Monday 8 December 2014

ಅವನ .....


ಥೋ .... ಆಗ್ಲೇ  ಇಪ್ಪತ್ತೆಂಟು   ವರ್ಷ ಆಯ್ತು    ... ಕೆಲಸ ಸರಿ ಇಲ್ಲ ಅಂತ ಒದ್ದಾಡಿ ಒದ್ದಾಡಿ  ಅಂತೂ ಇಂತೂ ಒಂದು ಪರ್ಮನೆಂಟ್ ಕೆಲಸ ಅಂತ ಸಿಕ್ತು ... ಇನ್ನು ಸ್ವಂತ ಮನೆ ಮಾಡ್ಕೊಳ್ಳೋದು ಯಾವಾಗ್ಲೋ  ಏನ್ಕಥೆನೋ ...   ಆರು ತಿಂಗಳಿಗೆ ಒಮ್ಮೆ ವರ್ಷಕ್ಕೊಮ್ಮೆಅಪ್ಪ ಅಮ್ಮನ್ ಜೊತೆ  ಗಂಟು ಮೂಟೆ ಕಟ್ಟಿ ಬಾಡಿಗೆ ಮನೆ ಬದಲ್ಸಿ ಬದಲ್ಸಿ ಸಾಕಾಗ್ ಹೋಗಿದೆ ... ಈಗ ತಿನ್ನಕ್ಕೆ ಉಣ್ಣಕ್ಕೆ ಯೋಚನೆ ಇಲ್ದೆ ಇದ್ರೂ ಯಾಕೋ ಏನೋ ಖಾಲಿತನ... ಜೀವದ ಗೆಳೆಯರೆಲ್ಲಾ ಆಗ್ಲೇ ಮದುವೆಯಾಗಿ ಹೆಂಡತಿ, ಮಕ್ಳು ಜೊತೆ  ಓಡಾಡ್ತಾ ಇದಾರೆ...ಬಹುಷಃ ಇದೆ ನನ್ನ ದೊಡ್ಡ ಸಮಸ್ಯೇನೋ ಏನೋ ... ನಂಗೆ ಮದುವೆ ಆಗಿಲ್ಲ ಅನ್ನೋ ಬೇಸರಕ್ಕಿಂತ ಸ್ನೇಹಿತರೆಲ್ಲ ಮದುವೆಯಾಗಿದ್ದಾರೆ ಅನ್ನೋ ಅಸೂಯೆನೆ ಹೆಚ್ಚು ಅನ್ನೋದು ಒಂದರ್ಥದಲ್ಲಿ ನಿಜ ಅನ್ಸತ್ತೆ .. ಏನ್ ಹಾಳಾದ್ ಮನಸೋ ...

ಎದ್ರಿಗೆ ಸಿಕ್ಕಾಗಲೆಲ್ಲಾ 'ಏನ್ಲಾ ಮಗಾ ಯಾವಾಗ್ ಪಾಯ್ಸದ್ ಊಟ' ಅಂತ ಜೀವ ತಿಂತಾರೆ...  ಯಾರಿಗ್  ಹೇಳಣಾ ನಮ್ ಪ್ರಾಬ್ಲಂ ... ಬ್ರಹ್ಮಚಾರಿ ಜೀವನ ಯಾರಿಗೂ ಬೇಡ ... ಮದುವೆ  ಆದ ಫ್ರೆಂಡ್ಸ್ ಎಲ್ಲ 'ಮಗಾ ಸಂಸಾರ ಸಾಕಾಗಿದೆ... ಯಾವಾಗ್ ನೋಡಿದರೂ ಟೆನ್ಶನ್ ....  ಮೊದ್ಲೇ ಚೆನ್ನಾಗಿತ್ತು'  ಅಂದ್ರೆ ಮನಸಲ್ಲೇ ಬೈಕೊತೀನಿ... 'ಮಕ್ಳಾ ನೀವು ನೋಡೋದು, ಅನುಭವ್ಸಿದ್ದು ಎಲ್ಲ ಆಯ್ತು .ಈಗ ಸುಮ್ ಸುಮ್ನೆ  ನಂಗು ಯಾಕ್ ಹೆದ್ರಿಸ್ತಿರೋ...' ಅಂತ ಉಗೀ ಬೇಕು ಅನ್ಸತ್ತೆ... ಯಾರನ್  ಉಗ್ದು  ಬೈದು ಏನ್ ಪ್ರಯೋಜನ ... ನಂ ಹಣೆಬರಹ ಸರಿ ಇಲ್ದೆ ಇದ್ರೆ ಯಾರೆನ್ ಮಾಡಕ್ಕಾಗತ್ತೆ ....ನೆಟ್ಟಗೆ ನನ್ ಖರ್ಚನ್ನ ತೂಗ್ಸೊಕ್ಕೆ ಕಷ್ಟ ಪಡ್ತಾ ಇನ್ನು ಅಪ್ಪ ಅಮ್ಮಂಗೆ ಭಾರ ಆಗಿರೋ ನಾನು ಇನ್ನು ಈಗ್ಲೇ ಮದುವೆ ಮಾಡ್ಕೊಂಡು ಆ ಜವಬ್ದಾರೀನೂ ಯಾಕೆ ಅವ್ರ ಮೇಲೆ ಹೊರಿಸ್ಲಿ? ಇನ್ನು 5 ವರ್ಷ ಅಂತೂ ಮದುವೆ  ಪೋಸ್ಟ್ ಫೋನ್ ಅಂತ ಧೃಡ ನಿರ್ಧಾರ ಮಾಡಿ ಆಗಿದೆ.... ಆದ್ರೆ....

ಹೇಳ್ದಷ್ಟು ಸುಲಭಾನ .... !!!! ವಯೋ ಸಹಜವಾಗಿ ಕಾಡೋ ಆಸೆಗಳನ್ನ  ಕಾಮನೆಗಳನ್ನ ಇನ್ನೈದು ವರ್ಷ ಬಿಟ್ಟು ಬಾ.... ಪೋಸ್ಟ್ ಪೋನ್ ಮಾಡ್ತೀನಿ  ಅಂದ್ರೆ ಅದು ನನ್ ಮಾತು ಕೇಳತ್ತಾ ....?

ಮನಸಲ್ಲಿ ಏನೇನೋ ಅನ್ಸತ್ತೆ... ಯಾರ್ ಹತ್ರ ಹೇಳ್ಕೊಳ್ಳೋದು ..ಎಷ್ಟೇ ಜೀವದ ಗೆಳೆಯರು  ಇದ್ರೂ, ಪೋಲಿ ಮಾತಾಡ್ಕೊಂಡ್ರೂ, ಅದೆಷ್ಟೇ ವಲ್ಗರ್ ಜೋಕ್ಸ್ ಶೇರ್ ಮಾಡ್ಕೊಂಡ್ರೂ ಅತಿ ಖಾಸಗಿ ಅನ್ಸೋ ಈ ಲೈಂಗಿಕ ಭಾವನೆಗಳು ಯಾವಾಗಲೂ ನನ್ನದೇ ಚೌಕಟ್ಟಿನಲ್ಲಿ ಇರತ್ತೆ ಮತ್ತೆ ಇರ್ಬೇಕು . ಅಷ್ಟಕ್ಕೂ ಅಪ್ಪಿ ತಪ್ಪಿ ಇದನ್ನ ಅವರತ್ರ  ಡಿಸ್ಕಸ್ ಮಾಡಿದ್ರೆ ತಮಾಷೆ ಮಾಡ್ಕೊಂಡು ನಗ್ತಾರೆ ಅಷ್ಟೇ ...ಯಾರಿಗ ಬೇಕು ಕೋಲು ಕೊಟ್ಟು ಫ್ರೆಂಡ್ಸ್  ಹತ್ರ ಸುಮ್ನೆ ಹೊಡಿಸ್ಕೊಳೋದು  ... ಅದ್ರ ಬದಲಿಗೆ ನನ್ನ ಬೆಚ್ಚನೆ ಭಾವ ನನ್ನಲ್ಲೇ ಇರ್ಲಿ ...ಅಷ್ಟೇ ಆದ್ರೆ ಬೇಸರ ಇರ್ಲಿಲ್ಲ .... ಇತ್ತೀಚಿಗೆ ಯಾಕೋ ಎಲ್ಲೋ ಅತಿ ಅನ್ಸೋ ಅಷ್ಟು ತಾಳ ತಪ್ತಾ ಇದೆ ಈ ಭಾವನೆಗಳು .. .ಏನು ಕಾರಣಾನೋ ನಂಗೆ ತೋಚಲ್ಲ .... ಅದ್ಯಾಕೆ ತಿಕ್ಲು ತರಹ ಆಡ್ತೀನೋ ... ಒಂದಿನ ಮೆಂಟಲ್ ಆಗ್ದೆ ಇದ್ರೆ ಸಾಕು ....

ಕಾರಣ ಕನಸಲ್ಲೂ ಕಾಡೋ ಹೆಣ್ಣುಗಳು ... ನನಸಲ್ಲಂತೂ ಕೇಳೋದೇ ಬೇಡ .... ಈ ಧ್ಯಾನಾನೆ ಜಾಸ್ತಿ ಆಗಿದೆ...








ಇಷ್ಟು ಸಾಕಾಗಲ್ಲ ಅಂತ ಸುತ್ತ ಮುತ್ತ ಇರೋ ಕಲೀಗ್ ಹುಡುಗೀರೆಲ್ಲ ಸೂಪರ್ ಪೀಸ್ಗಳು ... ಬೆಳಿಗ್ಗೆಯಿಂದ ಸಂಜೆ ತನಕ ಅಕ್ಕ ಪಕ್ಕ ಸುಳಿಯೋ ಬ್ಯೂಟಿಗಳು .... ಹೇಗ್ ನನ್ನನ್ನ ನಾ ಕಂಟ್ರೋಲ್ ಮಾಡ್ಕೊಳ್ಳಿ... ಹೋಗ್ಲಿ ಸಂಜೆ ರೋಡ್ನಲ್ಲಿ ಒಂದು ರೌಂಡ್ ಸುತ್ತಾಡ್ಕೊಂಡು ಬರೋಣ ಅಂದ್ರೆ ತೊಡೆ ಕಾಣ್ಸೋ ಹಾಗೆ ಬಟ್ಟೆ ಹಾಕ್ಕೊಂಡ್ ಎದುರಾಗೋ  ಕಾಲೇಜ್ ಹುಡುಗೀರು .... ಎಲ್ಲಿಂದ ಮನಸನ್ನ ಶಾಂತವಾಗಿ ಇಟ್ಕೊಳ್ಳೋದು ... ಮಾಲ್ಗಳಲ್ಲಿ,  ರೆಸ್ಟೋರಂಟ್ ಎಲ್ಲೇ ಹೋದ್ರೂ ಕಣ್ನಿಗೆ  ಕಾಣೋದು ಇವರೇ .... ನನ್ನ ಕಣ್ಣು ಕಾಮಾಲೆ ಆದ್ರೆ ಅವ್ರದ್ದೇನು ತಪ್ಪು ... ನನ್  ಹಾಳು  ಮನಸಿಗೆ ಅವರೇನು ಮುಖ, ಮೈ  ಮುಚ್ಕೊಂಡು ಓಡಾಡಕ್ಕಾಗತ್ತಾ ....

ಇದನ್ನೆಲ್ಲಾ ತಡ್ಕೊಳ್ಳಕ್ಕೆ ಆಗ್ದೆ ದಿನೇ ದಿನೇ  ಸಿಗರೇಟ್ ಸುಡೋದು ಜಾಸ್ತಿ ಆಗಿದೆ... ಲೈಟ್ ಆಗಿ ಈಗ್ಲೇ  ಕೆಮ್ಮು ದಮ್ಮು ಶುರುವಾಗಿದೆ.... ಬೇಕಾ ಇದೆಲ್ಲಾ .

ಇತ್ತೀಚಿಗೆ ಮೆಜಿಸ್ಟಿಕ್ ಬಸ್ ಸ್ಟ್ಯಾಂಡ್ನಲ್ಲಿ ಸಂಜೆ ಹೊತ್ತು ರಂಗು ರಂಗಾಗಿ ಮೇಕಪ್ ಮಾಡ್ಕೊಂಡು ಗಿರಾಕಿಗಳಿಗೆ ಕಾಯ್ತಾ ಇರೋ ಸುಂದರಿಯರನ್ನ ನೋಡಿ ಆಸೆ ಶುರುವಾಗಿದೆ ಜೊತೆಗೆ ಅದಕ್ಕಿಂತ ಹೆಚ್ಚು ಭಯ.. ಒಂದಿನ ಎಲ್ಲಾದ್ರೂ ಅವ್ರ ಹಿಂದೆ ಹೋಗಿ ಬೇಡ್ದೆ ಇರೋ ಕಾಯಿಲೆ ಎಲ್ಲ ಬರಿಸ್ಕೊಂಡು ದಾರಿ ತಪ್ದೆ ಇದ್ರೆ ಸಾಕು ಭಗವಂತ . ನೀನೆ ಕಾಪಾಡಬೇಕು ... ಇರೋ ಚಟಗಳಿಂದಾನೆ ಹೊರಗೆ ಬರಕ್ಕೆ ಆಗ್ತಿಲ್ಲ ... ಹೊಸ ಹೊಸ ಆಸೆ ಕೂಪಕ್ಕೆ ಹೋಗ್ದೆ ಇರೋ ಹಾಗೆ ಮನಸ್ಸು ಗಟ್ಟಿ ಮಾಡು ತಂದೆ...

ಮೊನ್ನೆ ಅಷ್ಟೇ ಊರಿನ್ ಹೊರ ಬಾಗದಲ್ಲಿ ಇರೋ ಫಿಲಂ ಟಾಕಿಸ್ಗೆ ಹೋಗಿ ಸೆಕೆಂಡ್ ಷೋ ಮಲಯಾಳಿ  A   ಸಿನೆಮಾ ನೋಡ್ಕೊಂಡು ಬರ್ಬೇಕಾದ್ರೆ ಸಾಕ್ ಸಾಕ್ ಆಗಿ ಹೋಗಿತ್ತು ..ಯಾರಾದ್ರೂ ಪರಿಚಯದವರು ಸಿಕ್ತಾರೋ ಅನ್ನೋ ಭಯ ...  ಆದರು ಯಾರೋ ಒಬ್ಬ ಫ್ರೆಂಡ್ ಬಡ್ಡಿಮಗ ನೋಡ್ ಬಿಟ್ಟಿದ್ದ .. ಮರುದಿನ ಕಿಂಡಲ್ ಮಾಡಕ್ಕೆ ಹೊಸ ವಿಷ್ಯ ಬೆರೆ... ಥೋ ಸಾಕಾಗ್ ಹೋಗಿದೆ ....

ಸಂಜೆ ಆಗೋದೇ ಕಾಯ್ತಾ ಇರ್ತೀನಿ ಈಗೀಗ ... ಯಾವಾಗ್ ಮನೆ ಸೇರಿ ಊಟದ್ ಶಾಸ್ತ್ರ ಮಾಡಿ ರೂಮ್ಸೇರಿ  ಬಾಗ್ಲು ಭದ್ರ ಮಾಡಿ ನನ್ ಪ್ರಪಂಚ ಸೇರ್ಕೊಳ್ಳೋದು ಅಂತ ... ಪೆನ್ ಡ್ರೈವ್ನಲ್ಲಿ ಡೌನ್ಲೋಡ್ ಮಾಡಿ ತುಂಬ್ಕೊಂಡಿರೋ ಪೋರ್ನ್ ವಿಡಿಯೋಗಳನ್ನ ನೋಡ್ತಾ ಮೈ ಮರೆತರೆ ಬೆಳಗ್ಗಿನ ಜಾವ ಎರಡು ಮೂರು ಘಂಟೆ ಆದ್ರೂ ಗೊತ್ತಾಗಲ್ಲ ... ಅದೇನ್ ಹುಚ್ಚನ್ ತರಹ ಅಡಿಕ್ಟ್ ಆಗಿದಿನೋ ಗೊತ್ತಿಲ್ಲ...  ನನ್ನ ವಯಸ್ಸಿನ ಎಲ್ಲ ಹುಡುಗರೂ ಹಿಂಗೆ ಆಡ್ತಾರೋ ನಾನೊಬ್ನೇ ಹಿಂಗೋ ಆ ಭಗವಂತಂಗೆ ಗೊತ್ತು .... ರಾತ್ರಿ ನಿದ್ರೆ ಇಲ್ದೆ ಕೆಂಪಾಗಿರೋ ಕಣ್ಣು ನೋಡಿ  ಬೆಳಿಗ್ಗೆ ಅಮ್ಮ 'ನಿದ್ದೆ ಬರ್ಲಿಲ್ವೇನೋ ಮಗಾ....' ಅಂದ್ರೆ ಏನ್ ಉತ್ತರ ಹೇಳ್ಬೇಕು ಅನ್ನಕ್ಕೆ ಆಗದೆ ಒದ್ದಾಟ....

ವಾಟ್ಸ್ ಆಪ್ನಲ್ಲಿ ಆಫೀಸ್ ಕೆಲಸದಲ್ಲಿ ಇರೋವಾಗ ಒಂದಷ್ಟು ಖಾಸಾ ಸ್ನೇಹಿತರು ಕಳ್ಸೊ ಪೋಲಿ ಫೋಟೋಗಳು,  ವಿಡಿಯೋಗಳು .ಅವು ಲೋಡ್ ಆಗೋ ತಂಕ ತಡ್ಕೊಳಕ್ಕೆ ಆಗ್ದೆ ಇರೋ ಅಷ್ಟು ಕುತೂಹಲ .. . ನೋಡೋ ತಂಕ ನೆಮ್ಮದಿ ಇಲ್ಲ...  ಕೊನೆ ಪಕ್ಷ ಎಷ್ಟೇ ಬ್ಯುಸಿ ಇದ್ರೂ ವಾಶ್ ರೂಮ್ಗೆ ಹೋಗಿ ನೋಡಿದ್ರೆ ಸಮಾಧಾನ...  ಒಂದಿನ ಯಾವ್ದಾದ್ರೂ ಕಲೀಗ್ ಹತ್ರ ಸಿಕ್ಕಿ ಹಾಕಿಕೊಳ್ಳದೆ ಇದ್ರೆ ಸಾಕು..   ನನ್ನ ಬಗ್ಗೆ ಬ್ಯಾಡ್ ಇಂಪ್ಪ್ರೆಶನ್ ಬೀಳಕ್ಕೆ ಜೊತೆಗೆ ನಗೆಪಾಟಲಾಗಕ್ಕೆ ....ಏನ್ ಕರ್ಮಾನೋ .... ಹಾಕೋ ನೆಟ್ ಪ್ಯಾಕ್ ನೆಟ್ಟಗೆ ಮೂರ್ ದಿನ ಬರಲ್ಲ ... ದುಡಿಯೋ ಅರ್ಧ ದುಡ್ಡೆಲ್ಲಾ ಇದಕ್ಕೆ ಆಯ್ತು ...

ಶುಕ್ರವಾರ ಆದ್ರೆ ಸಾಕು ಪೇಪರ್ನಲ್ಲಿ ಬರೋ ಲೈಂಗಿಕ  ಆರೋಗ್ಯಕ್ಕೆ  ಸಂಬಂಧಪಟ್ಟ ಪ್ರಶ್ನೆಗಳ  ಕಾಲಂ ಓದೋ ಹುಚ್ಚು ಬೇರೆ  .ಅದ್ರಲ್ಲಿ ಬರೋ ಒಂದೊಂದು ಪ್ರಶ್ನೆಗಳು ನಂದೆ ಅನ್ಸೋವಷ್ಟು ಹಾಗೆ ಇರತ್ತೆ ...ಅದನ್ನು ಓದಿ ಲೈಟ್ ಆಗಿ ಭಯ ಬೇರೆ ... ದಾರಿ ತಪ್ತಾ ಇರೋದು ಗೊತ್ತಾಗಿನೂ ಇನ್ನು ಆ ಕೆಟ್ಟ ಚಟದ ದಾರಿಯಲ್ಲೇ ನಡೆದ್ರೆ ಸುಖ ... ಬಿಟ್ಟು ಬಿಡದ ಮಾಯೆ ....   ಹಿಂಗೆ ತಿಕ್ಕಲು ತರಹ ಯೋಚನೆ ಮಾಡ್ತಾ ಹೋದ್ರೆ ಒಂದಿನ ಮಾನಸಿಕ ಡಾಕ್ಟರ್ ಹತ್ರ ಕೌನ್ಸಿಲಿಂಗ್ಗೆ ಹೋಗೋ ಕಾಲ ದೂರ ಇಲ್ಲ ಅನ್ಸತ್ತೆ ... ಇನ್ನು ಅರ್ಧ  ರಾತ್ರಿ ಪ್ರಸಾರ ಆಗೋ   ಲೈಂಗಿಕ ಆರೋಗ್ಯದ ಬಗ್ಗೆ ಡಾಕ್ಟರ್ ಇಂಟರ್ವ್ಯೂನಲ್ಲಿ  ಕೊಡೊ ಸಲಹೆಗಳು ತಪ್ಪದೆ ನೋಡ್ತಾ ಇದ್ರೂ ಈ ಚಟದಿಂದ ಹೊರ ಬರಬೇಕು ಅಂದ್ಕೊಂಡ್ರೂ  ಇನ್ನು ಅದೇ ಸುಳಿಯಲ್ಲೇ ಸುತ್ತುತ್ತಾ ಇದೀನಿ ...  ಇದಕ್ಕೆಲ್ಲಾ ಅಂತ್ಯ ಯಾವಾಗಲೋ ...


ಚೆನ್ನಾಗ್ ಗೊತ್ತು ...
ಕಾಮ, ಲೈಂಗಿಕ ಭಾವನೆ  ಏನ್ ತಪ್ಪಲ್ಲ ...
ವಯಸ್ಸಿಗೆ ತಕ್ಕಂತೆ ಪ್ರತಿಯೊಬ್ಬ ಮನುಷ್ಯನಲ್ಲೂ ಮೂಡೋ ಮಧುರ ಸಂವೇದನೆ ...
ಯಾರಿಂದನೂ ಅದನ್ನ ತಡೆಯಕ್ಕೆ ಆಗಲ್ಲ ...

ಆದ್ರೆ .....
ಅತಿ ಆದ್ರೆ ಅಮೃತವೂ ವಿಷವೇ....

ಹೌದು ...ಇದನ್ನ ನಾನೀಗ ನಿಯಂತ್ರಣ ಮಾಡಲೇ ಬೇಕು ..
ಇಲ್ಲಾ ಅಂದ್ರೆ ಚಂದದ ಜೀವನಾನ ನನ್ನ ಕೈಯಾರೆ ನಾನೇ ಹಾಳ್ ಮಾಡ್ಕೊತೀನಿ ....

 'ಸಾಧ್ಯಾನ ನಿನ್ನಿಂದ ಅಂತ....'  ಒಂದು ಮನಸು ಕೇಳಿದ್ರೆ.... 
'ಅರೇ ... ಯಾಕ್ ಸಾಧ್ಯ ಇಲ್ಲ..'. ಅಂತ ಭಂಡ ಧೈರ್ಯ ಇನ್ನೊಂದು ಉತ್ತರ ಕೊಡತ್ತೆ ....
ಇಲ್ಲಾ ... ನಾನೇ ನನ್ ಮನಸನ್ನ ಇನ್ನು ಮುಂದೆ ಹಿಡಿತಕ್ಕೆ ತಂದುಕೋಬೇಕು...

ಎಲ್ಲವೂ ನನ್ನ ನಿರ್ಧಾರದಲ್ಲೇ ಇದೆ...
ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಇದ್ರೆ ಯಾವ ಔಷಧಿ, ಡಾಕ್ಟರ್ ಅವಶ್ಯಕತೆ ಇಲ್ಲ....
ಹೇಳೋ ಅಷ್ಟು ಸುಲಭ ಇಲ್ಲ ... ಆದ್ರೆ ಪ್ರಯತ್ನ ಪಟ್ರೆ ಯಾವುದೂ ಅಸಾಧ್ಯನೂ  ಅಲ್ಲ...
'ಮನಸ್ಸಿದ್ದರೆ ಮಾರ್ಗ....'

ಇನ್ ಮುಂದೆ ನನ್ನ ಮನಸು ಉತ್ತಮ ಓದಿನ ಬಗ್ಗೆ ಕೇಂದ್ರಿಕೃತವಾಗ್ಬೇಕು ...
ವಿಪರ್ಯಾಸ ಅಂದ್ರೆ ಈ ಮನಸ್ಥಿತಿಯಿಂದ ನನ್ನ ಅತಿ ಪ್ರೀತಿ ಪಾತ್ರವಾದ ಓದು ಬರಹ ಎಲ್ಲ ಮರ್ತು ಹೋಗಿದೆ ...

ದಿನೇ ದಿನೇ ನಿಧಾನವಾಗಿ  ಈ ಚಟದಿಂದ ಉತ್ತಮ ಹವ್ಯಾಸಗಳತ್ತ ನನ್ನ ಮನಸ್ಸನ್ನ ತಿರುಗಿಸ್ಬೇಕು ...

ಹೌದು ... ನಾ ಅದನ್ನ ಸಾಧಿಸ್ಬೇಕು...
ಖಂಡಿತಾ ನಾ ಗೆಲ್ತೀನಿ ... 

ಒಂದಿನಾ ...
ನಿಧಾನ ಆದ್ರೂ ಸರಿ...

I WILL....








17 comments:

  1. ಮನ ತಟ್ಟುವ ಬರಹ.....
    ಹದಿ ಹರೆಯದ ಹುಚ್ಚು ಮನಸ್ಸುಗಳು
    ಭರವಸೆ.. ನಂಬಿಕೆಯನ್ನು ಯಾವಾಗಲೂ ಕಳೆದುಕೊಳ್ಳಬಾರದು..

    ಚಂದದ ಬರಹಕ್ಕೆ ಅಭಿನಂದನೆಗಳು...

    ReplyDelete
    Replies
    1. ಧನ್ಯವಾದಗಳು ಪ್ರಕಾಶಣ್ಣ :-)

      Delete
  2. ದೀಪಾ...
    ನಿನ್ನ ಮಟ್ಟಿಗೆ ಈ ಬರಹ ಹೊಸ ಪ್ರಯತ್ನ...!!
    ಚಂದದ ನಿರೂಪಣೆ...
    ಇಷ್ಟವಾಯಿತು...:-)

    ReplyDelete
    Replies
    1. ಹೌದು... ಹೊಸ ಪ್ರಯತ್ನಾನೆ... ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಯೂ ಶ್ರೀ ... :-)

      Delete
  3. arre Munna! a friend of mine had shared all these and more with me..its as if your writing is mirroring it again. liked it!! write more and more. Love you
    pachchi

    ReplyDelete
  4. ಸ್ವಲ್ಪ ದಿನ ಆದ್ಮೇಲೆ ಈಗ್ ಮತ್ತೊಮ್ಮೆ ನಿಮ್ಮ ಬ್ಲಾಗ್ ಗೆ ಬಂದೆ,..
    ಚೆನಾಗಿದೆ ಬರಹ.. ಮುಕ್ತಾಯದಲ್ಲಿ ಸ್ವಲ್ಪ ಹೆಚ್ಚ್ಚಿನದನ್ನು ನಿರೀಕ್ಷಿಸಿದ್ದೆ:) :)...ಬರೆಯುತ್ತಿರಿ..ನಮಸ್ತೆ

    ReplyDelete
    Replies
    1. ಚಿನ್ಮಯ್ ಧನ್ಯವಾದಗಳು .... :-)

      Delete
  5. ಚೆನ್ನಾಗಿದೆ.. ಈಗಿನ ನವಯುವಕರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.. ಹಿಂಗೆ ಮತ್ತೊಂದು ಭಾವದ ಒಳಹೊಕ್ಕು ಬರ್ಯೋದು ಸಾಧ್ಯವಾಗೋದಾದ್ರೂ ಹೆಂಗೆ ನಿಂಗೆ ಅಂತ ಯೋಚ್ನೆ ಮಾಡ್ತಾ ಇದ್ದೀನಿ !

    ReplyDelete
    Replies
    1. Ha... ha.... gottilla.. thank u blogge bheti kottiddakke prashasti... :-)

      Delete
  6. ಒಮ್ಮೆ ಗಾಬರಿ ಆಯಿತು.. ಮತ್ತೆ ಯಾರು ಬರೆದದ್ದು ಈ ಲೇಖನ ಎಂದು ನೋಡಿದೆ.. ವಿಭಿನ್ನ ಬರಹದ ಲೇಖನ ಮಾಲಿಕೆ ಇದು ಸಹೋದರಿ.

    ಮನಸ್ಸಿದ್ದರೆ ಮಾರ್ಗ.. ಮನಸ್ಸಿನಂತೆ ಮಹಾದೇವ ಎನ್ನುವ ಮಾತಿನಂತೆ ನಾ ಗೆದ್ದರೆ ಲೋಕವೇ ನನ್ನ ಹಿಂದೆ ಎನ್ನುವಂತೆ ಸೂಪರ್ ಬರಹ ಇದು ಇಷ್ಟವಾಯಿತು. ಹೇಳಬೇಕಾದ ಸಂದೇಶವನ್ನು ಕಥಾನಾಯಕನ ತೊಳಲಾಟದ ಮೂಲಕ ಹೇಳಿರುವುದು ಇಷ್ಟವಾಯಿತು

    ReplyDelete
  7. ಉತ್ತಮ ಆಶಯದ ಬರಹ.

    ReplyDelete
  8. Hi, nice one, I have started reading blogs recently & opened one. pls visit: aakshanagalu.blogspot. in
    Our valuable suggestions & comments r very important to improve the my writing.

    Regards,
    Kushi

    ReplyDelete