Tuesday 13 November 2012

ಗೋವಾದಲ್ಲಿ ಐದು ರಾತ್ರಿ.. ಆರು ದಿನ.... ಭಾಗ-2

......ಮುಂದುವರಿದ ಪ್ರವಾಸ ಕಥೆ.....


 ಅಕ್ಟೋಬರ್ 18....ಇವತ್ತು  ಸ್ವಲ್ಪ ಲೇಟಾಗೆ ನಮಗೆ ಬೆಳಗಾಯ್ತು ..ಯಾಕಂದ್ರೆ ಇವತ್ತಿನ ಪ್ರಯಾಣದ ಸಮಯ ಶುರು 9.30ಕ್ಕೆ ...ಬೆಳಿಗ್ಗೆ 6.30 ಕ್ಕೆ  ಎದ್ದು ಬ್ರಶ್,ಸ್ನಾನ ಎಲ್ಲಾ ಮುಗಿಸಿ ನಮ್ಮ ರೆಸಾರ್ಟ್ನಿಂದ ಹೊರಟಿದ್ದು  8 ಘಂಟೆಗೆ ....ಅಂಜುನಾದಿಂದ ಮಾಪುಸಾ ತಲುಪುವಾಗ ಸಮಯ  8.30 .  ಪುನಃ ನಮ್ಮ "ವೃಂದಾವನ " ಹೋಟೆಲ್ಗೆ ಹೋಗಿ ತಿಂಡಿ-ಕಾಫಿ ಮುಗಿಸಿ ಮಾಪುಸಾ ರೆಸಿಡೆನ್ಸಿ ತಲುಪಿದ್ವಿ..
ಅವತ್ತು ನಮ್ಮ ಪ್ರಯಾಣ "ಉತ್ತರ ಗೋವಾ " ಕಡೆಗೆ ....ನಮ್ಮ ಬಸ್ ಮೊದಲು ಹೊರಟಿದ್ದು "ಕೊಲಂಗುಟ್  ರೆಸಿಡೆನ್ಸಿಗೆ "...ಅಲ್ಲಿ ಸುಮಾರು ಸಹಪ್ರಯಾಣಿಕರು ಹತ್ತಿದ ಮೇಲೆ ನಮ್ಮ  ಪ್ರಯಾಣ ಶುರು ...ಆಗ ಸುಮಾರು ಹತ್ತು ಘಂಟೆ ..ಬಿಸಿಲು ನಮ್ಮ ನೆತ್ತಿ ಸುಡಲು ಶುರು ಮಾಡಿತ್ತು ...

ಮೊದಲು ನಾವು ಭೇಟಿ ಕೊಟ್ಟಿದ್ದು   ಗೋವಾದ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳ .."ಅಗುಡಾ ಫೋರ್ಟ್ " (Aguada Fort)  ...ಇದು ಇರೋದು ಮಾಂಡವಿ ನದಿಯ ದಡದಲ್ಲಿ ..ಇದು ಹದಿನೇಳನೆ ಶತಮಾನದ ಪೋರ್ಚುಗೀಸರ ಕಾಲದ್ದು .ಆಗ ಅವರ ಎದುರಾಳಿಗಳಾಗಿದ್ದ ಡಚ್ ಮತ್ತು ಮರಾಠರಿಂದ ರಕ್ಷಿಸಿಕೊಳ್ಳಲು ಇದನ್ನು ಕಟ್ಟಿದ್ದರು. ಕೆಂಪು ಕಲ್ಲಿನ ಕೋಟೆ..ಇಲ್ಲಿ ಆಗ ಸಿಹಿನೀರಿನ ವ್ಯವಸ್ಥೆ ಇತ್ತಂತೆ . ಅಲ್ಲಿ ಸಾಗುವ ಹಡಗುಗಳಿಗೆ ಆಗ  ನೀರಿನ ವ್ಯವಸ್ಥೆ ಮಾಡುತ್ತಿದ್ದರಂತೆ....ಅದಕ್ಕೆ ಈ ಸ್ಥಳಕ್ಕೆ "ಅಗುಡಾ " ಎಂಬ ಹೆಸರು ...ಅಗುಡಾ  ಅಂದರೆ "ನೀರು" ....ಸ್ವಲ್ಪ ಸಮಯ  ಈ ಕೋಟೆಯನ್ನು ಜೈಲಾಗಿ ಸಹಾ ಉಪಯೋಗಿಸುತ್ತಿದ್ದರಂತೆ ...ಈ  ಕೋಟೆಯ ಎದುರುಗಡೆ ಅದೆಷ್ಟು ದೊಡ್ಡ ಕಂದಕಗಳೆಂದರೆ ಯಾವ ಖೈದಿಯು ತಪ್ಪಿಸಿಕೊಳ್ಳಲಾರದಷ್ಟು ...






ಇದು ಅಲ್ಲಿಯ ಲೈಟ್ ಹೌಸ್ ....




ಕೋಟೆಯ ಒಳಭಾಗದ ಒಂದು ನೋಟ 


ಸುಂದರ ಒಳಾಂಗಣ




ಕೋಟೆಯ ಹೊರಭಾಗದ ಒಂದು ದೃಶ್ಯ








ಈ ಕೆಳಗಿನ ಚಿತ್ರ ನೋಡಿದರೆ ನೆನಪಾಗೋದು ನಮ್ಮ ಪ್ರಯಾಣದಲ್ಲಿ ಸಹಪ್ರಯಾಣಿಕರಾಗಿದ್ದ ಈ ದಂಪತಿಗಳು ...ಈ ಅಂಕಲ್ ದೆಹಲಿಯಿಂದ ಬಂದವರು ...ತುಂಬಾ ತಮಾಷೆ ಮನುಷ್ಯ ....ಈಗ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ...ನಾನದಕ್ಕೆ "ಅಂಕಲ್ ಈಗ ಮನೆಯಲ್ಲಿ ಸಮಯ ಹೇಗೆ ಕಳೆಯುತ್ತಿರಿ ..??? " ಅಂದಿದ್ದಕ್ಕೆ ..."ದೀಪಾ ...ಕುಚ್ ನಹಿಜಿ ...ಖಾತೆ ಹೇ ....ಪೀತೇ ಹೇ ....ಸೋತೇ ಹೇ ...ಅಗರ್ ಟೈಮ್ ಮಿಲಾ ತೋ ಬೀವಿ ಸೆ ಪ್ಯಾರ್ ಭೀ ಕರ್ತೆ ಹೇ ..." ಅಂದಾಗ ಅಲ್ಲೊಂದು ದೊಡ್ಡ ನಗೆ ಎಲ್ಲರ ಮುಖದಲ್ಲಿ ಮೂಡಿತ್ತು ..ಅವರ ಹೆಂಡತಿ ಪಾಪ ನಾಚಿ ಕೆಂಪಾಗಿದ್ದರು ...ಕಣ್ಣಿನಿಂದಲೇ ಗಂಡನನ್ನು ಬೈದಿದ್ದರು ಸಹಾ .... :))




ಕೋಟೆಯನ್ನೆಲ್ಲಾ ಸುತ್ತು ಬಂದು ಅಲ್ಲಿಂದ ನಾವು ಸುಮಾರು ಒಂದು ಘಂಟೆ ಪ್ರಯಾಣ ಮಾಡಿ ತಲುಪಿದ್ದು ..    "ಮಾಯೇಮ್ ಲೇಕ್ "..ನಿಸರ್ಗದ ಮಡಿಲಲ್ಲಿರುವ ಇಲ್ಲಿ ಬೋಟಿಂಗ್ ವ್ಯವಸ್ಥೆ ಸಹಾ ಇದೆ. ನನ್ನ ಮಗನಿಗೆ ಆ ಉರಿ ಬಿಸಿಲಿನಲ್ಲೂ ಆ ಪೆಡಲ್ ಬೋಟ್ನಲ್ಲಿ ಹೋಗಬೇಕೆಂಬ ಆಸೆ...ಸರಿ ಎಂದು ನಾವು ಹೊರಟಿದ್ದು ಹೀಗೆ...




ಸುಂದರ ಪ್ರಕೃತಿ ನಮ್ಮ ಮುಂದೆ ಹೀಗಿತ್ತು 



ಕೇವಲ ಒಂದೇ ಒಂದು ಬಾತು ಈಜುತ್ತಿತ್ತು ನಮ್ಮ ದೋಣಿಯ ಹತ್ತಿರ ....



 
ಸುಮಾರು ಬಾತುಕೋಳಿಗಳು ತುಂಬಾ ದೂರದಲ್ಲಿ ಇದ್ದವು. ಅಲ್ಲಿದ್ದ ಸೆಕ್ಯುರಿಟಿ, "ಮೇಡಂ ..ನಿಮ್ಮ ಹತ್ತಿರ ಬಿಸ್ಕತ್ ಅಥವಾ ಏನಾದರು ತಿಂಡಿ ಇದ್ದರೆ ಕೊಡಿ ...ನಾನು ಅವುಗಳನ್ನು ಕರಿತೀನಿ" ಅಂದಾಗ  " ಸರಿ ಕರಿಯಪ್ಪಾ " ಅಂದೆ..ಅವನು .."ಬಾ ..ಬಾ ...ಬಾ ..." ಅಂತ ಕರೆದದ್ದೇ ತಡ ....ಬಾತುಗಳು
ಶಬ್ದ ಮಾಡುತ್ತಾ ಬರುವ ಬಗೆ ಹೀಗಿತ್ತು .... :))



ಆ ಬಾತುಗಳು  ಮುದ್ದು ಮುದ್ದಾಗಿ ಚಿಪ್ಸ್ ತಿಂದದ್ದು ಹೀಗೆ .... :))



ಮಾಯೇಮ್  ಲೇಕ್ ನಂತರ ನಾವು ದಾರಿ ಮಧ್ಯೆ ಭೇಟಿ ನೀಡಿದ ಒಂದು ಸ್ಥಳ 
ಮಹಾದೇವ ದೇವಸ್ಥಾನ ....


ದೇವಸ್ಥಾನದ ದರ್ಶನದ ನಂತರ ಊಟದ ಸಮಯವಾಗುತ್ತಿತ್ತು ....ನಮ್ಮ ಬಸ್ ನಿಂತದ್ದು ಒಂದು ವೆಜ್-ನಾನ್ ವೆಜ್ ರೆಸ್ಟೋರಂಟ್ ಹತ್ತಿರ....ಆಗಲೇ ಜನಗಳು ತುಂಬಿದ್ದರು..ನನ್ನ ಗಂಡ ಗೋವಾದ "ಫಿಶ್-ಥಾಲಿಗೆ " ಆರ್ಡರ್ ಕೊಟ್ಟರೆ ನಾನು ವೆಜ್ ಥಾಲಿ ....ಅವರ ಊಟದ ವಾಸನೆ ಅನುಭವಿಸಿ ನನಗಂತು ಊಟ ಮಾಡಿದ್ದು ಸಮಾಧಾನವಾಗಿಲ್ಲ... :( ಈ ಕಾರಣಕ್ಕೆ ನನ್ನಿಂದ ಸ್ವಲ್ಪ ಬೈಸಿಕೊಂಡರು ...ಸಹಾ....ಊಟ  ಮುಗಿಸಿ ನಮ್ಮ ಮುಂದಿನ ಪ್ರಯಾಣ  "ವ್ಯಾಗಾಟಾರ್ ಬೀಚ್...."

ಚಂದದ ವ್ಯಾಗಾಟಾರ್ ಬೀಚ್ನ ಒಂದು ದೃಶ್ಯ ..


ಅಲ್ಲೊಂದು ಶೂಟಿಂಗ್ ನಡೀತಿತ್ತು ...ತೆಲುಗು ಚಿತ್ರದ ಹಾಡಿನದ್ದು ...


ವ್ಯಾಗಟಾರ್ ಬೀಚ್ ನಂತರ ನಮ್ಮ ಪಯಣ "ಅಂಜುನಾ ಸಮುದ್ರದ" ಕಡೆಗೆ .
.ಇದು ನಮ್ಮ ರೆಸಾರ್ಟ್ನಿಂದ ಕೇವಲ ಅರ್ಧ ಕಿ.ಮೀ ದೂರ ಇತ್ತು ....ಇಲ್ಲಿಯ ವಿಶೇಷತೆ ಅಂದರೆ ತೀರದಲ್ಲಿ ಮರಳು ಕಡಿಮೆ ...ಬಂಡೆ ಕಲ್ಲುಗಳೇ ಜಾಸ್ತಿ .....ಗೋವಾದಲ್ಲಿನ ಸಮುದ್ರಗಳು ಒಂದಕ್ಕಿಂತ ಒಂದು ಭಿನ್ನ .....



ಅಂಜುನಾದ ತೀರದಲ್ಲಿ ನಮ್ಮ ಕುಟುಂಬ ...


ಅಲ್ಲಿಗೆ ಅದು ನಮ್ಮ ಕೊನೆಯ ವೀಕ್ಷಣಿಯ ಸ್ಥಳವಾಗಿತ್ತು ..... ಆದರೆ ಇವತ್ತೇಕೋ ನೋಡಿದ ಸ್ಥಳಗಳಿಗಿಂತ ಪ್ರಯಾಣವೇ ಜಾಸ್ತಿ ಅನ್ನಿಸ್ತಾ ಇತ್ತು....ಹೀಗೆ ನಾನು ಯೋಚನೆ ಮಾಡ್ತಾ ಇದ್ದರೆ ಬಸ್ಸಿನಲ್ಲಿ "ಅಶ್ವಿನ್" ಮತ್ತು "ಮನ್ನತ್" ಆಟ ಹೀಗೆ ಸಾಗಿತ್ತು ....stone... paper..scissors......


ಪುನಃ ನಮ್ಮ ಪ್ರಯಾಣ ಸಾಗಿದ್ದು ಕೊಲ್ಲo ಗುಟ್ ರೆಸಿಡೆನ್ಸಿಗೆ... ನಂತರದ ನಮ್ಮ ಕಾರ್ಯಕ್ರಮ ..ಪಣಜಿಯಲ್ಲಿರುವ ಸಂಜೆ 6 ಘಂಟೆಗೆ ಶುರುವಾಗುವ "ರಿವರ್ ಕ್ರೂಸ್"....ಸುಮಾರು ದೊಡ್ಡ ಬೋಟ್ನಲ್ಲಿ ಒಂದು ಘಂಟೆಯ ಪ್ರಯಾಣ ...ಭರ್ಪೂರ್  ಮೋಜು-ಮಸ್ತಿ ...ಅಂದರೆ ಹಾಡು, ನೃತ್ಯ .....ಆ ದೋಣಿಯಲ್ಲಿ ಸುಮಾರು ದೊಡ್ಡ ವೇದಿಕೆ ...150 ರಿಂದ 200 ಖುರ್ಚಿಗಳು ... ಮಕ್ಕಳಿಗೆ , ಮಹಿಳೆಯರಿಗೆ ,ಪುರುಷರಿಗೆ , ಜೋಡಿಗಳಿಗೆ , ಎಲ್ಲರಿಗೂ ನೃತ್ಯ ಮಾಡುವ ಅವಕಾಶ....ಜೊತೆಗೆ ಅವರ ಸಿಬ್ಬಂದಿಯಿಂದ ಹಾಡು ನೃತ್ಯ ...ಸಂಜೆಯ ಸಮಯ...ಕತ್ತಲಾಗುತ್ತಾ ಬರ್ತಿತ್ತು ...ನಾವು ಒಂದು ಘಂಟೆ ನೀರಿನಲ್ಲಿ ತೇಲುತ್ತಿದ್ದೇವೆ ಎಂದು ಮರೆಸುವಷ್ಟು ಮನರಂಜನೆ .... 

ದೋಣಿಯೊಳಗೆ ಹೀಗೆ ಕೂತಿದ್ವಿ ನಾವು .... :))



ಅವರ ಸಿಬ್ಬಂದಿಯಿಂದ ಮೊದಲ ನೃತ್ಯ ...ದೇಶ ಭಕ್ತಿಯ ಹಾಡಿಗೆ....



ನಮ್ಮ ಬೋಟ್ ನಿಂದ ಕಂಡ ಇನ್ನೊಂದು ಅಲಂಕೃತ ದೋಣಿ ...



ಸಧ್ಯಕ್ಕೆ  ಅಪ್ಲೋಡ್ ಆದ ಒಂದೇ ವಿಡಿಯೋ ...ಗೋವಾದಲ್ಲಿ ಪ್ರಸಿದ್ಧಿಯಾದ ತೆಂಗಿನಕಾಯಿಯ  ಚಿಪ್ಪಿನ ಜೊತೆ ಒಂದು "ಗೋವನ್ ನೃತ್ಯ "....ಇನ್ನೆರಡು ಚಂದದ ವಿಡಿಯೋಗಳು ಯಾಕೋ ಕೈ ಕೊಟ್ಟಿದೆ ...ಅಪ್ಲೋಡ್ ಮಾಡಕ್ಕೆ ಆಗತಾನೆ ಇಲ್ಲ .. :((


ರಿವರಕ್ರುಸ್ ಮುಗಿಸಿ ಹೊರ ಬರುವಾಗ ಸಮಯ 7.45 ದಾಟಿತ್ತು ...ನಮಗೆ ಅಂಜುನಾಗೆ ಕೊನೆಯ ಬಸ್ 8 ಕ್ಕೆ ....ನಮ್ಮ ಡ್ರೈವರ್ ಪಾಪ...ಫಾಸ್ಟ್ ಆಗಿ ಗಾಡಿ ಓಡಿಸಿ ಸುರಕ್ಷಿತವಾಗಿ ನಮಗೆ ಬಸ್ ನಿಲ್ದಾಣಕ್ಕೆ ತಲುಪಿಸಿದ್ದರು ...ಅವರಿಗೊಂದು .."ಥ್ಯಾಂಕ್ಸ್ " ಹೇಳಿ ಬಸ್ ಹಿಡಿದು ಅಂಜುನಾ ತಲುಪುವಾಗ ರಾತ್ರಿ 8.45 ...ರೂಮಿಗೆ ಬಂದು ಒಮ್ಮೆ ಫ್ರೆಶ್ ಆಗಿ ರಾತ್ರಿಯ ಊಟಕ್ಕೆ ಇನ್ನೊಂದು ಹೋಟೆಲ್ಗೆ ಹೋದ್ವಿ ...ಅದರ ಹೆಸರು.."ಇಥಿಯೋಪಿಯಾ "...ನನ್ನ ಪುಣ್ಯಕ್ಕೆ ಅಲ್ಲಿಯ ವಾತಾವರಣ ಚೆನ್ನಾಗಿತ್ತು ..ಊಟ ಮುಗಿಸಿ ರೂಮ್ ತಲುಪಿದ ನಂತರ ಪ್ಯಾಕಿಂಗ್ ಮಾಡಬೇಕಿತ್ತು ...ಮರುದಿನ ನಮ್ಮ ಚೆಕ ಔಟ್  ಇತ್ತು ...ಎಲ್ಲಾ ಮುಗಿಸಿ ಮಲಗುವಾಗ ಹನ್ನೊಂದು ಘಂಟೆ .... ಉಫ್ .......

ಮರುದಿನ ಅಕ್ಟೋಬರ್ 19...ಬೆಳಕಾಯ್ತು ..ಎಲ್ಲಾ ಬೆಳಗಿನ ಕೆಲಸ ಮುಗಿಸಿ ರಿಸೆಪ್ಶನ್ನಲ್ಲಿ ಬಿಲ್ ಚುಕ್ತಾ ಮಾಡಿ ರೆಸಾರ್ಟ್ನಿಂದ ಹೊರಬರುವಾಗ ನೆನಪಾದದ್ದು ...ನಾವು ಮೂರೂ ದಿನದಿಂದ ಇಲ್ಲಿ ಇದ್ದರು ..ಬೆಳಿಗ್ಗೆ ಅವಸರದಲ್ಲಿ ಹೊರಡೋದು ...ಕತ್ತಲೆಯಾದ ಮೇಲೆ ರೂಮು ಸೇರೋದು...ಹಾಗಾಗಿ   ಒಂದು ಫೋಟೋ ತೆಗೆದಿಲ್ಲ ಎಂದು .....ಕೂಡಲೇ ಕ್ಯಾಮರಾ ಹೊರತೆಗೆದು ಕ್ಲಿಕ್ಕಿಸಿದ ಚಿತ್ರಗಳು ಹೀಗಿದ್ದವು ....

ಇದು ಅಲ್ಲಿಯ ವಿಶ್ರಾಂತಿ ಸ್ಥಳ...



ನಮ್ಮ ರೂಮ್ನ ಹೊರಭಾಗದಲ್ಲಿ..... 



ಬೆಳಗಿನ ಎಳೆ ಬಿಸಿಲಿನಲ್ಲಿ ರೆಸಾರ್ಟ್ನ ಲುಕ್ ಹೀಗಿತ್ತು..



ಅಲ್ಲಿಯ ಅತಿ ಸುಂದರ ಈಜುಕೊಳ 



ನಮ್ಮ ರೆಸಾರ್ಟ್ನ ಮುಂಭಾಗ ....


ಫೋಟೋ ಸೆಶನ್ ಮುಗಿಸಿ ಬಸ್ ಹಿಡಿದು ಬರಬೇಕಾದರೆ ಆಗಲೇ ಒಂದು ಬಸ್ ಮಿಸ್....:(   ನನ್ನ ಗಂಡ ಅಂತು "ಬೇಗ ಬರೋದು ಬಿಟ್ಟು ಅದೇನು ಫೋಟೋ ಹುಚ್ಚು" ಅಂತ ಗೊಣಗ್ತಾ ಇದ್ದರು ...ಅದಕ್ಕೆ ನಾನು "ಬಸ್ ಇನ್ನೊಂದು ಸಿಗುತ್ತೆ ...ಫೋಟೋ ಬೇಕಂದ್ರೆ ಪುನಃ ಗೋವಾಕ್ಕೆ ಬರಕ್ಕೆ ಆಗತ್ತಾ ಅಂತ " ಉತ್ತರ ಕೊಟ್ಟು ಸುಮ್ಮನಾಗಿಸಿದ್ದೆ ....

ನಂತರ ಹತ್ತು ನಿಮಿಷ ಕಾದು ಬಂದ ಬಸ್ನಲ್ಲಿ ಮಾಪುಸಾಗೆ ಬಂದು ತಿಂಡಿ ತಿಂದು ನಾವು ಹೊರಟದ್ದು ಪಣಜಿಗೆ..... ಎರಡು ದೊಡ್ಡ ಬ್ಯಾಗನ್ನು ಬಸ್ಸಿನ ಡಿಕ್ಕಿಯಲ್ಲಿ ಹಾಕಿದ್ರೆ, ಇನ್ನೊಂದು ಬ್ಯಾಗ್ ನಾವು ಕೂರುವ ಮೇಲೆ ಇರುವ ಸಾಮಾನಿಡುವ ಜಾಗದಲ್ಲಿ ಇಟ್ಟಿದ್ದೆವು ....ಪಣಜಿಯಲ್ಲಿ ಇಳಿದು ನೀರಿನ ಬಾಟಲ್ ಅಂತ ನೆನಪಾದ್ರೆ ...ನೀರಿದ್ದ  ನಮ್ಮ ಒಂದು ಬ್ಯಾಗ್ ಬಸ್ ಒಳಗಡೇನೆ  ಮರೆತಿದ್ವಿ...ಪುನಃ ಓಡಿದರೆ ದೇವರ ದಯದಿಂದ ಬಸ್ ಇನ್ನು  ಅಲ್ಲೇ ಇತ್ತು ...ನಮ್ಮ ಬ್ಯಾಗ್ ಸಹಾ ಸುರಕ್ಷಿತವಾಗಿತ್ತು ...ಅಕಸ್ಮಾತ್ ಕಳೆದಿದ್ದರೆ ಅದರಲ್ಲಿದ್ದ ಇನ್ನೊಂದು ಕ್ಯಾಮರಾ ನಮ್ಮ ಕೈ ತಪ್ಪಿ ಹೋಗುತ್ತಿತ್ತು ....

ಪಣಜಿಯಿಂದ  ನಮ್ಮ ಪ್ರಯಾಣ ...ಸ್ನೇಹಿತರ ಮನೆ "ಮಡಗಾಂವ್ ಗೆ" ...ಇನ್ನು ನಮ್ಮ ಎರಡು ದಿನದ ಉಳಿಯುವ ವ್ಯವಸ್ಥೆ ಅವರ ಮನೆಯಲ್ಲಿ ....ಅಲ್ಲಿ ತಲುಪುವಾಗಲೇ 11 ಘಂಟೆ ...ಲಗೇಜ್ ಎಲ್ಲಾ ಇಟ್ಟು ಸ್ವಲ್ಪ "ಚಾ" ಕುಡಿದು ನಾವು ಹೊರಟಿದ್ದು "ಜಾoಬವಲಿ   ದಾಮೋದರ ದೇವಸ್ಥಾನಕ್ಕೆ ..." ಅದು ನಮ್ಮ ಕುಲದೇವರಾದ್ದರಿಂದ ಅಲ್ಲಿ ಭೇಟಿ ಕೊಡಬೇಕಿತ್ತು ...ಪುನಃ ಬಸ್ ಪ್ರಯಾಣ ...ಅಲ್ಲಿ ತಲುಪುವಾಗ ಮಧ್ಯಾಹ್ನ 1.30 ....ದೇವರ ಸೇವೆ ಮಾಡಿಸಿ ಅಲ್ಲಿಯೇ ಊಟದ ವ್ಯವಸ್ಥೆ ಇದ್ದದ್ದರಿಂದ ಅದನ್ನು ಮುಗಿಸಿದ್ದೆವು... ತುಂಬಾ ದಿನದ ನಂತರ ಅನ್ನ-ಸಾಂಬಾರು , ಉಪ್ಪಿನಕಾಯಿ,ಪಲ್ಯ ತಿಂದಿದ್ದೆವು...ನಾನು ಅಲ್ಲಿ ಹೋಗದೆ ಸುಮಾರು ಆರು ವರ್ಷಗಳೇ ಕಳೆದಿತ್ತು ..ನನ್ನ ಮಗ ಮೂರೂ ವರ್ಷದವನಿದ್ದಾಗ ಒಮ್ಮೆ ಭೇಟಿ ನೀಡಿದ್ದೆವು ..ಆಗ ಅವನು "ಶೂ " ಹಾಕಿಕೊಂಡು ದೇವಳದ ಒಳಗೆ ಬರಬೇಕೆಂದು ಹಠ ಮಾಡ್ತಾ ಇದ್ದ...ಈ ಸಾರಿ ಅವನಿಗೆ "ನೆನಪಿದೆಯೇನೋ ನಿನ್ನ ಪುಂಡತನ ?? ".....ಎಂದರೆ "ಇಲ್ಲ" ಅಂತಾ ತಲೆಆಡಿಸ್ತಾ  ಉತ್ತರ ಕೊಟ್ಟ .....

ಕೆಳಗೆ ಅಲ್ಲಿಯ ಕೆಲವು ಚಿತ್ರಗಳು ಇದೆ ನೋಡಿ 
ಶ್ರೀ ದಾಮೋದರ ದೇವಸ್ಥಾನ ...ಜಾoಬವಲಿ ..ಗೋವಾ ..



ದೇವಸ್ಥಾನದ ಒಳಭಾಗದಲ್ಲಿ ಕ್ಯಾಮರಾ ನಿಷಿದ್ಧ ಇರುವುದರಿಂದ ಹೊರಗಿನಿಂದಲೇ ಒಂದು ಕ್ಲಿಕ್ ....



ದೇವಸ್ಥಾನದ ಹೊರಭಾಗದಲ್ಲಿ ನಾವು...


ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡು 4 ಘಂಟೆಗೆ ಅಲ್ಲಿoದ ಪುನಃ ಮಡಗಾಂವ್ ಗೆ ವಾಪಸ್ಸು ....ಅಲ್ಲಿ ತಲುಪಿದಾಗ ಸಂಜೆ ...ಎದುರಿಗೆ ಸಿಕ್ಕಿದ್ದು "ಕಾಮತ್ ಹೋಟೆಲ್ " ಅಲ್ಲಿ ಕಾಫಿ-ತಿಂಡಿ ತಿಂದು ಹತ್ತಿರವೇ ಇದ್ದ ಉದ್ಯಾನವನಕ್ಕೆ ಹೋದ್ವಿ .....

ಅಲ್ಲಿ ತೆಗೆದ ಒಂದು ಫುಲ್ ಫ್ಯಾಮಿಲಿ ಚಿತ್ರ ...



ಸುಂದರ ಉದ್ಯಾನವನದ ಒಂದು ನೋಟ 


ನಂತರ ಸ್ವಲ್ಪ ಮಡಗಾಂವ್ ಪೇಟೆ -ಅಂಗಡಿ ಸುತ್ತಿ ಸ್ನೇಹಿತರ ಜೊತೆ 8 ಘಂಟೆಗೆ ಅವರ ಮನೆ ತಲುಪಿದ್ವಿ....

ಅಲ್ಲಿ ಅವರ ಮಗನ ಜೊತೆ ನನ್ನ ಮಗ.. :)) ಇಬ್ಬರು ಟಿ ವಿ , ಕಂಪ್ಯೂಟರ್ ಅಂತ ಫುಲ್ ಬ್ಯುಸಿ .....


 ...ಅವರು ರಾತ್ರಿಗೆ ಊಟಕ್ಕೆ ಚಿಕನ್ ಐಟಂ  ಪಾರ್ಸೆಲ್ ತಂದಿದ್ದರು...ನನಗೋಸ್ಕರ ಸಸ್ಯಾಹಾರಿ ತಿoಡಿಗಳು..ಇದನ್ನೆಲ್ಲಾ ತಿಂದು ಮುಗಿಸಿ, ಹರಟೆ ಹೊಡೆದು  ಮಲಗುವಾಗ ರಾತ್ರಿ ಸುಮಾರು 11.30 ಘಂಟೆ ... 

ಅಲ್ಲಿಗೆ ಅವತ್ತಿನ ನಮ್ಮ ದಿನ-ರಾತ್ರಿ  ಮುಗಿದಿತ್ತು ...

ಇನ್ನುಳಿದ ಪ್ರಯಾಣ ಕಥೆಗಳು ಮುಂದಿನ ಸಂಚಿಕೆಯಲ್ಲಿ....

ಪ್ರೀತಿಯಿಂದ 

ಸುದೀಪ .....



21 comments:

  1. ಒಳ್ಳೆ ಮುಂದುವರಿಕೆ. ಪ್ರವಾಸದ ಕಥನವೇ ಹಾಗೆ, ನಿಮ್ಮಲ್ಲಿ ನಾವೊಬ್ಬರು ಎಂದು ಓದಿಸುತ್ತದೆ. ಮುಂದೆ?

    ReplyDelete
    Replies
    1. ಮುಂದೆ....ನೋಡೋಣ ಈಶ್ವರ್!!!...ಏನಿದೆ ಅಂತ ನೆನಪು ಮಾಡಿ ಇನ್ನೊಂದು ಸಂಚಿಕೆಯಲ್ಲಿ ಬರೀತೀನಿ... :)

      Delete
  2. ಅಕ್ಕಾ,
    ಗೋವೆಯ ಎರಡನೇಯ ಕಂತು ತುಂಬಾ ಚೆನ್ನಾಗಿದೆ..
    ಸಾಮಾನ್ಯವಾಗಿ ನನಗೂ ಫೋಟೋಗಳಿಗೂ ಅಷ್ಟಕ್ಕಷ್ಟೇ..ನೋಡಿದರೆ ನೋಡಿದೆ,ನೋಡದಿದ್ದರೆ ಇಲ್ಲ...ಹಂಗೆ ಮುಂದಿನ ಅಕ್ಷರ ಹುಡುಕಿ ಓದುತ್ತಿರುತ್ತೇನೆ...

    ಇವತ್ತು ಮಾತ್ರ ಆ ಬೋಟಿನಿಂದ ಕಂಡ ಅಲಂಕೃತ ದೋಣೊಯ ದೃಶ್ಯ ಮೂರ್ನಾಕು ಬಾರಿ ಕಣ್ಣನ್ನು ಸೆಳೆಯಿತು..ಕೆಳಗೆ ಹೋದವನು ಮತ್ತೆ ಮೇಲೆ ಬಂದು ನೋಡಿ ಹೋದೆ...ತುಂಬಾ ಚೆನ್ನಾಗಿದೆ ಆ ಚಿತ್ರ ಮಾತ್ರಾ...


    ಹಾಂ ಲೇಖನದ ಬಗ್ಗೆ ಹೇಳೋದಾದ್ರೆ ಚಿಕ್ಕದಾದ ಆತ್ಮೀಯವಾದ ನಿರೂಪಣೆ...ಚಿತ್ರಗಳೇ ಎಲ್ಲ ವರ್ಣಿಸುವಾಗ ಅದರ ಬಗ್ಗೆ ಸುಮ್ಮನೆ ಕೊರಿಯಬಾರದು!!!..ಚೆನ್ನಾಗಿತ್ತು...

    ಗೋವೆಯ ಇನ್ನೊಂದು ಮುಖ ನೋಡುತ್ತಿದ್ದೇನೆ...
    ಮುಂದೆ ಯಾರಾದರೂ ಗೋವಾ ಅಂದರೆ "ಹಂಗಷ್ಟೇ ಅಲ್ಲಾ ಹಿಂಗೂ ಇದೆಯಂತೆ " ಎನ್ನುವ ಮಟ್ಟಿಗೆ ನೆನಪುಳಿದಿದೆ..
    ಧನ್ಯವಾದಗಳು ಬರೆಯುತ್ತಿರಿ... ಖುಷಿಯಾಯ್ತು..
    ನಮಸ್ಕಾರ ...

    ReplyDelete
    Replies
    1. ಚಿನ್ಮಯ್...ಧನ್ಯವಾದಗಳು.... ಗೋವಾದಲ್ಲಿ ಒಳ್ಳೇದು ಸಹಾ ತುಂಬಾ ಇದೆ...ಒಮ್ಮೆ ಭೇಟಿ ಕೊಡಿ... :)

      Delete
  3. ಎರಡನೇ ದಿನದ ಪ್ರವಾಸ ಮುದ ನೀಡಿತು ಗೋವಾದ ವಿಶೇಷ ದೃಶ್ಯಗಳನ್ನು ನಿಮ್ಮ ಕ್ಯಾಮರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಪ್ರತೀ ಮಾಹಿತಿಯನ್ನು ಸುಲಲಿತವಾಗಿ ಉತ್ತಮ ನಿರೂಪಣೆ ಮೂಲಕ ಓದುವಂತೆ ಮಾಡುತ್ತಿದ್ದೀರಿ, ಅಪ್ಲೋಡ್ ಮಾಡಿರುವ ವಿಡಿಯೋ ಚೆನ್ನಾಗಿದೆ, ರಿವರ್ ಕ್ರೂಸ್ ಆಯಿತು, ಮುಂದೆ ಡಾಲ್ಫಿನ್ ಕ್ರೂಸ್ ಬರಬಹುದೇ ?? ಸಾಗಲಿ ನಿಮ್ಮ ಪಯಣ ಓದಲು ನಾವಿದ್ದೇವೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಸರ್....ನಾವು ಹೋಗಿದ್ದು ಅಕ್ಟೋಬರ್ ಆದ್ದರಿಂದ ಡಾಲ್ಫಿನ್ ಕ್ರೂಸ್ ಇನ್ನು ಶುರುವಾಗಿರಲಿಲ್ಲ :( ನಮ್ಮ ಪಟ್ಟಿಯಲ್ಲಿ ಆ ಜಾಗ ಸಹಾ ನೋಡಲಿಕ್ಕೆ ಇತ್ತು ...ನೋಡೋಣ ಇನ್ನೊಮ್ಮೆ ಭೇಟಿ ಕೊಟ್ಟಾಗ ಖಂಡಿತಾ ವೀಕ್ಷಿಸಬೇಕು ....ಮತ್ತೊಮ್ಮೆ ಧನ್ಯವಾದಗಳು ....

      Delete
  4. ಸುಂದರ ಲ ಕಥಾನಕ..ಸುಂದರ ಚಿತ್ರಗಳು
    ಗೋವಾದಲ್ಲಿನ ವಿಭಿನ್ನ ತೀರಗಳು, ಮಿಶ್ರ ಸಂಸ್ಕೃತಿ, ಅಲ್ಲಿನ ಪರಿಸರ ಎಲ್ಲವನ್ನು ಜೇನಿನ ಗೂಡು ಕಟ್ಟಿದ ಹಾಗೆ ಎಷ್ಟು ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರ. ಅಭಿನಂದನೆಗಳು ಸಹೋದರಿ..ಖುಷಿಯಾಗುತ್ತದೆ ಸ್ಥಳ ಪುರಾಣಗಳ ಜೊತೆ, ವಿಶೇಷಗಳನ್ನು ಸೆರೆ ಹಿಡಿದು ಒಪ್ಪಿಸುವ ರೀತಿ..

    ReplyDelete
    Replies
    1. ಶ್ರೀಕಾಂತ್ ನನ್ನ ಬರಹಕ್ಕಿಂತಲೂ ಯಾವಾಗಲೂ ನಿಮ್ಮ ಪ್ರತಿಕ್ರಿಯೆ ಇಷ್ಟವಾಗುತ್ತದೆ... ಧನ್ಯವಾದಗಳು ...

      Delete
  5. ಚಂದದ ಪ್ರವಾಸ ಕಥನ...
    ಚೆನ್ನಾಗಿದೆ... ಫೋಟೋ ಮತ್ತು ವಿವರಣೆ ಸೂಪರ್...
    ನಿಮ್ಮ ಫ್ಯಾಮಿಲಿ ಫೋಟೋ ಮತ್ತೂ ಇಷ್ಟವಾಗುತ್ತದೆ... :)

    ReplyDelete
  6. ತುಂಬಾ ಧನ್ಯವಾದಗಳು ಮೌನರಾಗ.... ನಿಮ್ಮ ಪ್ರತಿಕ್ರಿಯೆಗೆ... :)

    ReplyDelete
  7. ಚನ್ನಾಗಿದೆ..... ಗೋವಾದಲ್ಲಿ ಒಳ್ಳೇದು ಸಹಾ ತುಂಬಾ ಇದೆ ಅಂತ ಪರಿಚಯಿಸದ್ದಕ್ಕೆ ಧನ್ಯವಾದಗಳು, :)

    ReplyDelete
    Replies
    1. ಧನ್ಯವಾದಗಳು...ಶ್ರೀಧರ್ ಭಟ್... :))

      Delete
  8. ನಿಮ್ಮ ಗೋವಾ ಪ್ರವಾಸವು ನನ್ನ ಗೋವಾ ಪ್ರವಾಸದ ನೆನಪುಗಳನ್ನು ಮರುಕಳಿಸಿತು.

    ದೆಹಲಿ ಆದಿ ದಂಪತಿಗಳ ದಂಪತ್ಯ ಸುಖ ನಮಗೂ ಸಕ್ರಮಿಸಲಿ

    ಕಳ್ ನನ್ ಮಕ್ಕಳು ಪ್ಯಾಕೇಜ್ ಟೂರಿನವರು ಕರೆದುಕೊಂಡು ಹೋಗುವ ಮದ್ಯಾಹ್ನದ ಬೋಜನದ ಹೋಟೆಲುಗಳು ವ್ಯರ್ಥ ಮತ್ತು ಕತ್ತರಿ!

    ಅಂದದ ಫೋಟೋಗಳ ಜೊತೆ ಚಂದದ ಪ್ರವಾಸ ಕಥನ.

    ಮುಂದುವರೆಸಿರಿ...

    ReplyDelete
    Replies
    1. ಬದರಿಜಿ....ನಿಮ್ಮ ಅಭಿಮಾನಕ್ಕೆ ನನ್ನ ಪ್ರೀತಿಯ ನಮನಗಳು... :))

      Delete
  9. nimma jote naavU prayaaNisida haagittu...

    photo saha chennaagide...

    ReplyDelete
  10. ಪ್ರವಾಸ ಕಥನ ಸು೦ದರವಾಗಿ ಮೂಡಿ ಬರುತ್ತಿದೆ. ಫೋಟೋಗ್ಳು ಕೂಡಾ ಸು೦ದರವಾಗಿವೆ. ವ೦ದನೆಗಳು

    ReplyDelete
    Replies
    1. ಧನ್ಯವಾದಗಳು ಚುಕ್ಕಿ ಚಿತ್ತಾರ....

      Delete
  11. ಗೋವಾ ಸುತ್ತಾಡಿಸಿ ಚಿತ್ರಗಳೇ ಅಲ್ಲದೇ ವೀಡಿಯೋ ಹಾಕಿ ಉತ್ತಮ ಪರಿಚಯ ಮಾಡಿಸಿದ್ದೀರಿ ಸುದೀಪ....ಛಲೋ ಇದ್ದು.

    ReplyDelete
    Replies
    1. ಧನ್ಯವಾದಗಳು ಅಜ್ಹಾದ್ ಭಾಯ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ... :)

      Delete