Sunday 4 August 2013

ಮನಸ್ಸು.....


ಅವಳು ವಾಚ್ ನೋಡ್ಕೊತಾಳೆ ಆಗ್ಲೇ ಮಧ್ಯಾಹ್ನ ಹನ್ನೆರಡು ಮುಕ್ಕಾಲು ತೋರಿಸ್ತಿದೆ.   ಓ....  ಇನ್ನು ಕಾಲು ಘಂಟೆ ಕಳೆದರೆ ಗಂಡ ಬೇರೆ ಆಫೀಸಿಂದ ಮನೆಗೆ  ಊಟಕ್ಕೆ ಬರ್ತಾರೆ. ಮನೆ ಬೀಗದ ಕೈ ಬೇರೆ ನನ್ನತ್ರ ಇದೆ. ಇನ್ನೂ ಒಂದು ಅಂಗಡಿಗೆ ಹೋಗಿ ಒಂದೆರಡು ಸಾಮಾನು ಬೇರೆ ತೆಗೋಬೇಕು.  ಛೆ...  ಬೇಗ ಮನೆಯಿಂದ ಹೊರಡಬೇಕಿತ್ತು.  ನನ್ನ ಕೆಲಸ ಒಂದು ಆಗೋದಂತ ಇಲ್ಲ.....  ಮನಸ್ಸಲ್ಲಿ ತನ್ನಷ್ಟಕ್ಕೆ ತಾನೇ ಎಣಿಸ್ತಾ ಬಿರಬಿರನೆ ಪೇಟೆನಲ್ಲಿ ಅವಳು ಹೆಜ್ಜೆ ಹಾಕ್ತಾ ಇದ್ದಾಳೆ.  ಅಷ್ಟರಲ್ಲಿ ಎದುರಿಗೆ ಬೇಕರಿ ಅಂಗಡಿ ಸಿಗುತ್ತೆ.  ಒಹ್...ಇಲ್ಲಿ ಬೇರೆ ತುಂಬಾ ಜನ ಇದ್ದಾರೆ....  ಛೆ....  ಅಂದ್ಕೊತಾ ಅಂಗಡಿ ಒಳಗೆ ಹೋಗಿ ಒಳಗಿದ್ದ ಹುಡುಗನ ಹತ್ತಿರ ತನಗೆ ಬೇಕಾದ ಸಾಮಾನೆಲ್ಲಾ ಆರ್ಡರ್ ಮಾಡ್ತಾಳೆ.  ಅವನು ಅಂತು ಇಂತು ಐದು ನಿಮಿಷದಲ್ಲಿ ಎಲ್ಲಾ ಪ್ಯಾಕ್ ಮಾಡಿ ಕೈಗೆ ಬಿಲ್ ಕೊಡ್ತಾನೆ.  ಆ ಬಿಲ್ ಕ್ಯಾಷಿಯರ್ ಹತ್ರ ಕೊಟ್ಟು ನೂರರ ಎರಡು ನೋಟ್ ಕೊಡ್ತಾಳೆ. ಅವನು ಮೂರು ಹತ್ತು ರೂಪಾಯಿ ನೋಟು ಜೊತೆಗೆ ಐದು  ರೂಪಾಯಿ ನಾಣ್ಯ ವಾಪಾಸ್ ಕೊಡ್ತಾನೆ. ಇನ್ನೇನು  ಅದನ್ನು ಅವನ ಕೈಯಿಂದ ತೆಗೋಬೇಕು ಅನ್ನೋ ಅಷ್ಟರಲ್ಲಿ ಅವಳ  ಕೈ ತಪ್ಪಿ ನಾಣ್ಯ ಕೆಳಗೆ ಬಿದ್ದು ಬಿಡತ್ತೆ.  ಸಾರಿ ಮೇಡಂ....  ಅಂತ ಅವನು ಕೌಂಟರ್ ಒಳಗಿಂದ ಹೇಳ್ತಾ ಇದ್ರೆ,  ಇಟ್ಸ್ ಓಕೆ... ನಾನೇ ಬೀಳ್ಸಿದ್ದು.... ನೀವು ಸಾರಿ ಕೇಳೋ ಅಗತ್ಯ ಇಲ್ಲ ....   ಅಂತ ಅವಳು ಕೆಳಗೆ ಬಿದ್ದ ನಾಣ್ಯ ಎತ್ಕೊತಾಳೆ. ಆ ಹುಡುಗ ಕೊಟ್ಟಿದ್ದ ಪ್ಯಾಕೆಟ್ ಇನ್ನೇನು ತನ್ನ ಹತ್ರ ಇರೋ ಬ್ಯಾಗ್ನಲ್ಲಿ ಹಾಕ್ಬೇಕು ಅಂತ ಅವಸರದಲ್ಲಿ ತುರುಕ್ತಾ ಇರ್ಬೇಕಾದ್ರೆ  ಕೈಯಲ್ಲಿ ಇನ್ನು ಹಾಗೆ ಇದ್ದ ಐದು  ರೂಪಾಯಿ ನಾಣ್ಯ ಪುನಃ ಕೈ ಜಾರಿ 'ಟ ಣ್  ಟ ಣ್ ....' ಅಂತ ಶಬ್ದ ಮಾಡ್ತಾ ಒಂದಷ್ಟು ದೂರ ಉರಳ್ತಾ  ಬಿದ್ದು ಹೋಗತ್ತೆ . ಅಕ್ಕ ಪಕ್ಕ ಇರೋವ್ರೆಲ್ಲ ಆ ಶಬ್ದಕ್ಕೆ ಒಮ್ಮೆ ಅವಳನ್ನೇ ನೋಡ್ತಾರೆ.   ಛೆ....  ಅವಸರ ಅಂತ ಅಂದ್ಕೊಂಡು  ಬೇಗ ಬೇಗ ಮನೆಗೆ ಹೋಗೋಣ ಅಂದ್ರೆ ಇದೊಳ್ಳೆ ಕೈಯಿಗೆ ಬಲ ಇಲ್ದೇ ಇರೋವ್ರ ತರಹ ಈ ಚಿಲ್ಲರೆ ಯಾಕೋ ಬಿದ್ದು ಬಿದ್ದು ಹೋಗ್ತಾ ಇದೆ.....  ಅಂತ ತನಗೆ ತಾನೇ ಬೈಕೋತಾಳೆ.




ಪುನಃ ಬಿದ್ದ ಆ ನಾಣ್ಯ  ಎತ್ಕೋಬೇಕಾದ್ರೆ ಅಲ್ಲೇ ನಾಲ್ಕು  ಹೆಜ್ಜೆ ಮುಂದೆ ಅಂಗಡಿ ಒಳಗೆ ಹಣ್ಣು ಹಣ್ಣು ಮುದುಕಿ ಒಬ್ಬಳು ಬಗ್ಗಿ ಕೂತ್ಕೊಂಡು  ಅದೇನೋ ಮಾಡ್ತಾ ಇದ್ಲು. ಅವಳಿಗೆ ಆ ಅಜ್ಜಿ ಬೆನ್ನು ಮಾತ್ರ ಕಾಣ್ತಾ ಇತ್ತು. ಪಕ್ಕದಲ್ಲಿ ಆಕೆಯ ಹಳೆ ಬಟ್ಟೆ ಗಂಟು, ಮತ್ತೊಂದಿಷ್ಟು ಹಳೆ ಸಾಮಾನುಗಳ ಚೀಲ. ಅರೆ ಈಕೆ ಈ ಅಂಗಡೀಲಿ  ಕೂತು ಏನು ಮಾಡ್ತಾ ಇದ್ದಾಳೆ... ? ಅನ್ನೋ ಕುತೂಹಲದಿಂದ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ,  ಆ ಮುದುಕಿ ತನಗೆ ಭಿಕ್ಷೆಯಲ್ಲಿ ಸಿಕ್ಕ ಚಿಲ್ಲರೆ ನಾಣ್ಯಗಳನ್ನೆಲ್ಲ ಲೆಕ್ಕಮಾಡಿ ಐದು ರೂಪಾಯಿಗೊ ಹತ್ತು ರೂಪಾಯಿಗೂ ಅವನೆಲ್ಲಾ  ಗುಂಪು ಮಾಡಿ  ಇಡ್ತಾ ಇದ್ಲು  . ಆ ಕೆಲಸವನ್ನು ಅದೆಷ್ಟು ಕಷ್ಟ ಪಟ್ಟು ಮಾಡ್ತಿದ್ಲು ಅಂದ್ರೆ ಒಂದೊಂದು ನಾಣ್ಯವನ್ನು ಆ ಮಂಜುಗಣ್ಣಿನಿಂದ ತುಂಬಾ ಹತ್ತಿರದಿಂದ ನೋಡಿ ನೋಡಿ  ಲೆಕ್ಕ ಮಾಡಿ ಇಡ್ತಾ ಇದ್ಲು.  ಬಹುಷಃ ಆ ಚಿಲ್ಲರೆಗಳನ್ನೆಲ್ಲಾ ಅಂಗಡಿಯವನಿಗೆ ಕೊಟ್ಟು ಐವತ್ತರ ಅಥವಾ ನೂರರ ನೋಟನ್ನ ಪಡೀತಾಳೇನೋ ಅಂತ ತನ್ನಷ್ಟಕ್ಕೆ ತಾನೇ ಅಂದ್ಕೊಂಡು,   ಒಂದು ನಿಮಿಷ  ಆ ದೃಶ್ಯವನ್ನ ನೋಡಿದ ಅವಳು ಪದೇ ಪದೇ ಜಾರಿಬಿದ್ದ ತನ್ನ ನಾಣ್ಯವನ್ನ ಪರ್ಸಿಗೆ  ತುರುಕಿ ಅಂಗಡಿಯಿಂದ ಹೊರ ಬೀಳುವಾಗ ಕತ್ತಲು ತುಂಬಿದ ಮೋಡ ಕವಿದ ವಾತಾವರಣ. ಇನ್ನು ಮಳೆ ಶುರು ಆದ್ರೆ ಕಷ್ಟ ಎಂದು ಅಲ್ಲಿಂದ ಐದು ನಿಮಿಷ ದಾರಿಯಷ್ಟೇ ಇದ್ದ ತನ್ನ ಮನೆಯತ್ತ ಇನ್ನಷ್ಟು ಬಿರುಸಿನ ಹೆಜ್ಜೆ ಹಾಕ್ತಾಳೆ.

ದಾರಿ ಮಧ್ಯೆ ಯಾಕೋ ಆ ಮುದುಕಿಯೇ ಕಣ್ಣ ಮುಂದೆ.  ಛೆ....  ಅವಳ ಒಂದು  ಫೋಟೋ ತನ್ನ ಮೊಬೈಲ್ನಲ್ಲಿ ತೆಗಿಬೇಕಿತ್ತು ಅಂತ ಒಂದು ಮನಸ್ಸು ಹೇಳಿದ್ರೆ, ಇನ್ನೊಂದು ಮನಸ್ಸು ಆ ಅಸಹಾಯಕ ವೃದ್ಧೆಯ ಚಿತ್ರ ತೆಗೆದು ಫೇಸ್ ಬುಕ್ನಲ್ಲಿ ಶೇರ್ ಮಾಡಿ, ಒಂದಷ್ಟು ಲೈಕ್ಸ್  ಕಾಮೆಂಟ್ ಪಡೆದು  ಅದೆಂಥ ಖುಷಿ ಪಡ್ತೀಯಾ....  ಎಂದು ಛೀಮಾರಿ ಹಾಕ್ತಿತ್ತು.  ಈ ದ್ವಂದ್ವ ಮನಸ್ಸಲ್ಲೇ ಮನೆ ತಲುಪಿದಾಗ ಅವಳ ಹಿಂದೆಯೇ ಗಂಡನ ಆಗಮನ. ಬೇಗ ಬೇಗ ಮಾಡಿಟ್ಟಿದ್ದ ಅಡಿಗೆ ಬಿಸಿಮಾಡಿ ಅವನ ಹತ್ರ ಆ ಬೇಕರಿಯಲ್ಲಿ ನಡೆದ ಒಂದೊಂದು ನಿಮಿಷದ ಸಂಗತಿ ಹಂಚಿಕೊಂಡಾಗ  ಅವನು  ಒಂದೆ  ಒಂದು  ಮಾತು ಹೇಳ್ತಾನೆ.  'ಅಲ್ಲಾ ಕಣೆ ಅಷ್ಟೆಲ್ಲಾ ಆ ಮುದುಕಿಯನ್ನ ಹತ್ತಿರದಿಂದ ಗಮನಿಸಿ ಬಂದಿದ್ದೀಯಾ....  ನಿನ್ನ ಕೈಯಲ್ಲಿ ಎರಡೆರಡು ಬಾರಿ ಜಾರಿಬಿದ್ದ ಆ ಹಣವನ್ನ ಅವಳಿಗೆ ಕೊಡಬಾರದಿತ್ತಾ...... ' ಅಂದಾಗ ಅವಳನ್ನ ಜೀವಂತವಾಗಿ ಇರುವಾಗಲೇ ಯಾರೋ ತಿವಿದು ಸಾಯಿಸಿದ ಅನುಭವ. ಎಷ್ಟು ಪೆದ್ದು ಕೆಲಸ ಮಾಡ್ದೆ. ಎಷ್ಟು ದಡ್ಡಿ ತರಹ ಎಲ್ಲಾ ನೋಡಿನೂ ಹಾಗೆ ಬಂದು ಬಿಟ್ಟೆ.  ಯಾವತ್ತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡೋ ಮನಸ್ಸು ತನ್ನದು ... ಇವತ್ತ್ಯಾಕೆ ಹೀಗ್ ಮಾಡದೆ ...?? ಯಾಕೋ ಆ ದಿನವೆಲ್ಲಾ ಅವಳಿಗೆ ಸಂಕಟ, ಕಸಿವಿಸಿ. ಅವತ್ತಿಡೀ   ಮನಸ್ಸಿಗೆ ಸಮಾಧಾನವಿಲ್ಲದ ದಿನ ಅವಳದಾಗಿತ್ತು .