Thursday, 18 September 2014

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 4


ತುಂಬಾ ದಿನ ಆಯ್ತು... ಬ್ಲಾಗ್ನಲ್ಲಿ ಏನು ಬರೆಯಕ್ಕೆ ವಿಷಯ ತೋಚ್ತಾ ಇಲ್ಲ ಅಂದಾಗ ನನಗೆ  ಸಹಾಯಕ್ಕೆ ಬರೋದೆ ಈ food pictures....  ಹಾಗಾಗಿ ನೀವು ಈ ಹೊಸ ಚಿತ್ರಗಳನ್ನ ನೋಡಿ ಹೇಗಿದೆ ಅಂತ feedback ಕೊಡಿ :-P 

so ಈಗ ramp walk ಶುರು ಆಗತ್ತೆ .... enjoy .... :D 



ಪಪ್ಪಾಯ ಪುಡ್ಡಿಂಗ್ .... :-)




ಪೈನಾಪಲ್ ಮೆಣಸುಕಾಯಿ ... :-)



ಇದು ಸಿಂಪಲ್ ಆಗಿರೋ ಕಾಂಚಿಪುರಂ ಇಡ್ಲಿ ... ವಿಶೇಷ ಅಂದ್ರೆ ಅದ್ರ ಕೆಳಗಡೆ ಇರೋ mat ... ನಾನೇ ಬಾಳೆ ಎಲೆಯಿಂದ ಮಾಡಿದ್ದು ಅಷ್ಟೇ ... :-P 




ಕರುಂ ಕುರುಂ  ಬೆಣ್ಣೆ ಮುರುಕು ... ಸ್ವಲ್ಪ mirror effect  ಕೊಟ್ಟಿರೋ photo ....



ಸೋರೆಕಾಯಿ ದಾಲ್ .... ನನ್ನದೇ ಶೈಲಿಯ ಅಲಂಕಾರ ... :-P 



ಪಪ್ಪಾಯ ಕಾಯಿ ಪಲ್ಯ .... twist  ಏನಪ್ಪಾ ಅಂದ್ರೆ ಪಪ್ಪಯಾ ಮರದ deco ಜೊತೆಗೆ... :-)



ಇದೊಂದು ನಮ್ಮ ಮಧ್ಯಾಹ್ನದ ಊಟ ... ನಮ್ಮ ಫುಡ್ ಗ್ರೂಪ್ನಲ್ಲಿ ಕೆಲವರಿಗೆ ಇದು flight ನಲ್ಲಿ ಕೊಡೊ ಊಟದ ರೀತಿ ಕಂಡರೆ ... ಇನ್ನು ಕೆಲವರಿಗೆ Japanese Bento  Lunch Box ತರಹ ಕಾಣಿಸ್ತಂತೆ.... ನಾನಂತೂ ಮೊದಲ ಬಾರಿ ಕೇಳಿದ್ದು ಈ ಹೆಸರನ್ನ... ಆಮೇಲೆ Google search ಮಾಡಿ ಅದೇನಪ್ಪ... ಹೇಗಿರತ್ತೆ  ಅಂತ ನೋಡಿದ್ದು... :-)



ಒಂದು ಭಾನುವಾರದ ಮಧ್ಯಾಹ್ನದ  ಸಿಂಪಲ್ north indian menu... ರೋಟಿ , ಪನೀರ್ ಮಸಾಲ, ಕ್ಯಾರೆಟ್ ಟೊಮೇಟೊ ಸೂಪ.. ;-)



ಮಿರ್ಚಿ ಕಾ ಸಾಲನ್ ... ಸಂಜೀವ್ ಕಪೂರ್  ಬ್ಲಾಗ್ನ follow ಮಾಡಿದ್ದು... n ಈ ಚಿತ್ರ ಅವರ ಫೇಸ್ಬುಕ್ pageನಲ್ಲೂ ಬಂದಿದೆ... :-)



ಪುಲ್ಕಾ ಜೊತೆಗೆ ಪಾಲಕ್ ಪನೀರ್....


 

corn ಕೂರ್ಮ .... ಅದೇನು ವಿಶೇಷ ಅಲ್ಲ.... ಆದ್ರೆ ಹಿಂದಿರೋ ಟೇಬಲ್ ಕ್ಯಾಲೆಂಡರ್ special.... ಪ್ಹೆಸ್ಬುಕ್ನ ಒಬ್ಬ ಗೆಳತಿಯ ಮನೆಯಲ್ಲಿ ಬೆಳೆಯೋ ಕಸಿ ಮಾಡಿದ ಅತಿ ಅಪರೂಪದ ದಾಸವಾಳಗಳು.... ಕೂರ್ಮಕ್ಕಿಮ್ತ ಎಲ್ಲರಿಗೂ ಇಷ್ಟ ಆದದ್ದು ಈ ಕ್ಯಾಲೆಂಡರ್ನಲ್ಲಿ ಇರೋ ಚಿತ್ರ :-)



ಉಪ್ಪಿನಕಾಯಿ....




Mango Phirni.... ಮಾವಿನ ಹಣ್ಣಿನ ಸೀಸನ್ ಸ್ಪೆಷಲ್ ....




ಪಂಜಾಬಿ ಚೋಲೆ ಬಟೂರ ...




ಸಿಹಿ ಕುಂಬಳಕಾಯಿ ಹೂವಿನ ಸಾಸಿವೆ...




ಪೈನಾಪಲ್ ಪುಡ್ಡಿಂಗ್...




Capcicum ಬೇಸನ್.... ಇದರಲ್ಲಿ ನಾವು ಸ್ಕೂಲ್ ಕಾಲೇಜ್ನಲ್ಲಿ ನೋಟ್ ಬುಕ್ನ ಕೊನೆಯ ಪೇಜ್ನಲ್ಲಿ ಆಡ್ತಿದ್ದ ಆಟದ ಚಿತ್ರವನ್ನ ದೊಣ್ಣೆ ಮೆಣಸಿನ ಬೀಜದಲ್ಲಿ try ಮಾಡಿದ್ದು ... ಆ ಆಟದ  ಹೆಸರು Tic - Tac -Toe ಅಂತ ಮೊನ್ನೇನೆ ಗೊತ್ತಾದದ್ದು ನನಗೆ :-)




ಇದು amchi ಪತ್ರೊಡೆ ... ಕೊಂಕಣಿ ವಿಶೇಷ ... :-)



ಬೆಣ್ಣೆ ಮಸಾಲ ದೋಸ.... :-)



ಮೊನ್ನೆ ನಮ್ಮ ಮದುವೆ anniversary ಗೆ ಮಾಡಿದ pressure cooker cake.... full flop.... ಸ್ಟಿಲ್ ನೆನಪಿಗಾಗಿ ಅದರ ಒಂದು ಚಿತ್ರ :-P



ಫೆಬ್ರವರಿಯಲ್ಲಿ  valentines day ಗಾಗಿ ಸುಮ್ನೆ ಚಟ್ನಿ ಪುಡಿಯಿಂದ ಮಾಡಿದ ಒಂದು ಪುಟ್ಟ ಪ್ರಯತ್ನ .. :-)


ಈ ಸಂಚಿಕೆಗೆ ಇಷ್ಟು ಸಾಕು...

ಮತ್ತೊಮ್ಮೆ ಮತ್ತಷ್ಟು ಚಿತ್ರದೊಂದಿಗೆ ....

ಅಲ್ಲಿವರೆಗೂ ...

ಪ್ರೀತಿಯಿಂದ 

ಸುದೀಪ... :-)

Sunday, 6 July 2014

ಅಜ + ಗಜ + ಅಂತರ


"ಮಮ್ಮೀ"... 

"ಏನ್ ಚಿನ್ನು"... 

"ಸ್ನೇಹ ತುಂಬಾ ಕೆಟ್ಟವಳು ಮಮ್ಮಿ"....  

"ಏನಾಯ್ತೆ ಚಿನ್ನು".....  

"ಏನ್ ಗೊತ್ತಾ ಮಮ್ಮಿ ..  ಇವತ್ತು ಬೆಳಿಗ್ಗೆ ಪಪ್ಪಾ ನಂಗೆ ಸ್ಚೂಲ್ಗೆ ಡ್ರೋಪ್ ಮಾಡಕ್ಕೆ ಬಂದಿದ್ರಲ್ಲಾ ... ಸ್ನೇಹ ಅವರನ್ನು ನೋಡಿ ಎಷ್ಟು ಕೆಟ್ಟದಾಗಿ ಮಾತಾಡಿದ್ಲು  ಗೊತ್ತ  ಮಮ್ಮಿ..." 

"ಸ್ನೇಹ ಏನಂದ್ಲೆ ಚಿನ್ನು"  ...?

ಮತ್ತೆ...ಮತ್ತೆ  "ನನ್ನ ಪಪ್ಪಾಗೆ ಡೊಳ್ಳ್  ಹೊಟ್ಟೆ  ಅಂತೆ ... ಕಪ್ಪಗಿದಾರೆ ಅಂತೆ... ಸ್ಮಾರ್ಟ್ ಇಲ್ಲ ಅಂತೆ ... ಇನ್ನು ಏನೇನೋ  ಕೆಟ್ಟದಾಗಿ ಮಾತಾಡಿದ್ಲು ಮಮ್ಮಿ.. ನಂಗದೆಷ್ಟು  ಸಿಟ್ಟು ಬಂತು ಗೊತ್ತ ಮಮ್ಮಿ .... ನನ್ ಪಪ್ಪನ್ ಬಗ್ಗೆ ಅವಳಿಗೆ ಏನು ಗೊತ್ತು ಅಲ್ವಾ ಮಮ್ಮಿ ... ಅವರೆಷ್ಟು ಒಳ್ಳೆಯವ್ರು .. ನಂಗದೆಷ್ಟು  ಮುದ್ದು ಮಾಡ್ತಾರೆ... ನಾನು ಅವ್ರ princess ... cute doll ಅಲ್ವಾ ಮಮ್ಮಿ ...  ದಿನಾ ರಾತ್ರಿ ನಂಗದೆಷ್ಟು ಚಂದದ ಕಥೆ ಹೇಳ್ತಾರೆ ... ನನ್ನನ್ನು,ನಿನ್ನನ್ನು ಅದೆಷ್ಟು ಪ್ರೀತಿಯಿಂದ ನೋಡ್ಕೋತಾರೆ ಅಲ್ವಾ ಮಮ್ಮಿ . "

"ಮಮ್ಮಿ ... ಇದೆಲ್ಲ ಆ ಸ್ನೇಹಂಗೆ  ಏನು ಗೊತ್ತು... ಪಪ್ಪನ್ ಒಂದು ಸಾರಿ ನೋಡಿದಷ್ಟೇ ... ಅದೆಷ್ಟು ತಪ್ಪು ತಪ್ಪು ಮಾತಾಡಿ ಬಿಟ್ಲು ಅವ್ಳು .... ನಾಳೆಯಿಂದ ಅವಳ್ ಹತ್ರ ಮಾತಾಡಲ್ಲ ನಾನು... she is very bad ಅಲ್ವಾ ಮಮ್ಮಿ"....  i hate her.... i love my pappa very much..." ರಂಜು ಉದ್ವೇಗದಿಂದ ಹೇಳ್ತಾ ಇದ್ರೆ ಪವಿತ್ರಳಿಗೆ   3 ನೇ ಕ್ಲಾಸ್ನಲ್ಲಿ ಓದೋ ಮಗಳ ಮಾತನ್ನ ಕೇಳಿ ಅದೇನೇನೋ ಹಳೆ ನೆನಪುಗಳು ಒತ್ತರಿಸಿ ಬರ್ತಾ ಇತ್ತು.

ರಂಜುನ ಅದು ಹೇಗೋ ಸಮಾಧಾನ ಮಾಡಿ ಸಂಜೆಯ ತಿಂಡಿ, ಹೋಂವರ್ಕ್ ಎಲ್ಲ ಮುಗ್ಸೋದ್ರೋಳ್ಗೆ  ಅದಾಗಲೇ ರಾತ್ರಿ 8 ಘಂಟೆ ದಾಟಿತ್ತು. ಅಷ್ಟರಲ್ಲಿ ಸಂಜಯ್ ಆಫೀಸಿಂದ ಬಂದಾಗಿತ್ತು. ರಾತ್ರಿ ಊಟದ ತಯಾರಿ ಮುಗ್ಸಿ ಇಬ್ರಿಗೂ ಬಡ್ಸಿ ತಾನು ಊಟ ಮಾಡಿ ಹಾಸಿಗೆ ಸೇರೋದ್ರೊಳ್ಗೆ ಘಂಟೆ 10.30 ದಾಟಿತ್ತು. ರಂಜು ಪಪ್ಪನ್ ಹತ್ರ ಬೆಳಿಗ್ಗೆ ನಡೆದ ವಿಷ್ಯ ಎಲ್ಲಾ ವರದಿ ಒಪ್ಸಿ ಸ್ನೇಹನ್ ಹತ್ರ ಮಾತಾಡಲ್ಲ ಇನ್ನು ಅಂತ ಸಿಟ್ಟು ಮಾಡ್ಕೊಂಡು, ಪಪ್ಪನ್ ಹೊಟ್ಟೆ ಮೇಲೆ ಕಾಲು ಹಾಕಿ ಮಲ್ಕೊಂಡು ಪಪ್ಪಾ ಕಥೆ ಹೇಳು ಅಂತ ಹೇಳ್ಸಿಕೊಂಡು, ಅದಾಗಲೇ ನಿದ್ದೆಗೆ ಜಾರ್ತಾ ಇದ್ಲು. ಸಂಜಯ್ಗೆ ಇದೆಲ್ಲ ಮಕ್ಕಳ common ಜಗಳಗಳು, ಇವತ್ತು ಜಗಳ ಆಡಿದರು ನಾಳೆ ಮತ್ತೆ ಒಂದಾಗ್ತಾರೆ ಅನ್ನೋ ನಂಬಿಕೆ. ಜೊತೆಗೆ ತನ್ನ ಅಂದ ಚಂದದ ಬಗ್ಗೆ ಯಾವತ್ತು ಕೀಳರಿಮೆ ಇಲ್ಲದಿರುವುದರಿಂದ ಮಕ್ಕಳ  ಮಾತೆಲ್ಲ ಸೀರಿಯಸ್ ಆಗಿ ತೆಗೊಳ್ಳದ ವ್ಯಕ್ತಿತ್ವ. 





ಇತ್ತ ಪವಿತ್ರನಿಗೆ ಮಲಗಿದ್ರೂ ಸಂಜೆ ಮಗಳು ರಂಜು ಆಡಿದ ಮಾತೇ  ಕಿವಿಯಲ್ಲಿ ಪ್ರತಿಧ್ವನಿಸ್ತಿತ್ತು. ಆಕೆ ಅದಾಗಲೇ ತನ್ನ ಕಳೆದು ಹೋದ ದಿನಗಳ ನೆನಪಿಗೆ ಜಾರಿದ್ಲು.  ಆಗಷ್ಟೇ ಅವಳ ಪಪ್ಪನಿಗೆ ಜಿಲ್ಲಾವಾರು ಊರಿಂದ  ದೊಡ್ಡ ಸಿಟಿಗೆ ವರ್ಗಾವಣೆಯಾಗಿತ್ತು. ಹದಿನಾಲ್ಕು ವರ್ಷದ teenage ಹುಡುಗಿ. ಎಂಟನೆ ತರಗತಿಗೆ ಆ ಊರಿನ ಪ್ರಸಿದ್ಧ ಕಾನ್ವೆಂಟ್ಗೆ admission ಆಗಿತ್ತು. ಹೊಸ ವಾತಾವರಣ... ಹೊಸ ಶಾಲೆ. ಹೊಸ ಸ್ನೇಹಿತರು ... ಆಗಷ್ಟೇ ಋತುಮತಿಯಾಗಿದ್ದ ಪವಿತ್ರ  ಸುಂದರವಾಗಿ ಹೂವಂತೆ  ಅರಳಿದ್ಲು . ಜೊತೆಗೆ  ಪಪ್ಪನ ಪಡಿಯಚ್ಚು. ಅವರೂ ಸ್ಫುರದ್ರೂಪಿ. ಆ ಸೌಂದರ್ಯ ಮಗಳಿಗೂ ಬಂದಿತ್ತು. ಉನ್ನತ ಹುದ್ದೆ ದೊಡ್ಡ ಜವಾಬ್ದಾರಿಯುತ ಅಧಿಕಾರಿ. ಅಷ್ಟೆಲ್ಲ ಇದ್ರೂ ಸ್ವಲ್ಪವೂ ಗತ್ತಿಲ್ಲದ ವ್ಯಕ್ತಿ.


ಇನ್ನು ಅವಳ ಅಮ್ಮನ ಬಗ್ಗೆ ಹೇಳ್ಬೇಕಂದ್ರೆ ಸಾಧಾರಣ ಗೃಹಿಣಿ. ತಾನಾಯ್ತು ತನ್ನ ಕೆಲಸ ಆಯ್ತು . ಗಂಡ ಮಗಳ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣು . ಮೊದಲೇ ಎಣ್ಣೆಗಪ್ಪು ಬಣ್ಣದ ಆಕೆಗೆ  ಎಡಗೆನ್ನೆ ಪೂರ್ತಿ  ಹುಟ್ಟಿನಿಂದ ಬಂದ ಕಪ್ಪು ಮಚ್ಚೆ ಇಡೀ ಕೆನ್ನೆಯನ್ನು ಆವರಿಸಿತ್ತು. ಲಕ್ಷಣವಾಗಿದ್ದರೂ ಮೊದಲ ಬಾರಿ  ನೋಡಿದವರಿಗೆ ಆ ಮಚ್ಚೆಯಿಂದ  ಏನೋ ಅನಿಸುವಂಥ ಮಹಿಳೆ. 

ಒಬ್ಬಳೇ ಮಗಳಾದ ಪವಿತ್ರನಿಗೆ ಅಮ್ಮನ  ಪ್ರೀತಿ ಅಪರಿಮಿತವಾಗಿ ಸಿಕ್ಕಿದ್ರೂ ಈಗ ಸಿಟಿಗೆ ಬಂದ ಮೇಲೆ ವಯೋಸಹಜವಾಗಿ ಅದೇನೋ ಸೌಂದರ್ಯದ ಬಗ್ಗೆ ವಿಶೇಷವಾದ ಆಸಕ್ತಿ. ಇದರ ಪರಿಣಾಮ ಚಂದವಿಲ್ಲದ ತಾಯಿಯೂ ಯಾಕೋ ಇಷ್ಟ ಆಗ್ತಿರಲಿಲ್ಲ. ಸ್ಕೂಲ್ ಕಾರ್ಯಕ್ರಮಗಳಲ್ಲಿ ಪಪ್ಪನನ್ನೇ ಬಲವಂತ ಮಾಡಿ ಕರೆದುಕೊಂಡು ಹೋಗ್ತಿದ್ಲು . ತನ್ನ ಸ್ನೇಹಿತರೊಂದಿಗೆ  ಆಕೆ ತಾಯಿಯನ್ನ ಯಾವತ್ತೂ ಭೇಟಿ ಮಾಡಿಸ್ತಾ ಇರ್ಲಿಲ್ಲ. ಏನೇನೋ ಸಬೂಬು ಹೇಳಿ ಅಮ್ಮನನ್ನ  ನಿಧಾನವಾಗಿ ತನ್ನ ಜೊತೆ ಬರದಂತೆ avoid ಮಾಡಕ್ಕೆ ಪ್ರಾರಂಭ ಮಾಡಿದ್ಲು. ಈ ಸೂಕ್ಷ್ಮ ಅವಳ ಅಮ್ಮನಿಗೆ ಗೊತ್ತಾದ್ರೂ,ಅವರೂ ಆದಷ್ಟು ದೂರಾನೆ ಇರ್ತಿದ್ರು. ಇದಕ್ಕೆಲ್ಲಾ ಕಾಲವೇ ಮದ್ದು ಎಂಬುದು ಅವರ ನಂಬಿಕೆ. ಹುಡುಗು ಬುದ್ದಿ ... ಹೋಗ್ತಾ ಹೋಗ್ತಾ ಸರಿಯಾಗುತ್ತೆ ಅನ್ನೋ ಆಶಾಭಾವನೆ. 

ಆಗಷ್ಟೇ highschool ಸೇರಿದ್ದ ಪವಿತ್ರಂಗೆ ಹುಡುಗರು, ಲವ್ ಇದೆಲ್ಲ ಸಹಜ ಕುತೂಹಲ.  ಅವಳಿಗೆ ಪಪ್ಪಾ ಅಮ್ಮಂದು ಲವ್ ಮ್ಯಾರೇಜ್ ಅನ್ನೋ ವಿಷ್ಯ ಮೊದಲೇ ಗೊತ್ತಿದ್ರೂ, ಇತ್ತೀಚೆಗೆ ಅದೆಷ್ಟೋ ಬಾರಿ ಆಲೋಚನೆ ಮಾಡಿದ್ಲು...  ಈ ಪಪ್ಪಾ ಈಗ್ಲೇ ಇಷ್ಟು handsome ಆಗಿದ್ದಾರೆ, ಇನ್ನು ಮದುವೆ ಸಮಯಲ್ಲಿ ಅದೆಷ್ಟು ಚಂದ ಇದ್ರೂ ಅನ್ನೋದು ಅವರ ಮದುವೆ album ನೋಡಿದ್ದ ಅವಳಿಗೆ ಗೊತ್ತಿತ್ತು.   ಈ ಅಮ್ಮ   ನೋಡಕ್ಕೆ ಸ್ವಲ್ಪಾನೂ ಚಂದ ಇಲ್ದೆ ಇದ್ರೂ ಅದೇನು ಅಂತ ಪಪ್ಪಾ  ಲವ್ ಮಾಡಿದರೋ  .. ಪಪ್ಪಾ ಮನಸ್ಸು ಮಾಡಿದ್ರೆ ಚಂದದ ಅಪ್ಸರೆ ತರಹದ ಹುಡುಗಿ ಸಿಗ್ತಿರ್ಲಿಲ್ವಾ ... ಅದು ಬಿಟ್ಟು ಈ ಪಪ್ಪಾ ಅದೇನಂಥ ಈ ಅಮ್ಮನ್ನ ಮೆಚ್ಚಿದ್ರೋ ..ಪವಿತ್ರ  ಸಾವಿರ ಬಾರಿ ತಲೆಕೆಡಿಸಿಕೊಂಡದ್ದಿದೆ ಈ ವಿಷಯಕ್ಕೆ . 


ಹೀಗೆ ವರ್ಷಗಳು ಕಳಿತಾ ಕಳಿತಾ    ಎಲ್ಲವೂ ಅರಿವಾಗ್ತಾ ಇತ್ತು ಪವಿತ್ರನಿಗೆ. ಯಾವುದು ಸರಿ ಯಾವುದು ತಪ್ಪು.  ಈ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಚೆಲುವೆ ಮೇಲು ಅನ್ನೋದು ಗೊತ್ತಾಗ್ತಾ ಇದ್ದ ಹಾಗೆ ಪವಿತ್ರ ತಾನಾಗೆ ಬದಲಾಗಿದ್ಲು. ಅಮ್ಮನ ಬಗ್ಗೆ ಗೌರವ, ಆದರ ತೋರಿಸ್ತಿದ್ಲು. ತನ್ನ ಹುಡುಗು ಬುದ್ದಿಯಿಂದ ಅವ್ರಿಗೆ ನೋಯಿಸಿದ್ದಕ್ಕೆ ಕ್ಷಮೆ ಸಹಾ ಕೇಳಿದ್ಲು. ಆ ಅಮ್ಮನೋ ಕರುಣಾಮಯಿ ... ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಹರಸೋ ಮಾತೃಹೃದಯ. 

ಕಾಲೇಜು    ವಿಧ್ಯಾಭ್ಯಾಸ ಮುಗಿದು  ಮದುವೆ ವಯಸ್ಸು ಬಂದಾಗ ಪಪ್ಪನ ಸ್ನೇಹಿತನ ಮಗ, ಬಾಲ್ಯದ ಗೆಳೆಯ,ಸಾಧಾರಣ ರೂಪಿನ ಸಂಜಯ್ ಜೊತೆ ಮದುವೆ  ಮಾತುಕತೆ ನಡೆದಾಗ್ಲೂ ಮನಃಪೂರ್ವಕವಾಗಿ ಒಪ್ಪಿಗೆ ಕೊಟ್ಟಿದ್ಲು. ಅವಳ  ಪಪ್ಪಾ ಅದೆಷ್ಟೋ ಬಾರಿ, "ಒತ್ತಾಯ ಇಲ್ಲ ಪವಿತ್ರ....  ನಿನಗೆ ಇಷ್ಟ ಇದ್ರೆ ಮಾತ್ರ  ಮಾತುಕತೆ ಮುಂದುವರಿಸ್ತೀನಿ..... ಯೋಚನೆ ಮಾಡಿ ಹೇಳು .... " ಅಂತ ಅವಳ ನಿರ್ಧಾರ ಕೇಳಿದಾಗಲೂ   ತನ್ನ ಸಂಪೂರ್ಣ ಒಪ್ಪಿಗೆ ಕೊಟ್ಟಿದ್ಲು. ಅದಕ್ಕೆ ಮುಖ್ಯ ಕಾರಣ ಅವನ caring nature... ಅದೆಷ್ಟೋ ವರ್ಷದಿಂದ ಅವನನ್ನ ಗಮನಿಸ್ತಾ ಬಂದಿದ್ದ ಪವಿತ್ರಾಗೆ ಈ ಕಾಲಘಟ್ಟದಲ್ಲಿ ರೂಪ, ಸೌಂದರ್ಯ ಇದಕ್ಕೆಲ್ಲಾ  ಯಾವುದೇ ಪ್ರಾಶಸ್ತ್ಯ ಇಲ್ಲವಾಗಿತ್ತು. 

ಮದುವೆಯಾಗಿ ಚಂದದ ಸಂಸಾರ ನಡೆಸಿಕೊಂಡು ಸಂಜಯ್ನ ಮನದನ್ನೆಯಾಗಿ,ರಂಜಿತಾಳ ತಾಯಿಯಾಗಿ  ದಿನ ದೂಡುತ್ತಿದ್ದ ಈ ಸಮಯದಲ್ಲಿ ಪುನಃ ಆ   ಹಿಂದಿನ ನೆನಪುಗಳೆಲ್ಲ ಮರುಕಳಿಸಿತ್ತು. ಅದೂ ಮಗಳ matured ಮಾತುಗಳಿಂದ. ತನ್ನ ಪಪ್ಪನನ್ನ ಎಂದೂ ಕೀಳಾಗಿ ನೋಡದ ತನ್ನದೇ ಹೊಟ್ಟೆಯಲ್ಲಿ ಹುಟ್ಟಿದ ಪುಟ್ಟ ಕೂಸು,ಪವಿತ್ರಳ ದೃಷ್ಟಿಯಲ್ಲಿ ಇವತ್ತು ಅತೀ ಎತ್ತರಕ್ಕೆ ಬೆಳೆದು ನಿಂತಿದ್ಲು. 

ಯಾಕೋ ಎಂಟು ವರ್ಷದ ಮಗಳ ಮುಂದೆ ತೀರಾ ಚಿಕ್ಕವಳಾದೆ ಅನ್ನೋ ಭಾವ. ತನ್ನ ಕರುಳಕುಡಿಗೆ ಇರೋ ಅಲ್ಪ ಮಾನವೀಯತೆಯೂ ತನ್ನಲ್ಲಿ ಇರಲಿಲ್ಲ ಅನ್ನೋ ವೇದನೆ. ರಕ್ತ ಮಾಂಸ ಕೊಟ್ಟು ಜನ್ಮ ನೀಡಿದ ಅಮ್ಮನಿಗೆ ನೋವಿಟ್ಟ ಪಾಪಿ ಅನ್ನೋ ಬೇಸರ.  ಆ ಇರುಳು  ಅದೇಕೋ ನಿದ್ದೆ ದೂರಾದ ರಾತ್ರಿ. ಅಮ್ಮನ ಬಗ್ಗೆ ಕೇವಲವಾಗಿ ಯೋಚನೆ ಮಾಡಿದ್ದಕ್ಕೆ, ಅಷ್ಟೆಲ್ಲಾ ವರ್ತಿಸಿಯೂ ಮರೆತು ಜೀವಿಸಿದ್ದಕ್ಕೆ... 

 ಅದೆಷ್ಟೋ ವರ್ಷದ ನಂತರ ಪಶ್ಚಾತಾಪದಿಂದ ಕಣ್ಣೆಲ್ಲ ಒದ್ದೆ ಒದ್ದೆ.... 

 ಎಂದೂ ತನ್ನ ಉಸಿರಿರುವ  ತನಕ ಕಾಡುವ ಪಾಪ ಪ್ರಜ್ಞೆ .....   

ಅದೆಷ್ಟು ಅಂತರ ತಾಯಿ ಮಗಳಿಗೆ ... 


Saturday, 8 March 2014

ಸ್ತ್ರೀ.... ಕೆಲವೊಮ್ಮೆ ಹೀಗೂ .....


'ನಿನಗಿಂತ ಮೊದಲೇ ಅವಳು  ನನಗೆ  ಸ್ನೇಹಿತೆಯಾಗಿ ಪರಿಚಯ ಆದವಳು ..... ಈವರೆಗೆ ನನ್ನೆಲ್ಲ ಸುಖ ಕಷ್ಟಗಳನ್ನು ಹಂಚಿಕೊಂಡದ್ದು    ಬಹುಶಃ ಅವಳ ಹತ್ತಿರ ಮಾತ್ರ .......  ನನ್ನ ಮೊದಲ ಆತ್ಮೀಯ ಸ್ನೇಹಿತೆ ಅವ್ಳು '  .... ಹೀಗೆ ಅವ್ನು ಫೋನಿನಲ್ಲಿ ಹೇಳ್ತಾ ಇದ್ರೆ 'feeling jealous' ಅಂದಿದ್ದೆ ... ಹೌದು .... ಆ ಘಳಿಗೇಲಿ ನಾ  ಆ ಮಾತು ಸ್ವಲ್ಪ ತಮಾಷೆಯಾಗಿ ಆಡಿದ್ರು ಎಲ್ಲೋ ಒಂದೆರಡು ಸೆಕೆಂಡ್ ನಿಜಕ್ಕೂ ಹೊಟ್ಟೆಕಿಚ್ಚಾಗಿದ್ದು  ಸುಳ್ಳಲ್ಲ ....  ಅಂದರೆ ನನ್ನ ಸ್ಥಾನ ಏನಿದ್ರೂ ಅವಳ ನಂತರದ್ದು .... ಯಾಕೋ ಮನಸ್ಸಲ್ಲಿ ಒಂದರೆಗಳಿಗೆ  ಏನೇನೋ ಹುಚ್ಚು ಹುಚ್ಚು ಯೋಚನೆ....  ವಾಸ್ತವಕ್ಕೆ ಬಂದಾಗ ...ಅರೆ ಶಿಟ್....   ನಾನದೆಷ್ಟು stupid ಆಗಿ  ಯೋಚನೆ ಮಾಡ್ತಿದೀನಿ .... ಏನಾಗಿದೆ ನನಗೆ ...!!!! ಯಾಕೆ ಹೀಗೆ...!!!! 

ಅರೆ.... ಅವನಿಗೂ ತನ್ನದೇ ಖಾಸಗಿ ಜೀವನ ಇದೆ... ಅಲ್ಲಿ ಅದೆಷ್ಟೋ ಜನ ಸ್ನೇಹಿತರಿರ್ತಾರೆ .... ಅವರಲ್ಲಿ ನಾನು ಒಬ್ಳು ... ನಿಜ....  ಸ್ವಲ್ಪ  ಆತ್ಮೀಯಳು ಅಂದ್ರೂ ತಪ್ಪಾಗಲ್ಲ ... ಆದ್ರೂ..... ಪ್ರತಿಬಾರಿ ಮಾತು ಈ 'ಆದ್ರೂ' ಅನ್ನೋ ಶಬ್ದದಲ್ಲೇ ಕೊನೆಗೊಳ್ಳುತ್ತೆ .... ... ಆದ್ರೂ....  ಅದ್ರಲ್ಲಿ ನಾನೇ ಪ್ರಮುಖವಾಗಿ ಇರಬೇಕು ಅನ್ನೋ  ಹುಚ್ಚು  ಅದೇಕೋ .... ಮುಖ್ಯವಾಗಿ ಅವನು ಏನು ಅಂತ ಗೊತ್ತು ... ಆ ಹುಡುಗಿಯೂ ಏನು ಅಂತ ಅಲ್ಪ ಸ್ವಲ್ಪ ಗೊತ್ತು.... ನಮ್ಮಿಬ್ಬರ ಸ್ನೇಹ ಎಷ್ಟು ಗಟ್ಟಿ ಅನ್ನೋದು ಗೊತ್ತು ... fir b .... ನಿಜ ಸಮಸ್ಯೆಯಂದರೆ, ಎಲ್ಲಿ ಇತರರು ನನಗಿಂತ ಹೆಚ್ಚು ಆತ್ಮೀಯರಾಗಿ ನನ್ನ ಮತ್ತು ಅವನ ಸ್ನೇಹ ಕಳೆದು ಹೋಗುತ್ತೆ ಅನ್ನೋ ಭಯಾನ.... ??? ಇದ್ರೂ ಇರಬಹುದು... ಅದ್ಯಾಕೆ  ಯಾವಾಗ್ಲೂ  ಅಷ್ಟು INSECURITY FEELING..!!!!    ಯಾಕಿಷ್ಟು POSSESSIVENESS ಯಾವಾಗ್ಲೂ  ಈ ಹೆಣ್ಣು ಜೀವಗಳಿಗೆ ....  !!!!!

ಎಲ್ಲೋ ಯಾರಿಗೋ ಯಾವುದೋ ವಿಷಯಕ್ಕೆ ಸಂಬಂಧ ಕಳಚಿ ಬಿದ್ದಿರುತ್ತೆ... ಬಹಳಷ್ಟು ಕಥೆ ಕೇಳಿರ್ತೀವಿ ... ತನಗೂ ಹಾಗೆ ಆಗುತ್ತೆ ಅನ್ನೋ ಆತಂಕಾನಾ!!!! ಇದ್ರೂ ಇರಬಹುದು... ಇಲ್ಲವೇ ನಮಗೆ  ಹಿಂದೊಮ್ಮೆ ಆದ ಕೆಟ್ಟ ಅನುಭವಗಳು  ಪುನಃ ಮರುಕಳಿಸದೇ ಇರಲಿ ಅನ್ನೋ ಆಸೆನಾ... 

ನಿಜ ... ಈ ಮತ್ಸರಕ್ಕೆ ಮುಖ್ಯ ಕಾರಣ ಸಂಬಂಧಗಳಲ್ಲಿ ಕಾಡೋ ಅಭದ್ರತೆ....  ಅತಿ ಅನಿಸುವಷ್ಟು ನನ್ನದು, ನನ್ನವನು ನನಗೆ ಮಾತ್ರ ಸೇರಿದ ಆತ್ಮೀಯ ವಸ್ತು ಅನ್ನೋ  ವಿಚಾರಕ್ಕೆ ಮೂರನೆ ವ್ಯಕ್ತಿಯಿಂದ ಧಕ್ಕೆ ಬಂದಾಗ, ಅದೂ ಮತ್ತೊಬ್ಬ ಹೆಣ್ಣಿನಿಂದ,   ಯಾಕೋ ಎಲ್ಲಾ ಅಲ್ಲೋಲ ಕಲ್ಲೋಲ....... ಎಲ್ಲಿ ನಾ ಪ್ರೀತಿಸುವ  ಈ ಆತ್ಮೀಯ ಸಂಬಂಧ  ನನ್ನ ಕೈ  ತಪ್ಪಿ ಹೋಗಿಬಿಡುತ್ತೋ ಅನ್ನೋ ಆತಂಕ .... ಅದು ಈ ಹೆಣ್ಣು ಮಕ್ಕಳಲ್ಲೇ ಜಾಸ್ತಿ ಅಂದರೆ ಸುಳ್ಳಲ್ಲ ...





ಅದರಲ್ಲೂ ಇತ್ತೀಚೆಗೆ ಫೇಸ್ ಬುಕ್ ನಿಂದ ಕಲಿತ ದೊಡ್ಡ ಪಾಠ ಇಡೀ ಜೀವನಕ್ಕೆ ಉಪಯೋಗಕ್ಕೆ ಬರುವಂಥದ್ದು .... ಯಾವುದೇ ಅತಿ ಅನ್ನಿಸೋ ಅಷ್ಟು  ಹತ್ತಿರಕ್ಕೆ ಬಂದ ಆತ್ಮೀಯ ಅನ್ನೋ ಸಂಬಂಧಗಳನ್ನ ಮಿತಿಯಲ್ಲಿ ಪ್ರೀತಿಸು.... ಯಾವುದೇ ಹುಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಇರುವಷ್ಟು ದಿನ ಅಸ್ವಾದಿಸು ಅಷ್ಟೇ ... ಇವತ್ತಿನ ದಿನ ನನ್ನದು ... ಯಾವುದೋ ಪರಿಸ್ಥಿತಿಗೆ  ಮುಂದೊಂದು ದಿನ ಸಂಬಂಧ  ಕಳಚಿದರೂ ನೋವು ಅತಿ ಅನಿಸುವಷ್ಟು ಕಾಡಲ್ಲ ಆಗ  ....

ಪ್ರತಿಬಾರಿ facebook scroll ಮಾಡೋವಾಗ್ಲು ಕಣ್ಣಿಗೆ ದಿನಕ್ಕೊಮ್ಮೆ ಆದ್ರೂ ಕಾಣೋ quote.... Dont like people more.....Dont expect more.... one  day defenately it hurts more .... ಎಷ್ಟು ನಿಜ ಅನ್ಸುತ್ತೆ ಪ್ರತಿ ಬಾರಿನೂ... 

ಮೊನ್ನೆ ಒಬ್ಬ ಸ್ನೇಹಿತ ಹೇಳ್ತಾ ಇದ್ದ.... ಮದುವೆ ಆಗಿದ್ದೆ ತಡ ಮಾರಾಯ್ತಿ... ಜೀವಕ್ಕೆ ಜೀವ ಕೊಡೋ  ಅತಿ ಒಡನಾಟದಲ್ಲಿದ್ದ  ಪ್ರೀತಿಯ ತಂಗಿ  ಕೋಪ ಮಾಡ್ಕೊಂಡಿದ್ದಾಳೆ .... ನೀನು ನನ್ನ ಜೊತೆ ಮೊದಲಿನ ರೀತಿ  ಸಮಯ ಕಳೀತಿಲ್ಲ ... ನಿನಗೆ  ನಿನ್ನ ಹೆಂಡತೀನೇ   ಜಾಸ್ತಿ ... ಹೀಗೆಲ್ಲ ಆರೋಪ .... ಈಗ ಅದೆಲ್ಲಿಗೆ ಮುಟ್ಟಿದೆ ಅಂದ್ರೆ ದಿನದಿಂದ ದಿನಕ್ಕೆ  ಮಾತುಕತೆ ಸಹಾ ಕಡಿಮೆ ಆಗ್ತಾ ಇದೆ  .... ಅತ್ತಿಗೆ ಅಂದ್ರೆ ಅವಳ ಬದ್ಧ ದ್ವೇಷಿ ....  ಉಫ್ ... 

ಇನ್ನೊಬ್ಬ ತಾಯಿಯಂತೂ ಮಗನಿಗೆ ಮದುವೆ ಮಾಡ್ಸಬೇಕು...ಒಳ್ಳೆ ಕೆಲಸ ಸಿಕ್ಕಿದೆ ....  ಅವ್ನು ಜೀವನದಲ್ಲಿ  SETTLE ಆಗಬೇಕು  ಅಂತ ತುದಿಗಾಲಲ್ಲಿ ನಿಂತು ಹೆಣ್ಣು ಹುಡುಕಿ ಮದುವೇನೂ ಆಯ್ತು... ಆದ್ರೆ ಈಗ ಸೊಸೆ ಅಂದ್ರೆ ಅಷ್ಟಕ್ಕಷ್ಟೇ ... ತನ್ನ ಮತ್ತು ತನ್ನ  ಮಗನ ಪ್ರೀತಿಯ ಸಂಬಂಧದಲ್ಲಿ  ಈ ಹುಡುಗಿ ಒಬ್ಬ ಅಡ್ಡಗೋಡೆ ಅಂಬ ಭಾವ ಆಕೆಗೆ ... ಸೊಸೆಯ ಜತೆ  ಮಗನ ಪ್ರೀತಿಯನ್ನ  ಹಂಚಿಕೊಳ್ಳೋದು ಯಾಕೋ ಸಹಿಸಲಾಗದ  ವಿಚಾರ ಆಕೆಗೆ .. 

ಈ ಹೆಣ್ಣು ಜೀವಗಳೇ ಹೀಗಾ... ತನ್ನ ಗಂಡ, ತನ್ನ ಮಗ, ತನ್ನ ಅಣ್ಣ-ತಮ್ಮ, ತನ್ನ ಗೆಳೆಯ ಅದ್ಯಾರೆ ಆಗಿರ್ಲಿ.... ಸ್ವಾರ್ಥಿ ಆಗ್ಬಿಡ್ತೀವಾ ..... ತನ್ನನ್ನಷ್ಟೇ ಪ್ರೀತಿಸ್ಬೇಕು ಅನ್ನೋ ಅತಿ ಸ್ವಾರ್ಥದ ಮನಸ್ಥಿತಿಯನ್ನ ಇಟ್ಟುಕೊಂಡೆ ಹುಟ್ಟಿರ್ತಾರಾ ... ಚಿಕ್ಕ ಅನುಮಾನ.... !!!! 

  JEALOUSY THY NAME WOMEN.... ಅನ್ನೋ ಮಾತು ಸಹಾ ನಿಜ ಅನ್ಸುತ್ತೆ ಕೆಲವೊಮ್ಮೆ .... 

ಆದರೂ ಈ 'ಹೆಣ್ಣು ಮತ್ಸರ' ಆರೋಗ್ಯಕರವಾಗಿ....   ಇನ್ನೊಬ್ಬ ಹೆಣ್ಣಿನ ಜೊತೆ ಜಿದ್ದಾಜಿದ್ದಿ ದ್ವೇಷ ಆಗದಷ್ಟು ಹಿಡಿತದಲ್ಲಿ ಇದ್ರೆ ಉತ್ತಮ ಅನ್ನೋ ಅಭಿಪ್ರಾಯದೊಂದಿಗೆ   ... 

ಎಲ್ಲರಿಗೂ 'ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು '

ಪ್ರೀತಿಯಿಂದ

ಸುದೀಪ... 




Monday, 25 November 2013

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 3




ಮೊದಲೇ ಹೇಳ್ಬಿಡ್ತೀನಿ .....ಆಮೇಲೆ ನನ್ನ ಬೈಕೋಬೇಡಿ ....  ಕೆಳಗೆ ನೋಡಕ್ಕೆ ಸಿಗೋ ಚಿತ್ರಗಳು ಸುಮ್  ಸುಮ್ನೆ enjoy ಮಾಡಲಿಕ್ಕೆ .... visual treat ಅಷ್ಟೇ... . :-P 

ಈ ಬಾರಿ ಸಹಾ ಒಂದಷ್ಟು ನನ್ನದೇ ಸ್ಟಯ್ಲ್ನಲ್ಲಿ ಅಂದ್ರೆ 'ಸುದೀಪ' ಸ್ಟಯ್ಲ್ ನಲ್ಲಿ  ಸುಮ್ನೆ timepassಗೋಸ್ಕರ ಸಿಂಪಲ್ ಆಗಿ ದಿನಾ ಮಾಡೋ ತಿಂಡಿ - ಅಡಿಗೆಗಳನ್ನ  ಒಂದು food groupಗೋಸ್ಕರ ಮನಸ್ಸಿಗೆ ಬಂದಂತೆ ಅಲಂಕಾರ ಮಾಡಿದ್ದೆ .. ಅದರ ಒಂದು ಝ್ಹಲಕ್ ನಿಮಗೋಸ್ಕರ ....  ನೋಡಿ ನಗ್ಬೇಡಿ .... :D 


      
 ಬಾಳೆದಿಂಡು ಮತ್ತು ಹುರುಳಿಕಾಳು  ಹುಳಿ .....   

                                            

ಅನ್ನ ......... ಸೌತೆಕಾಯಿ ...  ಹಲಸಿನ ಬೀಜದ ಹುಳಿ .... 



ಪುಲ್ಕಾ .....kadai raw banana



ಪುಟ್ಟ ತಂಗಿ ನಿಹಾರಿಕಳ  ಚಂದದ ಒಂದು ಡ್ರಾಯಿಂಗ್ನಿಂದ ಸ್ಪೂರ್ತಿ ಪಡೆದು ಮಾಡಿದ ತರಲೆ.....art deco.. :-P......  'ಇಡ್ಲಿನಲ್ಲಿ '



ಬಾಳೆಹಣ್ಣು ಬನ್ಸ್...  



 ಕಡಲೆಬೇಳೆ ಪಾಯಸ.........  


ಗೋಬಿಮಂಚೂರಿ ..... hot fav..... 



ಮಾವಿನ ಹಣ್ಣಿನ ಸಾಸಿವೆ........  


  
ನೀರು ದೋಸೆ..........  ಚಟ್ನಿ ಪುಡಿ ...... 



ಬೀಟ್ರೂಟ್  ಥೊರನ್ ......... ಕೇರಳ ಅಡಿಗೆ .... 



ಬದನೇಕಾಯಿ ಎಣ್ಣೆಗಾಯಿ.......  ಮಹಾರಾಷ್ಟ್ರ ಸ್ಪೆಷಲ್ .... 



ಪನೀರ್ ಕ್ಯಾಪ್ಸಿಕಂ ಪರಾಟ............  


  
ಅರಸಿನ ಎಲೆ  ಸಿಹಿ ಕಡುಬು.......  



ಮಟರ್  ಕಿ ಮಸ್ತಿ ...... 



ಸುವರ್ಣಗೆಡ್ಡೆ  ಕೂಟು........  



ನನ್ನ ಹುಟ್ಟಿದ ಹಬ್ಬದ ದಿನದ ಮಧ್ಯಾಹ್ನದ ಊಟ.........  ತವಾ ಪುಲಾವ್ , ಗೋಬಿ, ರೋಟಿ, ಪನೀರ್ ಬಟರ್ ಮಸಾಲ, ಜಾಮೂನ್ , ಕೇಕ್ ..... :D 



ಲಿಂಬೆ ಹಣ್ಣಿನ ಚಿತ್ರಾನ್ನ ............ 



ಸೋಯಾ ಹಿಟ್ಟಿನ ದೋಸೆ ................ 



ಕೊಬ್ರಿ ಮಿಟಾಯಿ.............  



ಕ್ಯಾಬೇಜ್ ದೋಸೆ.....  



ಕೆಸುವಿನ ಎಲೆ ಹುಳಿ..... 


ಬೀಟ್ರೂಟ್  ಸಾರು .... ಆಲೂ ಮೇಥಿ ... 


ಸ್ನೇಹಿತರೆ ಪೇಜ್ scroll ಮಾಡಿದ್ದಕ್ಕೆ ಧನ್ಯವಾದಗಳು..... :-P  

ಪ್ರೀತಿಯಿಂದ 

ಸುದೀಪ..... :-)

Friday, 8 November 2013

ಹೀಗೊಬ್ಬ ಅವಳ ಗೆಳೆಯ......


ಆಗ್ಲೇ ಒಂದು ವರ್ಷ ಆಯ್ತು ಅವಳಿಗೆ  ಅವನ ಪರಿಚಯವಾಗಿ. ಅದೆಷ್ಟು ಬೇಗ ಒಂದು ವರ್ಷ ಕಳೆದು ಹೋಯ್ತೋ ಗೊತ್ತಾಗಲೇ ಇಲ್ಲ. ಸುಮ್ಮನೆ ಆಲೋಚನೆ ಮಾಡಿದರೆ ಅದೆಷ್ಟೋ  ವರ್ಷದ ಸಂಬಂಧ, ಆತ್ಮೀಯತೆ ಇದೆಯೋ ಈ ಸ್ನೇಹದಲ್ಲಿ ಅನ್ನೋ ಭಾವ. ಕಳೆದ ದೀಪಾವಳಿ ಸಮಯದಲ್ಲಿ ಆತ್ಮೀಯರ ಮುಖೇನ ಪರಿಚಯವಾಗಿದ್ದ ಆತ. ಅವರು ಅವನನ್ನು ಪ್ರೀತಿಯಿಂದ  ಗುಣಗಾನ ಮಾಡಿದ್ದರಿಂದ ಅವಳು ಧೈರ್ಯವಾಗಿ ಅವನಿಗೆ ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ಲು.  ಆಗ ಹಬ್ಬದ ಸಮಯ ಆದ್ದರಿಂದ ಕಡುಬು ಕಳಿಸ್ರಿ....  ಅಂತಾ ಮೆಸೇಜ್ ಮಾಡಿ   ಮಾತು ಶುರು ಮಾಡಿದ್ದ ಹುಡುಗ.  ಅದು ಹೇಗೆ ದಿನೇ ದಿನೇ  ಅತೀ ಅನಿಸುವಷ್ಟು ಆತ್ಮೀಯನಾದ್ನೊ ಅವಳಿಗೂ ಗೊತ್ತಿಲ್ಲ.  

ನೀನು ನನಗಿಂತ ವಯಸ್ಸಿನಲ್ಲಿ  ದೊಡ್ದೋನು, ನಾನು ಇನ್ನು ಚಿಕ್ಕೊಳು ಅಂತ ಒಂದಷ್ಟು  ದಿನ ಅವನಿಗೆ ಸತಾಯಿಸಿ ಸತಾಯಿಸಿ ಕೊನೆಗೂ ನೀನಿನ್ನು ಪುಟ್ಟ ಹುಡುಗ ಅಂತ ಹೇಳಿದ್ದು ಇನ್ನು ಇತ್ತೀಚಿಗೆ ಅನ್ನೋ ಹಾಗಿದೆ ಅವಳಿಗೆ.

ಕೇವಲ ಫೇಸ್ ಬುಕ್ನಲ್ಲಿ ಚಾಟಿಂಗ್ ಮಾಡ್ತಾ ಇದ್ದವನಿಗೆ ಒಮ್ಮೆ ಫೋನ್ ನಂಬರ್ ಕೊಡೋ ಅನಿವಾರ್ಯತೆ ಬಂತು.  ಅಲ್ಲಿಂದ ಶುರುವಾಯ್ತು ಅವನ ಬಗ್ಗೆ ಇನ್ನಷ್ಟು, ಮತ್ತಷ್ಟು ತಿಳಿದುಕೊಳ್ಳೋ ಸದವಕಾಶ.  ಮತ್ತಷ್ಟು ಹತ್ತಿರಕ್ಕೆ ಭಾವನಾತ್ಮಕವಾಗಿ ಬೆಸೆಯೋ ದಿನಗಳು ಪ್ರಾರಂಭ ಆಯ್ತು .  ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸ್ನೇಹ ಅಂದ್ರೆ ಹೇಗಿರುತ್ತೆ, ಅದರ ಸವಿ ಏನು ಅಂತ ಅರಿವಾದ ದಿನಗಳು ಅವಳಿಗೆ.  ಅದೂ ಒಬ್ಬ ಪುಟ್ಟ  ಹುಡುಗನೊಂದಿಗೆ. ಪ್ರತಿದಿನ ಅವನದ್ದೊಂದು ಮೆಸೇಜ್ ಇರಲೇ ಬೇಕು.  ಅವಳ ಜೊತೆಯಲ್ಲಿ ಒಂದು ಅರ್ಧ  ದಿನವಾದರೂ ಅವನು ಸಂಪರ್ಕದಲ್ಲಿ ಇಲ್ಲ ಅಂದರೆ ಆ ದಿನವೆಲ್ಲಾ  ಖಾಲಿ ಖಾಲಿ, tension.  ಎಲ್ಲಿ ಹೋದ ಈ ಹುಡುಗ ಅನ್ನೋ ಆತಂಕ.  ಅವನ ಗುಡ್ಮಾರ್ನಿಂಗ್ ಸಂದೇಶಕ್ಕೆ  ಅವಳು ತನ್ನ ಬಿಡುವಿನ ಸಮಯದಲ್ಲಿ ಉತ್ತರ ಕೊಟ್ರೂ, ಪ್ರತಿದಿನ ಅವನೇ ಮೆಸೇಜ್ ಮಾಡಿ ಮಾತಾಡ್ಸ್ಬೇಕೋ ಅನ್ನೋ ಆಸೆ,  ಹಠ.   ಅವನ ಮನಸ್ಥಿತಿ ಏನೇ ಇರ್ಲಿ ಆದ್ರೂ ತಪ್ಪದೆ ಅವಳನ್ನ ಖುಷಿಯಾಗಿ ಇಡೋ ಜವಾಬ್ದಾರಿ ಅವನದ್ದು.

ಸುಮ್ನೆ ಕಿರಿಕ್ ಮಾಡ್ಬೇಡ , ಜೀವ ತಿನ್ಬೇಡ ಅಂದ್ರೆ, 'ನೀನೆ ಅಲ್ವಾ ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳ್ಸಿದ್ದು...ಈಗ ಅನುಭವಿಸು ಅಂತಾನೆ'.... ಅವಳ ಅಮ್ಮನಿಗೂ ಅವನ ಬಗ್ಗೆ ಎಲ್ಲ ಗೊತ್ತು. ಪ್ರತಿದಿನ ತವರಿಗೆ ಫೋನ್ ಮಾಡಿ ಮಾತಾಡೋ ಅವಳಿಗೆ ಪ್ರತಿದಿನ ಅವಳಮ್ಮನ ಪ್ರಶ್ನೆ....  'ಹೇಗಿದ್ದಾನೆ ನಿನ್ನ ಫ್ರೆಂಡ್ ? ಏನಂತೆ ?'  ಅವಳು ಅವಳ ಅಮ್ಮನ ಹತ್ರ, 'ಅವ್ನು ಸುಮ್ನೆ ಕಿರಿಕ್ ಮಾಡ್ತಾನೆ ಅಮ್ಮ'  ಅಂದ್ರೆ, 'ಬೇಕಿತ್ತಾ ನಿನಗೆ ಅವ್ನ ಸಹವಾಸ' ... ಅಂತ ಅವರು ಮರುಪ್ರಶ್ನೆ ಮಾಡ್ತಾರೆ ...ಜೊತೆಗೆ ಅನುಭವಿಸು ಅಂತಾರೆ .... ಅವರಿಗೂ ಗೊತ್ತು  ಇಬ್ಬರ ಸ್ನೇಹ  ಎಷ್ಟು ಗಾಢವಾಗಿದೆ ಅಂತ .... ಇವಳದ್ದು ಒಂದು ಘಳಿಗೆಯ ಕೋಪ ಅವ್ನ ಮೇಲೆ ಎಂದು ಚೆನ್ನಾಗಿ ತಿಳಿದಿದ್ದಾರೆ ಅವರೂ ಸಹಾ. 

'ಇರ್ಲಿ ಪಾಪ ಕಣಮ್ಮ ಅವ್ನು....'  ಅಂದ್ರೆ, 'ಹಾಗಾದ್ರೆ ಇನ್ನು ಮುಂದೆ ನನ್ನ ಹತ್ರ ಅವನ ಬಗ್ಗೆ ಚಾಡಿ ಹೇಳಬೇಡ....  ನೀನೆ ಅನುಭವಿಸು ಅಂತಾರೆ' ...ಒಟ್ನಲ್ಲಿ ಅವಳನ್ನ ಸಪೋರ್ಟ್ ಮಾಡೋರು ಯಾರು ಇಲ್ಲ....  :-(


'ನಾನು ಒಂದಷ್ಟು ದಿನ ಊರಿಗೆ ಹೋಗ್ತಾ ಇದೀನಿ ಕಣೆ.  ಅಲ್ಲಿ ಮೊಬೈಲ್ ನೆಟ್ವರ್ಕ್ , ಇಂಟರ್ನೆಟ್ ಏನೂ ಇಲ್ಲ... ಒಂದಷ್ಟು ದಿನ ನನ್ನ ಕಿರಿಕಿರಿ ಇಲ್ದೆ ಆರಾಮಾಗಿರು...'  ಹೀಗೆ ಹೇಳಿ ಅವನು ಹೊರಟ್ರೆ  ಒಂದಷ್ಟು ದಿನ ಬೋರ್.  ಕೆಲವೊಮ್ಮೆ ಕೆಲಸದ ಒತ್ತಡದಿಂದ ಸ್ವಲ್ಪ ದಿನಕ್ಕೆ ಮತ್ತಷ್ಟು ದಿನಗಳು ಸೇರಿ ತುಂಬಾ ದಿನ ಹುಡುಗನ ಪತ್ತೆ ಇರೋಲ್ಲ. ಎಲ್ಲೋ ನೆಟ್ವರ್ಕ್ ಇರೋ ಹತ್ತಿರದ ಊರಿಗೆ ಬಂದಾಗ ಒಂದು ಮೆಸೇಜ್, ಒಂದು ಫೋನ್  ಕಾಲ್ನಲ್ಲಿ ಸ್ವಲ್ಪ ಸಮಯ ಸಂಪರ್ಕದಲ್ಲಿ ಸಿಗೋ ತೃಪ್ತಿ .

ಒಮ್ಮೆಅವನು  ತನ್ನ ಊರಿಗೆ  ಹೋದಾಗ,  'ಅಮ್ಮನ ಜೊತೆ ಪೇಟೆಗೆ ಬಂದಿದ್ದೀನಿ ...   ಮಾತಾಡ್ತೀಯಾ ಅವಳತ್ರ...'  ಅಂತ ಮೆಸೇಜ್ ಮಾಡಿದ್ರೆ , 'ಅವರ ಹತ್ರ ಮಾತಾಡಕ್ಕೆ ಹೆದರಿಕೆ ಆಗುತ್ತೆ ಮಾರಾಯಾ.....' ಅಂತ ರಿಪ್ಲೈ ಮಾಡಿದ್ಲು.  ಕೊನೆಗೂ 'ಓಕೆ ಮಾತಾಡ್ತೀನಿ  .....' ಅಂದಾಗ,
ಅವನು 'ನಿಂಗೆ ಮಾತಾಡಕ್ಕೆ ಬರಲ್ಲ..ಅವಳಿಗೆ ಗೊತಾಗಲ್ಲ....  ಚೆನ್ನಾಗಿದೆ' ...  ಅಂತ ಇಬ್ಬರನ್ನು UNDER ESTIMATE ಮಾಡಿದ್ದ   :-P ಅವ್ನು ಹೀಗೆ ಮೆಸೇಜ್ ಮಾಡ್ದಾಗ  ನಿಜ .. ತನ್ನ ಗುಣವನ್ನ ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದಾನೆ ಅನ್ನಿಸ್ತು. ಯಾಕಂದ್ರೆ ಪ್ರತಿ ಬಾರಿ ಅವ್ನು ಅಪರೂಪಕ್ಕೆ ಫೋನ್ ಮಾಡಿದ್ರು ೧೦೦ಕ್ಕೆ ೯೫ ಭಾಗ ಅವ್ನು ಮಾತಾಡಿದ್ರೆ ಒಂದು ೫% ಅವ್ಳು ಮಾತಾಡೋಳು. :-P   ಅವ್ನ ಅಮ್ಮನ ಜೊತೆ ಅಂತೂ ಇಂತೂ ಒಂದೆರಡು ನಿಮಿಷ ಕಷ್ಟ ಪಟ್ಟು ಮಾತಾಡಿ ಉಫ್ ಅಂತ ಉಸಿರು ಬಿಟ್ಟಿದ್ಲು ಆ ದಿನ  ಅವಳು.

ಪ್ರತಿಯೊಂದು ವಿಷಯವನ್ನ ತನ್ನ ಅಮ್ಮನಲ್ಲಿ ಹಂಚಿಕೊಳ್ಳೊ ಅವಳಿಗೆ, ಒಮ್ಮೆ ಅವನು ಕೂಡ  ಅವಳ ಅಮ್ಮನ ಹತ್ರ ಮಾತಾಡೋ ಅವಕಾಶ ಸಿಕ್ಕೆ ಬಿಡ್ತು. ಸಿಕ್ಕಿದ್ದೇ ಛಾನ್ಸ್ ಅಂತ ....  'ಅಮ್ಮಾ ನಿಮ್ಮ ಮಗಳು ಮಾತೆತ್ತಿದರೆ ನನ್ನ ಬೈತಾಳೆ....  ಯಾವಾಗ್ ನೋಡಿದರೂ ಜಗಳ ಆಡ್ತಾಳೆ.... ಬ್ಲಾ ...ಬ್ಲಾ ಬ್ಲಾ.. ,,,,'   ಅಬ್ಬಾ  ಒಂದೆರಡಲ್ಲ ಅವನ ಚಾಡಿ ಅವಳ ಅಮ್ಮನ ಹತ್ರ... ಅದಕ್ಕೆ ಅವರು ಪಾಪ  "ಅರೆ ಅವಳು ತುಂಬಾ ಪಾಪ....  ಯಾರ ಹತ್ರ ಜಗಳ, ಕೋಪ ಮಾಡ್ಕೊಳ್ಳೊ ಸ್ವಭಾವಾನೇ ಅಲ್ಲ ಅವಳದ್ದು...' ಅಂತ ಮಗಳನ್ನ ಸಪೋರ್ಟ್ ಮಾಡಿದ್ರು... :-)

 ಫೋನ್ ಇಟ್ಟ  ಮೇಲೆ  'ಯಾಕೆ ಅವನನ್ನ  ಸುಮ್ನೆ ಬೈತೀಯಾ....'  ಅಂತಾ ಅಮ್ಮ ಕೇಳಿದ್ರೆ,  'ಹಂಗೆ ತರಲೆ ಮಾಡ್ತಾನಮ್ಮ...  ಬರೋ ಸಿಟ್ಟಿಗೆ ಏನಾದರೂ ಮಾಡೋಣ ಅನ್ಸುತ್ತೆ ...' ಅಂದಿದ್ಲು... 






ಅವಳ ಜೊತೆ ಮಾತಾಡೋವಾಗ  ಅವನು ಏಕವಚನ ಉಪಯೋಗಿಸಿದರೆ, ಅವಳಿಗೆ ಈಗಲೂ, ಹೋಗೋ ಬಾರೋ ಅಂತ ಮಾತಾಡೋಕೆ ಕಷ್ಟ.  ಮೆಸೆಜ್ನಲ್ಲಿ, ಫೋನ್ನಲ್ಲಿ ಮಾತಾಡೋವಾಗ ಮಾತ್ರ ಅವಳ ಧೈರ್ಯ, ಶೌರ್ಯ ಎಲ್ಲಾ... :-P ಮೊದ್ಲೇ  ಅವಳು ಮುಜುಗರದ ಪ್ರಾಣಿ. ನಿಜಕ್ಕೂ  ಅವನು ಎದುರಿಗೆ ಬಂದರೆ full silent. ಮತ್ತೆ ಏನು ವಿಶೇಷ? ಫೈನ್ ಏನಿಲ್ಲ....  ಮತ್ತೆ ...? ನಥಿಂಗ್ ..... ಇಷ್ಟು ಶಬ್ದ ಬಿಟ್ಟು ಬೇರೆ  ಶಬ್ದಗಳು ಹೊರಗೆ ಬರಲ್ಲ :-P

ಅವನಿಗೆ ಅವಳು ಭೇಟಿಯಾಗಿದ್ದೆ ಎರಡು ಬಾರಿ. ಎದುರಿಗೆ ಸಿಕ್ಕಾಗ ಅವ್ನದ್ದು  ಥೇಟ್ ಒರಟು.  ಆದ್ರೆ ಮನಸ್ಸು ತುಂಬಾ ಮೃದು... ಹೀಗಂತ ಸ್ವಲ್ಪ ಹೊಗಳಿದರೆ ಹಾಗೆ ಹಿಗ್ಗಿ ಹೀರೆಕಾಯಿ ಆಗ್ತಾನೆ... :-P

ಹೌದು ಅವನಿಗೂ ಒಂದು ಪ್ರೀತಿಯ  ಹೆಸರು ಇಟ್ಟಿದ್ದಾಳೆ ಅವಳು  .... ತುಂಬಾನೇ ಖುಷಿ  ಅವಳಿಗೆ ಹಾಗೆ ಕರೆವಾಗ.ಒಂದು ರೀತಿಯ    ಮುದ್ದು ಮುದ್ದು ಮಗುವಿಗೆ ಅಡ್ಡ ಹೆಸರು ಇಟ್ಟು ಕೂಗೋ ಭಾವ. ಅದೂ ಕೂಡ ಮೆಸೆಜ್ನಲ್ಲಿ ಮಾತ್ರ... ಅವನು  ಕೂಡ  ಅವಳಿಗೆ  ಒಂದು ಹೆಸರಿಟ್ಟಿದ್ದಾನೆ....  ಎಷ್ಟೆಂದರೂ ಅವ್ನು ದೊಡ್ಡ COPY CAT... :-P   ತುಂಬಾನೇ ಸಿಲ್ಲಿ ಹುಡುಗ. ಸೀರಿಯಸ್ ವಿಷಯಗಳಲ್ಲಿ ತುಂಬಾ ಧೈರ್ಯವಂತ.  ಆದ್ರೆ  ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಳ್ಳೋ  ಬುದ್ದು :-P

ಅವನ ಋಣಾತ್ಮಕ ಯೋಚನೆಗಳೆಂದರೆ ಅವಳಿಗೆ ಎಲ್ಲಿಲ್ಲದ ಸಿಟ್ಟು . ಆ ಒಂದು ವಿಷಯಕ್ಕೆ  SHE JUST HATES HIM..

ಅವಳದೊಂದು  ಅಭ್ಯಾಸ....  ಮನಸ್ಸಲ್ಲಿ ಆ ಘಳಿಗೆಯಲ್ಲಿ  ಅಚಾನಕ್ಕಾಗಿ ಮೂಡೋ  ಭಾವ ಅಂದ್ರೂ ತಪ್ಪಿಲ್ಲ ....  ಹೀಗೆ ಏನೋ ತನ್ನ  ಕೆಲಸದಲ್ಲಿ ಇರ್ತಾಳೆ.  ಇದ್ದಕ್ಕಿದ್ದಂತೆ ಅವನ ನೆನಪಾಗುತ್ತೆ.  ತುಂಬಾ ಪ್ರೀತಿ, ಆತ್ಮೀಯತೆ  ಉಕ್ಕಿ ಹರಿಯುತ್ತೆ. :-P    ಆ ಕ್ಷಣದಲ್ಲಿ ಅವ್ನಿಗೆ 'ಲವ್ ಯೂ ಕಣೋ ....' ಅಂತ ಹೇಳಲೇಬೇಕು .. ಆ ಘಳಿಗೇಲಿ ಅವನಿಗೆ ಅವಳ ಆ ಪ್ರೀತಿ ಬೇಕೋ ಬೇಡ್ವೋ ... ಅವಳಿಗದು no matters... ಮನಸ್ಸಿಗೆ ಅನಿಸಿದ್ದನ್ನ ಕೂಡಲೆ  ಹೇಳಿ ಹಗುರಾಗ್ಬೇಕು....  ಅಷ್ಟೇ ಅವಳ ಪಾಲಿಸಿ... :-D 

ಅವಳ ಹುಟ್ಟುಹಬ್ಬಕ್ಕೆ ರಾತ್ರಿ ೧೨ ಘಂಟೆಗೆ ನಿದ್ದೆಗಣ್ಣಲ್ಲಿ ವಿಶ್ ಮಾಡಿದ ಭೂಪ ಅವ್ನು.  ಅದೇನು ಅರ್ಧ ನಿದ್ದೆ ಅರ್ಧ ಎಚ್ಚರದಲ್ಲಿ  ಮಾತಾಡಿದ್ನೋ ಅವನಿಗೆ ಗೊತ್ತಿಲ್ಲ ಪಾಪ :-P

'ಹೇ ಇವತ್ತು ನಿನ್ನ ಮೇಲೆ ತುಂಬಾ ಪ್ರೀತಿ ಬರ್ತಾ ಇದೆ ಕಣೋ' .....  ಅಂತ ಮೆಸೇಜ್ ಮಾಡಿದ್ರೆ
 'ಬಚಾವ್,  ಹತ್ರದಲ್ಲಿ ನಾನಿಲ್ಲ.....' ಅಂತ ರಿಪ್ಲೈ ಬರತ್ತೆ... ;-) ಇದ್ದಿದ್ರೆ ಅಷ್ಟೇ .... ಅಂತ ಮನಸ್ಸಲ್ಲಿ ಎಣಿಸಿ  ನಗ್ತಾಳೆ ಅವ್ಳು. 

ಅವನದ್ದೊಂದು ಟಿ - ಶರ್ಟ್ ಅದೇಕೆ ಅವಳಿಗೆ ಪ್ರೀತಿನೊ ಗೊತ್ತಿಲ್ಲ... ಆ ಶರ್ಟ್ನಲ್ಲಿ ಇರುವ ಅವನ ಹಳೆಯ  ಫೋಟೋಗಳು ಅವಳಿಗೆ ಅತ್ಯಂತ ಪ್ರಿಯವಾದದ್ದು... ಅದರಲ್ಲೂ ಅವನ ಅಮ್ಮನ ಜೊತೆ ಇರುವ ಒಂದು ಫೋಟೋ.  ಆ  ಹಳೆಯ ಚಿತ್ರಗಳಲ್ಲಿ ಅವ್ನು ಇಲಿಮರಿ ಹಂಗೆ ಕಾಣ್ತಾನೆ ಅದೆಕೋ  ಯಾವಾಗ್ಲೂ ಅವಳಿಗೆ :-P

ಇನ್ನೊಂದು ವಿಶೇಷ ಅಂದ್ರೆ ಪ್ರತಿಬಾರಿ ಅವಳೇ ತಪ್ಪು ಮಾಡಿದರೂ, ಅವನ ಮನಸ್ಸು ನೊಯಿಸಿದ್ರೂ  'ಸಾರಿ'  ಕೇಳೋದು ಅವ್ನೆ.  ಅಷ್ಟು ಒಳ್ಳೆ ಹುಡುಗ ಇನ್ನು ಯಾರೂ ಅವಳಿಗೆ ಸ್ನೇಹಿತನಾಗಿ ಸಿಗಲಿಕ್ಕಿಲ್ಲ  :-P

ಪ್ರತಿದಿನ ಬೆಳಗಿನ ಗುಡ್ಮಾರ್ನಿಂಗ್ ಮೆಸೆಜ್ಗಳಿಂದ ಅವಳ  ನಿದ್ದೆ ಹಾಳು ಮಾಡೋ  ಅವನು, ನಿದ್ದೆಮರಿಯಾದ ಅವಳಿಗೆ ಬರೋ ಕೋಪಕ್ಕೆ ಹಂಗೆ ಎದುರಿಗಿದ್ರೆ ಚಟ್ನಿ ಮಾಡೋ ಅಷ್ಟು ಸಿಟ್ಟು.  ಅಪರೂಪಕ್ಕೆ ಅವಳಾಗಿ 'ಗುಡ್ಮಾರ್ನಿಂಗ್' ಅಂದ್ರೂ ಅದಕ್ಕೂ ಒಂದಷ್ಟು ಕಾಲೆಳೆಯೋ ಕಾಮೆಂಟ್ಸ್. ಯಾಕಾದ್ರೂ ಇವನಿಗೆ ಫೋನ್ ನಂಬರ್ ಕೊಟ್ನೋ ಅಂತ ಅವಳಿಗೆ ಅವಳೇ ಮನಸ್ಸಲ್ಲಿ ಬೈದುಕೊಂಡಿದ್ದ  ದಿನಗಳದೆಷ್ಟೋ ....   :-P

ಅವನ ಪ್ರತಿಯೊಂದು ಸಂತಸದ  ಕ್ಷಣದಲ್ಲೂ ಅವಳಿಗೊಂದು ಪಾಲು.  ಅದನ್ನ ಆ ಘಳಿಗೆಯಲ್ಲೇ  ಹಂಚೋ ಹುಡುಗ ಅವನು. ಒಂಥರಾ LIVE T V channel ಇದ್ದ  ಹಾಗೆ.... 

ಜೊತೆಗೆ ಅವಳ  ಮನಸ್ಸು ನೊಂದಾಗಲೂ ಸಾಂತ್ವಾನ ಹೇಳೋ ಹುಡುಗ ಅವನು. ಅವನು ಹಂಚಿಕೊಳ್ಳೋ  ಚಿಕ್ಕ ಪುಟ್ಟ ಖುಷಿಗಳು ನಿಜಕ್ಕೂ ಅವಳಲ್ಲೂ ಸಂತಸದ ಅಲೆ ಹರಿಸುತ್ತೆ. 

ಅವನಿಗೆ ಅವಳು  ನೋವು ಕೊಟ್ಟ  ಆ ವಿಷಯವನ್ನ ಪುನಃ ನೆನಪಿಸಿ, ಜಗಳ ತೆಗೆದು ರಾಜಿ ಆಗಿ ಪುನಃ ಅದೇ ವಿಷಯಕ್ಕೆ  ಕಾಲೆಳೆಯೋದಂದ್ರೆ ಅವಳಿಗೆ ತುಂಬಾ ಇಷ್ಟ  :-P  

 ಜೀವನದಲ್ಲಿ ಎಲ್ಲವೂ ಇದ್ದು ಏನೂ ಅನುಭವಿಸಿದ ಅವಳಿಗೆ ಖುಷಿಯಾಗಿ  ಹೀಗೂ ಇರಬಹುದು ಎಂದು ಆ ಹುಡುಗ ತೋರಿಸಿ ಕೊಟ್ಟಿದ್ದ.   ಅದೆಷ್ಟೋ ಹೊಸ ಹುರುಪು, ಭರವಸೆ ಅವಳಲ್ಲಿ ಮೂಡಿಸಿದ್ದ . 

ಒಮ್ಮೊಮ್ಮೆ ಅತಿ ಅನಿಸುವಷ್ಟು ನಗಿಸೋ ಅವನು, ಇನ್ನೊಮ್ಮೆ ಕಣ್ಣು ಒದ್ದೆ ಮಾಡಿಸೋ  TWO IN ONE ಹುಡುಗ ..... 

ಅವಳಿಗೆ ಅತಿಯಾಗಿ ಹಿಂಸೆ ಆಗೋದು  ಅವನೂರಿನ ಭಾಷೆ.  ಅವಳಿಗೆ ಆ ಭಾಷೆ ಅರ್ಧ ಅರ್ಥ ಆದ್ರೆ, ಇನ್ನರ್ಧ ಅರ್ಥ ಆಗಲ್ಲ .  'ಇವತ್ತು ಹಬ್ಬದ ಸ್ಪೆಶಲ್ ಅಡಿಗೆ ಕಣೆ , ಊಟಕ್ಕೆ ಬಾರೆ ಅಂತ ಅವ್ನು ಕರೆದ್ರೆ', ಅದನ್ನು ಓದಿ ಅರ್ಥ ಆಗದ ಅವಳು, 'ಹೇ ನಂಗೆ  ಊಟಕ್ಕೆ ಕರ್ದೆ ಇಲ್ಲ ಅಂತ'  ....  ,  'ಆಗ್ಲೇ ಕರೆದ್ನಲ್ಲೇ ಅಂತ ಅವ್ನು '..... 'ನೆಟ್ಟಗೆ ನಂಗೆ ಅರ್ಥ ಆಗೋ ಹಾಗೆ ಮೆಸೇಜ್ ಮಾಡೋಕೆ ಏನು ರೋಗ ಅಂತ ಅವ್ಳು' ...? ಹೀಗೆ   ಅಲ್ಲೊಂದು ಚಿಕ್ಕ ಕೋಳಿ ಜಗಳ .... :-D

ಪ್ರತಿ ಬಾರಿಯೂ ಒಂದಲ್ಲ ಒಂದು ವಿಷಯಕ್ಕೆ  ಭಿನ್ನಾಭಿಪ್ರಾಯಗಳು, ಕೋಪ, ವಾದ- ವಿವಾದ, ಜಗಳ, ಕಾಲೆಳೆಯೋದು, UNLIMITED ಪ್ರೀತಿ, ಒಂದಷ್ಟು  ಕಷ್ಟ - ಸುಖ ವಿನಿಮಯ ಎಲ್ಲಾ ಎಲ್ಲಾನೂ ಇದೆ ಆ ಸ್ನೇಹದಲ್ಲಿ....  ಇವೆಲ್ಲವನ್ನ ಅನುಭವಿಸಿ  ಕಳೆದ ಒಂದು ವರ್ಷ ಅವಳಿಗೆ ಇಟ್ಸ್ ಗ್ರೇಟ್, fantastic.  :-)

ಇಷ್ಟೆಲ್ಲಾ ಆದ್ರೂ ಅವನ ಸ್ನೇಹ ಅವಳಿಗೆ  ಬೇಕೇ ಬೇಕು. ಒಂದಿನ ಸಂಪರ್ಕದಲ್ಲಿ ಇಲ್ದೆ ಇದ್ರೂ ಕಾಡೋ ಖಾಲಿತನ. ಜಗಳ ಆಡೋಕ್ಕೆ, ಪ್ರೀತಿ ಮಾಡಕ್ಕೆ ಅವನಂಥ ಆತ್ಮೀಯ ಸ್ನೇಹಿತ  ಇನ್ನೆಲ್ಲೂ ಸಿಗಲಿಕ್ಕಿಲ್ಲ. :-)

ಕೊನೆಯದಾಗಿ 'ಲವ್ ಯೂ ಕಣೋ......' ಅಂತ ಪ್ರೀತಿಯಿಂದ ಆಗಾಗ್ಗೆ ಹೇಳೋಕಾದ್ರೂ ಆ BOY FRIEND ಬೇಕೇ ಬೇಕು .....  ;-)

ಅವರಿಬ್ಬರ  ಸ್ನೇಹ ಚಿರಂಜೀವಿಯಾಗಿ ಸದಾ ಇರಲಿ ಅನ್ನೋ ಹಾರೈಕೆ..... TOUCH WOOD ..... :-)

Thursday, 24 October 2013

ಅಮ್ಮಾ... ಎಲ್ಲಿದ್ದೀಯಾ....... ಬೇಗ ಬಾ..... !!!!!!


ನನ್ನ ತಂದೆಯ  ಬಗ್ಗೆ ಹೇಳಬೇಕಂದ್ರೆ ಸ್ನೇಹಜೀವಿ.   ತುಂಬಾ ಪ್ರತಿಭಾವಂತರು. ಗಣಿತದಲ್ಲಿ A1. ಕೊನೆಯ ದಿನಗಳವರೆಗೂ ನಮ್ಮ  ಅಂಗಡಿಯಲ್ಲಿ ಕ್ಯಾಲ್ಕ್ಯುಲೇಟರ್ ಇರಲಿಲ್ಲ.. ಎಲ್ಲ ಲೆಕ್ಕಾಚಾರವೂ ಮನಸ್ಸಲ್ಲೇ . ಕಸದಿಂದ ರಸ ತೆಗೆಯುವ ವ್ಯಕ್ತಿ.  ಅವರ ಪ್ರಕಾರ ಯಾವುದೇ ಚಿಕ್ಕ ವಸ್ತುವು ವೇಸ್ಟ್ ಅಲ್ಲ. ಎಲ್ಲವು ಉಪಯೋಗಕ್ಕೆ ಬರುವಂಥದ್ದು. ಗೊತ್ತಿರದ ವಿದ್ಯೆ ಇಲ್ಲ. ಎಲ್ಲದರಲ್ಲೂ ಅಚ್ಚುಕಟ್ಟು. ಚಂದದ ಕೆಲಸ.  ಪರ್ಫೆಕ್ಟ್ ಅನ್ನೋ ಶಬ್ದಕ್ಕೆ ಇನ್ನೊಂದು ಹೆಸರು. ಅತೀವ  ತಾಳ್ಮೆ ಸಮಾಧಾನದ ಗುಣ. ಇನ್ನೊಮ್ಮೆ ಅವ್ರ ಮಗಳಾಗಿ ಹುಟ್ಟಿದರೂ ಆ ಸ್ವಭಾವ ನನ್ನಲ್ಲಿ ಬರಲಿಕ್ಕಿಲ್ಲ. ಒಬ್ಬರಿಗೂ ನೋಯಿಸದ ಮನಸ್ಸು. ತಮಗೆ ನೋವು ಮಾಡಿದವರಿಗೂ ಒಳ್ಳೆಯದಾಗಲಿ ಅನ್ನೋ ಹಾರೈಕೆ. 

ತನ್ನ 3 ಅಥವಾ 4 ವರ್ಷ ವಯಸ್ಸಲ್ಲೇ ತಮ್ಮ ತಾಯಿಯನ್ನ ಕಳೆದುಕೊಂಡ ನನ್ನ ತಂದೆ ಒಂದಿನ ಆದ್ರೂ ಅದರ ಬಗ್ಗೆ ಮಾತಾಡುತ್ತಲೇ ಇರ್ಲಿಲ್ಲ.  ತಾಯಿಯನ್ನ ನೋಡಿದ ನೆನಪು ಸಹಾ ಅವರಿಗಿರಲಿಲ್ಲ. ಮನೆಯಲ್ಲಿ ಅವರ ತಾಯಿಯ ಒಂದು ಫೋಟೋ ಸಹ ಇರಲಿಲ್ಲ. ಅವರು ಬೆಳೆದಿದ್ದೆಲ್ಲ ಒಂದು ಕೂಡು  ಕುಟುಂಬದಲ್ಲಿ. ಮನೆ ತುಂಬಾ 25-30 ಜನ ... ಹೇಗೋ ದೊಡ್ಡವರಾಗಿದ್ರು. ಮನೆಗೆ ಯಾವಾಗಲೂ ಬಂದು ಹೋಗೋ ನೆಂಟರು.  ಯಾವಾಗಲೂ ಗಿಜಿಗಿಜಿ ಅನ್ನುತ್ತಿದ್ದ ಮನೆ. ಎಂಟನೆ ತರಗತಿವರೆಗೆ ಓದಿದ ಅವರು ತಮ್ಮ ತಂದೆಗೆ ಸಹಾಯ ಮಾಡಬೇಕೆಂದು ವಿಧ್ಯಾಭ್ಯಾಸವನ್ನ ಅರ್ಧಕ್ಕೆ ಬಿಟ್ಟು ಅಂಗಡಿ ಸೇರಿದ್ದರು. ನಮ್ಮ ಅಂಗಡಿ  ಊರಿನ   ಪ್ರಸಿದ್ಧ ಅಂಗಡಿಗಳಲ್ಲಿ ಒಂದು ಎಂದು ಹೆಸರು ಮಾಡಿತ್ತು. 

ಹೀಗೆ ದಿನಗಳು, ವರ್ಷಗಳು ಕಳೆದುಹೋಗಿತ್ತು. ವ್ಯಾಪಾರ ವ್ಯವಹಾರ ಅವರ ಮದುವೆ, ಅಕ್ಕ ತಂಗಿ ತಮ್ಮಂದಿರ   ಮದುವೆ, , ಕಷ್ಟ ಸುಖ  ಎಲ್ಲವು ಹೀಗೆ ಸಾಗುತ್ತ ಸಾಗುತ್ತ ದಿನಗಳು ಉರುಳಿ ಹೋಗ್ತಾ ಇತ್ತು. 


ತಮ್ಮ 70ನೆ ವಯಸ್ಸಿನ ಸಮಯದಲ್ಲಿ ಊರಿನ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ. ಆ ದಿನಗಳು ಅವರ ಜೀವನದ ಅತ್ಯಂತ ಸಂತಸದ ದಿನಗಳಾಗಿತ್ತು .  ಇದರ ಮಧ್ಯದಲ್ಲಿ ಒಂದು ಮಾತ್ರೆಯ ಅಡ್ಡ ಪರಿಣಾಮದಿಂದ ಆರೋಗ್ಯ ದಿನೇ ದಿನೇ ಹದಗೆಡ್ತಾ ಇತ್ತು. ಇನ್ನು ಅಂಗಡಿ ನೋಡಿಕೊಳ್ಳಲು ಸಾಧ್ಯ ಇಲ್ಲ ಎಂದು ತಾವು 55 ವರ್ಷಗಳಿಂದ ದುಡಿದ ಅಂಗಡಿಯನ್ನು ಮುಚ್ಚುವ ನಿರ್ಧಾರವನ್ನು ನನ್ನ ಬಲವಂತಕ್ಕೆ ಮಾಡಿದ್ದರು.  ಇದ್ದಕ್ಕಿದ್ದಂತೆ  ಒಮ್ಮೆ ರಕ್ತವಾಂತಿಯಾಗಿ ರಾತೋರಾತ್ರಿ ಮಣಿಪಾಲದ ಆಸ್ಪತ್ರೆಗೆ ದಾಖಲಾದಾಗ ತಪಾಸಣೆಯ ನಂತರ  ತಿಳಿದದ್ದು,  ಅವರ  ಲಿವರ್ ಸಂಪೂರ್ಣ ಹಾಳಾಗಿತ್ತು. ಒಂದಷ್ಟು ತಿಂಗಳು ಔಷಧಿ,  ವಿಶ್ರಾಂತಿ ಎಂದು ನನ್ನ ಮನೆಯಲ್ಲಿ ಇದ್ದು ಪುನಃ ಊರಿಗೆ ಹೋಗಿ ಅಲ್ಲಿಯ ಎಲ್ಲವನ್ನು ಒಂದಷ್ಟು ವ್ಯವಸ್ಥೆ ಮಾಡಿ ಪುನಃ ಅನಿವಾರ್ಯವಾಗಿ ಉಡುಪಿಗೆ ಮನೆ ಸ್ಥಳಾಂತರ ಮಾಡಿದ್ದರು. 

ಪ್ರತಿ ತಿಂಗಳು  ನಿರಂತರ  ಮಣಿಪಾಲದ ಆಸ್ಪತ್ರೆ ಭೇಟಿ. . .. ಹೀಗೆ ಸಾಗಿತ್ತು ಒಂದು ಒಂದೂವರೆ  ವರ್ಷ.   ಕೊನೆಕೊನೆಗೆ 20 ದಿನ ಆಸ್ಪತ್ರೆಯಲ್ಲಿ 10 ದಿನ ಮನೆಯಲ್ಲಿ.. ಒಂದೆಡೆ ಮಗಳು,  ಅಳಿಯನಿಗೆ ತೊಂದರೆ ಎಂದು ನೋವು ತಿನ್ನೋ ಮನಸ್ಸು.  ಎಷ್ಟೇ ಸಮಾಧಾನ ಮಾಡಿದರು ಮನಸ್ಸಲ್ಲೇ ಪುನಃ ಅದೇ ಕೊರಗು. 

ಕೊನೆಕೊನೆಯಲ್ಲಿ ಉಲ್ಫನಗೊಂಡ  ಕಾಯಿಲೆ.  ನಡೆಯಲು ಆಗದ ಪರಿಸ್ಥಿತಿ. ಮಲಗಿದಲ್ಲೇ ಎಲ್ಲವೂ. ಆಹಾರ ತಿನ್ನಲು ಶಕ್ತಿಯಿರದೆ ನಿತ್ರಾಣ ದೇಹ . ಎದುರಿಗೆ ಇರುವ ವ್ಯಕ್ತಿಯ ಗುರುತು ಸಿಗದಷ್ಟು ದೇಹ ಕೃಶ. ಈ ಕಡೆಯ ಪ್ರಜ್ಞೆ ಇಲ್ಲದೆ ಕೆಲವು ದಿನಗಳು.   ಮನೆಯಲ್ಲಿ ಹಾಸಿಗೆ ಮೇಲೆ ಮಲಗಿ ಮಲಗಿ ಬೆಡ್ sour. ಇದಕ್ಕೆ ಪ್ರತಿದಿನ ಡ್ರೆಸ್ಸಿಂಗ್ ಅವಶ್ಯಕತೆ ಜೊತೆಗೆ  ವಾಟರ್ ಬೆಡ್ ಕೂಡ.    ಇನ್ನು ಮನೆಯಲ್ಲಿ ಆಗದು ಎಂದು ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಸಾಗಾಟ.  ಇತ್ತ ಕಡೆ ಇರದ ಪ್ರಜ್ಞೆ.  ಏನೇನೋ ಹಳೆಯ ನೆನಪು ಆಗಿ ತಮ್ಮಷ್ಟಕ್ಕೆ ತಾವೇ ಮಾತಾಡೋ ಅಪ್ಪ .  ಕೊನೆಯ ವಾರದಲ್ಲಿ ಶುರುವಾದ ಡಯಾಬಿಟಿಸ್ ಖಾಯಿಲೆ.  control ಗೆ ಬಾರದಷ್ಟು ರಕ್ತದ ಒತ್ತಡ.  



ಸುಮಾರು 65-70 ವರ್ಷಗಳು ತಮ್ಮ ತಾಯಿಯ ಬಗ್ಗೆ ಎಂದೂ  ಮಾತಾಡದೆ ಇದ್ದ ಒಬ್ಬ ವ್ಯಕ್ತಿ ಪ್ರಜ್ಞೆ ಇಲ್ಲದಿದ್ದರೂ ಆ ತಾಯಿಯ ನೆನಪು ಮಾಡುತ್ತಿದ್ದರು. ಅದೆಷ್ಟು ವರ್ಷ ಆ ತಾಯಿಯನ್ನು ಚಿಕ್ಕಂದಿನಲ್ಲೇ  ಕಳೆದುಕೊಂಡ ದುಃಖ ತಮ್ಮ ಮನಸ್ಸಲ್ಲೇ ಇಟ್ಟುಕೊಂಡಿದ್ದರೋ ಅವೆಲ್ಲವೂ ಆ  ಕೊನೆಯ ದಿನಗಳಲ್ಲಿ ಹೊರಬಂದಿತ್ತು. 


ಮೊದಲೆಲ್ಲ ರೇಡಿಯೋದಲ್ಲಿ 'ಪುಣ್ಯಕೋಟಿ ' ಗೋವಿನ ಹಾಡು ಬರ್ತಾ ಇತ್ತು. ಆ ಹಾಡು ಅಪ್ಪನನ್ನ ಎಲ್ಲೋ ಸ್ವಲ್ಪ ಭಾವುಕರನ್ನಾಗಿ ಮಾಡ್ತಾ ಇತ್ತು ಅದು ಬಿಟ್ರೆ ಕೆಲವು ಸಿನಿಮಾದಲ್ಲಿ ತಾಯಿಯ ಬಗ್ಗೆ ಬರುವ ಕೆಲವು ಮನಕಲಕುವ ದೃಶ್ಯಗಳು... ಅದನ್ನೂ ವೀಕ್ಷಿಸಿದಾಗ ಎಲ್ಲೋ ಸ್ವಲ್ಪ ನೋವು ಪಡ್ತಿದ್ದರೇನೋ ... ಅದೂ ತುಂಬಾ ಅಪರೂಪಕ್ಕೆ.... ಎಂದೂ ಯಾರೆದುರಿಗೂ ತಮ್ಮ ನೋವನ್ನ ತೋರಿಸಿಕೊಂಡವರಲ್ಲ... 

ಆದರೆ ಆಸ್ಪತ್ರೆಯಲ್ಲಿ ಆ ಇಡೀ ಒಂದು   ದಿನ  'ಅಮ್ಮಾ ಎಲ್ಲಿದ್ದೀಯಾ..... ಬಾ.... ನನ್ನನ್ನು ನಿನ್ನ ಜೊತೆ ಕರ್ಕೊಂಡು ಹೋಗು'  ಅನ್ನೋ ಸಾಲನ್ನ   ಕರೆದು ಕರೆದು ಮೌನಕ್ಕೆ ಶರಣಾಗಿದ್ರು. ಆ ದಿನವಿಡೀ ಹತ್ತಿರವಿದ್ದ ನನ್ನ ಮತ್ತು ಅಮ್ಮನ ಪಾಲಿಗೆ ಅತೀವ ಸಂಕಟ ಪಟ್ಟ ದಿನವಾಗಿತ್ತು .  ಅದೇ ಅಪ್ಪನ  ಕೊನೆಯ ಮಾತಾಗಿತ್ತು. ನಂತರದ   ಒಂದೆರಡು ದಿನದಲ್ಲಿ  ಲೋಕವನ್ನೇ ತ್ಯಜಿಸಿದ್ದರು.

ಹೇಗಿದ್ದ ಮನುಷ್ಯ ಹೇಗಾಗಿ ಬಿಡ್ತಾರೆ ಅಂತ ತುಂಬಾ ಹತ್ತಿರದಿಂದ ನೋಡಿದ ಅನುಭವ.....

ಹೀಗೆ ಅನಿಸಿದ್ದು..... ಅದು ಯಾವುದೇ ಆತ್ಮೀಯ ವಸ್ತು ಅಥವಾ ವ್ಯಕ್ತಿ ಇರಲಿ, ಕಳೆದುಕೊಂಡರೆ ಮಾತ್ರ ಅದರ ಬೆಲೆ ಗೊತ್ತಾಗೋದು ... ಅದು ಕೈಗೆಟಕುವಂತಿದ್ದರೆ ತಾತ್ಸಾರ, ಅಸಡ್ಡೆ ... 

ಅದರಲ್ಲೂ ಅಮ್ಮ ... ಅವಳು  ಇದ್ದಾಗ ಆಕೆಯ  ಬೆಲೆ ತಿಳಿಯೋದು ತುಂಬಾ ಕಡಿಮೆ. ಅವಳನ್ನು ಯಾವಾಗ್ಲೂ ನೋಯಿಸೋದೆ ಹೆಚ್ಚು.... ಪ್ರೀತಿಯ  ಧಾರೆ ಎರೆಯೋ ಅವಳಿಗೆ  ನಮ್ಮಿಂದ ಸಿಗುವ ಉಡುಗೊರೆ ಅದು .....    



  


Sunday, 4 August 2013

ಮನಸ್ಸು.....


ಅವಳು ವಾಚ್ ನೋಡ್ಕೊತಾಳೆ ಆಗ್ಲೇ ಮಧ್ಯಾಹ್ನ ಹನ್ನೆರಡು ಮುಕ್ಕಾಲು ತೋರಿಸ್ತಿದೆ.   ಓ....  ಇನ್ನು ಕಾಲು ಘಂಟೆ ಕಳೆದರೆ ಗಂಡ ಬೇರೆ ಆಫೀಸಿಂದ ಮನೆಗೆ  ಊಟಕ್ಕೆ ಬರ್ತಾರೆ. ಮನೆ ಬೀಗದ ಕೈ ಬೇರೆ ನನ್ನತ್ರ ಇದೆ. ಇನ್ನೂ ಒಂದು ಅಂಗಡಿಗೆ ಹೋಗಿ ಒಂದೆರಡು ಸಾಮಾನು ಬೇರೆ ತೆಗೋಬೇಕು.  ಛೆ...  ಬೇಗ ಮನೆಯಿಂದ ಹೊರಡಬೇಕಿತ್ತು.  ನನ್ನ ಕೆಲಸ ಒಂದು ಆಗೋದಂತ ಇಲ್ಲ.....  ಮನಸ್ಸಲ್ಲಿ ತನ್ನಷ್ಟಕ್ಕೆ ತಾನೇ ಎಣಿಸ್ತಾ ಬಿರಬಿರನೆ ಪೇಟೆನಲ್ಲಿ ಅವಳು ಹೆಜ್ಜೆ ಹಾಕ್ತಾ ಇದ್ದಾಳೆ.  ಅಷ್ಟರಲ್ಲಿ ಎದುರಿಗೆ ಬೇಕರಿ ಅಂಗಡಿ ಸಿಗುತ್ತೆ.  ಒಹ್...ಇಲ್ಲಿ ಬೇರೆ ತುಂಬಾ ಜನ ಇದ್ದಾರೆ....  ಛೆ....  ಅಂದ್ಕೊತಾ ಅಂಗಡಿ ಒಳಗೆ ಹೋಗಿ ಒಳಗಿದ್ದ ಹುಡುಗನ ಹತ್ತಿರ ತನಗೆ ಬೇಕಾದ ಸಾಮಾನೆಲ್ಲಾ ಆರ್ಡರ್ ಮಾಡ್ತಾಳೆ.  ಅವನು ಅಂತು ಇಂತು ಐದು ನಿಮಿಷದಲ್ಲಿ ಎಲ್ಲಾ ಪ್ಯಾಕ್ ಮಾಡಿ ಕೈಗೆ ಬಿಲ್ ಕೊಡ್ತಾನೆ.  ಆ ಬಿಲ್ ಕ್ಯಾಷಿಯರ್ ಹತ್ರ ಕೊಟ್ಟು ನೂರರ ಎರಡು ನೋಟ್ ಕೊಡ್ತಾಳೆ. ಅವನು ಮೂರು ಹತ್ತು ರೂಪಾಯಿ ನೋಟು ಜೊತೆಗೆ ಐದು  ರೂಪಾಯಿ ನಾಣ್ಯ ವಾಪಾಸ್ ಕೊಡ್ತಾನೆ. ಇನ್ನೇನು  ಅದನ್ನು ಅವನ ಕೈಯಿಂದ ತೆಗೋಬೇಕು ಅನ್ನೋ ಅಷ್ಟರಲ್ಲಿ ಅವಳ  ಕೈ ತಪ್ಪಿ ನಾಣ್ಯ ಕೆಳಗೆ ಬಿದ್ದು ಬಿಡತ್ತೆ.  ಸಾರಿ ಮೇಡಂ....  ಅಂತ ಅವನು ಕೌಂಟರ್ ಒಳಗಿಂದ ಹೇಳ್ತಾ ಇದ್ರೆ,  ಇಟ್ಸ್ ಓಕೆ... ನಾನೇ ಬೀಳ್ಸಿದ್ದು.... ನೀವು ಸಾರಿ ಕೇಳೋ ಅಗತ್ಯ ಇಲ್ಲ ....   ಅಂತ ಅವಳು ಕೆಳಗೆ ಬಿದ್ದ ನಾಣ್ಯ ಎತ್ಕೊತಾಳೆ. ಆ ಹುಡುಗ ಕೊಟ್ಟಿದ್ದ ಪ್ಯಾಕೆಟ್ ಇನ್ನೇನು ತನ್ನ ಹತ್ರ ಇರೋ ಬ್ಯಾಗ್ನಲ್ಲಿ ಹಾಕ್ಬೇಕು ಅಂತ ಅವಸರದಲ್ಲಿ ತುರುಕ್ತಾ ಇರ್ಬೇಕಾದ್ರೆ  ಕೈಯಲ್ಲಿ ಇನ್ನು ಹಾಗೆ ಇದ್ದ ಐದು  ರೂಪಾಯಿ ನಾಣ್ಯ ಪುನಃ ಕೈ ಜಾರಿ 'ಟ ಣ್  ಟ ಣ್ ....' ಅಂತ ಶಬ್ದ ಮಾಡ್ತಾ ಒಂದಷ್ಟು ದೂರ ಉರಳ್ತಾ  ಬಿದ್ದು ಹೋಗತ್ತೆ . ಅಕ್ಕ ಪಕ್ಕ ಇರೋವ್ರೆಲ್ಲ ಆ ಶಬ್ದಕ್ಕೆ ಒಮ್ಮೆ ಅವಳನ್ನೇ ನೋಡ್ತಾರೆ.   ಛೆ....  ಅವಸರ ಅಂತ ಅಂದ್ಕೊಂಡು  ಬೇಗ ಬೇಗ ಮನೆಗೆ ಹೋಗೋಣ ಅಂದ್ರೆ ಇದೊಳ್ಳೆ ಕೈಯಿಗೆ ಬಲ ಇಲ್ದೇ ಇರೋವ್ರ ತರಹ ಈ ಚಿಲ್ಲರೆ ಯಾಕೋ ಬಿದ್ದು ಬಿದ್ದು ಹೋಗ್ತಾ ಇದೆ.....  ಅಂತ ತನಗೆ ತಾನೇ ಬೈಕೋತಾಳೆ.




ಪುನಃ ಬಿದ್ದ ಆ ನಾಣ್ಯ  ಎತ್ಕೋಬೇಕಾದ್ರೆ ಅಲ್ಲೇ ನಾಲ್ಕು  ಹೆಜ್ಜೆ ಮುಂದೆ ಅಂಗಡಿ ಒಳಗೆ ಹಣ್ಣು ಹಣ್ಣು ಮುದುಕಿ ಒಬ್ಬಳು ಬಗ್ಗಿ ಕೂತ್ಕೊಂಡು  ಅದೇನೋ ಮಾಡ್ತಾ ಇದ್ಲು. ಅವಳಿಗೆ ಆ ಅಜ್ಜಿ ಬೆನ್ನು ಮಾತ್ರ ಕಾಣ್ತಾ ಇತ್ತು. ಪಕ್ಕದಲ್ಲಿ ಆಕೆಯ ಹಳೆ ಬಟ್ಟೆ ಗಂಟು, ಮತ್ತೊಂದಿಷ್ಟು ಹಳೆ ಸಾಮಾನುಗಳ ಚೀಲ. ಅರೆ ಈಕೆ ಈ ಅಂಗಡೀಲಿ  ಕೂತು ಏನು ಮಾಡ್ತಾ ಇದ್ದಾಳೆ... ? ಅನ್ನೋ ಕುತೂಹಲದಿಂದ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ,  ಆ ಮುದುಕಿ ತನಗೆ ಭಿಕ್ಷೆಯಲ್ಲಿ ಸಿಕ್ಕ ಚಿಲ್ಲರೆ ನಾಣ್ಯಗಳನ್ನೆಲ್ಲ ಲೆಕ್ಕಮಾಡಿ ಐದು ರೂಪಾಯಿಗೊ ಹತ್ತು ರೂಪಾಯಿಗೂ ಅವನೆಲ್ಲಾ  ಗುಂಪು ಮಾಡಿ  ಇಡ್ತಾ ಇದ್ಲು  . ಆ ಕೆಲಸವನ್ನು ಅದೆಷ್ಟು ಕಷ್ಟ ಪಟ್ಟು ಮಾಡ್ತಿದ್ಲು ಅಂದ್ರೆ ಒಂದೊಂದು ನಾಣ್ಯವನ್ನು ಆ ಮಂಜುಗಣ್ಣಿನಿಂದ ತುಂಬಾ ಹತ್ತಿರದಿಂದ ನೋಡಿ ನೋಡಿ  ಲೆಕ್ಕ ಮಾಡಿ ಇಡ್ತಾ ಇದ್ಲು.  ಬಹುಷಃ ಆ ಚಿಲ್ಲರೆಗಳನ್ನೆಲ್ಲಾ ಅಂಗಡಿಯವನಿಗೆ ಕೊಟ್ಟು ಐವತ್ತರ ಅಥವಾ ನೂರರ ನೋಟನ್ನ ಪಡೀತಾಳೇನೋ ಅಂತ ತನ್ನಷ್ಟಕ್ಕೆ ತಾನೇ ಅಂದ್ಕೊಂಡು,   ಒಂದು ನಿಮಿಷ  ಆ ದೃಶ್ಯವನ್ನ ನೋಡಿದ ಅವಳು ಪದೇ ಪದೇ ಜಾರಿಬಿದ್ದ ತನ್ನ ನಾಣ್ಯವನ್ನ ಪರ್ಸಿಗೆ  ತುರುಕಿ ಅಂಗಡಿಯಿಂದ ಹೊರ ಬೀಳುವಾಗ ಕತ್ತಲು ತುಂಬಿದ ಮೋಡ ಕವಿದ ವಾತಾವರಣ. ಇನ್ನು ಮಳೆ ಶುರು ಆದ್ರೆ ಕಷ್ಟ ಎಂದು ಅಲ್ಲಿಂದ ಐದು ನಿಮಿಷ ದಾರಿಯಷ್ಟೇ ಇದ್ದ ತನ್ನ ಮನೆಯತ್ತ ಇನ್ನಷ್ಟು ಬಿರುಸಿನ ಹೆಜ್ಜೆ ಹಾಕ್ತಾಳೆ.

ದಾರಿ ಮಧ್ಯೆ ಯಾಕೋ ಆ ಮುದುಕಿಯೇ ಕಣ್ಣ ಮುಂದೆ.  ಛೆ....  ಅವಳ ಒಂದು  ಫೋಟೋ ತನ್ನ ಮೊಬೈಲ್ನಲ್ಲಿ ತೆಗಿಬೇಕಿತ್ತು ಅಂತ ಒಂದು ಮನಸ್ಸು ಹೇಳಿದ್ರೆ, ಇನ್ನೊಂದು ಮನಸ್ಸು ಆ ಅಸಹಾಯಕ ವೃದ್ಧೆಯ ಚಿತ್ರ ತೆಗೆದು ಫೇಸ್ ಬುಕ್ನಲ್ಲಿ ಶೇರ್ ಮಾಡಿ, ಒಂದಷ್ಟು ಲೈಕ್ಸ್  ಕಾಮೆಂಟ್ ಪಡೆದು  ಅದೆಂಥ ಖುಷಿ ಪಡ್ತೀಯಾ....  ಎಂದು ಛೀಮಾರಿ ಹಾಕ್ತಿತ್ತು.  ಈ ದ್ವಂದ್ವ ಮನಸ್ಸಲ್ಲೇ ಮನೆ ತಲುಪಿದಾಗ ಅವಳ ಹಿಂದೆಯೇ ಗಂಡನ ಆಗಮನ. ಬೇಗ ಬೇಗ ಮಾಡಿಟ್ಟಿದ್ದ ಅಡಿಗೆ ಬಿಸಿಮಾಡಿ ಅವನ ಹತ್ರ ಆ ಬೇಕರಿಯಲ್ಲಿ ನಡೆದ ಒಂದೊಂದು ನಿಮಿಷದ ಸಂಗತಿ ಹಂಚಿಕೊಂಡಾಗ  ಅವನು  ಒಂದೆ  ಒಂದು  ಮಾತು ಹೇಳ್ತಾನೆ.  'ಅಲ್ಲಾ ಕಣೆ ಅಷ್ಟೆಲ್ಲಾ ಆ ಮುದುಕಿಯನ್ನ ಹತ್ತಿರದಿಂದ ಗಮನಿಸಿ ಬಂದಿದ್ದೀಯಾ....  ನಿನ್ನ ಕೈಯಲ್ಲಿ ಎರಡೆರಡು ಬಾರಿ ಜಾರಿಬಿದ್ದ ಆ ಹಣವನ್ನ ಅವಳಿಗೆ ಕೊಡಬಾರದಿತ್ತಾ...... ' ಅಂದಾಗ ಅವಳನ್ನ ಜೀವಂತವಾಗಿ ಇರುವಾಗಲೇ ಯಾರೋ ತಿವಿದು ಸಾಯಿಸಿದ ಅನುಭವ. ಎಷ್ಟು ಪೆದ್ದು ಕೆಲಸ ಮಾಡ್ದೆ. ಎಷ್ಟು ದಡ್ಡಿ ತರಹ ಎಲ್ಲಾ ನೋಡಿನೂ ಹಾಗೆ ಬಂದು ಬಿಟ್ಟೆ.  ಯಾವತ್ತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡೋ ಮನಸ್ಸು ತನ್ನದು ... ಇವತ್ತ್ಯಾಕೆ ಹೀಗ್ ಮಾಡದೆ ...?? ಯಾಕೋ ಆ ದಿನವೆಲ್ಲಾ ಅವಳಿಗೆ ಸಂಕಟ, ಕಸಿವಿಸಿ. ಅವತ್ತಿಡೀ   ಮನಸ್ಸಿಗೆ ಸಮಾಧಾನವಿಲ್ಲದ ದಿನ ಅವಳದಾಗಿತ್ತು .