Saturday 3 November 2012

ಗೋವಾದಲ್ಲಿ ಐದು ರಾತ್ರಿ ...ಆರು ದಿನ.... ಭಾಗ- 1....



ಗೋವಾ ಅಂದ ಕೂಡಲೇ ನೆನಪಾಗೋದು ...ಅಲ್ಲಿಯ ರಮಣೀಯ ಸಮುದ್ರಗಳು , ಚರ್ಚ್ ಗಳು , ದೇವಸ್ಥಾನಗಳು , ವಿದೇಶಿ ಪ್ರವಾಸಿಗರು...ಇನ್ನು ಏನೇನೋ .... ಈ  ಸಾರಿ ಮಗನ ಶಾಲೆಯ ರಜೆಯಲ್ಲಿ ಗೋವಾಕ್ಕೆ ಹೋಗೋಣ ಅಂತ ಒಂದು ತಿಂಗಳ ಮೊದಲೇ ನಿರ್ಧಾರ ಮಾಡಿದ್ವಿ ...ಹಾಗೆಯೇ ರೂಮ್ ಸಹಾ ಬುಕ್ ಮಾಡಿ ಇಟ್ಟಿದ್ವಿ .. ಅಲ್ಲಿ ಅಕ್ಟೋಬರ್ ರಜಾ ದಿನ ಆಗಿದ್ದರಿಂದ ರೂಮ್ ಗಳು ಭರ್ತಿ ಆಗಿತ್ತು .. .ಆದರೆ ನಮಗೆ ಕೇವಲ ಮೂರು ದಿನಕ್ಕೆ ಮಾತ್ರ ಕೋಣೆ ಸಿಕ್ಕಿತ್ತು .... ಇನ್ನು ಎರಡು ದಿನ ಅಲ್ಲಿ ಹೋಗಿಯೇ ಯಾವುದಾದರು ರೂಮ್ ಬುಕ್ ಮಾಡೋಣ ಅಂದುಕೊಂಡ್ವಿ .... 

ಅವತ್ತು  ಅಕ್ಟೋಬರ್ 16 ನೇ ತಾರೀಕು.. ನಮ್ಮ ಪ್ರಯಾಣ ಉಡುಪಿಯ ಇಂದ್ರಾಳಿಯ ರೈಲ್ವೆ ನಿಲ್ದಾಣದಿಂದ ಪ್ರಾರಂಭ ... 
ರೈಲ್ವೆ ನಿಲ್ದಾಣದಲ್ಲಿ ಅಮ್ಮ ಮತ್ತು ಮಗನ ಮೊದಲ ಫೋಟೋ ... :)) ಬೆಳಗ್ಗಿನ ಎಳೆ  ಬಿಸಿಲು ಮುಖಕ್ಕೆ ಹೊಡಿತಾ ಇತ್ತು ....




ರೈಲಿನಲ್ಲಿ ಮೊದಲೇ ರಿಸರ್ವೇಶನ್ ಮಾಡಿದ್ದರಿಂದ ಚಿಂತೆ ಇರಲಿಲ್ಲ ...ಗೋವಾಕ್ಕೆ ಉಡುಪಿಯಿಂದ ಸುಮಾರು ಐದು ಘಂಟೆಗಳ ಪ್ರಯಾಣ .... ಬೆಳಿಗ್ಗೆ ಅವಸರದಲ್ಲಿ ಏನೋ ತಿಂದು ಬಂದದ್ದರಿಂದ ಸ್ವಲ್ಪ ಹತ್ತು ಘಂಟೆ ಹೊತ್ತಿಗೆ ಹೊಟ್ಟೆ ತಾಳ ಹಾಕಲು ಪ್ರಾರಂಭ ಮಾಡಿತ್ತು ... ಹೋಟೆಲ್ನಲ್ಲಿ ಪಾರ್ಸೆಲ್ ಕಟ್ಟಿಕೊಂಡು ಬರಲು ಸಹಾ ಮರೆತಿದ್ದೆವು ....ರೈಲಿನಲ್ಲಿ ಮಾರುವ "ಪರೋಟ-ಚಟ್ನಿ" ತಿಂದು ನೀರು ಕುಡಿದೆವು ...ನನ್ನ ಮಗನಿಗಂತು ಅವನ ವಯಸ್ಸಿನ ಇಬ್ಬರು ಮಕ್ಕಳು ಸಿಕ್ಕಿದ್ದರಿಂದ ಅವರ ಜೊತೆ ಆಟದಲ್ಲಿ ಮುಳುಗಿ ಹೋಗಿದ್ದ ...ಆಗಲೇ ಮಕ್ಕಳು ಐ -ಪ್ಯಾಡ್ ನಲ್ಲಿ .." angry birds"...ಆಟದಲ್ಲಿ ತಲ್ಲಿನರಾಗಿದ್ದರು ...ಅದು ಮುಗಿದ ಮೇಲೆ .."stone-paper-scissors" ಅಂತೆ ...ಹೀಗೆ ಅವರ ಆಟಕ್ಕೆ ಕೊನೆಯೇ ಇರಲಿಲ್ಲ ....  ಅದರ ಒಂದು ನೋಟ ಕೆಳಗಿನ ಚಿತ್ರದಲ್ಲಿ .... :))


ನಮ್ಮ ಭೋಗಿಯಲ್ಲಿ ಕೆಲವು ದೇವಸ್ಥಾನಕ್ಕೆ ಭೇಟಿ ಕೊಡುವ ಸಹ ಪ್ರಯಾಣಿಕರಿದ್ದರು...ಅದರಲ್ಲಿ ಒಂದು ಸಣ್ಣ ಮಗು..ಅದರ ಆಟ ನೋಡುತ್ತಲೇ  ನನಗೆ ಸಮಯ ಕಳೆದಿದ್ದೆ ತಿಳಿಯಲಿಲ್ಲ ...ನಾವು ಮಡಗಾವ್ ರೈಲ್ವೆ ನಿಲ್ದಾಣ ತಲುಪುವಾಗ ಮಧ್ಯಾಹ್ನ 1.30..  ನಾವು ರೈಲಿನಿಂದ ಇಳಿಯಬೇಕಾದರೆ ಅದೇ ರೈಲಿನಲ್ಲಿ ಗೋವಾದ ಸ್ನೇಹಿತ ಉಡುಪಿಗೆ ಹೊರಟಿದ್ದರು ....ಅವರ ಹತ್ತಿರ ಇಲ್ಲಿ ಒಳ್ಳೆ ಊಟದ ಹೋಟೆಲ್ ಎಲ್ಲಿ ಎಂದು ವಿಚಾರಿಸಿದಾಗ ...ಅವರು ಹೇಳಿದ "ಸ್ವಾದ್ ಹೋಟೆಲ್ "ವಿಳಾಸಕ್ಕೆ ಆಟೋದಲ್ಲಿ ಲಗ್ಗೇಜ್ ತುಂಬಿಸಿಕೊಂಡು ಹೊರಟೆವು ...ಅಲ್ಲಿ ಊಟ ಮಾಡಿ ನಮ್ಮ ರೂಮ್ ಬುಕ್ಕ್ ಆದದ್ದು "ಅಂಜುನಾ ಬೀಚ್  ಹತ್ತಿರ "...ಅಲ್ಲಿಂದ ಹೇಗೆ ಹೋಗೋದು ಎಂದು ಸ್ಥಳಿಯರನ್ನು ಕೇಳಿದ್ರೆ , ಅವರು  ಮೊದಲು ಕದಂಬ ಬಸ್ ನಿಲ್ದಾಣ ,ಅಲ್ಲಿಂದ ಪಣಜಿ , ಮುಂದೆ ಮಾಪುಸ , ಪುನಃ ಅಂಜುನಾ ಎಂದು ಹೇಳಿದಾಗ ನಾವು ತಲೆ ತಿರುಗಿ ಬಿಳೋದೊಂದೇ  ಬಾಕಿ... ಉಸ್ಸಪ್ಪ ...ಇಷ್ಟು ದೂರ ಇದೆಯಾ ನಮ್ಮ ರೂಮ್  ಸಿಗಲಿಕ್ಕೆ ಅಂತಾ ಸುಸ್ತಿನ ಉದ್ಗಾರ ಮೂವರ ಬಾಯಲ್ಲಿ .....

ಅಂತು ಅಷ್ಟೆಲ್ಲಾ ಸಣ್ಣ ಸಣ್ಣ ಊರು ಸುತ್ತಿ .... ನಮ್ಮ ರೂಮ್  ಸೇರುವಾಗ ಸಂಜೆ ಆರರ ಸಮಯ ... ಕೊನೆಗೂ ಮನೆಗೆ ಬಂದು ಸೇರಿಕೊಂಡ ಅನುಭವ ...ಮೂವರು ಸ್ವಲ್ಪ ಮುಖ ತೊಳೆದುಕೊಂಡು ಹಾಸಿಗೆಗೆ ಬೆನ್ನು ಹಚ್ಚಿದೆವು...ಮಗ ಟಿ ವಿ ಯಲ್ಲಿ ಕಾರ್ಟೂನ್ ನೋಡಲು ಶುರು ಮಾಡಿದ ...ನಾವು ಇನ್ನು ನಾಳೆಯ ದಿನ ಹೇಗೆ ಕಳೆಯೋದು ಎಂದು ಯೋಚನೆ ಮಾಡ್ತಾ ಇದ್ವು ...ಗೋವಾ ಪ್ರವಾಸೋದ್ಯಮದವರು ಅಲ್ಲಿಯ ಸ್ಥಳಗಳನ್ನು ತೋರಿಸುವ ಬಸ್ ಗಳನ್ನು ವ್ಯವಸ್ಥೆ ಮಾಡಿದ್ದರು. ಅಲ್ಲಿಯ ಕಛೇರಿಗೆ ಫೋನ್ ಮಾಡಿದ್ರೆ ನಾಳೆ ಸೀದಾ ನಮ್ಮ "ಮಾಪೂಸಾ  ರೆಸಿಡೆನ್ಸಿಗೆ " ಬೆಳಿಗ್ಗೆ 8 ಘಂಟೆಗೆ ಬನ್ನಿ ..ಪ್ರಯಾಣ ಇಲ್ಲಿಂದಲೇ ಶುರು ಅಂದ್ರು ..ಅವರ ಹತ್ತಿರ 3 ಸೀಟ್ ಬುಕ್ ಮಾಡಲಿಕ್ಕೆ ಹೇಳಿ ನಿರಾಳರಾದೆವು... ರಾತ್ರಿ ಎಂಟು ಘಂಟೆ ಆಗ್ತಾ ಬಂದಿತ್ತು ...ಇನ್ನು ಸ್ವಲ್ಪ ಏನಾದರು ತಿಂದು ಬೇಗ ಮಲಗಬೇಕು ಅನ್ನಿಸ್ತಿತ್ತು ...ನಮ್ಮ ಪುಣ್ಯಕ್ಕೆ ರೆಸಾರ್ಟ್ನಲ್ಲಿ ಅವರದೇ ರೆಸ್ಟೋರೆಂಟ್ ಇತ್ತು ..ಅಲ್ಲಿ ಹೋಗಿ ತಿಂಡಿಗೆ ಆರ್ಡರ್ ಕೊಟ್ಟು ಕಾದು  ಕುತ್ಕೊಂಡ್ವಿ ...ಈಜು ಕೊಳದ ಸುತ್ತ ಹಾಕಿದ ಖುರ್ಚಿ-ಮೇಜು ...ಜೊತೆಗೆ ಮೇಣದ ಬತ್ತಿಯ ಬೆಳಕು ,ಇಂಪಾದ ಲಘು ಸಂಗೀತ ,ಸುತ್ತ ಕತ್ತಲ ನಡುವೆ ಚಂದದ ಒಂದೊಂದು ದೀಪಗಳು, ತಣ್ಣನೆಯ ಗಾಳಿ  ..ಆ ಇಡೀ ವಾತಾರಣವನ್ನು ವಿಶೇಷವಾಗಿರಿಸಿತ್ತು ...



ಈ ಚಿತ್ರದಲ್ಲಿ  ಆ ರಾತ್ರಿಯ ಒಂದು ನೆನಪು...ಕೊನೆಗೆ ತಿಂಡಿ ತಿಂದು ರೂಮ್ ಸೇರುವಾಗ 9 ಘಂಟೆ ಸಮಯ...ಅಲ್ಲಿಗೆ ಅವತ್ತಿನ ನಮ್ಮ ದಿನ ಮುಗಿದು ವಿಶ್ರಾಂತಿಯ ಸಮಯ..ರೈಲಿನಲ್ಲಿ, ಬಸ್ಸ್ನಲಿ  ಕೂತು ಕೂತು ಬೆನ್ನೆಲ್ಲಾ ನೋಯ್ತಿತ್ತು  ..ಯಾವಾಗ ಹಾಸಿಗೆ ಸೇರುತ್ತೆವೋ ಎಂಬ ಆತುರ ...ಬೆಳಿಗ್ಗೆ 6 ಘಂಟೆಗೆ ಅಲಾರಾಂ ಇಟ್ಟು ಮೆತ್ತನೆಯ ಹಾಸಿಗೆಗೆ ಒರಗಿದಾಗ ..."ಆಹಾ ..ಆ ....ಸುಖ"............. :))


ಮರುದಿನ ಅಕ್ಟೋಬರ್ 17 ....ಬೆಳಕಾಗಿದ್ದು ಗೋವಾ ಮಡಿಲಲ್ಲಿ ...ಬೆಳಗ್ಗಿನ ಸ್ನಾನ ಎಲ್ಲ ಮುಗಿಸಿ ..ಮಾಪುಸಕ್ಕೆ ಬಸ್ನಲ್ಲಿ ಹೊರಟೆವು ..ಅಂಜುನಾದಿಂದ ಸುಮಾರು 15 ಕಿಲೋಮೀಟರ್ ದೂರ ಅಷ್ಟೇ ...ಸುಮಾರು 20 ನಿಮಿಷಗಳ ಪ್ರಯಾಣ ...ಸುಮಾರು 7.30 ಕ್ಕೆ ಅಲ್ಲಿ ತಲ್ಪಿದ್ವಿ ...ಅಲ್ಲಿ ಎದುರಿಗೆ ಸಿಕ್ಕ "ವೃಂದಾವನ " ಹೋಟೆಲ್ಗೆ ಹೋಗಿ ಇಡ್ಲಿ -ವಡಾ , ಪೂರಿ -ಬಾಜಿ , ಕಾಫಿ ಕುಡಿದು ಅಲ್ಲಿಯ ಪ್ರವಾಸೋದ್ಯಮ ಕಚೇರಿ ತಲುಪಿದ್ವಿ . ಅವತ್ತು "ದಕ್ಷಿಣ ಗೋವಾ" ಟೂರ್ ಆಯೋಜಿಸಿದ್ರು ..ಅದರ ಹಣ ಕೊಟ್ಟು 8.30ಕ್ಕೆ ಅಲ್ಲಿಂದ "ಕೊಲಂಗುಟ್ ರೆಸಿಡೆನ್ಸಿಗೆ  "ಬಸ್ನಲ್ಲಿ ತಲುಪಿದ್ವಿ ...ಅಲ್ಲಿ ಸುಮಾರು 15 ರಷ್ಟು  ಸಹಪ್ರಯಾಣಿಕರು ಜೊತೆಯಾದರು ....ಅಲ್ಲಿಂದ ಶುರುವಾಯ್ತು ನಮ್ಮ ನಿಜವಾದ ಪ್ರಯಾಣ ....


ಮೊದಲು ನಾವು ಭೇಟಿ ಕೊಟ್ಟದ್ದು  "ಡೋನಾ -ಪೋಲಾ  "...ಇದೊಂದು ಪ್ರಸಿದ್ಧ ಪ್ರವಾಸಿ ಸ್ಥಳ...ಇದೊಂದು ಆತ್ಮಹತ್ಯೆಯ ಸ್ಥಳ (suicide point ) ಎನ್ನುತ್ತಾರೆ . ಒಬ್ಬ ಪೋರ್ಚುಗೀಸ್ ವೈಸ್ರಾಯ್ರ ಮಗಳು ..ಒಬ್ಬ ಸಾಮಾನ್ಯ ಬೆಸ್ತನನ್ನು ಪ್ರೀತಿಸಿ , ಮದುವೆಯಾಗಲು ಅನುಮತಿ ಸಿಗದಿದ್ದಾಗ ಈ ಎತ್ತರದ ಸ್ಥಳದಿಂದ ಹಾರಿ ಪ್ರಾಣ ಬಿಟ್ಟಳಂತೆ , ಇದು ಇಲ್ಲಿಯ ಕಥೆ..ಸುತ್ತಲು ಸಮುದ್ರ ..ಮೇಲೆ ಹತ್ತಲಿಕ್ಕೆ ರಾಶಿ ಮೆಟ್ಟಿಲುಗಳು , ಸುಂದರ ಪ್ರಕೃತಿಯ ದರ್ಶನ ...ಇಲ್ಲಿ "ಸಿಂಘಂ " ನಂತಹಾ ಚಿತ್ರದ ಚಿತ್ರೀಕರಣ ನಡೆದ ಸ್ಥಳ....





"ಡೋನಾ -ಪೋಲಾದ ನಂತರ ನಮ್ಮ ಮುಂದಿನ ಭೇಟಿ ಸುಂದರ ಮಡಗಾವ್ ನ "ಅಕ್ವೇರಿಯಮ್ಗೆ" ನಾವು ಅಲ್ಲಿ ಟಿಕೆಟ್ ತೆಗೆದುಕೊಳ್ಳುವಾಗಲೇ ಶಾಲಾ ಪುಟ್ಟ ಪುಟ್ಟ ಮಕ್ಕಳು ತಮ್ಮ ಸರದಿಗಾಗಿ ಹೀಗೆ ಕುತೂಹಲದಿಂದ ಕಾಯ್ತಾ ಇದ್ರು ....






ಈ    ಅಕ್ವೇರಿಯಮ್ ನಲ್ಲಿ  ನಮಗೆ ಕಾಣಸಿಕ್ಕಿದ್ದು ತರಹಾವರಿ ಬಗೆಬಗೆ ಮೀನುಗಳು , ಬಣ್ಣ ಬಣ್ಣದ ಮೀನುಗಳು , ಸಣ್ಣ ಆಮೆಗಳು , ಕೆಲವು ಬಗೆಯ ಹಾವುಗಳು ...ಅದರಲ್ಲಿ ನನಗೆ ಇಷ್ಟವಾದ ಚಿತ್ರಗಳು ಈ ಕೆಳಗಿನವುಗಳು ...
ಈ  ದೊಡ್ಡ ಕಣ್ಣಿನ ಮೀನು ಆಕರ್ಷಣೆಯ ಕೆಂದ್ರ ಬಿಂದು ....




ಹಾಗೆಯೇ ಈ ಹೊಳೆಯುವ ಪುಟ್ಟ ಪುಟ್ಟ ಮೀನುಗಳು  ಆ ಕಪ್ಪು ಗಾಜಿನ ಜಾಡಿ ಮತ್ತು ಹಸಿರಿನ ಗಿಡಗಳ ನಡುವೆ ಅಧ್ಭುತವಾಗಿ  ಕಾಣುತ್ತಿತ್ತು 


ನಂತರ ನಮ್ಮ ಮುಂದಿನ ಭೇಟಿ "ಕೊಲ್ವಾ ಬೀಚ್ "....ಆಗ  ಸುಮಾರು 11.30 ರ ಸಮಯ ...ಬಿಸಿಲು ತನ್ನ ಕಾವನ್ನು ನಮಗೆ ತೋರಿಸುತ್ತಿತ್ತು. ನಮ್ಮ ಮೊದಲ ಸಮುದ್ರ ದರ್ಶನ ಗೋವಾದಲ್ಲಿ ...ಚಂದದ ಆಕಾಶ , ನೀಲಿಸಮುದ್ರ , ಸುತ್ತಲು ತೆಂಗಿನ ಮರಗಳು ,ಬೀಸುವ ಗಾಳಿ , ತೀರದಲ್ಲಿ ನಡೆಯುತ್ತಿದ್ದರೆ ಅಲೆಗಳು ನಮ್ಮ  ಕಾಲನ್ನು ಚುಂಬಿಸುವ ಪ್ರಯತ್ನ ಮಾಡುತ್ತಿದ್ದವು. ಅಲ್ಲಿ ಸವಿದ ತಂಪು ತಂಪು ಐಸ್ ಕ್ರೀಮ್ ...ಈ  ಚಿತ್ರ ನೋಡಿದರೆ ಇನ್ನು ಸಹಾ ನೆನಪಾಗುತ್ತದೆ .....



ನಮ್ಮ ಮುಂದಿನ ಸ್ಥಳ ..."ಪುರಾತನ ಗೋವಾ -ಬಿಗ್ ಫುಟ್ "...ಇಲ್ಲಿ ನಮಗೆ ಹಳೆಯ ಗೋವಾದ ಪುರಾತನ ಮನೆಯ ದರ್ಶನ , ಅಲ್ಲಿ ಗೋವಾದ  ಪೂರ್ವಜರು ಹೇಗೆಲ್ಲಾ ವಾಸಿಸುತ್ತಿದ್ದರು ಎಂದು ತೋರಿಸುವ ಮನೆ .(ಮ್ಯೂಸಿಯಂ ) .......


ಇದು ಆ ಹಳೆ ಮನೆಯ ಮುಖ್ಯ ದ್ವಾರ ...ಇಲ್ಲಿ ನಿಂತ ಮಹಿಳೆ ನಮ್ಮ ಗೈಡ್ ... :))






ಇದು ಅಲ್ಲಿಯ ಆ ಮನೆತನದ ಕ್ರಿಶ್ಚಿಯನ್ ಸಂಸ್ಕೃತಿಯನ್ನು ಎದ್ದು ತೋರಿಸುವ ಸುಂದರ  ಚಿತ್ರ ...





ಆ ಮನೆಯಲ್ಲಿ  ನೋಡಿದ್ದು ಒಂದಾ...ಎರಡಾ...ಅಲ್ಲಿಯ ಮನೆತನದವರ ಚಿತ್ರಗಳು , ಅವರ ಅಧ್ಭುತವಾದ ಉಡುಪುಗಳು, ಅವರ ಅದ್ಧೂರಿ ಮಂಚ , ಹಾಸಿಗೆ,  ಖುರ್ಚಿ ಮೇಜುಗಳು, ಮಕ್ಕಳ ಕೋಣೆ , ಅವರ ಆಟದ ಸಾಮಾನುಗಳು , ಅಡಿಗೆಮನೆ , ಅಲ್ಲಿಯ ಹಿಂದಿನ ಕಾಲದ ಒಲೆ , ಪಾತ್ರೆಗಳು , ಹೆಂಗ ಸರಿಗಾಗೆ ಇದ್ದ ಪ್ರತ್ಯೇಕ ಶೌಚಾಲಯ , ಅವರು ಬೇಸಾಯಕ್ಕೆ ಉಪಯೋಗಿಸುತ್ತಿದ್ದ ಉಪಕರಣಗಳು , ಹಿಂದಿನ ಸ್ನಾನದ ಹಂಡೆಗಳು , ಪಿಂಗಾಣಿ ಸಾಮಗ್ರಿಗಳು , ಅವರ ದೊಡ್ಡ ಊಟದ ಮನೆ , ಮಧ್ಯದ ಬಾಟಲಿಗಳ ಸಂಗ್ರಹ , ಮುಖವಾಡಗಳು ,...ಇತ್ಯಾದಿ............

ಈ  ಕೆಳಗಿನ ಚಿತ್ರದಲ್ಲಿ ಗಣಪತಿ ವಿಗ್ರಹಗಳ ಸಂಗ್ರಹ ..........






 ಕೆಳಗಿನ ಚಿತ್ರ ಅವರ ಡೈನಿಂಗ್ ಹಾಲ್ನದ್ದು ....




ಇದು ಅಲ್ಲಿಯ ಮನೆತನದವರು ತಮ್ಮ ಒಡವೆಗಳನ್ನು ಇಡುತ್ತಿದ್ದ ಪೆಟ್ಟಿಗೆಯಂತೆ ...ಅದರಲ್ಲಿ ಸುಮಾರು ಸಣ್ಣ ಸಣ್ಣ ಕಪಾಟುಗಳಿವೆ ..ಅಧ್ಭುತವಾಗೆ ಮರದಿಂದ ಮಾಡಿದ "ಲಾಕರ್"





ಈ ಮನೆಯಲ್ಲಿ ಸಹಾ "ಸಿಂಘಂ ' ಚಿತ್ರದ ಚಿತ್ರೀಕರಣ ನಡೆದಿತ್ತಂತೆ ....ಅದರ ಕೆಲವು ಚಿತ್ರಗಳು
ಅಲ್ಲಿಂದ ಮುಂದೆ ನಾವು ನೋಡಿದ್ದು ಪುರಾತನ ಗೋವಾದ ವೈಭವ....ಅಲ್ಲಿ ನಾವು ಕಾಲಿಟ್ಟಾಗ ನಮಗೆ ಅಲ್ಲಿಯ ಸಂಪ್ರದಾಯದಂತೆ ಕುಂಕುಮ ಹಚ್ಚಿ , ಆರತಿ ಬೆಳಗಿ ಸ್ವಾಗತಿಸಿದ್ದರು ಅಲ್ಲಿಯ ಸಿಬ್ಬಂದಿ ..... ಹಿಂದಿನ ಕಾಲದಲ್ಲಿ ಗೋವಾದ ಜನರ ಜೀವನ ಹೇಗೆ ಇತ್ತು ಎಂಬುದನ್ನು ಇಲ್ಲಿ ಚೆನ್ನಾಗಿ ತೋರಿಸಿದ್ದಾರೆ....

ಹಳ್ಳಿಯ ಮನೆ, ಬೆಸ್ತ, ಅಲ್ಲಿಯ ಸಂತೆ, ಹಳ್ಳಿ ಮನೆಯಲ್ಲಿರುವ ದನದ ಕೊಟ್ಟಿಗೆ , ಹೀಗೆ ............. ಇನ್ನು ಹಲವು......

ಇದು ಅಲ್ಲಿಯ ಬಂಡೆಯಲ್ಲಿ  ಇರುವಂಥಹ " ದೊಡ್ದಪಾದ"...ಇದರ ಬಗ್ಗೆ ಕೆಲವು ನಂಬಿಕೆಗಳು ಸಹಾ ಇದೆ...ಇದರ ಮೇಲೆ ನಮ್ಮ ಪಾದ ಇಟ್ಟು ಬೇಕಾದ ಹರಕೆಯನ್ನು ...ಹರಸಿಕೊಂಡರೆ "ಇಷ್ಟಾರ್ಥ ನೆರವೆರುತ್ತದಂತೆ "......



ಇದು ಸಂತ ಮೀರಾಬಾಯಿಯ ಚಿತ್ರವನ್ನು ಏಕಶಿಲೆಯಲ್ಲಿ ಕೆತ್ತಿದ್ದು ...ಸುಮಾರು 15 ಮೀಟರ್ ಉದ್ದ ಇದೆಯಂತೆ .ಇದು ಇಲ್ಲಿಯ ಇನ್ನೊಂದು ಪ್ರಮುಖ ಆಕರ್ಷಣೆ ......



ನಂತರದ ಭೇಟಿ "ಶಾಂತ ದುರ್ಗಾ ದೇವಸ್ಥಾನ "..ಅತ್ಯಂತ ಸುಂದರ ಶಿಲ್ಪಕಲೆಯ ಗುಡಿ ...ಅಲ್ಲಿ ಎದುರಿಗೆ ಕಾಣ ಸಿಗುವ ಬಿಳಿಯ  ಗೋಪುರ ...ಗೋವಾ ದೇವಸ್ಥಾನಗಳಲ್ಲಿ ಮಾತ್ರ ನಾನು ಈ ರೀತಿ ನೋಡಿದ್ದು .... 



ಈ  ದೇವಸ್ಥಾನದ  ಭೇಟಿಯ ನಂತರ ಮಧ್ಯಾಹ್ನ ಊಟದ ಸಮಯ ...ಆಗಲೇ ಸುಮಾರು ಸಮಯ 2.30.... ಎಲ್ಲರ ಹಸಿವು ತಾರಕಕ್ಕೆ ಏರುತ್ತಿತ್ತು ... ಬಸ್ಸಿನ ಗೈಡ್ಗೆ ಎಲ್ಲರ ಪ್ರಾರ್ಥನೆ .."ಎಲ್ಲಾದರು ಮೊದಲು ಊಟಕ್ಕೆ ನಿಲ್ಸಪ್ಪ ಪ್ಲೀಸ್ ಅಂತ ....."  ಅಂತು ಆ ಪುಣ್ಯಾತ್ಮ ಸೂಪರ್ ಹೋಟೆಲ್ಗೆ ಕರೆದುಕೊಂಡು ಹೋಗಿ 45  ನಿಮಿಷಗಳ ವಿರಾಮ ನೀಡಿದ .... ಎಲ್ಲರು ತಮ್ಮ ತಮ್ಮ ಊಟಕ್ಕೆ ಆರ್ಡರ್ ಮಾಡಿ ...ತಟ್ಟೆ ತುಂಬಾ ಆಹಾರ ಬಂದ ಕೂಡಲೇ ನಿಮಿಷಗಳಲ್ಲಿ ಖಾಲಿ ಮಾಡಿ ಬಿಟ್ಟಿದ್ವಿ ... :)) ಎಲ್ಲರ  ಹೊಟ್ಟೆ ತುಂಬಿದ ಮೇಲೆ ಉತ್ಸಾಹ ಪುನಃ ಇಮ್ಮಡಿಸಿತ್ತು ....ಅದೇ ಖುಷಿಯಲ್ಲಿ ಬಸ್ಸಿನ ಜೊತೆ ಅಮ್ಮ-ಮಗನ ಒಂದು ಚಿತ್ರ... :))




ಬಸ್ಸಿನ ಒಳಗೆ ನಮ್ಮ ಪ್ರಪಂಚ ಹೀಗಿತ್ತು ...ದೇಶದ ಎಲ್ಲಾ ಭಾಗದ ಜನರ ಸಮ್ಮಿಲನ ..  ನಾನಂತು ಈ ರೀತಿಯ ಪ್ರಯಾಣ ತುಂಬಾ ಇಷ್ಟ ಪಡ್ತೇನೆ ..




ಊಟದ ನಂತರ ಮಧ್ಯಾಹ್ನದ ತಿರುಗಾಟ ಶುರು ..ಮೊದಲಿಗೆ ಭೇಟಿ ಕೊಟ್ಟದ್ದು .." ಮಂಗೇಶ ದೇವಸ್ಥಾನ " ..... ನಮ್ಮ ಕೊಂಕಣಿ ಯವರ ಕುಲದೇವಸ್ಥಾನಗಳೆಲ್ಲಾ ಇರುವುದು ಇದೆ ಗೋವಾದಲ್ಲಿ ...ಈ ಮಂಗೇಶ್ ದೇವಸ್ಥಾನ ನನ್ನ ತಾಯಿಯ ಮನೆ ಕುಲದೇವರು ...ಇದುವರೆಗೂ ನಾನೆಂದು ಬಂದಿರಲಿಲ್ಲ...ಈ ಸಮಯದಲ್ಲಿ ಇಲ್ಲಿಯ ಭೇಟಿ ತುಂಬಾ ಖುಷಿ ಕೊಡ್ತು .....





ಎಲ್ಲರೂ ಜಢಭರಿತ  ಊಟ ಮಾಡಿ ಬಸ್ಸಿನಲ್ಲಿ ಪಯಣಿಸುವಾಗ ಕಣ್ಣು ಎಳಿಯಲಿಕ್ಕೆ  ಪ್ರಾರಂಭ ಆಗಿತ್ತು.....ಸ್ವಲ್ಪ ಸಮಯ ಪ್ರಯಾಣದ ನಂತರ ನಮ್ಮ ಆ ದಿನದ ಕೊನೆಯ ಪ್ರವಾಸಿ  ಸ್ಥಳ ....ಹೆಸರಾಂತ  ಹಳೆಯ ಗೋವಾದಲ್ಲಿರುವ ಚರ್ಚ್  ...."ಬೆಸಿಲಿಕಾ ಆಪ್ಹ್ ಬೋಮ್ ಜೀಸಸ್ ..." ಸುಂದರ ಕಲೆಯಿಂದ ಕೂಡಿದ ಸುಮಾರು 400-450 ವರ್ಷ ಹಳೆಯ ..ಪೋರ್ಚುಗೀಸ್ ಕಾಲದ ಚರ್ಚ್ .... 




ಚರ್ಚ್ನ ಒಳಾಂಗಣದಲ್ಲಿ ಅತ್ಯುತ್ತಮ ಕಲಾವೈಭವ .....ನೋಡಲು ಎರಡು ಕಣ್ಣು ಸಾಲದು... ಕೆಳಗಿನ  ಚಿತ್ರ  ಅಲ್ಲಿಯ ಚಂದವನ್ನು ನಮಗೆ ಉಣಬಡಿಸುತ್ತದೆ ...... 








ಈ ಕೆಳಗಿನ ಚಿತ್ರದಲ್ಲಿ ಮಧ್ಯಾಹ್ನದ ಬಿಸಿಲಿಗೆ ಒಳಗೆಲ್ಲಾ ದೀಪ ಹಚ್ಚಿದೆ ಎಂಬ ಅನುಭವ ಕೊಡುತ್ತಿತ್ತು ....



ಅಲ್ಲಿಯ ಸುಂದರ ಕೆತ್ತನೆ, ಕಲೆ ,ಕುಸುರಿ ನೋಡಿ ಅನಿಸಿದ್ದಿಷ್ಟೇ ...ಧರ್ಮ ,ಭಾಷೆ, ದೇಶ ,ರಾಜ್ಯ ಯಾವುದಾದರೇನು....???? ಕಲೆಯನ್ನು ನೋಡಿ ಆಸ್ವಾದಿಸಿ "ವಾವ್ ......" ಎನ್ನುವ ಉದ್ಗಾರ ನಮ್ಮ ಬಾಯಲ್ಲಿ ಬಂದರೆ...ಅಷ್ಟೇ ಸಾಕು... ಅದಕ್ಕಿಂತ, ಈ  ಜಾತಿ,ಭಾಷೆ,.... ಇದಕ್ಕೆಲ್ಲಾ ಯಾವ ಬೆಲೆನು  ಇಲ್ಲ ಎಂದು .....!!!!!





ಈ ಚರ್ಚ್ನ ವಿಶೇಷ ಅಂದ್ರೆ ಇಲ್ಲಿ "ಫಾದರ್  ಫ್ರಾನ್ಸಿಸ್ ಝೆವಿಯರ್  " ಅವರ ಮೃತ ದೇಹವನ್ನು ಸುಮಾರು 400 ವರ್ಷಗಳಿಂದ ಹಾಗೆ  ಸಂರಕ್ಷಿಸಿ ಇಡಲಾಗಿದೆಯಂತೆ  ... ಅವರು ಮೃತ ಪಟ್ಟಾಗ ಹೇಗಿತ್ತೋ ಈಗಲೂ ಆ ದೇಹ ಅದೇ ಸ್ಥಿತಿಯಲ್ಲಿದೆಯಂತೆ ...  ಈ ಕೆಳಗಿನ ಚಿತ್ರ ಅವರ ದೇಹದ್ದು ....ಇದು ಅವರು ಪವಾಡ ಪುರುಷರಾದ್ದರಿಂದ ..ಎಂಬ ನಂಬಿಕೆ ಅವರ ಭಕ್ತರಲ್ಲಿ .....



ಈ ಕೆಳಗಿನ ಚಿತ್ರದ ಕೆಳಭಾಗದಲ್ಲಿ ಆರು ಚೌಕಗಳು ಕಾಣುತ್ತಲ್ಲವಾ ...ಅದು ಫಾದರ್ ಅವರ ಶವ ಪೆಟ್ಟಿಗೆ ...ಪ್ರತಿ ಹತ್ತು ವರ್ಷಕ್ಕೊಮ್ಮೆ ಅವರ ದೇಹವನ್ನು ಸಾರ್ವಜನಿಕರಿಗೆ ವೀಕ್ಷಿಸಲು ಎದುರಿಗಿರುವ ಇನ್ನೊಂದು ಚರ್ಚ್ "ಸೆ ಕೆಥೆಡ್ರಲ್ "ನಲ್ಲಿ ಒಂದು ತಿಂಗಳ ಮಟ್ಟಿಗೆ ಇಡುತ್ತಾರಂತೆ ...ಕಳೆದ ಬಾರಿ ಇಸವಿ 2004 ರಲ್ಲಿ ಈ ವೀಕ್ಷಣೆ ನಡೆದರೆ ,......ಇನ್ನು ಮುಂದಿನ ಎರಡು ವರ್ಷಗಳ ನಂತರ ಅಂದರೆ "ಸೆಪ್ಟೆಂಬರ್  2014 " ರಲ್ಲಿ ಪುನಃ ಈ ಸೌಭಾಗ್ಯ ಅವರ ಭಕ್ತರಿಗೆ ಲಭ್ಯ ..... ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಫಾದರ್ ಅವರ ಮೃತದೇಹದ ಎಡಕೈಯನ್ನು ... ರೋಮ್ ನ ಚರ್ಚ್ ಗೆ ಕಳಿಸಿಕೊಟ್ಟಿದ್ದಾರಂತೆ .(..ರೋಮ್ ಅವರ ಮೂಲ ಸ್ಥಾನವಾದ್ದರಿಂದ )





ನನ್ನ ಮಗ ಅಂತು ಗೈಡ್ ಹೇಳಿದ ಫಾದರ್ ಕಥೆ ಕೇಳಿ ತುಂಬಾ "ಇಂಪ್ರೆಸ್ಸ್ "...."ಅಮ್ಮಾ.....ನಾವು 2014 ನೆ ಇಸವಿಯಲ್ಲಿ ಪುನಃ ಗೋವಾಕ್ಕೆ ಬಂದು ಫಾದರ್ ದೇಹ ನೋಡೋಣ ...." ಅಂತ ಹೇಳಿಬಿಟ್ಟಿದ್ದಾನೆ .... :))

ಈ ಕೆಳಗಿನ ಚಿತ್ರ ಚರ್ಚ್ ""ಸೆ ಕೆಥೆಡ್ರಲ್ ನದ್ದು "..... 
ಈ ಚರ್ಚ್ನ ಒಳಗೆ ಫಾದರ್ ದೇಹ ಇಡುತ್ತಾರಂತೆ ............ ಎರಡು ವರ್ಷಗಳ ನಂತರ ..........


ಅದರ ಅಂಗಳದಲ್ಲಿ ಕೂತ ನಮ್ಮ ಚಿತ್ರ ಕ್ಲಿಕ್ಕಿಸಿದ್ದು ನನ್ನ ಮಗ " ಅಶ್ವಿನ್  "

ಅಂತು ಇಷ್ಟೆಲ್ಲಾ ಸ್ಥಳಗಳನ್ನು ಮುಗಿಸಿ ಪುನಃ ನಾವು ಮಾಪುಸಾ ತಲುಪಿದಾಗ ಸಮಯ ಸಂಜೆ ಆರು ಘಂಟೆ ....ಅಲ್ಲಿಂದ ನಮಗೆ ಅಂಜುನಾದ ನಮ್ಮ ರೆಸಾರ್ಟ್ಗೆ ಪುನಃ ಬಸ್ಸಿನಲ್ಲಿ ಹೋಗಬೇಕಿತ್ತು ...ಬಸ್ಸಂತು ಗರ್ಭಿಣಿ ಹೆಂಗಸಿನಂತೆ ತುಂಬಿ ತುಳುಕುತ್ತಿತ್ತು.  ಇಲ್ಲಿಯ ಟ್ಯಾಕ್ಸಿಗಳು ಭಯಂಕರ ದುಬಾರಿ ...ಜೊತೆಗೆ ಆಟೋಗಳು ಸಹ....ನಾವು ಬೇರೆ ಊರಿನ ಪ್ರಯಾಣಿಕರು ಅಂತ ಗೊತ್ತಾದರೆ ಬಾಯಿಗೆ ಬಂದ ಹಣ ಹೇಳೋವ್ರು......

ರಾತ್ರಿ ರೂಮ್ಗೆ ಹೋಗಿ ಸ್ವಲ್ಪ ವಿಶ್ರಾಂತಿ ತೆಗೆದು ಊಟಕ್ಕೆ  ಹತ್ತಿರದ ಇನ್ನೊಂದು ಹೋಟೆಲ್ಗೆ ಹೋದರೆ, ಅಲ್ಲಿ ಮುಕ್ಕಾಲು ಭಾಗ ವಿದೇಶಿಯರೇ ತುಂಬಿದ್ದರು...ನಮ್ಮ ರೆಸಾರ್ಟ್ ಹತ್ತಿರ ಕೇವಲ ಸಸ್ಯಾಹಾರಿ ಹೋಟೆಲ್ ಇರಲಿಲ್ಲ ... ಬೇರೆ ವಿಧಿಯಿಲ್ಲದೇ "ಯಶ್ " ಹೋಟೆಲ್ಗೆ ಹೋಗಬೇಕಾದ ಪರಿಸ್ಥಿತಿ ...ಆಗಲೇ ಸಿಗರೇಟ್ , ವೈನ್ , ಬಿಯರ್ ಗಳ ಘಾಟಿನಿಂದ  ಇಡಿ ವಾತಾವರಣವೇ ಗಬ್ಬೆಬ್ಬಿತ್ತು ....ನಾವು ಆರ್ಡರ್ ಮಾಡಿದ ನಾನ್ , ಪನೀರ್ ಕಡಾಯಿ  ಬಂದ ಮೇಲೆ ಬೇಗ ಬೇಗ ತಿಂದು ....ಹೊರ ಬಂದಮೇಲೆ .... ಸ್ವಚ್ಛ ಗಾಳಿಗೆ ಮನಸ್ಸು ಅಯ್ಯಬ್ಬಾ ಅನ್ನಿಸ್ತು..........

ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದು ಕೊಂಡಾಗ ಬೆಳಗ್ಗಿನ ಆಯಾಸವೆಲ್ಲಾ ಮಾಯ...... ನನ್ನ ಮಗನಿಗಂತೂ ಅವತ್ತಿಡಿ ಫಾದರ್ ಅವರದ್ದೇ  ಧ್ಯಾನ ...ಅವನ ಕುತೂಹಲದ ಪ್ರಶ್ನೆಗೆ ಉತ್ತರ ಹೇಳಿ ...ಹೇಳಿ.... ನಾನಂತೂ ಅರ್ಧ ಜೀವ ಆಗಿದ್ದೆ ....ಇನ್ನು ಜಾಸ್ತಿ ಮಾತಾಡಿದರೆ ಕನಸಿನಲ್ಲಿ ಅವರು ಬರ್ತಾರೆ ಅಂದ ಮೇಲೆ ಸುಮ್ಮನೆ ನಿದ್ದೆ ಮಾಡಿದ....... ಪುನಃ ಮರುದಿನದ ಪ್ರಯಾಣಕ್ಕೆ ಹೊರಡಲು ಅಲಾರಂ ಇಟ್ಟು ಮಲಗಿದವರಿಗೆ ಗಾಢ ನಿದ್ರೆ ...........

ಆ ಕಥೆ ಮುಂದಿನ ಸಂಚಿಕೆಯಲ್ಲಿ ......... ಖಂಡಿತಾ ಓದಿ .....

ನಿಮ್ಮ ಪ್ರೀತಿಯ

ಸುದೀಪ 





16 comments:

  1. ಚಿತ್ರಸಹಿತ ಪ್ರವಾಸಕಥನ ಚೆನ್ನಾಗಿದೆ. ಆಸ್ವಾದಿಸಿದೆ!

    ReplyDelete
    Replies
    1. ಧನ್ಯವಾದಗಳು ..... ಪುಷ್ಪರಾಜ್.....

      Delete
  2. WELL PLANNED, NICE EXPLANATION

    ReplyDelete
  3. ಅತ್ಯುತ್ತಮ ಪ್ರವಾಸಿ ಕಥನದ ಆರಂಭ. ಉತ್ತಮ ಚಿತ್ರಗಳ ಸರಮಾಲೆ. ನೀವು ಒಳ್ಳೆಯ ಛಾಯಾಗ್ರಾಹಕರು ಎಂಬುದು ನಮಗೂ ಮನವರಿಕೆಯಾಗುತ್ತಿದೆ.

    ನನಗೆ ಗೋವಾ ಎಂದರೆ ಏಕ್ ದುಜೇ ಕೆ ಲಿಯೆ ಮತ್ತು ರಂಗೀಲಾ ಚಿತ್ರದ ಹಾಡು ನೆನಪಾಗುತ್ತದೆ.

    ಮುಂದುವರೆಸಿರಿ...

    ReplyDelete
    Replies
    1. ಹ...ಹ...ಬದರಿಜಿ ...ನನ್ನ ಹತ್ತಿರ ಇರೋದು ಒಂದು ಸಣ್ಣ ಕ್ಯಾಮರಾ...ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು... :))

      Delete
  4. ಮತ್ತೇರಿಸುವ ಗೋವಾದ ಕಥಾನಕ ಚುರುಕಾಗಿದೆ. ನಿಮ್ಮ ಬರವಣಿಗೆ ಲಹರಿ ಇಷ್ಟವಾಗುತ್ತದೆ. ಸುಂದರ ಚಿತ್ರಗಳು, ಸೊಗಸಾದ ನಿರೂಪಣೆ, ಹಾಸ್ಯ, ಲಾಸ್ಯ, ತುಂಟತನ ಎಲ್ಲವು ಮೆಲೈಸಿರುವ ಲೇಖನ ಮಗುದೊಮ್ಮೆ ಓದಲು ಸ್ಪೂರ್ತಿನೀಡುತ್ತದೆ. ಅಭಿನಂದನೆಗಳು ಸಹೋದರಿ

    ReplyDelete
  5. ತುಂಬಾ ಧನ್ಯವಾದಗಳು....ಶ್ರೀಕಾಂತ್ .... :))

    ReplyDelete
  6. ಮೇಡಮ್...
    ನಾನು ಗೋವಾ ಅಂದರೆ ಬರಿಯ ಮೋಜು ಮಸ್ತಿ,ಕುಡಿತ ಇವುಗಳ ಬಗ್ಗೆಯೇ ಹೆಚ್ಚು ಕೇಳಿದ್ದು...
    ಇಲ್ಲಿ ಇನ್ನೊಂದು ಮಗ್ಗುಲನ್ನು ಪರಿಚಯಿಸಿದ್ದೀರಿ...ಅಂದದ ಚಿತ್ರಗಳು..ಚಂದದ ನಿರೂಪಣೆ...
    ಇಷ್ಟವಾಯ್ತು..ಬರೆಯುತ್ತಿರಿ.
    ನಮಸ್ತೆ...

    ReplyDelete
    Replies
    1. ಓದಿ ಇಷ್ಟಪಟ್ಟದಕ್ಕೆ ಧನ್ಯವಾದಗಳು ಚಿನ್ಮಯ್... :)

      Delete
  7. ಒಳ್ಳೆಯ ಪ್ರವಾಸ ಕಥನ. ಮುಂದೆ?

    ReplyDelete
    Replies
    1. ಎರಡನೇ ಕಂತಿನಲ್ಲಿ... :) ಆದಷ್ಟು ಬೇಗ.... :)

      Delete
  8. ಓ ಗೋವ ಪ್ರವಾಸದ ಬಗ್ಗೆ ಒಂದು ಲೇಖನ , ನಿಮ್ಮ ಬರವಣಿಗೆ ಶೈಲಿ ಚೆನ್ನಾಗಿದೆ, ಪೂರಕವಾಗಿ ಒಳ್ಳೆಯ ಚಿತ್ರಗಳು ಇಲ್ಲಿವೆ. ನಾನೂ ಬಹಳಷ್ಟು ಸಾರಿ ಗೋವಾ ನೋಡಿದ್ದರೂ ನಿಮ್ಮ ಲೇಖನದಲ್ಲಿ ಎಲ್ಲಾ ಹೊಸದಾಗಿ ಕಾಣುತ್ತಿದೆ. ಮತ್ತಷ್ಟು ಬರಲಿ .
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ನನಗು ಗೋವಾ ಹೊಸದೇ... ತುಂಬಾ ಧನ್ಯವಾದಗಳು ಸರ್, ..... :)

      Delete
  9. nimma pravasa kathanavannu odi nanage thumba kushiyayithu nanu saha kandita goa pravasavannu kaigollale beku. nimma barahada shailiyu thumba chennaigide. nimma pravasad anubhavagalannu najothege hanchikondidakke bahala dhanyavadagalu

    All the best

    ReplyDelete