ರಕ್ಷಾ ಒಂಭತ್ತನೇ ತರಗತಿ ವಿಧ್ಯಾರ್ಥಿನಿ .... ಹದಿನಾಲ್ಕು ವರ್ಷದ ಹುಡುಗಿ ....ಆಗಷ್ಟೇ ಮೊಗ್ಗರಳಿ ಹೂವಾದ ವಯಸ್ಸು...ಆ ಸೌoದರ್ಯ ಅವಳ ಮೈ ಮನವನ್ನು ತುಂಬಿ ಇನ್ನೂ ಆಕರ್ಷಿಸುತ್ತಿತ್ತು...ಒಮ್ಮೆ ನೋಡಿದರೆ ತಿರುಗಿ ಇನ್ನೊಮ್ಮೆ ನೋಡಬೇಕು ಎನ್ನುವ ರೂಪ...ಮನೆ ಹತ್ತಿರವೇ ಇರುವ ಹೈಸ್ಕೂಲ್ ....ನಡೆದುಕೊಂಡು ಹೋದರೆ ಸುಮಾರು ಹತ್ತು ನಿಮಿಷದ ದಾರಿ.... ಮನೆ ಹತ್ತಿರದ ಇಬ್ಬರು ಸ್ನೇಹಿತೆಯರ ಜೊತೆ ದಿನವೂ ಅವಳು ಶಾಲೆಗೆ ಹೋಗಿಬರುತ್ತಿದ್ದಳು....
ಶಾಲೆಗೆ ಹೋಗುವ ದಾರಿಯಲ್ಲಿ ಅದೊಂದು ಟ್ಯಾಕ್ಸಿ ಸ್ಟ್ಯಾಂಡ್ .... ಅಲ್ಲಿಯ ಚಾಲಕರು ಹೆಚ್ಚು ಕಮ್ಮಿ ಪರಿಚಿತರೇ ...ದಿನವೂ ನೋಡುವ ಮುಖಗಳೇ ....ಆಗ ಮಳೆ ಕಡಿಮೆಯಾಗುತ್ತಿದ್ದ ಸಮಯ...ದಿನಕ್ಕೊಮ್ಮೆ ಎಲ್ಲೋ ಸಣ್ಣ ತುಂತುರು ಮಳೆ... ಆ ದಿನ ಸಹಾ ಬೆಳಿಗ್ಗೆ 9 ಗಂಟೆ ಸಮಯ ...ಮೂವರು ಸ್ನೇಹಿತೆಯರು ಮಾತಾಡುತ್ತಾ ಶಾಲೆಯತ್ತ ನಡೆಯುತಿದ್ದರು....ಸಣ್ಣದಾಗಿ ಮಳೆ ಪ್ರಾರಂಭವಾಯ್ತು ...ತಮ್ಮ ಛತ್ರಿ ಬಿಡಿಸಿ ಮುಂದೆ ಸಾಗುವಾಗ ರಕ್ಷಾಗೆ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಯಾವುದೋ ಹೊಸ ಮುಖ ನೋಡಿದ ಹಾಗೆ....ಪುನಃ ತಿರುಗಿ ನೋಡಿದರೆ ತಪ್ಪಾಗುತ್ತದೆ ಎಂದು ಸುಮ್ಮನೆ ಶಾಲೆಯತ್ತ ಹೆಜ್ಜೆ ಹಾಕುತ್ತಾಳೆ... ಶಾಲೆ ಮುಗಿಸಿ ಸಂಜೆ ಮನೆಗೆ ಮರಳುವಾಗಲು ಕುತೂಹಲ....ಆದರೆ ಸ್ಟ್ಯಾಂಡ್ ನಲ್ಲಿ ಆ ಹೊಸ ಮುಖದ ಸುಳಿವಿಲ್ಲ....
ಮರುದಿನ ಶಾಲೆಗೆ ಹೋಗುವಾಗ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಹೊಸದೊಂದು ಹೊಳೆಯುವ ಗಾಡಿಯನ್ನು ದೂರದಿಂದಲೇ ರಕ್ಷಾ ಗುರುತಿಸುತ್ತಾಳೆ...ಅದರ ಹತ್ತಿರ ಬರುವಾಗ, ಡ್ರೈವರ್ ಸೀಟಿನಲ್ಲಿ ಕೂತ ವ್ಯಕ್ತಿ, ಹತ್ತಿರ ಇರುವ ಸೈಡ್ ಮಿರರ್ನಿಂದ ಇವಳನ್ನೇ ನೋಡುತ್ತಿದ್ದಾನೆ...ಅವಳ ಕಣ್ಣು ಅದೇ ಸಮಯಕ್ಕೆ ಕನ್ನಡಿ ನೋಡಿ ತನ್ನನ್ನು ಗಮನಿಸುವ ಕಣ್ಣುಗಳನ್ನು ಕಂಡು ಕೂಡಲೇ ತಲೆತಗ್ಗಿಸಿ ಮುಂದೆ ಸಾಗುತ್ತಾಳೆ ...ಇಬ್ಬರ ದೃಷ್ಟಿ ಒಂದು ಕ್ಷಣಕ್ಕೆ ಅಲ್ಲಿ ಒಂದಾಗಿಬಿಟ್ಟಿತ್ತು ...ಆದರೆ ಒಂದೇ ಕ್ಷಣ ನೋಡಿದ ಆ ಕನ್ನಡಿಯಲ್ಲಿನ ಮುಖ ರಕ್ಷಾಳ ಮನಸ್ಸಿನಲ್ಲಿ ಅಚ್ಚಾಗಿರುತ್ತದೆ.....ಸುಮಾರು 23-24 ವರ್ಷದ ಹುಡುಗ ಇರಬಹುದು ....ಕುಡಿ ಮೀಸೆ, ಸಿನೆಮಾ ನಟನಂತೆ ಕಾಣುವ ಚಂದದ ಮುಖ, ಕಪ್ಪು ಕಣ್ಣುಗಳು.....ಏನೋ ಆಕರ್ಷಣೆ .....
ಚಿತ್ರದುರ್ಗದಲ್ಲಿ ಮದುವೆ ಮುಗಿಸಿ ಬೆಂಗಳೂರಿಗೆ ಹೊರಟಿದ್ದ ಟ್ಯಾಕ್ಸಿ, ಹಿಂದಿನಿಂದ ಢಿಕ್ಕಿ ಹೊಡೆದ ಟ್ರಕ್ ನ ರಭಸಕ್ಕೆ ಪಕ್ಕದ ಗದ್ದೆಯಲ್ಲಿ ಉರುಳಿ ಗಾಡಿಯ ನಿಯಂತ್ರಣ ಸಿಗದ ಚಾಲಕ ಸ್ಥಳದಲ್ಲೇ ಜವರಾಯನ ತೆಕ್ಕೆಗೆ...ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಉಳಿದ ನಾಲ್ವರ ಸ್ಥಿತಿ ಗಂಭೀರ....
ಶಾಲೆಗೆ ಹೋದರೂ ಆ ಮುಖವೇ ಕಣ್ಣ ಮುಂದೆ...ಪಾಠದ ಕಡೆ ಗಮನವೇ ಇಲ್ಲ...ಯಾವಾಗ ಸಂಜೆ ಆಗುತ್ತದೋ ..ಪುನಃ ಅವನನ್ನು ಯಾವಾಗ ನೋಡುತ್ತೇನೋ ಎಂಬ ಕಾತುರ....ಆ ವಯಸ್ಸೆ ಹಾಗೆ ಏನೋ ಸುಂದರವಾಗಿ ಕಂಡದ್ದು ಪುನಃ ಪುನಃ ನೋಡಬೇಕೆಂಬ ಆತುರ , ಕಾತುರ...ಸಂಜೆ ಸಮಯ ಪುನಃ ಅದೇ ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿರುತ್ತದೆ...ಅವನ ನೆನಪಲ್ಲೇ ಮನೆಯಲ್ಲಿ ಸಮಯ ಕಳಿತಾಳೆ .....
ಹೀಗೆ ದಿನಗಳು ಸಾಗುತ್ತಿರುತ್ತದೆ...ಒಂದು ದಿನ ಒಬ್ಬ ಡ್ರೈವರ್ ಗಟ್ಟಿಯಾಗಿ.."ಲೋ...ಸೂರಜ್ ...ಇಲ್ಲಿ ಬಾ..." ಅಂತ ಕರೆದಾಗ ಆ ಹುಡುಗ ,...."ಹಾ...ಬಂದೆ" ಅಂತಾ ಓಡ್ತಾನೆ ..ಆಗ ಇದನ್ನು ಕೇಳಿಸಿಕೊಂಡ ರಕ್ಷಾ ...ಎಷ್ಟು ಚಂದದ ಹೆಸರು ಅಂತ ಮನಸ್ಸಿನಲ್ಲೇ ಅಂದುಕೊತಾಳೆ... ತನ್ನ ಎಲ್ಲ ಶಾಲೆಯ ಪುಸ್ತಕದ ಕೊನೆಯ ಪುಟದಲ್ಲೂ ಯಾರಿಗೂ ತಿಳಿಯದಂತೆ "ಸೂರಜ್ ..ಸೂರಜ್ ..."ಎನ್ನುವ ಅಕ್ಷರಗಳು ಗೀಚುತ್ತಾಳೆ .... ಇಷ್ಟಾದರೂ ಅವಳ ಸ್ನೇಹಿತೆಯರಿಗೆ ಇದರ ಸುಳಿವೇ ಇರುವುದಿಲ್ಲ....
ದಿನಾ ಬೆಳಿಗ್ಗೆ, ಸಂಜೆ ಶಾಲೆಯ ಹೋಗುವ ಬರುವ ಸಮಯದಲ್ಲಿ ಹುಡುಗನ ದೃಷ್ಟಿ ಮತ್ತು ರಕ್ಷಾಳ ನೋಟ ಆ ಸೈಡ್ ಮಿರರ್ ಮೇಲೆ...ಹತ್ತಿರ ಬಂದ ಕೂಡಲೇ ಇಬ್ಬರೂ ತಮ್ಮ ನೋಟ ಬದಲಿಸುವುದು...ಹೀಗೆ ಅದೆಷ್ಟು ದಿನಗಳು ಕಳೆದವೋ ..ಇಬ್ಬರಿಗೂ ತಿಳಿಯದು...ಬರಬರುತ್ತ ಸಣ್ಣ ಮುಗುಳ್ನಗು ಕನ್ನಡಿಯಲ್ಲಿ ವಿನಿಮಯ ಆಗಲಿಕ್ಕೆ ಪ್ರಾರಂಭ ಆಗುತ್ತೆ..... ಆ ಸಣ್ಣ ನಗುವಿನಲ್ಲಿ ಅದೇನೋ ಗೆದ್ದ ಆನಂದ ಇಬ್ಬರಿಗೂ....ಅವನು ಎಲ್ಲಾದರು ಟ್ರಿಪ್ಗೆ ಹೋದರೆ ರಕ್ಷಾಳ ಮನಸ್ಸು ಖಾಲಿ ಖಾಲಿ..ಇನ್ನು ಯಾವಾಗ ಅವನನ್ನು ನೋಡ್ತಿನೋ ಎಂಬ ಆತಂಕ...
ಹಾಗೆಯೇ ಒಮ್ಮೆ 4 ದಿನ ಕಳೆದಿತ್ತು .ಮದುವೆ ಸೀಸನ್ ಬೇರೆ....ಹುಡುಗನ ಸುಳಿವೇ ಇಲ್ಲ ...ಅವನ ಯೋಚನೆಯಲ್ಲಿ ರಕ್ಷಾ ದಿನ ದೂಡುತ್ತಿರುತ್ತಾಳೆ....ಅವತ್ತು ಬೆಳಿಗ್ಗೆ ತಾಯಿ ಕೊಟ್ಟ ತಿಂಡಿ ತಿನ್ನುತ್ತ ಅಲ್ಲಿಯೇ ಟೀಪಾಯಿ ಮೇಲೆ ಇದ್ದ ಪೇಪರ್ ನೋಡಿ ಸೂಕ್ಷ್ಮ ಮನಸ್ಸಿನ ರಕ್ಷಾ ಹೃದಯಾಘಾತದಿಂದ ಕುಸಿದು ಬೀಳ್ತಾಳೆ ....
ಕಾರಣ...... ಪತ್ರಿಕೆಯ ಮುಖಪುಟದಲ್ಲಿ ಕಂಡ ಸುದ್ಧಿ .....
ಚಿತ್ರದುರ್ಗ: ಭೀಕರ ಅಪಘಾತ
ಸೂರಜ್ ಎಂಬ 24 ವರ್ಷದ ಚಾಲಕ ಸ್ಥಳದಲ್ಲೇ ಸಾವು.....
ಹಮ್.....ಆಕರ್ಷಣೆಯ ಹಾದಿಯಲ್ಲಿ.........
ReplyDeleteಪ್ರಥಮ ಚುಂಬನಂ ದಂತಭಗ್ನಂ....
ಕಥೆ ಓಘದಲ್ಲಿಯೂ ದಿಡೀರ್ ಅಪಘಾತ...ಒಂಥರಾ ಚೆನಾಗಿದೆ...ಪುಟ್ಟ ಕಥೆ....ಇಷ್ಟವಾಯ್ತು...
(ಸುಮ್ನೆ: ಹಾಂ ಅಲ್ಲಿ ಹೃದಯಾಘಾತ ಪದದ ಬಳಕೆ ಎಷ್ಟು ಸೂಕ್ತವೋ ಗೊತ್ತಿಲ್ಲ...ಅವಳ ಮನಸ್ಸಿನ ತುಮುಲಗಳನ್ನು ಇನ್ನಷ್ಟು ಹೇಳಿ,ತುಂಬಾ ತುಂಬಾ ತುಂಬಾ ಹತ್ತಿರವಾಗಿದ್ದ ಎಂದು ತೋರಿಸಿ ಹೃದಯಾಘಾತ ಮಾಡಿದ್ದರೆ ಒಳ್ಳೆಯದಿತ್ತೇನೊ....ನನ್ನ ಅರ್ಜಂಟಿನ ಕಣ್ಣಿಗೆ ಅಂಥಹದ್ದೇನೋ ಕಾಣಲಿಲ್ಲ...ಹಂಗಾಗಿ ಆಘಾತವಷ್ಟೇ ಇದ್ದರೆ ಹೇಗೆ???????ಗೊತ್ತಿಲ್ಲಪ್ಪಾ..ಹೇಳಿ ಕೇಳಿ ಹೃದಯಾಘಾತ ಆಗುವುದಲ್ಲ ಬಿಡಿ..ಹಾ ಹಾ )
ಬರೆಯುತ್ತಿರಿ...ಚೆನಾಗಿತ್ತು..
ನಮಸ್ತೆ...
ಧನ್ಯವಾದಗಳು...ಚಿನ್ಮಯ್....
Deleteಬೇಸರದ ಕತೆ . ನಿರೂಪಣೆ ಚೆನ್ನಾಗಿದೆ.
ReplyDeleteThank you...Ishwar.. :)
Deleteಕಥಾ ಹಂದರ ಬಿಗುವಾಗಿದೆ, ಬಳಕೆಯ ಶೈಲಿಯಲ್ಲೂ ಓದಿಸಿಕೊಂಡು ಹೋಗುವ ಆಕರ್ಷಣೆ ಇದೆ.
ReplyDeleteಪಾಪ ಹುಡುಗ ಮತ್ತು ಹುಡುಗಿಗೆ ಹಾಗಾಗಬಾರದಿತ್ತು ಎನ್ನುವ ಉದ್ಘಾರ ಓದುಗನಿಂದ ಹೊರಡಿಸುವ ತಾಕತ್ತು ಈ ಕಥೆಗಿದೆ.
ಧನ್ಯವಾದಗಳು....ಬದರಿಜಿ... :)
Deleteಹರೆಯದ ತುಮುಲಗಳನ್ನು ಈ ಚಿಕ್ಕ ಕಥೆಯಲ್ಲಿ ಸ್ಫುಟವಾಗಿ ಬಿಂಬಿಸಿದ್ದೀರ. ಅಂತ್ಯ ಮತ್ತೂ ಸ್ವಲ್ಪ ಚೆನ್ನಾಗಿ ಬರಬಹುದಿತ್ತು. ಉತ್ತಮ ನಿರೂಪಣೆ ಮತ್ತು ವಸ್ತು. ಶುಭವಾಗಲಿ :)
ReplyDeleteಧನ್ಯವಾದಗಳು....ಪರೇಶ್.... :)
Deleteಹರೆಯದ ಮೊಗ್ಗು ಅರಳುವಾಗ ಪ್ರಪಂಚವೆಲ್ಲ ಸುಂದರವೆನಿಸುತ್ತದೆ..ಆ ಕಾಲದಲ್ಲಿ ಪ್ರಪಂಚದ ಪ್ರತಿಯೊಂದು ಸುಂದರವಾಗಿರುತ್ತದೆ.ಸತ್ಯಂ, ಶಿವಂ ಸುಂದರಂ ಎನ್ನುವ ತತ್ವ ಮನದಲ್ಲಿ ಮನೆಮಾಡಿರುತ್ತದೆ..ಈ ತುಡಿತಗಳನ್ನ ಸುಂದರವಾಗಿ ಪದಗಳಲ್ಲಿ ತಂದಿದ್ದೀರ..ಅಂತ್ಯ ಮನದಲ್ಲಿ ಇಟ್ಟುಕೊಳ್ಳಲು ಕಷ್ಟವಾದರೂ..ಕನ್ನಡಿಯ ಗಂಟು ಮರೀಚಿಕೆಯ ನಂಟೇ ಎಂದಿಗೂ!! ಸೊಗಸಾಗಿದೆ...
ReplyDeleteಧನ್ಯವಾದಗಳು ಶ್ರೀಕಾಂತ್...ತಮ್ಮ ಪ್ರತಿಕ್ರಿಯೆಗೆ .... :)
Delete