Friday 11 September 2015

ಚುರುಮುರಿ ಮೆಲುಕು....


ಸೋದರಮಾವನಿಗೋ  ಮೊದಲೇ ಗಡಿಬಿಡಿ.... ಅದಾಗಲೆ ಧಾರೆ ಮಹೂರ್ತದ ಸಮಯ ಹತ್ರ ಬರ್ತಾ ಇತ್ತು .... ಇನ್ನು ಆಗಿಲ್ವಾ ಅಲಂಕಾರ ಅಂತ ಮಧುಮಗಳ  ರೂಮಿನ ಬಾಗಿಲು ಹೊರಗಿನಿಂದ ಬಡೀತಾ ಇದ್ರು .... ಅಂತೂ ಆ beautician ಅದೇನೋ ಭಾರದ  ಚವರಿ
ಹಾಕಿ ಅದ್ರ ಮೇಲೆ ಸುಗಂಧರಾಜ ಹೂವಿನ ಜಡೆ fix ಮಾಡಿ ಒಂದಷ್ಟು ಬಣ್ಣ ಮೆತ್ತಿ ಅಂತೂ ಆಕೇನ  ಹೊರಗೆ ಕಳಿಸಿ ಕೊಟ್ಳು ...ಇವಳೋ  ಮೊದಲೇ ಮುಜುಗರದ ಪ್ರಾಣಿ... ಒಂದುವರೆ  ತಿಂಗಳು ಮೊದಲೇ ಗೊತ್ತಾಗಿದ್ದ ಮದುವೆ ದಿನ ... ಆ ದಿನ ಇಟ್ಟಾಗಿನಿಂದ  ಅಮ್ಮನಿಗೆ ಅದೆಷ್ಟು ಬಾರಿ "ಹೇಗಮ್ಮ ಅಷ್ಟು ಜನರ ಎದುರು ಸ್ಟೇಜ್ ಮೇಲೆ ಕೂರೋದು:"....  ಅಂತ ನೂರು ಬಾರಿ ಕೇಳಿ ಕೇಳಿ ಬೈಸಿಕೊಂಡಿದ್ದಾಳೆ  ...  ಹಾಗೂ ಹೀಗೂ ಸೋದರ ಮಾವ ಆಕೆಯ ಕೈ ಹಿಡಿದುಕೊಂಡು ಮಂಟಪದ ಹತ್ತಿರ ಆ ತುಂಬಿದ ಸಭೆಯಲ್ಲಿ ಕರೆದುಕೊಂಡು ಹೋಗ್ತಾ ಇರ್ಬೇಕಾದ್ರೆ ಎಲ್ಲರ ದೃಷ್ಟಿಯೂ ಆಕೆಯ ಮೇಲೆ ... ಒಂದಷ್ಟು ಭಾವಗಳ ಮಧ್ಯೆಯೇ ತಲೆ ತಗ್ಗಿಸಿ ಹೋಗೋವಾಗ ಏನೋ missing missing... ಅರೇ ಇವ್ರು ಅವಸರದಲ್ಲಿ ಹುಡುಗನಿಗೆ ಹಾಕೋ ಮಾಲೇನೇ  ತನ್ನ ಕೈಯಲ್ಲಿ ಕೊಟ್ಟಿಲ್ವಲ್ಲ ... ಎಂಥ ಅವಸ್ಥೆ ಇದು... order ಕೊಟ್ಟ ಹೂ ಅಂಗಡಿಯವನು ತಂದಿದಾನೋ ಇಲ್ವೋ ...ನೂರೆಂಟು ಯೋಚನೆ ತಲೆಯಲ್ಲಿ ತುಂಬುವಷ್ಟರಲ್ಲೇ ಮಾವ ಅದಾಗಲೇ ಮಂಟಪದ ಹತ್ತಿರ ಕರೆದುಕೊಂಡು ಬಂದಾಗಿತ್ತು ...ಮಾವನಿಗೆ ನಮಸ್ಕಾರ ಮಾಡು ಅಂತ ಪುರೋಹಿತರು ಹೇಳ್ದಾಗ ಬಗ್ಗಿ ನಮಸ್ಕಾರ ಮಾಡಿ ಅವ್ರು ತಲೆ ಮೇಲೆ ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಿ ಮಂಟಪದಿಂದ  ಹೊರನಡೆಡಿದ್ರು ...  ಹುಡುಗನ ಎದುರು ಅದಾಗಲೇ ಇಬ್ಬರು ಪುರೋಹಿತರು ಮುಖ ಕಾಣದಂತೆ ಶಲ್ಯವನ್ನು ಅಡ್ಡ ಹಿಡಿದಿದ್ದರು ... ಪಕ್ಕದಲ್ಲಿ ಅಪ್ಪ ಅಮ್ಮ ... ಹತ್ತಿರ ಬರುತ್ತಿದ್ದ ಮಹೂರ್ಥದ ಘಳಿಗೆ....ಭಟ್ಟರು ಅದೇನೋ   ಸುಲಘ್ನೆ ಸಾವಧಾನ  ಮಂತ್ರ ಪಠಿಸ್ತಾ ಇದ್ರೆ  ಆಕೆಯ ಮನದಲ್ಲೋ "ಹೂವಿನ ಹಾರ..." ಎಲ್ಲಿ ಅನ್ನೋ ಸಿಲ್ಲಿ ಯೋಚನೆ ... ಪಕ್ಕದಲ್ಲಿ ನಿಂತ ಅಮ್ಮನ ಮುಖ ನೋಡಿದ್ರೆ ಅವ್ರು "ಏನು" ಅನ್ನೋ ರೀತಿಯಲ್ಲಿ ತಲೆ ಅಲ್ಲಾಡಿಸಿ  ಸನ್ನೆ ಮಾಡಿದ್ರೆ ... ಆಕೆ ಮೆಲ್ಲಗೆ " ಅಮ್ಮಾ ... ಹೂವಿನ ಹಾರಾನೇ ಕೊಟ್ಟಿಲ್ಲ ನನ್ನ ಕೈಯಲ್ಲಿ " ಅಂದ್ರೆ ಅವಳ ಅಮ್ಮ "ಸುಮ್ನೆ ನಿಂತ್ಕೋ... " ಅಂತ ಗುರಾಯ್ಸಿದ್ರು... ಬಹುಶಃ ಮದುವೆ ಮಂಟಪದಲ್ಲೂ  ಬೈಸಿಕೊಂಡ ಮೊದಲ ಮದುಮಗಳು ಆಕೆ .... :-(


ಇಷ್ಟೆಲ್ಲಾ ಯೋಚನೆ ಮಾಡ್ತಾ ಇರ್ಬೇಕಾದ್ರೆ ಶಲ್ಯದ ಆ ಬದಿಯಿಂದ ಒಬ್ಬ ಪುರೋಹಿತರು ನಿಧಾನಕ್ಕೆ ಆಕೆಯ ಕೈಯಲ್ಲಿ ಹೂವಿನ ಹಾರ ಕೊಟ್ರೆ ... ಉಸ್ಸಪ್ಪಾ.. ಅಂತೂ ಒಂದು ಸಮಸ್ಯೆ ಬಗೆಹರೀತು ಅಂತ ನಿಟ್ಟುಸಿರು  ಬಿಡ್ತಾಳಾಕೆ .... ಎದುರಿಗಿದ್ದ ಶಲ್ಯದ ತೆರೆ ಸರಿದಾಗ ನಗುತ್ತ ನಿಂತ ಹುಡುಗ ... ಅರೆ ಇವನೋ ತನಗಿಂತ ತುಂಬಾ ಎತ್ತರ ..ಜೊತೆಗೆ ಈಗ ತಲೆ ಮೇಲೊಂದು ಪೇಟ ... ಅವನ ಗತ್ತು ನೋಡಿದ್ರೆ ಸ್ವಲ್ಪ ಆದರು ತಲೆ ಬಗ್ಗಿಸಿ ಹೆಲ್ಪ್ ಮಾಡೋ ಆಸಾಮಿ ಅಲ್ಲ ಅನ್ನೋ ಹಾಗೆ ತಲೆಯೆತ್ತಿ ನಿಂತಿದ್ದ ... ಅಕ್ಕ ಪಕ್ಕ ನಿಂತ ಅವನ ಕಡೆಯವರು ತಲೆ ಬಗ್ಗಿಸ್ಬೇಡ...  .ಆಮೇಲೆ  ಜೀವನ ಪೂರ್ತಿ ಆಕೆ ಎದುರಲ್ಲಿ ತಲೆ ಬಗ್ಗಿಸಬೇಕಾಗತ್ತೆ ಅನ್ನೋ ಸೂಚನೆ ಕೊಡ್ತಾ ಇದ್ರು  ... . ಕೈಯಲ್ಲಿ ಮಾಲೆ ಅಂತೂ ಸಿಕ್ತು ...ತಾನು ಮುಂಗಾಲಿನ ಬೆರಳುಗಳ ಮೇಲೆ ನಿಂತು  ಬ್ಯಾಲೆನ್ಸ್ ಮಾಡಿದ್ರು ಹಾರ ಅವ್ನ ಕುತ್ತಿಗೆಗೆ ಸರಿಯಾಗಿ ಬೀಳೋದು ಸಂಶಯ ... ಛೆ ...ಎಲ್ಲ ಸಮಸ್ಯೆ ಒಂದರ ಹಿಂದೆ ಒಂದು ಇವತ್ತೇ ಕಾಡ್ಬೇಕಾ  ... ಮನಸಲ್ಲಿ ಯೋಚನೆ ಮಾಡ್ತಿರ್ಬೆಕಾದ್ರೆ ಅತ್ತ ಪುರೋಹಿತರ ಮಂತ್ರ ಪಠಣ ಗಟ್ಟಿಯಾಗ್ತಾ ಇತ್ತು ...ಇತ್ತ ಸುತ್ತ ನೆರೆದಿದ್ದ ಸಂಬಂಧಿಕರಿಗೂ ಕುತೂಹಲ ....ಮದುಮಗಳು ಅದು ಹೇಗೆ ಮಾಲೆ ಹಾಕ್ತಾಳೆ ಅಂತ ... ಎಲ್ಲರಿಗೂ ಅಲ್ಲಿ ಹಾಸ್ಯದ ವಾತಾವರಣ ಅನ್ಸಿದ್ರೆ ಆಕೆಗೋ " ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ " ಅನ್ನೋ ಸ್ಥಿತಿ ...  ಹಾರ ಹಾಕು ಹುಡುಗನಿಗೆ ಅನ್ನೋ ಪುರೋಹಿತರ ಆದೇಶ ಬಂದ ಕೂಡ್ಲೆ  ಕಷ್ಟಪಟ್ಟು ಹಾರವನ್ನ, ಹುಡುಗನ ಪೇಟವನ್ನು ದಾಟಿ ಕುತ್ತಿಗೆಗೆ ಬೀಳೋ ಹಾಗೆ ಗುರಿಯಿಟ್ಟು ನಿಧಾನಕ್ಕೆ ಎಸೆದಿದ್ದಳಾಕೆ  .... ಪುಣ್ಯಕ್ಕೆ ಅದು ಪರ್ಫೆಕ್ಟ್ ಆಗಿ ಕುತ್ತಿಗೆಗೆ ಬಿದ್ದಿತ್ತು ..  ಒಂದು ಕಡೆ ವಾಲಗದವರಿಂದ  ಗಟ್ಟಿ ಮೇಳದ ಸದ್ದಾದರೆ ಇನ್ನೊಂದು ಕಡೆ  ಅಕ್ಕ ಪಕ್ಕ ಕೂತ ನೆಂಟರು ಸ್ನೇಹಿತರಿಂದ  ನಗು ಚಪ್ಪಾಳೆ .... 




ಈ ಘಟನೆ ನಡೆದು ಅದಾಗಲೇ 14 ವರ್ಷ ಮೊನ್ನೆ ಮೊನ್ನೆ ಪೂರ್ತಿ ಆಯ್ತು .. 

ಸುಖ ದುಃಖ ಸರಿ ಸಮನಾಗಿ ಹಂಚಿಕೊಳ್ತೇವೆ ಅನ್ನೋ ನಿರ್ಧಾರ ಮಾಡಿ ಸಪ್ತಪದಿ ತುಳಿದು ದಾಂಪತ್ಯಕ್ಕೆ ಕಾಲಿಟ್ಟದ್ದು ಮೊನ್ನೆ ಮೊನ್ನೆ ಅನ್ನಿಸುವಂತೆ ... :-)


ಪ್ರೀತಿಯಿಂದ 
ಸುದೀಪ ... 


4 comments:

  1. ಆ ಟೆನ್ಶನ್ ನಲ್ಲೂ ನೀವು ಹಾರ ಮರೆತಿಲ್ವಲ್ಲ ... belated wishes to you both :)

    ReplyDelete
  2. ಒಯೇ -
    ಕೂಡಿ ಕಳೆದ ವಸಂತಗಳ ಲೆಕ್ಕ ತಪ್ಪುವಷ್ಟು ಕಾಲ ಒಲವಿನಾರೈಕೆಯ ತೋಳಲ್ಲಿ ಬೆಚ್ಚಗೆ ಬಾಳಿಕೊಂಡಿರಿ...
    ನಿತ್ಯವೂ ನಗೆಯ ಮಲ್ಲಿಗೆ ಅರಳುತ್ತಲೇ ಇರಲಿ ಎದೆಗುಡಿಯ ಒಳ ಹೊರಗೆ...
    ಶುಭಾಶಯಗಳು ಕಣೇ...<3 <3
    ::::
    ಹೌದೂ - ಬರಹದ ಮುಂದಿನ ಭಾಗ..........;) ;)

    ReplyDelete