ನನ್ನ ಮಗ ಅಶ್ವಿನ್ ಹುಟ್ಟಿದ್ದು ತೀರ್ಥಹಳ್ಳಿಯ ಮಾನಸ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ. ಅವತ್ತು ತಾರೀಕು ೨೦ ಜನವರಿ ೨೦೦೩. ಸ್ವಲ್ಪ ಸಮಸ್ಯೆ ಇದ್ದದ್ದರಿಂದ ಸಹಜ ಹೆರಿಗೆಯಾಗದೆ ನನಗೆ ಶಸ್ತ್ರಕ್ರಿಯೆಯ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಹೆರಿಗೆ ಆಗಿ ಎರಡು ದಿನ ನಂತರ ನನಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು. ರಕ್ತಪರೀಕ್ಷೆ ಮಾಡಿದಾಗ ಮೂತ್ರ ಸೋಂಕಿನಿಂದ ಎಂದು ತಿಳಿದು ಬಂತು...ಅದಕ್ಕೆ ಲೀಟರ್ಗಟ್ಟಲೆ ನೀರು ಕುಡಿಯಬೇಕಿತ್ತು...ನನ್ನ ತಂದೆ ಪಾಪ...ತಮ್ಮ ಅಂಗಡಿ ಬಾಗಿಲು ಹಾಕಿದ ನಂತರ ನನ್ನನ್ನು ಒಮ್ಮೆ ಆಸ್ಪತ್ರೆಗೆ ಬಂದು ಮಾತನಾಡಿಸಿ, ಅಲ್ಲೇ ಇದ್ದ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಅಪ್ಪ-ಅಮ್ಮ ಇಬ್ಬರೂ ಊಟ ಮಾಡಿ, ಮನೆಗೆ ಹೋಗುವಾಗ ಒಗೆಯುವ ಬಟ್ಟೆಗಳನ್ನು ಸಹಾ ತೆಗೆದುಕೊಂಡು ಹೋಗುತ್ತಿದ್ದರು..ಮತ್ತೆ ಮನೆಗೆ ಹೋಗಿ ದೊಡ್ಡ ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ, ಅದನ್ನು ತಣ್ಣಗೆ ಮಾಡಿ, ಮಾರನೇ ದಿನ ಬೆಳಿಗ್ಗೆ ಆಸ್ಪತ್ರೆಗೆ ಬರುವಾಗ ಬಾಟಲಿಯಲ್ಲಿ ತುಂಬಿಕೊಂಡು ಬರುತ್ತಿದ್ದರು...ಹೀಗೆ ಮಗುವಿಗೂ ಹುಟ್ಟಿದ ಎರಡು ಮೂರು ದಿನ ಮೈ ಸ್ವಲ್ಪ ಹಳದಿ ಬಣ್ಣ ಇದ್ದುದರಿಂದ, ಆಸ್ಪತ್ರೆಯಲ್ಲೇ ನಾವು ಚಿಕಿತ್ಸೆಗಾಗಿ ನಿಲ್ಲಬೇಕಾಯ್ತು. ಏಳನೇ ದಿನ ಹೇಗೂ ನನಗೆ ಸಿಸೆರಿಯನ್ ಶಸ್ತ್ರಕ್ರಿಯೆಯ ಹೊಲಿಗೆ ಬಿಚ್ಚಬೇಕಾದ್ದರಿಂದ..ಅಷ್ಟೂ ದಿನ ಆಸ್ಪತ್ರೆಯಲ್ಲಿ ಝಂಡಾ ಹೂಡಿದ್ದೆವು...ಆಗ ಅಲ್ಲಿ ನಡೆದ ಎಷ್ಟೋ ಘಟನೆಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಉಳಿದಿದೆ..ತುಂಬಾ ಕಾಡುವ ನೆನಪೆಂದರೆ....ಈ ಕೆಳಗಿನ ಘಟನೆ...
ಅವತ್ತು ೨೧ ಜನವರಿ, ನನ್ನ ಹೆರಿಗೆಯಾದ ಮಾರನೇ ದಿನ. ಸಂಜೆ ದೀಪ ಹಚ್ಚುವ ಸಮಯ. ಬಹುಷಃ ೭ ಘಂಟೆ ಸಮಯ. ಆಸ್ಪತ್ರೆಯಿಡೀ ಗದ್ದಲ. ಸಂಬಂಧಿಕರನ್ನು, ರೋಗಿಗಳನ್ನು ಹೀಗೆ ಪರಿಚಯದವರನ್ನು ಮಾತನಾಡಿಸಲಿಕ್ಕೆ ಜನಗಳು ಬರುತ್ತಿದ್ದರು. ಕಾರಿಡಾರ್ನಲ್ಲಿ ಎಲ್ಲರೂ ಅತ್ತಿಂದಿತ್ತ ಓಡಾಡುವವರೆ. ನನ್ನ ಪಕ್ಕದ ಮಂಚದಲ್ಲಿ ಒಬ್ಬ ಹುಡುಗಿ ಸಹಾ ಗಂಡು ಮಗುವನ್ನು ಹೆತ್ತಿದ್ದಳು. ಅವಳನ್ನು ನೋಡಿಕೊಳ್ಳಲು ಅವಳ ಹತ್ತಿರ ಆಕೆಯ ಅಕ್ಕ ಇದ್ದರು. ಸ್ವಲ್ಪ ಮಧ್ಯ ವಯಸ್ಸಿನ ಹೆಂಗಸಾಕೆ. ಪಾಪದ ಸ್ವಭಾವ. ಈ ಹೊರಗಿನ ಗದ್ದಲದಲ್ಲಿ ಯಾರೋ ಒಬ್ಬ ಹೊಸ ಹೆಂಗಸು ಆಕೆಯ ಹತ್ತಿರ ಬಂದು..."ಅಕ್ಕಾ..ಈ ಮಗುವನ್ನು ಸ್ವಲ್ಪ ನೋಡಿಕೊಳ್ಳಿ..ನನ್ನ ಸೊಸೆ ಇನ್ನೊಂದು ರೂಮಿನಲ್ಲಿ ಇದ್ದಾಳೆ. ವೈದ್ಯರು ಹೊಸ ಔಷಧಿ ಬರೆದು ಕೊಟ್ಟಿದ್ದಾರೆ. ಕೆಳಗಿನ ಮೆಡಿಕಲ್ ಶಾಪ್ನಲ್ಲಿ ಸಿಗುತ್ತಿಲ್ಲ. ನಾನು ಇನ್ನೊಂದು ಅಂಗಡಿಯಲ್ಲಿ ವಿಚಾರಿಸಿ ಬೇಗ ತಂದು ಬಿಡುತ್ತೇನೆ..." ಎಂದು ಆಕೆ ಒಪ್ಪದಿದ್ದರೂ, ಆಕೆಯನ್ನು ಪುಸಲಾಯಿಸಿ, ಮಗುವನ್ನು ಆಕೆಯ ಕೈಗಿಟ್ಟು ಹೊರಡುತ್ತಾಳೆ. ಇಷ್ಟೆಲ್ಲಾ ಆದರೂ ಈ ವಿಷಯ ಯಾರ ಗಮನಕ್ಕೂ ಬರುವುದಿಲ್ಲ. ಯಾರೋ ಪರಿಚಯದ ಹೆಂಗಸಿರಬೇಕು...ಈಕೆ ಮಾತನಾಡುತ್ತಿದ್ದಾಳೆ ಎಂದು ಎಲ್ಲರೂ ಎಣಿಸುತ್ತಾರೆ...ಐದು ನಿಮಿಷ ಆಯ್ತು...ಹತ್ತು ನಿಮಿಷ ಆಯ್ತು...ಕೊನೆಗೆ ಕಾಲು ಘಂಟೆ ಆದರೂ ಆ ಹೆಂಗಸಿನ ಸುಳಿವೇ ಇಲ್ಲ...ಈಗ ಇವರಿಗೆ ನಿಜಕ್ಕೂ ಗಾಬರಿ ಶುರುವಾಗ್ತದೆ..ಮಂಚದ ಮೇಲೆ ಮಲಗಿಸಿದ ಮುದ್ದಾದ ಹೆಣ್ಣು ಮಗು. ತಲೆಗೆ ಟೊಪ್ಪಿ, ಕಾಲಿಗೆ ಸಾಕ್ಸ್, ಚಂದದ ಅಂಗಿ, ಬಣ್ಣದ ಬಟ್ಟೆಯಲ್ಲಿ ಸುತ್ತಿದ..ಹತ್ತು ದಿನಗಳ ಒಳಗಿನ ಮಗು.. ಯಾವ ಯೋಚನೆಯಿಲ್ಲದೆ...ಮುದ್ದಾಗಿ ಮಲಗಿತ್ತು..ನಿಧಾನಕ್ಕೆ ಒಬ್ಬರಿಂದ ಒಬ್ಬರಿಗೆ ಈ ವಿಷಯ ತಿಳಿದು, ಎಲ್ಲರೂ ಆ ಮಗುವನ್ನು ನೋಡಲು ಹಿಂಡು ಹಿಂಡು ಬರಲಿಕ್ಕೆ ಶುರು ಮಾಡಿದ್ದರು. "ಅಯ್ಯೋ..ಎಷ್ಟು ಮುದ್ದಾಗಿದೆ ಮಗು..ಯಾವ ಪಾಪಿಗಳೊ..ಬಿಟ್ಟು ಹೋಗಿದ್ದಾರೆ.." ಎಂದು ಒಬ್ಬರೆಂದರೆ, ಇನ್ನೊಬ್ಬರು..."ಯಾವ ಕರ್ಮ ಮಾರಾಯ್ರೆ...ಹೇಸಿಗೆ ಇಲ್ಲದ ಜನ..." ಅಂತ ತಲೆಗೊಂದರಂತೆ ಮಾತಾಡ್ಲಿಕ್ಕೆ ಶುರು ಮಾಡಿದ್ದರು...ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಆ ಹೆಂಗಸಿನ ಸೀರೆಯ ಗುರುತು ತಿಳಿದುಕೊಂಡು ಆಸ್ಪತ್ರೆಯಿಡೀ ಜಾಲಾಡಿದರೂ ಫಲಿತಾಂಶ ಮಾತ್ರ ಸೊನ್ನೆ...ಅವಳು ಮಗುವನ್ನು ಬಿಟ್ಟು ಎಲ್ಲೋ ಪರಾರಿಯಾಗಿದ್ದಳು.
![]() |
ಚಿತ್ರಕೃಪೆ-ಅಂತರ್ಜಾಲ |
ನಂತರ ಒಂದೆರಡು ದಿನ ಆಸ್ಪತ್ರೆಯ ಸಿಬ್ಬಂದಿಯೇ..ಆ ಮಗುವಿನ ಲಾಲನೆ-ಪೋಷಣೆ ಮಾಡಿದ್ದರು...ವಿಷಯ ತಿಳಿದ ಯಾರೋ ಸಹೃದಯಿಗಳು, ಮಕ್ಕಳಿಲ್ಲದವರು...ಕಾನೂನು ರೀತ್ಯ ಆ ಮಗುವನ್ನು ದತ್ತು ತೆಗೆದುಕೊಂಡರು. ಈ ನೆನಪು ಈಗಲೂ ನನ್ನನ್ನು ಕಾಡುತ್ತಿರುತ್ತದೆ.
ಈ ಜಗತ್ತಿನಲ್ಲಿ ಎಷ್ಟೊಂದು ಕಲ್ಲುಹೃದಯದ ಜನರಿರ್ತಾರೆ ಎಂದು ಕಣ್ಣಾರೆ ಕಂಡ ದಿನವದು. ಆ ತಾಯಿಗೆ ಅದೇನು ಸಮಸ್ಯೆಯೋ...ಹೆಣ್ಣು ಮಗುವೆಂಬ ತಾತ್ಸಾರವೋ, ಹಣದ ಸಮಸ್ಯೆಯೋ ಅಥವಾ ವ್ಯಭಿಚಾರಕ್ಕೆ ಬಲಿಯಾಗಿ ಹುಟ್ಟಿದ ಕೂಸೋ ಗೊತ್ತಿಲ್ಲ. ನಾನು ಯಾವಾಗಲೂ ವೃತ್ತಪತ್ರಿಕೆಯಲ್ಲಿ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗುವ..ಸಮಾಚಾರವನ್ನು ಓದುತ್ತಾ ಇರುತ್ತಿದ್ದೆ..ಆದರೆ ನನ್ನ ಕಣ್ಣ ಮುಂದೆ ಹೀಗೊಂದು ದುರಂತ ನಡೆಯುತ್ತದೆ ಎಂದು ಯಾವತ್ತೂ ಎಣಿಸಿರಲಿಲ್ಲ... :(
ಆದರೂ ಒಂದು ಸಂತೋಷದ ವಿಷಯವೆಂದರೆ ಒಬ್ಬ ವ್ಯಕ್ತಿ ಮಗುವನ್ನು ತಿರಸ್ಕರಿಸಿದರೆ.... ನೂರು ವ್ಯಕ್ತಿಗಳು ಮರು ಜೀವನ ಕೊಡಲು ತಯಾರಿರುತ್ತಾರೆ.... :))