸಕ್ಕೆಂದು ವಿಕ್ರಮ್ ಟ್ರಾವೆಲ್ಸ್ನಲ್ಲಿ ಟಿಕೆಟ್ ಬುಕ್ ಮಾಡಿದ್ದೆವು..ನಮ್ಮ ಪ್ರಯಾಣ ಮಂಗಳೂರಿನಿಂದ ಪ್ರಾರಂಭ...ಹಿಂದಿನ ದಿನವೇ ಹೋಟೆಲ್ನಲ್ಲಿ ರೂಮ್ ಮಾಡಿದ್ದೆವು..ಮರುದಿನ ಬೆಳಿಗ್ಗೆ ಅಲ್ಲಿಂದ ಮೈಸೂರಿಗೆ ನಮ್ಮ ಪ್ರಯಾಣ..ನಂತರ ಊಟಿ, ಕೊಡೈಕೆನಾಲ್, ಮೆಟ್ಟುಪಾಳ್ಯಂ, ತೆಕ್ಕಾಡಿ, ಕೊಚ್ಚಿನ್..ಹೀಗೆ ನಮ್ಮ ಊರುಗಳ ಪ್ರಯಾಣ ನಿಗದಿಯಾಗಿತ್ತು..


ಬಹುಷಃ ಮೈಸೂರಿನ ಹತ್ತಿರ ಇಬ್ಬರು ವ್ಯಕ್ತಿಗಳು ನಮ್ಮ ಸಹಪ್ರಯಾಣಿಕರಾಗಿ ಬಸ್ ಹತ್ತುತ್ತಾರೆ..ಒಬ್ಬರು ಎರಡೂ ಕೈಗಳಲ್ಲೂ ಊರುಗೋಲಿನ ಸಹಾಯದಿಂದ ನಿಧಾನವಾಗಿ ಬಸ್ನಲ್ಲಿ ಹತ್ತುತ್ತಾರೆ..ಅವರ ಸ್ನೇಹಿತರು ಲಗ್ಗೇಜ್ ಎಲ್ಲವನ್ನೂ ಹಿಡಿದುಕೊಂಡು..ಅವರಿಗೆ ಸಹಾಯ ಮಾಡುತ್ತಾ ಇರುತ್ತಾರೆ.. ನಾವೆಲ್ಲಾ ಆಗ ಅಂದುಕೊಳ್ತೇವೆ...ಇಷ್ಟು ಕಷ್ಟದಲ್ಲಿ ಇವರು ಅದು ಹೇಗೆ ಒಂದು ವಾರ ಪ್ರಯಾಣ ಮಾಡುತ್ತಾರೆ..? ಎಂದು...ಹೀಗೆ ಎಲ್ಲಾ ಕಡೆಯೂ ತುಂಬಾ ನಡೆಯಲಿಕ್ಕೆ ಇದ್ದರೆ ಅವರು ಬಸ್ನಲ್ಲಿಯೆ ಕುಳಿತಿರುತ್ತಿದ್ದರು..ಅಥವಾ ಸ್ವಲ್ಪ ದೂರ ನಿಧಾನಕ್ಕೆ ನಡೆದು ಬರುತ್ತಿದ್ದರು...ಬಹುಷಃ ಅವರಿಗೆ ತುಂಬಾ ಬೆನ್ನು ನೋವು ಮತ್ತು ಕಾಲು ನೋವು ಬರುತ್ತಿತ್ತು..ಎಲ್ಲಾ ಸಮಯದಲ್ಲೂ ಅವರ ಸ್ನೇಹಿತರು ಅವರಿಗೆ ಸಹಾಯ ಮಾಡುತ್ತಿದ್ದರು..ತುಂಬಾ ಕಡಿಮೆ ಮಾತಾಡುತ್ತಿದ್ದರು..

ಊರುಗೋಲು ಹಿಡಿದುಕೊಂಡು ನಡೆಯುವವರು ನಮ್ಮ ಭಾರತ ದೇಶದ ಸೇನೆಗಾಗಿ ದುಡಿದ "ಒಬ್ಬ ವೀರ ಯೋಧ..." ಸುಮಾರು ಒಂದೆರಡು ವರ್ಷಗಳ ಹಿಂದೆ ನಡೆದ "ಕಾರ್ಗಿಲ್" ಯುದ್ಧದಲ್ಲಿ ಅವರ ಕಾಲುಗಳಿಗೆ ತುಂಬಾ ಏಟಾಗಿ, ಪೆಟ್ಟಾಗಿ ಎಷ್ಟೋ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು..ಪುನಃ ಮನೆಗೆ ಬಂದು ಸುಮಾರು ತಿಂಗಳುಗಳ ಕಾಲ ವಿಶ್ರಾಂತಿ..ಸ್ವಲ್ಪ ಬದಲಾವಣೆ ಇರಲಿ ಎಂದು ಅವರ ಸ್ನೇಹಿತರು ಅವರನ್ನು ಈ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು.. ಪುನಃ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಅವರನ್ನು ಸೇನೆಗೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ..ಅವರು ಆಸ್ಪತ್ರೆಯಲ್ಲಿ ಇದ್ದಾಗ ಕೆಲವು ರಾಜಕೀಯ ಪುಢಾರಿಗಳು ಕೆಲಸ ಕೊಡಿಸುತ್ತೇವೆಂದು ಭರವಸೆ ನೀಡಿ ನಂತರ ತಿರುಗಿಯೂ ನೋಡುತ್ತಿರಲಿಲ್ಲವಂತೆ..ನಮ್ಮ ಪ್ರಯಾಣದ ಸಮಯದಲ್ಲಿ ಅವರು  ಬೇರೆಯ ಕೆಲಸ ಹುಡುಕುತ್ತಿದ್ದರು..ಅವರಿಗೆ ಬಹುಷಃ ಆಗ ಕೇವಲ ೨೫-೨೬ ವರ್ಷ ಅಷ್ಟೆ ಇರಬಹುದು..ಅವರು ನಮ್ಮ ಜೊತೆ ಯುದ್ಧದ ಅನುಭವ ಎಲ್ಲಾ ಹಂಚಿಕೊಳ್ಳುತ್ತಿದ್ದರು..ದಿನಗಟ್ಟಲೆ ಊಟ-ತಿಂಡಿಯಿಲ್ಲದೆ ...ಕೇವಲ ಚೊಕೊಲೇಟೋ..ಒಂದು ಬಿಸ್ಕಿಟ್ ಪ್ಯಾಕೆಟ್ನಲ್ಲಿ ಹೇಗೆ ದಿನಗಳು ಕಳೆಯುತ್ತಿದ್ದರು...ಪಾಕಿಸ್ತಾನದ ಸೈನಿಕರು ಸತ್ತ ಹಾಗೆ ಬಿದ್ದು..ಹತ್ತಿರ ಹೋಗಿ ಪರೀಕ್ಷೆ ಮಾಡುವಾಗ ಹೇಗೆ ಆಕ್ರಮಣ ಮಾಡುತ್ತಿದ್ದರೆಂದು...ಅವರಿಗೆ ಇದನ್ನೆಲ್ಲಾ ಹೇಳುವಾಗಲೇ ರೋಷ ಬರುತ್ತಿತ್ತು...ಅವರಲ್ಲಿ ಒಬ್ಬರ ಹೆಸರು.."ನವೀನ್" ಇರಬೇಕು...ಸರಿಯಾಗಿ ನೆನಪಿಲ್ಲ..ಹಾಳಾದ ಮರೆವು... :(ನಮ್ಮ ಪ್ರಯಾಣದ ಕೊನೆಯ ದಿನ ಬಸ್ಸಿನ ಎಲ್ಲಾ ಪ್ರಯಾಣಿಕರು ಸೇರಿ ಅವರಿಗೊಂದು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡು..ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ನೀಡಿದ್ದೆವು...
ಈಗ ಇಬ್ಬರೂ ಯಾವ ಊರಿನಲ್ಲಿದ್ದಾರೋ ಗೊತ್ತಿಲ್ಲ......????

ಆದರೂ ಈ ಚಿತ್ರ ನೋಡಿದಾಗೆಲ್ಲಾ ನಾವು ಅವರ ನೆನಪು ಮಾಡ್ತಾ ಇರ್ತೇವೆ... ಅವ್ರೆಲ್ಲೇ ಇರಲಿ....ಇಬ್ಬರು ಸ್ನೇಹಿತರಿಗೂ ಒಳ್ಳೆಯದಾಗಲಿ.. :-)


6 comments:

 1. ಸಹೋದರಿ ಚಿಕ್ಕ ಆದ್ರೆ ಆಳವಾಗಿ ಬೇರೂರುವ ಲೇಖನ..ಪ್ರವಾಸದಲ್ಲಿ ಸಿಗುವ ಎಷ್ಟೋ ಮಂದಿ ಮನದಾಳದಲ್ಲಿ ಉಳಿದುಬಿಡುತ್ತಾರೆ..ನಂಬಿಕೆಗೆ ದ್ರೋಹ ಮಾಡುವ ಸ್ನೇಹದ ಕಾರ್ಯಕ್ರಮ ತುಂಬಾ ನಡೆಯುತ್ತಿದೆ...ಆದ್ರೆ ಅಲ್ಲಿ ಇಲ್ಲಿ ಇಂತಹ ಸ್ನೇಹದ ಸಂಕೋಲೆಗಳು ಬಂಧಿಸುತ್ತಲೇ ಇರುತ್ತವೆ..
  ಆ ವೀರ ಸಿಪಾಯಿಗಳನ್ನು ನೋಡಿದ, ಅವರೊಡನೆ ವಿಚಾರ ವಿನಿಮಯ ಮಾಡಿಕೊಂಡದ್ದು ತುಂಬಾ ಸಂತಸ ಕೊಟ್ಟಿತು..ಈ ಲೇಖನದಲ್ಲಿ ಅವರ ನೆನಪು ಆ ವೀರ ಧೀರರಿಗೆ ಒಂದು ಅಭಿನಂದನೆಗಳು ಕೂಡ ಹೌದು..

  ReplyDelete
 2. ಸುಮತಿಯವರೆ...

  ಅವರಿಬ್ಬರ ಗೆಳತನಕ್ಕೆ ನಮ್ಮ ಸಲಾಮ್...

  ಎಲ್ಲ ಬಾಂಧವ್ಯಗಳಲ್ಲಿ ಮೊದಲಿಗೆ ಬರುವದು ಗೆಳೆತನ...
  ಬಹುಕಾಲ ನಿಲ್ಲುವದೂ ಗೆಳೆತನವೇ...

  ಗೆಳೆತನಕ್ಕೆ ಯಾವ ನಿರೀಕ್ಷೆಗಳಿಲ್ಲ.. ಹಾಗಾಗಿ ಅದು ಬಲು ಗಟ್ಟಿ...

  ಹಳೆಯ ಫೋಟೊಗಳನ್ನು ಕಾಯ್ದಿರಿಸಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

  ReplyDelete
 3. ನಿಮ್ಮ ಎಲ್ಲಾ ಲೇಖನಗಳಿಗಿಂತಲೂ ಇದು ಹೆಚ್ಚು ಮನಸ್ಸು ಮುಟ್ಟುತ್ತದೆ. ಆ ಮಹಾ ಪುರುಷನ ಜೋತೆಗಿದ್ದ ಆ ಕ್ಷಣಗಳು ನಿಮ್ಮ ಜೀವಿತದ ಅತ್ಯಂತ ಪವಿತ್ರವೆಂದು ಭಾವಿಸುತ್ತೇನೆ. ನನ್ನ ಆಕ್ಷೇಪಣೆ ಎಂದರೆ ನೀವು ಅವರ ಸಂಪರ್ಕ ಕಳೆದುಕೊಂಡಿದ್ದು

  ReplyDelete
 4. ಎಲ್ಲಾ ಬಾಂಧವ್ಯಗಳಿಗೆ ಒಂದು ಭಾರವೆಂದರೆ ಗೆಳೆತನದ ಬಾಂಧ್ಯವ್ಯಕ್ಕೆ ಹತ್ತು ಭಾರ... ಗೆಳೆತನ ಬೆಳೆಯುವುದೇ ನಿರೀಕ್ಷೆ ಕಡಿಮೆಯಾದಾಗ, ಗಟ್ಟಿಯಾಗುವುದು ಭರವಸೆ ಬೆಳೆದಮೇಲೆ... ತ್ಯಾಗ ಮತ್ತು ತುಡಿತ ಇದನ್ನು ಮತ್ತೂ ಗಟ್ಟಿಮಾಡುತ್ತದೆ.
  selfless friendship is an endless friendship ಎನ್ನುವುದು ನಿಮ್ಮ ಲೇಖನ ಕಂಡು ನಿಜವೆನಿಸುತ್ತೆ

  ReplyDelete
 5. ಒಳ್ಳೆಯ ಗೆಳೆತನ ಸಿಗುವುದು ಕಷ್ಟ ಕೆಲವೊಮ್ಮೆ ಎಲ್ಲೋ ಸಿಕ್ಕಿದವರು ಆತ್ಮೀಯರಾಗಿ ಬಿಡುತ್ತಾರೆ. ನಿಮ್ಮ ಸ್ನೇಹಿತರಲ್ಲಿ ವೀರಯೋಧರೊಬ್ಬರಿಗೆ ಕಾಲು ಕಳೆದುಕೊಂಡ ಸಂಗತಿ ಕೇಳಿ ಬೇಸರವಾಯಿತು. ಅಂತೆಯೇ ಯುದ್ಧದಲ್ಲಿನ ಅವರ ಅನುಭವಗಳನ್ನು ಹಂಚಿಕೊಂಡಿದ್ದೀರಿ ಧನ್ಯವಾದಗಳು. ಆ ವೀರಯೋಧರಿಗೆ ನಮ್ಮ ನಮನಗಳು

  ReplyDelete
 6. ಆ ಸೈನಿಕನ ಮುಖದಲ್ಲಿ ಆತ್ಮ ವಿಶ್ವಾಸ ಎದ್ದು ಕಾಣುತ್ತದೆ. ಅದು ಭಾರತೀಯ ಸೇನೆಯ ಶಿಸ್ತಿನ ಪಾಠ.

  ಸುಖಕ್ಕಾಗುವವನು ಗೆಳೆಯನಲ್ಲ, ನೋವಿನಲ್ಲಿ ಮಿಡಿಯುವವನೇ ನಿಜವಾದ ಊರುಗೋಲು. ಆತನ ಸ್ನೇಹಿತರು ನಮಗೆ ಸ್ಪೂರ್ತಿಯ ಮೂರ್ತಗಳು.

  ಒಳ್ಳೆಯ ಬರಹ.

  ಅಂದಹಾಗೆ, ನೀವು ದಂಪತಿಗಳು ತುಂಬಾ ಚಿಕ್ಕ ವಯಸ್ಸಿನವರಂತೆ ಕಾಣುತ್ತಿದ್ದೀರ. ೧೧ ವರ್ಷಗಳ ನಂತರವೂ ಈ ಆಂತರ್ಯದ ತರುಣತೆ ನಿಮಗೆ ಒಲಿಯಲಿ.

  ReplyDelete